ಶ್ರೀರಂಗ – ವೈಷ್ಣವ ವೈಭವ

ಭಾರತ ಸಂತರ ಹಾಗೂ ದೇವಾಲಯಗಳ ನಾಡು. ಪ್ರಾಯಶಃ ಪ್ರಪಂಚದ ಯಾವ ದೇಶದಲ್ಲೂ ಇಲ್ಲದಷ್ಟು ದೇವಾಲಯಗಳು, ಭಾರತದಲ್ಲಿವೆ ಎಂದು ಹೇಳಿದರೆ ತಪ್ಪಾಗಲಾರದು. ದೇವಾಲಯಗಳನ್ನು ಸಂದರ್ಶಿಸುವುದು, ಅಲ್ಲಿ ಸ್ಥಾಪಿಸಿರುವ ಮೂರ್ತಿಗಳನ್ನು ಪೂಜಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇವಾಲಯಗಳಲ್ಲಿ ಪರಮಾತ್ಮನನ್ನು ಪೂಜಿಸುವುದು ಯಾವ ರೀತಿಯಲ್ಲೂ ಕೆಳಸ್ತರದ ಪೂಜೆಯಲ್ಲ. ಆಗಮಶಾಸ್ತ್ರಗಳನ್ನನುಸರಿಸಿ ದೇವಾಲಯಗಳಲ್ಲಿ ನಡೆಯುವ ಪೂಜಾ ವಿಧಿಗಳಲ್ಲಿ ಭಾಗವಹಿಸುವುದು ಪರಮ ದೇವೋತ್ತಮ ಪುರುಷನಿಗೆ ನಮ್ಮ ಭಕ್ತಿಯನ್ನು ತೋರುವ ದ್ಯೋತಕವಾಗಿದೆ.

ಶ್ರೀ ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ಶ್ರೀರಂಗ ಕ್ಷೇತ್ರ ಅತ್ಯಂತ ಹೆಚ್ಚಿನ ಹಿರಿಮೆಯನ್ನು ಪಡೆದಿದೆ. ಇದು ತಿರುಚ್ಚಿರಪಳ್ಳಿ ಊರಿನಿಂದ 8 ಕಿ.ಮೀ. ದೂರದಲ್ಲಿದೆ. ಶ್ರೀರಂಗದಲ್ಲಿ ರೈಲ್ವೆ ನಿಲ್ದಾಣವುಂಟು. ತಿರುಚ್ಚಿ ನಗರದಿಂದ ಶ್ರೀರಂಗಕ್ಕೆ ಪ್ರತಿ 10 ನಿಮಿಷಕ್ಕೊಮ್ಮೆ ಬಸ್ ಸೌಕರ್ಯವಿದೆ. ದೇವಸ್ಥಾನದ ಬಾಗಿಲಿನವರೆಗೂ ಬಸ್ ಹೋಗುತ್ತದೆ. ಬೆಂಗಳೂರಿನಿಂದ ತಿರುಚ್ಚಿಗೆ ಹೋಗುವ ಮಾರ್ಗದಲ್ಲಿಯೇ ಶ್ರೀರಂಗಂ ಕ್ಷೇತ್ರ ಇದೆ. ಶ್ರೀರಂಗಂ ದೇವಸ್ಥಾನವು, ಶ್ರೀರಂಗಂ ರೈಲ್ವೆ ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿದೆ.

ಉಭಯ ಕಾವೇರಿಗಳ ಮಧ್ಯೆ ಇರುವ ಶ್ರೀರಂಗ ಕ್ಷೇತ್ರ ಪೆರಿಯ ಕೊಯಿಲ್‌, ಶ್ರೀರಂಗನಾಥ ‘ಪೆರಿಯ ಪೆರುಮಾಳ್’ ಎಂದು ಇಲ್ಲಿಯ ಶ್ರೀರಂಗನಾಯಕಿ ‘ಪೆರಿಯ ಪಿರಾಟ್ಟಿ’ ಎಂದೂ ಪ್ರಸಿದ್ಧಿ. ಶ್ರೀರಂಗದ ಉತ್ಸವಮೂರ್ತಿಗೆ “ನಮ್ ಪೆರುಮಾಳ್‌’, ‘ಲಿಳಹೀಮ ಮಣವಾಳನ್’ ಎಂದು ಹೆಸರಿದೆ. ಇಲ್ಲಿಯ ಶ್ರೀರಂಗ ವಿಮಾನ ಪ್ರಣವಾಕಾರ ವಿಮಾನ. ಶ್ರೀರಂಗನಾಥ ಶಯನ ಭಂಗಿಯಲ್ಲಿ ಆದಿಶೇಷನ ಮೇಲೆ ವಿರಾಜಮಾನವಾಗಿದ್ದಾನೆ. ದೇವಸ್ಥಾನವು ಅತ್ಯಂತ ವಿಸ್ತಾರವಾಗಿ ಏಳು ಪ್ರಾಕಾರಗಳು, 15 ಗೋಪುರಗಳು ನೂರಾರು ಸನ್ನಿಧಿಗಳಿಂದ ಅಲಂಕೃತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಗೋಪುರವನ್ನು ದುರಸ್ತಿಗೊಳಿಸಿ ಬಹಳ ಆಕರ್ಷಕವಾಗಿ ಕಟ್ಟಲಾಗಿದೆ.

ಈ ಕ್ಷೇತ್ರವು ಸ್ವಯಂವ್ಯಕ್ತ  ಕ್ಷೇತ್ರವಾಗಿದ್ದು, ಶ್ರೀ ವೈಷ್ಣವ ದಿವ್ಯ ದೇಶಗಳಲ್ಲಿ ಮೊದಲನೆಯದಾಗಿದೆ. ಶ್ರೀರಂಗನಾಥನ ದಿವ್ಯಮಂಗಳ ವಿಗ್ರಹವು ಇಕ್ಷ್ವಾಕು ವಂಶದ ಆರಾಧ್ಯ ದೈವವಾಗಿದ್ದು ಶ್ರೀರಾಮನಿಂದಲೂ ಸಹ ಆರಾಧಿಸಲ್ಪಟ್ಟಿತ್ತು. ಅನಂತರ ಶ್ರೀರಾಮ ಇದನ್ನು ವಿಭೀಷಣನಿಗೆ ನೀಡಿದ್ದ. ಕಾರಣಾಂತರಗಳಿಂದ ಇದನ್ನು ಲಂಕೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ, ಈಗಿರುವ ಶ್ರೀರಂಗ ಕ್ಷೇತ್ರದಲ್ಲಿಯೇ ಅರ್ಚಾಮೂರ್ತಿಯು ಪ್ರತಿಷ್ಠಿತವಾಗಿದ್ದು, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ವಿಭೀಷಣನು ಬಂದು ಪೂಜಿಸುತ್ತಿದ್ದ ಎಂಬ ಪ್ರತೀತಿ ಉಂಟು. ವಿಭೀಷಣನು ವಾಸವಾಗಿದ್ದ ಲಂಕೆಯು ಶ್ರೀರಂಗಕ್ಕೆ ದಕ್ಷಿಣ ದಿಕ್ಕಿನಲ್ಲಿ ಇರುವುದರಿಂದ, ಅವನನ್ನು ಸದಾಕಾಲ ಅನುಗ್ರಹಿಸುವುದಕ್ಕಾಗಿಯೇ ದಕ್ಷಿಣಾಭಿಮುಖವಾಗಿ ಶ್ರೀರಂಗನಾಥನು ಶಯನಿಸಿರುವುದಾಗಿಯೂ ಹೇಳುವುದುಂಟು.

ಕಾವೇರಿಗೂ ರಂಗನಿಗೂ ಅವಿನಾಭಾವ ಸಂಬಂಧ, ನಮ್ಮ ರಾಷ್ಟ್ರದಲ್ಲಿ 3 ಪವಿತ್ರ ರಂಗಕ್ಷೇತ್ರಗಳು : ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗ, ಕರ್ನಾಟಕದ ಶ್ರೀರಂಗಪಟ್ಟಣದ ರಂಗಕ್ಷೇತ್ರ ಆದಿರಂಗ, ಮಧ್ಯರಂಗ – ಶಿವನಸಮುದ್ರದಲ್ಲಿ ಇರುವ ಜಗನೋಹನ ರಂಗನಾಥ, ಅಂತ್ಯರಂಗ – ಉಭಯ ಕಾವೇರಿಗಳ ಮಧ್ಯೆ ಪವಡಿಸಿರುವ ರಂಗನೇ ಅಂತ್ಯರಂಗ – ಶ್ರೀರಂಗ

ಶ್ರೀರಂಗ ಕ್ಷೇತ್ರದಲ್ಲಿ ರಂಗನಾಥನ ಉತ್ಸವದ ಸೊಗಸೇ ಅನ್ಯಾದೃಶ. ವರ್ಷ ಪೂರ್ತಿ ರಂಗನಾಥನಿಗೆ ಉತ್ಸವದ ಸಂಭ್ರಮ. ಮೂರು ಬ್ರಹ್ಮೋತ್ಸವಗಳು ಇಲ್ಲಿಯ ವಿಶೇಷ. ಎಲ್ಲಕ್ಕೂ ಶಿಖರಪ್ರಾಯವಾದ ಉತ್ಸವ “ವೈಕುಂಠ ಏಕಾದಶಿ”, ಜಗತ್ತಿನ ಎಲ್ಲಾ ಕಡೆಯಿಂದ ವೈಕುಂಠ ಏಕಾದಶಿ ದರ್ಶಿಸಲು ಲಕ್ಷಾಂತರ ಮಂದಿ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಪಾಂಚರಾತ್ರ ಆಗಮದ ಪ್ರಕಾರ ಪೂಜಾವಿಧಿಗಳು ನಡೆಯುತ್ತವೆ. ಇಡೀ ದೇವಸ್ಥಾನದ ಪೂಜಾ ವ್ಯವಸ್ಥೆಯನ್ನು ಸಿದ್ಧಪಡಿಸಿದವರು ಆಚಾರ್ಯ ರಾಮಾನುಜರು. ನಂತರ ಪರಾಶರ ಭಟ್ಟರು. ಮೊದಲ್ ಮೊಂಡಾನ್ ಮುಂತಾದ ಆಚಾರ್ಯರು ಇದನ್ನು ಮುಂದುವರೆಸಿಕೊಂಡು ಬಂದರು. ಇ೦ದಿಗೂ ಅದೇ ಪದ್ಧತಿ ಮುಂದುವರಿಯುತ್ತಿದೆ. ದೇವಸ್ಥಾನದ ಪ್ರಾಕಾರಗಳಲ್ಲಿ ಎಲ್ಲಾ ಆಳ್ವರ್‌ಗಳು, ಆಚಾರ್ಯರುಗಳ ಸನ್ನಿಧಿ ಇದೆ. ಶ್ರೀ ರಾಮಾನುಜರ ಸನ್ನಿಧಿ ಇಲ್ಲಿ ತುಂಬಾ ವಿಶೇಷ. ಆಚಾರ್ಯರರ ಚರಮ ವಿಗ್ರಹಕ್ಕೆ ಇಲ್ಲಿ ಪೂಜೆ. ಇಲ್ಲಿಯ ಶ್ರೀ ಸುದರ್ಶನ ನಾರಸಿಂಹ ಸನ್ನಿಧಿ ತುಂಬಾ ವಿಶೇಷವಾದದ್ದು. ಶ್ರೀ ಕೂರ ನಾರಾಯಣ ಜಿಯರ್‌ ಅವರಿಂದ ರಚಿತವಾದ “ಶ್ರೀ ಸುದರ್ಶನ ಶತಕ” ಇವರಿಗೆ ಅರ್ಪಿತ.

ಈ ಕ್ಷೇತ್ರಕ್ಕೆ ಶ್ರೀ ವೈಷ್ಣವ ಸಿದ್ಧಾಂತದ ಎಲ್ಲಾ ಆಚಾರ್ಯರುಗಳ ಸಂಬಂಧಗಳುಂಟು.  ಶ್ರೀಮನ್ನಾಥಮುನಿಗಳು, ನಾಲಾಯಿರ ದಿವ್ಯಪ್ರಬಂಧವನ್ನು ಕ್ರಮಬದ್ಧವಾಗಿ ಹಾಡುವ ಸಂಪ್ರದಾಯವನ್ನು ಇಲ್ಲಿ ಏರ್ಪಡಿಸಿದರು. ಶ್ರೀ ಭಾಷ್ಯಕಾರರು ಉತ್ಸವಗಳನ್ನೇರ್ಪಡಿಸಿ, ಆಯಾ ಕಾಲದಲ್ಲಿ ಹಾಡಬೇಕಾದ ಪ್ರಬಂಧಗಳನ್ನು ನಿಗದಿಪಡಿಸಿದರು. ತಿರುಮಂಗೈ ಆಳ್ವಾರರೇ ದೇವಸ್ಥಾನವನ್ನು ದುರಸ್ತಿಪಡಿಸಿದುದಾಗಿ ದಾಖಲೆ ಇದೆ. ತೊಂಡರಪ್ಪಡಿ ಆಳ್ವಾರರು ತುಲಸಿ ಮಾಲಾ ಕೈಂಕರ್ಯವನ್ನು ಶ್ರೀರಂಗನಾಥನಿಗೆ ನಡೆಸುತ್ತಿದ್ದರು. ಶ್ರೀರಂಗ ಕ್ಷೇತ್ರವನ್ನು ಎಲ್ಲಾ ಆಳ್ವಾರ್‌ಗಳು ಹೊಗಳಿ ಹಾಡಿದ್ದಾರೆ. ಅದೇ ಇದಕ್ಕೆ ದೊಡ್ಡ ಹಿರಿಮೆ. ಶ್ರೀ ಮಧುರ ಕವಿ ಆಳ್ವಾರ್ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲಾ ಆಳ್ವಾರ್ ಗಳು ಶ್ರೀರಂಗ ಕ್ಷೇತ್ರವನ್ನು ತಮ್ಮ ಪಾಶುರಗಳಲ್ಲಿ ಸುತ್ತಿಸಿದ್ದಾರೆ.

ಶ್ರೀ ಪರಾಶರ ಭಟ್ಟರಿಗೆ ಇಲ್ಲಿ ವಿಶೇಷ ಸ್ಥಾನಮಾನ, ಶ್ರೀರಂಗನಾಥ ಮತ್ತು ಶ್ರೀರಂಗನಾಚಿಬಯರ್ ಅವರುಗಳ ಮಾನಸ ಪುತ್ರರೆಂದೇ ಖ್ಯಾತರಾದ ಶ್ರೀ ಭಟ್ಟರು ಆಡಿದ್ದು, ಬೆಳೆದಿದ್ದು ಇದೇ ದೇವಸ್ಥಾನದಲ್ಲಿ. ಅವರ ಎಲ್ಲಾ ಕೃತಿಗಳು ಶ್ರೀ ರಂಗನಾಥನಿಗೆ ಅರ್ಪಿತ. ಸ್ವಾಮಿ ದೇಶಿಕರು ಇಲ್ಲಿ ಬಹುಕಾಲವಿದ್ದು ಸ್ವತಃ ಶ್ರೀರಂಗನಾಥನಿಂದ ಹಾಗೂ ಶ್ರೀರಂಗನಾಯಕಿ ತಾಯಿಯಿ೦ದ ಬಿರುದುಗಳನ್ನು ಪಡೆದರು. ಅನೇಕ ಅಪಸಿದ್ಧಾಂತಿಗಳನ್ನು ಈ ಕ್ಷೇತ್ರದಲ್ಲಿ ಜಯಿಸಿ ವಿಶಿಷ್ಟಾದ್ವೈತ ಸಿದ್ಧಾಂತವನ್ನೂ ಶ್ರೀರಂಗನಾಥನ ಉತ್ಸವ ವಿಗ್ರಹವನ್ನೂ ಆಚಾರ್ಯದೇಶಿಕರು ರಕ್ಷಿಸಿ, ಮತ್ತೆ ಪ್ರತಿಷ್ಠಾಪನೆ ಮಾಡಿದರು. ತಮಿಳ್ ಭಾಷೆಯಲ್ಲಿ ಪ್ರಸಿದ್ಧವಾಗಿರುವ ಕಂಬ ರಾಮಾಯಣದ ಪ್ರಥಮ ವಾಚನ ಈ ದೇವಸ್ಥಾನದಲ್ಲಿ ನಡೆಯಿತು. ಈಗಲೂ ಸಹ ಆ ಸ್ಥಳವನ್ನು ತೋರಿಸುವ ನಾಮಫಲಕವಿದೆ. ‘ಮೇಟ್ ಅಳಸಿಂಗ‌ರ್‌’ ಎಂದು ಕರೆಯುವ ನರಸಿಂಹನ ಸನ್ನಿಧಿ ಎದುರು ಈ ವಾಚನ ನಡೆಯಿತು.

ಶ್ರೀವೈಷ್ಣವ ಸಿದ್ಧಾಂತದ ದಿಗ್ಗಜರಾದ ಪರಾಶರ ಭಟ್ಟರು, ವಡಕ್ಕು ತಿರುವೀಧಿಪಿಳ್ಳೆ, ಪಿಳ್ಳೆ ಲೋಕಾಚಾರ್ಯ, ಪೆರಿಯ ನಂಬಿ ಮುಂತಾದವರು ಶ್ರೀರಂಗದಲ್ಲಿ ಜನಿಸಿದರು. ತೊಂಡರಪ್ಪೊಡಿ ಆಳ್ವಾರ್ ಮತ್ತು ತಿರುಪ್ಪಾಣಾಳ್ವಾರ್ ಅವರುಗಳು ಇಲ್ಲಿ ಮೋಕ್ಷವನ್ನು ಹೊ೦ದಿದರೆ೦ದು ಉಲ್ಲೇಖ ಇದೆ. ಶೂಡಿಕೊಡುತ್ತು ನಾಚ್ಚಿಯಾರ್ ಆದ ಆಂಡಾಳ್ ದೇವಿಯು ಶ್ರೀರಂಗನಾಥನನ್ನೇ ವರಿಸಿದಳು. ಇಲ್ಲಿನ ಉತ್ಸವಗಳ ವಿವರಗಳಿಗೆ ಸ್ಥಳ ಪುರಾಣಗಳನ್ನು ಅವಲೋಕಿಸಬಹುದು.

ಶ್ರೀ ಮಣವಾಳ ಮಾಮುನಿಗಳು ಶ್ರೀರಂಗದಲ್ಲಿ ನಡೆಸುತ್ತಿದ್ದ ಕಾಲಕ್ಷೇಪವನ್ನು ಸ್ವತಃ ರಂಗನಾಥನೇ ಕೇಳುತ್ತಿದ್ದನೆಂದು ಚರಿತ್ರೆ ಉಂಟು.

ದೇವಸ್ಥಾನವು ಸಪ್ತ ಪ್ರಾಕಾರಗಳನ್ನೊಳಗೊಂಡಿದ್ದು. ಬಹಳ ದೊಡ್ಡದಾಗಿದೆ. ಸಾವಿರ ಕಂಬಗಳ ಮಂಟಪವಿದ್ದು ಈಗ ಅಲ್ಲಿ ಮ್ಯೂಸಿಯಂ ರಚಿಸಿದ್ದಾರೆ.

ಸಪ್ತ ಪ್ರಾಕಾರ ಮದ್ಯೇ ಸರಸಿಜ ಮುಕುಳೋದ್ಭಾಸಮಾನೇ ವಿಮಾನೇ | ಕಾವೇರೀ ಮಧ್ಯ ದೇಶೇ ಫಣಿಪತಿ ಶಯನೇ ಶೇಷಪರ್ಯಂಕ ಭೋಗೇ| ನಿದ್ರಾ ಮುದ್ರಾಭಿರಾಮಂ ಕಟಿನಿಕಟ ಶಿರ: ಪಾರ್ಶ್ವ ವಿನ್ಯಸ್ತಹಸ್ತಂ | ಪದ್ಮಾಧಾತ್ರೀಕರಾಭ್ಯಾಂ ಪರಿಚಿತ ಚರಣಂ ರ೦ಗರಾಜಂ ಭಚ್ಯೇಹಂ ||

ಒಮ್ಮೆ ಕೈಲಾಸದಲ್ಲಿ ಪರಶಿವಮೂರ್ತಿ ತನ್ನ ಗಣಗಳೊಡನೆ, ಋಷಿಗಳೊಡನೆ ಸಭೆ ನಡೆಸುತ್ತಿರುವಾಗ ಅಲ್ಲಿಗೆ ನಾರದರ ಪ್ರವೇಶ ಆಗುತ್ತದೆ. ನಾರದರು ಸದಾ ಶಿವನಿಗೆ ಪ್ರಣಾಮ ಮಾಡಿ, ”ಸ್ವಾಮಿ ಹಿಂದೆ ತಾವು ಅನುಗ್ರಹಿಸಿ ತಿಳಿಸಿದ ಭೂಲೋಕದ ಎಲ್ಲಾ ಪುಣ್ಯ ಸ್ಥಳಗಳನ್ನು 32 ಮೂರ್ತಿಗಳನ್ನು ದರ್ಶಿಸಿ ಕೃತಾರ್ಥನಾದೆ. ಆದರೂ ತಾವು ಚೋಳ ದೇಶದಲ್ಲಿ ಕಾವೇರಿ ಮಹತ್ವವನ್ನು ತಿಳಿಸುವ ಕಾಲದಲ್ಲಿ ಭೂಲೋಕದಲ್ಲಿ ವಿಷ್ಣು ಸ್ಥಳಗಳಲ್ಲಿ ಅತ್ಯಂತ ಶ್ರೇಷ್ಠವಾದ ಶ್ರೀರಂಗಮ್ ಎನ್ನುವ ಒಂದು ದಿವ್ಯ ದೇಶವಿದೆ. ಆ ಸ್ಥಳ ಆದಿಶೇಷನಿಗೂ ವಿವರಿಸಲು ಸಾಧ್ಯವಿಲ್ಲವೆಂದು ಹೇಳಿದ್ದೀರಿ. ಆ ಪುಣ್ಯಕ್ಷೇತ್ರದ ಮಹಿಮೆಯನ್ನು ತಮ್ಮ ಶ್ರೀಮುಖದಿಂದಲೇ ಕೇಳಿ ತೃಪ್ತನಾಗಬೇಕೆಂದು ನನ್ನ ಇಚ್ಛೆ” ಎ೦ದರು.

ಇದನ್ನು ಕೇಳಿದ ಪರಮಶಿವ ಸಂತೋಷಚಿತ್ತನಾಗಿ “ನಾರದರೇ, ಆ ದಿವ್ಯ ಸ್ಥಳದ ಮಹತ್ವವನ್ನು ಹೇಳಬೇಕೆಂದರೆ 16 ಸಾವಿರ ದೇವ ವರ್ಷಗಳು ಸತತವಾಗಿ ಹೇಳಿದರೂ ಅದನ್ನು ಹೇಳಲು ಅಸಾಧ್ಯ. ಆದ್ದರಿ೦ದ ಸ೦ಗ್ರಹವಾಗಿ, ಸಾರವಾಗಿ ಹೇಳುವೆನು” ಎಂದರು.

ನಾರದರೇ! ಸಾಮ್ರಾಜ್ಯದ ದೇಶದ ಕಾವೇರಿ ಮಧ್ಯ ದೇಶದಲ್ಲಿ ಚಂದ್ರ ಪುಷ್ಕರಣಿ ತೀರ್ಥದಲ್ಲಿ ವಿರಾಜಮಾನವಾಗಿರುವ ಶ್ರೀರಂಗಸ್ಥಳ ಒಂದು ಪುಣ್ಯ ಕ್ಷೇತ್ರ. ಈ ಸ್ಥಳವನ್ನು ದರ್ಶಿಸಿದವರು, ಅನುಭವಿಸಿದವರು ಮತ್ತೆ ನರಕ ದರ್ಶನ ಮಾಡಲಾರರು. ಆದ್ದರಿಂದ ಭೂಮಂಡಲದಲ್ಲಿ ಬುದ್ಧಿಶಾಲಿಗಳಾದವರು ಶ್ರೀರಂಗಸ್ಥಳಕ್ಕೆ ಹೋಗದೆ, ಕಾವೇರಿ ತೀರ್ಥಸ್ನಾನ ಮಾಡದೆ, ಶ್ರೀರಂಗ ವಿಮಾನವನ್ನು ದರ್ಶಿಸದೆಯೂ, ಶ್ರೀರಂಗನಾಯಕನನ್ನು ಸೇವಿಸದೆ, ತಮಗೆ ಸಾಧ್ಯವಿದ್ದಷ್ಟು ಮಟ್ಟಿಗೆ ಅತಿಥಿ ಸತ್ಕಾರ ಮಾಡದೆ, ದಾನಧರ್ಮ ಮಾಡದೆ ಇರಲಾರರು.

ಇಷ್ಟೇ ಅಲ್ಲದೆ, ಸೀನುವಾಗಲೂ, ಕೆಮ್ಮುವಾಗಲೂ, ನಡೆಯುವಾಗಲೂ, ಆಕಳಿಸುವಾಗಲೂ, ಎಂಜಲು ಉಗಿಯುವಾಗಲೂ, ಶರೀರದಲ್ಲಿ ಏನಾದರೂ ವ್ಯಾಧಿ ಅಮರಿದಾಗಲೂ, ಅಲ್ಲದೆ ಪಾಪಿಜನಗಳೊಡನೆ ವ್ಯವಹರಿಸಬೇಕಾಗಿ ಬ೦ದಾಗಲೂ, ವಿಧಿ ಇಲ್ಲದೇ ಒಂದು ಸುಳ್ಳು ಹೇಳಬೇಕಾಗಿ ಬಂದಾಗಲೂ, ಪಾಪಿ ಜನಗಳನ್ನು ಅನುವರ್ತಿಸಬೇಕಾಗಿ ಬಂದಾಗಲೂ, ಮನೋವಾಕ್ ಕಾಯಗಳಿಂದ ಶುದ್ಧಿಯಾಗಿ ಒ೦ದು ಸಲ ‘ರಂಗಾ! ಪರಮಾತ್ಮಾ!’ ಎಂದು ಧ್ಯಾನಿಸಿ, ಬಾಯ್ದೆರೆದು ಹೇಳಿದರೆ, ಅವರಿಗೆ ಏನೂ ಅಪಾಯ ಬರಲಾರದು. ಅಲ್ಲದೆ ಎರಡು ಸಲ ‘ರ೦ಗಾ! ಪರಮಾತ್ಮಾ! ಎಂದು ಧ್ಯಾನಿಸಿದರೆ ಅವರುಗಳಿಗೆ ತಮ್ಮ ಹಿಂದಿನ ಜನ್ಮಗಳಲ್ಲಿ ಮಾಡಿರಬಹುದಾದ ಪಾಪಗಳೆಲ್ಲವೂ ಸೂರ್ಯನನ್ನು ಕಂಡ ಮಂಜಿನಂತೆ ಕರಗಿ ಹೋಗುವುವು. ಅವರು ಪುಣ್ಯಶಾಲಿಗಳಾಗುವರು. ಅಲ್ಲದೆ ಆ ಪುಣ್ಯಶಾಲಿಗಳನ್ನು ಸಪ್ತಸಾಗರ ವಾಸಿಗಳೂ ಕೊಂಡಾಡುವರು.

ಸಾವಿರಾರು ಯೋಜನ ದೂರದಲ್ಲಿರುವವರೂ ಈ ದಿವ್ಯ ದೇಶ ರಂಗಸ್ಥಳವನ್ನು ಮನಸ್ಸಿನಲ್ಲಿ ಧ್ಯಾನಿಸಿದರೆ ಆ ಮಹಾಪುರುಷನೂ, ಅವನ ವಂಶದಲ್ಲಿನ 21 ತಲೆಮಾರುಗಳ ಪಿತೃ ಜನಗಳೂ, ಪೂರ್ವಜನ್ಮಗಳಲ್ಲಿ ಮಾಡಿರಬಹುದಾದ ಪಾಪಕರ್ಮಗಳೆಲ್ಲವೂ ನೀಗಿ, ಪುಣ್ಯಶಾಲಿಗಳಾಗುವರು.

ದೇಶಾಂತರಗಳಲ್ಲಿರುವವರು, ದ್ವೀಪಾಂತರಗಳಲ್ಲಿರುವವರಾದರು, ಇಷ್ಟು ಮಹತ್ವವನ್ನುಳ್ಳ ಆ ಶ್ರೀರಂಗ ಸ್ಥಳವಿರುವ ದಿಕ್ಕನ್ನು ಕುರಿತು, ತನ್ನೆರಡು ಕೈಗಳನ್ನು ತಲೆಯ ಮೇಲೆ ಅಂಜಲಿಯಾಗಿಟ್ಟು ನಮಸ್ಕರಿಸಿ, “ರಂಗನೇ! ಪರಮಾತ್ಮಾ! ಎಂದು ಧ್ಯಾನಿಸಿದರೆ ಅವನು ಎಂದಿಗೂ ಪಾಪಸಂಚಯ ಮಾಡಿಕೊಳ್ಳಲಾರ. ಇಷ್ಟಲ್ಲದೆ ಚಂದ್ರಪುಷ್ಕರಿಣಿಯಲ್ಲಿ ಸ್ನಾನ ಮಾಡಿ, ಜಪತಪಾದಿ ಅನುಷ್ಠಾನಗಳನ್ನು ನಡೆಸಿ, ಒಂದೇ ಮನಸ್ಸಿನಿಂದ ತನ್ನೆರಡು ಕೈಗಳನ್ನು ಅಂಜಲಿಯಾಗಿಟ್ಟು ರಂಗಾ! ಪರಮಾತ್ಮಾ!’ ಎಂದು ಹೇಳುತ್ತ ನಮಸ್ಕರಿಸಿರೆ ಅವನೆ೦ದಿಗೂ ಪಾಪ ಸಂಚಯಿತನಾಗಲಾರ.

ಇಷ್ಟಲ್ಲದೆ ಏಕಾದಶಿ ವ್ರತಸ್ಥನಾಗಿ, ತುಳಸೀ ತೀರ್ಥ ಪಾನ ಮಾಡಿ, ಅಂದು ರಾತ್ರಿಯೆಲ್ಲ ಭಗವಂತನ ನಾಮಸ್ಮರಣೆ ಕೀರ್ತನೆ ಮಾಡುವಂತಹ, ಪಾರಾಯಣಗಳನ್ನು ಮಾಡುವಂತಹ ಪರಮ ಭಾಗವತರ ಮಹಿಮೆಗಳನ್ನು ಇಷ್ಟೆಂದು ಹೇಳಲಾರದು. ಇಂತಹ ಭಾಗವತರುಗಳನ್ನು ಶ್ರೀಮನ್ನಾರಾಯಣ ಮೂರ್ತಿಗಳೆಂದು ತಿಳಿದು ಅವರುಗಳಿಗೆ ಶುಶ್ರೂಷೆ ಉಪಚಾರಗಳನ್ನು ಮಾಡಿ, ಯಾವ ಕಾಲದಲ್ಲಿಯೂ, ನಮಸ್ಕರಿಸಬೇಕು.

ಪಿತೃ ದೇವತೆಗಳು ಒಬ್ಬೊಬ್ಬರೂ, ತಮಗೆ ಪುಣ್ಯಲೋಕ ಪ್ರಾಪ್ತಿ ಉಂಟುಮಾಡುವಂತಹ ಒಬ್ಬ ಹರಿಭಕ್ತ ಸತ್ಪುತ್ರನು ತಮ್ಮ ವಂಶದಲ್ಲಿ ಜನಿಸುವನೇ! ಅವನು ವಿದ್ಯೆ ಬುದ್ಧಿ ತಿಳಿದವನಾಗಿ ಶ್ರೀರ೦ಗಸ್ಥಳಕ್ಕೆ ಹೋಗಿ, ಕಾವೇರಿ ಸ್ನಾನವನ್ನು ಮಾಡಿ, ಶ್ರೀರಂಗನಾಯಕಿ ಸಮೇತನಾಗಿ, ಆಳ್ವಾರರುಗಳೇ ಮೊದಲಾದ ದಾಸಕೂಟಸ್ಥರನ್ನು ಕೂಡಿ ಸೇವಿಸುವಂತಹ, ಆದಿಶೇಷನ ಮೇಲೆ ಅಲಂಕೃತನಾಗಿ ಬಿಜಯ ಮಾಡಿರುವ, ಶ್ರೀರ೦ಗನಾಥಸ್ವಾಮಿಯನ್ನು ಸೇವಿಸಿ, ನಂತರ ಒಬ್ಬ ಬ್ರಾಹ್ಮಣನಿಗಾದರೂ ಅನ್ನಪ್ರಸಾದವನ್ನ ನೀಡುವವನಾಗುವನೆ? ಅಷ್ಟೂ ಶಕ್ತಿಯಿಲ್ಲದಿದ್ದರೆ ಒಂದು ಪಾವಲಿ ದುಡ್ಡನ್ನಾದರೂ ಕೊಡುವವನಾಗುವನೇ? ಸಾಧ್ಯವಾಗದ ಸಂದರ್ಭದಲ್ಲಿ ಒಂದು ಹಿಡಿ ಹುಲ್ಲನ್ನಾದರೂ ಕಿತ್ತು ಒಂದು ಪಶುವಿನ ಬಾಯಿಗಿಡಲಾರನೇ? ಎಂದು ಕಾತುರರಾಗಿ ಪಿತೃಜನಗಳೆಲ್ಲ ನಿರೀಕ್ಷಿಸುತ್ತಾರೆ.

ನಾರದರೇ ಇಷ್ಟೇ ಅಲ್ಲದೆ ಯಮಪುರದ ಒಡೆಯನಾದ ಯಮಧರ್ಮನು ಹೀಗೆ ಚಿಂತಿಸುವನು ‘ನನ್ನ ಕೆಲಸಕ್ಕೆ ಏನೋ ಅಡಚಣೆ ಬಂದಂತಿದೆಯಲ್ಲ! ನನ್ನಧಿಕಾರವೆಲ್ಲ ಅಡಗಿ ಹೋಗಿ ನರಕಲೋಕವು ನಿರ್ಜನವಾಗುವಂತಿದೆಯಲ್ಲ.’

ಭೂಲೋಕದಲ್ಲಿ ಜನಿಸುವ ಎಲ್ಲ ಮನುಷ್ಯರು ರ೦ಗಸ್ಥಳಕ್ಕೆ ಹೋಗಬೇಕು ಎಂದು ಮನಸ್ಸಿನಲ್ಲಿ ನೆನೆದ ಮಾತ್ರಕ್ಕೆ ಅವರುಗಳು ಮಾಡಿರಬಹುದಾದ ಸಂಚಿತ ಪಾಪಗಳೆಲ್ಲವೂ ಕಳೆದುಹೋಗಿ, ನನ್ನ ಲೋಕಕ್ಕೆ ಬರದೆ ಪುಣ್ಯಲೋಕಗಳಿಗೆ ಹೋಗುತ್ತಿದ್ದಾರೆ. ಇನ್ನು ನನ್ನ ಆಜ್ಞೆ ಎಲ್ಲಿ ನಡೆಯುತ್ತದೆ? ನಮ್ಮ ಅಧಿಕಾರವನ್ನು ಯಾರ ಬಳಿ ಚಲಾಯಿಸ ಬೇಕು? ಇನ್ನು ದೇವತೆಗಳೋ ನೋಡೋಣವೆಂದರೆ ಅವರೂ ಭೂಲೋಕಕ್ಕೆ ಹೋಗಿ ಮನುಷ್ಯರಾಗಿ ಜನಿಸಿ ರಂಗಸ್ಥಳಕ್ಕೆ ಹೋಗಬೇಕೆ೦ದು ಸರ್ವದಾ ಪ್ರಾರ್ಥಿಸುವವರೇ ಆಗಿದ್ದಾರೆ.

ಕನ್ಯಾಮಾಸ (ಪುರಟ್ಟಾಶಿ ಮಾಸಮ್‌) ಕೃಷ್ಣಪಕ್ಷ ತ್ರಯೋದಶಿಯಂದು ಆ ರಂಗಸ್ಥಳಕ್ಕೆ ಹೋಗಿ ಪಿತೃತರ್ಪಣ ಕೊಡುವವನು, ಅವನ ವಂಶದಲ್ಲಿ ಎಲ್ಲರೂ ಪಾಪ ವಿಮೋಚನ ಪಡೆದವರಾಗಿ ಪರಮ ಪದವನ್ನು ಪಡೆಯುವರು.

ಮಾರ್ಗಶೀರ್ಷಮಾಸ (ಮಾರ್ಗಳಿ ಮಾಸಮ್‌) ಪೂರ್ತಿ ಆ ಪಾವನೆಯಾದ ಕಾವೇರಿ ನದಿಯಲ್ಲೂ ಚಂದ್ರ ಪುಷ್ಕರಿಣಿಯಲ್ಲೂ ಸ್ನಾನ ಮಾಡಿ, ಏಕ ಮನಸ್ಸಿನಿಂದ ಶ್ರೀರಂಗನಾಥನನ್ನೂ, ಪರಮ ಭಾಗವತರುಗಳಾದ ದಾಸಕೂಟಸ್ಥರನ್ನೂ ಸೇವಿಸಿ, ಧ್ಯಾನಿಸುವವನನ್ನು ಅವನ ಕುಲದಲ್ಲಿ ಹುಟ್ಟಿದವರೆ ಎಲ್ಲರೂ ಕೃತಕೃತ್ಯರಾಗಿ ಈ ಸಂಸಾರ ಸಾಗರವನ್ನು ದಾಟಿ ಮೋಕ್ಷ ಲೋಕವನ್ನು ಸೇರುವರು.

ಕರ್ಕಾಟಕ ಮಾಸ (ಆಡಿ ಮಾಸಮ್), ಸಿಂಹಮಾಸ (ಆವಣಿ ಮಾಸ), ಕನ್ಯಾಮಾಸ (ಪುರಾಟ್ಟಾಶಿ ಮಾಸ), ತುಲಾ ಮಾಸ (ಅಲ್ಪಿಶಿ ಮಾಸ) ಮುಂತಾದ ಈ ನಾಲ್ಕು ತಿಂಗಳು ಆ ರಂಗಸ್ಥಳದಲ್ಲಿ ವಾಸವಾಗಿದ್ದು, ಆ ತೀರ್ಥಗಳಲ್ಲಿ ಸ್ನಾನ ಮಾಡಿ ಪುನೀತರಾದರೆ ಅಂಥವರ ಮಹತ್ವವನ್ನು ಹೀಗೆಂದು ಯಾರಿಂದ ಅಳತೆ ಮಾಡಲಾಗದು.

ಬೇರೆ ಅನೇಕ ದಿವ್ಯ ಸ್ಥಳಗಳಲ್ಲಿ ಸಹಸ್ರ ವರ್ಷಗಳು ಸರಿಯಾಗಿ ವಾಸಮಾಡಿ ತಪಸ್ಸು ಮಾಡಿದವನಿಗೆ ಯಾವ ಪುಣ್ಯಫಲಗಳುಂಟಾಗುವುವೋ ಆ ಪುಣ್ಯ ಫಲಗಳೆಲ್ಲವೂ ಈ ‘ ತಿರುವರಂಗ’ ವೆಂಬ ದಿವ್ಯ ಸ್ಥಳದಲ್ಲಿ ಒಂದು ರಾತ್ರಿ ವಾಸ ಮಾಡಿದವನಿಗೆ ಆ ಕ್ಷಣವೇ ಫಲಿಸುವುದು. ಅಷ್ಟೇ ಅಲ್ಲದೆ ಆ ಸ್ಥಳದಲ್ಲಿದ್ದು ತಿಳಿದೋ, ತಿಳಿಯದೆಯೋ ಸಾವಿರಕೋಟಿ ಪಾಪ ಮಾಡಿದವನಿಗೂ ಅವನು ನಮ್ಮ ಯಮಪುರದ ಬಾಗಿಲಿಗೆ ಬರಲಾರ ಎಂದು ಬಹಳವಾಗಿ ಯಮಧರ್ಮರಾಜನು ಚಿಂತಿತನಾದನು ಎಂದ ಸದಾಶಿವ.

ನಾರದರೇ ಕೇಳಿದಿರಾ! ಇನ್ನೂ ಒಂದು ಅತಿಶಯವುಂಟು ಕೇಳಿ ಎನ್ನುತ್ತಾ ಅದನ್ನೂ ಹೇಳಲು ಸದಾಶಿವನು ಉದ್ಯುಕ್ತನಾದನು.

“ಯಾರಾದರೂ ಶ್ರೀರಂಗ ಯಾತ್ರೆಗೆ ಹೋಗುವೆನೆಂದು ಹೇಳಿದರೆ ಅಂತಹವನನ್ನು ಹುಡುಕಿ ಅವನಿಗೆ ಉಪಚಾರ ಮಾಡಿ, ಒಂದು ಸಲ ಅವನಿಗೆ ಭೋಜನವಿಟ್ಟ ಪುಣ್ಯ ಪುರುಷನಿಗೆ ಭೂಲೋಕದಲ್ಲಿರುವವರೆಗೆ ಧನ ಕನಕ, ವಸ್ತು ವಾಹನ ಸ೦ಪತ್ತು ಯಾವುದರಲ್ಲಿಯೂ ಕೊರತೆಯಾಗದು. ಪುತ್ರಮಿತ್ರ ಕಳತ್ರಾದಿಗಳೊಡನೆ ಸಕಲ ಭೋಗಗಳನ್ನು ಅನುಭವಿಸಿಯಾದ ಮೇಲೆ ತಾನೂ ಪರಮ ಭಾಗವತನಾಗಿ ದಿವ್ಯ ದೇಹಧಾರಿಯಾಗಿ ಸೂರ್ಯ ಮಂಡಲವನ್ನು ಭೇದಿಸಿಕೊಂಡು ಹೋಗಿ ವಿರಜಾನದಿಗೆ ಆ ಕಡೆ ಇರುವ ಪರಮ ಭೋಗ್ಯವಾದ ಶ್ರೀ ವೈಕುಂಠದಲ್ಲಿ ನಿತ್ಯೈಶ್ವರ್ಯಗಳೊಡನೆ ಸದಾಕಾಲವೂ, ಚ್ಯುತಿಯಿಲ್ಲದೆ ಸುಖವನ್ನು ಪಡೆಯುತ್ತಾನೆ.”

ಇನ್ನೂ ಹೇಳಬೇಕೆಂದರೆ, ಒಂದು ದಿನವೂ ತಪ್ಪದೆ ದಿನಕ್ಕೆ ಮೂರು ಸಲ ಸತ್ಪಾತ್ರ ದಾನ ಮಾಡಿದವನಿಗೆ ಯಾವ ಫಲಸಿಕ್ಕುವುದೋ ಆ ಪುಣ್ಯ ಫಲವು ರಂಗಸ್ಥಳವನ್ನು ಸೇವಿಸಿದವನಿಗೆ ಸಿದ್ಧಿಸುವುದು. ಆ ರ೦ಗಸ್ಥಳದಲ್ಲಿ ಸ್ವರ್ಣದಾನ ಮಾಡುವುದೇ

ವಿಶೇಷವಾದರೆ, ಭೂದಾನ, ಗೋದಾನ, ವಸ್ತ್ರದಾನ ಮೊದಲಾದ ಮಹಾದಾನಗಳನ್ನು ಬ್ರಾಹ್ಮಣರಿಗೆ ಕೊಡುವುದು ಇನ್ನೂ ಉತ್ತಮ. ಇಷ್ಟಲ್ಲದೆ ಆ ಮಹಾಸ್ಥಳದಲ್ಲಿ ವಾಸವಾಗಿದ್ದುಕೊಂಡು ಭಗವಂತನಿಗೂ, ಭಕ್ತ ಜನಗಳಿಗೂ ಒಂದು ಚೊಂಬು ನೀರನ್ನು ಕಾವೇರಿಯಿಂದ ತುಂಬಿಸಿಕೊಂಡು ಹೋಗಿ ಕೊಡುವವರಾದರೂ ಮೇಲೆ ಹೇಳಿರುವ ದಾನ ವಿಶೇಷಗಳಿಗಿಂತಲೂ ಮಹಾ ವಿಶೇಷವಾಗುವುದು. ಯಾವ ಯಾವ ತೀರ್ಥಗಳಲ್ಲಿಯೂ, ಯಾವ ಯಾವ ನದಿಗಳಲ್ಲಿಯೂ ಮುಳುಗು ಹಾಕಿದರೂ, ಅಲ್ಲಲ್ಲೇ ಕಾವೇರಿ ಮತ್ತು ಚಂದ್ರ ಪುಷ್ಕರಿಣಿಗಳನ್ನು ಮನಸ್ಸಿನಲ್ಲಿ ಧ್ಯಾನಿಸಿ ಮುಳುಗು ಹಾಕಬೇಕು. ಇನ್ನುಳಿದ ನದಿಗಳನ್ನು ಧ್ಯಾನಿಸಿದರೂ, ಧ್ಯಾನಿಸದಿದ್ದರೂ ಆಭಾಸವಿಲ್ಲ. ಆ ಕಾವೇರಿ ನದಿಯನ್ನೂ ಚಂದ್ರಪುಷ್ಕರಣಿಯನ್ನೂ ಧ್ಯಾನಿಸುವನು ಯಾವ ಜಾತಿ, ಕುಲದಲ್ಲಿ ಜನಿಸಿದವನಾದರೂ ಅವನ ವಿಷಯದಲ್ಲಿ ಭಗವಂತನು ಪರಮಪ್ರೀತನಾಗುವನು.

ಇಷ್ಟಲ್ಲದೆ ಭಗವಂತನು ಒಂದು ಕಾಲದಲ್ಲಿ ತನ್ನ ವಿಭವಾವತಾರ ಸಂಚಾರದಲ್ಲಿ ಯಾವ ರೀತಿ ಜಿ೦ಕೆಗಳು ಮನುಷ್ಯರನ್ನು ನೋಡಿದಾಕ್ಷಣ ಓಡಿಹೋಗುವುವೋ ಹಾಗೆ ತನ್ನಿಂದ ದೂರ ಸರಿದು ನಿಂತ ಜೀವರಾಶಿಗಳನ್ನು ಯೋಗದಲ್ಲಿ ಚಿಂತಿಸಿ ಕೆಲವು ವಚನಗಳನ್ನು ತಿಳಿಸಿದ್ದಾನೆ.

ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾತ್ ವಿನಿಸ್ಸೃತಃ | (ಶ್ರುತಿಸ್ಮೃತಿಃ) ಎಂಬಂತೆ ಪರಮಾತ್ಮನ ಮುಖಾರವಿಂದದಿಂದ ಹೊಮ್ಮಿದ ಭಗವದ್ಗೀತೆಯು ಇದನ್ನು ಹೇಳುತ್ತದೆ.

ನೀವು ಈ ಮಾಯಾ ಸ೦ಬ೦ಧವಾದ ಸ೦ಸಾರ ಸಂಬಂಧವನ್ನು ಬಿಟ್ಟು ಸಂಸಾರ ಸಾಗರವನ್ನು ದಾಟಿ ಮೋಕ್ಷ ಪದವನ್ನು ಸೇರಬೇಕಾದರೆ ನನ್ನ ದ್ವಾದಶ ನಾಮಗಳನ್ನು ಧ್ಯಾನಿಸಿ ಅವೆ೦ದರೆ –

ಓಂ ಕೇಶವಾಯ ನಮಃ, ನಾರಾಯಣಾಯ ನಮಃ ಮಾಧವಾಯ ನಮಃ, ಗೋವಿಂದಾಯ ನಮಃ, ವಿಷ್ಣುವೇ ನಮಃ, ಮಧುಸೂದನಾಯ ನಮಃ, ತ್ರಿವಿಕ್ರಮಾಯ ನಮಃ, ವಾಮನಾಯ ನಮಃ, ಶ್ರೀಧರಾಯ ನಮಃ, ಹೃಷೀಕೇಶಾಯ ನಮಃ, ಪದ್ಮನಾಭಾಯ ನಮಃ, ದಾಮೋದರಾಯ ನಮಃ

“ಓಂ ನಮೋ ನಾರಾಯಣಾಯ” ಎಂಬ ಈ ಅಷ್ಟಾಕ್ಷರ ಮಂತ್ರವನ್ನು ಜಪಿಸಿ, ಶ್ರೀರಂಗಸ್ಥಳದಲ್ಲಿ ಕಾವೇರಿ ಸ್ನಾನ ಮಾಡಿ, ನಮಸ್ಕರಿಸಿ, ಇಲ್ಲದಿದ್ದರೆ ಬರೀ ನೀರನ್ನಾದರೂ ಕಾವೇರಿಯಿ೦ದ ತುಂಬಿಸಿ ಬ್ರಾಹ್ಮಣರಿಗೆ ಕೊಡಿ. ಈ ಕೃತ್ಯದಿಂದ ಪುಣ್ಯಶಾಲಿಗಳಾಗುವಿರಿ, ಯಾವನಾದರೂ ಶ್ರೀರಂಗನಾಥಸ್ವಾಮಿಯನ್ನೂ, ಚಂದ್ರ ಪುಷ್ಕರಿಣಿಯನ್ನೂ, ಕಾವೇರಿ ನದಿ ತೀರ್ಥವನ್ನೂ ಹೆತ್ತ ತಾಯಿ, ತಂದೆಗಳನ್ನೂ, ಗುರುಹಿರಿಯರನ್ನೂ ನಿ೦ದಿಸುವವನಾದರೆ ಅಂತಹವನು ಬ್ರಾಹ್ಮಣನಾಗಿ ಹುಟ್ಟಿದರೂ, ನೀಚನಾಗಿ ರೌರವಾದಿ ನರಕವನ್ನು ಹೊಂದುವನು.

ನೀಚ ಜನ್ಮದಲ್ಲಿ ಹುಟ್ಟಿದರೂ ಯಾವನು ಪರಮಾತ್ಮನಲ್ಲಿ ಭಕ್ತಿ ವಿಶ್ವಾಸವುಳ್ಳವಾಗಿದ್ದು ಅಷ್ಟಾಕ್ಷರವನ್ನು ಧ್ಯಾನಿಸುವವನಾದರೆ ಅವನೇ ಹರಿಭಕ್ತನಾಗಿ ಪ್ರಕಾಶಿಸುತ್ತಾನೆ. ಅಹಂಕಾರ ಜನಕನಾಗಿ ಹುಟ್ಟಿ ಧರ್ಮನೀತಿಗಳನ್ನು ತೂರಿಬಿಟ್ಟು ಅವನು ಯಾವಾಗಲೂ ನನ್ನಲ್ಲಿ (ಭಗವಂತನಲ್ಲಿ) ಭಕ್ತಿ ವಿಶ್ವಾಸಗಳಿಲ್ಲದೆ ಸದಾ ಅಷ್ಟಾಕ್ಷರ ಧ್ಯಾನ ಮಾಡುತ್ತಿದ್ದರೂ ಬ್ರಾಹ್ಮಣನಾದರೂ ಅವನು ಹರಿದಾಸನಾಗಲಾರ. ಅವನಿಗೆ ಪರಮಪದ ಪ್ರಾಪ್ತವಾಗಲಾರದು. ಅವನಿಗೆ ನರಕವೆ ಗತಿಯಾಗುವುದು.

ಇದನ್ನೇ ಶ್ಲೋಕದಲ್ಲಿ ಹೇಳಿರುವುದು : ಶ್ರುತಿಸ್ಮೃತಿಮೈವಾಜ್ಞಾ ಯಸ್ಯಾತಂ ಉಲ್ಲಂಘ್ಯ ವರ್ತತೇ ಆಜ್ಞಾಚ್ಛೇದೀ ಮಮದ್ರೋಹೀ ಮದ್ಭಕ್ತೋಪಿ ನವೈಷ್ಣವಃ || ಕೇಳಿ ನಾರದರೆ! ಇನ್ನೂ ನದಿಗಳ ಬಗ್ಗೆ ವಿಶೇಷವಿರುವುದು.

ವಿಷ್ಣು ಭಕ್ತರುಗಳಲ್ಲಿ ಶ್ರೇಷ್ಠರು ನಾರದರು. ದೇವತೆಗಳಲ್ಲಿ ಮೇಲಾದವನೇ ವಿಷ್ಣುವು, ವೇದಗಳಲ್ಲಿ ವಿಶಿಷ್ಟವಾದುದು ಪ್ರಣವ. ಹಾಗೆಯೇ ಭೂಲೋಕದಲ್ಲಿ ಪುಣ್ಯಕ್ಷೇತ್ರಗಳಲ್ಲಿ ಅಪಾರ ಮಹಿಮೆಯು ಉಳ್ಳದ್ದು ಶೀರಂಗಸ್ಥಳ, ಆದ್ದರಿಂದ ಆ ರ೦ಗಸ್ಥಳದಲ್ಲಿ ವಿವೇಕಿಗಳಾಗಿದ್ದುಕೊಂಡು ವಾಸ ಮಾಡುವವರಿಗೆ ಎಂಥ ಪಾಪಗಳೂ, ಗೋಹತ್ಯೆ, ಬ್ರಹ್ಮಹತ್ಯೆ, ಶಿಶುಹತ್ಯೆ, ಸ್ತ್ರೀಹತ್ಯೆ ಮೊದಲಾದ ದೋಷಗಳೆಲ್ಲವೂ ನಿವಾರಣೆಯಾಗುವುವು. ಅಲ್ಲದೆ ಚಾರಿಣಿ ಆಗುವುದು, ಕಳ್ಳನಾಗುವುದು, ಸುಳ್ಳು ಹೇಳುವುದು, ಕೊಲೆಪಾತಕನಾಗುವುದು, ಪರದಾರ ಗಮನ ಮೊದಲಾಗಿ ಹೇಳಲ್ಪಟ್ಟ ಕ್ರೂರ ಪಂಚ ಮಹಾ ಪಾತಕಗಳು ಎಲ್ಲವೂ ನಾಶವಾಗುವುದು. ಅವರ ವಂಶದಲ್ಲಿನ 21 ತಲೆಮಾರುಗಳ  ಪಿತೃಗಳೆಲ್ಲರೂ ನರಕವಾಸ ನೀಗಿ ಪುಣ್ಯಲೋಕಗಳನ್ನು ಹೊ೦ದುವರು.

ಆದ್ದರಿ೦ದ ಸರ್ವಥಾ ಪಾಪಕೃತ್ಯಗಳನ್ನೇ ಮಾಡುತ್ತ ಕೂಟ-ಹೊಂದಿಕೆಗಳನ್ನೇ ಮಾಡುತ್ತಾ ಪಾಪರಾಶಿಯಲ್ಲೇ ತೊಳಲುವ ನೀಚ ಜನರನ್ನು ನೋಡಿ ಬುದ್ಧಿಶಾಲಿಯಾದವನು ಕಾರುಣ್ಯದಿಂದ ಹೇಳಬೇಕು. ”ಅಯ್ಯೋ ಪಾಪಿಷ್ಠರೇ! ‘ರಂಗಾ! ಪರಮಾತ್ಮಾ’ ಎಂದು ಹೇಳಿ ರಂಗಯಾತ್ರೆಯನ್ನು ಮಾಡಿ, ಕಾವೇರಿ ಸ್ನಾನವನ್ನು ಮಾಡಿ, ಜಪ-ತಪ ಮಾಡಿ, ನಿಮ್ಮ ಪಾಪರಾಶಿಗಳೆಲ್ಲ ಕಳೆದು ಬಿಡುಗಡೆಗೊಳ್ಳುವಿರಿ” ಎ೦ದು ಹೇಳಬೇಕು.

ಅಲ್ಲದೆ ಈಗ ನಿಮಗೆ ತಿಳಿಸಿ ಹೇಳಿದ ಶ್ರೀರ೦ಗ ಮಹಾತ್ಮೆಯನ್ನು ಕ್ರಮವಾಗಿ ಬರೆದು ವಿಷ್ಣು ಭಕ್ತರಿಗೆ ಕೊಟ್ಟವನು ಐಶ್ವರ್ಯವಂತನಾಗುವುದು ಮಾತ್ರವಲ್ಲ.ದೇಹಾಂತ್ಯದಲ್ಲಿ ಪುಣ್ಯ ಲೋಕವನ್ನು ಸೇರುತ್ತಾನೆ. ಮತ್ತೆ ಜೀವಿಯು ಆ ರ೦ಗಸ್ಥಳದಲ್ಲಿ ಪುಣ್ಯವಂತರ ಉದರದಲ್ಲಿ ಪುಣ್ಯಶಾಲಿಯಾಗಿ ಜನಿಸಿ, ಬುದ್ಧಿಶಾಲಿಯಾಗಿ ಶ್ರೀರಂಗನಾಥನನ್ನು ಸೇವಿಸಿ, ಪುಣ್ಯ ಪುರುಷನಾಗಿರುವನು ಎಂದು ಸದಾಶಿವನು ನಾರದರಿಗೆ ತಿಳಿಸಿ ಹೇಳಿದನು.

ಶ್ರೀ ಚೈತನ್ಯ ಮಹಾಪ್ರಭುಗಳು ದಕ್ಷಿಣ ಭಾರತದಲ್ಲಿ ಪ್ರಚಾರ ಮಾಡುತ್ತಾ ಹರಿನಾಮ ಪ್ರಚಾರದಲ್ಲಿ ತೊಡಗಿದ್ದರು. ಅವರೂ ಕೂಡ ಶ್ರೀರಂಗಕ್ಕೆ ಭೇಟಿ ನೀಡಿದ್ದರು. ಅದು ಚಾತುರ್ಮಾಸವಾಗಿದ್ದರಿಂದ ಆಗಿನ ಕಾಲದ ಶ್ರೀರಂಗನಾಥನ ಅರ್ಚಕನಾದ ಬ್ರಾಹ್ಮಣನ ಮನೆಯಲ್ಲಿ ನಾಲ್ಕು ತಿಂಗಳು ತಂಗಿದ್ದರು. ಆ ಬ್ರಾಹ್ಮಣನ ಹೆಸರು ವೆಂಕಟಭಟ್ಟ ಚೈತನ್ಯರಿಂದ ಪ್ರಭಾವಿತನಾಗಿ ಆತ ಅವರ ಶಿಷ್ಯನಾದ. ಅವನ ಮಗನಾದ ಗೋಪಾಲಭಟ್ಟ ಆಗಿನ್ನು ಹತ್ತು ವರ್ಷದ ಬಾಲಕ. ಗೋಪಾಲಭಟ್ಟನಿಗೆ ಚೈತನ್ಯರ ಬಗ್ಗೆ ಭಕ್ತಿಪ್ರೇಮಗಳು ಸ್ವಾಭಾವಿಕವಾಗಿ ಉಂಟಾಯಿತು. ಮುಂದೆ ಅವನೇ ಶ್ರೀ ಚೈತನ್ಯರ ಪ್ರಮುಖ ಶಿಷ್ಯರಾದ ಆರ್ವರು ಗೋಸ್ವಾಮಿಗಳಲ್ಲಿ ಒಬ್ಬರಾದ ಗೋಪಾಲಭಟ್ಟ ಗೋಸ್ವಾಮಿಯೆಂದೇ ಖ್ಯಾತರಾದರು. ಮುಂದೆ ವೃಂದಾವನದಲ್ಲಿ ತಂಗಿ ಕೃಷ್ಣನ ಲೀಲಾಸ್ಥಳಗಳ ಉತ್ಖನನ ಮತ್ತು ಗ್ರಂಥ ರಚನೆಯಲ್ಲಿ ಮುಂದಾಳತ್ವ ವಹಿಸಿದರು. ಈಗಲೂ ಕೂಡ ಚೈತನ್ಯರು ತಂಗಿದ್ದ ಆ ಮನೆಯನ್ನು ಇಲ್ಲಿ ಕಾಣಬಹುದು.

ವಿಮಾನಂ ಪ್ರಣವಾಕಾರಂ ವೇದ ಶೃಂಗಮ್ ಮಹಾದ್ಭುತಮ್!  ಶ್ರೀರಂಗರಾಯೀ ಭಗವಾನ್ ಪ್ರಣವಾರ್ಥ ಪ್ರಕಾಶಕಃ ||

ಬ್ರಹ್ಮದೇವನು ಸಾವಿರ ವರ್ಷ ಕಾಲ ಅಷ್ಟಾಕ್ಷರ ಜಪ ಮಾಡುತ್ತಿದ್ದ ಕಾಲದಲ್ಲಿ ಶ್ರೀಮನ್ನಾರಾಯಣನು ಕ್ಷೀರ ಸಮುದ್ರದಲ್ಲಿ ಆದಿಶೇಷನ ಮೇಲೆ ಶಯನಿಸಿ ಅವನನ್ನು ಕಟಾಕ್ಷಿಸಿದನು. ಆಗ ಆ ಕ್ಷೀರಸಾಗರ ಮಧ್ಯದಿಂದ ಒಂದು ದಿವ್ಯ ವಿಮಾನವು ಕೋಟಿ ಸೂರ್ಯ ಪ್ರಭೆಯಿಂದ ಪ್ರಕಾಶಿಸುತ್ತ ಆಕಾಶ ಮಾರ್ಗವಾಗಿ ಬರುತ್ತಿರುವುದನ್ನು ಕಂಡು ಬ್ರಹ್ಮದೇವನು ತಪಸ್ಸು ಬಿಟ್ಟೆದ್ದು, ಆಶ್ಚರ್ಯದಿಂದ ಸ್ತೋತ್ರ ನಮಸ್ಕಾರಗಳನ್ನು ಮಾಡಿ ಆ ವಿಮಾನವನ್ನೂ ವೀಕ್ಷಿಸಿದನು. ಆ ವಿಮಾನದಲ್ಲಿ ಶ್ರೀ ವೈಕುಂಠವಾಸಿಗಳಾಗಿರುವ ಅನಂತ, ಜನಕಾದಿ ಯೋಗೀಶ್ವರರೂ, ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ಸಿದ್ಧ, ಚಾರಣ, ವಿದ್ಯಾಧರ ಕೂಟವೂ, ಸಕಲ ಋಷಿ ಕೂಟವೂ, ಎಲ್ಲರೂ ಕಾಣಿಸಿದರು. ಅದರಲ್ಲಿ ನಾರದರೂ ಇದ್ದರು.

ಅ೦ತಹ ವೈಭವದ ವಿಮಾನವನ್ನು ದೇವ ಸ್ವರೂಪಿಯಾದ ಗರುಡನು ತನ್ನ ಬೆನ್ನ ಮೇಲೆ ನಿರ್ವಹಿಸುತ್ತ ಮುತ್ತುರತ್ನ, ಸರಗಳಿ೦ದ ಅಲ೦ಕರಿಸಿದ ಶ್ವೇತ ಛತ್ರಿಯಂತೆ ಆದಿಶೇಷನು ಮೇಲ್ಭಾಗದಲ್ಲಿ ಕೊಡೆ ಹಿಡಿದಂತೆ ಬರಲಾಗಿ, ಮುಂದೆ ವಿಷ್ವಕ್ಸೇನರು ಆಜ್ಞಾ ದ೦ಡವನ್ನು ಧರಿಸುತ್ತ ಬರಲಾಗಿ, ಚ೦ದ್ರ ಸೂರ್ಯರೂ ಬೆಳಗುತ್ತ ಶ್ವೇತ ಚಾಮರಗಳನ್ನು ಬೀಸುತ್ತ ಬರಲಾಗಿ, ಅದರಲ್ಲಿ ನಾರದರೂ, ಕಿಂಪುರುಷರೂ, ಗಂಧರ್ವರೂ, ಹರಿಕೀರ್ತನೆ ಮಾಡುತ್ತಿರಲಾಗಿ, ದೇವ ಋಷಿಗಳೂ ಎಲ್ಲರೂ ಅಂಜಲಿಹಸ್ತರಾಗಿ ನಮಸ್ಕರಿಸುತ್ತ, ಸಹಸ್ರ ನಾಮಗಳನ್ನು ಕೀರ್ತಿಸುತ್ತ ಬರಲಾಗಿ, ದೇವೇ೦ದ್ರನೂ, ದೇವತೆಗಳೂ ಪುಷ್ಪವೃಷ್ಟಿ ಕರೆದರು. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀರಂಗನಾಥನು ಬಂದನೆಂದು ಮಂಗಳ ಧ್ವನಿಗಳನ್ನು ಮಾಡುತ್ತಿರಲಾಗಿ, 18 ರೀತಿಯ ಪ್ರಮುಖ ವಾದ್ಯಗಳೂ, ದೇವ ದುಂದುಭಿಯ ಅಂಡಕಟಾಹಗಳೆಲ್ಲವೂ ಮೊಳಗುವಂತೆ ಪ್ರತಿಧ್ವನಿಸುತ್ತಿರಲು, ಈ ರೀತಿಯ ಸ೦ಭ್ರಮದಿ೦ದ ‘ಜಯತಿ’ ಎ೦ದು ಭೂಮಿಯಲ್ಲಿ ಗುರುಡಾಳ್ವಾರ್ ಆ ವಿಮಾನವನ್ನು ಬಿಜಯ ಮಾಡಿಸಿದನು.

ಅದನ್ನು ಕ೦ಡು ಬ್ರಹ್ಮದೇವನು ಬುಡ ಕಡಿದ ಮರದಂತೆ ಭೂಮಿಯಲ್ಲೇ ಬಂದು ಬಿದ್ದನು, ಮತ್ತು ಸಾಷ್ಟಾಂಗ ನಮಸ್ಕಾರವನ್ನು ಮಾಡಿ ತನ್ನ ನಾಲ್ಕು ಮುಖಗಳಿ೦ದಲೂ ನಾಲ್ಕು ವೇದಗಳನ್ನು ಪಾರಾಯಣ ಮಾಡುತ್ತ ಆನಂದ ಪರವಶನಾಗಿ ನಿಂತನು. ಆಗ ಆ ವಿಮಾನದೊಡನೆಯೇ ಬಂದ ನಿತ್ಯಸೂರಿಗಳೂ, ಸಿದ್ಧಶ್ರೇಷ್ಠರೂ ಬ್ರಹ್ಮದೇವನನ್ನು ನೋಡಿ, ಹೀಗೆ ಹೇಳಿದರು. ಓ ಬ್ರಹ್ಮನೇ! ನೀವುಗೈದ ತಪೋ ಮಹಿಮೆಯಿ೦ದ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀಮನ್ನಾರಾಯಣನ ಕಟಾಕ್ಷದಿಂದ ”ವೇದಸಾರವಾದ” “ಮೂನ್ರೆಳುತ್ತು ಓರುರುವಮ್” (ಅ, ಉ, ಮ = ಓಂ) ಆಗಿ ಪ್ರಕಾಶಿಸುವ ಪ್ರಣವಮಂತ್ರವೇ ಈ ವಿಮಾನವಾಗಿ ಬಿಜಯ ಮಾಡಿಸಿದೆ. ಇದರಲ್ಲಿ ಪರಾತ್ಪರನೇ ‘ಶ್ರೀರ೦ಗನಾಥ.’ ನಿಮ್ಮ ದಯದಿಂದ ಭೂಲೋಕದಲ್ಲಿರುವ ಹರಿಭಕ್ತರೆಲ್ಲರೂ ಈ ವಿಮಾನವನ್ನು ಸೇವಿಸಿ ಭವಜಲಧಿಯನ್ನು ದಾಟುವರು. ಇದರಲ್ಲಿ ಸಂದೇಹವಿಲ್ಲ. ಇದೋ ಈ ವಿಮಾನದ ಮಧ್ಯದಲ್ಲಿ ಪ್ರವಣ ಸ್ವರೂಪಿಯಾದ ಹರಿಯು ಸರ್ಪ ಶಯನನಾಗಿ ಮಹಾ ವೈಭವದಿಂದ ಭಕ್ತ ಜನರನ್ನು ರಕ್ಷಿಸಲೋಸುಗ  ಯೋಗನಿದ್ರೆಯಲ್ಲಿ ಪವಡಿಸಿದ್ದಾನೆ. ಆದ್ದರಿಂದ ನಿಮ್ಮಂತೆ ಭಕ್ತಿಯುಳ್ಳವರೇ ಈ ವಿಮಾನವನ್ನು ಸೇವಿಸಬೇಕು. ಏಕೆಂದರೆ ಪೂರ್ವದಲ್ಲಿ ನಿಮ್ಮಂತಹ ಚತುರ್ಮುಖ ಬ್ರಹ್ಮರು ಅನೇಕ ಸಾವಿರ ಕೋಟಿ ವರ್ಷಗಳೂ ಕಾಲ ತಪಸ್ಸು ಮಾಡಿ, ಈ ವಿಮಾನವನ್ನೂ, ಈ ವಿಮಾನಪತಿಯಾದ ಶ್ರೀರಂಗನಾಥನನ್ನು ಸೇವಿಸಿ, ಅನುಭವಿಸಿ, ಆ ಪೂಜಾ ಫಲದಿ೦ದ ಅನೇಕ ಕಾಲದವರೆಗೆ ಬ್ರಹ್ಮ ಪಟ್ಟವನ್ನಾಳಿದರು. ಇಂದ್ರ, ಅಗ್ನಿ, ಯಮ, ನಿರ್ಋತಿ, ವರುಣ, ವಾಯು, ಕುಬೇರ ಮತ್ತು ಈಶಾನ್ಯ ಎಂದು ಹೇಳಲ್ಪಡುವ ಅಷ್ಟದಿಕ್ಪಾಲಕರೂ ಹೀಗೆಯೇ ಈ ‘ ವಿಮಾನವನ್ನು ದರ್ಶಿಸಿ, ಸೇವಿಸಿಯೇ ದಿಕ್ಪಾಲಕರಾಗಿದ್ದಾರೆ. ಆದ್ದರಿಂದ ಬ್ರಹ್ಮದೇವರೇ! ನೀವೂ ಈ ವಿಮಾನವನ್ನು ಸೇವಿಸಿ, ಪೂಜಿಸುವಿರಾದರೆ ನಿಮಗೆ ಸರ್ವಾಧಿಕಾರವೂ ‘ ಉ೦ಟಾಗುವುದು ಎಂದು ಹೇಳಿದರು.

ಜಗದಾಚಾರ್ಯರಾದ ಶ್ರೀ ರಾಮಾನುಜರು ಈ ‘ ಮಹಿಮೆಯನ್ನರಿತೇ ಅಲ್ಲವೇ ತಮ್ಮ ಶ್ರೀ ಭಾಷ್ಯ ಗ್ರಂಥದಲ್ಲಿ ಪ್ರಪದ್ಯೇ ಪ್ರಣವಾಕಾರಂ ಭಾಷ್ಯಂ ರಂಗಮಿನ ಅಪರಂ  ಯತ್ರ ಶೇಷಿತ್ವಂ ಸ್ಫುಟಂ ಈಕ್ಷ್ಯತೇ” ಎಂದು ತಿಳಿಸಿದ್ದು.

ಶ್ರೀರಂಗದಲ್ಲಿ ರಂಗನಾಥನ ಉತ್ಸವಗಳ ಸರಮಾಲೆ ಸೊಗಸಿನ ಭ೦ಡಾರ. ವರ್ಷ ಪೂರ್ತಿ ಉತ್ಸವಗಳು. ಪ್ರತಿ ತಿಂಗಳೂ ಏಕಾದಶಿ, ಅಮಾವಾಸ್ಯೆ ಮತ್ತು ರೇವತಿ ನಕ್ಷತ್ರದಂದು ನಮ್ ಪೆರುಮಾಳ್ಗೆ” ಉತ್ಸವ, ಚಿತ್ತಿರೈ ಮಾಸದಿಂದ ಪ್ರಾರಂಭವಾಗುವ ಉತ್ಸವಗಳ ವೈಭವ ಅನ್ಯಾದೃಶ ಚಿತ್ತಿರೈ ಸಂಕ್ರಮಣದಂದೇ ಉತ್ಸವ ಪ್ರಾರಂಭ. 10 ದಿನಗಳ ಕೋಡೈ ಉತ್ಸವ, ಚಿತ್ರಾ ಪೌರ್ಣಮಿಯಂದು ನಡೆಯುವ ಗಜೇಂದ್ರ ಮೋಕ್ಷ, ವಿರಪ್ಪನ್ ತಿರುನಾಳ್‌, ಚಿತ್ತಿರೈ ಬ್ರಹ್ಮೋತ್ಸವ, 11 ದಿನಗಳು ನಡೆಯುತ್ತವೆ. ವಸಂತ ಉತ್ಸವಂ” ಒಂದು ಅಪರೂಪದ ಉತ್ಸವ. ಬಿಸಿಲಿನ ಬೇಗೆಗೆ ವಸಂತ ಮಂಟಪದಲ್ಲಿ ಸುತ್ತಲೂ ನೀರಿನ ಮಧ್ಯೆ ರಂಗನಾಥ ಆನಂದವಾಗಿ ಬಿಜಮಾಡಿಸುತ್ತಾನೆ.

ಜೇಷ್ಠಾಭಿಷೇಕಮ್” ಇದೊಂದು ವಿಶಿಷ್ಟ ಉತ್ಸವ. ಮೂಲ ಮೂರ್ತಿಗೆ ಎಣ್ಣೆಯ ಅಲಂಕಾರ (ತೈಲಕ್ಕಾಪ್ ಸೇವೆ), ತಿರುಪ್ಪಾವಡೈ – ವರ್ಷದಲ್ಲಿ ಸ್ವಾಮಿಗೆ ನಿವೇದನದಲ್ಲಿ ಏನಾದರೂ ಕೊರತೆ ಆಗಬಹುದೆ೦ದು ಯೋಚಿಸಿ ಮಂಟಪದ ಪೂರ್ತಿ ಅನ್ನಪ್ರಸಾದ ತುಂಬಿಸಿ ನಿವೇದನ. 9 ದಿನಗಳ ಪವಿತ್ರೋತ್ಸವ, ನವರಾತ್ರಿ ಉತ್ಸವ, ತುಲಾ ಮಾಸದ ಉತ್ಸವ, ದೀಪಾವಳಿ, ಶ್ರೀಕೃಷ್ಣಜಯಂತಿ, ‘ತಿರುರ್ಕಾ ಹೈ’ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಪಂಗುನಿ ಉತ್ಸವಂ – ಶ್ರೀ ರಂಗನಾಚ್ಚಿಯಾರ್ ಜೊತೆ ಏಕಾಸನದಲ್ಲಿ ವಿರಾಜಮಾನನಾಗುತ್ತಾನೆ. ಅಂದೇ ಶ್ರೀರಾಮಾನುಜರು ಗದ್ಯತ್ರಯ ರಚಿಸಿದ ಪರ್ವದಿನ. ಅದನ್ನೇ “ಗದ್ಯತ್ರಯ ಮಂಟಪ” ವೆಂದು ಕರೆಯುತ್ತಾರೆ. ಭೂಪತಿ ತಿರುನಾಳ್‌, ಚಿತ್ತಿರೈ ತಿರುನಾಳ್‌, ವಿರಪ್ಪನ್ ತಿರುನಾಳ್‌, ಹೀಗೆ ಬ್ರಹ್ಮೋತ್ಸವಗಳ ಸಾಲು ಶ್ರೀರಂಗನಿಗೆ.

ಧನುರ್ಮಾಸದಲ್ಲಿ ನಡೆಯುವ “ಪಹಲ್ ಪತ್ತ್” ಹಾಗೂ “ರಾಪತ್ತ್‌” ಇಲ್ಲಿಯ ವಿಶೇಷ. ಪ್ರಾರಂಭದ 10 ದಿವಸಗಳು ತಿರುಮೊಳಿಯ ಸೇವೆ, ನಂತರದ್ದು ತಿರುವಾಯ್ ಮೊಳಿ” ದರ್ಶನ. ದಿವ್ಯ ಪ್ರಬಂಧವನ್ನು ಅರೈಯರ್ ಅಭಿನಯದೊಂದಿಗೆ ಸೇವೆ ಮಾಡುತ್ತಾರೆ. ಇಲ್ಲಿ ಇದರ ಸೊಬಗು ವಿಶಿಷ್ಟ ಸಾವಿರ ಕಾಲು ಮಂಟಪ, ಶ್ರೀರಂಗನಾಥನ ದಿವ್ಯ ಮಂದಿರದಲ್ಲಿ ಮುಕುಟಪ್ರಾಯ ಇದೇ. ವಿಶಿಷ್ಟ ಉತ್ಸವಗಳ ತಾಣ ಇದು.

ಸಪ್ತ ಪ್ರಾಕಾರದಿಂದ ಕೂಡಿರುವ ಶ್ರೀರಂಗ ಒಟ್ಟು 156 ಎಕರೆ ವಿಶಾಲ ಭೂಪ್ರದೇಶ, ಸಪ್ತ ಪ್ರಾಕಾರಗಳು 21 ಗೋಪುರಗಳು 4 ದಿಕ್ಕುಗಳಲ್ಲಿ ಪ್ರವೇಶ ಗೋಪುರಗಳಿಂದ ಆಲಂಕೃತ ಈ ಶ್ರೀರಂಗ. ಸಪ್ತ ಪ್ರಾಕಾರಗಳ ಮಧ್ಯೆ 55 ದೇವರ ಆಳ್ವಾರ್ ಆಚಾರ್ಯರ ಸನ್ನಿಧಿಗಳು. ಇತ್ತೀಚಿನ ವರ್ಷಗಳಲ್ಲಿ ಅಹೋಬಿಲ ಮಠದ ಶ್ರೀಶ್ರೀಜೀಯ‌ರ್‌ ಅವರಿಂದ ಜೀರ್ಣೋದ್ಧಾರಗೊಂಡ 235 ಅಡಿ ಎತ್ತರದ ಸು೦ದರ ರಾಜಗೋಪುರ. “ರ೦ಗರಾಜ ” ನ ದಿನಚರಿ :  ರಂಗ ರಾಜನಾಗಿರುವುದರಿಂದ ಎಲ್ಲವೂ ನಿಯಮಬದ್ಧ, ಶಿಸ್ತುಬದ್ಧ, ಎಲ್ಲದರಲ್ಲೂ ರಾಜ ಗಾಂಭೀರ್ಯ, ಪ್ರತಿದಿನ ಬೆಳಗ್ಗೆ 6.00 ಗಂಟೆಗೆ ಆನೆಯ ಮೇಲೆ ಕಾವೇರಿಯಿಂದ ತಿರುಮಂಜನ, ನಂತರ ವಿಶ್ವರೂಪ ದರ್ಶನ, ಆನೆ, ಹಸು, ಎಲ್ಲವೂ ರ೦ಗನ ಮು೦ದೆ. ವೀಣಾವೇದನ ನಂತರ ವೇದವ್ಯಾಸ ಭಟ್ಟರಿಂದ ಪಂಚಾಂಗಶ್ರವಣ ನಂತರ ಪೊ೦ಗಲ್ ಮತ್ತು ಹಾಲು ನಿವೇದನ. 6.30 ರಿಂದ 7.30 ಧರ್ಮದರ್ಶನ, 7.30 ರಿಂದ 8.30 ತಿರುವಾರಾಧನೆ, ರೊಟ್ಟಿಬೆಣ್ಣೆನಿವೇದನ. 1.00 ಗಂಟೆಗೆ ಉಚ್ಚಕಾಲ ಪೂಜೆ, 6.30ಕ್ಕೆ ಕ್ಷೀರಾನ್ನ, ರಾತ್ರಿ 9.00ಕ್ಕೆ ಅರವಣೆ ನಿವೇದನ. ಜೊತೆಗೆ ವಡೆ, ಅಪ್ಪ ಎಲ್ಲವೂ ಶುದ್ಧ ತುಪ್ಪದಿಂದ ತಯಾರಿಸುತ್ತಾರೆ.

ಶ್ರೀರಂಗೇತಿ ಸದಾ ಧ್ಯಾನಂ । ಶ್ರೀರಂಗೇತಿ ಸದಾ ಜಪಃ | ಶ್ರೀರಂಗ ಮಹಿಮಾ ಧ್ಯಾನಂ | ಸದಾ ಶ್ರೀರಂಗ ಚಿಂತನಂ || ಆಳ್ವಾರ್ಗಳಲ್ಲಿ ಕುಲಶೇಖರ ಪೆರುಮಾಳ್ ಶ್ರೀರಂಗನ ಅನನ್ಯ ಭಕ್ತರು. ಅವರು ಪ್ರತಿನಿತ್ಯ ರ೦ಗಯಾತ್ರೆಗೆ ಹೋಗಬೇಕೆಂಬ ಸದಿಚ್ಛೆ. ಅವರ ನಗರದಲ್ಲಿ ರಂಗ ಯಾತ್ರೆಗೆ ಘೋಷಣೆ.

ಘುಶ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇದಿನೇ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi