ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ಪಶ್ಚಿಮ ಬಂಗಾಳದ ನಡಿಯ ಜಿಲ್ಲೆಯಲ್ಲಿ 1674ರಲ್ಲಿ ಜನಿಸಿದರು. ಅವರಿಗೆ ಶ್ರೀ ರಾಮಭದ್ರ ಚಕ್ರವರ್ತಿ ಮತ್ತು ಶ್ರೀ ರಘುನಾಥ ಚಕ್ರವರ್ತಿಯೆಂಬ ಇಬ್ಬರು ಸಹೋದರರಿದ್ದರು. ವಿಶ್ವನಾಥರು ಶ್ರೀಕೃಷ್ಣಚರಣ ಚಕ್ರವರ್ತಿಗಳಿಂದ ಉಪದೇಶ ಪಡೆದರು. ಶ್ರೀಕೃಷ್ಣಚರಣ ಚಕ್ರವರ್ತಿಯವರ ಮನೆಯಲ್ಲೇ ಬಹುಕಾಲ ಇದ್ದುಕೊಂಡು ಹಲವಾರು ಪುಸ್ತಕಗಳನ್ನು ರಚಿಸಿದರು.

ನಡಿಯದಲ್ಲಿ ವಿಶ್ವನಾಥರು ಗ್ರಂಥಗಳು ಮತ್ತು ಸಂಸ್ಕೃತ ವ್ಯಾಕರಣ, ಕಾವ್ಯ ಮತ್ತು ಅಲಂಕಾರಶಾಸ್ತ್ರದ ಬಗ್ಗೆ ಅಭ್ಯಾಸ ಮಾಡಿದರು. ಶಾಲೆಯ ಬಾಲಕನಾಗಿದ್ದರೂ ಅವರು ಯಾವುದೇ ತರ್ಕ ಅಥವಾ ವಾದಗಳಲ್ಲಿ ಸುಲಭವಾಗಿ ಸೋಲಿಸಬಲ್ಲ ಅದಮ್ಯ ಪಂಡಿತರಾಗಿದ್ದರು.
ಅವರು ಕೌಟುಂಬಿಕ ಜೀವನದಲ್ಲಿ ನಿರಾಸಕ್ತರಾಗಿದ್ದರೂ ತಮ್ಮ ತಂದೆಯವರ ಕೋರಿಕೆಯ ಮೇರೆಗೆ ಎಳೆಯ ವಯಸ್ಸಿನಲ್ಲಿಯೇ ಮದುವೆಯಾದರು. ಮದುವೆ ಆದರೂ ಅವರು ಕೆಲವೇ ಕಾಲದ ನಂತರ ಹೆಂಡತಿಯನ್ನು ತ್ಯಜಿಸಿ ಮನೆಯನ್ನು ಬಿಟ್ಟು ವೃಂದಾವನವನ್ನು ಸೇರಿದರು.
ಅವರ ಕುಟುಂಬ ಮತ್ತು ಸ್ನೇಹಿತರು ವಿಶ್ವನಾಥರನ್ನು ವಾಪಸ್ಸು ಮನೆಗೆ ತರಲು ಬಹಳಷ್ಟು ಬಾರಿ ಪ್ರಯತ್ನಿಸಿದರೂ ಪ್ರಭುವಿನ ಪಾರಮಾರ್ಥಿಕ ಧಾಮದಲ್ಲಿ ಕೃಷ್ಣನ ಸೇವೆಯಲ್ಲಿ ತೊಡಗುವ ನಿರ್ಧಾರದಲ್ಲಿ ಶ್ರೀ ವಿಶ್ವನಾಥರು ಅಚಲರಾಗಿದ್ದರು.
ವೃಂದಾನದಲಿ ರಾಧಾಕುಂಡವೆಂದು ಹೆಸರಾದ ಪವಿತ್ರ ಸರೋವರದ ತಟದಲ್ಲಿರುವ ಕೃಷ್ಣದಾಸ ಗೋಸ್ವಾಮಿಗಳ ಭಜನ ಕುಟೀರದಲ್ಲಿ ವಾಸಿಸತೊಡಗಿದರು. ಕೃಷ್ಣದಾಸರ ಶಿಷ್ಯರಲ್ಲಿ ಒಬ್ಬರಾದ ಮುಕುಂದ ದಾಸರ ಜೊತೆ ಅಲ್ಲಿ ವಾಸವಾಗಿ ವಿಶ್ವನಾಥರು ರೂಪಗೋಸ್ವಾಮಿ, ಸನಾತನ ಗೋಸ್ವಾಮಿ ಮತ್ತಿತರ ಗೋಸ್ವಾಮಿಗಳ ಪುಸ್ತಕಗಳನ್ನು ಶ್ರದ್ಧೆಯಿಂದ ಓದಿದರು. ಮತ್ತು ಅನಂತರ ಗೋಸ್ವಾಮಿಗಳ ಪುಸ್ತಕಗಳ ಬಗ್ಗೆ ವ್ಯಾಖ್ಯಾನಗಳನ್ನು ಬರೆದರು.

ಶ್ರೀಲ ವಿಶ್ವನಾಥ ಚಕ್ರವರ್ತಿಯವರು ಶ್ರೀಮದ್ ಭಾಗವತಮ್ ಮತ್ತು ಭಗವದ್ಗೀತೆಯ ಮೇಲೆ ಪ್ರಮುಖ ವ್ಯಾಖ್ಯಾನವನ್ನು ಬರೆದರು. ಶ್ರೀಲ ಪ್ರಭುಪಾದರು ತಮ್ಮದೇ ವ್ಯಾಖ್ಯಾನಗಳಲ್ಲಿ ಸಾಕಷ್ಟು ಬಾರಿ ವಿಶ್ವನಾಥರ ವ್ಯಾಖ್ಯಾನಗಳನ್ನು ಉಲ್ಲೇಖಿಸುತ್ತಿದ್ದರು.
“ಶಿಷ್ಯನು ಆಧ್ಯಾತ್ಮ ಗುರುವಿನ ಆದೇಶವನ್ನು ತನ್ನ ಜೀವನಕ್ಕಿಂತ ಹೆಚ್ಚೆಂದು ಒಪ್ಪಿಕೊಳ್ಳಬೇಕು” ಎಂದು ಹೇಳಿರುವ ಭಗವದ್ಗೀತೆಯ 2.41ರ ವ್ಯಾಖ್ಯಾನದಿಂದ ತಮ್ಮ ಆಧ್ಯಾತ್ಮಿಕ ಜೀವನವು ಪ್ರೇರೇಪಿತವಾಯಿತೆಂದು ಶ್ರೀಲ ಪ್ರಭುಪಾದರು ಬಹಳಷ್ಟು ಬಾರಿ ಹೇಳಿದ್ದಾರೆ.
ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು “ಶ್ರೀ ಗುರ್ವಾಷ್ಟಕಂ” (ಗುರುವಿನ ಮಹಿಮೆಗಳ ಪ್ರಶಂಸೆ) ಎಂಬ ಪ್ರಾರ್ಥನೆಯ ರೂಪದಲ್ಲಿರುವ ಕಾವ್ಯದ ಲೇಖಕರಾಗಿದ್ದಾರೆ. ಶ್ರೀಲ ಪ್ರಭುಪಾದರ ಆದೇಶದ ಮೇರೆಗೆ ಎಲ್ಲ ಇಸ್ಕಾನ್ ದೇವಾಲಯಗಳಲ್ಲಿ ಭಕ್ತರು ಪ್ರತಿದಿನ ಬೆಳಗ್ಗೆ ದಿನದ ಮೊದಲ ಪೂಜೆಯ ಮಂಗಳಾರತಿಯ ಸಮಯದಲ್ಲಿ ಈ ಪ್ರಾರ್ಥನೆಗಳನ್ನು ಹಾಡುತ್ತಾರೆ.
ಶ್ರೀಲ ವಿಶ್ವನಾಥ ಚಕ್ರವರ್ತಿಯವರ ಅತ್ಯಂತ ಖ್ಯಾತ ಶಿಷ್ಯರೆಂದರೆ ಶ್ರೀಲ ಬಲದೇವ ವಿದ್ಯಾಭೂಷಣರು. ಜೈಪುರದ ಬ್ರಾಹ್ಮಣ ಪಂಡಿತರು ಪ್ರಭು ಚೈತನ್ಯರ ಆಂದೋಲನದ ಸಿಂಧುತ್ವದ ಬಗ್ಗೆ ಸವಾಲೆಸೆದಾಗ ಆ ಸಮಯದಲ್ಲಿ ಪ್ರಭು ಚೈತನ್ಯರ ಅನುಯಾಯಿಗಳ ನಾಯಕರಾದ ವಿಶ್ವನಾಥರು ತುಂಬ ವೃದ್ಧರಾಗಿದ್ದು ಪ್ರಯಾಣ ಮಾಡಿ, ಸವಾಲುಗಾರೊಂದಿಗೆ ಚರ್ಚೆ ನಡೆಸಲು ಅಸಮರ್ಥರಾಗಿದ್ದಾಗ ಅವರ ಸ್ಥಾನದಲ್ಲಿ ಬಲದೇವರನ್ನು ಕಳುಹಿಸಿದರು.
ಪ್ರಭುಕೃಷ್ಣನ ಆಜ್ಞೆಯ ಮೇರೆಗೆ ಬಲದೇವರು ವೇದಾಂತ ಸೂತ್ರದ ಮೇಲೆ ಗೋವಿಂದ ಭಾಷ್ಯ ವ್ಯಾಖ್ಯಾನವನ್ನು ಬರೆದರು ಮತ್ತು ಸಂಶಯವಾದಿಗಳನ್ನು ಸೋಲಿಸಿದರು.






Leave a Reply