ಭಾರತದ ಯಾವ ಭಾಗಕ್ಕೇ ಹೋದರು, ಅಲ್ಲಿ ಒಂದಲ್ಲಾ ಒಂದು ರಾಮನ ಸಂಬಂಧ ಕ್ಷೇತ್ರವೆಂದು ಜನ ಹೇಳುತ್ತಾರೆ. ಸೀತೆಯ ಸೆರಗು ತಾಕಿದ ಜಾಗವೆಂದೂ, ಹನುಮಂತನು ಬಂದಿದ್ದನೆಂದೋ, ರಾಮ ಬಾಣ ಬಿಟ್ಟ ಸ್ಥಳವೆಂದೋ, ಏನೋ ಸಂಬಂಧ ಹೇಳಿಕೊಳ್ಳುತ್ತಾರೆ. ಶತಮಾನಗಳಿಂದ ಪ್ರಸಿದ್ಧವಾಗಿರುವ ಹಲವು ಕ್ಷೇತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ.
ಅಯೋಧ್ಯೆ:

ಈಗಿನ ಉತ್ತರ ಪ್ರದೇಶದ ಫೈಜಿಯಾಬಾದ್ ಜಿಲ್ಲೆಯಲ್ಲಿದೆ. ಪವಿತ್ರ ಸರಯೂ ನದಿ ಇಲ್ಲಿ ಹರಿಯುತ್ತದೆ. ರಘುವಂಶದರಸರ ರಾಜಧಾನಿ. ರಾಮನ ಜನ್ಮಸ್ಥಳ. ನೂರಾರು ದೇವಾಲಯಗಳಿವೆ. ಭಾರತದ ಪುರಾತನವಾದ 7 ಮೋಕ್ಷ ನಗರಿಗಳಲ್ಲಿ ಅಯೋಧ್ಯೆ ಒಂದಾಗಿತ್ತು.
ಅಯೋಧ್ಯಾ, ಮಥುರಾ, ಮಾಯಾ, ಕಾಶೀ, ಕಾಂಬೇ, ಆವಂತಿಕಾ, ಪುರಿ, ದ್ವಾರಾವತಿ ಇವು ಮೋಕ್ಷ ನಗರಿಗಳೆಂದು ಪ್ರಸಿದ್ಧವಾಗಿವೆ.
ಶ್ರೀರಾಮನ ರಾಜಧಾನಿ ಅಯೋಧ್ಯೆ. ಹನ್ನೆರಡು ಯೋಜನ ಉದ್ದ ಮತ್ತು ಮೂರು ಯೋಜನ ಅಗಲದ ಮಹಾನಗರವಾಗಿತ್ತು. ಅಯೋಧ್ಯಾ ಮನು ನಿರ್ಮಿತ ನಗರಿ ಎಂದೇ ಪ್ರಸಿದ್ಧವಾಗಿದೆ. ಸರಯೂ ನದಿಯನ್ನು ಸಹ ನಮ್ಮ ಪುರಾಣಗಳು ಪರಮ ಪಾವನ ತೀರ್ಥ ಎಂದು ಹಾಡಿ ಹೊಗಳಿವೆ. ಶ್ರೀರಾಮನ ಸೇವೆ ಮಾಡಿ, ಕೊನೆಗೊಮ್ಮೆ, ಅವನನ್ನೇ ತನ್ನೊಡಲೊಳಗೆ ಅಡಗಿಸಿಕೊಂಡ ಧನ್ಯೆ ಸರಯೂ.
ಗಂಗೆ ವಿಷ್ಣು ಪಾದೋದ್ಭತಿಯಾದರೆ, ಈಕೆ ಅವನ ನೇತ್ರದಿಂದ ಉದ್ಭವಿಸಿದವಳು-ಹಾಗಾಗಿ “ನೈತ್ರಾ” ಎಂದೂ ಹೆಸರು ಪಡೆದಿದ್ದಾಳೆ. ಶ್ರೀರಾಮನ ಸೇವೆ ಮಾಡಿರುವ ರಾಮಗಂಗಾ ಎಂದೂ, ವಸಿಷ್ಠರನ್ನು ಸೇವಿಸಿದ್ದರಿಂದ ವಾಸಿಷ್ಠಯೆಂದೂ ಈಕೆಗೆ ಹೆಸರಿದೆ.
ಮಿಥಿಲಾ:

“ಅಪ್ರತಿಮ ಕರ್ಮಯೋಗಿ”ಯಾಗಿದ್ದ “ರಾಜರ್ಷಿ” ಎಂದು ಉಪನಿಷತ್‌ಗಳಲ್ಲಿ ಹೆಸರಾಗಿರುವ “ಜನಕ” ಮಹಾರಾಜನು ಮಿಥಲೆಯ ಅರಸನಾಗಿದ್ದನು. ಮಿಥಲೆಯ ರಾಜ ಕುವರಿಯೇ, ಸೀತಾದೇವಿ. ಸೀತಾ-ರಾಮ ಕಲ್ಯಾಣ ನಡೆದ ಪುಣ್ಯಸ್ಥಳ. ಮೈಥಿಲೀ ಭಾಷೆಯ ಸಾಹಿತ್ಯ ಸಂಸ್ಕೃತಿಗಳು ಭಾರತೀಯ ಕಾವ್ಯಶಾಸ್ತ್ರ ಇತಿಹಾಸದಲ್ಲಿ ದೊಡ್ಡ ಹೆಸರು. ಮಿಥಿಲಾ ವಿಶ್ವವಿದ್ಯಾಲಯವು ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಪ್ರಮುಖವಾಗಿತ್ತು.
ಮಗಧದ ದೊರೆ ಅಜಾತ ಶತ್ರು ಕಟ್ಟಿಸಿದ ಕೋಟೆಗಳಲ್ಲದೇ ರಾಮ, ಜಾನಕಿ, ದಶರಥ ಹಾಗೂ ಜನಕ ಇವರ ಮಂದಿರಗಳಿವೆ. ಯಾಜ್ಞವಲ್ಕ್ಯ, ವಿಶ್ವಾಮಿತ್ರ ಮಹರ್ಷಿಗಳ ಆಶ್ರಮಗಳಿದ್ದವೆಂದೂ ನಂಬಿಕೆ. ಉಪನಿಷತ್‌ಗಳಲ್ಲಿ ಬೃಹದಾರಣ್ಯಕೋಪನಿಷತ್‌ನ ಮೈತ್ರೇಯ-ಗಾರ್ಗಿ ಸಂವಾದ, ಯಾಜ್ಞವಲ್ಕ್ಯ-ಜನಕರ ಸಂವಾದಗಳು ನಡೆದ ಪುಣ್ಯಭೂಮಿ ಇದಾಗಿದೆ.
ನಾಸಿಕ್:

ದಕ್ಷಿಣದ ಗಂಗೆ ಎಂಬ ಹೆಸರಿನಿಂದ ಪ್ರಖ್ಯಾತಳಾಗಿರುವ ಗೋದಾವರಿಯ ದಂಡೆಯಲ್ಲಿದೆ ನಾಸಿಕ್. ಪ್ರಾಚೀನ ಸಾಹಿತ್ಯದಲ್ಲಿ ಇದನ್ನು “ನಾಸಿಕಾ” ಎಂದು ಕರೆದಿದ್ದಾರೆ. ಈ ನದಿಯ ಎದಿರು ದಂಡೆಯಲ್ಲಿ “ಪಂಚವಟಿ” ಕ್ಷೇತ್ರವಿದೆ. ರಾಮ, ಸೀತೆ, ಲಕ್ಷ್ಮಣರು ದಂಡಕಾರಣ್ಯದ ವಾಸದ ಅವಧಿಯಲ್ಲಿ ಇಲ್ಲಿ ವಾಸಿಸುತ್ತಿದ್ದರು. ಶ್ರೀರಾಮನು ಹುಲ್ಲಿನ ಕಡ್ಡಿಯನ್ನು ಬ್ರಹ್ಮಾಸ್ತ್ರವಾಗಿಸಿ, ಕಾಕಾಸುರನನ್ನು ಇಲ್ಲೇ ವಧಿಸಿದ್ದು. ಕೋಪಾವಿಷ್ಟನಾದ ಶ್ರೀರಾಮನ ಮೂರ್ತಿ ಇರುವ “ಕಾಶಾರಾಮ” ದೇವಾಲಯ ಇಲ್ಲಿದೆ.
ಗೋದಾವರಿಯಲ್ಲಿ ಸೀತಾಕುಂಡ, ರಾಮಕುಂಡ ಮತ್ತು ಲಕ್ಷ್ಮಣ ಕುಂಡ ಎಂಬ ತೀರ್ಥಗಳಿವೆ. ಗೋದಾವರಿ ಇಲ್ಲೇ ಉದ್ಭವವಾಗಿರುತ್ತಾಳೆ. “ಕಾಶಾರಾಮ” ದೇವಾಲಯ ಪಶ್ಚಿಮ ಭಾರತದ ಪ್ರಮುಖ ದೇವಾಲಯಗಳಲ್ಲೊಂದು. ಸರದಾರ ರಂಗರಾವ್ ಓಡೇಕ್ 1972ರಲ್ಲಿ 23 ಲಕ್ಷ ರೂಪಾಯಿ ವ್ಯಯ ಮಾಡಿ ಇದನ್ನು ಕಟ್ಟಿಸಿದ. ಗೋದಾವರಿ ದಂಡೆಯಲ್ಲಿಯೇ, ಗೌತಮಿ ಮುನಿಯ ತಪೋವನವಿದೆ. ರಾಮನು ತನ್ನ ತಂದೆಗೆ ಶ್ರಾದ್ಧ ಮಾಡಿದ ಜಾಗವನ್ನು “ರಾಮ ಗಯಾ” ಎನ್ನುತ್ತಾರೆ.
ಪೇಶ್ವೆಗಳ ಕಾಲದಲ್ಲಿ ನಿರ್ಮಾಣವಾದ ಬೃಹತ್ತಾದ ಸುಂದರ ನಾರಾಯಣಸ್ವಾಮಿಯ ಕರಿಕಲ್ಲಿನ ದೇವಾಲಯವಿದೆ. ಸೀತಾಗುಡಿ ಎಂಬ ಒಂದು ನೈಸರ್ಗಿಕ ಗುಹೆಯಿದೆ. ಗುಹೆಯ ಹಿಂಬದಿಯಲ್ಲಿ ರಾಮ-ಸೀತೆ-ಲಕ್ಷ್ಮಣರ ಮೂರ್ತಿಗಳಿವೆ. ನಾಸಿಕ್‌ನಲ್ಲಿಯೇ ರಾಮನ ಆಜ್ಞೆಯಂತೆ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ್ದು ಎಂದು ಐತಿಹ್ಯವಿದೆ. 12 ವರ್ಷಗಳಿಗೊಮ್ಮೆ ನಾಸಿಕ್‌ನಲ್ಲಿ ಕುಂಭಮೇಳ ನಡೆಯುತ್ತದೆ. ಕೋಟ್ಯಂತರ ಜನ ಭಾಗವಹಿಸುತ್ತಾರೆ.
ಭದ್ರಾಚಲ:

ಆಂಧ್ರಪ್ರದೇಶದಲ್ಲಿ ಗೋದಾವರಿ ತೀರದಲ್ಲಿ ಭದ್ರಾಚಲ ಕ್ಷೇತ್ರವಿದೆ. ಇಲ್ಲಿ ಶ್ರೀರಾಮನ ದೊಡ್ಡದಾದ ದೇವಾಲಯವಿದೆ. ಭದ್ರಾಚಲ ರಾಮದಾಸನೆಂದು ಪ್ರಖ್ಯಾತನಾದ “ಗೋಪನನ್ನು” ಎಂಬ ಕಂದಾಯ ಅಧಿಕಾರಿ ಇದನ್ನು ಕಟ್ಟಿಸಿದರು. 16-17ನೆಯ ಶತಮಾನದಲ್ಲಿ ಗೋಲ್ಕಂಡದ ಮುಸಲ್ಮಾನ್ ನವಾಬರ ಆಳ್ವಿಕೆಯಲ್ಲಿ ಭದ್ರಾಚಲ ಸೇರಿತ್ತು. ಭದ್ರಾಚಲದಲ್ಲಿದ್ದ ಪೋಕಲ ದಮ್ಮಿಕ್ಕ ಎಂಬ ಭಕ್ತೆಗೆ, ಊರ ಹೊರ ಆವರಣದಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ವಿಗ್ರಹಗಳು ಕಾಣಿಸಿದವು.
ಅವಳು ಕಂದಾಯ ವಸೂಲಿ ಅಧಿಕಾರಿಯಾಗಿದ್ದ ರಾಮ ಭಕ್ತನಾಗಿದ್ದ ಕಂಟೆಕ್ಲಗೋಪನನ್ನು ಎಂಬ ಅಧಿಕಾರಿಯನ್ನು ಸಂಪರ್ಕಿಸಿ, ಸಹಾಯ ಯಾಚಿಸಿದಳು. ಅವನು ನವಾಬನು ನಂತರದಲ್ಲಿ ಒಪ್ಪಬಹುದು ಎಂಬ ಸದಾಶಯದೊಂದಿಗೆ ಹಣ ನೀಡಿದ. ನವಾಬ ಕೋಪ ಮಾಡಿಕೊಂಡು, ಗೋಪನನ್ನು ಜೈಲಿಗಟ್ಟಿದ. ಜೈಲಿನಲ್ಲಿ ಶ್ರೀರಾಮನನ್ನು ಅನನ್ಯವಾಗಿ ಪ್ರಾರ್ಥಿಸಿ ಗೀತೆಗಳನ್ನು ಅವರು ಬರೆದರು. ಶ್ರೀರಾಮನು ಲಕ್ಷ್ಮಣ ಸಹಿತನಾಗಿ, ವೇಷ ಮರೆಸಿಕೊಂಡು ಬಂದು ರಾಮ ಟೆಂಕಿ ವರಹ ಎಂಬ ಹೆಸರಿನ ಚಿನ್ನದ ನಾಣ್ಯಗಳನ್ನು ನವಾಬನಿಗೆ ನೀಡಿ, ರಾಮದಾಸರನ್ನು ಬಿಡಿಸಿದ.
ರಾಮ ಟೆಂಕಿ ವರಹಗಳನ್ನು ಇಂದಿಗೂ ದಕ್ಷಿಣ ಭಾರತದಾದ್ಯಂತ ಭಯಭಕ್ತಿಗಳಿಂದ ಮನೆಗಳಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯ ಪೂರ್ವ ಭಾರತದ ಬೃಹತ್ ದೇವಾಲಯದಲ್ಲೊಂದಾಗಿದೆ. ತಿರುಪತಿಯಂತೆಯೇ ಇಲ್ಲಿಯೂ ಸಹ ನಿತ್ಯ ಕಲ್ಯಾಣೋತ್ಸವಾದಿ ಎಲ್ಲಾ ಉತ್ಸವಗಳು, ಸೇವೆಗಳು ವಿಜೃಂಭಣೆಯಿಂದ ನಡೆಯುತ್ತವೆ. ರಾಮ ನವಮಿಯಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ.
ಚಿತ್ರಕೂಟ:

ಈಗಿನ ಪ್ರಯಾಗ ಕ್ಷೇತ್ರ ಸಮೀಪದ ಪರ್ವತ. ಇದರ ಸಮೀಪವೇ ಮಂದಾಕಿನಿ ನದಿ ಹರಿಯುತ್ತದೆ. ಬುಂದೇಲಖಂಡದಲ್ಲಿರುವ ಬಾಂದಾದ ಆಗ್ನೇಯಕ್ಕೆ ಐವತ್ತು ಮೈಲು ದೂರದಲ್ಲಿರುವ ಪಯೋಷ್ಣ ಅಥವಾ ಮಂದಾಕಿನಿ ನದಿಯ ದಡದಲ್ಲಿ ಈ ಪರ್ವತವಿದೆ. ಇದಕ್ಕೆ ಹತ್ತಿರುವ ಭರತನು ಶ್ರೀರಾಮನ ಪಾದುಕೆಗಳನ್ನು ಸೀತಾಪುರದಲ್ಲಿ ಪಡೆದಿದ್ದು. ಸೀತಾಪುರದಿಂದ ಪಯಸ್ವಿನಿ (ಮಂದಾಕಿನಿ) ನದಿಯ ಗುಂಟ 24 ಸ್ನಾನ ಘಟ್ಟಗಳಿವೆ. ಮಂದಾಕಿನಿಯಲ್ಲಿ ಸ್ನಾನ ಮಾಡಿ, ಮುತ್ತೈದೆಯರಿಗೆ ಬಾಗಿನ ನೀಡಿ, ಅನುಸೂಯೆಯ ಪೂಜೆ ಮಾಡುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ.
ಪಂಪಾ ಸರೋವರ/ ಕಿಷ್ಕಿಂದೆ:

ಇಂದಿನ ಹರಿಕೆಯ ತುಂಗಭದ್ರಾ ದಡದಲ್ಲಿರುವ ಒಂದು ಸಣ್ಣ ಊರು. ಇದರ ಪಕ್ಕದಲ್ಲಿಯೇ ಪಂಪಾಕ್ಷೇತ್ರ ಹಜಾರಾರಾಮನ ಗುಡಿಯಿದೆ. ರಾಮಭಕ್ತ ಹನುಮಂತನು ಕಿಷ್ಕಿಂದೆಯ ಪಕ್ಕದ ಅಂಜನಾ ಪರ್ವತದಲ್ಲಿ ಹುಟ್ಟಿದನು. ಕಿಷ್ಕಿಂದೆಯಲ್ಲಿಯೇ ಸುಗ್ರೀವ-ರಾಮನ ಸಖ್ಯವಾಗಿದ್ದು, ರಾಮನಿಗೆ ಚೂಡಾಮಣಿ ದರ್ಶನವಾಗಿದ್ದು, ಋಷ್ಯಮೂಕ ಪರ್ವತವು 1 ಕಿ.ಮೀ. ದೂರವಿದೆ. ಇದರ ಶಿಖರದಲ್ಲಿಯೇ ಮತಂಗ ಋಷಿಗಳ ಆಶ್ರಮವಿತ್ತು. “ಬೃಹದ್ದೇಶಿ” ಹೆಸರಿನ ಸಂಗೀತಶಾಸ್ತ್ರದ ಮಹಾಗ್ರಂಥ ಇಲ್ಲೇ ರಚಿತವಾಗಿತ್ತು.

ಹರಿಗೋಲಿನಿಂದ ತುಂಗಭದ್ರಾ ನದಿ ದಾಟಿದರೆ, ಆನೆಗುಂದಿ ಎಂಬ ಸಣ್ಣ ಪಟ್ಟಣ ಸಿಗುತ್ತದೆ. ಇಲ್ಲೇ ಸಮೀಪದಲ್ಲಿ ಶಬರಿ ಆಶ್ರಮವಿದೆ. ಆನೆಗುಂದಿಯಿಂದ 2 ಕಿ.ಮಿ. ದೂರದಲ್ಲಿ ಪಂಪಾ ಸರೋವರವಿದೆ. ಇಲ್ಲೇ ರಾಮ ಲಕ್ಷ್ಮಣರನ್ನು ಆಂಜನೇಯ ಕಂಡದ್ದು. ಇಲ್ಲಿರುವ ಸಂನ್ಯಾಸ ದಿಬ್ಬದಲ್ಲೇ. ಪಂಪಾಕ್ಷೇತ್ರದಲ್ಲಿ ಸುಪ್ರಸಿದ್ದ ಕೋದಂಡರಾಮ ದೇವಾಲಯವಿದೆ.
ರಾಮೇಶ್ವರ:

ರಾಮೇಶ್ವರ ದೇವಾಲಯದ ಹಜಾರವು ನಮ್ಮ ದೇಶದ ಬೃಹತ್ ಹಜಾರವಾಗಿದ್ದು ಆರೂವರೆ ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ರಾಜಗೋಪುರ 78 ಅಡಿ ಎತ್ತರವಾಗಿದೆ. ಕ್ರಾಂಡಿಯ ರಾಜ ಪಾದರಾಜಶೇಖರನ ಸಹಾಯದಿಂದ ರಾಮ ನಾಡಿನ ಉದಯನ ಸೇತುಪತಿ ಎಂಬುವರು 1414ರಲ್ಲಿ ಇದನ್ನು ಕಟ್ಟಿಸಲು ಆರಂಭಿಸಿದ. 5 ತಲೆಮಾರು ಕೆಲಸ ನಡೆದು 350 ವರ್ಷಗಳ ನಂತರ ದೇವಾಲಯ ಪೂರ್ಣಗೊಂಡಿತು. 3000 ಕಲ್ಲು ಕಂಬಗಳಿದ್ದು, 17 ಅಡಿ ಅಗಲ ವಿರುವ ಪ್ರದಕ್ಷಿಣಾ ಪಥ ಈ ದೇವಾಲಯದ ವಿಶೇಷವಾಗಿದೆ.

ಧನುಷ್ಕೋಟಿ:

ಧನುಷ್ಕೋಟಿ ಭಾರತದ ತುತ್ತತುದಿಯ ಕ್ಷೇತ್ರ. ಪೂರ್ವ ಪಶ್ಚಿಮ ಪವಿತ್ರ ಸಮುದ್ರ ಸಂಗಮ ಇಲ್ಲಿದೆ. ರಾಮೇಶ್ವರದಿಂದ ಮೂರುವರೆ ಕಿ.ಮಿ.ದೂರದಲ್ಲಿದೆ. ಶ್ರೀರಾಮನ ಬಾಣದ ತುದಿಯಿಂದ ಸೇತುಭಂಗ ಮಾಡಿದ ಸ್ಥಳ ಇದಾಗಿದೆ. ಪಂಬನ್ ರೈಲ್ವೆ ಜಂಕ್ಷನ್‌ನಿಂದ ಧನುಷ್ಕೋಟಿಗೆ ರೈಲು ಮಾರ್ಗದಲ್ಲಿ ಸಮುದ್ರದ ಮೇಲೆ ಚಲಿಸಿ, ಹೋಗಬೇಕು. ಇದು ಅತ್ಯಂತ ರುದ್ರ ಮನೋಹರ ದೃಶ್ಯವಾಗಿದೆ. ಧನುಷ್ಕೋಟಿಯಲ್ಲಿ ವಿಶೇಷವಾಗಿ ಪಿತೃಕಾರ್ಯಗಳನ್ನು ಮಾಡುತ್ತಾರೆ.

Leave a Reply