ಶ್ರೀ ರಾಮಾನುಜಾಚಾರ್ಯರು

– ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್‌

ರಾಮಾನುಜರು ಕಾಂಚೀಪುರಕ್ಕೆ ಹಿಂದಿರುಗಿದರು; ಕಾಂಚೀಪೂರ್ಣರಿಂದ ಉಪದೇಶ ಬೇಡಿದರು. ತಾನು ದ್ವಿಜನಲ್ಲ ಎಂಬ ಕಾರಣದಿಂದ ಆತ ಅದನ್ನು ಮಾಡಲೊಲ್ಲೆ ಎಂದರು. ಇವರು, ‘ಜನ್ಮ ಅಲ್ಪ, ಗುಣ ಮುಖ್ಯ ಎಂದಿಲ್ಲವೇ ಹಿರಿಯರು?” ಎಂದರು. ಆತ, ” ಇದು ಒಬ್ಬರ ಮಾತಲ್ಲ, ಒಬ್ಬ ಮಾಡಿದ ಅಂತ ಹತ್ತುಜನ ಮಾಡಹೋದಾರು.

ನಾವು ತಪ್ಪು ಮೇಲ್ಪಂಕ್ತಿ ಹಾಕಬಾರದು,” ಎಂದರು. ಇವರು ಕಾಂಚೀಪೂರ್ಣರನ್ನು ಒಂದು ದಿನ ತಮ್ಮ ಮನೆಗೆ ಊಟಕ್ಕೆ ಕರೆದರು. ಆತನೂ ತಾನೂ ಜೊತೆಯಲ್ಲಿ ಕುಳಿತು ಊಟ ಮಾಡಬೇಕೆಂದು ಇವರ ಅಪೇಕ್ಷೆ. ಕಾಂಚೀಪೂರ್ಣರು ಸ್ವಲ್ಪ ಮುಂದಾಗಿ ಬಂದು, ಏನೋ ನೆಪ ಹೇಳಿ, ರಾಮಾನುಜರ ಪತ್ನಿ ಬಡಿಸಿದ ಊಟವನ್ನು ಉಂಡು ಹೊರಟು ಬಿಟ್ಟರು.

ರಾಮಾನುಜರ ಮನೆಯಾಕೆ ಆ ಎಲೆಯನ್ನು ಎತ್ತಿಹಾಕಿ ಸ್ಥಳವನ್ನು ಶುದ್ಧಮಾಡಿ ಪುನಃ ಸ್ನಾನ ಮಾಡಿದರು. ರಾಮಾನುಜರು ಬಂದು ಇದೇನೆಂದು ಕೇಳಿದರು. ಈಕೆ ಹೇಳಿದರು. ರಾಮಾನುಜರು, “ನಾನು ಗುರು ಎಂದು ಕಾಣುವ ಮನುಷ್ಯನ ಎಂಜಲೆಲೆಯನ್ನು ಎತ್ತಿದರೆ ನೀನು ಸ್ನಾನ ಮಾಡಬೇಕೇ? ಇದೇನು ಅಹಂಕಾರ?” ಎಂದರು.

ಕಾಂಚೀಪೂರ್ಣರು ರಾಮಾನುಜರಿಗೆ, ದೇವರು ತಮಗೆ ಅಪ್ಪಣೆ ಮಾಡಿ ತಿಳಿಸಿದ ಆರು ಸಂಗತಿಯನ್ನು ಹೇಳಿದರು. ಅದರಲ್ಲಿ ಮಹಾಪೂರ್ಣರನ್ನು ಆಶ್ರಯಿಸು ಎನ್ನುವುದು ಒಂದು. ರಾಮಾನುಜರು ಮಹಾಪೂರ್ಣರನ್ನು ಕಾಣಲು ಶ್ರೀರಂಗಕ್ಕೆ ಹೊರಟರು. ಅದೇ ವೇಳೆಗೆ ಶ್ರೀರಂಗದ ಶ್ರೀವೈಷ್ಣವ ಗೋಷ್ಠಿ ಯಾಮುನಾಚಾರ್ಯರ ಸ್ಥಾನಕ್ಕೆ ರಾಮಾನುಜರನ್ನು ಬರಹೇಳಿ ಕರೆಯಲು ಮಹಾಪೂರ್ಣರನ್ನು ಕಳುಹಿಸಿತು. ಅವರು ಕಾಂಚೀಪುರಕ್ಕೆ ಹೊರಟರು. ಇವರಿಬ್ಬರೂ ದಾರಿಯಲ್ಲಿ ಮಧುರಾಂತಕದಲ್ಲಿ ಸಂಧಿಸಿದರು.

ರಾಮಾನುಜರಿಗೆ ತುಂಬ ಆನಂದ. ಅವರು ಮಹಾಪೂರ್ಣರಿಂದ ಅಲ್ಲಿಯೇ ಉಪದೇಶ ಬೇಡಿದರು. ಅವರು ಇವರಿಗೆ ತಾವು ಮಾಡಬೇಕಾದ ಸಂಸ್ಕಾರವನ್ನು ಮಾಡಿ ದೀಕ್ಷೆ ಕೊಟ್ಟರು. ಇಬ್ಬರೂ ಕಾಂಚೀಪುರಕ್ಕೆ ಬಂದರು. ಕೆಲವು ದಿನದಲ್ಲಿ ಆಚಾರ್ಯರ ಪತ್ನಿ ಅನ್ನ ಇದ್ದರೂ ಇಲ್ಲವೆಂದು ಗಂಡನಿಗೆ ಸುಳ್ಳು ಹೇಳಿ, ಹಸಿದು ಬಂದ ಬ್ರಾಹ್ಮಣನನ್ನು ಹಾಗೆಯೇ ಕಳುಹಿಸಿದರು.

ರಾಮಾನುಜರಿಗೆ ತುಂಬಾ ಬೇಸರವಾಯಿತು. ಹಾಗೆಯೇ ಒಂದು ದಿನ ಬಾವಿಯ ಬಳಿ ಏನೋ ಮಾತು ಬಂದು ಆಚಾರ್ಯರ ಪತ್ನಿ ಮಹಾಪೂರ್ಣರ ಪತ್ನಿಯನ್ನು ಧಿಕ್ಕರಿಸಿ ಮಾತನಾಡಿದರು. ಮಹಾಪೂರ್ಣರು ಹೆಂಡಿರನ್ನು ಕರೆದುಕೊಂಡು ಊರಿಗೆ ಹೊರಟು ಬಿಟ್ಟರು.

ಕೆಲಸಕ್ಕೆ ಹೋಗಿ ಹಿಂತಿರುಗಿದ ರಾಮಾನುಜರು, ಮಹಾಪೂರ್ಣರನ್ನು ಕಾಣದೆ, ಏನಾಯಿತು ಎಂದು ವಿಚಾರಿಸಿ, ತನ್ನ ಹೆಂಡತಿ ಹೀಗೆ ನಡೆದರು ಎಂದು ತಿಳಿದು, – ”ಇನ್ನು ನಾನು ನೀನೂ ಜೊತೆಯಾಗಿ ಬಾಳುವುದು ಸಾಧ್ಯವಿಲ್ಲ. ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ” ಎಂದು ಆಕೆಯನ್ನು ಅವರ ತೌರಿಗೆ ಕಳುಹಿಸಿ ಗೃಹಸ್ಥಾಶ್ರಮ ಸಾಕು ಎಂದು ನಿಶ್ಚಯಿಸಿ ಸಂನ್ಯಾಸವನ್ನು ಸ್ವೀಕರಿಸಿದರು.

ಸ್ವಲ್ಪ ಕಾಲದನಂತರ ಶ್ರೀರಂಗದ ಹಿರಿಯರು ಬೇಡಿ, ಕಾಂಚೀಪೂರ್ಣರು ಒಪ್ಪಿ ಶ್ರೀ ರಾಮಾನುಜಾಚಾರ್ಯರು ರಂಗನಾಥನ ಮುಖ್ಯ ಕಿಂಕರರೂ ಶ್ರೀ ವೈಷ್ಣವ ಕೂಟದ ಪ್ರಮುಖರೂ ಆಗಿರಲು ಶ್ರೀರಂಗಕ್ಕೆ ಬಂದರು.

ಕಾಂಚೀಪುರ ಪಾಂಡಿತ್ಯದ ಸ್ಥಾನ. ಭಕ್ತಿಗೆ ಜೀವಸ್ಥಾನ, ತೆಂಕನಾಡಿನ ಹಿರಿಯ ಊರಾದ ಶ್ರೀರಂಗ. ಶ್ರೀರಂಗವನ್ನು ಅಂದಿನ ವೈಷ್ಣವ ಸಮುದಾಯ ಭಕ್ತಿಯ ಏಕೈಕ ಕೇಂದ್ರವೆಂದು ತಿಳಿದಿತ್ತು.

ಶ್ರೀರಂಗನಾಥನ ಸಮ್ಮುಖದ ಮುಖ್ಯ ಸೇವಕರಾಗಿ ಭಗವತ್‌ ಕೈಂಕರ್ಯಕ್ಕೆ ಎಲ್ಲ ಏರ್ಪಾಡುಗಳನ್ನು ಮಾಡಿ ರಾಮಾನುಜರು ಸಿದ್ಧಾಂತದ ಭಾಷ್ಯಕಾರರಾಗಲು ಅಧಿಕಾರ ಗಳಿಸಲು ತೊಡಗಿದರು. ಕಾಂಚೀಪೂರ್ಣ (ತಿರುಕ್ಕಚ್ಚಿನಂಬಿ) ಇವರಿಗೆ ಸಿದ್ಧಾಂತದ ಸಾರವನ್ನು ಕಲಿಸಿದರು. ಮಹಾಪೂರ್ಣ (ಪೆರಿಯನಂಬಿ)ದೀಕ್ಷೆ ಕೊಟ್ಟರು.

ಇವರು ಈ ಶಿಷ್ಯನಿಗೆ ದ್ವಯವನ್ನು  ಉಪದೇಶ ಮಾಡಿದರು; ಮೂಲ ಮಂತ್ರವನ್ನು ಕಲಿಯಲು ಗೋಷ್ಠಿಪೂರ್ಣರನ್ನು ಆಶ್ರಯಿಸಿ ಎಂದು ಅಪ್ಪಣೆ ಮಾಡಿದರು. ಗೋಷ್ಠಿಪೂರ್ಣರು (ತಿರುಕ್ಕೋಟ್ಟಿಯಾರ್‌‌ ನಂಬಿ) ಇವರನ್ನು ಹತ್ತು ಸಲ ತಿರುಗಿಸಿ ಕೊನೆಗೆ ಮಂತ್ರ ಗೋಪ್ಯವಾಗಿರಬೇಕೆಂದು ಆಜ್ಞೆ ಮಾಡಿ, “ಈ ಆಜ್ಞೆಯನ್ನು ಉಲ್ಲಂಘಿಸಿದರೆ ನೀವು ನರಕಕ್ಕೆ ಹೋಗುವಿರಿ, ಜೋಕೆ,” ಎಂದು ಹೆದರಿಕೆ ಹಾಕಿ, ಅದನ್ನು ಉಪದೇಶ ಮಾಡಿದರಂತೆ.

ಆಚಾರ್ಯರು ಒಡನೆ ಅದನ್ನು ಬಹಿರಂಗವಾಗಿ ಕೇಳುವ ಜನರಿಗೆಲ್ಲಾ ತಿಳಿಯುವಂತೆ ಕೂಗಿ ಹೇಳಿಬಿಟ್ಟರು. ಗುರು ಆಗ್ರಹದಿಂದ, “ಇದೇನು ನೀವು ಮಾಡಿದ್ದು? ಆಜ್ಞೋಲ್ಲಂಘನೆಗೆ ಶಿಕ್ಷೆ ನರಕ ಎನ್ನಲಿಲ್ಲವೇ?” ಎಂದು ಹೇಳಿದರು. ಆಚಾರ್ಯರು, ”ನರಕಕ್ಕೆ ಹೋಗುವವನು ನಾನು ಒಬ್ಬ.

ಈ ಮಂತ್ರವನ್ನು ಕೇಳಿ ಸ್ವರ್ಗಕ್ಕೆ ಅಧಿಕಾರ ಪಡೆದವರು ಸಾವಿರ ಜನ. ಅಷ್ಟು ಜನಕ್ಕೆ ಸುಖವಾಗುವುದಾದರೆ ನಾನೊಬ್ಬ ಕಷ್ಟಪಟ್ಟರೆ ತಪ್ಪೇನು?” ಎಂದರಂತೆ. ಗೋಷ್ಠಿಪೂರ್ಣರು ಶಿಷ್ಯನ ಉದಾರ ಹೃದಯವನ್ನು ಹೊಗಳಿದರು. ಆಚಾರ್ಯರು ವರರಂಗನಾಯಕ ಎಂಬ ನಾಯಕ ಭಕ್ತನಿಂದ ತಮಿಳು ಪ್ರಬಂಧಗಳನ್ನು ಹಾಡುವ ರೀತಿಯನ್ನು ಕಲಿತರು. ಮಾಲಾಧರ ಎಂಬ ಭಕ್ತನಿಂದ ಆ ಪ್ರಬಂಧಗಳ ಸಾಂಪ್ರಾದಾಯಿಕ ಅರ್ಥವನ್ನು ತಿಳಿದರು.

ಕೆಲವು ವೇಳೆ ಗುರು ಹೇಳಿದ ಅರ್ಥ ಶಿಷ್ಯನಿಗೆ ಒಪ್ಪಲಿಲ್ಲವಂತೆ. ಆಗ ಗುರು, “ನನಗೆ ಹೀಗೆ ತೋರುತ್ತದೆ.” ಎಂದು ಬೇರೆ ಅರ್ಥವನ್ನು ನಿವೇದಿಸಿದರು. ಆತನಿಗೆ ಬೇಸರವಾಯಿತು. ಆತ, “ನಾನಿನ್ನು ನಿಮಗೆ ಪಾಠ ಹೇಳಲಾರೆ.” ಎಂದರು. ಮಹಾಪೂರ್ಣರು ಇದನ್ನು ಕೇಳಿ ಮಾಲಾಧರರಿಗೆ “ಈ ಅರ್ಥ ತಪ್ಪಲ್ಲ.

ಶ್ರೀ ಯಾಮುನರು ಇದನ್ನು ಹೇಳಿದ್ದುಂಟು, ನನಗೆ ನೆನಪಿದೆ’ ಎಂದರು. ಆ ಬಳಿಕ, ”ಮೇಲಾಗಿ, ನೀನು ದಿಟವಾಗಿ ಇವರಿಗೆ ಹಿರಿಯ ಗುರು ಅಲ್ಲ. ನಿನಗೆ ತಿಳಿದದ್ದನ್ನು ಇವರಿಗೆ ತಿಳಿಸಿ ಮುಗಿಸು; ಮುಂದಿನ ಹೊಣೆಯನ್ನು ಇವರಿಗೆ ಬಿಡು,” ಎಂದರು. ಮಾಲಾಧರರು ಈ ಬುದ್ಧಿವಾದವನ್ನು ಅಂಗೀಕರಿಸಿದರು.

ಈ ವಿದ್ಯಾರ್ಜನೆ ಮುಗಿದ ಮೇಲೆ ಆಚಾರ್ಯರು ಪರಿವಾರ ಸಮೇತ ಕಾಂಚೀಪುರಕ್ಕೆ ಬಂದರು. ಕಾಂಚೀಪೂರ್ಣರಿಗೆ ಮಯ್ಯಾದೆ ತೋರಿ ದೇವರ ಸೇವೆ ಮಾಡಿ, ಅಪ್ಪಣೆ ಪಡೆದು ತಿರುಪತಿಗೆ ಹೊರಟರು. ಅಲ್ಲಿ ಮಾವ ಶ್ರೀಶೈಲಪೂರ್ಣರಲ್ಲಿ ಒಂದು ವರುಷ ನಿಂತು ಅವರ ಬಳಿ ರಾಮಾಯಣವನ್ನು ಪಾಠ ಮಾಡಿದರು.

ಆಮೇಲೆ ಶ್ರೀರಂಗಕ್ಕೆ ಹಿಂದಿರುಗಿ ರಾಮಾನುಜರು ಕೆಲವು ಕಾಲದನಂತರ ಕ್ಷೇತ್ರಯಾತ್ರೆ ನಡೆಸಿದರು. ಮೊದಲು ಪಶ್ಚಿಮಕ್ಕೆ ಹೋಗಿ ತಿರುವನಂತಪುರವನ್ನು ಸೇರಿ ಅಲ್ಲಿಂದ ಉತ್ತರಕ್ಕೆ ನಡೆದರು. ಉತ್ತರ ದೇಶದಲ್ಲಿ ಮಥುರಾ, ಸಾಲಿಗ್ರಾಮ, ವೈಕುಂಠ, ದ್ವಾರಕಾ, ಅಯೋಧ್ಯಾ, ಬದರಿ, ನೈಮಿಷ, ಪುಷ್ಕರ, ಗೋಕುಲ, ಶ್ರೀಕೂರ್ಮ, ವಾರಣಾಸಿ, ಪ್ರಯಾಗ, ಮಿಥಿಲಾ, ಬೃಂದಾವನಗಳಲ್ಲಿ ನಿಂತು ದೈವವನ್ನು ಆರಾಧಿಸಿದರು.

ಅಲ್ಲಿಂದ ಕಾಶ್ಮೀರಕ್ಕೆ ಹೋಗಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಗೆದ್ದು, ಹಿಂದಿರುಗಿ ಜಗನ್ನಾಥ ಪುರಿ, ಅಹೋಬಲದ ಮಾರ್ಗವಾಗಿ ತಿರುಪತಿಗೆ ಬಂದು ಅಲ್ಲಿಂದ ಶ್ರೀರಂಗಕ್ಕೆ ಬಂದರು. ಕಾಶ್ಮೀರದಲ್ಲಿದ್ದಾಗ ಬ್ರಹ್ಮಸೂತ್ರಗಳ ಬೋಧಾಯನ ವ್ಯಾಖ್ಯಾನವನ್ನು ಪಾಠ ಮಾಡಿದರು. ಶಿಷ್ಯನಿಗೆ ಅದನ್ನು ಇನ್ನೂ ಚೆನ್ನಾಗಿ ಪಾಠ ಮಾಡಲು ಅಪ್ಪಣೆ ಮಾಡಿದರು. ಶ್ರೀರಂಗದಲ್ಲಿ ನಿಂತು ಶ್ರೀಭಾಷ್ಯವನ್ನು ರಚಿಸಿದರು.

ಈ ಕಾಲದಲ್ಲಿ ಆ ಪ್ರಾಂತ್ಯದಲ್ಲಿ ಶೈವ ವೈಷ್ಣವರ ದ್ವೇಷ ಬಹು ಹೆಚ್ಚು ಬೆಳೆದಿತ್ತು. ಅಂದಿನ ಚೋಳರಾಜ ಶೈವನಾದ ಕಾರಣ, ವೈಷ್ಣವರ ಈ ಗುರುವಿಗೆ ಕೆಡಕು ಮಾಡಲು ಯೋಚಿಸಿದ್ದಾನೆಂದು ತಿಳಿದು ರಾಮಾನುಜರ ಶಿಷ್ಯರು ಅವರನ್ನು ಶ್ರೀರಂಗದಿಂದ ಹೊರಡಿಸಿಕೊಂಡು ಹೊಯಿಸಳ ನಾಡಿಗೆ ಬಂದರು.

ಇಲ್ಲಿ ರಾಮಾನುಜರು ಸುಮಾರು ಇಪ್ಪತ್ತು ವರ್ಷ ಕಾಲ ಇದ್ದರು. ಮೊದಲು ಸಾಲಿಗ್ರಾಮ, ಆಮೇಲೆ ತೊಂಡನೂರಿನಲ್ಲಿ ಇದ್ದು ದೆವ್ವನ ರೋಗದಿಂದ ಪೀಡಿತಳಾಗಿದ್ದ ರಾಜಪುತ್ರಿಯ ವ್ಯಾಧಿಯನ್ನು ಪರಿಹಾರ ಮಾಡಿದರು. ಈ ರಾಜ ಗುರುವನ್ನು ಆಶ್ರಯಿಸಿದನು; ವಿಷ್ಣುವರ್ಧನ ಎಂದು ಹೆಸರಾಂತನು.

ಈ ಕಾಲದಲ್ಲಿ ಆಚಾರ್ಯರು ಯಾದವಗಿರಿಯಲ್ಲಿ ನಾರಾಯಣ ಸನ್ನಿಧಿ ಇದೆ ಎನ್ನುವುದನ್ನು ಕಂಡು ಅಲ್ಲಿ ದೇವಾಲಯವನ್ನು ಸ್ಥಾಪಿಸಿದರು. ಮುಸಲ್ಮಾನ ದಾಳಿಕಾರರು ಒಯ್ದಿದ್ದ ಒಂದು ಉತ್ಸವ ಮೂರ್ತಿ ಇಂಥ ಕಡೆ ಇದೆ ಎಂದು ದೈವಾನುಗ್ರಹದಿಂದ ತಿಳಿದು, ಅಲ್ಲಿಗೆ ಹೋಗಿ ಅದನ್ನು ಪಡೆದು ಬಂದು ದೇವಾಲಯದಲ್ಲಿ ಪ್ರತಿಷ್ಠೆ ಮಾಡಿದರು.

ಈ ಸಂದರ್ಭದಲ್ಲಿ ತಮಗೆ ಅಂತ್ಯಜ ಸಮುದಾಯ ಒಂದರ ಜನ ನೆರವು ನೀಡಿದರೆಂಬ ಕಾರಣದಿಂದ ದೇವಾಲಯದಲ್ಲಿ ವರ್ಷದ ಅಂತ್ಯದಲ್ಲಿ ಹಿಂದೂ ಜನಕ್ಕೂ ಪ್ರವೇಶವಿರತಕ್ಕದ್ದು ಎಂದು ಕಟ್ಟಲೆ ಮಾಡಿದರು.

ವೈಷ್ಣವದ್ವೇಷಿ ಚೋಳರಾಜ ತೀರಿಕೊಂಡನೆಂದು ತಿಳಿದು, ಶಿಷ್ಯರು ಇವರನ್ನು ಮತ್ತೆ ಶ್ರೀರಂಗಕ್ಕೆ ಕರೆದೊಯ್ದರು. ಆಚಾರ್ಯರು ತಮ್ಮ ಒಬ್ಬ ಶಿಷ್ಯರ ಮಕ್ಕಳಿಬ್ಬರಿಗೆ ವ್ಯಾಸ ಪರಾಶರ ಎಂಬ ಹೆಸರುಗಳನ್ನಿಟ್ಟು ಅವರು ವಿದ್ಯಾವಂತರಾಗಿ ಸಿದ್ಧಾಂತದ ಸೇವಕರಾಗುವ೦ತೆ ನೋಡಿಕೊಂಡರು.

ದೇವಾಲಯಗಳಲ್ಲಿ ಪ್ರಬಂಧಗಳು ದಿನದಿನ ಪಾಠವಾಗುವಂತೆ ನಿಯಮಿಸಿ ನಮಾಳ್ವಾರ್ ಹಿರಿಮೆಯನ್ನು ಸ್ಥಾಪಿಸಿದರು. ತಾವು ರಚಿಸಿದ್ದ ಭಾಷ್ಯವನ್ನು ಪಾಠ ಹೇಳಿ ಶ್ರೀವೈಷ್ಣವ ಸಿದ್ಧಾಂತಕ್ಕೆ ಸಂಪೂರ್ಣವಾದ ಒಂದು ರೂಪನ್ನು ಕೊಟ್ಟರು. ಹೀಗೆ ತಮ್ಮ ಆಚಾರ್ಯರಾದ ಯಾಮುನರ ಮೂರು ಅಪೇಕ್ಷೆಗಳನ್ನು ಸಲ್ಲಿಸಿ ಕೃತಕೃತ್ವರಾದರು.

ಹೀಗೆ ಭಗವತ್ಸೇವೆ ಸಲ್ಲಿಸುತ್ತಾ ಶ್ರೀರಂಗದಲ್ಲಿ ಹಲವು ಕಾಲ ಇದ್ದು ಗದ್ಯತ್ರಯ, ವೇದಾಂತ ದೀಪ, ವೇದಾಂತ ಸಾರ ಗ್ರಂಥಗಳನ್ನು ರಚಿಸಿ ತಮ್ಮ ನೂರ ಇಪ್ಪತ್ತನೆಯ ವರ್ಷದಲ್ಲಿ (ಕ್ರಿ.ಶ. 1377) ಗುರು ಇಹದೇಹವನ್ನು ಬಿಟ್ಟರು.

ಈಗ ಆಚಾರ್ಯರು ಸ್ಥಾಪಿಸಿದ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಕುರಿತು ಎರಡು ಮಾತನ್ನು ಹೇಳಬೇಕು. ಇದರ ಮುಖ್ಯ ಲಕ್ಷಣ ಮನುಷ್ಯನ ಬುದ್ಧಿ ಹೃದಯ ಎರಡಕ್ಕೂ ಒಪ್ಪುವ ಸತ್ಯವನ್ನು ತೋರಿಸಿಕೊಡುವುದು. ಅಂತಿಮ ಸತ್ಯದ ಅನ್ವೇಷಣದಲ್ಲಿ ನಮ್ಮನ್ನು ಬರಿಯ ವಿಚಾರ, ತರ್ಕ, ಒಂದು ನಿರ್ಣಯದತ್ತ ನಡೆಸುತ್ತದೆ. ಭಾವ, ಅಭಿಲಾಷೆ ಇನ್ನೊಂದರತ್ತ ನಡೆಸುತ್ತದೆ.

ಮೊದಲ ದಾರಿಯಲ್ಲಿ ನಿರ್ಗುಣ ದೊರೆಯುತ್ತದೆ. ಅದನ್ನು ಸಾಧಿಸಲು ಜ್ಞಾನ ದಾರಿ, ಎನಿಸುತ್ತದೆ. ಎರಡನೆಯದರಲ್ಲಿ ದೇವರು ಒಬ್ಬನು ಬೇಕಾಗುತ್ತಾನೆ, ಅವನನ್ನು ಒಲಿಸಲು ಭಕ್ತಿ ಮುಖ್ಯ ಎನ್ನಿಸುತ್ತದೆ. ಬೇರೆಬೇರೆಯ ಎರಡು ಗುರಿಯಂತೆ ಕಾಣುವ ಈ ಎರಡೂ ಒಂದೇ ಗುರಿ ಎಂದು ಆಚಾರ್ಯರು ತೋರಿಸಿದರು. ಪರತತ್ತ್ವ ನಿರ್ಗುಣ ಹೌದು. ಲೋಕದ ವಸ್ತುಗಳಲ್ಲಿ ಇರುವಂತೆ ಇದರಲ್ಲಿ ಗುಣಗಳಿಲ್ಲ.

ಆದರೆ ಅದು ಗುಣವೇ ಇಲ್ಲದ ವಸ್ತುವಲ್ಲ. ಅದನ್ನು ನಿರ್ಗುಣ ಎಂದು ಶ್ರುತಿಯೇ ಅದಕ್ಕೆ ಸಮಸ್ತ ಕಲ್ಯಾಣಗುಣವನ್ನು ಆರೋಪಿಸಿದೆ. ಆದ್ದರಿಂದ ಪರಬ್ರಹ್ಮ ಪರಮಪುರುಷ ಅವನು ಅಖಿಲ ಹೇಯ ಪ್ರತ್ಯನೀಕನು. ಸಮಸ್ತ ಕಲ್ಯಾಣಗುಣಪರಿಪೂರ್ಣನು. ಇರುವುದು ಈ ಪರತತ್ವ ಒಂದೆ.

ನಾನು ನೀನು ಎನ್ನುವುದು ಬೇರೆಯಾಗಿಲ್ಲ ಎನ್ನುವ ಅದ್ವೈತವಾದ ಒಟ್ಟಿನಲ್ಲಿ ಸರಿ; ವಿವರದಲ್ಲಿ ತಪ್ಪುತ್ತದೆ. ಈಶ್ವರನಂತೆ ಜೀವವೂ ನಿತ್ಯವಾದದ್ದು, ಇರುವುದು ಈಶ್ವರನೇ; ಅವನ ಅಂಗವಾಗಿ ಜೀವ ಇದೆ. ಜೀವದಲ್ಲಿ ಈಶ್ವರ ಅಂತರ್ಯಾಮಿಯಾಗಿ ನೆಲೆಸಿದ್ದಾನೆ. ‘ತತ್ತ್ವಮಸಿ’ ಮುಂತಾದ ಐಕ್ಯವಾದಿ ಶ್ರುತಿಗಳ ಅರ್ಥ, ಲೋಕದ ಈಶ್ವರ ಆದ ಪರತತ್ತ್ವನಿನ್ನಲ್ಲಿರುವ ಅಂತರ್ಯಾಮಿ, ಎನ್ನುವುದು ಚಿದಚಿತ್ ಜಗತ್ತು ಈಶ್ವರ ತತ್ತ್ವದ ಶರೀರ.

ಈಶ್ವರ ಶರೀರಿ. ಶರೀರ ನಿಯಮದಿಂದ ಆಧೇಯ ವಿಧೇಯ, ಶೇಷ ಆಗಿರುವುದು. ಇದು ಶರೀರದ ಲಕ್ಷಣ ಎಂದ ಮೇಲೆ ಅದು ಅನಂತಜ್ಞಾನ, ಅನಂತಶಕ್ತಿಯ ಪರತತ್ತ್ವವನ್ನೆ ಆಶ್ರಯಿಸಿ ಅದರ ಎಡೆ, ಅದರ ಹಳಬ, ಅದರ ಊಳಿಗ ಆಗಿ ಉದ್ದಾರ ಆಗಬೇಕು. ಈ ಪರತತ್ತ್ವ ಆದ ಪರಮಪುರುಷನನ್ನು ಶಾಸ್ತ್ರ’ವಿಷ್ಣು’ ಎಂದು ಕರೆದಿದೆ. ಉದ್ಧಾರಕ್ಕೆ ಕರ್ಮವೂ ಸಾಧನ, ಜ್ಞಾನವೂ ಸಾಧನ.

ಆದರೆ ಕರ್ಮದ ಉದ್ದೇಶ ಜ್ಞಾನ ಉದಿಸಲಿ ಎನ್ನುವುದು. ಜ್ಞಾನದ ಉದ್ದೇಶ ಭಕ್ತಿ ಮೂಡಲಿ ಎನ್ನುವುದು ಅಚಿಂತ್ಯದ ಮಹಿಮೆಯ ಪರತತ್ತ್ವದ ಸ್ವರೂಪದ ಅರಿವಾಗಿ ಜೀವ, ನನ್ನನ್ನು ರಕ್ಷಿಸು, ಎಂದು ಅದನ್ನು ಮರೆಹೋಗಬೇಕು. ಮುಕ್ತಿಯ ದಾರಿ ಕರ್ಮ, ಜ್ಞಾನ, ಎಂದರೆ ಅಧಿಕ ವಿದ್ಯೆ ಇರಬೇಕಾಗುತ್ತದೆ.

ಈ ವಿದ್ಯೆ ಸಾಧ್ಯವಲ್ಲದವರಿಗೂ ಮುಕ್ತಿ ಉಂಟು. ಅದನ್ನು ಪಡೆಯಲು ದಾರಿ ಉಂಟು. ಆ ದಾರಿ ಶರಣಾಗತಿ ಪ್ರಪತ್ತಿ, ಎ೦ದರೆ ನಿಸ್ಸಹಾಯಕನಾಗಿ ಜೀವ ದೈವದ ಪದದ ಮೇಲೆ ಕೆಡೆಯುವುದು. ನೀನೆ ಗತಿ, ನನ್ನ ಕೈಹಿಡಿದು ಕಾಪಾಡು, ಎಂದು ಶರಣು ಹೋಗುವುದು. “ಅನುಕೂಲ್ಯಸ್ಯ ಸಂಕಲ್ಪ: ಪ್ರಾತಿಕೂಲ್ಯಸ್ಯ ವರ್ಜನಂ ರಕ್ಷಿಷ್ಯತೀತಿ ವಿಶ್ವಾಸ: ಗೋಪ್ತೃತ್ವವರಣಂ ತಥಾ ಆತ್ಮ ನಿಕ್ಷೇಪ ಕಾರ್ಪಣ್ಯೇ ಪಡ್ವಿಧಾ ಶರಣಾಗತಿ”

ವೇದಗಳ ಆದಿಕಾಲದ ಕರ್ಮ, ಅನಂತರದ ಉಪನಿಷತ್ಕಾಲದ ಜ್ಞಾನ, ಆಳ್ವಾರರುಗಳ ಆಧ್ಯಾತ್ಮಿಕ ಅನುಭೂತಿಯ ಭಕ್ತಿ. ಈ ಮೂರನ್ನೂ ಸೇರಿಸಿ ಹೆಣೆದು ಆಚಾರ್ಯರು ಸನಾತನ ಧರ್ಮದ ಗುರಿ, ದಾರಿ, ಒಂದೇ ಎಂದು ಸಾರಿ, ಸ್ಥಾಪಿಸಿದರು.

ತಮ್ಮ ನಿಲುವನ್ನು ಸಮರ್ಥಿಸುವುದರಲ್ಲಿ ಆಚಾರ್ಯರು ಅದ್ವೈತ ಸಿದ್ಧಾಂತದ ಹಲವು ವಿವರ ತಪ್ಪು ಎಂದದ್ದು ಅನಿವಾರ್ಯವಾಯಿತು. ಆದರೆ ಎಲ್ಲೆಡೆಯಲ್ಲೂ ಅವರ ಉದ್ದೇಶ ತಾವು ಕಂಡ ಸತ್ಯದ ಸಾಧನೆ. ಇತರರ ದೋಷದ ಉದ್ಘಾಟನ ಅಲ್ಲ.

ಆಚಾರ್ಯರು ಯಾಮುನರ ದೃಷ್ಟಿಗೆ ಬಂದವೇಳೆ ದೇವಾಲಯಕ್ಕೆ ಅಭಿಷೇಕದ ನೀರನ್ನು ಹೊರುವ ಕಾಯಕದಿಂದ ಜೀವನ ನಡೆಸುವ ಗೃಹಸ್ಥನಾಗಿ ವೇದಾ೦ತ ವಿದ್ಯಾರ್ಜನೆಯಲ್ಲಿ ತೊಡಗಿದ್ದರು ಎಂದು ಹೇಳಿದೆ. ನೀರು ಹೊರುವ ಕಾರ್ಯ ನೀಚ ಎಂದು ಇಂದಿನ ನಮಗೆ ಕಾಣಬಹುದು. ಪ್ರಾಯಃ ಇದು ಅವಿದ್ಯಾವಂತರು ಮಾಡುವ ಸೇವೆ ಎಂದು ನಮ್ಮ ಭಾವನೆ.

ಅಂದಿನ ದಿನದಲ್ಲಿ ಹೀಗಿತ್ತು ಎಂದು ನಾವು ತಿಳಿಯಬಾರದು. ದೈವ ಸನ್ನಿಧಿಗೆ ನೀರು ಹೊರುವುದು ಒಂದು ಗೌರವ. ಇದನ್ನು ಮಾಡುವವನು ಪಂಡಿತನೇ ಆಗಿರಬಹುದು. ಆಚಾರ್ಯರು ಪಂಡಿತರೇ ಆಗಿದ್ದರು. ಆಗ ಏನು ಅವರಿಗೆ ನಲವತ್ತು ವರ್ಷ ವಯಸ್ಸಾಗಿರಬಹುದು.

ನಾಲ್ಕಾರು ವರುಷದನಂತರ ಅವರು ಶ್ರೀರಂಗದಲ್ಲಿ ಹಿರಿಯರಾಗಿ ನಿಂತರು. ವೈಷ್ಣವ ಸಿದ್ಧಾಂತವನ್ನು ಪೂರ್ಣ ಪಾಠಮಾಡಿ ಭಾರತಯಾತ್ರೆ ನಡೆಸಿದರು. ಶ್ರೀಭಾಷ್ಯವನ್ನು ರಚಿಸಿದರು. ಈ ವೇಳೆಗೆ ಇವರಿಗೆ 65-70 ವರ್ಷ ಆಗಿರಬೇಕು. ಇಲ್ಲಿಂದ ಇಪ್ಪತ್ತು ವರ್ಷ ಇವರು ಹೊಯಿಸಳ ದೇಶದಲ್ಲಿ ಇರಬೇಕಾಯಿತು.

ಆಮೇಲೆ ಶ್ರೀರಂಗಕ್ಕೆ ಹಿಂದಿರುಗಿ ಇವರು ಸುಮಾರು ಮೂವತ್ತು ವರ್ಷ ಶ್ರೀವೈಷ್ಣವ ಸಮುದಾಯದ ಪ್ರಮುಖರಾಗಿ ರಂಗನಾಥನ ಸೇವೆ ಮಾಡುತ್ತ ಯತಿರಾಜ ಪದವಿಯಲ್ಲಿ ಸುಖವಾಗಿದ್ದರು. ಇವರ ಜೀವನದ ವೈಭವವನ್ನು ನೋಡಿದ ಹಿರಿಯರು ಇವರು ಲಕ್ಷ್ಮಣ ಬಲರಾಮರ ಈ ಯುಗದ ಅವತಾರವೆಂದು ನೆನೆದರು.

ಇಷ್ಟನ್ನೆಲ್ಲಾ ಮಾಡಿ ಕೃತಕೃತ್ಯರಾದ ಈ ಮಹನೀಯರು ಕೊನೆಯ ದಿನಗಳಲ್ಲಿ ಎಂಥ ಚೇತನರಾಗಿದ್ದರೆಂಬುದನ್ನು ತೋರಿಸುವ ಮೂರು ಸಂಗತಿಯನ್ನು ಈಗ ಹೇಳಬಹುದು.

ಆಚಾರ್ಯರು ಮುಪ್ಪಿನಲ್ಲೂ ಯತಿಧರ್ಮ ಪಾಲನಾರ್ಥವಾಗಿ ಪಾತ್ರೆ ಹಿಡಿದು ಭಿಕ್ಷಕ್ಕೆ ಹೋಗುತ್ತಿದ್ದರು. ಒಂದು ದಿನ ಇವರು ಹೀಗೆ ಹೊರಟಿರುವಾಗ ಬೀದಿಯಲ್ಲಿ ಆಡುತ್ತಿದ್ದ ಹುಡುಗರು ಕೆಲವರು, ”ಲೋ, ಈ ಸಂನ್ಯಾಸಿ ಬರುತ್ತಿದ್ದಾರೆ. ಇವರ ದೇವರ ಚಿತ್ರ ಬರೆಯಿರಿ. ಇವರಿಂದ ಅದಕ್ಕೆ ನಮಸ್ಕಾರ ಮಾಡಿಸೋಣ” ಎಂದು ಸಂಚು ಮಾಡಿಕೊಂಡರು.

ಇವರು ಬಳಿಗೆ ಬರುವ ವೇಳೆಗೆ ದಾರಿಯ ಮಣ್ಣಿನ ಮೇಲೆ ರಂಗನಾಥನ ಚಿತ್ರವನ್ನು ಬರೆದರು. ಸಂನ್ಯಾಸಿ ಹತ್ತಿರ ಬರುತ್ತಲೂ, ‘ಸ್ವಾಮಿ, ಇದೋ ನೋಡಿ, ನಿಮ್ಮ ದೇವರು ನಮಸ್ಕಾರ ಮಾಡಿ,” ಎಂದರು. ಆಚಾರ್ಯರು ಚಿತ್ರವನ್ನು ನೋಡಿದರು. ಅದು ರಂಗನಾಥನ ಚಿತ್ರ. “ಹೌದಲ್ಲ” ಎಂದು ಅವರು ಉತ್ತರೀಯವನ್ನು ಸೊ೦ಟಕ್ಕೆ ಕಟ್ಟಿ ದೇವಾಲಯದಲ್ಲಿ ಮೂರ್ತಿಗೆ ಮಾಡುವಂತೆ ದಂಡಪ್ರಣಾಮ ಮಾಡಿದರು.

ಎದ್ದು ಪಾತ್ರೆ ಹಿಡಿದು ಮುಂದೆ ನಡೆದರು. ಒಳ್ಳೆಯ ಸಂಗತಿಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಅಡಲು ಅವರ ಚೇತನ ಸಿದ್ಧವಾಗಿತ್ತು.

ಆಚಾರ್ಯರು ದಿನವೂ ಕಾವೇರಿಯಲ್ಲಿ ಸ್ನಾನಮಾಡಿ ಆಹ್ನಿಕ ಮುಗಿಸಿ ದೇವಾಲಯಕ್ಕೆ ಬರುತ್ತಿದ್ದರು. ಹೋಗುತ್ತಾ ಬ್ರಾಹ್ಮಣ ಶಿಷ್ಯ ಒಬ್ಬನ ಭುಜದ ಮೇಲೆ ಕೈಯಿಟ್ಟು ನಡೆಯುವರು; ಸ್ನಾನಮುಗಿದು ಹಿಂದಿರುಗುತ್ತಾ ದ್ವಿಜನಲ್ಲದ ಧನುರ್ದಾಸನ ಭುಜದ ಮೇಲೆ ಭಾರಹಾಕಿ ನಡೆಯುವರು; ಅವನು ಇವರ ಪರಮ ಪ್ರಿಯಶಿಷ್ಯನಾಗಿದ್ದನು. ಸ್ನಾನಕ್ಕೆ ಮುನ್ನ ಬ್ರಾಹ್ಮಣ, ಸ್ನಾನ ಆದಮೇಲೆ ಇವನು.

ಹೀಗೆ ಮಾಡುತ್ತಿದ್ದೀರಲ್ಲಾ ಎಂದು ಯಾರೋ ಆಚಾರ್ಯರನ್ನು ಕೇಳಿದರಂತೆ. ಆಚಾರ್ಯರು. “ಇವನು ಜನ್ಮತಃ ಕಡಮೆ ಇರಬಹುದು; ಇವನ ಚೇತನ ಬಹು ಶುದ್ಧ” ಎಂದರು. ಇದು ಕೊನೆಯವರೆಗೂ ನಡೆಯಿತು. ಜಾತಿ ಅಲ್ಲ, ಒಳ್ಳೆಯತನ ಮುಖ್ಯ ಎಂಬುದನ್ನು ತಮ್ಮ ದಿನ ದಿನದ ಬಾಳುವೆಯಲ್ಲಿ ತೋರಿಸಿ ಆಚಾರ್ಯರು ವೈಷ್ಣವ ಸಮುದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರು.

ಆಚಾರ್ಯರು ದಿನ ತಪ್ಪದೆ ದೇವಾಲಯದಲ್ಲಿ ಪೂಜೆಯ ವೇಳೆ ಗೋಷ್ಠಿಯ ತಲೆಯಲ್ಲಿ ನಿಂತಿರುವರು. ಪೂಜೆ ಮುಗಿದ ಮೇಲೆ ಭಟ್ಟರು ಅವರಿಗೆ ಮೊದಲ ತೀರ್ಥವನ್ನು ಸಲ್ಲಿಸಿ ಆಮೇಲೆ ಉಳಿದವರಿಗೆ ತೀರ್ಥ ಕೊಡುವರು. ಒಮ್ಮೆ ಇವರ ಬಳಿಗೆ ಒಬ್ಬ ಪಂಡಿತರು ಬಂದರು.

ಮಠದಲ್ಲಿ ಗುರುಗಳೊಂದಿಗೆ ಮಾತನಾಡುತ್ತಿದ್ದು ಅವರೊಡನೆ ದೇವಾಲಯಕ್ಕೆ ಹೋದರು. ಅಲ್ಲಿ ಗುರುಗಳ ಪಕ್ಕದಲ್ಲೇ ನಿಂತಿದ್ದರೂ ಈತನಿಗೆ ಗುರುಗಳಿಗೆ ತೀರ್ಥವಾದೊಡನೆ ತೀರ್ಥ ದೊರೆಯಲಿಲ್ಲ. ಈತ ಆಮೇಲೆ ಗುರು ಸನ್ನಿಧಿಯಲ್ಲಿ ರಹಸ್ಯವಾಗಿ, ‘ನಾನು ಪಂಡಿತ ಎಂದು ಸನ್ನಿಧಾನ ಒಪ್ಪಿದೀರಿ; ಗೋಷ್ಠಿಯಲ್ಲಿ ತಮಗೆ ತೀರ್ಥವಾದೊಡನೆ ನನಗೆ ತೀರ್ಥ ಕೊಡುವಂತೆ ಅಪ್ಪಣೆ ಮಾಡಿದರೆ ನನಗೆ ಒಂದು ಗೌರವ ಆಗುತ್ತದೆ” ಎಂದರು.

ಮಾರನೆಯ ದಿನ ಆಲಯಕ್ಕೆ ಹೋದಾಗ ಒಬ್ಬತಿಷ್ಯನ ಮೂಲಕ ಭಟ್ಟರಿಗೆ ಏನನ್ನೋ ಹೇಳಿ ಕಳುಹಿಸಿದರು. ಗೋಷ್ಠಿಯಲ್ಲಿ ಇವರು ಎಂದಿನಂತೆ ನಿಂತಿದ್ದಾರೆ. ಪಕ್ಕದಲ್ಲಿ ಪಂಡಿತರು, ಆಚಾರ್ಯರಿಗೆ ಮೊದಲ ತೀರ್ಥ ತನಗೆ ಎರಡನೆಯ ತೀರ್ಥ ಎಂದು ಅವರು ನಿರೀಕ್ಷಿಸುತ್ತಿದ್ದಾರೆ. ತೀರ್ಥದ ಪಾತ್ರೆಯೊಡನೆ ಭಟ್ಟರು ಬಂದರು.

ಆಚಾರ್ಯರಿಗೆ ಮೊದಲ ತೀರ್ಥ ಕೊಡಲಿಲ್ಲ. ಬೇರೆ ಯಾರಿಗೋ ಕೊಟ್ಟರು; ಹಾಗೆಯೇ ಇತರರಿಗೆ ಕೊಡುತ್ತಾ ಹೋದರು. ಎಲ್ಲರನ್ನೂ ಮುಗಿಸಿ ಆಚಾರ್ಯರ ಬಳಿ ಬಂದು, ಅವರಿಗೆ, ಅವರ ನಂತರ ಪಂಡಿತರಿಗೆ, ತೀರ್ಥ ಕೊಟ್ಟರು. ಪಂಡಿತರು ಮೊದಲ ಕ್ಷಣ, ಭಟ್ಟರು ಏನೋ ತಪ್ಪು ಮಾಡಿದರು ಎಂದು ತಿಳಿದುಕೊಂಡರು.

ಆತ ಕೊನೆಯಲ್ಲಿ ತಮ್ಮ ಬಳಿ ಬರುವ ವೇಳೆಗೆ ಇದು ಆಚಾರ್ಯರ ಅಪ್ಪಣೆಯಂತೆ ನಡೆದಿದೆ ಎಂದು ಗ್ರಹಿಸಿದರು. “ಗೋಷ್ಠಿಯಲ್ಲಿ ಶ್ರೇಷ್ಠತೆಯನ್ನು ಬಯಸಿದ್ದು ತಪ್ಪಾಯಿತು, ಮನ್ನಿಸಬೇಕು,” ಎಂದು ಗುರುವನ್ನು ಬೇಡಿದರು. ಆಚಾರ್ಯರು, ‘ಇದು ಯಾರಿಗೂ ಸಹಜ.ವೈಷ್ಣವನಾದವನು ಯೋಚನೆ ಮಾಡಿ ಮನಸ್ಸನ್ನು ತಿದ್ದಿಕೊಳ್ಳಬೇಕು ಅಷ್ಟೇ,” ಎಂದು ಅವರಿಗೆ ಸಮಾಧಾನ ಹೇಳಿದರು.

ಲೋಕಜೀವನದಲ್ಲಿ ಧರ್ಮಕ್ಕೆ ಇನ್ನೂ ಸರಿಯಾದ ಸ್ಥಾನ ದೊರೆತಿಲ್ಲ. ಅದು ದೊರೆತ ಕಾಲಕ್ಕೆ ಸನಾತನ ಧರ್ಮದ ಅವತಾರ ಪುರುಷರು, ಆಚಾರ್ಯ ಪುರುಷರು, ಲೋಕಸಂಗ್ರಹಕ್ಕಾಗಿ ಎಂತಹ ಮಹಾತ್ಕಾರ್ಯ ಮಾಡಿದ್ದಾರೆ ಎನ್ನುವುದು ಜನಾಂಗಗಳಿಗೆ ಮನಮುಟ್ಟುತ್ತದೆ. ಆಗ್ಗೆ ಸರ್ವಮಾನವ ಲೋಕದಿಂದ ಪೂಜೆ ಪಡೆಯುವ ಮಹನೀಯ ಮೂರ್ತಿಗಳ ಪಂಕ್ತಿಯಲ್ಲಿ ಶ್ರೀ ರಾಮಾನುಜಾಚಾರ್ಯರ ಮೂರ್ತಿ ಸೇರಿರುತ್ತದೆ.

ರಾಮಾನುಜಾಚಾರ್ಯರು ತಮ್ಮ ಸುದೀರ್ಘ ಜೀವನ ಕಾಲದಲ್ಲಿ ಸಲ್ಲಿಸಿದ ಸೇವೆಯ ವಿವರ ಹೀಗಿದೆ:

  • ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಆಧಾರಸ್ತಂಭವಾಗಿ ತಮ್ಮ ಶ್ರೀಭಾಷ್ಯವನ್ನು ರಚಿಸಿದ್ದು.
  • ಶ್ರೀವೈಷ್ಣವ ಸಮುದಾಯವನ್ನು ಸಂಘಟಿಸಿ ಅದಕ್ಕೆ ಶ್ರೀರಂಗವನ್ನು ಕೇಂದ್ರವಾಗಿ ಸ್ಥಾಪಿಸಿದ್ದು.
  • ಮನುಷ್ಯನ ಉಪಾಸನೆಯ ವಸ್ತುವಾದ ದೈವ ಪರಬ್ರಹ್ಮಕ್ಕಿಂತ ಕಡಮೆಯಾದ ಒಂದು ವಸ್ತು ಅಲ್ಲ. ಅದು ಪರಬ್ರಹ್ಮ ಎಂದು ಪ್ರಚಾರ ಮಾಡಿದ್ದು.
  • ಪೂರ್ವದಿಂದ ನಡೆದು ಬಂದ ದೇವಾಲಯಗಳಲ್ಲಿ ಈ ಪರತತ್ತ್ವದ ಪೂಜೆಗೆ ಒಂದು ನಿಷ್ಕೃಷ್ಟ ಆಕಾರವನ್ನು ಕೊಟ್ಟದ್ದು.
  • ಪೂರ್ವದ ದೇವಾಲಯಗಳನ್ನು ಜೀರ್ಣೋದ್ಧಾರಮಾಡಿ ಹೊಸ ದೇವಾಲಯಗಳನ್ನು ನಿರ್ಮಿಸಿದ್ದು.
  • ಲೋಕೋದ್ಧಾರಕವಾದ ತಮ್ಮ ಮತ ಸರಿ ಎಂದು ಅನೇಕ ಸಭೆಗಳಲ್ಲಿ ಪ್ರತಿವಾದಿಗಳಿಗೆ ವೈಷ್ಣವ ದೀಕ್ಷೆಯನ್ನು ಕೊಟ್ಟು ಸದ್ಧರ್ಮದ ಪ್ರಚಾರಕ್ಕೆ ಅವರ ಬೆಂಬಲವನ್ನು ಗಳಿಸಿದ್ದು.
  •  ಸಮಾಜ ಜೀವನದಲ್ಲಿ ಜಾತಿಯ ಮಾತನ್ನು ಅತಿಗೆ ಒಯ್ಯಬಾರದು ಎಂದು ತಿಳುವಳಿಕೆಯನ್ನು ಹರಡಿದ್ದು.
  • ಆರ್ಯ ಸಮುದಾಯಕ್ಕೆ ಸೇರಿದ ಕಾರಣ ಅದರ ದೇವಾಲಯಗಳೊಳಗೆ ಬರಲು ಅಧಿಕಾರ ಇಲ್ಲದೆ ಇದ್ದ ಪಂಚಮರಿಗೆ ನಿರ್ದಿಷ್ಟ ದಿನಗಳಲ್ಲಿ ದೇವಾಲಯ ಪ್ರವೇಶ ಇರಲಿ ಎಂದು ನಿಯಮಿಸಿದ್ದು.
  • ತಮ್ಮ ಮತವನ್ನು ಸರಿಯಾಗಿ ತಿಳಿದು ಪ್ರಸಾರಮಾಡುವ ಹೊಣೆ ಇಂಥವರಿಗೆ ಇರಲಿ ಎಂದು ಗುರುಪೀಠಗಳನ್ನು ಸ್ಥಾಪಿಸಿದ್ದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi