ಹಿರಣ್ಯಕಶಿಪುವಿನ ದಂಡನೆಗಳು

ಪ್ರಹ್ಲಾದನ ಕಥೆ (ಭಾಗ-5)

ಆಧಾರ: ಶ್ರೀಮದ್ಭಾಗವತಮ್‌, ಏಳನೆಯ ಸ್ಕಂಧ

– ಡಾ॥ ಬಿ.ಆರ್‌. ಸುಹಾಸ್‌

ದುಷ್ಟ ರಾಕ್ಷಸ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ, ಕೆಸರಿನಲ್ಲಿ ಅರಳಿದ ಕಮಲದಂತಿದ್ದನು. ಸದಾ ಹರಿಯನ್ನೇ ಚಿಂತಿಸುತ್ತಿದ್ದನು, ಧ್ಯಾನಿಸುತ್ತಿದ್ದನು. ಇದರಿಂದ ಅಸುರರಾಜನ ಕೋಪ ಎಲ್ಲೆ ಮೀರಿತು. ತನ್ನ ಮಗ, ಐದು ವರ್ಷದ ಪುಟ್ಟ ಬಾಲಕನನ್ನು ಕೊಂದುಬಿಡುವಂತೆ ಅವನು ತನ್ನ ಸೇವಕರಿಗೆ ಆದೇಶ ನೀಡಿದನು. (ಮುಂದೆ ಓದಿ…..)

ಹಿರಣ್ಯಕಶಿಪುವಿನ ಭೃತ್ಯರು ನೋಡಲು ಭಯಂಕರವಾಗಿದ್ದರು! ಕೆದರಿದ ಕೆಂಪು ಕೇಶರಾಶಿ, ಕೆಂಪಾದ ಗಡ್ಡಮೀಸೆಗಳು, ಕೆಂಡದಂಥ ಕಂಗಳು, ಗರಗಸದಂಥ ಕೋರೆಹಲ್ಲುಗಳು, ಒರಟಾದ ಮುಖ ಮತ್ತು ಮೈ ಚರ್ಮ, ಮೃಗಚರ್ಮವನ್ನು ಧರಿಸಿದ್ದ ಧಡೂತಿ ದೇಹಗಳು, ಇವುಗಳಿಂದ ಕೂಡಿದ್ದ ಬೀಭತ್ಸಾಕೃತಿಯ ಆ ರಾಕ್ಷಸರು ತಮ್ಮ ಕೈಗಳಲ್ಲಿ ಬಹಳ ತೀಕ್ಷ್ಣವಾದ ತ್ರಿಶೂಲಗಳನ್ನು ಹಿಡಿದಿದ್ದನ್ನು ನೋಡಿದ ಮಾತ್ರಕ್ಕೇ, ಐದು ವರ್ಷದ ಬಾಲಕನಾದ ಪ್ರಹ್ಲಾದನೇನು, ವೀರಾಧಿವೀರರೂ ಹೆದರಿ ನಡುಗುವಂತಿತ್ತು! ಆದರೆ ತನ್ನನ್ನು ಕೊಲ್ಲಲೆಂದು ಅವರು ಸೆಳೆದೊಯ್ಯುತ್ತಿದ್ದರೂ ಪ್ರಹ್ಲಾದನು ಸ್ವಲ್ಪವೂ ಹೆದರಲಿಲ್ಲ! ಅವರು ಪ್ರಹ್ಲಾದನನ್ನು ಒಂದು ಭಯಂಕರ ಕತ್ತಲಿನ ಗುಹೆಗೆ ತಳ್ಳಿದರು! ಅಲ್ಲಿ ಇನ್ನೂ ಅನೇಕ ಯಮಸದೃಶರಾದ ರಾಕ್ಷಸರಿದ್ದರು! ಎಲ್ಲರೂ ಸೇರಿ, “ಅವನನ್ನು ಕೊಚ್ಚಿ ಹಾಕಿ! ಕತ್ತರಿಸಿ! ಕುಟ್ಟಿ! ಚುಚ್ಚಿ ಚುಚ್ಚಿ ಕೊಲ್ಲಿ!” ಎಂದು ರುದ್ರಮಯವಾಗಿ ಆರ್ಭಟಿಸುತ್ತಾ ಅವನ ಮೇಲೆರಗಿದರು! ತಮ್ಮ ತೀಕ್ಷ್ಣಾತಿ ತೀಕ್ಷ್ಣ ಶೂಲಗಳಿಂದ ಪ್ರಹ್ಲಾದನ ಸರ್ವಾಂಗಗಳಿಗೂ ಪ್ರಹರಿಸಿದರು! ಪ್ರಹ್ಲಾದನಾದರೋ ಮೌನವಾಗಿ ಕುಳಿತು ಹರಿನಾಮಸ್ಮರಣೆ ಮಾಡುತ್ತಾ ತನ್ನ ಮನಸ್ಸನ್ನು ಭಗವಂತನಲ್ಲಿ ಸಂಪೂರ್ಣವಾಗಿ ಲೀನವಾಗಿಸಿಬಿಟ್ಟನು! ರಾಕ್ಷಸರ ಪ್ರಹಾರಗಳು ಅವನ ಕೋಮಲ ತನುವನ್ನು ಒಂದಿಷ್ಟೂ ಸೋಕಲಿಲ್ಲ! ರಾಕ್ಷಸರು ಅವನನ್ನು ಕೊಲ್ಲಲು ಸರ್ವಪ್ರಯತ್ನಗಳನ್ನೂ ಮಾಡಿದರು! ಪ್ರಹ್ಲಾದನಿಗೆ ಕೂದಲು ಕೊಂಕುವಷ್ಟೂ ತೊಂದರೆಯಾಗಲಿಲ್ಲ! ಕಡೆಗೆ ರಾಕ್ಷಸರು ಸೋತು, ಅವನನ್ನು ಹಿರಣ್ಯಕಶಿಪುವಿನ ಮುಂದೆ ಹಾಜರುಪಡಿಸಿದರು; ತಮಗಾದ ಅನುಭವವನ್ನು ಅಚ್ಚರಿಯಿಂದ ಹೇಳಿಕೊಂಡರು.

ಭೃತ್ಯರ ಮಾತುಕೇಳಿ ಹಿರಣ್ಯಕಶಿಪುವು ಬಹಳ ವಿಸ್ಮಿತನಾದನು. ಆದರೆ ಪ್ರಹ್ಲಾದನನ್ನು ಕೊಲ್ಲುವ ವಿಚಾರವನ್ನು ಬಿಡಲಿಲ್ಲ; ತನ್ನ ಸೇನಾಧಿಪತಿಯನ್ನು ಕೂಗಿ ಆಜ್ಞಾಪಿಸಿದನು, “ಇವನನ್ನು ಎತ್ತರವಾದ ಬೆಟ್ಟದಿಂದ ನೂಕಿ ಕೊಂದುಬಿಡಿ!”

ಸೇನಾಧಿಪತಿಯು ಕೆಲವು ರಾಕ್ಷಸ ಸೈನಿಕರೊಂದಿಗೆ ಪ್ರಹ್ಲಾದನನ್ನು ಅತ್ಯಂತ ಎತ್ತರವಾದ ಪರ್ವತ ಶಿಖರಕ್ಕೆ ಕರೆದೊಯ್ದನು; ಅಂಥ ಮುದ್ದಾದ ಬಾಲಕನನ್ನು ಕೊಲ್ಲಲು ಅವನಿಗೆ ಮನಸ್ಸು ಬಾರದು. ಆದರೆ ರಾಜಾಜ್ಞೆಯನ್ನು ಮೀರುವಂತಿರಲಿಲ್ಲ. ಪ್ರಹ್ಲಾದನಿಗೆ ಗಿರಿಯ ಕೆಳಗಿನ ಆಳವನ್ನು ತೋರಿಸಿ, “ನೋಡು! ಅಮೂಲ್ಯವಾದ ನಿನ್ನ ಜೀವವನ್ನು ಕಳೆದುಕೊಳ್ಳಬೇಡ! ಹರಿಧ್ಯಾನವನ್ನು ಬಿಟ್ಟು ನಿನ್ನ ತಂದೆಯೇ ಸರ್ವೇಶ್ವರನೆಂದು ಒಪ್ಪಿಕೋ! ಇಲ್ಲಿಂದ ಬಿದ್ದರೆ ಒಂದು ಎಲುಬೂ ಸಿಗುವುದಿಲ್ಲ!” ಎಂದು ಹೆದರಿಸಲು ಪ್ರಯತ್ನಿಸಿದ. ಆದರೆ ಪ್ರಹ್ಲಾದನು ಸ್ವಲ್ಪವೂ ಹೆದರದೇ ನಿಶ್ಚಲ ದೃಢ ಮನಸ್ಸಿನಿಂದ, “ಓಂ ನಮೋ ನಾರಾಯಣಾಯ!” ಎನ್ನುತ್ತಾ ಹರಿಧ್ಯಾನ ಪರಾಯಣನಾದ! ಇದರಿಂದ ಸೇನಾಧಿಪತಿಯು ಕುಪಿತನಾಗಿ ಸೈನಿಕರಿಗೆ ಪ್ರಹ್ಲಾದನನ್ನು ಕೆಳಗೆ ತಳ್ಳಲು ಆಜ್ಞಾಪಿಸಿದ! ಅವರು ಆ ಪುಟ್ಟ ಬಾಲಕನನ್ನು ಕೆಳಗೆ ತಳ್ಳಿಬಿಟ್ಟರು! ಅನಂತರ ಅವರು ಕೆಳಗೆ ಬಗ್ಗಿ ನೋಡಿ ಪ್ರಹ್ಲಾದನ ಯಾವ ಚಹರೆಯೂ ಕಾಣದಿರಲು, ನಿಶ್ಚಿಂತರಾಗಿ ಹಿಂದಿರುಗಿದರು; ದೈತ್ಯ ರಾಜನಿಗೆ ತಾವು ಪ್ರಹ್ಲಾದನನ್ನು ಕೊಂದ ಬಗೆಯನ್ನು ವರ್ಣಿಸಿದರು. ಅದನ್ನು ಕೇಳಿ ಹಿರಣ್ಯಕಶಿಪುವಿಗೆ ಮನದಲ್ಲೇ ದುಃಖವಾದರೂ ತೋರಗೊಡಲಿಲ್ಲ. ಆದರೆ ಕಯಾಧುವು ಗಳಗಳನೆ ಅತ್ತುಬಿಟ್ಟಳು! ಅವಳನ್ನು ಸಮಾಧಾನಪಡಿಸುತ್ತಾ ಹಿರಣ್ಯಕನು ಹೇಳಿದ, “ಶಾಂತಳಾಗು ದೇವಿ! ನಿನಗೆ ಮಗನ ಮೇಲೆ ಎಷ್ಟು ಪ್ರೀತಿಯೋ, ನನಗೆ ನನ್ನ ತಮ್ಮನ ಮೇಲೆ ಅಷ್ಟೇ ಪ್ರೀತಿಯಿರುವುದಲ್ಲವೇ! ಅಂಥ ನನ್ನ ಪ್ರೀತಿಯ ತಮ್ಮನನ್ನು ಕೊಂದ ಆ ನನ್ನ ಪರಮಶತ್ರು ಹರಿಯನ್ನು ಇವನು ಪೂಜಿಸುತ್ತಿದ್ದರೆ… ಯಾರಿಗೆ ತಾನೇ ಸುಮ್ಮನಿರಲಾದೀತು?! ಬೆಳೆಯುತ್ತಿರುವ ಮುಳ್ಳುಕಂಟಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು!” ತನ್ನ ಹಲ್ಲುಗಳನ್ನು ಕಟಕಟನೆ ಕಡಿದು ಹೊರಟು ಹೋದ!

ಮರುದಿನ, ಒಂದು ಆಶ್ಚರ್ಯ! ಬಾಲ ಪ್ರಹ್ಲಾದನು ಒಂದು ಪುಟ್ಟ ಗಾಯವೂ ಇಲ್ಲದೇ ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ! ತಾಯಿ ಕಯಾಧುವು ಆನಂದತುಂದಿಲಳಾಗಿ ಅವನನ್ನು ಅಪ್ಪಿ ಮುದ್ದಾಡಿ ಆನಂದಬಾಷ್ಪಗಳಿಂದ ತೋಯಿಸಿ, “ಕಂದಾ…! ನಿನಗೇನೂ ಆಗಲಿಲ್ಲವಷ್ಟೆ?!” ಎಂದಳು.

“ಹರಿಯನ್ನು ನಂಬಿದವರಿಗೆ ಯಾವ ಅಪಾಯವೂ ಇಲ್ಲಮ್ಮಾ…!” ಎಂದನು ಪ್ರಹ್ಲಾದ!

“ಅಯ್ಯೋ…! ಇದೇನಪ್ಪಾ ನಿನ್ನ ಹರಿಹುಚ್ಚು?! ನೋಡು! ನಿನ್ನ ತಂದೆ ಸ್ವರ್ಗಮರ್ತ್ಯ- ಪಾತಾಳ ಲೋಕಗಳನ್ನೆಲ್ಲಾ ವಶಪಡಿಸಿಕೊಂಡಿರುವ ಮಹಾಧೀರರು! ಅವರನ್ನು ಕಂಡರೆ, ಹೆಸರು ಕೇಳಿದರೆ, ಸಾಮಾನ್ಯರೇನು, ಅಷ್ಟದಿಕ್ಪಾಲಕರೂ ಗಡಗಡನೆ ನಡುಗುತ್ತಾರೆ! ಅವರೇ ಜಗದೀಶ್ವರರೆನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಕಪ್ಪಾ? ಸುಮ್ಮನೆ ಒಪ್ಪಿಕೊಳ್ಳಬಾರದೇ?” ತಾಯಿಯು ಬೇಡಿಕೊಂಡಳು.

“ಅಮ್ಮಾ! ಶಕ್ತಿಯಿದ್ದ ಮಾತ್ರಕ್ಕೆ ಒಬ್ಬನು ಜಗದೀಶ್ವರನಾಗಲಾರ! ಹುಟ್ಟು ಸಾವುಗಳಿಲ್ಲದ, ಕರ್ಮಬಂಧನಕ್ಕೆ ಸಿಲುಕಿಕೊಳ್ಳದ, ಎಲ್ಲೆಲ್ಲೂ ಇರುವ, ಪ್ರೇಮಮಯಿಯಾದ ಸನಾತನ ಸತ್ಯವೇ ಜಗದೀಶ್ವರ! ಅದುವೇ ಶ್ರೀಹರಿ! ಅವನೇ ಬೀಳುತ್ತಿದ್ದ ನನ್ನನ್ನು ಹಿಡಿದು ಕಾಪಾಡಿದ್ದು…!” ಪ್ರಹ್ಲಾದ ಹೇಳಿದ.

ಅಲ್ಲಿಯೇ ನಿಂತು ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಹಿರಣ್ಯಕಶಿಪುವಿಗೆ ಮೈಯೆಲ್ಲಾ ಉರಿಯಿತು! “ನಿನ್ನದು ಅತಿಯಾಯಿತು!” ಎಂದು ಪ್ರಹ್ಲಾದನನ್ನು ಸೆಳೆದು ಸೇನಾಧಿಪತಿಯನ್ನು ಕೂಗಿದ! “ಇವನನ್ನು ಭೋರ್ಗರೆಯುವ ಸಾಗರದಲ್ಲಿ ಮುಳುಗಿಸಿಬಿಡು!” ಆಜ್ಞಾಪಿಸಿದ!

ಕಯಾಧು, ಅದನ್ನು ತಡೆಯಲಾರದಾದಳು.

ಸೇನಾಧಿಪತಿಯು ದೈತ್ಯೇಂದ್ರನ ಆಜ್ಞೆಯನ್ನು ನೆರವೇರಿಸಿದ. ಆದರೇನು? ಪ್ರಹ್ಲಾದನು ಪುನಃ ಯಾವುದೇ ತೊಂದರೆಯಿಲ್ಲದೇ ಪಾರಾಗಿ ಬಂದ!

ಈಗ ಹಿರಣ್ಯಕಶಿಪುವಿಗೆ ಮಗನನ್ನು ಕೊಲ್ಲುವುದೇ ಒಂದು ಕಸುಬಾಯಿತು! ಅದಕ್ಕಾಗಿ ಪ್ರತಿದಿನವೂ ಅವನು ವಿವಿಧ ಉಪಾಯಗಳನ್ನು ಆಲೋಚಿಸತೊಡಗಿದನು! ಪ್ರಹ್ಲಾದನನ್ನು ಆನೆಗಳಿಂದ ತುಳಿಸಲು ಪ್ರಯತ್ನಿಸಿದನು! ಬೆಂಕಿಗೆ ತಳ್ಳಿ ಸುಡಿಸಲು ಪ್ರಯತ್ನಿಸಿದನು! ಕೊರೆಯುವ ಚಳಿಗೂ ಹಿಮಕ್ಕೂ ಮೈಯೊಡ್ಡಿಸಿ ಕೊಲ್ಲಲು ಯತ್ನಿಸಿದನು! ಭಯಂಕರ ವಿಷಸರ್ಪಗಳ ಮಧ್ಯೆ ತಳ್ಳಿ ಅವುಗಳಿಂದ ಅವನನ್ನು ಕಚ್ಚಿಸಲು ಪ್ರಯತ್ನಿಸಿದನು! ದೊಡ್ಡ ದೊಡ್ಡ ಬಂಡೆಗಳನ್ನೂ ಕಲ್ಲುಗಳನ್ನೂ ಅವನ ಮೇಲೆ ಉರುಳಿಸುವುದೂ ಪ್ರಹರಿಸುವುದೂ ಮಾಡಿಸಿದನು! ಅವನ ಮೇಲೆ ಅಭಿಚಾರಿಕ ಕ್ರಿಯೆಗಳನ್ನು ಮಾಡಿಸಿದನು! ತಾನೇ ಸ್ವಯಂ ಅವನಿಗೆ ವಿಷಪ್ರಾಶನವನ್ನು ಮಾಡಿಸಿದನು! ಊಟ ಹಾಕದೆಯೇ ಉಪವಾಸ ಕೆಡವಿದನು ಕೂಡ! ಆದರೆ ಪ್ರಹ್ಲಾದನು ತನ್ನ ತಂದೆಯ ಈ ಎಲ್ಲಾ ಹಿಂಸಾಚಾರಗಳನ್ನೂ ನಗುನಗುತ್ತಲೇ ಸ್ವೀಕರಿಸಿದನು! ಎಲ್ಲದರಲ್ಲೂ ಕೂದಲೂ ಕೊಂಕದೇ ಪಾರಾದನು! ಎಲ್ಲವೂ ಅವನ ಅಚಲವಾದ ಹರಿಭಕ್ತಿಯ ಮಹಿಮೆ!

ಹಿರಣ್ಯಕಶಿಪುವಿಗೆ ವಿಸ್ಮಯ, ಚಿಂತೆಗಳುಂಟಾದವು! “ಎಲಾ ಎಲಾ ಆಶ್ಚರ್ಯವೇ!” ಅವನು ತನ್ನಲ್ಲೇ ಯೋಚಿಸಿದನು, “ಇದೆಲ್ಲಿಂದ ಬರುತ್ತಿದೆ ಇವನಿಗೆ ಇಂಥ ಶಕ್ತಿ?! ನಾನು ಇವನನ್ನು ಬಹುವಾಗಿ ನಿಂದಿಸಿದೆನು! ವಿವಿಧೋಪಾಯಗಳಿಂದ ಇವನನ್ನು ಕೊಲ್ಲಲೆತ್ನಿಸಿದೆನು! ಎಲ್ಲವನ್ನೂ ಸ್ವಸಾಮರ್ಥ್ಯದಿಂದಲೇ ತಡೆದುಕೊಂಡನು! ಯಾವ ಶಕ್ತಿಯನ್ನು ನಾನು ತಪಸ್ಸಿನಿಂದ ಪಡೆಯಬೇಕಾಯಿತೋ, ಅದನ್ನಿವನು ಐದು ವರ್ಷದ ಬಾಲಕನಿರುವಾಗಲೇ ಪಡೆದುಕೊಂಡಿದ್ದಾನೆ! ಅದೂ ಯಾವ ಕಷ್ಟವೂ ಇಲ್ಲದೇ ತನ್ನಲ್ಲೇ ಪಡೆದಿದ್ದಾನೆ! ಇವನನ್ನು ನೋಡಿದರೆ ಅಮರನೇನೋ ಎನಿಸುತ್ತದೆ! ಯಾವ ಉಪಾಯದಿಂದಲೂ ಸಾಯದ ಇವನ ಶಕ್ತಿ ಅಸೀಮಿತವಾದದ್ದು! ಇವನೊಡನೆ ವಿರೋಧ ಕಟ್ಟಿಕೊಂಡರೆ ನಾನೇ ಸಾಯಬಹುದೇನೋ…! ಅಲ್ಲದೇ ಇವನು ಒಳ್ಳೆಯ ಮಾತಿಗೂ ಬಗ್ಗುವವನಲ್ಲ…! ನಾಯಿಯ ಬಾಲದಂತೆ ಅವನನ್ನು ನೆಟ್ಟಗೆ ಮಾಡುವುದು ದುಸ್ಸಾಧ್ಯ…!”

ಹೀಗೆ ಯೋಚಿಸುತ್ತಾ ಹಿರಣ್ಯಕಶಿಪುವು ದಿನೇ ದಿನೇ ಕಳೆಗುಂದಿದನು! ಕಾಂತಿಹೀನನಾದ ತಮ್ಮ ಪ್ರಭುವನ್ನು ಕಂಡು, ಒಂದು ದಿನ, ಷಂಡಾಮರ್ಕರು ಅವನಿಗೆ ಏಕಾಂತದಲ್ಲಿ ಹೇಳಿದರು, “ಪ್ರಭು! ದೈತ್ಯೇಂದ್ರ! ಇಷ್ಟೇಕೆ ಚಿಂತೆ ಮಾಡುವೆ? ನೀನು ಏಕಾಂಗಿಯಾಗಿಯೇ ಭುವನತ್ರಯಗಳನ್ನು ಗೆದ್ದು ನಿನ್ನ ವಶಪಡಿಸಿಕೊಂಡಿರುವೆ! ಕೇವಲ ನಿನ್ನ ಹುಬ್ಬನ್ನಾಡಿಸುವುದರಿಂದಲೇ ಸಕಲ ದೇವಗಣಗಳನ್ನೂ ಗಡಗಡನೆ ನಡುಗಿಸುವೆ! ಇಂಥ ಅತುಳಪರಾಕ್ರಮಿಯಾದ ನೀನು ಒಬ್ಬ ಬಾಲಕನ ವಿಷಯವಾಗಿ ಏಕಿಷ್ಟು ಚಿಂತಿಸುವೆ? ಅವನು ಎಷ್ಟಾದರೂ ಒಬ್ಬ ಬಾಲಕ…! ಅಪ್ರಬುದ್ಧ…! ಅವನು ಹೇಳುವುದಕ್ಕೇನು ಬೆಲೆಯಿರುತ್ತದೆ? ಬಾಲಕರೇ ಹೀಗೆ…! ನೂರಾರು ಕಲ್ಪನೆಗಳನ್ನು ಮಾಡುತ್ತಾರೆ! ನೂರಾರು ಕಂತೆ ಸುಳ್ಳುಗಳನ್ನು ಒದರುತ್ತಿರುತ್ತಾರೆ! ಅವನ್ನೆಲ್ಲಾ ನಾವು ಮನಸ್ಸಿಗೆ ತಂದುಕೊಳ್ಳಬಾರದು! ಈಗ ಒಂದು ಕೆಲಸ ಮಾಡು…! ಗುರು ಶುಕ್ರಾಚಾರ್ಯರು ತಪಸ್ಸಿನಿಂದ ಹಿಂದಿರುಗುವವರೆಗೂ ಅವನು ಎಲ್ಲೂ ಓಡಿಹೋಗದಂತೆ ವರುಣನ ಪಾಶಗಳಿಂದ ಅವನನ್ನು ಬಂಧಿಸಿಬಿಡು! ಅವರು ಹಿಂದಿರುಗಿದರೆಂದರೆ, ಅವರ ಬುದ್ಧಿವಾದದಿಂದ ಇವನು ಖಂಡಿತವಾಗಿಯೂ ನೆಟ್ಟಗಾಗುವನು! ಅಷ್ಟರಲ್ಲಿ ಇವನು ಸ್ವಲ್ಪ ಬೆಳೆದೂ ಇರುತ್ತಾನೆ! ಬಾಲ್ಯದ ಮಂಕು ಹರಿದು ಬುದ್ಧಿವಂತನಾಗುತ್ತಾನೆ!”

ಹಿರಣ್ಯಕಶಿಪುವು ಬರಿದೇ ಮುಗುಳ್ನಕ್ಕು ಮೌನವಾದನು; ಸ್ವಲ್ಪ ಸಮಯದ ಬಳಿಕ ಹೇಳಿದನು, “ಗುರುಪುತ್ರರೇ! ಶುಕ್ರಾಚಾರ್ಯರು ಬರುವುದು ಇನ್ನೂ ಬಹಳ ಕಾಲವಾಗುತ್ತದೆ. ನೀವೇ ಪ್ರಹ್ಲಾದನನ್ನು ಪುನಃ ಗುರುಕುಲಕ್ಕೆ ಕರೆದೊಯ್ದು ರಾಜಕಾರ್ಯ, ಗಾರ್ಹಸ್ಥ್ಯ ವಿಚಾರಗಳ ಬಗ್ಗೆ ಪಾಠಮಾಡಿ! ಮತ್ತೆ ಮತ್ತೆ ನನ್ನ ಕೀರ್ತಿಯನ್ನೇ ಹೊಗಳಿ ಚೆನ್ನಾಗಿ ಬೋಧಿಸಿ ನಾನೇ ಜಗದೀಶ್ವರನೆಂದು ಅವನನ್ನು ತಿದ್ದಲು ಯತ್ನಿಸಿ! ಇನ್ನೂ ಐದು ವರ್ಷವಲ್ಲವೇ? ಖಂಡಿತ ತಿದ್ದಿಕೊಳ್ಳುತ್ತಾನೆ! ಇತರ ದೊಡ್ಡ ಹುಡುಗರೂ ಇರುತ್ತಾರಲ್ಲವೇ? ಅವರ ಒಡನಾಟದಿಂದಲಾದರೂ ಸರಿಹೋದಾನು! ಎಲ್ಲರೂ ಒಂದು ರೀತಿಯಲ್ಲಿರುವಾಗ ಇವನೊಬ್ಬನೇ ಬೇರೆ ರೀತಿಯಲ್ಲಿರಲಾಗುವುದಿಲ್ಲ! ಅಲ್ಲವೇ?”

“ಹಾಂ… ಹೌದು ಪ್ರಭು!” ಗುರುಪುತ್ರರು ಒಪ್ಪಿಕೊಂಡರು.

ಅಂತೆಯೇ ಷಂಡಾಮರ್ಕರು ಪ್ರಹ್ಲಾದನನ್ನು ಪುನಃ ಗುರುಕುಲಕ್ಕೆ ಕರೆದೊಯ್ದರು.

* * *

ಬಾಲಕನ ಬೋಧನೆ

ಷಂಡಾಮರ್ಕರು ಗುರುಕುಲದಲ್ಲಿ ಪ್ರಹ್ಲಾದನಿಗೆ ಮತ್ತೆ ಮತ್ತೆ ವಿವರವಾಗಿ ನಿತ್ಯ ಕಾಯಕದ ಧರ್ಮ, ಅರ್ಥ, ಕಾಮಗಳನ್ನು ಬೋಧಿಸಿದರು. ದ್ವಂದ್ವ ಭಾವಗಳನ್ನುಳ್ಳ ಈ ಬೋಧನೆಗಳು ಪ್ರಹ್ಲಾದನಿಗೆ ರುಚಿಸಲಿಲ್ಲ. ಒಮ್ಮೆ, ಗುರುಗಳೀರ್ವರೂ ಗೃಹಕಾರ್ಯಗಳಿಗಾಗಿ ಹೋಗಿದ್ದಾಗ, ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿದ್ದ ಇತರ ಅಸುರ ಬಾಲಕರು ಪ್ರಹ್ಲಾದನನ್ನು ಆಟಕ್ಕಾಗಿ ಕರೆದರು. ಸೌಮ್ಯ ಸ್ವಭಾವದ ಪ್ರಹ್ಲಾದನನ್ನು ಕಂಡರೆ ಅವರಿಗೆ ಪ್ರೀತಿಯಿತ್ತು.

ಪ್ರಹ್ಲಾದನು ಮುಗುಳ್ನಗುತ್ತಾ ಶಾಂತತೆಯಿಂದ ಮಧುರವಾದ ಧ್ವನಿಯಲ್ಲಿ ಹೇಳಿದನು, “ಸ್ನೇಹಿತರೇ! ನಾವು ಬಾಲ್ಯದಲ್ಲೇ ಭಾಗವತ ಧರ್ಮಗಳನ್ನು ರೂಢಿಸಿಕೊಳ್ಳಬೇಕು. ಬುದ್ಧಿವಂತನಾದವನು ತನಗೆ ತುಂಬಾ ವಯಸ್ಸಾಗಲೆಂದು ಕಾಯದೇ, ಬಾಲ್ಯದಿಂದಲೇ ಇವುಗಳನ್ನು ರೂಢಿಸಿಕೊಳ್ಳುತ್ತಾನೆ. ಏಕೆಂದರೆ, ಈ ಮಾನವ ಜನ್ಮವು ಬಹಳ ದುರ್ಲಭವಾದದು; ಅಲ್ಲದೇ ಅನಿಶ್ಚಿತವಾದುದು! ಆದರೂ ಇದು ಅರ್ಥಪೂರ್ಣವಾದುದು.”

“ಪ್ರಹ್ಲಾದ! ಈ ಭಾಗವತ ಧರ್ಮವೆಂದರೇನು? ಅದು ಆಡುವುದಕ್ಕಿಂತಲೂ ಚೆನ್ನಾಗಿರುವುದೇ?!” ಮುಗ್ಧ ಬಾಲಕರು ಪ್ರಶ್ನಿಸಿದರು.

“ಓಹೋ!” ಪ್ರಹ್ಲಾದನು ನಗುತ್ತಾ ಉತ್ತರಿಸಿದನು, “ಅದು ಹಾಲು, ಜೇನು, ಎಳನೀರು, ಮೊದಲಾದ ಮಧುರವಾದ ವಸ್ತುಗಳಿಗಿಂತಲೂ ಮಧುರವಾಗಿರುವುದು! ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೆನಿಸುವುದು! ಆಗ ಬೇರೇನೂ ಬೇಕಾಗುವುದೇ ಇಲ್ಲ!”

“ಹೌದೇ? ಹಾಗಾದರೆ ನಮಗೂ ಅದನ್ನು ಹೇಳು ಪ್ರಹ್ಲಾದ!” ಅಸುರ ಬಾಲಕರು ಪ್ರಹ್ಲಾದನ ಸುತ್ತಲೂ ನೆರೆದು ಕುಳಿತರು.

“ದೈತ್ಯ ಬಾಲಕರೇ” ಪ್ರಹ್ಲಾದನು ಹೇಳಿದನು, “ಭಾಗವತ ಧರ್ಮವೆಂದರೆ ಇಷ್ಟೇ; ಶ್ರೀಹರಿಯ ಪಾದಸೇವೆ ಮಾಡಿ ಅವನನ್ನು ಪ್ರಸನ್ನಗೊಳಿಸುವುದು”

“ಶ್ರೀ ಹರಿ ಎಂದರೆ ಯಾರು? ಅವನನ್ನೇಕೆ ಪ್ರಸನ್ನಗೊಳಿಸಬೇಕು?”

“ಶ್ರೀಹರಿಯು ಸರ್ವದೇವೋತ್ತಮ ಪುರುಷ! ಭಗವಂತ! ಎಲ್ಲರ ಹೃದಯಗಳಲ್ಲಿರುವ ಪರಮಾತ್ಮ! ಎಲ್ಲರಿಗೂ ಒಡೆಯ, ಮತ್ತು ಎಲ್ಲರಿಗೂ ಪ್ರಿಯನಾಗಿರುವ ಮಿತ್ರ! ಆದ್ದರಿಂದ ಅವನನ್ನು ನಾವು ಪ್ರಸನ್ನಗೊಳಿಸಬೇಕು. ಮಿತ್ರರೇ! ಇಂದ್ರಿಯಗಳಿಂದ ದೊರೆಯುವ ದೈಹಿಕ ಸುಖವು ಎಲ್ಲಾ ಜನ್ಮಗಳಲ್ಲಿಯೂ ದೊರೆಯುತ್ತದೆ. ನಾವು ಕಷ್ಟವು ಬೇಕೆಂದು ಕೇಳದಿದ್ದರೂ ಅದು ತಾನಾಗಿಯೇ ಬಂದೊದಗುವಂತೆ, ಸುಖವೂ ನಮ್ಮ ಪೂರ್ವಾರ್ಜಿತ ಕರ್ಮಾನುಸಾರವಾಗಿ ಬಂದೇ ಬರುತ್ತದೆ. ಆದ್ದರಿಂದ ಅದಕ್ಕಾಗಿ ನಾವು ಬಹಳ ಪ್ರಯಾಸ ಪಡಬಾರದು ಮತ್ತು ಆಯುಷ್ಯವನ್ನು ಅದಕ್ಕಾಗಿ ಬಹಳ ವ್ಯಯಿಸಬಾರದು; ಬದಲಿಗೆ, ಮುಕುಂದನ ಚರಣಸೇವೆ ಮಾಡಬೇಕು. ಇದರಿಂದ ದೊರೆಯುವ ಆನಂದವು ಬರಿಯ ಸುಖಕ್ಕಾಗಿ ಕಷ್ಟಪಡುವುದರಲ್ಲಿ ದೊರೆಯುವುದಿಲ್ಲ. ಆದ್ದರಿಂದ ಬುದ್ಧಿವಂತನಾದವನು, ದೇಹವು ಗಟ್ಟಿಯಾಗಿರುವಾಗಲೇ ತನ್ನ ಕ್ಷೇಮಕ್ಕಾಗಿ ಭಗವಂತನ ಸೇವೆ ಮಾಡಬೇಕು.”

“ಪ್ರಹ್ಲಾದ! ನೀನು ಹೇಳುವುದೇನೋ ಸರಿ! ಆದರೆ ಇದನ್ನು ವೃದ್ಧಾಪ್ಯದಲ್ಲಿ ಮಾಡಬಹುದಲ್ಲವೇ? ಆಗಲೂ ಸಾಕಷ್ಟು ಸಮಯವಿರುವುದಲ್ಲವೇ?”

“ಮನುಷ್ಯನ ಆಯಸ್ಸು ಸರಾಸರಿ ನೂರು ವರ್ಷ. ಅವನಿಗೆ, ಅದರಲ್ಲಿ ಅರ್ಧ ಆಯಸ್ಸು ನಿದ್ರೆಯಲ್ಲೇ ಕಳೆದುಹೋಗುತ್ತದೆ. ಇನ್ನುಳಿದ ಅರ್ಧಾಯುಷ್ಯದಲ್ಲಿ, ಬಾಲ್ಯ ಮತ್ತು ಯೌವನದ ಆಟ, ಮೋಜುಗಳಲ್ಲಿ ಇಪ್ಪತ್ತು ವರ್ಷಗಳು ಕಳೆದುಹೋಗುತ್ತವೆ! ಇನ್ನು ವೃದ್ಧಾಪ್ಯದಲ್ಲಾದರೋ, ದೇಹವೂ ಮನಸ್ಸೂ ಬಲಹೀನವಾಗಿ, ವ್ಯಕ್ತಿಯು ನಿತ್ಯಕಾರ್ಯಗಳನ್ನೇ ಅಚ್ಚುಕಟ್ಟಾಗಿ ಮಾಡಲಾರದೇ, ಇನ್ನೂ ಇಪ್ಪತ್ತು ವರ್ಷಗಳನ್ನು ವ್ಯಯಿಸುತ್ತಾನೆ! ಇನ್ನು ಭಗವಚ್ಚಿಂತನೆಗೆ ವೇಳೆಯೆಲ್ಲಿ? ಇನ್ನುಳಿದ ಹತ್ತು ವರ್ಷಗಳು, ಪೂರೈಸಲಾಗದ ಕಾಮನೆಗಳನ್ನು ಪೂರೈಸಲು ಯತ್ನಿಸುವ ಗೃಹಜೀವನದಲ್ಲಿ ಕಳೆಯುತ್ತವೆ! ಮನೆ, ಪ್ರಿಯೋಕ್ತಿಗಳನ್ನಾಡುವ ಪತ್ನಿ, ಮುದ್ದು ಮಾತುಗಳನ್ನಾಡುವ ಮಕ್ಕಳು, ವೃದ್ಧರಾದ ಮಾತಾಪಿತೃಗಳು, ಆಶ್ರಯಿಸಿರುವ ಆಳುಗಳು ಮತ್ತು ಪಶುಗಳು, ಇವೆಲ್ಲವುಗಳ ಮೋಹವನ್ನು ಯಾವನು ತಾನೇ ಬಿಡಬಲ್ಲನು? ಈ ಮೋಹಕ್ಕೆ ಹೆಚ್ಚು ಹೆಚ್ಚು ಅಂಟಿಕೊಳ್ಳುತ್ತಾ, ಮನುಷ್ಯನು ಕೋಶಗತವಾಗಿರುವ ರೇಷ್ಮೆ ಹುಳುವಿನಂತಾಗಿ ಬಿಡುತ್ತಾನೆ! ಕೇವಲ ಕುಟುಂಬ ಪೋಷಣೆಯಲ್ಲೇ ತನ್ನ ಆಯುಷ್ಯವನ್ನೆಲ್ಲಾ ಕಳೆಯುವ ಇಂಥವನು, ಮಾನವ ಜನ್ಮದ ನಿಜವಾದ ಉದ್ದೇಶ ಭಗವಂತನನ್ನು ಅರಿಯುವುದೆಂದು ತಿಳಿಯುವುದಿಲ್ಲ. ಎಂದಿಗೂ ಸಾಲದ ಧನಾರ್ಜನೆಗಾಗಿ ಬಹಳ ಕ್ಲೇಶಗಳನ್ನು ಅನುಭವಿಸುತ್ತಾನೆ! ಇಂಥ ಕೆಲವರು ಹಣಕ್ಕಾಗಿ ಇತರರನ್ನೂ ದೋಚುತ್ತಾರೆ! ಇದು ತಪ್ಪೆಂದು ತಿಳಿದಿರುವ ಬುದ್ಧಿವಂತರೂ ಇತರರನ್ನು ವಂಚಿಸುತ್ತಾ ಅಶಾಂತ ಮನಸ್ಕರಾಗಿರುತ್ತಾರೆ! ಕೆಲವರು ವಿದ್ವಾಂಸರಾಗಿದ್ದರೂ, `ಇದು ನನ್ನದು’ `ಅದು ಅವನದು’ ಎಂದು ಭೇದಭಾವ ಮಾಡುತ್ತಾ ಪರಿತಪಿಸುತ್ತಿರುತ್ತಾರೆ! ಕೆಲವರು ಹೆಣ್ಣಿನ ಮೋಹವಶರಾಗಿ ಅವಳ ಕೈಗೊಂಬೆಗಳಾಗಿ ಅವಳು ಹೇಳಿದ್ದಕ್ಕೆಲ್ಲಾ ಕುಣಿಯುತ್ತಾ ಅಶಾಂತರಾಗಿರುತ್ತಾರೆ! ಹೀಗೆ ಈ ಭೌತಿಕ ಜಗತ್ತಿನ ತುಂಬಾ ಉದ್ವೇಗಗಳಿದ್ದು ಭಗವಚ್ಚಿಂತನೆಗೆ ಅವಕಾಶವೇ ಆಗುವುದಿಲ್ಲ! ಆದ್ದರಿಂದ ಮಿತ್ರರೇ, ನೀವು ಈಗಲೇ ವಿಷಯ ಮೋಹವನ್ನೂ ಇಂಥವರ ಸಂಗವನ್ನೂ ಅಸುರಭಾವವನ್ನೂ ಬಿಟ್ಟು ಶ್ರೀಮನ್ನಾರಾಯಣನಲ್ಲಿ ಶರಣಾಗಿ!”

“ಭಲೇ ಪ್ರಹ್ಲಾದ! ನೀನು ಹೇಳಿದುದು ಸರಿಯಾಗಿದೆ! ಆದರೆ ಆ ಶ್ರೀಮನ್ನಾರಾಯಣನನ್ನು ಒಲಿಸಿಕೊಳ್ಳುವುದು ಕಷ್ಟವಲ್ಲವೇ? ಅವನನ್ನು ಮೆಚ್ಚಿಸುವುದಕ್ಕಾಗಿ ನಮ್ಮ ಕೆಲಸಕಾರ್ಯಗಳನ್ನೆಲ್ಲಾ ಬಿಟ್ಟು ಕಾಡಿಗೆ ಹೋಗಿ ತಪಸ್ಸು ಮಾಡಲಾದೀತೇ?”

“ಇಲ್ಲ ಇಲ್ಲ! ನೀವು ತಿಳಿದುಕೊಂಡಿರುವಂತೆ ಶ್ರೀಹರಿಯನ್ನು ಮೆಚ್ಚಿಸುವುದು ಕಷ್ಟವೇ ಅಲ್ಲ! ಏಕೆಂದರೆ ಅವನು ಎಲ್ಲಾ ಜೀವಿಗಳಲ್ಲೂ ಇರುವ ಪರಮಾತ್ಮನಾಗಿದ್ದಾನೆ! ಈ ವಿಶ್ವದ ಎಲ್ಲಕ್ಕೂ ಸಂಬಂಧಿಸಿದ್ದಾನೆ! ಅವನು ಬ್ರಹ್ಮದೇವನಿಂದ ಗಿಡಮರಗಳವರೆಗೂ ಉನ್ನತ ಇಲ್ಲವೇ ನೀಚಸ್ಥಿತಿಯಲ್ಲಿರುವ ಎಲ್ಲಾ ಜೀವಿಗಳಲ್ಲೂ ಇದ್ದಾನೆ! ಪಂಚಭೂತಗಳಲ್ಲಿ, ಅವುಗಳಿಂದಾದ ವಿಕಾರಗಳಲ್ಲಿ (ಭೌತಿಕ ವಸ್ತುಗಳಲ್ಲಿ), ಪ್ರಕೃತಿಯಲ್ಲಿ, ತ್ರಿಗುಣಗಳಲ್ಲಿ, ಅವನೊಬ್ಬನೇ ವ್ಯಾಪಿಸಿದ್ದಾನೆ! ತನ್ನ ದಿವ್ಯ ಸ್ವರೂಪದಲ್ಲೂ ಇದ್ದಾನೆ, ಎಲ್ಲೆಲ್ಲೂ ಕಾಣದೆಯೂ ಇದ್ದಾನೆ! ಅಖಂಡನೂ ಅವ್ಯಯನೂ ಆಗಿರುವ ಅವನ ಇರುವಿಕೆಯನ್ನು ಅನುಭವಿಸಿ ಆನಂದಿಸಬಹುದಷ್ಟೇ! ಆದರೆ ಭಕ್ತಿಯಿಲ್ಲದಿದ್ದರೆ, ವ್ಯಕ್ತಿಯು ಮಾಯೆಯಿಂದ ಆವೃತನಾಗಿ ಅವನ ಇರುವಿಕೆಯನ್ನು ಅರಿಯಲಾರ! ಆದ್ದರಿಂದ ಮಿತ್ರರೇ! ನೀವು ಎಲ್ಲಾ ಜೀವಿಗಳಲ್ಲೂ ದಯೆಯನ್ನೂ ಮೈತ್ರಿಯನ್ನೂ ತೋರಿಸಿ! ಶ್ರೀಹರಿಯಲ್ಲಿ ಭಕ್ತಿಯಿಟ್ಟು ಅವನ ಇರುವಿಕೆಯನ್ನು ಎಲ್ಲೆಲ್ಲೂ ಗುರುತಿಸಿ! ಈ ಅಸುರ ಸ್ವಭಾವವೆಂದರೆ ಇನ್ನೊಬ್ಬರಿಗೆ ತೊಂದರೆಯುಂಟುಮಾಡುವುದು ಮತ್ತು ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಒಬ್ಬನೇ ಸುಖಪಡುವುದು. ಇಂಥ ಅಸುರಭಾವವನ್ನು ವರ್ಜಿಸಿ. ಆಗ ಶ್ರೀಹರಿಯು ತುಷ್ಟನಾಗುತ್ತಾನೆ! ಮಿತ್ರರೇ, ಶ್ರೀಹರಿಯು ತುಷ್ಟನಾದರೆ ಯಾವುದು ತಾನೇ ಲಭ್ಯವಾಗದು? ಧರ್ಮಾರ್ಥಕಾಮಗಳಲ್ಲಿ ಯಾವುದು ಬೇಕೆಂದರೂ ದೊರೆಯುತ್ತದೆ! ಕಡೆಗೆ ಮೋಕ್ಷವೂ ದೊರೆಯುತ್ತದೆ! ಆದರೆ ಶ್ರೀಹರಿಯ ಭಕ್ತಿಯ ಆನಂದವನ್ನು ಸವಿದ ಭಕ್ತನಿಗೆ ಇದಾವುದೂ ಬೇಕಾಗುವುದೇ ಇಲ್ಲ! ಮಿತ್ರರೇ, ವೇದಗಳಲ್ಲಿ ಧರ್ಮಾರ್ಥಕಾಮಗಳೆಂಬ ತ್ರಿವರ್ಗಗಳು, ಅವುಗಳನ್ನು ಸಾಧಿಸಿಕೊಳ್ಳಲು ಹಲವಾರು ಪೂಜೆ, ಹೋಮ ಇತ್ಯಾದಿಗಳು, ಇವಕ್ಕೆ ಪೂರಕವಾಗಿ ನ್ಯಾಯ, ಜ್ಯೋತಿಷ, ವ್ಯಾಕರಣ, ಮೊದಲಾಗಿ ಹಲವಾರು ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಇವೆಲ್ಲದರ ಗುರಿ ಒಂದೇ; ಅದುವೇ ಎಲ್ಲಕ್ಕೂ ಮೂಲನಾದ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದು. ಅದು ಅವನ ಪಾದಪದ್ಮಗಳಿಗೆ ಶರಣಾಗುವುದರಿಂದ ಸಾಧ್ಯ! ಇಂಥ ಜ್ಞಾನವನ್ನು ಭಗವಂತನಾದ ಸಾಕ್ಷಾತ್‌ ನಾರಾಯಣನೇ ನಾರದರಿಗೆ ಉಪದೇಶಿಸಿದ. ನಾರದರು ದಯೆ ತೋರಿ ನನಗೆ ಉಪದೇಶಿಸಿದರು.”         

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi