ಶ್ರೀಮತಿ ರಾಧಾರಾಣಿ

ಭಗವಾನ್ ಶ್ರೀ ಕೃಷ್ಣನ ಆಹ್ಲಾದಿನೀ ಶಕ್ತಿ

ಶ್ರೀಮತಿ ಆಶಾ ಆರ್‌.ಉಪಾಧ್ಯಾಯ

ತಪ್ತ ಕಾಂಚನ ಗೌರಾಂಗಿ ರಾಧೇ ವೃಂದಾವನೇಶ್ವರಿ |

ವೃಷಭಾನು ಸುತೇ ದೇವಿ ಪ್ರಣಮಾಮಿ ಹರಿಪ್ರಿಯೇ ||

ಶ್ರೀಮತಿ ರಾಧಾರಾಣಿ ಸರ್ವ ದೇವೋತ್ತಮ ಪುರುಷ ಭಗವಾನ್ ಶ್ರೀ ಕೃಷ್ಣನ ನಿರಂತರ ಸಂಗಾತಿ. ರಾಧಾರಾಣಿ ಭಗವಂತನ ಆಹ್ಲಾದಿನಿ ಶಕ್ತಿಯ ವಿಸ್ತರಣೆ. ಪರಮಪುರುಷನಾದ ಶ್ರೀ ಕೃಷ್ಣನು ಅನಂತಾನಂತ ಶಕ್ತಿಗಳಿಂದ ಸಂಪನ್ನನಾಗಿದ್ದಾನೆ. ಅವುಗಳಲ್ಲಿ ಒಂದು ಆಹ್ಲಾದಿನೀ ಶಕ್ತಿ. ಆನಂದ ಶಕ್ತಿ.

ಶ್ರೀ ಕೃಷ್ಣನು ಪರಬ್ರಹ್ಮ, ಸರ್ವ ದೇವೋತ್ತಮ ಪುರುಷ. ಅವನು ಯಾವುದೇ ಭೌತಿಕವಾದ ವಸ್ತುಗಳಿಂದ ಹಾಗೂ ವಿಷಯಗಳಿಂದ ಆನಂದ ಹೊಂದಲು ಸಾಧ್ಯವಿಲ್ಲ. ಅವನು ಆಧ್ಯಾತ್ಮಿಕವಾಗಿ ಮಾತ್ರ ಆನಂದ ಹೊಂದಬಲ್ಲನು. ಆಧ್ಯಾತ್ಮಿಕ ಆನಂದ, ಅದು ನಮ್ಮ ಕಲ್ಪನೆಗೂ ನಿಲುಕಲಾರದು.

ಭಗವಂತನು ಆತ್ಮಾರಾಮ. ಅವನು ಪೂರ್ಣನು ಅಂದರೆ ತನ್ನಲ್ಲೇ ಎಲ್ಲವನ್ನೂ ಹೊಂದಿರುವವನು. ಅವನು ಬೇರೆಯವರಿಂದ ಆನಂದ ಹೊಂದಲು ಸಾಧ್ಯವಿಲ್ಲ. ಆ ಆನಂದವೂ ಅವನಲ್ಲೇ ಆಡಗಿದೆ. ಅದು ಆನಂದ ಚಿನ್ಮಯ ರಸ. ಈ ಆಧ್ಯಾತ್ಮಿಕ ಆನಂದ ಶಕ್ತಿಗಳ ಮೂರ್ತಿವೆತ್ತ ರೂಪಗಳೇ ಗೋಪಿಯರು.

ಎಲ್ಲ ಗೋಪಿಯರು ಭಗವಂತನ ಆಹ್ಲಾದಿನೀ ಶಕ್ತಿಯ ವಿಸ್ತರಣೆಗಳು. ಅವನಿಗೆ ಆನಂದ ಕೊಡಲೆಂದೇ ಇರುವವರು. ಶ್ರೀಮತಿ ರಾಧಾರಾಣಿ ಎಲ್ಲ ಗೋಪಿಯರಲ್ಲಿ ಅತಿ ಶ್ರೇಷ್ಠಳಾದ ಗೋಪಿ ಹಾಗೂ ಅವಳು ಭಗವಂತನನ್ನು ಮಾಧುರ್ಯ ರಸದಲ್ಲಿ ಪೂಜಿಸುವವಳು.

ಕೃಷ್ಣನು ಶಕ್ತಿಯ ಮೂಲ. ರಾಧಾರಾಣಿ ಅವನ ಶಕ್ತಿ. ಹೇಗೆ ಬೆಂಕಿ ಮತ್ತು ತಾಪವನ್ನು ಬೇರೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ರಾಧಾಕೃಷ್ಣರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಹೇಗೆ ಬೆಂಕಿಯಿದ್ದಲ್ಲಿ ತಾಪವಿದೆಯೋ, ತಾಪವಿದ್ದಲ್ಲಿ ಬೆಂಕಿಯಿರುತ್ತದೆಯೋ ಹಾಗೆಯೇ ರಾಧಾ ಇರುವಲ್ಲಿ ಕೃಷ್ಣನಿರುತ್ತಾನೆ, ಹಾಗೂ ಕೃಷ್ಣ ಇರುವಲ್ಲಿ ರಾಧಾ ಸದಾ ಇರುತ್ತಾಳೆ.

ಇದನ್ನು ಸ್ವರೂಪ ದಾಮೋದರ ಸ್ವಾಮಿಗಳು ಹೀಗೆಂದು ವರ್ಣಿಸುತ್ತಾರೆ. ಈ ಜಗತ್ತಿನ ಎಲ್ಲದರ ಕಾರಣನಾದ ಶ್ರೀಕೃಷ್ಣನು ಒಬ್ಬನು. ಅವನು ಆನಂದಿಸಲು ಬಯಸಿದಾಗ ರಾಧಾ ಮತ್ತು ಕೃಷ್ಣನಾಗಿ ವಿಸ್ತರಣೆ ಹೊಂದುತ್ತಾನೆ. ರಾಧಾಕೃಷ್ಣ ಅಂದರೆ ಒಂದೇ, ರಾಧಾ ಇಲ್ಲದೆ ಕೃಷ್ಣನಿಲ್ಲ. ಕೃಷ್ಣನಿಲ್ಲದೆ ರಾಧಾ ಇಲ್ಲ.

ಅದಕ್ಕಾಗಿಯೇ ಕೃಷ್ಣನ ಜೊತೆ ರಾಧೆಯನ್ನು ಪೂಜಿಸುತ್ತಾರೆ. ಶಕ್ತಿ ಇಲ್ಲದೆ ಶಕ್ತಿಯ ಒಡೆಯನಿಲ್ಲ, ಶಕ್ತಿಯ ಒಡೆಯನಿಲ್ಲದೆ ಶಕ್ತಿಯಿಲ್ಲ. ಅದಕ್ಕೆ ಯಾವಾಗಲೂ ಸೀತಾರಾಮ, ಲಕ್ಷ್ಮಿ ನಾರಾಯಣನನ್ನು ಜನರು ಪೂಜಿಸುತ್ತಾರೆ. ರಾಮಚ೦ದ್ರನ ಸೀತಾದೇವಿ, ನಾರಾಯಣನ ಲಕ್ಷ್ಮೀದೇವಿ ಎಲ್ಲರೂ ಭಗವಂತನ ಆಹ್ಲಾದಿನೀ ಶಕ್ತಿಯ ವಿಸ್ತರಣೆಗಳು.

ಶ್ರೀಮತಿ ರಾಧಾರಾಣಿಯನ್ನು ವೃಂದಾವನದ ಒಬ್ಬ ಸಾಮಾನ್ಯ ಗೊಲ್ಲ ಯುವತಿಯೆಂದು ಭಾವಿಸುವುದು ಮಹಾಪರಾಧವಾಗುತ್ತದೆ. ಅವಳು ಭಗವಂತನ ಆಹ್ಲಾದಿನೀ ಶಕ್ತಿ. ಶ್ರೀ ಕೃಷ್ಣನು 5000 ವರ್ಷಗಳ ಹಿಂದೆ ತನ್ನ ಆಧ್ಯಾತ್ಮಿಕ ಲೋಕದ ನಿರಂತರ ಸಂಗಾತಿಗಳು ಹಾಗೂ ತನ್ನ ಆಧ್ಯಾತ್ಮಿಕ ಧಾಮ ಗೋಲೋಕ ವೃಂದಾವನದ ಜೊತೆಗೆ ಈ ಭೂಮಿಯಲ್ಲಿ ಅವತರಿಸಿದನು.

ಶ್ರೀಕೃಷ್ಣನ ಆಧ್ಯಾತ್ಮಿಕ ಲೋಕದ ನಿರಂತರ ಸಂಗಾತಿಯಾದ ಶ್ರೀಮತಿ ರಾಧಾರಾಣಿ ಗೋಕುಲದ ಸಮೀಪದ ಬರಸಾನದಲ್ಲಿ ರಾಜ ವೃಷಭಾನುವಿನ ಮಗಳಾಗಿ ಅವತರಿಸಿದಳು. ಒಮ್ಮೆ ರಾಜ ವೃಷಭಾನುವು ಹೊಲವನ್ನು ಉಳುತ್ತಿರುವಾಗ ಒಂದು ಸುಂದರ ಹೆಣ್ಣುಶಿಶುವನ್ನು ನೋಡಿ, ಮಕ್ಕಳಿಲ್ಲದ ರಾಜನು ಬಹು ಸಂತಸದಿಂದ ಆ ಮಗುವನ್ನು ತನ್ನ ರಾಣಿ ಕೀರ್ತಿದಾ ಸುಂದರಿಯ ವಶಕ್ಕೆ ಕೊಡುತ್ತಾನೆ.

ಆ ಶಿಶುವೇ ಶ್ರೀಮತಿ ರಾಧಾರಾಣಿ. ಭಗವಂತನ ಸರ್ವ ಶ್ರೇಷ್ಠ ಭಕ್ತೆ. ಭಗವಂತನನ್ನು ಶುದ್ಧ ಪ್ರೇಮದಿಂದ ಮಾಧುರ್ಯ ರಸದಲ್ಲಿ ಪೂಜಿಸುವವಳು.

ಈ ಜಗತ್ತಿನ ಎಲ್ಲರೂ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಬಯಸಿ ವ್ರತ ನಿಯಮ ಹಾಗೂ ಭಕ್ತಿಯ ಆಚರಣೆಯಲ್ಲಿ ತೊಡಗುತ್ತಾರೆ. ಕೃಷ್ಣ ಪ್ರೇಮವನ್ನು ಗಳಿಸಲು ಹಾತೊರೆಯುತ್ತಾರೆ. ಆದರೆ ಭಗವಂತನಾದ ಕೃಷ್ಣನು ರಾಧಾರಾಣಿಯ ಪ್ರೇಮಕ್ಕಾಗಿ ಹಾತೊರೆಯುತ್ತಾನೆ. ಇದರಿಂದ ರಾಧಾರಾಣಿ ಎಷ್ಟು ಶ್ರೇಷ್ಠಳೆಂದು ಅರ್ಥವಾಗುತ್ತದೆ.

ಈ ಪ್ರಪಂಚದ ಬದ್ಧ ಜೀವಿಗಳಿಗೆ ರಾಧಾಕೃಷ್ಣರ ಜ್ಞಾನವು ಸುಲಭದಲ್ಲಿ ಪ್ರಾಪ್ತವಾಗುವುದಿಲ್ಲ. ರಾಧಾಕೃಷ್ಣರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬದ್ಧ ಜೀವಿಗಳಿಂದ ರಾಧಾಕೃಷ್ಣರನ್ನು ಅರ್ಥ ಮಾಡಿಕೊಳ್ಳಲು ಸಾ‍ಧ್ಯವೂ ಇಲ್ಲ. ಅದಕ್ಕೆ ವೈಷ್ಣವ ಆಚಾರ್ಯರ ಮಾರ್ಗದರ್ಶನವೂ ಬೇಕು.

ಈ ತಿಳುವಳಿಕೆ ಇಲ್ಲದ ಬದ್ಧ ಜೀವಿಗಳು ರಾಧಾಕೃಷ್ಣರನ್ನು ಪೂಜಿಸಿದಾಗ ಅದು ಲಕ್ಷ್ಮೀನಾರಾಯಣರನ್ನು ಪೂಜಿಸಿದಂತಾಗುತ್ತದೆ. ಶುದ್ಧ ಪ್ರೇಮದ ಬಗ್ಗೆ ತಿಳುವಳಿಕೆ ಇಲ್ಲದ ಬದ್ಧ ಜೀವಿಗಳಿಗೆ ಈ ಪ್ರಪಂಚದಲ್ಲಿ ಶಾಸ್ತ್ರಗಳ ನಿಯಮಾನುಸಾರ ಭಗವಂತನನ್ನು ಪೂಜಿಸಬೇಕು.

ನಾರಾಯಣ ಶ್ರೀಕೃಷ್ಣನ ವಿಸ್ತರಣೆ ಹಾಗೂ ಲಕ್ಷ್ಮೀದೇವಿ ರಾಧಾರಾಣಿಯ ವಿಸ್ತರಣೆ. ಆಧ್ಯಾತ್ಮಿಕ ಮತ್ತು ಭೌತಿಕ ಪ್ರಪಂಚವು ನಡೆಯುವುದು ಲಕ್ಷ್ಮೀನಾರಾಯಣರ ನಿರ್ದೇಶನದಲ್ಲಿ. ಬದ್ಧ ಜೀವಿಗಳು ನಿಯಮಾನುಸಾರದ ಮೇರೆಗೆ ಭಗವಂತನನ್ನು ಪೂಜಿಸುತ್ತಾ ಶುದ್ಧ ಪ್ರೇಮದ ಹಂತಕ್ಕೆ ಏರಬಹುದು. ಶುದ್ಧ ಪ್ರೇಮದ ಹಂತಕ್ಕೆ ಏರಿದಾಗ ಅವರಿಗೆ ರಾಧಾಕೃಷ್ಣರ ಬಗೆಗಿನ ಜ್ಞಾನವು ವಿದಿತವಾಗುತ್ತದೆ.

ಈಗಲೂ ಗೋಕುಲ ವೃಂದಾವನದ ನಿವಾಸಿಗಳು ರಾಧಾರಾಣಿಯನ್ನೇ ಸರ್ವಶ್ರೇಷ್ಠಳೆಂದು ಭಾವಿಸಿ ಪೂಜಿಸುತ್ತಾರೆ. ಮಾಧುರ್ಯವೇ ಮೂರ್ತಿವೆತ್ತಿದ ಬಹು ಸುಂದರ ತರುಣಿ ರಾಧಾರಾಣಿಯು ತನ್ನ ಶುದ್ಧ ಭಕ್ತಿಯಿಂದ ಕೃಷ್ಣನನ್ನು ಸಂಪೂರ್ಣವಾಗಿ ಒಲಿಸಿಕೊಂಡಿರುವಳು.

ಆ‍ಧ್ಯಾತ್ಮಿಕ ಹಾಗೂ ಭೌತಿಕ ಸೃಷ್ಟಿಯನ್ನು ಸದಾ ನಿಯಂತ್ರಿಸುವ ಪರಮ ದೇವೋತ್ತಮ ಪುರುಷ ಭಗವಾನ್‌ ಶ್ರೀ ಕೃಷ್ಣನನ್ನು ತನ್ನ ಆಜ್ಞಾನುಧಾರಕನಾಗಿ ಇಟ್ಟಿರುವ ರಾಧಾರಣಿಯೇ ಸರ್ವಶ್ರೇಷ್ಠಳೆಂದು ವೃಂದಾವನದ ನಿವಾಸಿಗಳ ಅಭಿಮತ. ಭಗವಾನ್‌ ಶ್ರೀಕೃಷ್ಣನು ಪರಮ ದೇವೋತ್ತಮ ಪುರುಷ.

ಅವನು ಪೂರ್ಣನು, ಸರ್ವಸ್ವತಂತ್ರನು. ಅವನು ಯಾರ ಆಜ್ಞೆಗೂ ಬದ್ಧನಲ್ಲ. ಅಂತಹ ಭಗವಂತನನ್ನು ತನ್ನ ಶುದ್ಧ ಭಕ್ತಿಯಿಂದ ಪೂರ್ಣವಾಗಿ ಒಲಿಸಿಕೊಂಡಿರುವ ರಾಧಾರಾಣಿಯ ಪಾದಾರವಿಂದಗಳಿಗೆ ಭಕ್ತಿಯಿಂದ ನಮಿಸೋಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi