ಉಡುಪಿ ಸಮಾರಂಭ
ಶ್ರೀಲ ಪ್ರಭುಪಾದರ ʼವಿಶ್ವಗುರುʼ ಪದವನ್ನು ಶ್ರೀ ಕೃಷ್ಣನ ಚರಣಕಮಲಗಳಿಗೆ ಸಮರ್ಪಣೆ.















ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ ನೀಡಿದ ಪವಿತ್ರ “ವಿಶ್ವಗುರು” ಗೌರವವನ್ನು ಉಡುಪಿ ಶ್ರೀ ಕೃಷ್ಣನ ಚರಣಕಮಲಗಳಿಗೆ ಅರ್ಪಿಸುವ “ಶ್ರೀಕೃಷ್ಣಸಮರ್ಪಣೋತ್ಸವ” ಸಮಾರಂಭವು ಇಸ್ಕಾನ್ ಬೆಂಗಳೂರು ಆಯೋಜನೆಯಲ್ಲಿ, ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಅಖಿಲ ಭಾರತೀಯ ಅಖಾಡಾ ಪರಿಷತ್ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರಿಗೆ ʼವಿಶ್ವಗುರುʼ ಗೌರವವನ್ನು ಪ್ರದಾನ ಮಾಡಿದ ಐತಿಹಾಸಿಕ ಸಮಾರಂಭದ ಸುಸ್ಮರಣೆಯೇ ಉಡುಪಿ ಕಾರ್ಯಕ್ರಮ. ಶ್ರೀಕೃಷ್ಣ ಮಠದ ರಾಜಾಂಗಣ ಭವನದಲ್ಲಿ ಡಿಸೆಂಬರ್ 21ರಂದು ನಡೆದ ಸಮಾರಂಭದಲ್ಲಿ ಈ ʼವಿಶ್ವಗುರುʼ ಗೌರವವನ್ನು ಉಡುಪಿ ಕೃಷ್ಣನಿಗೆ ಸಮರ್ಪಿಸಲಾಯಿತು.
ಶ್ರೀ ಕೃಷ್ಣನ ಬೋಧನೆಯನ್ನು ಪಸರಿಸಲು ಅಪೂರ್ವ ಕೊಡುಗೆ ಸಲ್ಲಿಸಿರುವ ಶ್ರೀಲ ಪ್ರಭುಪಾದರ ಸೇವೆಯನ್ನು ಕೊಂಡಾಡಿ ಆಧ್ಯಾತ್ಮಿಕ ನಾಯಕರೂ ಮತ್ತು ಇತರ ಗಣ್ಯರೂ ಶ್ರೀಲ ಪ್ರಭುಪಾದರಿಗೆ ಪುಷ್ಪವೃಷ್ಟಿಗೈದರು.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಹರಿದ್ವಾರದ ನಿರಂಜನಿ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಸಾನಂದ ಗಿರಿ ಮಹಾರಾಜ್, ಪಯಾರ್ಯ ಶ್ರೀ ಪುತ್ತಿಗೆ ಮಠದ ಕಿರಿಯ ಸ್ವಾಮಿಗಳಾದ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ, ವಿಶ್ವ ಹರೇ ಕೃಷ್ಣ ಆಂದೋಲನದ ಅಧ್ಯಕ್ಷ ಹಾಗೂ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ, ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಶ್ರೀ ಚಂಚಲಾಪತಿ ದಾಸ ಉಪಸ್ಥಿತರಿದ್ದರು.
ಶ್ರೀ ಮಧು ಪಂಡಿತ ದಾಸ ಅವರು ಮಾತನಾಡಿ, “ಪ್ರಯಾಗ್‌ರಾಜ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಸುಸ್ಮರಣೀಯ ಘಟನೆಯನ್ನು ಪುನರ್ ರೂಪಿಸಲು ನಾವು ಇಲ್ಲಿ ಸೇರಿದ್ದೇವೆ. ಆಗ ಪ್ರಭುಪಾದರಿಗೆ ʼವಿಶ್ವಗುರುʼ ಉಪಾಧಿಯನ್ನು ನೀಡಲಾಯಿತು. ಅಖಾಡಾ ಪರಿಷತ್‌ನಿಂದ ಭಾರತದಲ್ಲಿ ಇಲ್ಲಿಯ ತನಕ ಯಾವುದೇ ಸಂತರಿಗೆ ಈ ಪದವನ್ನು ಅನುಗ್ರಹಿಸಿರಲಿಲ್ಲ. ಇದು ಅಪರೂಪದ ಗೌರವ. ಕೃಷ್ಣನು ತನ್ನ ಭಕ್ತ ಶ್ರೀಲ ಪ್ರಭುಪಾದರ ಸೇವೆಯನ್ನು ಕೊಂಡಾಡಲು ನಮಗೆ ಇಂತಹ ಅವಕಾಶವನ್ನು ನೀಡಿದ್ದಾನೆ ಎಂದರು.
ಶ್ರೀ ಕೈಲಾಸಾನಂದ ಗಿರಿ ಮಹಾರಾಜ್ ಅವರು ತಮ್ಮ ಮಾತುಗಳ ಉದ್ದಕ್ಕೂ ಉಡುಪಿ ಮತ್ತು ಕರ್ನಾಟಕದ ಸಂಸ್ಕೃತಿ ಮತ್ತು ಆಧ್ಯಾತ್ಮಿಕದ ಭವ್ಯ ಪರಂಪರೆಯನ್ನು ಕೊಂಡಾಡಿದರು. ಉಡುಪಿ ಶ್ರೀ ಮಠದ ಸನ್ನಿಧಿಯಲ್ಲಿ , ಸರ್ವೋತ್ಕೃಷ್ಟ ಪರಂಪರೆಯ ಮಠದಲ್ಲಿ ಶ್ರೀಲ ಪ್ರಭುಪಾದರಿಗೆ ಮತ್ತೊಮ್ಮೆ ʼವಿಶ್ವಗುರುʼ ಪದ ಅರ್ಪಿಸುವ ಅಪೂರ್ವ ಅವಕಾಶ ಲಭಿಸಿದೆ ಎಂದರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಂಸ್ಕೃತದಲ್ಲಿ ಆಶೀರ್ವಚನವನ್ನು ನೀಡಿದರು. ಗೀತಾ ಪರ್ಯಾಯದ ಸಂದರ್ಭದಲ್ಲಿ, ತಾವು ಪರ್ಯಾಯ ಪೀಠದಲ್ಲಿರುವ ಸಂದರ್ಭದಲ್ಲಿ ಉಡುಪಿಯಲ್ಲಿ ಈ ಅಪೂರ್ವ ಕಾರ್ಯಕ್ರಮ ನಡೆಯುತ್ತಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರು. ಕೃಷ್ಣನು ಭಕ್ತವತ್ಸಲ. ಶ್ರೀಲ ಪ್ರಭುಪಾದರಿಗೆ ʼವಿಶ್ವಗುರುʼ ಪದವಿ ಅನುಗ್ರಹವು ಭಕ್ತನಿಗೆ ಸಂದ ಗೌರವವಾಗಿದೆ. ಪ್ರಭುಪಾದರಿಂದ ಧರ್ಮ ಸಂಸ್ಥಾಪನೆಗೆಂದು ಕೃಷ್ಣನು ಮಾಡಿರುವ ಅನುಗ್ರಹ ಇದಾಗಿದೆ ಎಂದು ವಿವರಿಸಿದರು.
ಫೆಬ್ರವರಿ 2025ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಾಭಿಷೇಕದ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರಿಗೆ ʼವಿಶ್ವಗುರುʼ ಗೌರವವನ್ನು ಸಲ್ಲಿಸಲಾಯಿತು. ಶ್ರೀ ನಿರಂಜನ ಪೀಠದ ಪೀಠಾಧಿಪತಿ ಶ್ರೀ ಗಿರಿ ಮಹಾರಾಜ್ ಅವರು ಶ್ರೀಲ ಪ್ರಭುಪಾದರಿಗೆ ಈ ʼವಿಶ್ವಗುರುʼ ಗೌರವವನ್ನು ಪ್ರದಾನ ಮಾಡಿದ್ದರು.






Leave a Reply