ಶ್ರೀ ಅಕ್ಷೋಭ್ಯ ತೀರ್ಥರು

ಮಧ್ವಾಚಾರ್ಯರ ನೇರ ಅನುಯಾಯಿಯಾಗಿ ಮಾಧ್ವ ಮಠದ ಪೀಠಾಲಂಕಾರ ಮಾಡಿದ ಕೊನೆಯ ಆಚಾರ್ಯರು ಅಕ್ಷೋಭ್ಯ ತೀರ್ಥರು. ವ್ಯಾಸತೀರ್ಥರು ರಚಿಸಿರುವ ‘ಜಯತೀರ್ಥ ವಿಜಯ’ ಕೃತಿಯಲ್ಲಿ ಅಕ್ಷೋಭ್ಯ ತೀರ್ಥರ ಲೀಲೆಗಳ ಕುರಿತು

ವರ್ಣಿಸಲಾಗಿದೆ.

ಕಾಲದಲ್ಲಿ ಮಾಯಾವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಹೆಸರಾಂತ ಆಚಾರ್ಯರಾದ ವಿದ್ಯಾರಣ್ಯರಿಗೂ ಅಕ್ಷೋಭ್ಯ ತೀರ್ಥರಿಗೂ ಮುಖಾಮುಖಿ ಚರ್ಚೆ ನಡೆಯಿತು. ಸುದೀರ್ಘ, ಐತಿಹಾಸಿಕ ಚರ್ಚೆಯಲ್ಲಿ ವಿದ್ಯಾರಣ್ಯರನ್ನು ಅಕ್ಷೋಭ್ಯರು ಸೋಲಿಸಿದರು. ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನೇ ಜಗದ ಪರಮ, ನಿತ್ಯ ಸತ್ಯ. ಉಳಿದೆಲ್ಲಾ ಜೀವಿಗಳು ಆತನ ಸೇವಕರು ಎಂಬುದನ್ನು ಅಕ್ಷೋಭ್ಯರು ಸಂಶಯಕ್ಕೆಣೆಯಿಲ್ಲದಂತೆ ನಿರೂಪಿಸಿದರು. ಮಧ್ವಾಚಾರ್ಯರ ಸಿದ್ಧಾಂತ ಪ್ರಚಾರದಲ್ಲಿ ಅಕ್ಷೋಭ್ಯರ ಗೆಲುವು ಒಂದು ಮಹತ್ವದ ತಿರುವು ಎಂದೇ ಭಾವಿಸಲಾಗಿದೆ.

ಮಧ್ಯಾಚಾರ್ಯರ ಬೋಧನೆಗಳನ್ನು ನಾಡಿನ ಮೂಲೆ ಮೂಲೆಗೂ ತಲುಪಿಸಲೆಂದೇ ಅಕ್ಷೋಭ್ಯ ತೀರ್ಥರು ತಮ್ಮ ಶಿಷ್ಯ ಜಯತೀರ್ಥರಿಗೆ ವಿಶೇಷ ತರಬೇತಿ ನೀಡಿದರು. ಅಕ್ಷೋಭ್ಯರ ಆದೇಶದಂತೆ ಮಧ್ವಾಚಾರ್ಯರ ಕೃತಿಗಳ ಮೇಲೆ ವ್ಯಾಖ್ಯಾನಗಳನ್ನು ಬರೆದ ಜಯತೀರ್ಥರು, ನಾಡಿನುದ್ದಗಲಕ್ಕೂ ಕೃಷ್ಣಪ್ರಜ್ಞೆ ಪ್ರಚಾರ ಮಾಡಿದರು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಂಗಳವೇಡೆ ಎಂಬಲ್ಲಿ ಹೆಸರಾಂತ, ಸಾತ್ವಿಕ ಬ್ರಾಹ್ಮಣ ಕುಟುಂಬವೊಂದರಲ್ಲಿ 1282ರಲ್ಲಿ ಅಕ್ಷೋಭ್ಯ ತೀರ್ಥರ ಜನನವಾಯಿತು. ಈ ಪಟ್ಟಣ ಹೆಸರಾಂತ ಪುಣ್ಯಕ್ಷೇತ್ರ ಪಂಢರಪುರದಿಂದ ಕೇವಲ 20 ಕಿಮೀ ದೂರದಲ್ಲಿದೆ. ಇವರ ಮೂಲ ನಾಮಧೇಯ ಗೋವಿಂದ ಶಾಸ್ತ್ರಿ ತಂದೆ ಕೇಶವ ಭಟ್ಟ ಆ ಕಾಲದ ಪ್ರಮುಖ ಪಟ್ಟಣವಾದ ಮಂಗಳವೇಡೆಯನ್ನು ಆಳುತ್ತಿದ್ದರು. ಕೇಶವ ಭಟ್ಟರಿಗೆ ಇಬ್ಬರು ಮಕ್ಕಳು. ಧೋಂಡೋ ರಘುನಾಥ ಪಂತ್‌ ಮತ್ತು ಗೋವಿಂದ ಶಾಸ್ತ್ರಿ. ಆಗ ಕೇಶವ ಭಟ್ಟರು ದೇವಗಿರಿ ಸಾಮ್ರಾಜ್ಯದ ಅರಸರಿಗೆ ಸಾಮಂತರಾಗಿದ್ದರು.

ಕ್ರೂರ ಮುಸ್ಲಿಂ ದೊರೆ ಅಲ್ಲಾವುದ್ದೀನ ಒಮ್ಮೆ ದೇವಗಿರಿ ರಾಜ್ಯದ ಮೇಲೆ ದಾಳಿ ಮಾಡಿ, ದೊರೆ ರಾಮಚಂದ್ರ ದೇವನನ್ನು ಮಣಿಸಿದ. ಯುದ್ಧದದಲ್ಲಿ ರಾಜನ ಪರಮಾಪ್ತ ಕರ್ಣದೇವ ಎಂಬಾತ ಹತನಾದ. ಇದರಿಂದ ರಾಮಚಂದ್ರ ದೇವ ಬಹಳ ದುಃಖಿತನಾದ. ತಕ್ಷಣ ರಾಮಚಂದ್ರ ದೇವನಲ್ಲಿಗೆ ಧಾವಿಸಿ ಕೇಶವ ಭಟ್ಟರು ದೊರೆಯನ್ನು ಸಮಾಧಾನಪಡಿಸಿದರು. ಕಾಮದೇವನ ಇಬ್ಬರು ಚಿಕ್ಕ ಮಕ್ಕಳಾದ ನರಹರಿ ನಾಯಕ ಮತ್ತು ಕೃಷ್ಣಪ್ಪ ನಾಯಕರನ್ನು ಸಾಕಿ, ಸಲಹಿ ದೊಡ್ಡವರನ್ನಾಗಿ ಮಾಡುವ ಜವಾಬ್ದಾರಿ ವಹಿಸಿಕೊಂಡರು.

ಇಬ್ಬರೂ ಬಾಲಕರನ್ನೂ ಮಂಗಳವೇಡೆಗೆ ಕರೆತಂದರು. ನಂತರ ಅವರಿಬ್ಬರನ್ನು ತಮ್ಮ ಪುತ್ರ ಗೋವಿಂದ ಶಾಸ್ತ್ರಿಯ ಜತೆ ದೇಗವಿ ಎಂಬಲ್ಲಿ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಸೇರಿಸಿದರು. ಆ ಕಾಲದಲ್ಲಿ ದೇಗವಿ ಪ್ರಸಿದ್ಧ ಕಲಿಕಾ ಕೇಂದ್ರವಾಗಿತ್ತು.

ಹೀಗೆ 20 ವರ್ಷ ಕಳೆಯಿತು. ಮಕ್ಕಳು ದೇಗವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಲೇ ದೊಡ್ಡವರಾದರು. ನರಸಿಂಹ ನಾಯಕ ಯುದ್ಧಕಲೆ ಮತ್ತು ರಾಜನೀತಿಯಲ್ಲಿ ನೈಪುಣ್ಯ ಸಾಧಿಸಿ ದೇವಗಿರಿಯಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ನೇಮಕಗೊಂಡ. ಕರ್ಣದೇವನ ಇನ್ನೊಬ್ಬ ಮಗ ಕೃಷ್ಣಪ್ಪ ನಾಯಕ ವ್ಯಾಪಾರದ ಕಲೆಗಳನ್ನು ಕರಗತ ಮಾಡಿಕೊಂಡ. ಸ್ವಲ್ಪಕಾಲದಲ್ಲೇ ಆ ಪ್ರಾಂತ್ಯದ ಅತಿ ದೊಡ್ಡ ಶ್ರೀಮಂತನೆಂಬ ಖ್ಯಾತಿಗೆ ಪಾತ್ರನಾದ. ಸೋದರರಿಬ್ಬರ ಏಳಿಗೆ ಕಂಡು ಕೇಶವ ಭಟ್ಟರು ತೃಪ್ತರಾದರು. ದೊರೆಗೆ ಕೊಟ್ಟ ಮಾತಿನಂತೆ ಅವರಿಬ್ಬರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಿದ ಸಮಾಧಾನ ಅವರದಾಯಿತು.

 ಯೋ ವಿದ್ಯಾರಣ್ಯ ವಿಪಿನಮ್

ತತ್‌ತ್ವಮ್‌ ಅಸೊ ಅಸೀನಾಚ್ಛಿನ್ನತ್‌ |

ಶ್ರೀಮದ್ ಅಕ್ಷೋಭ್ಯ ತೀರ್ಥಾಯ

ನಮಸ್ತೈ ಮೈ ಮಹಾತ್ತಮನೇ||

“ತತ್‌ತ್ತ್ವಮ್‌ ಅಸಿ” ಎನ್ನುವ ವೇದಾಂತ ಸೂತ್ರದ ಜ್ಞಾನ ಖಡ್ಗದಿಂದ ಮಹಾನ್‌ ಪಂಡಿತರಾದ ವಿದ್ಯಾರಣ್ಯರನನು ಪರಾಜಯಗೊಳಿಸಿದ ಶ್ರೀಮದ್‌ ಅಕ್ಷೋಭ್ಯ ತೀರ್ಥರಿಗೆ ನಮ್ಮ ನಮನಗಳು.

ಇದೇವೇಳೆ, ತಮ್ಮ ಹಿರಿಯ ಪುತ್ರ ರಘುನಾಥನನ್ನು ರಾಜ್ಯಾಡಳಿತದಲ್ಲಿ ಪರಿಣಿತನನ್ನಾಗಿ ರೂಪಿಸಿದರು. ಇಷ್ಟಾದರೂ, ಕೇಶವ ಭಟ್ಟರ ಪುತ್ರ ಗೋವಿಂದ ಶಾಸ್ತ್ರಿ ಮಾತ್ರ ಮಂಗಳವೇಡೆಗೆ ಹಿಂತಿರುಗುವ ಲಕ್ಷಣ ಕಾಣಲಿಲ್ಲ. ಗೋವಿಂದ ಶಾಸ್ತ್ರಿ ಮಂಗಳವೇಡೆಗೆ ಮರಳಿ ತಮಗೆ ಅಡಳಿತದಲ್ಲಿ ನೆರವಾಗಬೇಕೆಂಬುದು ಕೇಶವ ಭಟ್ಟರ ಅಪೇಕ್ಷೆಯಾಗಿತ್ತು. ಆದರೆ ಗೋವಿಂದ ಶಾಸ್ತ್ರಿಗೆ ರಾಜಕೀಯದಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ.

ತತ್ವಶಾಸ್ತ್ರ ಮತ್ತು ಆಧ್ಯಾತ್ಮದತ್ತಲ್ಲೇ ಅವರ ಮನಸ್ಸು ಎಳೆಯುತ್ತಿತ್ತು. ಅವರು ಸದಾ ಅಧ್ಯಯನದಲ್ಲೇ ಮುಳುಗುತ್ತಿದ್ದರು. ಗೋವಿಂದ ಶಾಸ್ತ್ರಿಗೆ ಪುಸ್ತಕದ ಗೀಳು ಎಷ್ಟು ಬಲವಾಗಿ ಅಂಟಿಕೊಂಡಿತ್ತೆಂದರೆ ಅವರು ಕೆಲವೊಮ್ಮೆ ಯಾವುದೋ ಒಂದು ಪುಸ್ತಕವನ್ನು ಹುಡುಕಿಕೊಂಡು ಬಹು ದೂರದ ಊರಿಗೆ ಪ್ರಯಾಣಿಸುತ್ತಿದ್ದರು. ಅವರು ಮಂಗಳವೇಡೆಯಲ್ಲಿ ತಮ್ಮ ಮನೆಗೆ ಹೋಗುತ್ತಿದ್ದುದೇ ಅಪರೂಪ. ಮೊದ ಮೊದಲು ಮಗನ ವರ್ತನೆಯಿ೦ದ ಒಳಗೊಳಗೇ ಕೊರಗುತ್ತಿದ್ದ ಕೇಶವ ಭಟ್ಟರು ಕೊನೆಗೊಮ್ಮೆ ಬಹಿರಂಗವಾಗಿಯೇ ವಿರೋಧಿಸಿದರು.

ತಕ್ಷಣ ಅಧ್ಯಯನ ನಿಲ್ಲಿಸಿ, ಮನೆಗೆ ಬರುವಂತೆ ಕೇಶವ ಭಟ್ಟರು ಗೋವಿಂದ ಶಾಸ್ತ್ರಿಗೆ ಸೂಚಿಸಿದರು. ಮಗ ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ತಂದೆಯ ಮಾತನ್ನು ಅಕ್ಷರಶಃ ವಿರೋಧಿಸಿದ ಗೋವಿಂದ ಶಾಸ್ತ್ರಿ ತಮಗೆ ಮದುವೆಯಾಗುವ ಇಚ್ಛೆಯಿಲ್ಲವೆಂದೂ, ಪರಮ ಪರಿಪೂರ್ಣ ಸತ್ಯಾನ್ವೇಷಣೆಯೇ ತಮ್ಮ ಜೀವನದ ಗುರಿ ಎಂದೂ ತಂದೆಗೆ ಸ್ಪಷ್ಟವಾಗಿ ತಿಳಿಸಿಬಿಟ್ಟರು.

‘ಹಾಗಾದರೆ ನೀನು ಸಂನ್ಯಾಸಿಯಾಗಲು ಹೊರಟಿದ್ದೀಯಾ?’ ಎಂದು ಕೇಶವ ಭಟ್ಟರು ನೋವಿನಿಂದ ಮಗನನ್ನು ಪ್ರಶ್ನಿಸಿದರು. ‘ಹೌದು, ನಾನು ಸಂನ್ಯಾಸ ಸ್ವೀಕರಿಸಬೇಕೆಂದು ದೃಢ ನಿಶ್ಚಯ ಮಾಡಿದ್ದೇನೆ’ ಎಂದು ಗೋವಿಂದಶಾಸ್ತ್ರಿಗಳು ಉತ್ತರಿಸಿದರು. ಮಗನ ಮಾತುಗಳು ಕೇಶವ ಭಟ್ಟರ ಪಾಲಿಗೆ ಬರಸಿಡಿಲಿನಂತೆ ಬಂದೆರಗಿತು.

ಮಗನ ಭವಿಷ್ಯ ಕುರಿತು ಅವರು ಕಟ್ಟಿದ ಕನಸುಗಳೆಲ್ಲಾ ಒಂದೇ ಏಟಿಗೆ ನುಚ್ಚು ನೂರಾದವು. ಹೆತ್ತವರ ಮನನೋಯಿಸಿ ಇಂಥ ಕಠಿಣ ನಿಲುವು ತಳೆಯದಂತೆ ಗೋವಿಂದ ಶಾಸ್ತ್ರಿಯನ್ನು ಕೇಳಿಕೊಂಡರು. ಕೊನೆಗೆ ಗೋವಿಂದ ಶಾಸ್ತ್ರಿ ಒಲ್ಲದ ಮನಸ್ಸಿನಿಂದಲೇ ಮನಗೆ ಬಂದರು. ಮಗನನ್ನು ಐಹಿಕ ಜೀವನಕ್ಕೆ ಮರಳಿ ಕರೆತರುವ ಹಲವಾರು ಪ್ರಯತ್ನಗಳನ್ನು ಕೇಶವ ಭಟ್ಟರು ಮಾಡಿದರು.

ಯಾವುದೂ ಫಲ ನೀಡಲಿಲ್ಲ. ಕೊನೆಗೆ ಒಂದು ವಧುವನ್ನು ನೋಡಿ ಮಗನಿಗೆ ವಿವಾಹ ಮಾಡಲು ಅವರು ಮುಂದಾದರು. ಇದುವರೆಗೂ ಕಷ್ಟದಿಂದ ಮನೆಯಲ್ಲಿದ್ದ ಗೋವಿಂದ ಶಾಸ್ತ್ರಿ ತನಗೆ ಮದುವೆ ಮಾಡುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆ ಮನೆ ಬಿಟ್ಟು ಹೊರಟರು. ತಿಂಗಳುಗಟ್ಟಲೆ ಮನೆಗೆ ಹಿಂತಿರುಗಲಿಲ್ಲ. ಇದರಿಂದ ತೀವ್ರ ಮನನೊಂದ ಕೇಶವ ಭಟ್ಟರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದರು. ಕೊನೆಗೆ ಮಗ ಮನೆ ಬಿಟ್ಟುಹೋದ ಕೊರಗಿನಲ್ಲೇ ಕೊನೆಯುಸಿರೆಳೆದರು.

ಇತ್ತ ಗೋವಿಂದ ಶಾಸ್ತ್ರಿಗಳು ತಮಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಗುರುವನ್ನು ಹುಡುಕಿಕೊಂಡು ದೇಶ ಪರ್ಯಟನೆ ಆರಂಭಿಸಿದರು. ಹೀಗೆ ಸಂಚರಿಸುತ್ತಾ ರಾಜಮಹೇಂದ್ರಿಗೆ ಬಂದ ಅವರಿಗೆ ನರಹರಿ ತೀರ್ಥರ ಸಂಪರ್ಕವಾಯಿತು. ನರಹರಿ ತೀರ್ಥರ ವ್ಯಕ್ತಿತ್ವಕ್ಕೆ ಮಾರುಹೋದ ಗೋವಿಂದ ಶಾಸ್ತ್ರಿಗಳಿಗೆ ಪದ್ಮನಾಭ ತೀರ್ಥ ಮತ್ತು ಮಧ್ವಾಚಾರ್ಯರಂಥ ಮಹಾತ್ಮರ ಬಗ್ಗೆಯೂ ತಿಳಿಯಿತು.

ಈ ಎಲ್ಲಾ ಮಹನೀಯರನ್ನು ಭೇಟಿಯಾಗಲೇಬೇಕೆಂಬ ತುಡಿತ ಅವರಲ್ಲಿ ಹೆಚ್ಚಿತು. ಇನ್ನೇನು ಪದ್ಮನಾಭ ಭೇಟಿಯಾಗಲು ತೆರಳಬೇಕು ಎನ್ನುವಷ್ಟರಲ್ಲಿ ಅವರಿಗೆ ತಮ್ಮ ತಂದೆ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯಿತು. ತಕ್ಷಣ ಮಂಗಳವೇಡೆಗೆ ಹಿಂತಿರುಗಿದ ಗೋವಿಂದ ಶಾಸ್ತ್ರಿಗಳು ನೊಂದ ಕುಟು೦ಬಕ್ಕೆ ಸಾಂತ್ವನ ಹೇಳಿದರು.

ಕೇಶವ ಭಟ್ಟರು ಕಾಲವಾದ ನಂತರ ಹಿರಿಯ ಪುತ್ರ ದೋ೦ಡೋ ರಘುನಾಥ ಪಂತರು ಮಂಗಳವೇಡೆಯ ರಾಜ್ಯಭಾರ ವಹಿಸಿಕೊಂಡರು. ಈ ವೇಳೆಗಾಗಲೇ ಅವರು ಅತ್ಯಂತ ಸಾಧ್ವಿಯೂ, ದೈವಭಕ್ತೆಯೂ ಆದ ಸಕ್ಕೂಬಾಯಿಯನ್ನು ವಿವಾಹವಾಗಿದ್ದರು. ತಂದೆಯ ಸಾವಿನ ಶೋಕದಿಂದ ಹೊರಬರುವವರೆಗೆ ಗೋವಿಂದ ಶಾಸ್ತ್ರಿಗಳು ಕುಟು೦ಬದ ಜತೆಗೇ ಇದ್ದರು. ಈ ಅವಧಿಯಲ್ಲೂ ಅವರು ಕಟ್ಟುನಿಟ್ಟಿನ ಆಧ್ಯಾತ್ಮಿಕ ಜೀವನ ಸಾಗಿಸುತ್ತಿದ್ದರು. ತಮ್ಮ ಕುಟುಂಬದವರಿಗೆ, ಬಂಧು ಬಾಂಧವರಿಗಾಗಿ ಅವರು ಮನೆಯಲ್ಲೇ ಉಪನ್ಯಾಸ ನೀಡುತ್ತಿದ್ದರು.

ಹೀಗಿರುವಾಗ ಒಮ್ಮೆ ಸಂನ್ಯಾಸಿಯೊಬ್ಬರು ತಮ್ಮ ಶಿಷ್ಯವೃಂದದ ಸಮೇತ ಮಂಗಳವೇಡೆಗೆ ಬಂದರು. ಅವರು ಮಧ್ವಾಚಾರ್ಯರ ಮೆಚ್ಚಿನ ಶಿಷ್ಯ ಪದ್ಮನಾಭ ತೀರ್ಥರು ಎಂಬುದು ಗೋವಿಂದ ಶಾಸ್ತ್ರಿಗಳಿಗೆ ತಿಳಿಯಿತು. ಗೋವಿಂದ ಶಾಸ್ತ್ರಿಗಳು ತಕ್ಷಣ ಪದ್ಮನಾಭ ತೀರ್ಥರ ಚರಣ ಕಮಲಗಳಿಗೆ ನಮಿಸಿದರು. ಪದ್ಮನಾಭ ತೀರ್ಥರ ಜತೆ ಒಂದಿಷ್ಟು ಚರ್ಚಿಸಿದ ಬಳಿಕ, ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸುವಂತೆ ಗೋವಿಂದ ಶಾಸ್ತ್ರಿಗಳು ಕೇಳಿಕೊಂಡರು.

‘ನಾನು ನಿನ್ನ ಗುರುವಲ್ಲ. ನಮ್ಮೆಲ್ಲರ ಗುರು ಮಧ್ವಾಚಾರ್ಯರು. ನೀನು ಅವರಲ್ಲಿ ಹೋಗಿ ಆಶ್ರಯ ಬೇಡು’ ಎಂದು ಪದ್ಮನಾಭ ತೀರ್ಥರು ಉತ್ತರಿಸಿದರು. ಪದ್ಮನಾಭ ತೀರ್ಥರು ಮಂಗಳವೇಡೆಯಲ್ಲಿ ಕೆಲಕಾಲ ತಂಗಿದ್ದರು. ಗೋವಿಂದ ಶಾಸ್ತ್ರಿಗಳು ಶ್ರದ್ಧಾಭಕ್ತಿಯಿಂದ ಅವರ ಸೇವೆ ಮಾಡಿದರು.

ಪದ್ಮನಾಭ ತೀರ್ಥರು ಮರಳಿ ಉಡುಪಿಗೆ ಹೊರಟಾಗ ತಾವು ಜತೆಗೆ ಬರುವುದಾಗಿ ಗೋವಿಂದ ಶಾಸ್ತ್ರಿಗಳು ಒತ್ತಾಯಿಸಿದರು. ಸದ್ಯಕ್ಕೆ ಮಂಗಳವೇಡೆಯಲ್ಲೇ ಇರಬೇಕೆಂದೂ, ಇನ್ನೊಮ್ಮೆ ಬಂದು ಉಡುಪಿಗೆ ಕರೆದೊಯ್ಯುವುದಾಗಿಯೂ ಪದ್ಮನಾಭ ತೀರ್ಥರು ಭರವಸೆ ನೀಡಿದರು.

ಕೆಲಸಮಯದ ನಂತರ ಪದ್ಮನಾಭ ತೀರ್ಥರು ಮತ್ತೆ ಮಂಗಳವೇಡೆಗೆ ಬಂದರು. ರಘುನಾಥ ಪಂತರನ್ನು ಭೇಟಿಮಾಡಿ ಸೋದರ ಗೋವಿಂದ ಶಾಸ್ತ್ರಿಯನ್ನು ಜತೆಯಲ್ಲಿ ಕರೆದೊಯ್ಯಲು ಅನುಮತಿ ನೀಡುವಂತೆ ಕೇಳಿಕೊಂಡರು. ಮಧ್ವಾಚಾರ್ಯರನ್ನು ನೋಡಲು ಗೋವಿಂದ ಶಾಸ್ತ್ರಿಗಳು ಕಾತರದಿಂದಿದ್ದಾರೆಂದೂ ಅವರು ತಿಳಿಸಿದರು.

ಉಡುಪಿಯಲ್ಲಿ ಗೋವಿಂದ ಶಾಸ್ತ್ರಿ ಸಂನ್ಯಾಸ ಸ್ವೀಕರಿಸಬಹುದೆಂದು ರಘುನಾಥರು ಭೀತಿ ವ್ಯಕ್ತಪಡಿಸಿದರು. ಇದನ್ನೆಲ್ಲಾ ನಿಯಂತ್ರಿಸುವುದು ಐಹಿಕ ಜೀವಿಗಳ ಕೈಯಲ್ಲಿ ಸಾಧ್ಯವಿಲ್ಲ. ಎಲ್ಲವೂ ದೇವೋತ್ತಮ ಪರಮ ಪುರುಷನ ಅಣತಿಯಂತೆಯೇ ನಡೆಯಬೇಕು ಎಂದು ಪದ್ಮನಾಭ ತೀರ್ಥರು ರಘುನಾಥರಿಗೆ ತಿಳಿಹೇಳಿದರು. ಕೊನೆಗೂ ಗೋವಿಂದ ಶಾಸ್ತ್ರಿಯನ್ನು ಉಡುಪಿಗೆ ಕಳುಹಿಸಲು ರಘುನಾಥರು ಒಪ್ಪಿಕೊಂಡರು.

ಪದ್ಮನಾಭ ತೀರ್ಥರು ಗೋವಿಂದ ಶಾಸ್ತ್ರಿಗಳೊಂದಿಗೆ ಸೂರ್ಯ ಗ್ರಹಣದ ದಿನ ಉಡುಪಿ ತಲುಪಿದರು. ಅಂದು ಮಧ್ವಾಚಾರ್ಯರು ಕಡಲ ಕಿನಾರೆಯಲ್ಲಿರುವ ಕಣ್ವ ತೀರ್ಥದಲ್ಲಿ ಮೀಯಲು ಶಿಷ್ಯರೊಂದಿಗೆ ತೆರಳಿದ್ದರು. ಪದ್ಮನಾಭ ತೀರ್ಥರು ಗೋವಿಂದ ಶಾಸ್ತ್ರಿಗಳೊಂದಿಗೆ ಅಲ್ಲಿಗೆ ತೆರಳಿದರು.

ಈ ಸಂದರ್ಭದಲ್ಲಿ ಸಮುದ್ರ ಗಗನದೆತ್ತರದ ಅಲೆಗಳೊಂದಿಗೆ ಅಬ್ಬರಿಸುತ್ತಿತ್ತು. ಇದನ್ನು ಲೆಕ್ಕಿಸದ ಮಧ್ವಾಚಾರ್ಯರು ಸಮುದ್ರಕ್ಕಿಳಿದು ಪುಣ್ಯ ಸ್ನಾನ ಕೈಗೊಂಡರು. ಉಬ್ಬರದೊಂದಿಗೆ, ಅಬ್ಬರಿಸುತ್ತಿದ್ದ ಸಮುದ್ರವನ್ನು ಮಧ್ವಾಚಾರ್ಯರು ಲೀಲಾಜಾಲವಾಗಿ ಪ್ರವೇಶಿಸಿದ್ದನ್ನು ಕಂಡು ದಡದ ಮೇಲೆ ನಿಂತಿದ್ದ ಅವರ ಶಿಷ್ಯರು ಅವಾಕ್ಕಾದರು.

ಇದೇ ಸಂದರ್ಭದಲ್ಲಿ ಗೋವಿಂದ ಶಾಸ್ತ್ರಿಗಳೂ ಹಿಂದೆ ಮುಂದೆ ನೋಡದೇ ಸಮುದ್ರ ಪ್ರವೇಶಿಸಿದರು. ಕ್ಷಣ ಮಾತ್ರದಲ್ಲಿ ಅವರು ಸಮುದ್ರದ ಅಲೆಗಳ ಮಧ್ಯೆ ಕಣ್ಮರೆಯಾದರು. ತಕ್ಷಣ ಮಧ್ವಾಚಾರ್ಯರು ಯಾರಿಗೋ ಸನ್ನೆ ಮಾಡುವವರಂತೆ ತಮ್ಮ ಕೈಯನ್ನು ಅತ್ತಿಂದಿತ್ತ ಆಡಿಸಿದರು. ಶಾಂತವಾಗುವಂತೆ ಸಮುದ್ರಕ್ಕೆ ಸೂಚಿಸುತ್ತಿರುವಂತಿತ್ತು ಅವರ ಭಂಗಿ. ಅಚ್ಚರಿಯೆಂಬಂತೆ ಸಮುದ್ರವು ತಕ್ಷಣ ತನ್ನ ಘರ್ಜನೆ ನಿಲ್ಲಿಸಿ ಶಾಂತವಾಯಿತು.

ಉಬ್ಬರ ಇಳಿಯಿತು. ಗೋವಿಂದ ಶಾಸ್ತ್ರಿಗಳು ಮಧ್ವಾಚಾರ್ಯರ ಚರಣ ಕಮಲಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ಎಲ್ಲರಿಗೂ ಕಾಣಿಸುತ್ತಿತ್ತು. ಗೋವಿಂದ ಶಾಸ್ತ್ರಿಯನ್ನು ಮೇಲಕ್ಕೆಬ್ಬಿಸಿದ ಮಧ್ವಾಚಾರ್ಯರು ಅವರನ್ನು ಆಲಂಗಿಸಿಕೊಂಡರು. ಗೋವಿಂದ ಶಾಸ್ತ್ರಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಅವರು ಮತ್ತೆ ಮತ್ತೆ ಬಾಗಿ ಮಧ್ವಾಚಾರ್ಯರ ಚರಣಕಮಲಗಳನ್ನು ಹಿಡಿದುಕೊಂಡರು. ಮಧ್ವಾಚಾರ್ಯರ ಶಿಷ್ಯರೆಲ್ಲಾ ಸಂತಸದಿಂದ ಸಮುದ್ರಕ್ಕೆ ಇಳಿದರು. ಗುರುಗಳ ಗುಣಗಾನ ಮಾಡಿದರು.

ನಂತರ ಎಲ್ಲರೂ ಉಡುಪಿಗೆ ಹಿಂತಿರುಗಿದರು.ಗೋವಿಂದ ಶಾಸ್ತ್ರಿಗೆ ಸಂನ್ಯಾಸ ದೀಕ್ಷೆ ನೀಡಲು ಮಧ್ವಾಚಾರ್ಯರು ಸಮ್ಮತಿಸಿದರು. ಸಂನ್ಯಾಸ ದೀಕ್ಷೆ ನೀಡಿ, ಅವರಿಗೆ ಅಕ್ಷೋಭ್ಯ ತೀರ್ಥ ಎಂಬ ಹೊಸ ಹೆಸರು ನೀಡಿದರು. ಅಕ್ಷೋಭ್ಯ ಎಂಬ ಹೆಸರಿನ ಅರ್ಥವನ್ನೂ ವಿವರಿಸಿದರು.

ಅಕ್ಷೋಭ್ಯ ಎಂದರೆ ಎಂಥ ಸನ್ನಿವೇಶದಲ್ಲೂ ಎದೆಗುಂದದವನು. ಹಾಗೆಯೇ ಯಾವುದೇ ರೀತಿಯ ಲಾಲಸೆ ಅಥವಾ ಕೋಪತಾಪಗಳಿಗೆ ಒಳಗಾಗದವನು ಎಂದರ್ಥ ಎಂದು ಅವರು ವಿವರಿಸಿದರು. ತಮ್ಮ ಜೀವಮಾನದ ಕೊನೆಯ ಆರು ವರ್ಷ ತಮ್ಮ ಪಟ್ಟದ ಶಿಷ್ಯರಿಗೆ ತರಬೇತಿ ನೀಡುವುದರಲ್ಲೇ ಕಳೆದರು. ಕೃಷ್ಣಪಾದ ಸೇರುವ ಮೊದಲು ಪದ್ಮನಾಭ ತೀರ್ಥ, ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯತೀರ್ಥರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು.

ಮಧ್ವಾಚಾರ್ಯರು ಇಹಲೋಕ ತ್ಯಜಿಸಿದ ಬಳಿಕ ಪದ್ಮನಾಭ ತೀರ್ಥರು ಪೀಠಾರೋಹಣ ಮಾಡಿದರು. ಅವರ ನಂತರ ನರಹರಿ ತೀರ್ಥ ಮತ್ತು ಮಾಧವ ತೀರ್ಥರು ಪೀಠದ ಜವಾಬ್ದಾರಿ ಹೊತ್ತರು.

ಇದೇವೇಳೆ ಅಕ್ಷೋಭ್ಯ ತೀರ್ಥರು ಮಂಗಳವೇಡೆಗೆ ಆಗಮಿಸಿ ಅಲ್ಲಿ ಕೆಲಕಾಲ ತಂಗಿದ್ದರು. ಗೋವಿಂದಶಾಸ್ತ್ರಿಯನ್ನು ಅಕ್ಷೋಭ್ಯ ತೀರ್ಥರ ರೂಪದಲ್ಲಿ ನೋಡಿ ಮನೆಯವರೆಲ್ಲಾ ದಂಗಾದರು. ಸೋದರ ರಘುನಾಥ, ಅತ್ತಿಗೆ ಸಕ್ಕೂಬಾಯಿ ನಿಷ್ಠೆಯಿಂದ ಅಕ್ಷೋಭ್ಯ ತೀರ್ಥರ ಸೇವೆ ಮಾಡಿದರು.

ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷವಾದರೂ ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿತ್ತು. ಅವರು ಅಕ್ಷೋಭ್ಯ ತೀರ್ಥರ ಬಳಿ ತಮ್ಮ ನೋವು ತೋಡಿಕೊಂಡರು. ಇಷ್ಟರಲೇ ನಿಮಗೆ ಮೂರು ಮಕ್ಕಳಾಗುತ್ತವೆ ಎಂದು ಅಕ್ಷೋಭ್ಯರು ಆಶೀರ್ವದಿಸಿದರು. ಮೊದಲ ಮಗು ಬಹಳ ಸಮಯ ಬದುಕುವುದಿಲ್ಲ.

ಎರಡನೇ ಮಗು ಮನುಕುಲಕ್ಕೇ ಅನರ್ಘ್ಯ ರತ್ನದಂತೆ ಬಾಳಿ, ಜಗತ್ತಿನೆಲ್ಲೆಡೆ ಕೀರ್ತಿ ಪಸರಿಸುತ್ತದೆ. ಮೂರನೆಯ ಮಗು ಮನೆ, ಸಂಸಾರ, ವ್ಯವಹಾರಗಳನ್ನು ನಿಬಾಯಿಸಿಕೊಂಡು ಹೋಗುತ್ತದೆ ಎಂದೂ ಅವರು ಭವಿಷ್ಯ ನುಡಿದರು. ಅಹೋಬಲಂಗೆ ತೆರಳಿ ನರಸಿಂಹನನ್ನು ಪೂಜಿಸುವಂತೆ ಸೂಚಿಸಿ, ದಂಪತಿಗೆ ಒಂದು ನರಸಿಂಹ ಸಾಲಿಗ್ರಾಮ ಶಿಲೆಯನ್ನು ನೀಡಿದರು. ಈ ಶಿಲೆಯನ್ನು ಅವರಿಗೆ ಮಧ್ವಾಚಾರ್ಯರೇ ನೀಡಿದ್ದರು.

ಅಕ್ಷೋಭ್ಯರು ನುಡಿದಂತೆಯೇ ಸ್ವಲ್ಪ ಸಮಯದಲ್ಲೇ ಸಕ್ಕೂಬಾಯಿ ಗಂಡು ಮಗುವಿಗೆ ಜನ್ಮ ನೀಡಿದಳು. ಆ ಮಗು ಅಕ್ಷೋಭ್ಯರು ನುಡಿದಂತೆಯೇ ಸ್ವಲ್ಪ ಸಮಯದಲ್ಲೇ ಬಹಳ ಕಾಲ ಬದುಕಲಿಲ್ಲ.  ಕೆಲ ಸಮಯದ ನಂತರ ಆಕೆಗೆ ಎರಡನೇ ಮಗು ಜನಿಸಿತು. ಇದನ್ನು ತಮ್ಮ ದಿವ್ಯ ದೃಷ್ಟಿಯಿಂದಲೇ ತಿಳಿದುಕೊಂಡ ಅಕ್ಷೋಭ್ಯರು ಮಗುವನ್ನು ನೋಡಲು ಮಂಗಳವೇಡೆಗೆ ಆಗಮಿಸಿದರು.

ಎಲ್ಲರೂ ಸಂಭ್ರಮ-ಸಡಗರದಿಂದ ಅವರನ್ನು ಸ್ವಾಗತಿಸಿದರು. ನರಸಿಂಹ ದೇವರ ಅನುಗ್ರಹದಿಂದ ಜನಿಸಿದ ಆ ಮಗುವಿಗೆ ನರಸಿಂಹ ಎಂದೇ ಅಕ್ಷೋಭ್ಯರು ನಾಮಕರಣ ಮಾಡಿದರು. ಮಗುವನ್ನು ನೋಡಿದ ತಕ್ಷಣ ಮುಂದೆ ಈತ ಮಹಾಪುರುಷ ನಾಗುತ್ತಾನೆಂದು ಹೇಳಬಹುದಿತ್ತು.

ಮುಖದಲ್ಲಿ ಅಂಥ ತೇಜಸ್ಸಿತ್ತು. ದೋಂಡೋ ನರಸಿಂಹ ಪಂತ ಎಂಬ ಹೆಸರಿನಿಂದ ಮಂಗಳವೇಡೆಯಲ್ಲಿ ಖ್ಯಾತನಾದ ಬಾಲಕ ನಂತರ ಅಕ್ಷೋಭ್ಯ ತೀರ್ಥರ ಶಿಷ್ಯನಾದ. ಅಕ್ಷೋಭ್ಯರಿಂದಲೇ ದೀಕ್ಷೆ ಪಡೆದು ಜಯತೀರ್ಥ ಎಂಬ ಹೆಸರಿನಿಂದ ಮುಂದೆ ಅವರ ಉತ್ತಾರಾಧಿಕಾರಿಯೂ ಆದರು.

ಮಾಧವ ತೀರ್ಥರು ಕಾಲವಾದ ನಂತರ ಅಕ್ಷೋಭ್ಯ ತೀರ್ಥರು ಮಾಧ್ವ ಪೀಠ ಅಲಂಕರಿಸಿದರು. ನಂತರ ಅಕ್ಷೋಭ್ಯ ತೀರ್ಥರು ವಿಜಯ ನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದರು. ರಾಜ್ಯದಲ್ಲಿ ಅರು ತಿಂಗಳು ಕಾಲ ತಂಗಿದ್ದ ಅಕ್ಷೋಭ್ಯರನ್ನು ರಾಜ ಬುಕ್ಕ ರಾಯ ಆದರದಿಂದ ಸತ್ಕರಿಸಿದ. ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದವರು ವಿದ್ಯಾರಣ್ಯರು. ಆ ಸಾಮ್ರಾಜ್ಯದ ಕುಲುಗುರುಗಳಾಗಿದ್ದ ವಿದ್ಯಾರಣ್ಯರು ಆ ಕಾಲದ ಶ್ರೇಷ್ಠ ವಿದ್ವಾಂಸರೆಂದು ಖ್ಯಾತಿ ಗಳಿಸಿದ್ದರು.

ಹೆಸರಾಂತ ವೈಷ್ಣವ ವಿದ್ವಾಂಸ ಶ್ರೀ ವೇದಾಂತ ದೇಶಿಕರೂ ಇವರ ಸಮಕಾಲೀನರು. ವಿದ್ಯಾರಣ್ಯ ಮತ್ತು ಅಕ್ಷೋಭ್ಯರ ಮಧ್ಯೆ ತತ್ವ ಭೇದವಿದ್ದರೂ, ಇಬ್ಬರು ಪರಸ್ಪರರನ್ನು ಗೌರವಿಸುತ್ತಿದ್ದರು. ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ವಿದ್ಯಾರಣ್ಯರ ಕೆಲವು ಶಿಷ್ಯರಿಗೆ ಅಕ್ಷೋಭ್ಯರ ಖ್ಯಾತಿ ಕಂಡು ಮತ್ಸರ ಶುರುವಾಯಿತು. ದೊರೆ ಬಳಿಗೆ ಅಕ್ಷೋಭ್ಯರ ಬಗ್ಗೆ ಇಲ್ಲ ಸಲ್ಲದ ದೂರು ಹೇಳಿದರು. ಅವರು ಸಾಮ್ರಾಜ್ಯವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂದು ದೂರಿದರು.

ಚಾಡಿ ಮಾತು ನಂಬಿದ ದೊರೆ ಬುಕ್ಕರಾಯ, ಅಕ್ಷೋಭ್ಯರನ್ನು ಕರೆದು ಛೀಮಾರಿ ಹಾಕಿದ. ತಕ್ಷಣ ವಿಜಯನಗರ ತೊರೆಯುವಂತೆ ಸೂಚಿಸಿದ. ಇದರಿಂದ ವಿಚಲಿತರಾಗದ ಅಕ್ಷೋಭ್ಯರು ತಕ್ಷಣ ವಿಜಯನಗರದಿಂದ ಹೊರಟು ಕೂಡಲಿ ಎಂಬಲ್ಲಿಗೆ ಬಂದರು. ತುಂಗಾಭದ್ರಾ ನದಿಗಳ ಸಂಗಮ ಸ್ಥಳ ಕೂಡಲಿ. ಇಲ್ಲಿ ಶ್ರೀ ಚಿಂತಾಮಣಿ ನರಸಿಂಹ ದೇವಾಲಯವಿದೆ. ಇಲ್ಲಿನ ವಿಗ್ರಹವನ್ನು ಸಾಲಿಗ್ರಾಮ ಶಿಲೆಯಿಂದ ಕೆತ್ತಲಾಗಿದೆ.

ಕೆಲ ಕಾಲ ಚಿಂತಾಮಣಿ ನರಸಿಂಹನ ಸೇವೆಯಲ್ಲಿ ಕಳೆದ ಅಕ್ಷೋಭ್ಯರು ಪನ್ನೇರಳೆ ಮರದ ಕೆಳಗೆ ಕುಳಿತು ಕಠಿಣ ತಪಸ್ಸನ್ನಾಚರಿಸಿದರು. ನಿರಂತರ ಹರಿನಾಮ ಸ್ಮರಣೆ ಮಾಡಿದರು. ಹಸಿವು, ಬಾಯಾರಿಕೆ, ಮಳೆ, ಬಿಸಿಲು, ಕಾಡು ಮೃಗಗಳಾವುವೂ ಅವರ ತಪಸ್ಸನ್ನು ಭಂಗಗೊಳಿಸಲಿಲ್ಲ. ವಿದ್ಯಾರಣ್ಯರ ರಾಜಪ್ರಭುತ್ವವಾದವನ್ನು ಸೋಲಿಸಿ, ಕೃಷ್ಣನೇ ದೇವೋತ್ತಮ ಪರಮ ಪುರುಷ ಎಂಬುದನ್ನು ಸಾಬೀತು ಪಡಿಸುವುದು ಅವರ ಗುರಿಯಾಗಿತ್ತು.

ಒಂದು ದಿನ ಅಕ್ಷೋಭ್ಯರು ಕಠಿಣ ತಪಸ್ಸಿನಲ್ಲಿ ನಿರತರಾಗಿದ್ದಾಗ ಕೋತಿಯೊಂದು ಮರವೇರಿ ಎರಡು ಪನ್ನೇರಳೆ ಹಣ್ಣುಗಳನ್ನು ಕಿತ್ತು ಇವರ ಮೇಲೆ ಎಸೆದು ತಕ್ಷಣ ಮಾಯವಾಯಿತು. ಅದೇ ದಿನ ರಾತ್ರಿ ಅಕ್ಷೋಭ್ಯರ ಕನಸಿನಲ್ಲಿ ನರಸಿಂಹ ದೇವರು ಪ್ರತ್ಯಕ್ಷರಾದರು. ಕೋತಿ ಎಸೆದ ಎರಡು ಪನ್ನೇರಳೆ ಹಣ್ಣುಗಳಲ್ಲಿ ಒಂದನ್ನು ತಿನ್ನುವಂತೆಯೂ, ಮತ್ತೊಂದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆಯೂ ನರಸಿಂಹ ದೇವರು ಆದೇಶಿಸಿದರು.

ಕೃಷ್ಣ ಪ್ರಜ್ಞೆ ಪ್ರಚಾರ ಮಾಡುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ ಎಂಬ ಭರವಸೆಯೂ ದೊರೆಯಿತು. ನರಸಿಂಹರ ಅನುಗ್ರಹದಿಂದ ತೃಪ್ತರಾದ ಅಕ್ಷೋಭ್ಯರು ಜಪ ತಪಗಳನ್ನು ತೀವ್ರಗೊಳಿಸಿದರು.

ಕೆಲ ಸಮಯದ ನಂತರ ಅಕ್ಷೋಭ್ಯರು ತಮ್ಮ ಶಿಷ್ಯರೊಡಗೂಡಿ ವಿಜಯನಗರಕ್ಕೆ ತೆರಳಿದರು. ಅಲ್ಲಿಗೆ ತಲುಪಿದೊಡನೆ ಅಕ್ಷೋಭ್ಯರು ಶಿಷ್ಯರೊಬ್ಬರನ್ನು ಅರಮನೆಗೆ ಕಳುಹಿಸಿದರು. ಅಕ್ಷೋಭ್ಯರು ವಿಜಯನಗರಕ್ಕೆ ಬಂದಿರುವ ವಿಷಯವನ್ನು ವಿದ್ಯಾರಣ್ಯರಿಗೆ ತಿಳಿಸಿದರು. ವೈದಿಕ ವಿಷಯಗಳ ಬಗ್ಗೆ ಅಕ್ಷೋಭ್ಯರು ನಿಮ್ಮೊಡನೆ ಮುಖಾಮುಖಿ ಚರ್ಚೆ ನಡೆಸಲು ಇಚ್ಛಿಸಿದ್ದಾರೆ’ ಎಂದು ಅವರು ವಿದ್ಯಾರಣ್ಯರಿಗೆ ತಿಳಿಸಿದರು.

ಇದರಿಂದ ಕಸಿವಿಸಿಗೊಂಡ ವಿದ್ಯಾರಣ್ಯರು, ‘ಕಾಡು-ಮೇಡು ಅಲೆಯುವ ಸಂನ್ಯಾಸಿಗಳ ಜತೆ ನಾನು ಚರ್ಚೆ ನಡೆಸುವುದಿಲ್ಲ. ಅದು ನನ್ನ ಘನತೆಗೆ ತಕ್ಕುದಲ್ಲ ಎಂದು ಆಹ್ವಾನ ತಿರಸ್ಕರಿಸಿದರು. ಇದನ್ನು ತಿಳಿದ ಅಕ್ಷೋಭ್ಯರಿಗೆ ವಿದ್ಯಾರಣ್ಯರನ್ನು ವಾದದಲ್ಲಿ ಮಣಿಸಲೇಬೇಕೆಂಬ ಛಲ ಹೆಚ್ಚಾಯಿತು.

ವಿಜಯನಗರದಿಂದ ಹೊರಟ ಅಕ್ಷೋಭ್ಯರು ಮುಳವಾಯಿ ಪ್ರಾಂತ್ಯದ ದೊರೆ ಕಂಪರಾಯನನ್ನು ಭೇಟಿ ಮಾಡಿದರು. (ಈಗಿನ ಕೋಲಾರ ಜಿಲ್ಲೆಯಲ್ಲಿರುವ ಮುಳಬಾಗಿಲು ಈ ರಾಜ್ಯದ ರಾಜಧಾನಿಯಾಗಿತ್ತು.) ಕಂಪರಾಯ ವಿಷ್ಣು ಭಕ್ತನಾಗಿದ್ದು, ಅಕ್ಷೋಭ್ಯರ ಅನುಯಾಯಿಯಾಗಿದ್ದ. ಅಕ್ಷೋಭ್ಯರು ಮುಳಬಾಗಿಲು ಪ್ರವೇಶಿಸುವಾಗ ಕಂಪರಾಯ ಒಂದು ತೊಂದರೆಗೆ ಸಿಲುಕಿದ್ದ. ತನ್ನ ಪಾಡಿಗೆ ಆಟವಾಡಿಕೊಂಡಿದ್ದ ಕಂಪರಾಯನ ಒಬ್ಬನೇ ಮಗನಿಗೆ ಹಾವು ಕಚ್ಚಿತು.

ಆತ ತಕ್ಷಣ ಸಾವನ್ನಪ್ಪಿದ. ಕುಟುಂಬದವರೆಲ್ಲಾ ದುಃಖತಪ್ತರಾಗಿ ರೋದಿಸುತ್ತಿದಾಗಲೇ ಅಕ್ಷೋಭ್ಯರು ಅಲ್ಲಿಗೆ ಪ್ರವೇಶಿಸಿದರು. ಕಂಪರಾಯ ಮತ್ತು ಅವನ ಪತ್ನಿ ತಕ್ಷಣ ಮಗನ ಶವ ಎತ್ತಿಕೊಂಡು ಅಕ್ಷೋಭ್ಯರ ಬಳಿ ಬಂದರು. ಮಗುವಿಗೆ ಮರು ಜೀವ ನೀಡುವಂತೆ ಅಕ್ಷೋಭ್ಯರಲ್ಲಿ ಅಂಗಲಾಚಿದರು.

ದೇವೋತ್ತಮ ಪರಮ ಪುರುಷನ ದಯೆಯಿದ್ದರೆ ಏನು ಬೇಕಾದರೂ ಸಾಧ್ಯ ಎಂದು ಅಕ್ಷೋಭ್ಯರು ಕಂಪರಾಯ ದಂಪತಿಗೆ ಭರವಸೆ ನೀಡಿದರು. ತಕ್ಷಣ ತಮ್ಮ ಜೋಳಿಗೆಯಲ್ಲಿದ್ದ ಶ್ರೀ ನರಸಿಂಹ ದೇವರು ಅನುಗ್ರಹಪೂರ್ವಕವಾಗಿ ನೀಡಿದ್ದ ಪನ್ನೇರಳೆ ಹಣ್ಣನ್ನು ತೆಗೆದರು. ಅದನ್ನು ನೀರಿನಿಂದ ತೊಳೆದರು. ಆ ನೀರಿಗೆ ಸಾಲಿಗ್ರಾಮ ನರಸಿಂಹ ದೇವರ ತೀರ್ಥ ಬೆರೆಸಿ, ಆ ಪವಿತ್ರ ಜಲವನ್ನು ಸತ್ತ ಮಗುವಿನ ಬಾಯಿಗೆ ಸುರಿದರು.

ನಂತರ ಸುಟ್ಟ ಪನ್ನೇರಳೆ ಹಣ್ಣಿನ ಪುಡಿಯನ್ನು ಹಾವು ಕಚ್ಚಿದ ಜಾಗಕ್ಕೆ ಹಚ್ಚಿದರು. ನಂತರ ಮಗುವಿನ ಕಿವಿಯಲ್ಲಿ ಓಂ ಕಾರ ಪಠಿಸಿದರು. ಏನಿದು ಪರಮಾಶ್ಚರ್ಯ! ಮಗು ನಿದ್ದೆಯಿಂದ ಎಚ್ಚೆತ್ತಂತೆ ಎದ್ದು ಕುಳಿತಿತು. ನಂತರ ನಿಧಾನವಾಗಿ ನಡೆದಾಡಲಾರಂಭಿಸಿತು!

ಕಂಪರಾಯ ದಂಪತಿ ಅಕ್ಷೋಭ್ಯರನ್ನು ಭಕ್ತಿಯಿಂದ ಸ್ತುತಿಸಿದರು. ಕೃತಜ್ಞತಾ ಭಾವದಿಂದ ಅವರ ಸೇವೆಗೈದರು. ಈ ಪವಾಡ ಸದೃಶ ಲೀಲೆ ನೋಡಿದವರೆಲ್ಲಾ ಅಕ್ಷೋಭ್ಯರ ಆಧ್ಯಾತ್ಮಿಕ ಸಾಮರ್ಥ್ಯ ಕಂಡು ನಿಬ್ಬೆರಗಾದರು. ಅವರನ್ನು ಮನಸಾರೆ ಕೊಂಡಾಡಿದರು. ಆದರೆ ಅಕ್ಷೋಭ್ಯರು ಮಾತ್ರ, ಎಲ್ಲಾ ನರಸಿಂಹ ದೇವರ ಲೀಲೆ’ ಎಂದು ವಿನಯ ಪೂರ್ವಕವಾಗಿ ನುಡಿದರು.

ಇಲ್ಲಿಂದ ಮುಂದೆ ಅಕ್ಷೋಭ್ಯರು ಮುಳಬಾಗಿಲಿನ ಪವಿತ್ರ ನರಸಿಂಹ ತೀರ್ಥ ಸರೋವರದ ತಟದಲ್ಲಿ ನೆಲೆಸಿದರು. ಅದ್ಭುತವೆಂಬಂತೆ ಇಲ್ಲಿ ಕಲ್ಲುಬಂಡೆಯೊಂದರಲ್ಲಿ ನರಸಿಂಹ ವಿಗ್ರಹ ಮೂಡಿದ್ದನ್ನು ಅಕ್ಷೋಭ್ಯ ತೀರ್ಥರು ಪತ್ತೆ ಹಚ್ಚಿದರು. ಇದೇ ಸ್ಥಳದಲ್ಲಿ ಕಂಪರಾಯ ಒಂದು ಸುಂದರ ದೇವಾಲಯ ನಿರ್ಮಿಸಿದರು.

ಹೀಗೆ ಕಂಪರಾಯನಿಂದ ರಾಜಾಶ್ರಯ ಪಡೆದ ಅಕ್ಷೋಭ್ಯರು ಚರ್ಚೆಗೆ ಬರುವಂತೆ ಮತ್ತೊಮ್ಮೆ ವಿದ್ಯಾರಣ್ಯರಿಗೆ ಸವಾಲೆಸೆದರು. ಈ ಬಾರಿ ಅಕ್ಷೋಭ್ಯರ ಸವಾಲು ಸ್ವೀಕರಿಸಿದ ವಿದ್ಯಾರಣ್ಯರು ಶಿಷ್ಯರೊಡಗೂಡಿ ಮುಳಬಾಗಿಲಿಗೆ ಆಗಮಿಸಿದರು. ಇಬ್ಬರು ಮಹಾನ್ ವಿದ್ವಾಂಸರ ಮಧ್ಯೆ ಚರ್ಚೆ ನಡೆಯಲಿರುವ ವಿಷಯ ಕಾಳಿಚ್ಚಿನಂತೆ ರಾಜ್ಯಾದ್ಯಂತ ಹಬ್ಬಿತು. ರಾಜ್ಯದ ಮೂಲೆ ಮೂಲೆಗಳಿಂದ ವಿದ್ವಾಂಸರು ಮುಳಬಾಗಿಲಿಗೆ ಬರಲಾರಂಭಿಸಿದರು. ಮುಳಬಾಗಿಲಿನ ಹಂಚಿಕಲ್ಲು ಗುಡ್ಡ ಎಂಬ ಬೆಟ್ಟದ ಮೇಲೆ ಈ ಚರ್ಚೆಗಾಗಿಯೇ ವಿಶೇಷ ಮಂದಿರವನ್ನು ಕಂಪರಾಯ ನಿರ್ಮಿಸಿದ.

ಸಾವಿರಾರು ವಿದ್ವಾಂಸರ ಸಮ್ಮುಖದಲ್ಲಿ ಅಕ್ಷೋಭ್ಯ-ವಿದ್ಯಾರಣ್ಯರ ಮಧ್ಯೆ ಚರ್ಚಾಗೋಷ್ಠಿ ಆರಂಭವಾಯಿತು. ಗೋಷ್ಠಿಯಲ್ಲಿ ಇಬ್ಬರೂ ತಂತಮ್ಮ ವಿದ್ವತ್ತನ್ನು ಪ್ರದರ್ಶಿಸಿದರು. ಹಲವು ದಿನಗಳ ತನಕ ಚರ್ಚೆ ಮುಂದುವರಿಯಿತು. ಅಂತಿಮವಾಗಿ ದೇವೋತ್ತಮ ಪರಮಪುರುಷ ಶ್ರೀಕೃಷ್ಣನೇ ಪರಮ ನಿತ್ಯ ಸತ್ಯ ಎಂದೂ, ಉಳಿದ ಜೀವಿಗಳೆಲ್ಲಾ ಅವನ ಅಧೀನವೆಂದೂ ಅಕ್ಷೋಭ್ಯ ತೀರ್ಥರು ಸಾಬೀತುಪಡಿಸಿದರು.

ವಿದ್ಯಾರಣ್ಯರು ಸೋಲೊಪ್ಪಿಕೊಂಡರು. ಅಕ್ಷೋಭ್ಯರು ಗೆಲುವಿನೊಂದಿಗೆ ತಮ್ಮ ವಾದ ಮುಗಿಸುತ್ತಿದ್ದಂತೆ ಸಭೆಯಲ್ಲಿ ಬಾರಿ ಮೆಚ್ಚುಗೆಯ ಕರತಾಡನ ಕೇಳಿಬಂತು.

ಅಕ್ಷೋಭ್ಯರ ಗೆಲುವಿನಿಂದ ಹರ್ಷಿತನಾದ ಕಂಪರಾಯ ಹಂಚಿಕಲ್ಲು ಗುಡ್ಡದ ಮೇಲೆ ಈ ಘಟನೆಯ ಸವಿನೆನಪಿಗಾಗಿ ಒಂದು ವಿಜಯ ಸ್ತಂಭ ನಿರ್ಮಿಸಿದ.

ವಿದ್ಯಾರಣ್ಯರನ್ನು ಮಣಿಸಿದ ಬಳಿಕ ಅಕ್ಷೋಭ್ಯ ತೀರ್ಥರು ಕೂಡಲಿಗೆ ಹಿಂತಿರುಗಿದರು. ಅಲ್ಲಿ ತಮ್ಮ ಆರಾಧ್ಯ ದೈವ ಚಿಂತಾಮಣಿ ನರಸಿಂಹನಿಗೆ ವಿಜಯ ಪತ್ರ ಅರ್ಪಿಸಿದರು. ಈ ಸಂದರ್ಭದಲ್ಲೊಂದು ಕುತೂಹಲಕಾರಿ ಘಟನೆ ಸಂಭವಿಸಿತು. ಸಮೀಪದ ಹಳ್ಳಿಯಲ್ಲಿ ವಾಸಿಸುತ್ತಿದ್ದ ಇಬ್ಬರು ಬ್ರಾಹ್ಮಣ ಸೋದರರು ತಮ್ಮ ಸಂಬಂಧಿಯೇ ಆದ ಮಹಾದೇವ ಭಟ್ಟ ಎಂಬುವರ ಪುತ್ರನನ್ನು ಹತ್ಯೆಗೈದರು.

ಬ್ರಾಹ್ಮಣ ಹತ್ಯೆಯಂಥ ಘೋರ ಅಪರಾಧ ಎಸಗಿದ ಇಬ್ಬರೂ ಇನ್ನಿಲ್ಲದ ಸಂಕಷ್ಟಗಳಿಗೆ ಗುರಿಯಾದರು. ಕೊನೆಗೆ ಬೇರೆ ದಾರಿ ಕಾಣದೇ ಅಕ್ಷೋಭ್ಯರ ಬಳಿ ಬಂದು ತಮಗೆ ದಾರಿ ತೋರುವಂತೆ ಬೇಡಿಕೊಂಡರು. ಸೋದರರು ತೀವ್ರ ಪಶ್ಚಾತ್ತಾಪಪಡುತ್ತಿರುವುದನ್ನು ಕಂಡು ಅಕ್ಷೋಭ್ಯರಿಗೆ ಅವರ ಕುರಿತು ಕನಿಕರ ಮೂಡಿತು.

ಆದರೂ ಅವರ ನಿಷ್ಠೆಯನ್ನು ಒಮ್ಮೆ ಪರೀಕ್ಷಿಸಬೇಕೆಂಬ ಮನಸಾಯಿತು. ಅವರಿಬ್ಬರನ್ನೂ ಕರೆದು ಹತ್ತಿರದಲ್ಲೇ ಇದ್ದ ಮರವನ್ನೇರುವಂತೆ ಅಕ್ಷೋಭ್ಯರು ಸೂಚಿಸಿದರು. ಇಬ್ಬರೂ ಮರವೇರಿದರು. ಮೇಲಿನಿಂದ ಕೆಳಕ್ಕೆ ಧುಮುಕುವಂತೆ ಆಚಾರ್ಯರು ಆದೇಶಿಸಿದರು.

ಇಬ್ಬರೂ ಮರುಮಾತನಾಡದೇ ಕೆಳಗೆ ಹಾರಲು ಸಜ್ಜಾದರು. ತಕ್ಷಣ ಅವರನ್ನು ತಡೆದ ಅಕ್ಷೋಭ್ಯರು ಮರದಿಂದ ಕೆಳಗಿಳಿಯುವಂತೆ ಸೂಚಿಸಿದರು. ಇಬ್ಬರಿಗೂ ನರಸಿಂಹ ದೇವರ ತೀರ್ಥ ನೀಡಿದರು. ನಂತರ ಸೋದರರಿಬ್ಬರನ್ನೂ ಉದ್ದೇಶಿಸಿ, ‘ನೀವಿಬ್ಬರೂ ಈಗ ಎಲ್ಲಾ ಪಾಪಗಳಿಂದ ವಿಮೋಚನೆ ಹೊಂದಿದ್ದೀರಿ’ ಎಂದು ಘೋಷಿಸಿದರು!

ಸೋದರರಿಬ್ಬರೂ ಅಕ್ಷೋಭ್ಯರಿಂದಾಗಿ ಶಾಪ ವಿಮೋಚನೆ ಹೊಂದಿದ ಸುದ್ದಿ ಎಲ್ಲೆಡೆ ಹಬ್ಬಿತು. ಸೋದರರಿಂದ ಹತ್ಯೆಗೊಳಗಾದ ವ್ಯಕ್ತಿಯ ತಂದೆ ಮಹಾದೇವ ಭಟ್ಟರ ಕಿವಿಗೂ ಈ ಎಷಯ ತಲುಪಿತು. ಇದರಿಂದ ಚಕಿತರಾದ ಮಹಾದೇವ ಭಟ್ಟರು ಅಕ್ಷೋಭ್ಯರನ್ನು ಕಾಣಲು ಬಂದರು.

ಬ್ರಾಹ್ಮಣ ಹತ್ಯೆಯಂಥ ಘೋರ ಅಪರಾಧ ಎಸಗಿದ ಪಾಪಿ ಸೋದರರು ಶಾಪ ಮುಕ್ತರಾಗಲು ಹೇಗೆ ಸಾಧ್ಯ ಎಂದು ಅವರು ಅಕ್ಷೋಭ್ಯರನ್ನು ಪ್ರಶ್ನಿಸಿದರು. ನರಸಿಂಹ ದೇವರ ತೀರ್ಥಕ್ಕೆ ಎಂಥ ಪಾಪವನ್ನು ಬೇಕಿದ್ದರೂ ತೊಡೆದು ಹಾಕುವ ಶಕ್ತಿ ಇದೆ ಎಂದು ಅಕ್ಷೋಭ್ಯರು ಉತ್ತರಿಸಿದರು.

ಆದರೆ ಮಹಾದೇವ ಭಟ್ಟರಿಗೆ ಈ ಮಾತು ಒಪ್ಪಿಗೆಯಾಗಲಿಲ್ಲ. ಆಗ ಅಕ್ಷೋಭ್ಯರು ಮಹಾದೇವ ಭಟ್ಟರ ಬಿಳಿಯ ಉತ್ತರೀಯವನ್ನು ಗೋಡಂಬಿ ಎಣ್ಣೆಯಲ್ಲಿ (ಗೇರು ಹಣ್ಣಿನಿಂದ ತಯಾರಿಸುವ ಎಣ್ಣೆ) ಅದ್ದಿದರು. ಬಟ್ಟೆಗೆ ಅಂಟಿರುವ ಎಣ್ಣೆಯನ್ನು, ಅದರ ಕಲೆಯನ್ನು ತೊಳೆದುಕೊಂಡು ಬರುವಂತೆ ಮಹಾದೇವ ಭಟ್ಟರಿಗೆ ಸೂಚಿಸಿದರು. ಮಹಾದೇವ ಭಟ್ಟರು ಎಷ್ಟೇ ಪ್ರಯತ್ನಿಸಿದರೂ ಬಟ್ಟೆಗೆ ಅಂಟಿದ್ದ ಕೊಳೆ ತೊಳೆಯುವುದು ಸಾಧ್ಯವಾಗಲಿಲ್ಲ.

ಪ್ರಯತ್ನದಲ್ಲಿ ಸೋತು ಹಿಂತಿರುಗಿದ ಭಟ್ಟರು ಎಣ್ಣೆ ಕಲೆ ಅಂಟಿದ್ದ ಬಟ್ಟೆಯನ್ನು ಅಕ್ಷೋಭ್ಯರಿಗೆ ನೀಡಿದರು. ಆ ಕೊಳೆ ಬಟ್ಟೆಯನ್ನು ಪಡೆದ ಅಕ್ಷೋಭ್ಯರು ಅದಕ್ಕೆ ನರಸಿಂಹ ದೇವರ ತೀರ್ಥ ಪ್ರೋಕ್ಷಿಸಿದರು. ಪವಿತ್ರ ಜಲ ಸೋಕುತ್ತಿದ್ದಂತೆ ಬಟ್ಟೆ ಮೇಲಿದ್ದ ಕಲೆಗಳು ಮಾಯವಾದವು. ಅದು ಹೊಚ್ಚಹೊಸ ವಸ್ತ್ರದಂತೆ ಕೋರೈಸತೊಡಗಿತು! ಇದನ್ನು ಕಂಡು ನಿಬ್ಬೆರಗಾದ ಮಹಾದೇವ ಭಟ್ಟರು ಅಕ್ಷೋಭ್ಯರ ಪಾದ ಕಮಲಗಳಿಗೆರೆಗಿದರು.

ಅರಿಯದೇ ನಿಮ್ಮ ಸಾಮರ್ಥ್ಯದ ಬಗ್ಗೆ ಶಂಕಿಸಿದ್ದಕ್ಕಾಗಿ ಕ್ಷಮಿಸಬೇಕೆಂದು ಕೇಳಿಕೊಂಡರು. ಈ ಘಟನೆಯಿಂದಾಗಿ ತೀವ್ರ ವೈರಾಗ್ಯ ಭಾವ ಬೆಳೆಸಿಕೊಂಡ ಮಹಾದೇವ ಭಟ್ಟರು, ತಮಗೆ ಸಂನ್ಯಾಸ ದೀಕ್ಷೆ ನೀಡುವಂತೆ ಅಕ್ಷೋಭ್ಯರನ್ನು ಕೇಳಿಕೊಂಡರು.

ಅವರ ಅಪೇಕ್ಷೆಯಂತೆ ಅಕ್ಷೋಭ್ಯರು ಮಹಾದೇವ ಭಟ್ಟರಿಗೆ ಸಂನ್ಯಾಸ ದೀಕ್ಷೆ ನೀಡಿದರು. ಅವರಿಗೆ ತ್ರೈಲೋಕ್ಯ ಭೂಷಣ ತೀರ್ಥ ಎಂದು ನಾಮಕರಣ ಮಾಡಿ ತಮಗೆ ಶ್ರೀ ಮಧ್ವಾಚಾರ್ಯರು ನೀಡಿದ್ದ ಶ್ರೀ ರಾಮ ವಿಗ್ರಹ ಮತ್ತು ನರಸಿಂಹ ಸಾಲಿಗ್ರಾಮವನ್ನು ನೀಡಿದರು. ನಂತರ ಕೂಡಲಿಗೆ ತೆರಳಿ ಅಲ್ಲಿಯೇ ನೆಲೆಸುವಂತೆ ಅವರಿಗೆ ಸೂಚಿಸಿದರು. ಗುರುವರ್ಯರ ಸೂಚನೆಯಂತೆ ಕೂಡಲಿಗೆ ತೆರಳಿದ ತ್ರೈಲೋಕ್ಯ ತೀರ್ಥರು ನಂತರ ಅಲ್ಲಿ ಕೂಡಲಿ ಅಕ್ಷೋಭ್ಯ ಮಠ ಸ್ಥಾಪಿಸಿದರು.

ಇದೇ ವೇಳೆ ಪಂಢರಾಪುರಕ್ಕೆ ತೆರಳಿದ ಅಕ್ಷೋಭ್ಯರಿಗೆ ಅಲ್ಲಿ ಕೆಲಕಾಲ ತಂಗಿದರು. ಈಗಾಗಲೇ ಅವರಿಗೆ 78 ವರ್ಷ ವಯಸ್ಸಾಗಿತ್ತು. ಮಧ್ವಾಚಾರ್ಯರು ತಮಗೆ ವಹಿಸಿಕೊಟ್ಟಿದ್ದ ಪ್ರಚಾರ ಕಾರ್ಯವನ್ನು ಶಿಷ್ಯರಿಗೆ ವಹಿಸಿಕೊಡುವುದು ಅವರಿಗೆ ಅನಿವಾರ್ಯವಾಗಿತ್ತು. ಇದರ ಜತೆಗೆ ಮಧ್ವಾಚಾರ್ಯರ ಕೃತಿಗಳಿಗೆ ವ್ಯಾಖ್ಯಾನ ರಚಿಸುವ ಕೆಲಸವೂ ಆಗಬೇಕಿತ್ತು.

ಎಲ್ಲವೂ ದೇವೋತ್ತಮ ಪರಮ ಪುರುಷನ ಲೀಲೆ! ಅಕ್ಷೋಭ್ಯರು ತಮ್ಮ ಅಣ್ಣ ರಘುನಾಥರ ಮಗ ದೋಂಡೋ ನರಸಿಂಹ ಪಂತರನ್ನು ಭೇಟಿ ಮಾಡುತ್ತಿದ್ದಂತೆ ಎಲ್ಲಾ ಮಹತ್ಕಾರ್ಯಗಳಿಗೂ ಪವಾಡ ಸದೃಶವಾಗಿ ಚಾಲನೆ ದೊರೆಯಿತು!! ಅಕ್ಷೋಭ್ಯರ ಪರಮಾಪ್ತ ಶಿಷ್ಯರಾಗಿ ಜಯತೀರ್ಥರೆಂಬ ಹೆಸರಿನಿಂದ ಮುಂದೆ ಹೆಸರುವಾಸಿಯಾದ ನರಸಿಂಹ ಪಂತರು, ಅಕ್ಷೋಭ್ಯರ ಕನಸುಗಳನ್ನು ನನಸು ಮಾಡಿದರು.

ಕೃತಿಗಳು : ಮಧ್ವಾಚಾರ್ಯರ ಬೋಧನೆಗಳನ್ನೊಳಗೊಂಡ ‘ಮಾಧ್ವ ತತ್ವ ಸಾರ ಸಂಗ್ರಹ’ ಎಂಬ ಕೃತಿಯನ್ನು ಅಕ್ಷೋಭ್ಯರು ರಚಿಸಿದ್ದಾರೆ. ಆದರೆ ಈಗ ಈ ಕೃತಿ ಲಭ್ಯವಿಲ್ಲ. ಇದಲ್ಲದೇ ವೇದಗಳ ಮುಖ್ಯಾಂಶಗಳನ್ನೊಳಗೊಂಡ ವೇದ ಸಾರ ಸಂಗ್ರಹ’ ಎಂಬ ಕೃತಿಯನ್ನೂ ಇವರು ರಚಿಸಿದ್ದಾರೆ.

ಅಕ್ಷೋಭ್ಯರು ಪಂಢರಾಪುರದಲ್ಲಿ ನೆಲೆಸಿದ್ದಾಗ ಅಲ್ಲಿ ಒಬ್ಬ ಶಿಲ್ಪಿ ವಿಠಲ ದೇವ ವಿಗ್ರಹವನ್ನು ಕೆತ್ತುತ್ತಿದ್ದ. ಒಂದು ದಿನ ಭಗವಂತನ ಆಜ್ಞೆಯಂತೆ ಇನ್ನೂ ಪೂರ್ಣಗೊಳ್ಳದ ಆ ವಿಗ್ರಹವನ್ನು ಆ ಶಿಲ್ಪಿ ಅಕ್ಷೋಭ್ಯರಿಗೆ ನೀಡಿದ. ಅಕ್ಷೋಭ್ಯರು ಅದರ ಕೆತ್ತನೆ ಕಾರ್ಯವನ್ನು ತುಕೋಬಾ ಎಂಬಾ ಇನ್ನೊಬ್ಬಶಿಲಿಯಿಂದ ಪೂರ್ಣಗೊಳಿಸಿದರು. ನಂತರ ಆ ವಿಗ್ರಹವನ್ನು ಪೂಜಿಸಲಾರಂಭಿಸಿದರು. ವಿಗ್ರಹ ರೂಪದಲ್ಲಿದ್ದ ವಿಠಲನು ಅಕ್ಷೋಭ್ಯರ ಜತೆ ಆಗಾಗ ಮಾತನಾಡುತ್ತಿದ್ದನೆಂದು ಹೇಳಲಾಗಿದೆ.

ನಂತರ ಅಕ್ಷೋಭ್ಯರು ಗುಲ್ಬರ್ಗಾ ಸಮೀಪ ಕಾಗಿನಿ ನದಿ ತೀರದಲ್ಲಿರುವ ಮಳಖೇಡಾ ಎಂಬ ಸ್ಥಳಕ್ಕೆ ಬಂದು ನೆಲೆಸಿದರು. 15 ವರ್ಷ, 2 ತಿಂಗಳು, 20 ದಿನ ಮಾಧ್ವ ಪೀಠಾಧಿ ಪತಿಯಾಗಿದ್ದ ಅಕ್ಷೋಭ್ಯರು 1365ನೇ ಇಸವಿ ಮಾರ್ಗಶಿರ ಕೃಷ್ಣ ಪಂಚಮಿಯಂದು ಕೃಷ್ಣಪಾದ ಸೇರಿದರು. ಮೊದಲು ಮಳಖೇಡಾ ಕೋಟೆಯೊಳಗೆ ಅಕ್ಷೋಭ್ಯರ ವೃಂದಾವನ ನಿರ್ಮಿಸಲಾಗಿತ್ತು. ನಂತರ ಅದನ್ನು ಕಾಗಿನೀ ತೀರದಲ್ಲಿ ಜಯತೀರ್ಥರ ವೃಂದಾವನದ ಪಕ್ಕ ಸ್ಥಳಾಂತರಿಸಲಾಯಿತು.

ಮಳೆಖೇಡವು ಗುಲ್ಬರ್ಗಾ-ಸೇಡಂ ಮಧ್ಯೆ ಕಾಗಿನಿ ನದಿ ತೀರದಲ್ಲಿದೆ. ಇದು ಗುಲ್ಬರ್ಗಾದಿಂದ 40 ಕಿಮೀ ಮತ್ತು ಸೇಡಂನಿಂದ 12 ಕಿಮೀ ದೂರದಲ್ಲಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi