ಶ್ರೀ ಚೈತನ್ಯ ಮಹಾಪ್ರಭು 

ಭಗವತ್‌ಪ್ರೇಮದ ಪ್ರವರ್ತಕರೂ ಭಗವಂತನ ನಾಮದ ಸಂಕೀರ್ತನೆಯ ಜನಕರೂ ಆದ ಶ್ರೀ ಚೈತನ್ಯ ಮಹಾಪ್ರಭುಗಳ ಯಶೋಗಾಥೆಯತ್ತ ಒಂದು ಪಕ್ಷಿನೋಟ…

ಶ್ರೀ ಚೈತನ್ಯ ಮಹಾಪ್ರಭು ಬಂಗಾಳದ ನವದ್ವೀಪದ ಒಂದು ಭಾಗವಾದ ಶ್ರೀಧಾಮ ಮಾಯಾಪುರದಲ್ಲಿ ಅವತರಿಸಿದರು. ಶ್ರೀ ಚೈತನ್ಯರ ತಂದೆ ಶ್ರೀ ಜಗನ್ನಾಥ ಮಿಶ್ರರು ವಿದ್ವದ್‌ ಬ್ರಾಹ್ಮಣರು. ಸಿಲ್ಹೆಟ್‌ ಜಿಲ್ಲೆಯವರಾದ ಜಗನ್ನಾಥ ಮಿಶ್ರರು ನವದ್ವೀಪದಲ್ಲಿ ನೆಲೆಸಿದ್ದರು.

ಅಲ್ಲಿನ ಮಹಾನ್‌ ವಿದ್ವಾಂಸ ಶ್ರೀ ನೀಲಾಂಬರ ಚಕ್ರವರ್ತಿ‌ ಅವರ ಪುತ್ರಿ ಶ್ರೀಮತಿ ಶಚಿದೇವಿಯು ಜಗನ್ನಾಥ ಮಿಶ್ರರ ಪತ್ನಿ. ಅರ್ಥಾತ್‌ ಮಹಾಪ್ರಭುಗಳ ತಾಯಿ. ಈ ದಂಪತಿಗೆ ಅನೇಕ ಪುತ್ರಿಯರ ಜನನವಾಯಿತು. ಆದರೆ ಅವರಲ್ಲಿ ಬಹಳ ಪುತ್ರಿಯರು ಚಿಕ್ಕ ವಯಸ್ಸಿನಲ್ಲಿಯೇ ಮರಣಹೊಂದಿದರು.

ವಿಶ್ವರೂಪ ಮತ್ತು ವಿಶ್ವಂಭರ ಈ ದಂಪತಿಯ ಪುತ್ರರು.  ಕೊನೆಯ ಮಗನಾದ ವಿಶ್ವಂಭರನು ಮುಂದೆ ನಿಮಾಯ್ ಪಂಡಿತನೆಂದು ಹೆಸರಾದನು. ಅನಂತರ ಸಂನ್ಯಾಸ ಸ್ವೀಕರಿಸಿದ ಮೇಲೆ ಶ್ರೀ ಚೈತನ್ಯ ಮಹಾಪ್ರಭುಗಳೆಂದು ಪ್ರಸಿದ್ಧರಾದರು. ಅವರು 48 ವರ್ಷಗಳ ತಮ್ಮ ಪಾರಮಾರ್ಥಿಕ ಲೀಲೆಗಳನ್ನು ತೋರಿ 1534 ರಲ್ಲಿ ಅಂತರ್ಧಾನರಾದರು.

ಶ್ರೀ ಚೈತನ್ಯರು ತಮ್ಮ ಜೀವಿತದ 24 ವರ್ಷಗಳವರೆಗೆ ನವದ್ವೀಪದಲ್ಲಿಯೇ ಇದ್ದರು. ಅವರು ಅಲ್ಲಿ ಮೊದಲು ವಿದ್ಯಾರ್ಥಿಯಾಗಿ, ಅನಂತರ ಗೃಹಸ್ಥರಾಗಿದ್ದರು. ಸಂನ್ಯಾಸ ಸ್ವೀಕರಿಸಿದ ಮೇಲೆ ಪುರಿಗೆ ತೆರಳಿದರು. ಚಿಕ್ಕ ವಯಸ್ಸಿನಲ್ಲಿಯೇ ಅವರ ವಿವಾಹವಾಯಿತು.  ಲಕ್ಷ್ಮಿಪ್ರಿಯೆ ಅವರ ಪತ್ನಿ.

ಮಹಾಪ್ರಭುಗಳು ಅನ್ಯ ಸ್ಥಳಗಳಿಗೆ ಭೇಟಿ ನೀಡಿದ್ದ ಸಮಯದಲ್ಲಿ ಲಕ್ಷ್ಮಿಪ್ರಿಯ ಈ ಲೋಕ ತ್ಯಜಿಸಿದರು. ಚೈತನ್ಯರ ತಾಯಿ ಶಚಿದೇವಿ ಅವರನ್ನು ಪುನಃ ವಿವಾಹವಾಗುವಂತೆ ಒತ್ತಾಯಿಸಿದರು. ಅವರು ಒಪ್ಪಿದರು. ಹೀಗೆ ವಿಷ್ಣುಪ್ರಿಯಾದೇವಿ ಅವರ ಎರಡನೆಯ ಪತ್ನಿಯಾದರು. ಮುಂದೆ ಚೈತನ್ಯರು ಸಂನ್ಯಾಸ ಸ್ವೀಕರಿಸಿದಾಗ ವಿಷ್ಣುಪ್ರಿಯಾದೇವಿ 16 ವರ್ಷದವರಾಗಿದ್ದರು. ಹೀಗಾಗಿ ಅವರು ಮಹಾಪ್ರಭುಗಳಿಂದ  ದೂರವಾಗಿ ಪ್ರತ್ಯೇಕವಾಗಿಯೇ ಉಳಿಯಬೇಕಾಯಿತು.

ಸಂನ್ಯಾಸ ಸ್ವೀಕರಿಸಿದ ಮೇಲೆ ಮಹಾಪ್ರಭುಗಳು ತಮ್ಮ ತಾಯಿ ಶಚಿದೇವಿಯವರ ಅಪೇಕ್ಷೆಯಂತೆ ಜಗನ್ನಾಥ ಪುರಿಯನ್ನು ತಮ್ಮ ಕಾರ್ಯಕೇಂದ್ರವನ್ನಾಗಿ ಮಾಡಿಕೊಂಡರು. ಅವರು ಮುಂದಿನ  24 ವರ್ಷಗಳ ಕಾಲ ಪುರಿಯಲ್ಲಿಯೇ ಇದ್ದರು.  ಸರಿ ಸುಮಾರು ಆರು ವರ್ಷಗಳ ಕಾಲ ಸಂಕೀರ್ತನೆಯನ್ನು ಬೋಧಿಸುತ್ತ ಭಾರತದಾದ್ಯಂತ ಸಂಚರಿಸಿದರು.

ಶ್ರೀ ಚೈತನ್ಯ ಮಹಾಪ್ರಭುಗಳು ಸ್ವತಃ ಶ್ರೀ ಕೃಷ್ಣನೇ. ಆದರೆ  ಭಗವಂತನ ಭಕ್ತರಾಗಿ ಅವತರಿಸಿದರು.  ಜನ ಸಾಮಾನ್ಯರಿಗೆ, ತತ್ತ್ವಶಾಸ್ತ್ರಜ್ಞರಿಗೆ ಶ್ರೀ ಕೃಷ್ಣನ ದಿವ್ಯ ಸ್ವರೂಪ ಮತ್ತು ಸಂದೇಶವನ್ನು ಬೋಧಿಸಲು ಅವರು ಭಗವಂತನ ಭಕ್ತರಾದರು.

ಚೈತನ್ಯರ ಭಕ್ತರಾದ ಶ್ರೀಲ ವೃಂದಾವನ ದಾಸ ಠಾಕೂರ, ಶ್ರೀ ಲೋಚನ ದಾಸ ಠಾಕುರ, ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿ, ಶ್ರೀ ಕವಿಕರ್ಣಾಪೂರ, ಶ್ರೀ ಪ್ರಬೋಧಾನಂದ ಸರಸ್ವತಿ, ಶ್ರೀ ರೂಪ ಗೋಸ್ವಾಮಿ, ಶ್ರೀ ಸನಾತನ ಗೋಸ್ವಾಮಿ, ಶ್ರೀ ರಘುನಾಥ ಭಟ್ಟ ಗೋಸ್ವಾಮಿ, ಶ್ರೀ ಜೀವ ಗೋಸ್ವಾಮಿ, ಶ್ರೀ ಗೋಪಾಲಭಟ್ಟ ಗೋಸ್ವಾಮಿ, ಶ್ರೀ ರಘುನಾಥ ದಾಸ ಗೋಸ್ವಾಮಿ, ಶ್ರೀ ಶಾಮಾನಂದ ಗೋಸ್ವಾಮಿ, ಶ್ರೀ ನರೋತ್ತಮ ದಾಸ ಠಾಕುರ , ಶ್ರೀ ವಿಶ್ವನಾಥ ಚಕ್ರವರ್ತಿ‌, ಶ್ರೀ ಬಲದೇವ ವಿದ್ಯಾಭೂಷಣ, ಶ್ರೀ ಭಕ್ತಿವಿನೋದ ಠಾಕುರ, ಶ್ರೀ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಇವರೇ ಮುಂತಾದ ವಿದ್ವಾಂಸರು ಮತ್ತು ಭಕ್ತರು ಮಹಾಪ್ರಭುಗಳ ಜೀವನ ಮತ್ತು ನೀತಿಬೋಧನೆಯನ್ನು ಕುರಿತು  ಅಪಾರ ಸಾಹಿತ್ಯವನ್ನು ರಚಿಸಿದ್ದಾರೆ.

ಅವು ಪಾರಮಾರ್ಥಿಕ ಜ್ಞಾನದಿಂದ ತುಂಬಿವೆ. ದುರ್ದೈವವೆಂದರೆ‌ ವಿಶ್ವದ ಜನರು ಈ ಬಗೆಗೆ ಅಜ್ಞಾನಿಗಳಾಗಿರುವುದು.  ಶ್ರೀ ವೃಂದಾವನ ದಾಸ ಠಾಕುರರ ಚೈತನ್ಯ ಭಾಗವತ ಮತ್ತು ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳ ಚೈತನ್ಯ ಚರಿತಾಮೃತವನ್ನು ಓದಿದರೆ ಆ ಅಜ್ಞಾನ ಮಾಯವಾದೀತು.

ಮಹಾಪ್ರಭುಗಳ ಸಮಕಾಲೀನರಾಗಿದ್ದ ಶ್ರೀ ಮುರಾರಿ ಗುಪ್ತರು ಮಹಾಪ್ರಭುಗಳ ಪೂರ್ವಜೀವನವನ್ನು ದಾಖಲಿಸಿದ್ದಾರೆ. ಪುರಿಯಲ್ಲಿ ಮಹಾಪ್ರಭುಗಳ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀ ಸ್ವರೂಪ ದಾಮೋದರ ಅವರು ಮಹಾಪ್ರಭುಗಳ ಜೀವನದ ಉತ್ತರಾರ್ಧವನ್ನು‌ ದಾಖಲಿಸಿದ್ದಾರೆ. ಮಹಾಪ್ರಭುಗಳನ್ನು ಕುರಿತು ಮುಂದೆ ಪ್ರಕಟವಾದ ಗ್ರಂಥಗಳಿಗೆ ಇವರಿಬ್ಬರ ಟಿಪ್ಪಣಿಗಳು ಆಧಾರಿತವಾಗಿವೆ.

ಜನನ ,ಮಹಾಮಂತ್ರ

ಶ್ರೀ ಚೈತನ್ಯ ಮಹಾಪ್ರಭು  ಫಾಲ್ಗುಣಿ ಪೂರ್ಣಿಮೆಯ (ಫೆಬ್ರವರಿ 1486) ಸಂಜೆ ಅವತರಿಸಿದರು. ಆ ದಿನ ಭಗವದಿಚ್ಛೆಯಂತೆ  ಚಂದ್ರ ಗ್ರಹಣವಿತ್ತು. ಗ್ರಹಣ ಕಾಲದಲ್ಲಿ ಗಂಗಾ ನದಿ ಅಥವಾ ಯಾವುದಾದರೂ ಪುಣ್ಯ ನದಿಯಲ್ಲಿ ಮಿಂದು ವೇದ ಪಠಣ ಮಾಡುವುದು ಪದ್ಧತಿ. 

ಚೈತನ್ಯ ಮಹಾಪ್ರಭುಗಳು ಜನಿಸಿದಾಗ ಇಡೀ ಭಾರತದಲ್ಲಿ ಹರೇ ಕೃಷ್ಣ ಮಹಾಮಂತ್ರದ ಸಂಕೀರ್ತನೆ ಮೊಳಗುತ್ತಿತ್ತು. ಭಗವಂತನ ಈ ಹದಿನಾರು ಹೆಸರುಗಳನ್ನು ಪುರಾಣ ಮತ್ತು ಉಪನಿಷತ್ತುಗಳಲ್ಲಿ ನಮೂದಿಸಲಾಗಿದೆ. ಅವನ್ನು ಈ ಯುಗದ ತಾರಕ ಬ್ರಹ್ಮನಾಮ ಎಂದು ವರ್ಣಿಸಲಾಗಿದೆ.

ಮಹಾಪ್ರಭುಗಳ ಅವತರಣದ ಹಿನ್ನೆಲೆಯಲ್ಲಿ ಸಂಕೀರ್ತನೆಯು‌ ಮಹತ್ವಪೂರ್ಣ.‌ ಅದು ಅವತಾರದಲ್ಲಿ ಅವರು ನಿರ್ವಹಿಸಲಿದ್ದ ಕಾರ್ಯ‌ದ ಸೂಚನೆಯಾಗಿತ್ತು. ಕಲಿಯುಗದಲ್ಲಿ ಭಗವಂತನ ನಾಮ ಸಂಕೀರ್ತನೆಯ ಮಹತ್ವವನ್ನು ಬೋಧಿಸುವುದೇ ಆ ಕಾರ್ಯವಾಗಿತ್ತು.

ಈ ಯುಗದಲ್ಲಿ ಕ್ಷುಲ್ಲಕ ವಿಷಯಗಳಿಗೂ ಕಲಹವಾಗುತ್ತದೆ. ಆದ್ದರಿಂದಲೇ ಶಾಸ್ತ್ರಗಳು ಸಾಕ್ಷಾತ್ಕಾರಕ್ಕಾಗಿ ಭಗವಂತನ ನಾಮ ಸಂಕೀರ್ತನೆ‌ಯನ್ನು ಈ ಯುಗಕ್ಕೆ ಒತ್ತಿ ಹೇಳಿವೆ. ಪ್ರತಿಯೊಬ್ಬರೂ ದಿವ್ಯನಾಮ ಸಂಕೀರ್ತನೆಯಲ್ಲಿ ಭಾಗವಹಿಸಬಹುದು ಅಥವಾ ಕೇಳಬಹುದು.

ದಿವ್ಯನಾಮ ಸಂಕೀರ್ತನವು ಶ್ರೀ ಚೈತನ್ಯ ಮಹಾಪ್ರಭುಗಳ ಅವತಾರದೊಂದಿಗೇ ಆರಂಭವಾಯಿತೆಂದು ಹೇಳಬಹುದು. ಅದಕ್ಕೊಂದು ನಿದರ್ಶನ‌ – ವಿಶ್ವಂಭರ ಅಳುತ್ತಿದ್ದಾಗ ಸುತ್ತ ಇದ್ದ ಮಹಿಳೆಯರು ದಿವ್ಯ ನಾಮ ಸಂಕೀರ್ತನೆ ಮಾಡುತ್ತಾ ಚಪ್ಪಾಳೆ ತಟ್ಟುತ್ತಿದ್ದರೆ ಮಗು ಅಳುವನ್ನು ನಿಲ್ಲಿಸುತ್ತಿತಂತೆ! ಆ ಮಹಿಳೆಯರಿಗೆ ಆಶ್ಚರ್ಯ.‌

ಕೆಲವು ಬಾಲಿಕೆಯರು ಮಗುವನ್ನು ಅಳಿಸಿ ಅನಂತರ ಸಂಕೀರ್ತನೆ ಮಾಡಿ ಅಳುವನ್ನು ನಿಲ್ಲಿಸುತ್ತಿದ್ದರಂತೆ. ಇದು ಮಕ್ಕಳಿಗೆ ಆಟವಾಗಿತ್ತು. ಹೀಗೆ ಮಗುವಾಗಿದ್ದಾಗಲೇ ಅವರು ಸಂಕೀರ್ತನೆಯ ಮಹತ್ವವನ್ನು ಅರುಹಿದ್ದರು.

ಮಗು ಆರು ತಿಂಗಳಾಗಿದ್ದಾಗ ಅನ್ನ ಪ್ರಾಶನ ಸಮಾರಂಭ ನೆರವೇರಿಸಲಾಯಿತು. ಇಂತಹ ಸಂದರ್ಭದಲ್ಲಿ‌ ಮಗುವಿನ ಆಸಕ್ತಿ ಅರಿಯುವ ಪ್ರಯತ್ನ ಮಾಡಲಾಗುತ್ತದೆ. ಮಗುವಿನ ಒಂದು ಬದಿಗೆ ನಾಣ್ಯಗಳನ್ನು ಮತ್ತೊಂದು ಬದಿಗೆ ಭಾಗವತವನ್ನೂ ಇಡಲಾಯಿತು. ಮಗು ಭಾಗವತವನ್ನು ಎತ್ತಿಕೊಂಡಿತು!

ಆಗ ಮಹಾಪ್ರಭುಗಳು ನಡೆದಾಡುವ ಬಾಲಕ. ತಾಯಿ ಅಕ್ಕರೆಯಿಂದ ಆಭರಣಗಳನ್ನು ತೊಡಿಸಿದ್ದರು. ಒಮ್ಮೆ ಕಳ್ಳರು ಅದನ್ನು ನೋಡಿ ಮಗುವನ್ನು ಅಪಹರಿಸಿದರು. ಮನೆಮಂದಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಆದರೆ ಮಹಾಪ್ರಭು ಮಾತ್ರ ಕಳ್ಳನ ಹೆಗಲ  ಮೇಲೆ ಕುಳಿತು ಸುಖ ಪ್ರವಾಸವನ್ನು ಅನುಭವಿಸುತ್ತಿದ್ದರು! ಒಂದಷ್ಟು ಸಂಚರಿಸಿದ ಮೇಲೆ ಕಳ್ಳರು ಪುನಃ ಮಹಾಪ್ರಭುಗಳ ಮನೆಯ ಬಳಿಗೇ ಬಂದರು!

ದಿವ್ಯ ದರ್ಶನ‌

ಒಮ್ಮೆ ಬ್ರಾಹ್ಮಣ ಯಾತ್ರಿಕರೊಬ್ಬರು ಜಗನ್ನಾಥ ಮಿಶ್ರರ ಮನೆಗೆ ಬಂದರು. ಅವರು ದೇವರಿಗೆ ನೈವೇದ್ಯ ಮಾಡಲು ಅಡುಗೆ ತಯಾರಿಸಿ ದೇವರ ಮುಂದೆ ಇಟ್ಟಿದ್ದರು. ಮಗು ಅದನ್ನು ತೆಗೆದುಕೊಂಡು ಸೇವಿಸಿಬಿಟ್ಟಿತು! ಮೂರು ಬಾರಿ ಹೀಗೆ ಆಯಿತು. ಅನಂತರ ಮಹಾಪ್ರಭು ಮಧ್ಯರಾತ್ರಿಯಲ್ಲಿ ಆ ಬ್ರಾಹ್ಮಣನ ಕೊಠಡಿಗೆ ಬಂದು ತಮ್ಮ ದಿವ್ಯ ಸ್ವರೂಪದ ದರ್ಶನವನ್ನು ನೀಡಿದರು. ಯಾರಿಗೂ ತಿಳಿಸಬಾರದೆಂದು ಹೇಳಿದರು. ಆ ಬ್ರಾಹ್ಮಣ ಆನಂದತುಂದಿಲರಾದರು.

ಮಹಾಪ್ರಭು ಕೇವಲ 16 ವರ್ಷದವರಾಗಿದ್ದಾಗ ತಮ್ಮದೇ ಆದ ಶಾಲೆಯನ್ನು ಆರಂಭಿಸಿದರು. ಅಲ್ಲಿ ವ್ಯಾಕರಣ ಬೋಧಿಸುವಾಗಲೂ ಕೃಷ್ಣನ ಬಗೆಗೆ ವಿವರಿಸುತ್ತಿದ್ದರು.  ಇದೇ ಅವಧಿಯಲ್ಲಿ ಕೇಶವ ಕಾಶ್ಮೀರಿ ಎನ್ನುವ ಕಾಶ್ಮೀರದ ಪಂಡಿತರೊಬ್ಬರು ಶಾಸ್ತ್ರ ಚರ್ಚೆಗೆಂದು‌ ನವದ್ವೀಪಕ್ಕೆ ಬಂದರು.

ಅವರು ಅಗ್ರಶ್ರೇಣಿಯ ವಿದ್ವಾಂಸರಾಗಿದ್ದರು. ಅವರೊಂದಿಗೆ ಸಂವಾದ ನಡೆಸಲು ನಿಮಾಯ್‌ ಪಂಡಿತನನ್ನು ನಿಯೋಜಿಸಲು ನವದ್ವೀಪದ ವಿದ್ವಾಂಸರು ನಿರ್ಧರಿಸಿದರು. ಆದರೆ ಅದು ಹೇಗಾಯಿತೆಂದರೆ ಕಾಶ್ಮೀರಿ ಪಂಡಿತರು ಗಂಗಾ ನದಿಯ ತೀರದಲ್ಲಿ ತಿರುಗಾಡುತ್ತಿದ್ದಾಗ ನಿಮಾಯ್‌ ಪಂಡಿತ ಅಲ್ಲಿಯೇ ಅವರನ್ನು ಸಂಧಿಸಿದರು.

ಗಂಗೆಯನ್ನು ಕೊಂಡಾಡುವಂತೆ ಸಂಸ್ಕೃತದಲ್ಲಿ ಶ್ಲೋಕವನ್ನು ರಚಿಸುವಂತೆ ನಿಮಾಯ್‌ ಅವರನ್ನು ಕೋರಿದಾಗ ಅವರು ಅಲ್ಪವೇಳೆಯಲ್ಲಿಯೇ ಒಂದು ನೂರು ಶ್ಲೋಕಗಳನ್ನು ರಚಿಸಿದರು. ನಿಮಾಯ್‌ ಆ ಎಲ್ಲ ಶ್ಲೋಕಗಳನ್ನೂ ನೆನಪಿನಲ್ಲಿಟ್ಟುಕೊಂಡರು.  64ನೆಯ ಶ್ಲೋಕವನ್ನು ಉಲ್ಲೇಖಿಸಿ ಅದರಲ್ಲಿನ ಕೆಲವು ದೋಷಗಳನ್ನು  ತೋರಿಸಿದರು.

ಕಾಶ್ಮೀರಿ ಪಂಡಿತರು ಆಶ್ಚರ್ಯ‌ಚಕಿತರಾದರು. ಕೇವಲ ವ್ಯಾಕರಣ ವಿದ್ಯಾರ್ಥಿಯೊಬ್ಬನು ತನ್ನಂತಹ ವಿದ್ವಾಂಸನ ದೋಷಗಳನ್ನು ತೋರಿಸಿಕೊಟ್ಟಿದ್ದನ್ನು ಕಂಡು ಅವರು ಅವಾಕ್ಕಾದರು. ಈ ಮಧ್ಯೆ ವಿದ್ಯಾದೇವತೆಯು ಕಾಶ್ಮೀರಿ ಪಂಡಿತನ ಕನಸಿನಲ್ಲಿ ಕಾಣಿಸಿಕೊಂಡು ನಿಮಾಯ್‌ ಪಂಡಿತನಿಗೆ ಶರಣಾಗುವಂತೆ ಸೂಚಿಸಿದಳು. ಅದರಂತೆ ಅವರು ನಿಮಾಯ್‌ ಗೆ ಶರಣಾಗಿ ಶಿಷ್ಯರಾದರು.

ನಾಮ ಸಂಕೀರ್ತನೆ ಮತ್ತು ಕಾಜಿ

ಮಹಾಪ್ರಭು ಭಗವಂತನ ದಿವ್ಯನಾಮ ಸಂಕೀರ್ತನೆಯನ್ನು ನವದ್ವೀಪದಲ್ಲಿ ಉಪದೇಶಿಸಲು ಆರಂಭಿಸಿದರು. ಆದರೆ ಕೆಲವು ಬ್ರಾಹ್ಮಣರು ಅದನ್ನು ಸಹಿಸಲಿಲ್ಲ ಮತ್ತು ಅಸೂಯೆಯಿಂದ ಅವರ ಸಂಕೀರ್ತನೆ ಕಾರ್ಯಗಳಿಗೆ ಅಡ್ಡಿಮಾಡುತ್ತಿದ್ದರು. ಅವರು ಈ ವಿಷಯವನ್ನು ನವದ್ವೀಪದ ಮುಸಲ್ಮಾನ ಅಧಿಕಾರಿಯ ಬಳಿಗೆ ಕೊಂಡೊಯ್ದರು.

ಬ್ರಾಹ್ಮಣರ ದೂರನ್ನು ಗಂಭೀರವಾಗಿ ಪರಗಣಿಸಿದ ಅವನು ಹರಿನಾಮ ಸಂಕೀರ್ತನೆಯನ್ನು ಗಟ್ಟಿಯಾಗಿ ಹೇಳದಂತೆ ಮಹಾಪ್ರಭುಗಳ ಶಿಷ್ಯರಿಗೆ ತಾಕೀತು ಮಾಡಿದನು. ಆದರೆ ಕಾಜಿಯ ಆಜ್ಞೆಯನ್ನು ಉಲ್ಲಂಘಿಸುವಂತೆ ಮಹಾಪ್ರಭುಗಳು ತಮ್ಮ ಶಿಷ್ಯರಿಗೆ ಹೇಳಿದರು. ಅದರಂತೆ ಸಂಕೀರ್ತನೆ ಮುಂದುವರಿಯಿತು. ಆಗ ಕಾಜಿಯ ಪೇದೆಗಳು ಬಂದು ಅಡ್ಡಿ ಮಾಡಿದರಲ್ಲದೆ ಮೃದಂಗಗಳನ್ನು ಮುರಿದರು.

ಆಗ ಮಹಾಪ್ರಭು ನಾಗರಿಕ ಅಸಹಕಾರ ಚಳವಳಿಯನ್ನು  ಸಂಘಟಿಸಿದರು. ಭಾರತದಲ್ಲಿ ಅಸಹಕಾರ ಚಳವಳಿಯನ್ನು ಆರಂಭಿಸಿದವರು, ಮಹಾಪ್ರಭು.  ಅವರು ಸಾವಿರಾರು ಮೃದಂಗ ಮತ್ತು ಕರತಾಳಗಳೊಂದಿಗೆ ಒಂದು ಲಕ್ಷ ಜನರನ್ನು ಸೇರಿಸಿ ಮೆರವಣಿಗೆ ನಡೆಸಿದರು.

ನವದ್ವೀಪದ ಪ್ರಮುಖ ರಸ್ತೆಗಳಲ್ಲಿ ಹಾದುಹೋದ ಮೆರವಣಿಗೆಯು ಕೊನೆಗೆ ಕಾಜಿಯ ಮನೆಯನ್ನು ತಲಪಿತು. ಅಪಾರ ಜನರನ್ನು ಕಂಡು ಕಾಜಿ ಭಯದಿಂದ ಮನೆಯ ಒಳ ಸೇರಿದನು. ಮೆರವಣಿಗೆಯು ಶಾಂತವಾಗಿರುವಂತೆ ಮಹಾಪ್ರಭು ನೋಡಿಕೊಂಡರು.

ಸ್ವಲ್ಪ ಸಮಯದ ಅನಂತರ ಕಾಜಿ ಹೊರಗೆ ಬಂದು ಸ್ನೇಹದಿಂದ ಮಾತನಾಡಲು ಪ್ರಯತ್ನಿಸಿದನು.

ಹೀಗೆ ಪರಿಸ್ಥಿತಿ ಸರಿಯಾದ ಕೂಡಲೇ ಇಬ್ಬರೂ ಶಾಸ್ತ್ರಗಳ ಬಗೆಗೆ ಸಂವಾದ ನಡೆಸಿದರು. ಕಲಿಯುಗದಲ್ಲಿ ಸಕಲ ಕಾರ್ಯಸಾಧ್ಯಗಳ ಉದ್ದೇಶಕ್ಕಾಗಿ ಸಂಕೀರ್ತನ ಯಜ್ಞವನ್ನು ಎತ್ತಿ ಹಿಡಿಯಲಾಗಿದೆ ಎಂದು ಮಹಾಪ್ರಭುಗಳು ಕಾಜಿಗೆ ಮನವರಿಕೆ ಮಾಡಿಕೊಟ್ಟರು. ಅನಂತರ ಕಾಜಿಯು ಅವರ ಶಿಷ್ಯನಾದನು!

ಆಗ ಕಾಜಿಯು ಸಂಕೀರ್ತನ ಚಳವಳಿಗೆ ಯಾರೂ ಅಡ್ಡಿ ಉಂಟುಮಾಡಬಾರದೆಂದು ಆಜ್ಞೆ ಮಾಡಿದನು. ಕಾಜಿಯ ಗೋರಿಯು ಈಗಲೂ ನವದ್ವೀಪದಲ್ಲಿದೆ ಮತ್ತು ಹಿಂದೂ ಮತ್ತು ಮುಸ್ಲಿಂ ಯಾತ್ರಿಗಳು ಅಲ್ಲಿ ಗೌರವ ಸಲ್ಲಿಸುತ್ತಾರೆ.

ಈ ಘಟನೆಯ ಅನಂತರ ಮಹಾಪ್ರಭುಗಳು ತಮ್ಮ ಭಾಗವತ ಧರ್ಮ‌ ಅಥವಾ ಸಂಕೀರ್ತನೆ ಚಳವಳಿಯನ್ನು ಇನ್ನಷ್ಟು ಉತ್ಸಾಹದಿಂದ ಹರಡಲು ಪ್ರಾರಂಭಿಸಿದರು. ಶ್ರೀ ನಿತ್ಯಾನಂದ ಪ್ರಭು, ಹರಿದಾಸ ಠಾಕುರ ಸೇರಿದಂತೆ ತಮ್ಮ ಅನೇಕ ಶಿಷ್ಯರನ್ನು ಪ್ರಚಾರವನ್ನು ಮಾಡಲು ಕಳುಹಿಸುತ್ತಿದ್ದರು.

ಇಡೀ ನವದ್ವೀಪ ಸಂಕೀರ್ತನೆ ಆಂದೋಲನದಿಂದ ತುಂಬಿಹೋಯಿತು. ಶ್ರೀವಾಸ  ಠಾಕುರ ಕೇಂದ್ರ ಕಚೇರಿಯಾಗಿತ್ತು. ಇಲ್ಲಿ ನಿರಂತರ ಸಂಕೀರ್ತನೆ ನಡೆಯುತ್ತಿತ್ತು. ಇಂತಹ ಒಂದು ಸಂದರ್ಭದಲ್ಲಿಯೇ  ನಿತ್ಯಾನಂದ ಪ್ರಭು ಮತ್ತು ಹರಿದಾಸ ಠಾಕುರರು ಜಗಾಯಿ ಮತ್ತು ಮಧಾಯಿ ಎನ್ನುವ ಪಾಪಿ ಸೋದರರನ್ನು ಮನವೊಲಿಸಿ ಮುಕ್ತಗೊಳಿಸಿದರು. ಅವರಿಬ್ಬರೂ ಮಹಾಪ್ರಭುಗಳಿಗೆ ಶರಣಾಗಿ ಅವರ ಶಿಷ್ಯರಾದರು.

ಸಂನ್ಯಾಸ ಸ್ವೀಕಾರ

ಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸುವ ಆಲೋಚನೆಯಲ್ಲಿದ್ದಾಗ ಕಟ್ವಾ ನಿವಾಸಿ ಕೇಶವ ಭಾರತಿಯವರು ನವದ್ವೀಪಕ್ಕೆ ಭೇಟಿ ಕೊಟ್ಟರು. ತಮಗೆ ಸಂನ್ಯಾಸ ದೀಕ್ಷೆ ನೀಡುವಂತೆ ಮಹಾಪ್ರಭುಗಳು ಕೇಶವ ಭಾರತಿಯವರನ್ನು ಕೋರಿದರು. ಅದೊಂದು ಔಪಚಾರಿಕ ಕ್ರಮವಾಗಿತ್ತು.

ಏಕೆಂದರೆ ಸಂನ್ಯಾಸವನ್ನು ಮತ್ತೊಬ್ಬ ಸಂನ್ಯಾಸಿಗಳಿಂದಲೇ ಸ್ವೀಕರಿಸಬೇಕಾಗಿತ್ತು. ಮಹಾಪ್ರಭುಗಳು ಸ್ವತಂತ್ರರಾಗಿದ್ದರು. ಆದರೂ ಶಾಸ್ತ್ರಗಳ ಗೌರವವನ್ನು ಕಾಪಾಡಲು ಕೇಶವ ಭಾರತಿಯವರಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸಲು ಮುಂದಾದರು.

ಕೇಶವ ಭಾರತಿಯವರೊಂದಿಗೆ ಸಮಾಲೋಚಿಸಿ  ಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸಲು ಕಟ್ವಾಕ್ಕೆ ಹೋದರು. ನಿತ್ಯಾನಂದ ಪ್ರಭು, ಚಂದ್ರಶೇಖರ ಆಚಾರ್ಯ‌ ಮತ್ತು ಮುಕುಂದ ದತ್ತರೂ ಅವರೊಡನೆ ಕಟ್ವಾಕ್ಕೆ ಹೋಗಿ ನೆರವಾದರು. ಹೀಗೆ ತಮ್ಮ 24ನೆಯ ವರ್ಷದ ಕೊನೆಯಲ್ಲಿ ಅವರು ಸಂನ್ಯಾಸ ಸ್ವೀಕರಿಸಿದರು.

ಅನಂತರ ಅವರು ಭಾಗವತ ಧರ್ಮದ ಪೂರ್ಣ‌ ಪ್ರಮಾಣದ ಬೋಧಕರಾದರು. ಗೃಹಸ್ತಾಶ್ರಮದಲ್ಲಿದ್ದಾಗಲೂ ಬೋಧನೆ ನಡೆದಿತ್ತು. ಆದರೆ ಕೆಲವು ಅಡ್ಡಿ ಉಂಟಾಗುತ್ತಿತ್ತು. ಗೃಹಸ್ತಾಶ್ರಮ ಕಾಲದಲ್ಲಿ ಅದ್ವೈತ ಆಚಾರ್ಯ‌ ಮತ್ತು ಶ್ರೀವಾಸ ಠಾಕುರರು  ಸಹಾಯಕರಾಗಿದ್ದರು. ಸಂನ್ಯಾಸಾಶ್ರಮ ಸ್ವೀಕರಿಸಿದ ಮೇಲೆ ಶ್ರೀ ನಿತ್ಯಾನಂದ ಪ್ರಭುಗಳು ಮುಖ್ಯ ಸಹಾಯಕರಾದರು.

ಸಂನ್ಯಾಸಾಶ್ರಮ ಸ್ವೀಕರಿಸಿದ ಕೂಡಲೇ ಮಹಾಪ್ರಭು ವೃಂದಾವನಕ್ಕೆ ಹೋಗಲು ಬಯಸಿದ್ದರು. ಆದರೆ ನಿತ್ಯಾನಂದ ಪ್ರಭು ಅವರ ಮಾರ್ಗ‌ ಬದಲಿಸಿ ಅದ್ವೈತ ಆಚಾರ್ಯರ ಮನೆಗೆ ಕರೆತಂದರು. ಅಲ್ಲಿಗೇ ತಾಯಿ ಶಚಿದೇವಿಯನ್ನು ಬರಮಾಡಿಕೊಳ್ಳಲಾಯಿತು. ತಾಯಿಯ ಅಪೇಕ್ಷೆಯಂತೆ ಮಹಾಪ್ರಭುಗಳು ಪುರಿಯನ್ನು ತಮ್ಮ ಕಾರ್ಯಕೇಂದ್ರವನ್ನಾಗಿ ಮಾಡಿಕೊಂಡರು.

ಮಂದಿರದಲ್ಲಿ ಆನಂದಪರವಶತೆ

ಪುರಿಯಲ್ಲಿ ಜಗನ್ನಾಥ ಮಂದಿರವನ್ನು ಪ್ರವೇಶಿಸುತ್ತಿದಂತೆಯೇ ದಿವ್ಯಾನಂದದಿಂದ ದೇವಸ್ಥಾನದ ನೆಲದ ಮೇಲೆ ಪ್ರಜ್ಞಾಶೂನ್ಯರಾಗಿ ಬಿದ್ದುಬಿಟ್ಟರು. ಆಗ ಅಲ್ಲಿದ್ದ ವಿದ್ವಾಂಸ ಸಾರ್ವಭೌಮ ಭಟ್ಟಾಚಾರ್ಯರು ಮಹಾಪ್ರಭುಗಳ ಕಾಂತಿಯಿಂದ ಆಕರ್ಷಿತರಾದರು. ಮಹಾಪ್ರಭುಗಳು ಸಾಮಾನ್ಯರಲ್ಲ ಎಂದು ಅವರಿಗೆ ಅನ್ನಿಸಿತು.

ಸಾರ್ವಭೌಮ ಭಟ್ಟಾಚಾರ್ಯರು ಒರಿಸ್ಸಾದ ರಾಜ ಪ್ರತಾಪರುದ್ರನ ಆಸ್ಥಾನ ವಿದ್ವಾಂಸರಾಗಿದ್ದರು. ಮಹಾಪ್ರಭುಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು.

ಆದರೆ ದಿವ್ಯ ನಾಮ ಸಂಕೀರ್ತನೆಗೆ ಮಾತ್ರ ಅವರು ಸ್ಪಂದಿಸುತ್ತಿದ್ದರು. ಭಟ್ಟಾಚಾರ್ಯರಿಗೆ ಅದು ಗೊತ್ತಿರಲಿಲ್ಲ. ಇತ್ತ ಮಹಾಪ್ರಭುಗಳ ಅನುಚರರು ಮಂದಿರಕ್ಕೆ ಬಂದರು. ಗದಾಧರ ಪಂಡಿತರ ಪರಿಚಯಸ್ತರಾದ ಮತ್ತು ಸಾರ್ವಭೌಮ ಭಟ್ಟಾಚಾರ್ಯರ ಬಂಧು ಗೋಪಿನಾಥ ಆಚಾರ್ಯರ ಮೂಲಕ ಎಲ್ಲರೂ ಸಾರ್ವಭೌಮ ಭಟ್ಟಾಚಾರ್ಯರರ ಮನೆಗೆ ತೆರಳಿದರು. ಅಲ್ಲಿ ಸಂಕೀರ್ತನೆ ಶುರು ಮಾಡಿದ ಕೂಡಲೇ  ಮಹಾಪ್ರಭುಗಳು ಎಚ್ಚರಗೊಂಡರು.

ಅನಂತರದ ದಿನಗಳಲ್ಲಿ ಸಾರ್ವಭೌಮ ಭಟ್ಟಾಚಾರ್ಯರು ವೇದಾಂತ ಸೂತ್ರವನ್ನು ಮಹಾಪ್ರಭುಗಳಿಗೆ ಉಪದೇಶಿಸಲು ಹೊರಟರು. ಭಟ್ಟಾಚಾರ್ಯರು ತರ್ಕ‌ ಮತ್ತು ವ್ಯಾಕರಣ ಮೋಡಿಯಿಂದ ತಮ್ಮನ್ನು ಮತ್ತು ಮಾಯಾವಾದವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಮಹಾಪ್ರಭುಗಳು ಪ್ರಬಲವಾದ ವಾದದಿಂದ ಅವರನ್ನು ಸೋಲಿಸಿದರು.

ಮಹಾಪ್ರಭುಗಳು ಆತ್ಮಾರಾಮ ಶ್ಲೋಕವನ್ನು ಕುರಿತು ನೀಡಿದ ವಿವರಣೆಯನ್ನು ಕೇಳಿ ಭಟ್ಟಾಚಾರ್ಯರು ಚಕಿತರಾದರು. ಇಂತಹ ವಿದ್ವತ್‌ಪೂರ್ಣ‌ ವಿವರಣೆ ಸಾಮಾನ್ಯರಿಂದ ಸಾಧ್ಯವಿಲ್ಲ ಎನ್ನುವುದು ಅವರಿಗೆ ಮನವರಿಕೆಯಾಯಿತು. ಚೈತನ್ಯರನ್ನು ಶ್ರೀ ಕೃಷ್ಣ ಎಂದು ಅರಿಯದೆ ತಪ್ಪು ಮಾಡಿದೆನೆಂದು ಪಶ್ಚಾತ್ತಾಪಪಟ್ಟರು.

ಅನಂತರ ಅವರಿಗೆ ಶರಣಾದರು. ಮಹಾಪ್ರಭು ಅವರಿಗೆ ಕೃಷ್ಣನಾಗಿ ದರ್ಶನ ನೀಡಿದರು. ಕೂಡಲೇ ಸಾರ್ವಭೌಮರು ಮಹಾಪ್ರಭುಗಳ ಪಾದಗಳಿಗೆರಗಿದರು. ಅವರನ್ನು ಕೊಂಡಾಡುವ  ಶ್ಲೋಕಗಳನ್ನು ರಚಿಸಿದರು.

ದಕ್ಷಿಣಭಾರತ ಯಾತ್ರೆ

ಮಹಾಪ್ರಭು ದಕ್ಷಿಣ ಭಾರತ ಯಾತ್ರೆ ಕೈಗೊಂಡರು. ಗೋದಾವರಿ ನದಿ ತೀರದಲ್ಲಿ ರಾಮಾನಂದ ರಾಯರನ್ನು ಭೇಟಿ ಮಾಡಿದರು. ಅವರು ದೊರೆ ಪ್ರತಾಪರುದ್ರನ ಕೆಳಗೆ ರಾಜ್ಯಪಾಲರಾಗಿದ್ದರು. ರಾಮಾನಂದ ರಾಯರೊಡನೆ ಮಹಾಪ್ರಭುಗಳು ನಡೆಸಿದ ಮಾತುಕತೆಗಳು ಪಾರಮಾರ್ಥಿಕ ಜ್ಞಾನದ ಉನ್ನತ ಸಾಕ್ಷಾತ್ಕಾರದ ನಿಟ್ಟಿನಲ್ಲಿ ಮಹತ್ವಪೂರ್ಣವಾದವು.

ರಾಮಾನಂದ ರಾಯರು ಸಾಮಾಜಿಕ ಸ್ಥಾನಮಾನದಲ್ಲಿ ಬ್ರಾಹ್ಮಣನಿಗಿಂತ ಕೆಳಜಾತಿಯವರಾಗಿದ್ದರೂ ಆತ್ಮಸಾಕ್ಷಾತ್ಕಾರ ಪಡೆದವರಾಗಿದ್ದರು. ಅವರು ಸರ್ಕಾರದ ನೌಕರರಾಗಿದ್ದರು. ಆದರೂ ಚೈತನ್ಯ ಮಹಾಪ್ರಭುಗಳು ಪಾರಮಾರ್ಥಿಕ ಜ್ಞಾನ ಸಾಕ್ಷಾತ್ಕಾರದ ಬಲದಿಂದ ಅವರನ್ನು ಮುಕ್ತಾತ್ಮರೆಂದು ಸ್ವೀಕರಿಸಿದರು.

ಅದೇ ರೀತಿ ಮಹಾಪ್ರಭುಗಳು ಮಹಮ್ಮದೀಯ ಕುಟುಂಬದಿಂದ ಬಂದ  ಭಗವದ್ಭಕ್ತ ಹರಿದಾಸ ಠಾಕುರರನ್ನೂ ಸ್ವೀಕರಿಸಿದರು. ವಿವಿಧ ಜಾತಿ ಮತಗಳಿಂದ, ಪಂಥಗಳಿಂದ ಅನೇಕರು ಮಹಾಪ್ರಭುಗಳ ಭಕ್ತರಾದರು. ವ್ಯಕ್ತಿಯ ಭಕ್ತಿಸೇವಾ ಮಟ್ಟವೊಂದೇ ಮಹಾಪ್ರಭುಗಳಿಗೆ ಮಾನದಂಡವಾಗಿತ್ತು.

ಮಹಾಪ್ರಭುಗಳ ಸಲಹೆಯಂತೆ ರಾಮಾನಂದ ರಾಯರು ಸೇವೆಯಿಂದ ನಿವೃತ್ತಿ ಪಡೆದು  ಪುರಿಯಲ್ಲಿ ವಾಸಿಸತೊಡಗಿದರು.  ಅಲ್ಲಿ ಅವರು ಮಹಾಪ್ರಭುಗಳ ಆಪ್ತಭಕ್ತರಲ್ಲಿ ಒಬ್ಬರಾದರು. ಮಹಾಪ್ರಭುಗಳು ಪುರಿಯಲ್ಲಿ ಮೂವರು ಅಥವಾ ನಾಲ್ವರು ಸಹಚರರೊಡನೆ ಆಧ್ಯಾತ್ಮಿಕ ಮೌಲ್ಯಗಳ ಬಗೆಗೆ ಆಪ್ತ ಮಾತುಕತೆ ನಡೆಸುತ್ತಿದ್ದರು.

ಮಹಾಪ್ರಭುಗಳ ಆಪ್ತಭಕ್ತರಲ್ಲಿ ಒಬ್ಬರಾಗಿದ್ದ ದಾಮೋದರ ಗೋಸ್ವಾಮಿಯವರು ಪ್ರಭುಗಳ ಆಪ್ತ ಕಾಯದರ್ಶಿಯೂ ಆಗಿದ್ದರು. ಅವರು ಮಹಾಪ್ರಭುಗಳೊಂದಿಗಿನ ಮಾತುಕತೆಯನ್ನು ಬರೆದಿಟ್ಟುಕೊಳ್ಳುತ್ತಿದ್ದರು.

ರಾಜನಿಗೆ ದರ್ಶನ

ದೊರೆ ಪ್ರತಾಪರುದ್ರನಿಗೆ ಮಹಾಪ್ರಭುಗಳು ದರ್ಶನ‌ ನೀಡಿದ್ದು ಒಂದು ಪ್ರಮುಖ ಘಟನೆ.  ಅವನು ಮಹಾಪ್ರಭುಗಳ ಭಕ್ತರಲ್ಲಿ ಒಬ್ಬನಾಗಿದ್ದನು. ಮಹಾಪ್ರಭುಗಳ ದರ್ಶನ ಮಾಡಿಸಲು ಅವನು ಭಟ್ಟಾಚಾರ್ಯ ಮತ್ತು ರಾಮಾನಂದರಾಯರಲ್ಲಿ ಕೋರಿದನು. ಅದರಂತೆ ಅವರು ಮಹಾಪ್ರಭು ಬಳಿ ಪ್ರಸ್ತಾಪಿಸಿದಾಗ ಅವರು ತಿರಸ್ಕರಿಸಿದರು.

ಲೌಕಿಕವಾಗಿ ಹೆಣ್ಣು-ಹೊನ್ನುಗಳ ಪ್ರಜ್ಞೆಯುಳ್ಳಂತಹ ವ್ಯಕ್ತಿಯೊಂದಿಗೆ ಸಂನ್ಯಾಸಿಯು ಸಂಪರ್ಕ‌ ಇಟ್ಟುಕೊಳ್ಳುವುದು ಅಪಾಯಕಾರಿ ಎಂದು ಅವರು ನಿಲುವು ತಾಳಿದರು. ಸಂನ್ಯಾಸ ಮತ್ತು ಶಿಸ್ತಿನ ತತ್ತ್ವಗಳಲ್ಲಿ ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಆದುದರಿಂದ ದೊರೆ ಭಕ್ತನಾದರೂ ಲೌಕಿಕ ಆಸಕ್ತಿಯವನೆಂಬ ಕಾರಣದಿಂದ ದರ್ಶನ‌ ನೀಡಲು ನಿರಾಕರಿಸಿದರು. ಮುಂದೆ  ದೊರೆಯು ಮಹಾಪ್ರಭುಗಳ ಕೃಪೆಗೆ ಪಾತ್ರನಾದನು.

ಮಹಾಪ್ರಭುಗಳು ಪುರಿಯಲ್ಲಿದ್ದಷ್ಟು ಕಾಲವೂ ಶ್ರೀ ಜಗನ್ನಾಥ ರಥೋತ್ಸವ ಕಾಲದಲ್ಲಿ ಸಹಸ್ರಾರು ಭಕ್ತರು ಅವರ ದರ್ಶನಕ್ಕೆ ಬರುತ್ತಿದ್ದರು. ಮಹಾಪ್ರಭುಗಳ ಸಂಕೀರ್ತನ ಆಂದೋಲನವು ಜನಸಮೂಹವನ್ನು ಆಧ್ಯಾತ್ಮಿಕ ಸಾಕ್ಷಾತ್ಕಾರದತ್ತ ತಿರುಗಿಸಲು  ವಿಧಾನವಾಗಿತ್ತು.

ಅಷ್ಟೇ ಏಕೆ, ವನ್ಯ ಜೀವಿಗಳಿಗೂ ಅನ್ವಯವಾಗಿತ್ತು. ಮಹಾಪ್ರಭುಗಳು ವೃಂದಾವನಕ್ಕೆ ಹೋಗುವ ಮಾರ್ಗದಲ್ಲಿ ಅರಣ್ಯದಲ್ಲಿ  ಸಂಕೀರ್ತನೆ ಮಾಡುತ್ತಾ ಸಂಚರಿಸಿದಾಗ ವನ್ಯಜೀವಿಗಳೂ ಅವರೊಂದಿಗೆ ಸೇರಿಕೊಂಡವು. ಹುಲಿ, ಸಿಂಹ, ಜಿಂಕೆ ಎನ್ನದೆ ಎಲ್ಲ ಜೀವಿಗಳೂ ಸ್ನೇಹದಿಂದ ಸಂಕೀರ್ತನೆಯಲ್ಲಿ ಪಾಲ್ಗೊಂಡವು.

ವಾರಾಣಸಿಯಲ್ಲಿ

ಮಹಾಪ್ರಭುಗಳು ವಾರಾಣಸಿಯಲ್ಲಿ ತಂಗಿದ್ದಾಗ ಅಲ್ಲಿನ ಜನರು ಸಾಮೂಹಿಕ ಸಂಕೀರ್ತನೆಯಿಂದ ಆಕರ್ಷಿತರಾದರು. ಅವರನ್ನು ಎಲ್ಲ ಕಡೆ ಹಿಂಬಾಲಿಸುತ್ತಿದ್ದರು. ಆ ಕಾಲದಲ್ಲಿ ಮಾಯಾವಾದ ಪಂಥದ ಸಂನ್ಯಾಸಿ ಪ್ರಕಾಶಾನಂದ ಸರಸ್ವತಿಯವರು ವಾರಾಣಸಿಯಲ್ಲಿ ಮುಖ್ಯಸ್ಥರಾಗಿದ್ದರು.

ಮಾಯಾವಾದ ಮತ್ತು ವೈಷ್ಣವ ಪಂಥಗಳ ನಡುವೆ ಆಧ್ಯಾತ್ಮಿಕ ಪೈಪೋಟಿ ಇದ್ದೇ ಇದೆ. ಆದುದರಿಂದ ಪ್ರಕಾಶಾನಂದರು ಮಹಾಪ್ರಭುಗಳನ್ನು ಕುರಿತು ಸುದ್ದಿ ತಂದವರ ಮುಂದೆ ಮಹಾಪ್ರಭುಗಳನ್ನು ಕುರಿತು ಲಘುವಾಗಿ ಮಾತನಾಡಿದರು. ಮಹಾಪ್ರಭುಗಳ ಚಟುವಟಿಕೆಗೆ ಅಸಮ್ಮತಿ ಸೂಚಿಸಿದರು. ಅವರ ಟೀಕೆಯು ಮಹಾಪ್ರಭುಗಳ ಗಮನಕ್ಕೂ ಬಂದಿತು.

ಈ ಮಧ್ಯೆ ಭಕ್ತರೊಬ್ಬರು ಒಂದು ಬೃಹತ್‌ ಸಭೆಯನ್ನು ಏರ್ಪಡಿಸಿದ್ದರು.  ಈ ಸಭೆಗೆ ಮಹಾಪ್ರಭು, ಪ್ರಕಾಶಾನಂದ ಸರಸ್ವತಿ ಮತ್ತು ಇತರ ಎಲ್ಲ ಸಂನ್ಯಾಸಿಗಳನ್ನೂ ಆಹ್ವಾನಿಸಲಾಯಿತು. ಈ ಸಭೆಯಲ್ಲಿ ಉಭಯ ವಿದ್ವಾಂಸರ (ಮಹಾಪ್ರಭು ಮತ್ತು ಪ್ರಕಾಶಾನಂದ ಸರಸ್ವತಿ) ನಡುವೆ ಸಂಕೀರ್ತನ ಆಂದೋಲನದ ಆಧ್ಯಾತ್ಮಿಕ ಮೌಲ್ಯಗಳ ಬಗೆಗೆ ಸುದೀರ್ಘ‌ ಸಂವಾದ ನಡೆಯಿತು.

”ಭಗವಂತನ ಪವಿತ್ರ ನಾಮ, ಕೀರ್ತನೆ ಮಾಡುವುದು ಉಚಿತವೆಂದು ನನ್ನ ಗುರುಗಳು ಹೇಳಿದರು. ಈ ಕಲಿಯುಗದಲ್ಲಿ ಅದಕ್ಕಿಂತ ಮಿಗಿಲಾದುದಿಲ್ಲ. ಗುರುಗಳ ಆದೇಶದಂತೆ ಹರಿಯ ಪವಿತ್ರನಾಮ ಕೀರ್ತನೆ ಮಾಡುತ್ತೇನೆ. ಅದರಿಂದ ಹುಚ್ಚನಾಗಿದ್ದೇನೆ ಎಂದು ಯೋಚಿಸುವುದುಂಟು.

ಅದು ನಾಮ ಸಂಕೀರ್ತನೆಯ ನಿಜವಾದ ಪರಿಣಾಮ ಎಂದು ಗುರುಗಳು ಹೇಳಿದರು. ಅದು ಭಗವತ್‌ ಪ್ರೇಮದ ಸಂಕೇತ.” ಎಂದು ಮಹಾಪ್ರಭು ವಿವರಿಸಿದರು.  ಅದೇ ರೀತಿ ವೇದಾಂತ ಸೂತ್ರವನ್ನು ಕುರಿತಂತೆ ಮಹಾಪ್ರಭುಗಳು ಅರ್ಥವಿವರಣೆ ನೀಡಿದರು. ಅದರಿಂದ  ತೃಪ್ತರಾದ ಸಭೆಯಲ್ಲಿ ನೆರೆದಿದ್ದ ಸಂನ್ಯಾಸಿಗಳು ಭಕ್ತಿಪಂಥವನ್ನು ಸ್ವೀಕರಿಸಿದರು. ಅನಂತರ ವಾರಾಣಸಿಯಲ್ಲಿ ಮಹಾಪ್ರಭುಗಳ ಜನಪ್ರಿಯತೆ ಹೆಚ್ಚಿತು. ಅವರ ದರ್ಶನಕ್ಕಾಗಿ ಸಹಸ್ರಾರು ಜನರು ಸೇರುತ್ತಿದ್ದರು.

ಶಿಕ್ಷಾಷ್ಟಕ

ಮಹಾಪ್ರಭುಗಳು ತಮ್ಮ ಉಪದೇಶಗಳ 8 ಶ್ಲೋಕಗಳನ್ನು ಮಾತ್ರ ಲಿಖಿತ ರೂಪದಲ್ಲಿ ಬಿಟ್ಟಿದ್ದು ಅವು ಶಿಕ್ಷಾಷ್ಟಕ ಎಂದು ಪ್ರಸಿದ್ಧಿಯಾಗಿದೆ. ಮಹಾಪ್ರಭುಗಳ ದಿವ್ಯಪಂಥದ ಉಳಿದೆಲ್ಲ ಸಾಹಿತ್ಯವೂ  ಅವರ ಪ್ರಮುಖ ಅನುಯಾಯಿಗಳಾದ ವೃಂದಾವನದ ಆರು ಗೋಸ್ವಾಮಿಗಳಿಂದ ಮತ್ತು ಅವರ ಶಿಷ್ಯರುಗಳಿಂದ ವ್ಯಾಪಕವಾಗಿ ರಚಿತವಾಗಿದೆ.

ಚೈತನ್ಯ ಸಿದ್ಧಾಂತ ಹೀಗೆ ಎಲ್ಲೆಡೆ ಹರಡಿದೆ. ಮಹಾಪ್ರಭುಗಳು ಉದ್ಘಾಟಿಸಿದ ಭಾಗವತ ಧರ್ಮ‌ ಅಥವಾ ಪ್ರೇಮಧರ್ಮವು ಈಗ ಹರೇ ಕೃಷ್ಣ ಆಂದೋಲನದ ಮೂಲಕ ವಿಶ್ವಾದ್ಯಂತ ಪಸರಿಸಿದೆ, ಪಸರಿಸುತ್ತಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi