ಶ್ರೀಲ ಬಲದೇವ ವಿದ್ಯಾಭೂಷಣ

ಶ್ರೀಲ ಬಲದೇವ ವಿದ್ಯಾಭೂಷಣರು ಏಳನೇ ಶತಮಾನದ ಅಂತ್ಯ ಅಥವಾ ಎಂಟನೇ ಶತಮಾನದ ಆರಂಭದಲ್ಲಿ (ಹುಟ್ಟಿದ ದಿನ ಜೂನ್‌ 8) ಒರಿಸ್ಸಾದಲ್ಲಿ ಜನಿಸಿದರು. ಚಿಕ್ಕ ವಯಸ್ಸಿಗೇ ಸಂಸ್ಕೃತ, ವ್ಯಾಕರಣ, ಕಾವ್ಯ, ತರ್ಕಶಾಸ್ತ್ರಗಳನ್ನು ಅಭ್ಯಾಸ ಮಾಡಿದರು. ನಂತರ ಅವರು ಅಲ್ಪಕಾಲದಲ್ಲೇ ಭಾರತದ ಉದ್ದಗಲಕ್ಕೂ ಸಂಚರಿಸಿದರು.

ಹೀಗೆ ದೇಶ ಪರ್ಯಟನೆ ಮಾಡುವಾಗ ಅವರಿಗೆ ಶ್ರೀ ಮಧ್ವಾಚಾರ್ಯರ ಅನುಯಾಯಿಗಳ ಪರಿಚಯವಾಯಿತು. ಆ ಮೂಲಕ ಅವರಿಗೆ ಮಾಧ್ವ ಸಿದ್ಧಾಂತದಲ್ಲಿ ಆಸಕ್ತಿ ಮೂಡಿತು. ಬಳಿಕ ಅವರು ಮಾಧ್ವರ ಬೋಧನೆಗಳ ಅಧ್ಯಯನದಲ್ಲಿ ತೊಡಗಿದರು. ಮಾಧ್ವ ಸಿದ್ಧಾಂತದ ಸಮಗ್ರ ಅಧ್ಯಯನದ ಬಳಿಕ ಬಲದೇವರು, ಸಂನ್ಯಾಸ ಸ್ವೀಕರಿಸಿದರು.

ನಂತರದ ಬದುಕನ್ನು ಸಂಪೂರ್ಣವಾಗಿ ದೇಶ ಸಂಚಾರ ಮತ್ತು ಮಾಧ್ವ ಸಿದ್ಧಾಂತ ಪ್ರಚಾರಕ್ಕೆ ಮೀಸಲಿಟ್ಟರು. ಕೆಲವು ವರ್ಷಗಳ ಬಳಿಕ ಬಲದೇವರಿಗೆ ಜಗನ್ನಾಥ ಪುರಿಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಅನುಯಾಯಿಗಳ ಪರಿಚಯವಾಯಿತು. ಆಗ ಶ್ರೀ ಚೈತನ್ಯರ ಬೋಧನೆಗಳನ್ನು ಅಧ್ಯಯನ ಮಾಡಿದ ಬಲದೇವರು, ನಂತರ ಅವರ ಕಟ್ಟಾ ಅನುಯಾಯಿಗಳಾದರು. ಅಲ್ಪ ಕಾಲದಲ್ಲೇ ಶ್ರೀ ಚೈತನ್ಯ ಸಿದ್ಧಾಂತದಲ್ಲಿ ಪಾಂಡಿತ್ಯ ಗಳಿಸಿದ ಅವರು, ಗೌಡೀಯ ವೈಷ್ಣವ ಪಂಥದ ಪ್ರಮುಖ ಗುರುಗಳೆನಿಸಿಕೊಂಡರು.

ಬಳಿಕ ವೃಂದಾವನಕ್ಕೆ ತೆರಳಿದ ಬಲದೇವರು, ಅಲ್ಲಿ ವಿಶ್ವನಾಥ ಚಕ್ರವರ್ತಿ ಠಾಕುರ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದರು. ವಿಶ್ವನಾಥರು ಆ ಕಾಲದಲ್ಲಿ ಗೌಡೀಯ ವೈಷ್ಣವ ಪಂಥದ ಪ್ರಮುಖ ಆಚಾರ್ಯರಾಗಿದ್ದರು. ಅದೇ ಸಂದರ್ಭದಲ್ಲಿ ಗೌಡೀಯ ವೈಷ್ಣವ ಪಂಥದ ನೈಜತೆ ಕುರಿತು ಜೈಪುರದಲ್ಲಿ ವಿವಾದ ಏರ್ಪಟ್ಟಿತ್ತು.

ನಗರದಲ್ಲಿರುವ ಹೆಸರಾಂತ ಗೋಪಿನಾಥ ಮತ್ತು ಗೋವಿಂದಜಿ ವಿಗ್ರಹಗಳನ್ನು ಪೂಜಿಸುವ ಅರ್ಹತೆ ಇರುವುದು ತಮಗೆ ಮಾತ್ರ. ಗೌಡೀಯ ವೈಷ್ಣವ ಪಂಥದವರಿಗೆ ಆ ಹಕ್ಕು ಇಲ್ಲ ಎಂದು ಅನ್ಯ ಪಂಥದ ಕೆಲವು ಆಚಾರ್ಯರು ಅಲ್ಲಿನ ರಾಜನ ಮನವೊಲಿಸಲು ಯತ್ನಿಸುತ್ತಿದ್ದರು. ಗೌಡೀಯ ಪಂಥದ ಅಸ್ತಿತ್ವವನ್ನೇ ಅವರು ಪ್ರಶ್ನಿಸಿದ್ದರು. ಗೌಡೀಯ ವೈಷ್ಣವರ ಬಳಿ “ವೇದಾಂತ ಸೂತ್ರ”ಕ್ಕೆ ಸೂಕ್ತ ಭಾಷ್ಯ ಇಲ್ಲವೆಂಬುದು ಅವರ ವಾದವಾಗಿತ್ತು. ಈ ವಿವಾದ ಬಗೆಹರಿಸಲು ವಿಶ್ವನಾಥ ಠಾಕುರರು ಬಲದೇವರನ್ನು ಕಳಿಸಿಕೊಟ್ಟರು.

ತಕ್ಷಣ ಜೈಪುರಕ್ಕೆ ತೆರಳಿದ ಬಲದೇವರು, ಈ ವಿವಾದವನ್ನು ಬಹಳ ಸರಳವಾಗಿ ಬಗೆಹರಿಸಿದರು. ಗೋವಿಂದಜೀ ವಿಗ್ರಹವೇ ಇವರಿಂದ “ಗೋವಿಂದ ಭಾಷ್ಯ”ವನ್ನು ಬರೆಯಿಸಿತು! ಬಲದೇವರ ಭಕ್ತಿಯ ಸಾಮರ್ಥ್ಯ ಅಂಥದ್ದಾಗಿತ್ತು. ಇದರೊಂದಿಗೆ ಗೌಡೀಯ ಪಂಥದ ಅಸ್ತಿತ್ವದ ಪ್ರಶ್ನೆಯೂ ಬಗೆಹರಿಯಿತು.

ವಿಶ್ವನಾಥ ಚಕ್ರವರ್ತಿ ಠಾಕುರರು ಕಾಲವಾದ ಬಳಿಕ ಬಲದೇವರೇ ಗೌಡೀಯ ವೈಷ್ಣವ ಪಂಥದ ಮುಂದಾಳುವಾದರು. ಚೈತನ್ಯರ ಉಪದೇಶ ಆಧರಿಸಿ ಹಲವಾರು ಗ್ರಂಥಗಳನ್ನು ರಚಿಸಿದರು. 1768ರಲ್ಲಿ ಅವರು ಇಹಲೋಕ ತ್ಯಜಿಸಿ ಕೃಷ್ಣಲೋಕ ಸೇರಿದರು. ಬಲದೇವರನ್ನು ಇಂದಿಗೂ ಚೈತನ್ಯ ಪಂಥದ ಪ್ರಮುಖ ಆಚಾರ್ಯರಲ್ಲಿ ಒಬ್ಬರೆಂದು ಗೌರವಿಸಲಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi