ಸ್ವಲ್ಪ ಬಾಗಿದ ಬೆನ್ನು, ಕೃಶವಾದ ಶರೀರ.ವ್ರಜ ಪ್ರದೇಶದ ಹಳ್ಳಿಗಳಲ್ಲಿ ತಿರುಗಾಡುತ್ತಾ, ‘ಮಧುಕರ’ ವೃತ್ತಿಯ ಪರಿಪಾಲನೆ ಸದಾ ಸರ್ವದಾ ಭಗವನ್ನಾಮದ ಸ್ಮರಣೆ, ಅನೃತ ವಾಡದ, ವ್ರತ. ಪ್ರಿಯ ಮಧುರ ವಚನ. ನಿತ್ಯ ಪರಿವ್ರಾಜಕನಾಗಿ ಭಗವಂತನ ದಿವ್ಯ ಲೀಲೆಗಳನ್ನು ಮೆಲಕು ಹಾಕುತ್ತಾ, ನೈಜ ಮಂಡಲದಲ್ಲಿ ಪರಿಭ್ರಮಣ.

ರಾತ್ರಿಯಾದರೆ, ಯಾವುದೋ ಮರದ ಕೆಳಗೆ ನಿದ್ರೆ. ತರಗೆಲೆಗಳ ಸುಪ್ಪತ್ತಿಗೆ. ತನ್ನ ಸುತ್ತಲಿನ ನದಿ, ನೀರು, ಗಿಡ, ಮರ, ಹಣ್ಣು ಹಕ್ಕಿ-ಪಕ್ಷಿ, ಜನ ಎಲ್ಲವೂ ಎಲ್ಲವನ್ನು ವ್ರಜ ಮಂಡಲಾಧಿಪತಿ ಶ್ರೀಕೃಷ್ಣನಿಗೆ ನೀಡುವ ಮನೋ ಸಂಕಲ್ಪ. ಅದರಂತೆ ಜೀವನ ಹೀಗೆ ಎರಡು ದಶಕಗಳ ತಪಸ್ಸು. ಅನಂತರ ನವದ್ವೀಪಕ್ಕೆ ಪ್ರಯಾಣ.
ನವ ದ್ವೀಪದ ನಿತ್ಯ ದಿನಚರಿಯಲ್ಲಿ ಬೇರಾವ ಏರ್ಪಾಡೂ ಇಲ್ಲ. ವ್ರಜ ಮಂಡಲದ ಹಳ್ಳಿಗೂ, ನವದ್ವೀಪದ ಹಳ್ಳಿಗೂ ಏನೇನೂ ವ್ಯತ್ಯಾಸ ಕಾಣಲೇ ಇಲ್ಲ. ಅದೇ ನಾಮೋಚ್ಚಾರಣೆಯ ವ್ರತ. ತನಗಾಗಿ ಏನೇನೂ ಸಂಗ್ರಹಿಸದ ಬಾಬಾಜಿ. ಬರೀ ಎರಡು ತುಳಸೀ ಮಣಿಗಳು. ಕುತ್ತಿಗೆಗೆ ಒಂದು. ಕೈನಲ್ಲಿ ಜಪಕ್ಕಾಗಿ ಇನ್ನೊಂದು. ಭಿಕ್ಷಾಟನೆಯಲ್ಲಿ ಅನ್ನ ಸಿಗದೇ ಧಾನ್ಯ ದೊರೆತರೆ ವಿಷಾದವೇನಿಲ್ಲ.
ಒಡೆದ ಮಡಕೆಯ ಚೂರಲ್ಲಿಯೇ ಅನ್ನ ಬೇಯಿಸಿ ಭಗವದರ್ಪಣೆಯನಂತರ, ಸೇವನೆ. ಗಂಗಾತೀರದಲ್ಲಿ ಭಗವದುನ್ಮಾದದಿಂದ ನರ್ತನ. ಇಲ್ಲವೆ ನೆಲದ ಮೇಲೆ, ಭಗವದಾನಂದದಲ್ಲಿ ತೇಲುತ್ತಾ, ದೈಹಿಕ ಪ್ರಜ್ಞೆ ಮರೆತು ಉಳಿದ ಸಮಯ ಕಳೆದು ಬಿಡುವುದು. ಇಳಿಸಂಜೆಯಲ್ಲೋ, ಏರು ಮುಂಜಾವಿಗೋ, ಗ್ರಂಥಗಳ ಪಾರಾಯಣ.
ಸ್ವಂತದ್ದು ಏನೂ ಇಲ್ಲ! ಏನೇನೂ ಇಲ್ಲ!! ಎಲ್ಲ ಭಗವದರ್ಪಣ!!! 2 ತುಳಸೀ ಮಣಿ, ಮಂಕಾದ ಕಾಷಾಯ ವಸ್ತ್ರ. 3-4 ಗ್ರಂಥಗಳು ಸುತ್ತಿದ ಸಣ್ಣಗಂಟು. ಒಂದು ವ್ಯಾಘ್ರ ಚರ್ಮ, ಇನ್ನೊಂದು ಬನವಾಸಿ!
ಜನರು ಇವರ ಬಳಿಗೆ ಆಕರ್ಷಿತರಾಗಿ, ಬಂದು ಸೇರುತ್ತಿದ್ದರು. ಬಗೆ ಬಗೆಯಲ್ಲಿ ತಮ್ಮ ಸೇವೆ, ಆರೋಗಣೆಗಳಿಗೆ ಒಪ್ಪಿಕೊಳ್ಳಲು, ಬೇಡಿಕೊಳ್ಳುತ್ತಿದ್ದರಾದರು,ಇವರದು ದಿವ್ಯ ವೈರಾಗ್ಯ! ತನ್ನ ಸುತ್ತಲಿನ ಸಜ್ಜನರಿಗಾಗಲಿ, ದುರ್ಜನರಿಗಾಗಲಿ ಅವರದು ಪದ್ಮ ಪತ್ರದ ಜಲಬಿಂದುವಿನ ಸಂಪರ್ಕ.
ಶತ್ರುವಿಗಾಗಲಿ, ಮಿತ್ರನಿಗಾಗಲಿ, ಭಕ್ತನಿಗಾಗಲಿ-ಭೋಗಿಗಾಗಲಿ, ಭಾವುಕನಿಗಾಗಲಿ- ಅಭಾವುಕನಿಗಾಗಲಿ ಎಲ್ಲರೊಡನೆ ಒಂದೇ ಬಗೆಯ ನಿರ್ಲಪ್ತತೆ! ಬಾಬಾಜಿಯ ಜೀವನದ ನೈಜ ಶೈಲಿ.
ಇವರೇ, ಗೌಡೀಯ ವೈಷ್ಣವ ಪರಂಪರೆಯ ದೇದೀಪ್ಯ ವ್ಯಕ್ತಿ – ಶ್ರೀಲ ಗೌರ ಕಿಶೋರ ದಾಸ ಬಾಬಾಜಿ. 1838ರಲ್ಲಿ ಜನನ, ಮೂವತ್ತನೇ ವಯಸ್ಸಿನವರೆಗೂ, ಸಂಸಾರದ ಜೀವನ. ಸತಿಯ ಮರಣದೊಂದಿಗೆ, ಸಾಂಸಾರಿಕ ಜೀವನಕ್ಕೆ ತಿಲ ತರ್ಪಣ!
ಜೀವನೋದ್ದೇಶಕ್ಕಾಗಿದ್ದ ಕುಟುಂಬದ ವ್ಯಾಪಾರ-ವಹಿವಾಟಿಗೆ, ಕೊನೆ ಹಾಡಿ, ಹಿಡಿದ ಹಾದಿ ವೃಂದಾವನ. ಭಾಗವತ ದಾಸ ಬಾಬಾಜಿಯವರಿಂದ ಈ ವೈರಾಗಿಗೆ ಬಾಬಾಜಿಯ ದೀಕ್ಷೆ. ಬಾಬಾಜಿಯಾದ ಮೇಲೆ ವ್ರಜಮಂಡಲದಲ್ಲಿ ಆಧ್ಯಾತ್ಮಿಕ ಸಾಧನೆ. ಕೊನೆಯ ದಿನಗಳಿಗೆ ನವದ್ವೀಪಕ್ಕೆ ಪುನರಪಿ ಪ್ರಯಾಣ. ಬಾಬಾಜಿ ಎಂದರೆ, ಪರಿವ್ರಾಜಕರಾದ ಪೀಠ ರಹಿತ ಸಂನ್ಯಾಸಿ. ಆಧ್ಯಾತ್ಮಿಕ ಭಾಷೆಯಲ್ಲಿ ಸಂನ್ಯಾಸಿಯ ಅನಂತರದ ಉನ್ನತ ಸ್ಥಾನ.

ವೃಂದಾವನ, ನವ ದ್ವೀಪದಲ್ಲಿ ಮೇಲೆ ವರ್ಣಿಸಿದ ದಿನಚರಿ ಏರುಪೇರೇ ಇಲ್ಲ. ಆಗೊಮ್ಮೆ ಈಗೊಮ್ಮೆ ಗೋದ್ರುಮ ದ್ವೀಪ (ನವ ದ್ವೀಪಗಳಲ್ಲಿ ಒಂದು) ದಲ್ಲಿದ್ದ ಸ್ವಾನಂದ ಕುಂಜಕ್ಕೆ ಭೇಟಿ. ಅಲ್ಲಿ ಮತ್ತೊಬ್ಬ ಮಹಾನ್ ಭಕ್ತ ಶ್ರೀ ಭಕ್ತಿ ವಿನೋದ ಠಾಕುರ ಅವರು ನೀಡುತ್ತಿದ್ದ ಭಾಗವತ ಪ್ರವಚನದ ಶ್ರವಣ.
ಭಕ್ತಿ ವಿನೋದರೊಂದಿಗೆ ಭಗವತ್ ಸೇವೆಯ ಕುರಿತು ಜಿಜ್ಞಾಸೆ, ಭಕ್ತ ಗುಣಗಳ ಕುರಿತ ವಿಮರ್ಶೆ. ಒಮ್ಮೊಮ್ಮೆ ಶ್ರೀ ಭಕ್ತಿ ವಿನೋದರ ಮನೆಯಲ್ಲಿ ಇಬ್ಬರು ಭಕ್ತರ ಸತ್ಸಂಗೋತ್ಕರ್ಷ. ಶ್ರೀ ಗೌರ ಕಿಶೋರರ ನಿಷ್ಕಲ್ಮಷ ಹೃದಯ, ಸಾಧನ ಸಂಪದ್ಭರಿತ ಜೀವನವನ್ನು ಅರ್ಥ ಮಾಡಿಕೊಂಡ, ಶ್ರೀಲ ಭಕ್ತಿ ವಿನೋದರು, ಅತ್ಯುನ್ನತ ಸ್ಥಾನದಲ್ಲಿ ಈ ಮಹನೀಯರನ್ನು ಗೌರವಿಸುತ್ತಿದ್ದರು.
ಯಾವಾಗಲೂ, ಯಾರನ್ನೂ ಶಿಷ್ಯರಾಗಿ ಸ್ವೀಕರಿಸಲು, ನಿರಾಕರಿಸುತ್ತಿದ್ದ ಶ್ರೀಲ ಗೌರ ಕಿಶೋರ ದಾಸರು ಕ್ರಿ.ಶ. 1900ರಲ್ಲಿ ಭಕ್ತಿ ವಿನೋದರ ಮಗನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಬಿಮಲ ಪ್ರಸಾದನಾಗಿದ್ದ ಅವನನ್ನು ವರ್ಷಭಾನವಿ ದೇವದಾಯತ ದಾಸ ಎಂಬ ವೈಷ್ಣವ ಹೆಸರಿನಿಂದ ಕರೆದರು.
ತನ್ನ ಅಧ್ಯಾತ್ಮ ಗುರುವಾಗಿದ್ದ ಜಗನ್ನಾಥ ಬಾಬಾಜಿಯವರಿಂದ ಅವರಿಗೆ ದೀಕ್ಷೆ ಸಂದಾಯವಾಗಿತ್ತು. ಅನಂತರದಲ್ಲಿ ಶ್ರೀ ಭಕ್ತಿ ಸಿದ್ಧಾಂತ ಸರಸ್ವತೀ ಎಂಬ ಹೆಸರಿನಿಂದ ಲೋಕೋತ್ತರ ಪ್ರಸಿದ್ಧಿ ಪಡೆದು, 108 ಗೌಡೀಯ ಮಠ ಸ್ಥಾಪಿಸಿ, ಸನಾತನ ಧರ್ಮವನ್ನು ಉದ್ಧರಿಸಿದ ಕೀರ್ತಿಗೆ ಭಾಜನರಾದರು ಶ್ರೀ ವರ್ಷಭಾನವಿ ದೇವದಾಯತ ದಾಸರು.
ಶ್ರೀಲ ಗೌರ ಕಿಶೋರ ದಾಸರಿಗೆ ಅವರ ಎಪ್ಪತ್ತನೇ ವಯಸ್ಸಿಗೆ (1908ರ ಸುಮಾರು ದೃಷ್ಟಿ ಮಂದವಾಯಿತು. ಪ್ರಿಯ ಶಿಷ್ಯ ಭಕ್ತಿ ಸಿದ್ಧಾಂತರು ವೈದ್ಯೋಪಚಾರಕ್ಕಾಗಿ, ಮಾಡಿದ ಎಲ್ಲ ಮನವಿಯನ್ನು ನಿರ್ಲಕ್ಷಿಸಿದ, ಶ್ರೀಲ ಗೌರ ಕಿಶೋರ ದಾಸಬಾಬಾಜಿ, ಇನ್ನೂ ಹೆಚ್ಚು ಅಂತರ್ಮುಖಿಗಳಾದರು.
ಅವರ ಅಂತಃ ಚಕ್ಷು ಅಗಲವಾಗಿ ತೆರೆದು, ಒಳ ದೃಷ್ಟಿ ಚೆನ್ನಾಗಿ ವಿಕಸಿತವಾಗಿತ್ತು. ಭಜನಾ ಕುಟೀರದಲ್ಲಿ ಉಳಿದು, ಭಗವತ್ ಸಂಕೀರ್ತನೆಯಲ್ಲಿ ತಲ್ಲೀನರಾಗಿರುತ್ತಿದ್ದರು ಪ್ರವಾಸವನ್ನು ಸಂಪೂರ್ಣ ನಿಲ್ಲಿಸಿ, ಭಗವದರ್ಚನೆ, ಸಂಕೀರ್ತನೆಯಲ್ಲಿ ಪೂರ್ಣ ತೊಡಗಿಕೊಂಡರು. ಶ್ರೀಕೃಷ್ಣ ಲೀಲೆಗಳ ಪುನರ್ ಮನನದಲ್ಲಿ ಬಹುತೇಕ ಲೀನರಾಗುತ್ತಿದ್ದರು.
1915ರ ನವೆಂಬರ್ 15ರಂದು ಗೌರ ಕಿಶೋರ ಬಾಬಾರವರು ಅಂತರ್ಧಾನರಾದರು. ಗೌಡೀಯ ವೈಷ್ಣವ ಸಂಪ್ರದಾಯಗಳಂತೆ, ಉತ್ತರ ಕ್ರಿಯೆ ನಡೆದು ಗಂಗಾತೀರದಲ್ಲಿ ವೃಂದಾವನ ನಿರ್ಮಾಣ ಮಾಡಲಾಯಿತು. ಪ್ರವಾಹದ ಭೀತಿಯಿಂದಾಗಿ ಸಮಾಧಿ ಸ್ಥಳಾಂತರವಾಗಬೇಕಾಯಿತು.
ನಕಲಿ ಬಾಬಾಗಳು, ಹಲವರು ಬಂದು, ಸಮಾಧಿಯ ಅಧಿಕಾರದ ಬಗ್ಗೆ ಮಾತನಾಡತೊಡಗಿದರು. ಶ್ರೀಲ ಭಕ್ತಿ ಸಿದ್ಧಾಂತರು, ಈ ಖೋಟಾ ಬಾಬಾಗಳ ಹಾರಾಟ ನೋಡಿ, ಒಮ್ಮೆ ಗರ್ಜಿಸಿದರು. ”ಪರಮ ಹಂಸ ಪರಿವ್ರಾಜಕರಾದ ಶ್ರೀಲ ಗೌರ ಕಿಶೋರ ಬಾಬಾಜಿರವರ ಏಕಮಾತ್ರ, ವಾರಸುದಾರ ಶಿಷ್ಯನೆಂದರೆ ನಾನೊಬ್ಬನೇ! ಯಾರಾದರೂ ಮುಂದೆ, ಸಿಗುವ ದ್ರವ್ಯ, ಕೀರ್ತಿಯ ಆಸೆಗೆ, ಈ ಸಮಾಧಿಯ ಕುರಿತು ಆಸೆ ಬೆಳಸಿಕೊಂಡು ಇಲ್ಲಿ ಎಡತಾಕಬೇಡಿ.

ಮಂಗನಂತೆ ಮನಸ್ಸು ಹೊಂದಿ, ಕಪಟನಾಟಕ ಮಾಡುತ್ತಿರುವ ಹಲವರು, ಒಳಗೊಳಗೆ, ಭ್ರಷ್ಟರಾಗಿದ್ದಾರೆ. ಮನಸ್ಸು ಎಲ್ಲ ‘ವಿಷ’ ಮಯವಾಗಿದೆ. ನಾನು ಸಂನ್ಯಾಸ ಸ್ವೀಕರಿಸದೆ ಇರಬಹುದು. ಆದರೆ, ನಾನು ತ್ರಿಕರಣ ಪೂರೈಕ ಬ್ರಹ್ಮಚಾರಿಯಾಗಿದ್ದೇನೆ. ಕಳೆದ ಮೂರು ತಿಂಗಳು, 6 ತಿಂಗಳು, 1ವರ್ಷದ ಅವಧಿಯಲ್ಲಿ ಒಮ್ಮೆಯೂ ಸ್ತ್ರೀಸಂಗದ ಅಪೇಕ್ಷೆ ಪಡದ, ಯಾರೊಬ್ಬರು, ಎದೆ ತಟ್ಟಿ ಹೇಳಬಲ್ಲವರು ಇಲ್ಲಿದ್ದರೆ, ಅವರು ಈಗ ಮುಂದೆ ಬನ್ನಿ.
ಇಲ್ಲವಾದರೆ ಎಲ್ಲ ತೊಲಗಿರಿ. ಈ ಉನ್ನತ ಭೌತಿಕ’ ಕಾಯವನ್ನು ಪತಿತರಾದವರು ಮುಟ್ಟಿದರೆ ತತ್‌ಕ್ಷಣ ಸರ್ವ ನಾಶವಾಗುತ್ತಾರೆ.” ಇವರ ಓಜಃಪೂರ್ಣ ಮಾತುಗಳನ್ನು ಕೇಳಿದ ಬಹುತೇಕ ಛದ್ಮ ವೇಷಿಗಳು, ಅಸಾಧಕ-ಸಾಧುಗಳು, ಕಪಟ ಬಾಬಾಗಳು ಕರಗಿ ಹೋದರು.
ಅಲ್ಲಿ ನಿಂತಿದ್ದ ಪೊಲೀಸ್‌ನೊಬ್ಬ ವ್ಯಕ್ತಿಯ ಬ್ರಹ್ಮಚರ್ಯ ವ್ರತ ಪಾಲನೆಗೆ ಸಾಕ್ಷಿ ಏನು ಎಂಬ ಕುಹಕ ಪ್ರಶ್ನೆ ಎತ್ತಿದನು. ಸ್ವಲ್ಪವೂ ವಿಚಲಿತರಾಗದೆ, ಶ್ರೀಲ ಭಕ್ತಿ ಸಿದ್ಧಾಂತರು ‘ನನಗೆ ಮಾತಿನಲ್ಲೇ ನಂಬಿಕೆಯಿದೆ. ಮಾತಷ್ಟೇ ಸಾಕೆಂದರು. ಅದುವರೆಗೂ ಹಾರಾಡುತ್ತಿದ್ದವರಲ್ಲಿ ಒಬ್ಬರೂ ಮುಂದೆ ಬರಲಿಲ್ಲ. ಶ್ರೀಲ ಭಕ್ತಿ ಸಿದ್ಧಾಂತರು, ಬಾಬಾ ಗೌರ ಕಿಶೋರದಾಸರಿಗೆ ವೈದಿಕೋಕ್ತ ಸಮಾಧಿ ನಿರ್ಮಿಸಿ ಗೌರವ ಸೂಚಿಸಿದರು.
ನವ ದ್ವೀಪಕ್ಕೆ ಹೋಗುವ ಯಾತ್ರಿಕರು, ಇಂದಿಗೂ ಶ್ರೀಲ ಗೌರ ಕಿಶೋರದಾಸ ಬಾಬಾಜಿ ಸಮಾಧಿ ಸಂದರ್ಶಿಸಬಹುದಾಗಿದೆ.
ಶ್ರೀಲ ಭಕ್ತಿ ಸಿದ್ಧಾಂತರು ತಮ್ಮ ಓಜಃಪೂರ್ಣ ಶಬ್ದಗಳಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಪ್ರಕಾಂಡ ಪಾಂಡಿತ್ಯ, ಅಸಾಧಾರಣ ಭಾಷಾ ಪ್ರೌಢಿಮೆ, ಅನುಪಮ ಸಂಘಟನಾ ಕೌಶಲ್ಯವನ್ನೆಲ್ಲಾ ಭಕ್ತಿ ಸಿದ್ಧಾಂತರು, ಈ ಮಹಾನ್ ಮೌನ ಯೋಗಿಯ ಪದತಲಕ್ಕೆ ಅರ್ಪಿಸಿಬಿಟ್ಟಿದ್ದಾರೆಂದರೆ, ಗೌರ ಕಿಶೋರದಾಸಬಾಬಾರ ಅಸದೃಶ ವ್ಯಕ್ತಿತ್ವದ ತೃಣ ಪರಿಚಯವಾದರೂ ನಮಗಾದಂತೆ!
ಪಾಂಡಿತ್ಯಪೂರ್ಣ ಸಾವಿರ ಪುಟಗಳ ಬರಹಕ್ಕಿಂತ, ಅಸಾಧಾರಣ ಪಾಕ್ ಪಟುತ್ವದ ದಿನಗಟ್ಟಲೆಯ ವಾದ ವಿವಾದಕ್ಕಿಂತ, ಮಠ ಬಿರುದಾವಳಿಗಳ ಭಾರೀ ವೈಭವಕ್ಕಿಂತ, ಭಗವತ್ಸೇವಾ ಸಾಧನೆ, ಅವನ ಸ್ಮರಣೆಯ ತಪಃಶಕ್ತಿಯ ಫಲವೇ ದೊಡ್ಡದೆಂದು, ಶ್ರೀಲ ಭಕ್ತಿಸಿದ್ಧಾ೦ತರು, ಅವರ ಶಿಷ್ಯರಾದ ಶ್ರೀಲ ಪ್ರಭುಪಾದರು, ನಖಶಿಖರಾಗಿ ಶ್ರೀಲ ಗೌರ ಕಿಶೋರದಾಸರಿಗೆ ಸಾಷ್ಟಾಂಗವೆರಗಿದ್ದಾರೆ.
ನ ಗುರೋರಧಿಕಂ, ತತ್ವಂ ನ ಗುರೋರಧಿಕಂ ತಪಃ |
ತತ್ತ್ವ ಜ್ಞಾನಾತ್ ಪರಂನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅನಂತ ಸಂಸಾರ ಸಮುದ್ರತಾರ ನೌಕಾಯಿ ತಾಭ್ಯಂ |
ಗುರುಭಕ್ತಿದಾಭ್ಯಂ ನಮೋ ನಮಃ ಶ್ರೀ ಗುರುಪಾದುಕಾಭ್ಯಾಂ ||






Leave a Reply