ಈ ಸಿಹಿ ತಿಂಡಿಯ ವಿಶೇಷ ಏನಪ್ಪಾ ಅಂದರೆ, ಕೊಬ್ಬಿನ ಅಂಶ ಹೆಚ್ಚಿರುವುದಿಲ್ಲ.

- ಒಂದು ಕಪ್ ಕಡ್ಲೆ ಹಿಟ್ಟು
- ಒಂದು ಕಪ್ ತುಪ್ಪ
- ಒಂದು ಕಪ್ ಗಟ್ಟಿ ಹಾಲು
- ಒಂದು ಕಪ್ ಹಸಿ ತೆಂಗಿನಕಾಯಿ ತುರಿ
- ಮೂರು ಕಪ್ ಸಕ್ಕರೆ
ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಂದು ಕಡಾಯಿಯಲ್ಲಿ ಹಾಕಿ ಚೆನ್ನಾಗಿ ಕಲಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಮೊಗಚೆಕೈಯಿಂದ ನಿಧಾನವಾಗಿ ಕೈಯಾಡಿಸುತ್ತಲೇ ಇರಿ. 10-15 ನಿಮಿಷಗಳ ನಂತರ ಪಾತ್ರೆಯ ತಳದಿಂದ ಪಾಕ ಬಿಟ್ಟುಕೊಂಡು ಹೊರಬರವುದನ್ನು ನೋಡುವಿರಿ.
ಪಾಕ ಹದಕ್ಕೆ ಬಂದನಂತರ ಘಂ ಅಂತ ಪರಿಮಳ ಮನೆಯಲ್ಲಾ ಹರಡುತ್ತದೆ. ಆಗ ಕಡಾಯಿಯನ್ನು ಇಳಿಸಿ. ಒಂದು ಅಗಲವಾದ, ಜಿಡ್ಡು ಸವರಿದ ಸಮತಟ್ಟಾದ ತಟ್ಟೆಗೆ ಸುರಿಯಿರಿ. ಈಗ ಚಾಕುಗೆ ಕೆಲಸ. ನಿಮಗೆ ಬೇಕಾದ ಆಕಾರಕ್ಕೆ ತಕ್ಕಂತೆ ಕತ್ತರಿಸಿಕೊಳ್ಳಿ.
ಆಂಬೊಡೆ

- ಕಡ್ಲೆಬೇಳೆ -2 ಹಿಡಿ
- ಕೆಂಪು ಮೆಣಸು (ಒಣ)-4
- ಹಸಿರು ಮೆಣಸು (ಹಸಿ) – 2
- ಒಂದು ಹಿಡಿ ಕೊತ್ತಂಬರಿ ಸೊಪ್ಪು
- ಒಂದು ಹಿಡಿ ಕರಿ ಬೇವಿನಸೊಪ್ಪು
- ಶುಂಠಿ ರಸ-1/4 ಚಮಚ
- ರುಚಿಗೆ ತಕ್ಕ ಉಪ್ಪು
- ಅರ್ಧ ಬಾಣಲಿ ಕರಿಯುವ ಎಣ್ಣೆ
ಕಡ್ಲೆಬೇಳೆಯನ್ನು ಒಂದು ಗಂಟೆಯಷ್ಟು ಹೊತ್ತು ನೀರಿನಲ್ಲಿ ನೆನೆಸಿಡಿ. ಬಳಿಕ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು (ಎಣ್ಣೆಯನ್ನು ಬಿಟ್ಟು) ಗಟ್ಟಿ ಹಾಗೂ ದಪ್ಪವಿರುವಂತೆ ರುಬ್ಬಿರಿ. ಈ ದಪ್ಪವಾದ ಹಿಟ್ಟನ್ನು ಕೈಯಲ್ಲಿ ಸಣ್ಣ ಬಿಲ್ಲೆಗಳಂತೆ ತಟ್ಟಿ ಕುದಿಯುವ ಎಣ್ಣೆಯಲ್ಲಿ ಬಿಡಿ. ಗರಿಗರಿಯಾಗಿ ಕರಿದಾಗ ತೆಗೆಯಿರಿ. ಈಗ ಆಂಬೊಡೆ ಸವಿಯಲು ಸಿದ್ಧ.
ಅವಲಕ್ಕಿ ಬಿಸಿಬೇಳೆ ಬಾತು

- ಗಟ್ಟಿ ಅವಲಕ್ಕಿ-250 ಗ್ರಾಂ
- ಹೆಸರುಬೇಳೆ-250 ಗ್ರಾಂ
- ಚಿಕ್ಕ ನಿಂಬೆ ಗಾತ್ರದ ಹುಣಸೆಹಣ್ಣು
- ರುಚಿಗೆ ತಕ್ಕ ಉಪ್ಪು
- ಸ್ವಲ್ಪ ಬೀನ್ಸ್,
- ಕ್ಯಾರೆಟ್ -3-4
- ಹಸಿ ಬಟಾಣಿ ಕಾಳು -1 ಲೋಟ
- ಆಲೂಗಡ್ಡೆ -2
- ಹೆಚ್ಚಿದ ಕ್ಯಾಬೇಜ್ -1 ಲೋಟ
- ದಪ್ಪ ಮೆಣಸಿನಕಾಯಿ -2 (ಕ್ಯಾಪ್ಸಿಕಾಂ)
- ಕರಿಬೇವಿನ ಎಲೆ-8-10
- ಕಡ್ಲೆಬೇಳೆ-1 ಚಮಚ
- ಉದ್ದಿನಬೇಳೆ-1/2 ಚಮಚ
- ಧನಿಯ ಪುಡಿ -3 ಚಿಕ್ಕ ಚಮಚ
- ಮೆಣಸಿನಕಾಯಿ ಪುಡಿ-2 ಚಿಕ್ಕ ಚಮಚ
- ಜೀರಿಗೆ + ಮೆಂತೆ -1 ಚಿಕ್ಕ ಚಮಚ
- ಸ್ವಲ್ಪ ಕೊಬ್ಬರಿ
- ಒಂದು ಚಿಟಿಕೆ ಇಂಗು
ಅವಲಕ್ಕಿಯನ್ನುಹತ್ತು ನಿಮಿಸ ನೆನೆಸಿಡಿ. ಬಳಿಕ ಕುಕ್ಕರ್ನಲ್ಲಿ (3-4) ಲೋಟ ನೀರು ಹಾಕಿ ಹೆಸರುಬೇಳೆಯನ್ನು 1 ವಿಷಿಲ್ ನಷ್ಟು ಬೇಯಿಸಿ ಆಮೇಲೆ ಅದಕ್ಕೆ ನೆನೆದಿರುವ ಅವಲಕ್ಕಿಯನ್ನು ನೀರಿನಿಂದ ಹಿಂಡಿ ತೆಗೆದು ಮತ್ತು ಹಚ್ಚಿ ಇಟ್ಟುಕೊಂಡಿರುವ ತರಕಾರಿಗಳನ್ನು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ಎಲ್ಲ ಪದಾರ್ಥಗಳು ಚೆನ್ನಾಗಿ ಬೆಂದ ನಂತರ, ಮಸಾಲೆ ಪುಡಿ ಮತ್ತು ಹುಳಿ ಹಿಂಡಿ ಹಾಕಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನೀರು ಸ್ವಲ್ಪ ಜಾಸ್ತಿ ಹಾಕಿ ಬಿಸಿಬೇಳೆ ಬಾತು ಸ್ವಲ್ಪ ನೀರಾಗಿದ್ದರೆ ಒಳ್ಳೆಯದು (ತೆಳ್ಳಗಿದ್ದರೆ).
ಆರಿದ ನಂತರ ಗಟ್ಟಿಯಾಗುತ್ತದೆ ಆಮೇಲೆ ಕೆಳಗಿಸಿಕೊಳ್ಳಿ.
ಬಾಣಲೆಯಲ್ಲಿ ಒಂದು ಸೌಟು ಅಡುಗೆ ಎಣ್ಣೆ ಸಾಸಿವೆ ಹಾಕಿ ಚಟಪಟ ಸಿಡಿದ ಮೇಲೆ ಹೆಚ್ಚಿದ ದಪ್ಪ ಮೆಣಸಿನಕಾಯಿ, ಕರಿ ಬೇವಿನ ಎಲೆಗಳನ್ನು ಹಾಕಿ 3-4 ನಿಮಿಷ ಹುರಿದು ಅದನ್ನು ಬಿಸಿ ಬೇಳೆ ಬಾತಿಗೆ ಹಾಕಿ.
ಬಿಸಿಬಿಸಿ ಇರುವಾಗಲೇ ತುಪ್ಪ ಹಾಕಿ ನಂತರ ಉಪಯೋಗಿಸಿ.
ಅಲಸಂದೆ ರೊಟ್ಟಿ

- 3 ಕಪ್ ಅಲಸಂದೆ ಕಾಳು
- ಸ್ವಲ್ಪ ಎಳ್ಳು
- ಕಡ್ಲೆ ಹಿಟ್ಟು 1 ಕಪ್
- ಗೋದಿಹಿಟ್ಟು
- ಹಸಿ ಮೆಣಸಿನಕಾಯಿ 4-6
- ಅರ್ಧ ಚಮಚದಷ್ಟು ಜೀರಿಗೆ
- ರುಚಿಗೆ ತಕ್ಕಷ್ಟು ಉಪ್ಪು
- ಒಂದೆರಡು ಎಸಳು ಕೊತ್ತಂಬರಿಸೊಪ್ಪು
ಮೊದಲು ಅಲಸಂದೆ ಕಾಳನ್ನು ಕುಕ್ಕರ್ನಲ್ಲಿ ಬೇಯಿಸಿಕೊಂಡು ಅದು ಆರಿದ ಬಳಿಕ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ, ಕೊತ್ತಂಬರಿಸೊಪ್ಪು, ಹುರಿದ ಎಳ್ಳು, ಜೀರಿಗೆ, ಕಡಲೆಹಿಟ್ಟು, ಗೋದಿಹಿಟ್ಟು ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ರೀತಿ ಕಲೆಸಿ.
ಆನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಂಡು ಮಣೆಯ ಮೇಲೆ ಎಣ್ಣೆ ಹಾಕಿ, ಚಪಾತಿಯಂತೆ ಲಟ್ಟಿಸಿ (ಲಟ್ಟಿಸುವಾಗಲೂ ಹಿಟ್ಟಿನ ಮೇಲೆ ಎಣ್ಣೆ ಹಾಕಬೇಕು) ಆನಂತರ ಕಾದ ಕಾವಲಿಯ ಮೇಲೆ ಎರಡೂ ಬದಿ ಚೆನ್ನಾಗಿ ಬೇಯಿಸಿ. ಈಗ ರೊಟ್ಟಿ ಸವಿಯಲು ಸಿದ್ಧ.
Leave a Reply