ಶ್ರೀಲ ರಾಮಾನಂದರಾಯರು ಗೋದಾವರೀ ತೀರದ ಪೂರ್ವ-ಪಶ್ಚಿಮ ತೀರದಲ್ಲಿದ್ದ ರಾಜಾ ಪ್ರತಾಪರುದ್ರನ ರಾಜಪ್ರತಿನಿಧಿಯಾಗಿದ್ದರು, ಶ್ರೀ ಚೈತನ್ಯ ಮಹಾಪ್ರಭುಗಳು ದಕ್ಷಿಣಭಾರತ ಪ್ರವಾಸಕ್ಕೆ ಯೋಜನೆ ಹಾಕುತ್ತಿದ್ದಾಗ, ಸಾರ್ವಭೌಮ ಭಟ್ಟಾಚಾರ್ಯರು ಅವರನ್ನು ಕುರಿತು, ರಾಮಾನಂದರಾಯರನ್ನು ಭೇಟಿ ಮಾಡಬೇಕೆಂದು ವಿಶೇಷವಾಗಿ ವಿನಂತಿಸಿದ್ದರು.

ಅವರ ಕೋರಿಕೆಯನ್ನು ಮನ್ನಿಸಿ ಶ್ರೀ ಚೈತನ್ಯ ಮಹಾಪ್ರಭುಗಳು ರಾಮಾನಂದರಾಯರನ್ನು ಭೇಟಿಯಾದರು. ಈ ಮಿಲನವೂ ಆಶ್ಚರ್ಯಕರವಾಗಿಯೇ ನಡೆಯಿತು.
ರಾಮಾನಂದರಾಯರು ನದಿಯಲ್ಲಿ ಸ್ನಾನಮಾಡಿ, ಹೊರಬರುತ್ತಿದ್ದಾಗ, ಶ್ರೀ ಚೈತನ್ಯ ಮಹಾಪ್ರಭುಗಳು ತೀರದಲ್ಲಿ ಸಂಕೀರ್ತನೆ ಮಾಡುತ್ತ ನಡೆದುಬರುತ್ತಿದ್ದರು. ಆಗ ಸರ್ವಸುಂದರ ರೂಪದಿಂದ ಕಂಗೊಳಿಸುತ್ತ, ಹಾಡುತ್ತ ಬರುತ್ತಿದ್ದ ಅವರನ್ನು ಕಂಡು ರಾಮಾನಂದರಾಯರು ಭಕ್ತಿ ಪೂರ್ವಕವಾಗಿ ಸಾಷ್ಟಾಂಗ ನಮಸ್ಕಾರ ಮಾಡಿದರು.
ಭಗವಾನ್ ಚೈತನ್ಯರು ಅವರನ್ನೆತ್ತಿ ಅಪ್ಪಿಕೊಂಡು ಹರೇಕೃಷ್ಣ ಮಂತ್ರ ಜಪಿಸಲು ಹೇಳಿ, ಅವರು ರಾಮಾನಂದರಾಯರೇ ಎಂದು ವಿಚಾರಿಸಿದರು. ಆಗ, ““ಹೌದು, ನಾನು ನಿಮ್ಮ ಅತಿ ಕೆಳಮಟ್ಟದ ಸೇವಕ ಮತ್ತು ನಾನು ಶೂದ್ರ ಜಾತಿಗೆ ಸೇರಿದವನು” ಎಂದು ರಾಮಾನಂದರು ವಿನೀತನಾಗಿ ಉತ್ತರಿಸಿದರು.
ಶ್ರೀ ಚೈತನ್ಯ ಮಹಾಪ್ರಭುಗಳು ಅವರನ್ನು ಬಿಗಿದಪ್ಪಿ ಆಲಿಂಗಿಸಿದರು. ಗುರುಶಿಷ್ಯರಿಬ್ಬರೂ ಆನಂದಾಶಯದಿಂದ ಉನ್ಮತ್ತರಾದರು. ಅನಂತರ ಅವರಿಬ್ಬರ ನಡುವೆ ಕೃಷ್ಣ ಪ್ರೇಮದ ಕುರಿತು ಸಾಕಷ್ಟು ಮಾತುಕತೆಗಳು ನಡೆದವು. ರಾಮಾನಂದರಾಯರು ಭಗವಾನ್ ಚೈತನ್ಯರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಿ ಅವರ ಪ್ರೇಮಕ್ಕೆ ಪಾತ್ರರಾದರು.
ಅಲ್ಲದೆ ಶ್ರೀ ಚೈತನ್ಯರು ತಮ್ಮ ಶಿಷ್ಯನ ಜ್ಞಾನವನ್ನು ಒರೆಗಲ್ಲಿಗೆ ಹಚ್ಚುವಂತೆ ಮತ್ತೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರ ನಡುವೆ ನಡೆದ ಪ್ರಶೋತ್ತರಗಳು ಹೀಗಿವೆ:
‘ಅತಿ ಶ್ರೇಷ್ಠ ಅರಿವು ಯಾವುದು?”
“ಶ್ರೀ ಕೃಷ್ಣನಲ್ಲಿ ಭಕ್ತಿ ಇರಿಸುವುದು”
“ಜೀವರಾಶಿಗಳು ಮಾಡಬಹುದಾದ ಅತಿಶ್ರೇಷ್ಠ ಕಾರ್ಯ ಯಾವುದು?
”ಶ್ರೀ ಕೃಷ್ಣನ ಸೇವಕನಾಗುವುದು”

“ಪರಮೋಚ್ಚಸಂಪತ್ತು ಯಾರು?”
“ರಾಧಾಕೃಷ್ಣರ ಪ್ರೇಮ”
”ಅತಿ ದುಃಖಕರ ಸಂಗತಿ ಯಾವುದು?”
“ಕೃಷ್ಣಭಕ್ತರ ಸಾಂಗತ್ಯ ದೊರೆಯದಿರುವುದು”
”ಮುಕ್ತಿಗೆ ಇರುವ ಅತ್ಯುತ್ತಮ ಮಾರ್ಗ ಯಾವುದು?’
‘ಶ್ರೀ ಕೃಷ್ಣನೆಡೆಗೆ ಪ್ರೇಮ ಬೆಳೆಸಿಕೊಳ್ಳುವ ಮಾರ್ಗವೇ ಮುಕ್ತಿಯ ಎಲ್ಲ ಮಾರ್ಗಗಳಿಗೆ ಮುಕುಟ ಮಣಿಯಂತೆ ಶೋಭಾಯಮಾನವಾಗಿದೆ”
“ಅತಿ ಶ್ರೇಷ್ಠ ಗಾನ ಯಾವುದು?”
”ರಾಧಾ-ಕೃಷ್ಣರ ಲೀಲೆಯನ್ನು ವರ್ಣಿಸುವ ಹಾಡುಗಳು”
“ಜೀವರಾಶಿಗಳಿಗೆ ಅತ್ಯಂತ ಮಂಗಳಕರವಾದುದು ಯಾವುದು?”
“ಕೃಷ್ಣಭಕ್ತನ ಸಾನ್ನಿಧ್ಯ”
‘ನಾವು ನೆನಪಿನಲ್ಲಿಡಬೇಕಾದ ಒಂದೇ ಒಂದು ಸಂಗತಿ ?”
“ಕೃಷ್ಣನ ಹೆಸರು, ಗುಣಗಳು ಮತ್ತು ಲೀಲೆಗಳು”
“ಧ್ಯಾನಿಸಬೇಕಾದ ಏಕೈಕ ವಿಷಯ ಯಾವುದು ?
“ರಾಧಾ-ಕೃಷ್ಣರ ಪಾದ ಪದ್ಮಗಳು”
“ಜೀವಿಸಲು ಇರುವ ಅತ್ಯುತ್ತಮ ಸ್ಥಳ ಯಾವುದು ?”
”ಶ್ರೀ ಕೃಷ್ಣನು ತನ್ನ ಲೀಲೆ ತೋರಿದ ಸ್ಥಳಗಳು”

“ಶ್ರವಣ ಯೋಗ್ಯವಾದ ಅತ್ಯುತ್ತಮ ಸಂಗತಿ ಯಾವುದು?”
“ರಾಧಾ-ಕೃಷ್ಣರ ಪ್ರೇಮ ಲೀಲೆಯ ವರ್ಣನೆಗಳು”
“ವೈಭವೀಕರಿಸಬೇಕಾದ ಏಕೈಕ ವಿಷಯ ಯಾವುದು?”
“ರಾಧಾ ಕೃಷ್ಣರ ಹೆಸರುಗಳು”
”ಮುಕ್ತಿಯನ್ನು ಬಯಸುವವರ ಮತ್ತು ಎಲ್ಲ ಭೌತಿಕ ಆನಂದವನ್ನು ಅನುಭವಿಸುವವರ ಅಂತಿಮ ಪರಿಣಾಮ ಏನಾಗುತ್ತದೆ?”
“ಮೊದಲನೆಯ ಗುಂಪಿನವರು ವೃಕ್ಷಗಳಾಗಿಯೂ, ಎರಡನೆಯ ಗುಂಪಿನವರು ದೇವತೆಗಳಾಗಿಯೂ ದೇಹ ತಳೆಯುತ್ತಾರೆ”
ರಾಮಾನಂದರಾಯರು ಮುಂದುವರಿಸಿದರು –
“ಯಾರು ಎಲ್ಲ ರೀತಿಯ ರಸಗಳನ್ನು ಕಡೆಗಾಣಿಸುತ್ತಾರೋ, ಅವರು ಕಾಗೆಗಳಂತೆ ಜ್ಞಾನವೆಂಬ ಬೇವಿನ ಮರದ ಕಹಿರಸವನ್ನು ಹೀರುತ್ತಾರೆ. ಹಾಗೆಯೇ, ರಸಗಳನ್ನು ಆಸ್ವಾದಿಸುವವರು ಕೋಗಿಲೆಗಳಂತೆ ದೇವೋತ್ತಮನ ಪ್ರೇಮವೆಂಬ ಮಾವಿನಮರದ ಚಿಗುರನ್ನು ಮೆಲ್ಲುತ್ತಾರೆ.”
ಅದೃಷ್ಟಹೀನ ತತ್ತ್ವಜ್ಞಾನಿಗಳು ತತ್ತ್ವ ಜ್ಞಾನವೆಂಬ ಒಣರುಚಿಯನ್ನು ಪಡೆಯುತ್ತಾರೆ, ಮತ್ತು ಭಕ್ತರು ಶ್ರೀಕೃಷ್ಣ ಪ್ರೇಮವೆಂಬ ಮಧುವನ್ನು ಮನಸೋ ಇಚ್ಛೆ ಸವಿಯುತ್ತಾರೆ. ಹೀಗಾಗಿ ಅವರೇ ಎಲ್ಲರಿಗಿಂತ ಹೆಚ್ಚಿನ ಅದೃಷ್ಟವಂತರು.”
ರಾಮಾನಂದರಾಯರ ಉತ್ತರಗಳಿಂದ ಸಂಪ್ರೀತರಾದ ಮಹಾಪ್ರಭುಗಳು ತಮ್ಮ ‘ರಾಧಾ-ಕೃಷ್ಣ’ ರೂಪದಲ್ಲಿ ದರ್ಶನವಿತ್ತು ಕರುಣಿಸಿದರು. ಈ ಭಾಗ್ಯ ಪಡೆಯುತ್ತಲೇ ಆನಂದೋನ್ಮತ್ತರಾದ ರಾಯರು ತಮ್ಮನ್ನು ನಿಯಂತ್ರಿಸಿಕೊಳ್ಳಲಾಗದೆ ಮೂರ್ಛೆ ಹೋದರು.
ಎಚ್ಚರಗೊಂಡನಂತರ ಭಗವಾನ್ ಚೈತನ್ಯರನ್ನು ಶ್ಲೋಕಗಳಿಂದ ಅರ್ಚಿಸಿ, ಅವರನ್ನು ಸ್ತುತಿಸುವ ಪ್ರಾರ್ಥನೆಗಳನ್ನು ಹಾಡಿ ಅವರ ದಿವ್ಯ ಪ್ರೇಮಕ್ಕೆ ಪಾತ್ರರಾದರು. ಮುಂದೆ ತಮ್ಮ ವೃತ್ತಿಯನ್ನು ತ್ಯಜಿಸಿ, ಮಹಾಪ್ರಭುಗಳನ್ನು ಕೂಡಿಕೊಂಡರು. ಶ್ರೀ ಚೈತನ್ಯರ ಅಂತ್ಯ ಲೀಲೆಯ ದಿನಗಳಲ್ಲಿ ಸ್ವರೂಪ ದಾಮೋದರರೊಂದಿಗೆ ಕೂಡಿ ಮಹಾಪ್ರಭುಗಳಿಗೆ ಸೇವೆ ಸಲ್ಲಿಸುವ ಪರಮಭಾಗ್ಯ ಅವರಿಗೆ ದೊರೆಯಿತು.






Leave a Reply