ಶ್ರೀ ಚೈತನ್ಯ ಮಹಾಪ್ರಭು

ಶ್ರೀ ಚೈತನ್ಯ ಮಹಾಪ್ರಭುಗಳು 1486ರಲ್ಲಿ ಪಶ್ಚಿಮ ಬಂಗಾಳದ ನವದ್ವೀಪದ ಜಗನ್ನಾಥಮಿಶ್ರ ಮತ್ತು ಶಚಿದೇವಿಯವರ ಪುತ್ರನಾಗಿ ಅವಿರ್ಭಾವ ಹೊಂದಿದರು. ಅವರ ಜನನದ ದಿನದಂದು ವ್ಯಾಪಕವಾಗಿ ಹರಿಬೋಲ್ ಆರಾಧನೆ ಎಲ್ಲೆಡೆಯಿತ್ತು. ಏಕೆಂದರೆ ಅದು ಸಂಪೂರ್ಣ ಚಂದ್ರಗ್ರಹಣದ ದಿನವಾಗಿತ್ತು.

ಅವರಿಗೆ ವಿಶ್ವಂಭರ (ಇಡಿ ವಿಶ್ವದ ಬೆಂಬಲ) ಎಂದು ಹೆಸರಿಡಲಾಯಿತು ಮತ್ತು ಪ್ರೀತಿಯಿಂದ ನಿಮಾಯ್ ಎಂದು ಕರೆಯಲಾಯಿತು. ಏಕೆಂದರೆ ಅವರು ನಿಮ (ಬೇವು) ಮರದ ಕೆಳಗೆ ಜನ್ಮ ತಾಳಿದರು. ಅವರು ಅಸಾಮಾನ್ಯ ಗುಣಗಳನ್ನು ಹೊಂದಿದ್ದು ಇಡಿ ಲೋಕದ ಜನತೆಯನ್ನು ವಿಮುಕ್ತರಾಗಿಸುತ್ತಾರೆ ಎಂದು ಭವಿಷ್ಯ ನುಡಿಯಲಾಗಿತ್ತು.

ಶಚಿದೇವಿ ಮತ್ತು ಜಗನ್ನಾಥಮಿಶ್ರರವರ ಏಕೈಕ ಪುತ್ರನಾದ ಅವರು ಮಗುವಾಗಿದ್ದಾಗ ಪುಣ್ಯನಾಮವನ್ನು ಪಠಿಸಿದಾಗ ಮಾತ್ರ ಅಳುವುದನ್ನು ನಿಲ್ಲಿಸುತ್ತಿದ್ದರು. ಆದ್ದರಿಂದ ಆರಂಭದಿಂದ ಅವರು ಪ್ರಭುವಿನ ಹೆಸರನ್ನು ಪಠಿಸಲು ಜನರಿಗೆ ಪ್ರೇರೇಪಿಸುತ್ತಿದ್ದರು. ಶ್ರೀ ಚೈತನ್ಯರು ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಗ್ರಂಥಗಳ ಅಧ್ಯಯನ ಮಾಡಿದರು.

ಅವರು ಸಂಸ್ಕೃತ ಮತ್ತು ತರ್ಕದಲ್ಲಿ ಪಾಂಡಿತ್ಯ ಸಾಧಿಸಿದರು. ಎಳೆಯ ಹುಡುಗನಾಗಿ ಅವರು ಓರ್ವ ತರ್ಕಶಾಸ್ತ್ರಜ್ಞನಾಗಿ ಹಾಗೂ ವೇದಾಂತಿಯಾಗಿ ಅಭೇದ್ಯ ಖ್ಯಾತಿಯನ್ನು ಗಳಿಸಿದರು. ಅವರು ತಮ್ಮ ತಾಯಿಯೊಂದಿಗೆ ಅಸಾಮಾನ್ಯ ತತ್ತ್ವಶಾಸ್ತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅವರ ಬುದ್ಧಿಶಕ್ತಿಯು ಎಷ್ಟು ಅಪಾರವಾಗಿತ್ತೆಂದರೆ ಅವರು ಹಲವಾರು ತರ್ಕಶಾಸ್ತ್ರಜ್ಞರೊಂದಿಗೆ ಶ್ರೇಷ್ಠ ಆಸ್ತಿಕ ಸಂವಾದಗಳಲ್ಲಿ ತೊಡಗುತ್ತಿದ್ದರು.

ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಅವರು ಕಾಶ್ಮೀರದ ದಿಗ್ವಿಜಯ ಬ್ರಾಹ್ಮಣ ಕೇಶವ ಭಾರತಿಯನ್ನು ಸೋಲಿಸಿದರು. ಅವರ ಗಾಢವಾದ ತಿಳುವಳಿಕೆ, ಜ್ಞಾನ ಮತ್ತು ಕೌಶಲ್ಯಗಳಿಂದ ಅವರು ತುಂಬ ಹೆಸರುವಾಸಿಯಾದರು. ಅವರ ವಾದಗಳ ಶಕ್ತಿಯ ಮುಂದೆ ಎಲ್ಲ ವಿಭಾಗದ ತತ್ತ್ವಶಾಸ್ತ್ರಜ್ಞರು ಮತ್ತು ಧರ್ಮಜ್ಞಾನಿಗಳು ಅವರೊಂದಿಗೆ ವಾದಿಸಲು ಒಪ್ಪುತ್ತಿರಲಿಲ್ಲ.

ಅವರ ತಂದೆ ನಿಧನರಾದಾಗ ಶ್ರೀ ಚೈತನ್ಯರು ಗಯಾಗೆ ಹೋದರು ಮತ್ತು ಈಶ್ವರಪುರಿಯವರಿಂದ ದೀಕ್ಷೆಯನ್ನು ಸ್ವೀಕರಿಸಿದರು. ಅಲ್ಲಿಂದ ಅವರು ಸಂಪೂರ್ಣವಾಗಿ ಕೃಷ್ಣ ಭಕ್ತಿ ಸೇವೆಯಲ್ಲಿ ತಲ್ಲೀನರಾದರು. ನಿರಂತರವಾಗಿ ಪ್ರಭು ಕೃಷ್ಣನ ಪವಿತ್ರನಾಮವನ್ನು ಭಕ್ತಿ ಆನಂದದಲ್ಲಿ ಸ್ತುತಿಸುತ್ತಾ, ಹಾಡುತ್ತಾ ಚೈತನ್ಯರು ಭಕ್ತಿಸೇವೆಯಲ್ಲಿ ತಲ್ಲೀನರಾದರು.

ಅವರು ನವದ್ವೀಪಕ್ಕೆ ಮರಳಿದಾಗ, ಅವರು ತಮ್ಮ ಅನುಯಾಯಿಗಳೊಂದಿಗೆ ಪ್ರಭುವಿನ ನಾಮಸ್ತುತಿ (ಮಹಾಮಂತ್ರ) ಯನ್ನು ಮಾಡುತ್ತಿದ್ದರು. ಕೃಷ್ಣನ ನಾಮಸ್ತುತಿಯ ಪ್ರಾಮುಖ್ಯವು ಪ್ರಭುವನ್ನು ತಲಪುವ ಅತ್ಯುತ್ತಮ ಆಧ್ಯಾತ್ಮಿಕ ಮಾರ್ಗವೆಂದು ತೋರಿಸಿಕೊಟ್ಟರು. ಹೀಗೆ ಸಂಕೀರ್ತನ ಆಂದೋಳನವು ಆರಂಭವಾಯಿತು.

ತಮ್ಮ ಅನುಯಾಯಿಗಳೊಂದಿಗೆ ಸಂಕೀರ್ತನ ಆಂದೋಳನವನ್ನು ಆರಂಭಿಸಿ ತದನಂತರ ಇಡೀ ಪ್ರದೇಶದಲ್ಲಿ ಅದನ್ನು ಶ್ರೀ ಚೈತನ್ಯರು ಹರಡಿದರು. ಶ್ರೀ ಚೈತನ್ಯರು ಜಾತಿ ಅಥವಾ ಮತ, ಮಾಯಾವಾದಿ ಶ್ರೀಮಂತ ಅಥವಾ ಬಡವರೆಂದು ಯಾವ ತಾರತಮ್ಯವನ್ನು ಮಾಡಲಿಲ್ಲ. ಅವರು ಪ್ರಭುವಿನ ಪವಿತ್ರನಾಮವನ್ನು ಸ್ತುತಿಸುವ ಮೂಲಕವೇ ಪರಿಶುದ್ಧರಾಗಿ ಪ್ರಭುವಿನ ಭಕ್ತಿಯನ್ನು ಸಾಧಿಸಿ ಆಧ್ಯಾತ್ಮಿಕವಾಗಿ ಜ್ಞಾನ ಪಡೆಯುತ್ತಾರೆ ಎಂದು ತೋರಿಸಿದರು.

ಅವರು 24 ವರ್ಷದವರಾಗಿದ್ದಾಗ ಸಂನ್ಯಾಸವನ್ನು ಸ್ವೀಕರಿಸಿ ಕೇಶವ ಭಾರತಿಯವರಿಂದ ದೀಕ್ಷೆಯನ್ನು ಪಡೆದು ಕೃಷ್ಣ ಚೈತನ್ಯರೆಂಬ ಹೆಸರನ್ನು ಗಳಿಸಿದರು. ಅವರು ಇಡಿ ದಕ್ಷಿಣ ಭಾರತ, ವೃಂದಾವನ ಮತ್ತು ವಾರಣಾಸಿಗಳಲ್ಲಿ ನಾಲ್ಕು ವರ್ಷಗಳ ಕಾಲ ಪ್ರಯಾಣ ಮಾಡಿ ಕೊನೆಗೆ ಜಗನ್ನಾಥ ಪುರಿಯಲ್ಲಿ ನೆಲೆಸಿದರು.

ಅವರು ಜಗನ್ನಾಥ ದೇವಾಲಯದಲ್ಲಿ ಮೂರ್ತಿಗಳನ್ನು ಪೂಜಿಸುತ್ತಿದ್ದರು. ಆ ಸಮಯದಲ್ಲಿ ಅವರು ರಾಧಾರಾಣಿಯ ಪ್ರೇಮಭಾವದಲ್ಲಿ ಕೃಷ್ಣನ ಭಕ್ತಿಯಲ್ಲಿ ತಲ್ಲೀನರಾಗುತ್ತಿದ್ದು ಎಲ್ಲ ಬಾಹ್ಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದರು. ಅವರ ಉಪಸ್ಥಿತಿ ಅಥವಾ ಕೇವಲ ಸ್ಪರ್ಶದಿಂದಲೇ ಅವರ ಹತ್ತಿರ ಬರುತ್ತಿದ್ದ ಪ್ರತಿಯೊಬ್ಬರೂ ಅದೇ ಭಕ್ತಿಭಾವದಲ್ಲಿ ಮಗ್ನರಾಗುತ್ತಿದ್ದರು.

ಚೈತನ್ಯ ಮಹಾಪ್ರಭುಗಳು ಯಾರೇ ಆಗಲಿ ಒಬ್ಬ ಭಕ್ತನಾಗಬಹುದೆಂದು ತೋರಿಸಿಕೊಟ್ಟರು. ಅವರು ಪ್ರತಿದಿನ ಮೂರು ಲಕ್ಷ ಬಾರಿ ಪ್ರಭುವಿನ ಪುಣ್ಯನಾಮವನ್ನು ಸ್ತುತಿಸುತ್ತಿದ್ದ ಜನ್ಮತಃ ಮುಸ್ಲಿಮರಾಗಿದ್ದ ಹರಿದಾಸ ಠಾಕುರರನ್ನು ಶ್ಲಾಘಿಸಿದರು.

ಯಾವುದೇ ಜೀವಿ, ಜ್ಞಾನಿಯಾದ ಬ್ರಾಹ್ಮಣನಾಗಲೀ, ಪತಿತನಾದ ಶೂದ್ರನಾಗಲಿ, ಒಬ್ಬ ಅಪರಾಧಿ ಯಾಗಲಿ ಅಥವಾ ಪ್ರಾಣಿಗಳಾಗಲಿ ಪ್ರಭುವಿನ ಪುಣ್ಯನಾಮವನ್ನು ಸ್ತುತಿಸುತ್ತ ಅಥವಾ ಕೇಳುತ್ತಲೇ ಆಧ್ಯಾತ್ಮಿಕ ಔನ್ನತ್ಯವನ್ನು ಸಾಧಿಸಬಹುದೆಂದು ತೋರಿಸಿದರು. ಹೀಗಾಗಿ ಪರಮ ಪುರುಷನ ಕುರಿತಾದ ಪ್ರೇಮವು – ಆತ್ಮದ ಆಂತರಿಕ ಗುಣವಾಗಿದೆ. ಅದನ್ನು ಕೃಷ್ಣನ ಕೀರ್ತನೆ ಮತ್ತು ಆರಾಧನೆಯಿಂದ ಸುಪ್ತ ಹಂತದಿಂದ ಜಾಗೃತಗೊಳಿಸಬಹುದೆಂದು ಅವರು ತೋರಿಸಿದರು.

ನಾಮ ಸಂಕೀರ್ತನೆಯನ್ನು ಅಭ್ಯಾಸ ಮಾಡಿದ ವ್ಯಕ್ತಿ ಮೂರು ಹಂತಗಳನ್ನು ಹಾದು ಹೋಗುತ್ತಾನೆ: ಅಪರಾಧದ ಹಂತ, ಒಬ್ಬವ್ಯಕ್ತಿ ಎಲ್ಲ ರೀತಿಯ ಐಹಿಕ ಸಂತೋಷವನ್ನು ಆಕಾಂಕ್ಷಿಸಬಹುದು; ಶುದ್ಧೀಕರಣ ಹಂತ, ಐಹಿಕ ದೋಷಗಳು ಇಲ್ಲಿ ಶುದ್ಧೀಕರಣವಾಗುತ್ತವೆ; ಮತ್ತು ಪಾರಮಾರ್ಥಿಕ ಹಂತ, ದೇವೋತ್ತಮ ಪರಮ ಪುರುಷನಲ್ಲಿ ಪರಿಶುದ್ಧ ಪ್ರೇಮವನ್ನು ಸಾಧಿಸುತ್ತಾನೆ. ಚೈತನ್ಯ ಮಹಾಪ್ರಭುಗಳು ಅದು ಪರಿಪೂರ್ಣತೆಯ ಅತ್ಯುನ್ನತ ಹಂತವೆಂದು ತೋರಿಸಿದರು.

ಚೈತನ್ಯ ಮಹಾಪ್ರಭುಗಳ ಸಹ ಅನುಯಾಯಿಗಳು, ವಿಶಿಷ್ಟವಾಗಿ ಆರು ಗೋಸ್ವಾಮಿಗಳು ವೇದ ಗ್ರಂಥಗಳ ಮೇಲೆ ಆಧಾರಿತವಾದ ಹಲವಾರು ಪುಸ್ತಕಗಳನ್ನು ಬರೆದರು. ಇವು ಕೃಷ್ಣನ ಭಕ್ತಿಸೇವೆ ವೇದಗಳ ಅಂತಿಮ ಗುರಿಯೆಂದು ಚೈತನ್ಯ ಮಹಾಪ್ರಭುಗಳು ನೀಡಿದ ವೈಯಕ್ತಿಕ ಆದೇಶಗಳನ್ನು ಆಧಾರಿತವಾದವು. ಕೃಷ್ಣದಾಸ ಕವಿರಾಜ ಗೋಸ್ವಾಮಿ ಮತ್ತು ಬೃಂದಾವನ ದಾಸ ಠಾಕುರರು ಶ್ರೀ ಚೈತನ್ಯ-ಚರಿತಾಮೃತ ಮತ್ತು ಶ್ರೀ ಚೈತನ್ಯ ಭಾವಗೀತೆಯೆಂಬ ಶ್ರೀಕೃಷ್ಣ ಚೈತನ್ಯರ ಅಧಿಕೃತ ಜೀವನ ಚರಿತ್ರೆಗಳನ್ನು ಬರೆದರು.

ತಮ್ಮ ಅನುಯಾಯಿಗಳಿಗೆ ಫಲಪ್ರದ ಬರಹಗಳಿಗೆ ಪ್ರೇರಣೆ ನೀಡಿದರು. ಚೈತನ್ಯ ಮಹಾಪ್ರಭುಗಳು ತಮ್ಮ ಬೋಧನೆಯ ಸಾರವನ್ನು ಶಿಕ್ಷಾಷ್ಟಕವೆಂಬ ಎಂಟು ಶ್ಲೋಕಗಳಲ್ಲೇ ಬಿಟ್ಟು ಹೋದರು. ಆಧ್ಯಾತ್ಮಿಕ ಜ್ಞಾನದ ರತ್ನವಾದ ಈ ಶ್ಲೋಕಗಳು ಒಬ್ಬ ಜ್ಞಾನಿಯಾದ ಗುರುಗಳ ಮಾರ್ಗದರ್ಶನದಲ್ಲಿ ಸರಿಯಾಗಿ ಅರ್ಥಮಾಡಿಕೊಂಡಲ್ಲಿ ಒಬ್ಬ ವ್ಯಕ್ತಿಯನ್ನು ಐಹಿಕವಾದದ ಲೌಕಿಕ ಹಂತದಿಂದ ಭಕ್ತಿಯ ಅತ್ಯಂತ ಉನ್ನತ ಸ್ಥಾನಕ್ಕೆ ಕರೆದೊಯ್ಯಬಹುದು.

ಇದರೊಂದಿಗೆ, ಚೈತನ್ಯ ಮಹಾಪ್ರಭುಗಳು ಕಲಿಯುಗದ ಜನರಿಗೆ ಅನುಸರಿಸಿ, ಪರಮ ಪ್ರಭುವಿನತ್ತ ಮರಳಲು ಪ್ರೇರೇಪಿಸುವಂತಹ ಒಂದು ಆದರ್ಶವನ್ನು ತಮ್ಮ ಅಸಾಮಾನ್ಯ, ಶ್ರೇಷ್ಠ ಜೀವನದಿಂದ ಅಭಿವ್ಯಕ್ತಗೊಳಿಸಿದ್ದಾರೆ.

ಅವರು 1534ರಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ಈ ಲೋಕವನ್ನು ತ್ಯಜಿಸಿದರು.

ಚೈತನ್ಯ ಮಹಾಪ್ರಭುಗಳನ್ನು ಭಕ್ತರು ದೇವೋತ್ತಮ ಪರಮ ಪುರುಷನಾದ ಸ್ವಯಂ ಶ್ರೀಕೃಷ್ಣನೇ ಎಂದು ಅರಿತಿದ್ದಾರೆ. ಅವರು ಕಲಿಯುಗ (ಇಂದಿನ ಯುಗ) ದಲ್ಲಿ 513 ವರ್ಷಗಳ ಹಿಂದೆ ಕ್ರಿ.ಶ. 1486ರಲ್ಲಿ ಅವರ ಮಹಾಭಕ್ತೆ ಶ್ರೀಮತಿ ರಾಧಾರಾಣಿಯ ಭಾವದಲ್ಲಿ ಆವಿರ್ಭಾವ ಹೊಂದಿದರು.

ಶ್ರೀಲ ಅದ್ವೈತ ಆಚಾರ್ಯ, ನಿತ್ಯಾನಂದ ಪ್ರಭು ಮತ್ತು ಬೃಂದಾವನದ ಆರು ಗೋಸ್ವಾಮಿಗಳಂತಹ ಸಾಧುಗಳಿಂದ ಶ್ರೀಮದ್ ಭಾಗವತ (11.5-32) ದಂತಹ ಪವಿತ್ರ ಗ್ರಂಥಗಳಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ದೈವತ್ವವನ್ನು ಸ್ಥಾಪಿಸಿದರು.

ಚೈತನ್ಯ ಮಹಾಪ್ರಭುಗಳು ಪ್ರಭುವಿನ ಪುಣ್ಯನಾಮವು ಇಡಿ ಪ್ರಪಂಚದಲ್ಲಿ ಪ್ರತಿ ಹಳ್ಳಿ ಮತ್ತು ನಗರಗಳಲ್ಲಿ ಹರಡುವುದೆಂದು ಭವಿಷ್ಯ ನುಡಿದಿದ್ದರು. ಅವರು ಮಹಾಮಂತ್ರ ನಾಮ ಸಂಕೀರ್ತನೆಯನ್ನು ಪ್ರಚಾರ ಮಾಡಿದರು.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ, ಹರೇ ಹರೇ

ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi