ಶ್ರೀ ಮಾಧವ ತೀರ್ಥ

ಮಧ್ವಾಚಾರ್ಯರ ನಾಲ್ವರು ಪ್ರಮುಖ ಅನುಯಾಯಿಗಳ ಪೈಕಿ ಶ್ರೀ ಮಾಧವ ತೀರ್ಥರೂ ಒಬ್ಬರು. ಶ್ರೀ ಮಧ್ವಾಚಾರ್ಯರ ನಂತರ ಕ್ರಮವಾಗಿ ಪದ್ಮನಾಭ ತೀರ್ಥ,  ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯ ತೀರ್ಥರು ಪೀಠವನ್ನು ಅಲಂಕರಿಸಿದರು. ಚತುವೇರ್ದಗಳ ಮೇಲೆ ವಿದ್ವತ್‌ಪೂರ್ಣ ವ್ಯಾಖ್ಯಾನವನ್ನು ರಚಿಸಿದ್ದು ಮಾಧವ ತೀರ್ಥರ ಅತಿ ಮುಖ್ಯ ಸಾಧನೆ.

ಆಂಧ್ರಪ್ರದೇಶದಲ್ಲಿ ಪವಿತ್ರ ಗೋದಾವರಿ ನದಿ ತೀರದ ಹಳ್ಳಿಯೊಂದರಲ್ಲಿ, ಆ ಕಾಲದ ಮಹಾನ್‌ ವಿದ್ವಾಂಸ ಕೃಷ್ಣಶಾಸ್ತ್ರಿ ಎಂಬ ಬ್ರಾಹ್ಮಣರ ಪುತ್ರನಾಗಿ ಮಾಧವ ತೀರ್ಥರ ಜನನವಾಯಿತು. ಇದಕ್ಕೂ ಮೊದಲು ಪದ್ಮನಾಭ ತೀರ್ಥರೂ ಗೋದಾವರಿ ತೀರದ ಹಳ್ಳಿಯಲ್ಲೇ ಜನಿಸಿದ್ದರು.

ಕೃಷ್ಣಶಾಸ್ತ್ರಿ ದಂಪತಿ ಮುದ್ದಿನ ಮಗುವಿಗೆ ವಿಷ್ಣುಶಾಸ್ತ್ರಿ ಎಂದು ನಾಮಕರಣ ಮಾಡಿದರು. ವಿಷ್ಣುಶಾಸ್ತ್ರಿ ಬಾಲಕನಾಗಿದ್ದಾಗಲೇ ತನ್ನ ಚುರುಕು ಬುದ್ಧಿಯಿಂದ ಎಲ್ಲರ ಗಮನ ಸೆಳೆದ. ಅದಕ್ಕೆ ತಕ್ಕಂತೆ ಕೃಷ್ಣಶಾಸ್ತ್ರಿಗಳು ಬಾಲ ವಿಷ್ಣುವಿಗೆ ವೇದ ಸಾಹಿತ್ಯವನ್ನು ಅರೆದು ಕುಡಿಸಿದರು.

ಇದರ ಫಲಶ್ರುತಿ ಎಂಬಂತೆ ವಿಷ್ಣುಶಾಸ್ತ್ರಿ ತಾರುಣ್ಯಕ್ಕೆ ಕಾಲಿಡುವ ಹೊತ್ತಿಗಾಗಲೇ ವೇದ, ಪುರಾಣಗಳಲ್ಲಿ ಅದ್ವಿತೀಯ ಪಂಡಿತನಾಗಿ ಹೆಸರು ಮಾಡಿದ. ಇದಕ್ಕೆ ಸರಿಯಾಗಿ, ಯೋಗಾಯೋಗ ಎಂಬಂತೆ ಮಹಾನ್‌ ಆಧ್ಯಾತ್ಮಿಕ ಗುರುವರ್ಯರ ಆಶ್ರಯ-ಆಶೀರ್ವಾದ ವಿಷ್ಣುಶಾಸ್ತ್ರಿಗಳಿಗೆ ಸಿಕ್ಕಿತು.

ಅದು ಮಧ್ವಾಚಾರ್ಯರ ಶಕೆ. ಭರತ ಖಂಡದಲ್ಲಿ ಅವರನ್ನು ಮೀರಿಸುವ ಆಧ್ಯಾತ್ಮಿಕ ಗುರು ಇನ್ನೊಬ್ಬರಿರಲಿಲ್ಲ. ಆಗ ಮಧ್ವರು ತಮ್ಮ ಆ‍ಧ್ಯಾತ್ಮಿಕ ಗುರು ವೇದ ವ್ಯಾಸರ ದರ್ಶನ ಪಡೆಯಲು ಬದರಿಕಾಶ್ರಮ ಯಾತ್ರೆ ಕೈಗೊಂಡಿದ್ದರು. ಅಲ್ಲಿಂದ ಉಡುಪಿಗೆ ಹಿಂತಿರುಗುವ ಮಾರ್ಗದಲ್ಲಿ ಅವರು ಗೋದಾವರಿ ತೀರ ಪ್ರದೇಶಕ್ಕೆ ಬಂದರು. ಆ ವೇಳೆಗಾಗಲೇ ಗೋದಾವರಿ ತೀರದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪಂಡಿತೋತ್ತಮರಾಗಿ ವಿಷ್ಣುಶಾಸ್ತ್ರಿ ಹೆಸರು ಮಾಡಿದ್ದರು. ಮಧ್ವಾಚಾರ್ಯರು ಅಲ್ಲಿಗೆ ಬಂದಿರುವ ಸುದ್ದಿ ವಿಷ್ಣುಶಾಸ್ತ್ರಿಗಳ ಕಿವಿಗೆ ಬಿತ್ತು.

ಮಧ್ವರು ಕೆಲಕಾಲ ರಾಜಮಹೇಂಡ್ರಿಯಲ್ಲಿ ತಂಗಲಿದ್ದಾರೆ ಎಂಬ ಸುದ್ದಿ ಕೇಳಿಯೇ ಅವರು ಪುಳಕಗೊಂಡರು. ಮತ್ತೆ ಅವರು ಹೆಚ್ಚು ತಡಮಾಡಲಿಲ್ಲ. ಮಧ್ವರ ದರ್ಶನ ಪಡೆಯಲು ಓಡೋಡಿ ಬಂದರು. ಮಧ್ವಾಚಾರ್ಯರನ್ನು ಕಂಡು ಧನ್ಯರಾದರು. ಮಧ್ವಾಚಾರ್ಯರ ವ್ಯಕ್ತಿತ್ವ, ಅಂಗಿಕ ಪರಿಭಾಷೆ, ಮಾತುಗಾರಿಕೆಗೆ ವಿಷ್ಣುಶಾಸ್ತ್ರಿಗಳು ಮನಸೋತರು. ಆದರೂ ಅವರು ಅಷ್ಟು ಸುಲಭವಾಗಿ ಮಧ್ವರಿಗೆ ಶರಣಾಗಲಿಲ್ಲ. ವೇದ ಸಾಹಿತ್ಯ ಕುರಿತು ತಮ್ಮ ಜತೆ ಚರ್ಚೆ ನಡೆಸುವಂತೆ ಅವರು ಮಧ್ವರನ್ನು ಆಹ್ವಾನಿಸಿದರು.

ನಂತರ ನಡೆದಿದ್ದು ಭಾರತೀಯ ಆಧ್ಯಾತ್ಮಿಕ ಇತಿಹಾಸದ ಒಂದು ಮಹೋನ್ನತ ವಿದ್ವತ್‌ ಗೋಷ್ಠಿ ಮಧ್ವಾಚಾರ್ಯರ-ವಿಷ್ಣುಶಾಸ್ತ್ರಿಗಳ ಮಧ್ಯೆ ಭಾರಿ ಚರ್ಚೆಯೇ ನಡೆಯಿತು. ಅಂತಿಮವಾಗಿ ಮಧ್ವಾಚಾರ್ಯರ ವಿದ್ವತ್ತಿಗೆ ವಿಷ್ಣುಶಾಸ್ತ್ರಿಗಳು ತಲೆಬಾಗಿದರು. ಕೊನೆಗೂ ತಾವು ಆಪೇಕ್ಷಿಸಿದ್ದ ಆ‍ಧ್ಯಾತ್ಮಿಕ ಗುರುವನ್ನು ಪಡೆದ ಧನ್ಯಾತಾ ಭಾವ ಅವರದಾಯಿತು. ಮಧ್ವಾಚಾರ್ಯರನ್ನು ಜನ್ಮಾಜನ್ಮಾಂತರದ ಗುರುವಾಗಿ ಸ್ವೀಕರಿಸಿದ ವಿಷ್ಣುಶಾಸ್ತ್ರಿಗಳು, ತಮ್ಮನ್ನು ಶಿಷ್ಯನಾಗಿ ಒಪ್ಪಿಕೊಳ್ಳುವಂತೆ ಅವರನ್ನು ಕೇಳಿಕೊಂಡರು.

ಅಷ್ಟೇ ಅಲ್ಲ, ಮಧ್ವಾಚಾರ್ಯರ ಜತೆಗಿದ್ದುಕೊಂಡು, ಕೃಷ್ಣಸೇವೆ ಮಾಡಿಕೊಂಡೇ ತಮ್ಮ ಜೀವನದ ಉಳಿದ ಭಾಗವನ್ನು ಕಳೆಯಲು ವಿಷ್ಣುಶಾಸ್ತ್ರಿಗಳು ನಿರ್ಧರಿಸಿದರು. ಇದಕ್ಕಾಗಿ ಅವರು ಮೊದಲು ಈ ಐಹಿಕ ಜೀವನದಿಂದ ಮುಕ್ತರಾಗಬೇಕಿತ್ತು. ತಕ್ಷಣ ಮಧ್ವಾಚಾರ್ಯರ ಮುಂದೆ ತಮ್ಮ ಮನದಿಂಗಿತ ಮಂಡಿಸಿದರು. ಸಂನ್ಯಾಸ ದೀಕ್ಷೆ ನೀಡಿ ಉದ್ಧರಿಸುವಂತೆ ಕೇಳಿಕೊಂಡರು. ಈ ವೇಳೆಗಾಗಲೇ ವಿಷ್ಣುಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ ಮಧ್ವರಿಗೆ ನಂಬಿಕೆ ಮೂಡಿತ್ತು. ತಾವು ಹಾಕಿಕೊಟ್ಟ ಮಾರ್ಗದಲ್ಲಿ ಸಮರ್ಥವಾಗಿ ಸಾಗಬಲ್ಲರು ಎಂಬ ಭರವಸೆಯೂ ಬಂದಿತ್ತು.

ಹೀಗಾಗಿ ವಿಷ್ಣುಶಾಸ್ತ್ರಿಗಳ ಕೋರಿಕೆಯನ್ನು ಅವರು ತಳ್ಳಿಹಾಕಲಿಲ್ಲ. ಅವರಿಗೆ ಸಂನ್ಯಾಸ ದೀಕ್ಷೆ ನೀಡಿ, ಮಾಧವ ತೀರ್ಥ ಎಂದು ನಾಮಕರಣ ಮಾಡಿದರು. ಹೀಗೆ ಮಾಧ್ವರಿಂದ ಸಂನ್ಯಾಸ ದೀಕ್ಷೆ ಪಡೆದ ವಿಷ್ಣುಶಾಸ್ತ್ರಿಗಳು ಕೃಷ್ಣ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು. ಮಧ್ವಾಚಾರ್ಯರ ಜತೆಗೇ ಉಡುಪಿಗೆ ನಡೆದರು.

ಉಡುಪಿ ತುಲುಪಿದ ಮೇಲೆ ಮಾಧವ ತೀರ್ಥರು ಆ‍ಧ್ಯಾತ್ಮಿಕ ಗುರು ಮಧ್ವಾಚಾರ್ಯರ ಸೇವೆಯಲ್ಲಿ ತಲ್ಲೀನರಾದರು. ಜತೆ ಜತೆಗೇ ಅವರ ಅಧ್ಯಯನವೂ ನಿರಂತರವಾಗಿ ಸಾಗಿತು. ಮಧ್ವಾಚಾರ್ಯರ ಬಳಿ ವೇದ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ ಮಾಧವ ತೀರ್ಥರು, ಅವರ ಮೆಚ್ಚಿನ ಶಿಷ್ಯರಲ್ಲೊಬ್ಬರಾದರು. ಅಧ್ಯಯನದಲ್ಲಿ ಮಾಧವ ತೀರ್ಥರಿಗಿದ್ದ ಅಮಿತೋತ್ಸಾಹ ಕಂಡು ಮಧ್ವರು ತೃಪ್ತರಾದರು. ಹಾಗೆಯೇ ತಮ್ಮ ಜತೆ ಬರುವುದಕ್ಕೆ ಮುಂಚೆಯೂ ಅವರು ಬಹಳಷ್ಟು ಓದಿಕೊಂಡಿದ್ದರೆಂಬುದೂ ಅವರಿಗೆ ನಿಚ್ಚಳವಾಯಿತು.

ಆಪ್ತ ಶಿಷ್ಯನನ್ನು ಕರೆದು ಮಧ್ವರು ನಾಲ್ಕು ವೇದಗಳ ಮೇಲೆ ವ್ಯಾಖ್ಯಾನ ರಚಿಸುವ ಜವಾಬ್ದಾರಿವಹಿಸಿದರು. ಈ ಗುರುತರ ಕಾರ್ಯ ಪೂರೈಸಲು ಮಾಧವ ತೀರ್ಥರಿಗೆ ಕೆಲವು ವರ್ಷಗಳೇ ಹಿಡಿಯಿತು. ಹೀಗಾಗಿ ಬೇರಾವುದೇ ಪುಸ್ತಕ ಬರೆಯುವುದು ಅವರಿಗೆ ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಮಾಧವ ತೀರ್ಥರಂತೆ ನಾಲ್ಕು ವೇದಗಳ ಮೇಲೆ ವ್ಯಾಖ್ಯಾನ ಬರೆಯುವ ಬೃಹತ್‌ ಸಾಹಸಕ್ಕೆ ಕೈ ಹಾಕಿದವರೇ ವಿರಳ. ಮ‍ಧ್ವಾಚಾರ್ಯರ ಆಶೀರ್ವಾದ ಬಲದೊಂದಿಗೆ ಮಾಧವ ತೀರ್ಥರು ಈ ಬೃಹತ್‌ ಕಾರ್ಯ ಪೂರ್ಣಗೊಳಿಸಿದರು.

ಬೇಸರದ ಸಂಗತಿ ಎಂದರೆ ಇಂಥ ಮಹತ್ವ ಪೂರ್ಣ ಗ್ರಂಥ ಇಂದು ನಮ್ಮ ಬಳಿ ಇಲ್ಲ. ಕೆಲವು ವಿದ್ವಾಂಸರು ಹೇಳುವ ಪ್ರಕಾರ ಅವು ಜರ್ಮನಿಯ ಯಾವುದೋ ಲೈಬ್ರರಿಯಲ್ಲಿವೆಯಂತೆ.

ಮಧ್ವಾಚಾರ್ಯರು ಕೃಷ್ಣಪಾದ ಸೇರಿದ ನಂತರ ಮಾಧವ ತೀರ್ಥರು ದೇಶ ಪರ್ಯಟನೆ ಆರಂಭಿಸಿದರು. ದೇಶದ ಮೂಲೆ ಮೂಲೆ ಸಂಚರಿಸಿ ಕೃಷ್ಣಪ್ರಜ್ಞೆ ಪ್ರಚಾರ ಕೈಗೊಂಡರು. ಈ ಅವಧಿಯಲ್ಲಿ, ಮೊದಲು ಪದ್ಮನಾಭ ತೀರ್ಥರು, ನಂತರ ನರಹರಿ ತೀರ್ಥರು ಮಾಧ್ವ ಮಠವನ್ನು ಮುನ್ನೆಡೆಸಿದರು. 1333ರಲ್ಲಿ ಮಾಧವ ತೀರ್ಥರನ್ನು  ಪಂಪ ಕ್ಷೇತ್ರಕ್ಕೆ ಕರೆಸಿಕೊಂಡ ನರಹರಿ ತೀರ್ಥರು, ಅವರನ್ನು ಮಾಧ್ವ ಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು.

ಇದೇ ಸಮಯದಲ್ಲಿ ಅಲ್ಲಿ ಪಂಡಿತೋತ್ತಮ, ಮಹಾನ್‌ ವಿದ್ವಾಂಸ ವಿದ್ಯಾರಣ್ಯರ ಸಮರ್ಥ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿತ್ತು. ವಿಜಯನಗರ ಅರಸರು ವಿದ್ಯಾರಣ್ಯರಿಗೆ ಬಹಳ ಗೌರವ ನೀಡುತ್ತಿದ್ದರು. ಅವರನ್ನೇ ತಮ್ಮ ವಂಶದ ಆಚಾರ್ಯರೆಂದು ಪರಿಗಣಿಸಿದ್ದರು. ವಿದ್ಯಾರಣ್ಯರು ಸಾಮ್ರಾಜ್ಯಷಾಹಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು.

ಹೀಗೆ ಮಾಧವ ತೀರ್ಥರ ಬಗ್ಗೆ ವಿದ್ಯಾರಣ್ಯರು ಅತ್ಯಂತ ಪೂಜ್ಯ ಭಾವನೆ ಹೊಂದಿದ್ದರು. ಇದು ವಿದ್ಯಾರಣ್ಯರ ಕೆಲವು ಶಿಷ್ಯರಿಗೆ ಇಷ್ಟವಾಗಲಿಲ್ಲ. ಅವರು ಉಭಯ ಆಚಾರ್ಯರ ಮಧ್ಯೆ ಹುಳಿ ಹಿಂಡಲು ಸಾಕಷ್ಟು ಬಾರಿ ಪ್ರಯತ್ನ ನಡೆಸಿದರು. ಇದಕ್ಕಾಗಿ ಕೆಲವು ಷಡ್ಯಂತ್ರಗಳನ್ನೂ ಹೆಣೆದರು.

ಇತ್ತ ಮಾಧವ ತೀರ್ಥ ಮತ್ತು ವಿದ್ಯಾರಣ್ಯರು ಕಾಲಕಾಲಕ್ಕೆ ಸೈದ್ಧಾಂತಿಕ ಸಂವಾದ, ಚರ್ಚೆ ನಡೆಸುತ್ತಿದ್ದರು. ಅಂಥ ಸಂದರ್ಭಗಳಲ್ಲೆಲ್ಲಾ ಮಾಧವ ತೀರ್ಥರು ತಮ್ಮೆದರು ಒಂದು ಶ್ರೀರಾಮ ವಿಗ್ರಹವನ್ನು ಇಟ್ಟುಕೊಳ್ಳುತ್ತಿದ್ದರು. ಒಮ್ಮೆಯಂತೂ ಇವರಿಬ್ಬರ ನಡುವಿನ ಚರ್ಚೆ ಸತತ 17 ದಿನ ಕಾಲ ನಡೆಯಿತು. ಅಂತಿಮವಾಗಿ ಮಾಧವ ತೀರ್ಥರು ಜಯಶಾಲಿಯಾದರು.

ಅವರನ್ನು ಆತ್ಮೀಯವಾಗಿ ಅಭಿನಂದಿಸಿದ ವಿದ್ಯಾರಣ್ಯರು ವಿನಮ್ರವಾಗಿ ಸೋಲೊಪ್ಪಿಕೊಂಡು. ಶ್ರೀರಾಮನ ದಯೆಯಿಂದಲೇ ನೀವು ವೈದಿಕ ಜ್ಞಾನದಲ್ಲಿ ಅದ್ವಿತೀಯರಾಗಿದ್ದೀರಿ ಎಂದು ವಿದ್ಯಾರಣ್ಯರು ಮಾಧವ ತೀರ್ಥರನ್ನು ಅಭಿನಂದಿಸಿದರು. ಅಲ್ಲಿದ್ದ ಶ್ರೀರಾಮ ವಿಗ್ರಹವನ್ನು ಮಾಧವ ತೀರ್ಥರ ಶಿರದ ಮೇಲಿರಿಸಿದ ವಿದ್ಯಾರಣ್ಯರು ಆ ವಿಗ್ರಹವನ್ನು ದಿಗ್ವಿಜಯ ರಾಮ ಎಂದು ಘೋಷಿಸಿದರು. ಈ ವಿಗ್ರಹವನ್ನು ಇಂದಿಗೂ ಮಾಧವ ತೀರ್ಥ ಮಠದಲ್ಲಿ ಪೂಜಿಸಲಾಗುತ್ತದೆ.

ಆ ಕಾಲದಲ್ಲಿ ಜೈನ ಧರ್ಮದ ಪ್ರಭಾವದಿಂದಾಗಿ ಉತ್ತರ ಕರ್ನಾಟಕದಲ್ಲಿ ವೈದಿಕ ಧರ್ಮ ನೆಲೆ ಕಳೆದುಕೊಂಡಿತ್ತು. ಆದ್ದರಿಂದ ಆ ಪ್ರದೇಶದಲ್ಲಿ ಸಂಚರಿಸಿ ವೈದಿಕ ಧರ್ಮ ಪುನಶ್ಚೇತನಗೊಳಿಸುವಂತೆ ವಿದ್ಯಾರಣ್ಯರು ಮಾಧವ ತೀರ್ಥರಿಗೆ ಸೂಚಿಸಿದರು. ಪರ್ಯಟನೆ ಸಂದರ್ಭದಲ್ಲಿ ಮಣಿಪುರ (ಈಗಿನ ಹೆಸರು ಮಣ್ಣೂರು) ಎಂಬಲ್ಲಿ ಉಳಿದುಕೊಳ್ಳುವಂತೆಯೂ ಸಲಹೆ ನೀಡಿದರು. ಅದಕ್ಕಿಂತ ಕೆಲಸಮಯ ಮೊದಲು ಮಣಿಪುರದಲ್ಲಿ ಒಂದು ಸಂಸ್ಕೃತ ವಿಶ್ವವಿದ್ಯಾಲಯವಿತ್ತು.

ಪ್ರಾಂಶುಪಾಲ ಪದ್ಮರಾಜ ಪಂಡಿತರು ವಿಶ್ವವಿದ್ಯಾಲಯದ ಬಾಗಿಲು ಮುಚ್ಚಿ ವಿಜಯನಗರದಲ್ಲಿ ಬಂದು ನೆಲೆಸಿದ್ದರು. ಆ ವಿಶ್ವವಿದ್ಯಾಲಯವನ್ನು ಮತ್ತೆ ಆರಂಭಿಸುವಂತೆ ವಿದ್ಯಾರಣ್ಯರು ಮಾಧವ ತೀರ್ಥರಿಗೆ ಸೂಚಿಸಿದರು. ಮಣ್ಣೂರಿನ ಆಧ್ಯಾತ್ಮಿಕ ಮಹಾತ್ಮೆಯನ್ನು ವಿವರಿಸಿದ ವಿದ್ಯಾರಣ್ಯರು, ಅಲ್ಲಿ ಒಂದು ಕೇಶವ ವಿಗ್ರಹವನ್ನು ಪೂಜಿಸಲಾಗುತ್ತಿತ್ತು ಎಂಬುದನ್ನು ಮಾಧವ ತೀರ್ಥರ ಗಮನಕ್ಕೆ ತಂದರು. ಈ ಕೇಶವ ವಿಗ್ರಹ ಧ್ರುವನ ಭಕ್ತಿಯಿಂದ ವ್ಯಕ್ತವಾಗಿದೆ.

ವಿದ್ಯಾರಣ್ಯರ ಸಲಹೆ ಒಪ್ಪಿಕೊಂಡ ಮಾಧವ ತೀರ್ಥರು ಶಿಷ್ಯರೊಡಗೂಡಿ ಮಣ್ಣುರಿನತ್ತ ಹೊರಟರು. ಮಾರ್ಗ ಮಧ್ಯೆ ಅವರು ರಾಯಚೂರು ಜಿಲ್ಲೆಯ ಕರ್ಪಾರ ಕ್ಷೇತ್ರ ಎಂಬ ಪವಿತ್ರ ಸ್ಥಳದಲ್ಲಿ ಕೆಲ ದಿನ ತಂಗಿದರು. ಈ ಕ್ಷೇತ್ರದಲ್ಲಿ ಅರಳಿ ಮರದಡಿಯಲ್ಲಿ ಒಂದು ಲಕ್ಷ್ಮಿ ನರಸಿಂಹ ದೇವರ ಪ್ರಾಚೀನ ವಿಗ್ರಹವಿದೆ.

ಕೊನೆಗೂ ಮಾಧವ ತೀರ್ಥರು ಗುಲ್ವರ್ಗಾದಿಂದ 80 ಕಿಮೀ ದೂರದಲ್ಲಿ, ಭೀಮಾ ನದಿ ತೀರದಲ್ಲಿರುವ ಮಣ್ಣೂರಿಗೆ ತಲುಪಿದರು. ಅಗಸ್ತ್ಯರಂಥ ಮಹಾಮುನಿಗಳೇ ಪೂಜಿಸಿದ ಕೇಶವ ವಿಗ್ರಹವನ್ನು ಭಕ್ತಿ ಭಾವದಿಂದ ಪೂಜಿಸಿದರು. ನಂತರ ಅಲ್ಲಿನ ಜೈನ ವಿದ್ವಾಂಸರನ್ನೆಲ್ಲಾ ವಾದದಲ್ಲಿ ಮಣಿಸಿದರು. ಬಾಗಿಲು ಮುಚ್ಚಿದ್ದ ವಿಶ್ವವಿದ್ಯಾಲಯವನ್ನು ಪುನಃ ಆರಂಭಿಸಿದರು. ನೂರಾರು ವಿದ್ಯಾರ್ಥಿಗಳು, ವಿಧ್ವಾಂಸರು ಇದರತ್ತ ಆಕರ್ಷಿತರಾದರು. ಹಲವಾರು ವಿದ್ವಾಂಸರು ಮಾಧವ ತೀರ್ಥರಿಂದ ಸ್ಫೂರ್ತಿ ಪಡೆದು ಕೃಷ್ಣಪ್ರಜ್ಞೆ ಕುರಿತು ಕೃತಿಗಳನ್ನು ರಚಿಸಿದರು.

ನಂತರ ಮಾಧವ ತೀರ್ಥರು ತಮಿಳುನಾಡಿನ ಶ್ರೀರಂಗ ಕ್ಷೇತ್ರಕ್ಕೆ ತೀರ್ಥ ಯಾತ್ರೆಕೈಗೊಂಡರು. ಇಲ್ಲಿ ಅವರು ನಾರಾಯಣ ಶರ್ಮ ಎಂಬ ಶಿಷ್ಯರಿಗೆ ಸಂನ್ಯಾಸ ದೀಕ್ಷೆ ನೀಡಿ, ಮಧುಹರಿ ತೀರ್ಥ ಎಂದು ನಾಮಕರಣ ಮಾಡಿದರು. ಕೃಷ್ಣಪಾದ ಸೇರುವ ಮೊದಲು ಮಾಧವ ತೀರ್ಥರು ಮಧ್ವಾಚಾರ್ಯರು ತಮಗೆ ನೀಡಿದ್ದ ವೀರ ರಾಮ ಮತ್ತು ದಿಗ್ವಿಜಯ ರಾಮ ವಿಗ್ರಹಗಳನ್ನು ಮಧುಹರಿ ತೀರ್ಥರಿಗೆ ನೀಡಿದರು. ಮಧುಹರಿ ತೀರ್ಥರು ಸ್ಥಾಪಿಸಿದ ಮಾಧವ ತೀರ್ಥ ಮಠದಲ್ಲಿ ಈ ವಿಗ್ರಹಗಳನ್ನು ಇಂದಿಗೂ ಪೂಜಿಸಲಾಗುತ್ತಿದೆ.

ಮಾಧವ ತೀರ್ಥರು 17 ವರ್ಷ 8 ತಿಂಗಳು 8 ದಿನ ಕಾಲ ಮಾಧ್ವ ಮಠದ ಪೀಠಾಧಿಪತಿಯಾಗಿದ್ದರು. ತಮ್ಮ ನಂತರ ಅಕ್ಷೋಭ್ಯ ತೀರ್ಥರನ್ನು ಉತ್ತರಾಧಿಕಾರಿಯನ್ನಾಗಿ ಅವರು ನೇಮಿಸಿದರು.

ಬಾದ್ರಪದ ಅಮಾವಾಸ್ಯೆ ದಿನ ಮಾಧವ ತೀರ್ಥರು ಪಂಪಾಕ್ಷೇತ್ರದಲ್ಲಿ ಕೃಷ್ಣಪಾದ ಸೇರಿದರು. ಅಲ್ಲಿ ಅವರ ಬೃಂದಾವನ ಸ್ಥಾಪಿಸಲಾಯಿತು. ಕೆಲ ಕಾಲದ ನಂತರ ಮಣ್ಣೂರಿನ ನಿವಾಸಿಯೊಬ್ಬರು ಕನಸಿನಲ್ಲಿ ದೊರೆತ ಭಗವಂತನ ಆಜ್ಞೆಯಂತೆ ಈ ಬೃಂದಾವನವನ್ನು ಪಂಪ ಕ್ಷೇತ್ರದಿಂದ ಮಣ್ಣೂರಿಗೆ ಸ್ಥಳಾಂತರಿಸಿದರು. ಈಗ ಅದು ಮಣ್ಣೂರಿನಲ್ಲೇ ಇದೆ. ಕೋಲಾರ ಜಿಲ್ಲೆ ತಂಬಿಹಳ್ಳಿಯ ಮಾಧವ ಪುರ ಎಂಬಲ್ಲಿ ಮಾಧವ ಮಠವಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi