ಸಂಸ್ಕೃತ ಮೂಲ – ಕಥಾಶತವಲ್ಲರೀ
ಭಾಷಾನುವಾದ – ಪತಿತಪಾವನ ದಾಸ
ಒಬ್ಬ ರಾಜನಿದ್ದ. ಅವನು ತನ್ನ ದೇಶವನ್ನು ಸುಖ ಸಮೃದ್ಧವನ್ನಾಗಿಸಲು ಬಯಸಿದ. ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದ. ಪ್ರಜೆಗಳ ಸುಖ ಶಾಂತಿಗಾಗಿ ಅನೇಕ ವಿಧದ ವ್ಯವಸ್ಥೆಗಳನ್ನು ಅವನು ಮಾಡಿದನು. ಆದರೂ ಕೂಡ ಆ ದೇಶದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ಸುಖ ಶಾಂತಿಗಳು ಕಾಣಿಸಲಿಲ್ಲ.
ಆದ್ದರಿಂದ ರಾಜನು ತನ್ನ ಗುರುಗಳಾದ ಸನ್ಯಾಸಿಯೊಬ್ಬರ ಬಳಿ ಹೋದನು.

“ಗುರುಗಳೇ, ಜನಗಳ ಸುಖಕ್ಕಾಗಿ ನಾನು ಅನೇಕ ವಿಧದ ವ್ಯವಸ್ಥೆ ಮಾಡಿದೆ. ಅನೇಕ ವಿಧದ ಅನುಕೂಲಗಳನ್ನು ಕಲ್ಪಿಸಿದೆ. ಜನರು ಹೇಗೆ ಶ್ರೀಮಂತರಾಗಬೇಕೋ ಹಾಗೆ ವ್ಯವಸ್ಥೆ ಮಾಡಿದೆ. ಆದರೂ ಕೂಡ ದೇಶದಲ್ಲಿ ಸುಖ ಶಾಂತಿಗಳು ಹೆಚ್ಚಿರುವ ಹಾಗೆ ಕಾಣಿಸುತ್ತಿಲ್ಲ. ದ್ವೇಷ ಅಸೂಯೆಗಳು ಕಡಮೆ ಆಗಿರುವ ಹಾಗೆ ಅನ್ನಿಸುತ್ತಿಲ್ಲ. ಇದರ ಕಾರಣವೇನು? ಪ್ರಜೆಗಳ ಸುಖ ಶಾಂತಿಗಾಗಿ ನಾನು ಏನು ಮಾಡಬೇಕು?” ಎಂದು ಕೇಳಿದನು.
“ಕೇವಲ ಭೌತಿಕ ವ್ಯವಸ್ಥೆ ಮಾಡುವುದರಿಂದ ಸುಖ ಶಾಂತಿಗಳು ಹೆಚ್ಚುತ್ತವೆ ಎಂದು ಯೋಚಿಸುವೆಯಾ?” ಕೇಳಿದರು ಗುರುಗಳು.
“ಹೌದು. ಉತ್ತಮ ವ್ಯವಸ್ಥೆಯನ್ನು ಮಾಡುವುದು ರಾಜನ ಜವಾಬ್ದಾರಿ. ಅದನ್ನೇ ನಾನು ಮಾಡಿದ್ದು. ಅದರ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಹೀಗಿದ್ದಾಗ ಸುಖ ಶಾಂತಿ ಖಂಡಿತವಾಗಿ ಹೆಚ್ಚಲೇಬೇಕಿತ್ತು ಅಲ್ಲವೇ?” ರಾಜಾ ಹೇಳಿದ.
“ಎಲೈ ರಾಜನೇ, ಇದು ನಿನ್ಗೆ ಭ್ರಮೆ. ಸುಖ ಶಾಂತಿಗಳು ಆಂತರಿಕವಾದವುಗಳು. ಈ ಭಾವಗಳು ಜನರ ಮನಸ್ಸಿನಲ್ಲಿ ಸ್ವತಃ ಉತ್ಪನ್ನವಾಗಬೇಕು.
ಹೇಗೆ ಭೌತಿಕ ವಿಕಾಸಕ್ಕಾಗಿ ರಾಜನು ಕೆಲ ಪ್ರಯಾಸಗಳನ್ನು ಮಾಡಬೇಕೋ, ಹಾಗೆಯೇ ಆಂತರಿಕ ವಿಕಾಸಕ್ಕಾಗಿ ಕೆಲ ಪ್ರಯತ್ನಗಳನ್ನು ಮಾಡಲೇಬೇಕಾಗುತ್ತದೆ…”
“ಯಾವ ತರಹದ ಪ್ರಯಾಸ ಮಾಡಬೇಕು?”

“ಧಾರ್ಮಿಕ ಉಪನ್ಯಾಸಗಳನ್ನು ಆಯೋಜಿಸಬೇಕು. ಜನರನ್ನು ಭಗವದ್ಗೀತಾ ಇತ್ಯಾದಿ ಗ್ರಂಥಗಳನ್ನು ಓದಲು ಪ್ರೇರೇಪಿಸಬೇಕು. ಸತ್ಸಂಗಗಳನ್ನು ಆಯೋಜಿಸಬೇಕು. ಜನರಿಗೆ ಆದರ್ಶ ವ್ಯವಹಾರ ತೋರಿಸಿಕೊಡಬೇಕು.
ಈ ರೀತಿ ಜನರು ಒಳ್ಳೆಯದು ಮತ್ತು ಕೆಟ್ಟದ್ದರ ವಿವೇಕ ಪಡೆಯುವರು. ಎಲ್ಲಾ ಕಡೆ ಸಾತ್ವಿಕ ಗುಣಗಳು ಬೆಳೆದರೆ, ಜನರ ಗುಣಮಟ್ಟ ಸಹಜವಾಗಿ ಹೆಚ್ತದೆ. ಪರೋಪಕಾರ, ದಾನ ಪ್ರವೃತ್ತಿ ಇತ್ಯಾದಿಗಳಲ್ಲಿ ಜನರನ್ನು ಪ್ರೇರೇಪಿಸಬೇಕು. ಧಾರ್ಮಿಕ ಪ್ರವೃತ್ತಿ, ಪಾಪದ ಭಯ ಹೆಚ್ಚಾಗಬೇಕು. ಹೀಗೆ ಭೌತಿಕ ಸಮೃದ್ಧಿಯ ಜೊತೆ ಆಂತರಿಕ ಸಮೃದ್ಧಿ ಕೂಡ ಹೆಚ್ಚಿದರೆ ಮಾತ್ರ ದೇಶದಲ್ಲಿ ಸುಖ ಶಾಂತಿಗಳು ಸ್ಥಿರವಾಗುತ್ತವೆ.”
ತನ್ನ ಕರ್ತವ್ಯದ ಜ್ಞಾನ ಪಡೆದ ರಾಜಾ ಗುರುಗಳನ್ನು ವಂದಿಸಿ ಅಲ್ಲಿಂದ ನಡೆದನು.
Leave a Reply