ಧರ್ಮದ ಹೆಸರಿನಲ್ಲಿ ಪಾಪ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಮನೋವಿಜ್ಞಾನಿ ಡಾ. ಕ್ರಿಶ್ಚಿಯನ್‌ ಹೌಸರ್‌ ನಡುವೆ ಸೆಪ್ಟೆಂಬರ್‌, 1973ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದದ ಅಂತಿಮ ಭಾಗ.

ಶ್ರೀಲ ಪ್ರಭುಪಾದ : ನಿಜವಾಗಿಯೂ ದೈವಪ್ರಜ್ಞೆ ಉಳ್ಳವನಿಗೆ ಜಗಳ ಅಥವಾ ಹತ್ಯೆಯ ಮಾತೆಲ್ಲಿ? ಪ್ರತಿಯೊಬ್ಬರೂ ಅವನಿಗೆ ಸೋದರರು. ದೇವರು ಪರಮ ಪಿತ ಮತ್ತು ನಾವೆಲ್ಲರೂ ಅವನ ಮಕ್ಕಳು ಎನ್ನುವುದು ಅವನಿಗೆ ಗೊತ್ತು. ಆದುದರಿಂದ ವಾಸ್ತವಾಂಶದ ಅರಿವು ಇರಬೇಕು – ಸರ್ವ ಯೋನಿಷು ಕೌನ್ತೇಯ ಮೂರ್ತಯಃ ಸಮ್ಭವನ್ತಿ ಯಾಃ । ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ ॥ (ಭಗವದ್ಗೀತೆ 14.4) “ಎಲ್ಲ ಜೀವಿಗಳ ಅಸ್ತಿತ್ವ ಇರುವುದು ಐಹಿಕ ಪ್ರಕೃತಿಯಲ್ಲಿ ಹುಟ್ಟುವುದರಿಂದ. ಭಗವಂತನಾದ ನಾನೇ ಬೀಜ ನೀಡುವ ತಂದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.” ಅದೇ ದೈವಪ್ರಜ್ಞೆ.

ಕ್ರಿಶ್ಚಿಯನ್ನರ ಬೈಬಲ್‌ನಲ್ಲಿ ನಿರ್ದಿಷ್ಟವಾದ ದೈವಾಜ್ಞೆ ಇದೆ, “ನೀವು ಕೊಲ್ಲಬಾರದು.” ನಿನ್ನೆ ರಾತ್ರಿ ಮಹನೀಯರೊಬ್ಬರು ಕೇಳಿದರು, “ನೀವು ಯಾರನ್ನು ಕೊಲ್ಲಬಾರದು?” ಆದರೆ “ಯಾರನ್ನು” ಎನ್ನುವ ಪ್ರಶ್ನೆಯೇ ಇಲ್ಲ.

“ಯಾರನ್ನು” ಎಂದು ನೀವು ಕೇಳಿದರೆ, ಕೊನೆಪಕ್ಷ “ನೀವು ನಿಮ್ಮ ತಂದೆ ಮತ್ತು ನಿಮ್ಮ ತಾಯಿಯನ್ನು ಕೊಲ್ಲಬೇಡಿ.” ಗೋವು ನಿಮ್ಮ ತಾಯಿ, ಏಕೆಂದರೆ ಅವಳು ನಿಮಗೆ ಹಾಲನ್ನು ನೀಡುತ್ತಾಳೆ. ಆದುದರಿಂದ ನೀವು ನಿಮ್ಮ ತಾಯಿಯನ್ನು ಹೇಗೆ ಕೊಲ್ಲುವಿರಿ?

ಡಾ. ಹೌಸರ್‌ : ಸರಿ, ಕೆಲವರು ಬೇರೆಯ ಹಾಲನ್ನೂ ಕುಡಿಯುತ್ತಾರೆ. ಉದಾಹರಣೆಗೆ, ಮೇಕೆಯ ಹಾಲು. ನೀವು ಮೇಕೆಯ ಹಾಲನ್ನು ಕುಡಿದರೆ, ಮೇಕೆ ಕೂಡ ತಾಯಿಯೇ?

ಶ್ರೀಲ ಪ್ರಭುಪಾದ : ಹೌದು, ಹೌದು. ಆದರೆ ನಾವು ಸಾಮಾನ್ಯವಾಗಿ ಗೋವಿನ ಹಾಲನ್ನು ಕುಡಿಯುತ್ತೇವೆ. ಕೆಲವರು ಕೆಲವು ಸಂದರ್ಭದಲ್ಲಿ ಮೇಕೆಯ ಹಾಲನ್ನು ಕುಡಿದಿರಬಹುದು. ಆದರೆ “ನಾನು ಎಂದೂ ಗೋವಿನ ಹಾಲನ್ನು ಕುಡಿದಿಲ್ಲ” ಎಂದು ಯಾರೂ ಹೇಳಲಾರರು. ಬಹುಶಃ ಜಗತ್ತಿನ ಯಾವ ಭಾಗದಲ್ಲಿಯೂ ಯಾರೂ ಹಾಗೆ ಹೇಳಲಾರರು. ನಮಗೆ ಹಾಲನ್ನು ಪೂರೈಸುವ ಉದ್ದೇಶದಿಂದಲೇ ಗೋವುಗಳನ್ನು ಸೃಷ್ಟಿಸಿರುವುದು.

ಆದರೆ ನಾವು ನಮ್ಮ ತಾಯಿಯಾದ ಗೋವುಗಳನ್ನು ಕೊಲ್ಲುತ್ತಿದ್ದೇವೆ. ನಾವು ನಮ್ಮ ತಂದೆ, ಎತ್ತುಗಳನ್ನೂ ಕೊಲ್ಲುತ್ತಿದ್ದೇವೆ. ನಮಗೆ ಧಾನ್ಯಗಳನ್ನು ಪೂರೈಸಲು ಎತ್ತುಗಳು ಉಳುತ್ತವೆ. ಆದುದರಿಂದ ಎತ್ತು ನಮಗೆ ತಂದೆ. ನಮಗೆ ಆಹಾರ ಒದಗಿಸಲು ಅವನು ಹೊರಗೆ ಹೋಗಿ ಕಷ್ಟಪಟ್ಟು ದುಡಿಯುತ್ತಾನೆ. ಅವನು ನಮಗೆ ತಂದೆ. ಆದರೂ ನಾವು ಅವನನ್ನು ಕೊಲ್ಲುತ್ತಿದ್ದೇವೆ. ಆದುದರಿಂದ ನಾವು ನಮ್ಮ ತಾಯಿ ಮತ್ತು ತಂದೆಯನ್ನೇ ಕೊಲ್ಲುತ್ತಿದ್ದೇವೆ.

ಭಗವದ್ಗೀತೆಯು ಸ್ಪಷ್ಟವಾಗಿ ನಮಗೆ ಬೋಧಿಸುತ್ತದೆ, ಕೃಷಿ ಗೋರಕ್ಷ್ಯಾ : ನಮಗೆ ಹಾಲು ನೀಡುವ ತಾಯಿ ಗೋವನ್ನು ನಾವು ರಕ್ಷಿಸಬೇಕು. ಗೋರಕ್ಷ್ಯಾ, “ಗೋವನ್ನು ರಕ್ಷಿಸಿ” ಗೋಹತ್ಯಾ ಅಲ್ಲ – “ಗೋವನ್ನು ಕೊಲ್ಲುವುದು.” ಅದು ದೊಡ್ಡ ಪಾಪ. ಪಾಪಿಗಳು ಧರ್ಮನಿಷ್ಠರಾಗಿರುವುದು ಹೇಗೆ ಸಾಧ್ಯ? ಒಬ್ಬ ಪಾಪಿಯು ನಿಜವಾಗಿಯೂ ಧರ್ಮನಿಷ್ಠ (ಆಸ್ತಿಕ) ಆಗಿರುವುದು ಸಾಧ್ಯವೆಂದು ನೀವು ಭಾವಿಸುವಿರಾ? ಆದರೂ ಇದೆಲ್ಲ ನಡೆಯುತ್ತಲೇ ಇದೆ. ಧರ್ಮದ ಹೆಸರಿನಲ್ಲಿ ಜನರು ಪಾಪಗಳನ್ನು ಮಾಡುತ್ತಿದ್ದಾರೆ. ನಾನು ಹೇಳುವುದೇನೆಂದರೆ, ಪ್ರಾಣಿಗಳ, ಮುಖ್ಯವಾಗಿ ಗೋವುಗಳ ಹತ್ಯೆಯು ಮನುಕುಲದ ಇಂದಿನ ಅವನತಿಗೆ ಮುಖ್ಯ ಕಾರಣವಾಗಿದೆ.

ವೇದ ನಿಷಿಧ್ಯ ಕಾರ್ಯ ಕರೇ ವೇದ ಮುಖ್ಯ ಮಾನೇ. ಶ್ರೀ ಚೈತನ್ಯರು ಹೇಳಿದಂತೆ, “ಜನರು ಪ್ರತಿಯೊಂದು ಧಾರ್ಮಿಕ ತತ್ತ್ವದ ವಿರುದ್ಧ ವರ್ತಿಸುತ್ತಿದ್ದಾರೆ, ಆದರೆ ನಾನು ಧರ್ಮನಿಷ್ಠ, ನನಗೆ ಧರ್ಮದಲ್ಲಿ ನಂಬಿಕೆ ಇದೆ ಎಂದು ಜಾಹೀರುಪಡಿಸಿಕೊಳ್ಳುತ್ತಾರೆ.” ಈ ಅವಿವೇಕದ ನಡವಳಿಕೆ ನಡೆಯುತ್ತಲೇ ಇದೆ. ಒಬ್ಬ ಕ್ರಿಶ್ಚಿಯನ್‌ ಮೂಲ ಕ್ರಿಶ್ಚಿಯನ್‌ ತತ್ತ್ವದ ವಿರುದ್ಧ ಹೋಗುತ್ತಿದ್ದಾನೆ. ಆದರೂ ಅವನಿಗೆ ತಾನು ಕ್ರಿಶ್ಚಿಯನ್‌ ಎಂಬ ಬಗೆಗೆ ಹೆಮ್ಮೆ.

ವಾಸ್ತವಿಕವಾಗಿ ಇಂದು ಎಲ್ಲರೂ ಹಾಗೆಯೇ. ಬೌದ್ಧರೂ ಕೂಡ. ಜಪಾನಿನಲ್ಲಿ ನಾನು ಮುದ್ರಣ ಸಂಸ್ಥೆಯ ಮುಖ್ಯಸ್ಥರೊಬ್ಬರನ್ನು, “ನೀವು ಬೌದ್ಧರು. ಬುದ್ಧನು ಅಹಿಂಸೆಯನ್ನು ಬೋಧಿಸಿದನು, ಮಾಂಸ ಭಕ್ಷಣೆ ಅಲ್ಲ. ನೀವು ಮಾಂಸವನ್ನು ತಿನ್ನುವಿರಾ?” ಎಂದು ಕೇಳಿದೆ.

ಅವರು ಒಪ್ಪಿಕೊಂಡರು, “ಹೌದು, ಕ್ಷಮಿಸಿ. ನಾನು ಮಾಂಸ ಭಕ್ಷಕ.”

ಇದೆಲ್ಲ ನಡೆಯುತ್ತಲೇ ಇದೆ. ವಾಸ್ತವವಾಗಿ ಯಾವುದೇ ಧರ್ಮವು ಮಾಂಸ ಭಕ್ಷಣೆಗೆ ಅವಕಾಶ ನೀಡುವುದಿಲ್ಲ. ಮಹಮ್ಮದೀಯರ ಮತ್ತು ಯಹೂದಿಯರ ಧರ್ಮದಲ್ಲಿಯೂ ಕೂಡ ಆಹುತಿ ಕೊಟ್ಟ ಮೇಲೆ ಮಾತ್ರ ಅವಕಾಶವಿದೆ. ಹಣ್ಣು, ಧಾನ್ಯಗಳು, ಕಾಳುಗಳು, ಹಾಲಿನ ಉತ್ಪನ್ನಗಳು ಲಭ್ಯವಿದ್ದಾಗ ಮಾಂಸವನ್ನು ಸ್ವೀಕರಿಸಬಾರದು. ಮರುಭೂಮಿ ಅಥವಾ ಅನ್ಯ ಮಾರ್ಗವಿಲ್ಲದ ಸಂದರ್ಭದಲ್ಲಿ ಮಾತ್ರ ಸ್ವೀಕರಿಸಬೇಕು. ಕಸಾಯಿಖಾನೆಗಳಿಂದ ಅಲ್ಲ.

ಡಾ. ಹೌಸರ್‌ : ಕ್ಷಮಿಸಿ? ಯಾವುದರಿಂದ ಅಲ್ಲ?

ಶ್ರೀಲ ಪ್ರಭುಪಾದ : ಕಸಾಯಿಖಾನೆ. ಆದರೆ ಈಗ ಜನರು ಕಸಾಯಿಖಾನೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಕ್ರೂರವಾದ ಪಾಪಕ್ರಿಯೆಗಳು ನಡೆಯುತ್ತಲೇ ಇವೆ.

ನಮ್ಮ ಆಂದೋಲನದಲ್ಲಿ ನಮ್ಮಲ್ಲಿ ನಿಯಂತ್ರಣಗಳಿವೆ. ಯಾರು ಬರುವರೋ ಅವರು ಗಂಭೀರ ವಿದ್ಯಾರ್ಥಿಯಾಗಿರಬೇಕು. ಅವರು ಅಕ್ರಮ ಲೈಂಗಿಕ ಪ್ರಕ್ರಿಯೆ, ಜೂಜು, ಮದ್ಯ ಮತ್ತು ಮಾಂಸ ಭಕ್ಷಣೆ – ಈ ನಾಲ್ಕು ಮುಖ್ಯವಾದ ಪಾಪ ಕರ್ಮಗಳನ್ನು ಬಿಟ್ಟುಬಿಡಬೇಕು. ನಮ್ಮ ವಿದ್ಯಾರ್ಥಿಗಳೆಲ್ಲರೂ ಮೊದಲು ಈ ತತ್ತ್ವಗಳನ್ನು ಒಪ್ಪಬೇಕು. ಆಗ ನಾನು ಅವರನ್ನು ನನ್ನ ಶಿಷ್ಯನನ್ನಾಗಿ ಸ್ವೀಕರಿಸುವೆ.

ಡಾ. ಹೌಸರ್‌ : ನೀವು ಚರ್ಮವನ್ನು ಬಳಸುವಿರಾ?

ಶ್ರೀಲ ಪ್ರಭುಪಾದ : ಈಗ ಜನರು ಪ್ರಾಣಿಗಳನ್ನು ಕಸಾಯಿಖಾನೆಗೆ ಕಳುಹಿಸಿ ಅದನ್ನು ಅಲ್ಲಿಂದ ಪಡೆಯುತ್ತಿರುವುದರಿಂದ ಸಾಮಾನ್ಯವಾಗಿ ನಾವು ಅದರಿಂದ ದೂರ ಇರುತ್ತೇವೆ.

ಡಾ. ಹೌಸರ್‌ : ಅಂದರೆ ನೀವು ಅನುಮತಿಸುವುದಿಲ್ಲ?

ಶ್ರೀಲ ಪ್ರಭುಪಾದ : ನಾವು ಅದನ್ನು ಉಪಯೋಗಿಸುವುದಿಲ್ಲ. ಉದಾಹರಣೆಗೆ ನಮ್ಮ ಯಾರ ಚಪ್ಪಲಿ ಕೂಡ ಚರ್ಮದಿಂದ ತಯಾರಿಸಿಲ್ಲ. ಈಗ ಎಷ್ಟೊಂದು ಪರ್ಯಾಯಗಳಿವೆ, ಪ್ಲಾಸ್ಟಿಕ್‌, ಮುಂತಾದವು.

ಆದರೆ ಚರ್ಮವನ್ನೇ ತೆಗೆದುಕೊಂಡರೆ, ಅದು ನಿಷೇಧಿತವಲ್ಲ. ಏಕೆಂದರೆ, ಪ್ರಾಣಿಯು ಸ್ವಾಭಾವಿಕವಾಗಿ ಸತ್ತ ಮೇಲೆ ನೀವು ಚರ್ಮವನ್ನು ಪಡೆದುಕೊಳ್ಳಬಹುದು. ಭಾರತದಲ್ಲಿ ಮಾಂಸಾಹಾರಿಗಳು ಮೊದಲು ಗೋವು ಸಾಯುವವರೆಗೂ ಕಾಯುತ್ತಾರೆ. ಅನಂತರ ಅವರು ಮಾಂಸವನ್ನು ತಿನ್ನುತ್ತಾರೆ ಮತ್ತು ಮೂಳೆ, ಕೊಂಬು, ಗೊರಸುಗಳನ್ನು ತೆಗೆದುಕೊಳ್ಳುತ್ತಾರೆ. ಚಪ್ಪಲಿ ಮಾಡಲು ಚರ್ಮ ಬಳಸುತ್ತಾರೆ. ಅವರಿಗೆ ಉಚಿತವಾಗಿ ಎಲ್ಲವೂ ಪೂರೈಕೆಯಾಗುವುದರಿಂದ ಅವರು ಸುಲಭವಾಗಿ ತಮ್ಮ ಜೀವನೋಪಾಯವನ್ನು ಮಾಡಿಕೊಳ್ಳಬಹುದು.

ಮುಖ್ಯವಾದ ವಿಷಯವೆಂದರೆ, ಎಂದೋ ಒಂದು ದಿನ ಪ್ರಾಣಿಯು ಸಾಯುತ್ತದೆ. ನಾವು ಅಲ್ಲಿಯವರೆಗೆ ಕಾಯೋಣ. ನಾವು ಜೀವಂತ ಪ್ರಾಣಿಯನ್ನೇಕೆ ಕೊಲ್ಲಬೇಕು?

ಡಾ. ಹೌಸರ್‌ : ನೀವು ನಿಮ್ಮ ಮೃದಂಗಗಳಲ್ಲಿ ಚರ್ಮವನ್ನು ಬಳಸುವಿರಾ?

ಶ್ರೀಲ ಪ್ರಭುಪಾದ : ಹೌದು, ಗೋವಿನ ಸ್ವಾಭಾವಿಕ ಸಾವಿನ ಅನಂತರ ಆ ಚರ್ಮವನ್ನು ಬಳಸಬಹುದು.

ಡಾ. ಹೌಸರ್‌ : ಅಂದರೆ ನಿಮ್ಮ ಬಳಿ ಚರ್ಮದ ಮೃದಂಗಗಳಿವೆ?

ಶ್ರೀಲ ಪ್ರಭುಪಾದ : ಹೌದು, ಸಾವಿರಾರು ವರ್ಷಗಳಿಂದ ಮೃದಂಗಗಳನ್ನು ಹಾಗೆಯೇ ಮಾಡುವುದು. ಆದರೆ ಪ್ರಾಣಿಯು ಸ್ವಾಭಾವಿಕವಾಗಿ ಸತ್ತ ಮೇಲೆಯೇ ಚರ್ಮವನ್ನು ಸಂಗ್ರಹಿಸುವುದು. ಕೊಲ್ಲುವುದರಿಂದ ಅಲ್ಲ.

ಆದುದರಿಂದ, ಕರುಣೆಯೇ ನಮ್ಮ ಸಿದ್ಧಾಂತ. ದಯೆ. ನಾವು ಯಾವುದೇ ಜೀವಿಯನ್ನು ಕೊಲ್ಲುವ ಅಥವಾ ಹಿಂಸಿಸುವ ಅಗತ್ಯವಿಲ್ಲ. ಭಗವಂತನು ಕರುಣಾಮಯಿ. ಈ ಮಾನವ ರೂಪದಲ್ಲಿ ನಾವು ಅವನೊಂದಿಗೆ ನಮ್ಮ ಬಾಂಧವ್ಯವನ್ನು ಪುನರ್‌-ಸ್ಥಾಪಿಸಬಹುದು. ಅಸಂಖ್ಯ ಕೆಳಗಿನ ರೂಪಗಳಲ್ಲಿ ಪ್ರಯಾಣಿಸಿದ ಮೇಲೆ, ನಾವು ಈಗ ನಮ್ಮ ಹಳೆಯ ಬಾಂಧವ್ಯವನ್ನು ದಯಾಮಯಿಯೊಂದಿಗೆ ಪುನಃ ಸ್ಥಾಪಿಸಬಹುದು. ಹೌದು. ಆದರೆ ನಾವು ದಯಾಮಯಿಗಳಾದರೆ ಮಾತ್ರ.

ಡಾ. ಹೌಸರ್‌ : ವಂದನೆಗಳು.

ಶ್ರೀಲ ಪ್ರಭುಪಾದ : ಹರೇ ಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi