ಪ್ರಹ್ಲಾದನ ಕಥೆ (ಭಾಗ-6)
ಆಧಾರ: ಶ್ರೀಮದ್ಭಾಗವತಮ್, ಏಳನೆಯ ಸ್ಕಂಧ
– ಡಾ॥ ಬಿ.ಆರ್. ಸುಹಾಸ್
ಪ್ರಹ್ಲಾದ! ನಾವಾಗಲೀ ನೀನಾಗಲೀ ಈ ನಮ್ಮ ಗುರುಗಳನ್ನು ಬಿಟ್ಟು ಬೇರೊಬ್ಬ ಗುರುವನ್ನು ಅರಿಯೆವು! ನೀನಾದರೋ, ಈ ಗುರುಕುಲ ಅಥವಾ ಅರಮನೆಯನ್ನು ಬಿಟ್ಟು ಬೇರೆಲ್ಲೂ ಹೋಗಿಲ್ಲ! ಹೀಗಿರಲು, ನಿನಗೆ ನಾರದರ ಪರಿಚಯ ಹೇಗಾಯಿತು! ಅವರು ಯಾವಾಗ ನಿನಗೆ ಈ ಜ್ಞಾನವನ್ನೆಲ್ಲಾ ಉಪದೇಶಿಸಿದರು?

“ಓ ಅದೊಂದು ದೊಡ್ಡ ಕಥೆ! ನಾನು ತಾಯಿಯ ಗರ್ಭದಲ್ಲಿರುವಾಗಲೇ ನಾರದರು ಈ ಜ್ಞಾನವನ್ನು ನನ್ನ ತಾಯಿಗೆ ಉಪದೇಶಿಸಿದರು. ಆಗ ನಾನು ಕಲಿತೆ… ನನ್ನ ತಾಯಿಯಾದರೋ, ಹೆಂಗಸಾಗಿರುವುದರಿಂದಲೂ ದೀರ್ಘಕಾಲವಾಗಿರುವುದರಿಂದಲೂ ಮರೆತುಬಿಟ್ಟಳು…” ಪ್ರಹ್ಲಾದನು ಇಂದ್ರನು ತನ್ನ ತಾಯಿಯನ್ನು ಅಪಹರಿಸಿದ ಘಟನಾವಳಿಯನ್ನು ಹೇಳಿ, “ಈಗ ನೀವು ನನ್ನ ಮಾತುಗಳನ್ನು ಶ್ರದ್ಧೆಯಿಂದ ಕೇಳಿದರೆ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಬಹುದು. ಸ್ತ್ರೀಯರಾಗಲೀ ಬಾಲಕರಾಗಲೀ ಈ ಜ್ಞಾನಕ್ಕೆ ಹೊರತಲ್ಲ. ಮಿತ್ರರೇ, ಒಂದು ಮರದಲ್ಲಿ ಎಲೆ, ಮೊಗ್ಗು, ಹೂವು, ಕಾಯಿ, ಹಣ್ಣು ಹೀಗೆ ಹಲವಾರು ಬದಲಾಗುವ ವಸ್ತುಗಳು ಹುಟ್ಟುತ್ತಿದ್ದರೂ ಮರವು ಬದಲಾಗದೇ ಹಾಗೆಯೇ ಇರುತ್ತದೆ. ಅಂತೆಯೇ, ಒಬ್ಬ ವ್ಯಕ್ತಿಯ ಹುಟ್ಟು, ಅಸ್ತಿತ್ವ, ಬೆಳವಣಿಗೆ, ರೂಪ ವ್ಯತ್ಯಾಸ, ಪ್ರಜನನ, ಸಾವು, ಎಂಬ ಆರು ಬದಲಾವಣೆಗಳನ್ನು ಹೊಂದಿದಂತೆ ಕಂಡರೂ ಅವು ದೇಹಕ್ಕೆ ಮಾತ್ರ; ಆತ್ಮಕ್ಕಲ್ಲ! ಮಿತ್ರರೇ, ಈ ಆತ್ಮವು ನಿತ್ಯವೂ ಅವ್ಯಯವೂ ಶುದ್ಧವೂ, ಏಕವೂ, ದೇಹಕ್ಕೆ ಆಶ್ರಯವಾದ ಕ್ಷೇತ್ರಜ್ಞನೂ ಆಗಿರುವುದು. ಬದಲಾಗದ, ಸ್ವಯಂ ಪ್ರಕಾಶವಾದುದೂ, ದೇಹದ ತುಂಬಾ ವ್ಯಾಪಕವಾದುದೂ, ದೇಹದಿಂದ ಬೇರೆಯಾದುದೂ ಭೌತಿಕ ಆವರಣವಿಲ್ಲದುದೂ ಆಗಿರುವುದು. ಪ್ರತಿಯೊಬ್ಬನೂ ಈ ಆತ್ಮವೇ ಹೊರತು, ದೇಹವಲ್ಲ. ಈ ಆತ್ಮವು ವಿಶ್ವಾತ್ಮವಾದ ಶ್ರೀಹರಿಯ ಅಂಶವೇ, ಬೇರೆಯಲ್ಲ! ಇದು ದೇಹದಲ್ಲಿರುವುದು. ಆದ್ದರಿಂದ ದೇಹಕ್ಕೆ ಸಂಬಂಧಿಸಿದ ನಾನು, ನನ್ನದು ಎಂಬ ದುರಭಿಮಾನವನ್ನು ತ್ಯಜಿಸಬೇಕು. ಒಬ್ಬ ಅಕ್ಕಸಾಲಿಗನು ಕಣ್ಣಿನಲ್ಲೇ ಚಿನ್ನವನ್ನು ಗುರುತಿಸುವಂತೆ, ಬುದ್ಧಿವಂತನು ಅಧ್ಯಾತ್ಮ ವಿದ್ಯೆಯಿಂದ ದೇಹದಲ್ಲಿ ಆತ್ಮವಿರುವುದನ್ನು ಗ್ರಹಿಸಬೇಕು. ಭೂಮಿ, ನೀರು, ಬೆಂಕಿ, ವಾಯು, ಆಕಾಶಗಳೆಂಬ ಪಂಚಭೂತಗಳೂ ಮನಸ್ಸು, ಬುದ್ಧಿ, ಅಹಂಕಾರಗಳೆಂಬ ಸೂಕ್ಷ್ಮ ತತ್ತ್ವಗಳೂ ಸೇರಿ ಪ್ರಕೃತಿಯ ಎಂಟು ವಿಧಗಳಾಗಿವೆ. ಈ ಪ್ರಕೃತಿಯಲ್ಲಿ ಸತ್ತ್ವಗುಣ, ರಜೋಗುಣ, ಮತ್ತು ತಮೋಗುಣಗಳೆಂಬ ಮೂರು ಗುಣಗಳ ವಿಕಾರಗಳಿಂದ ಹದಿನಾರು ತತ್ತ್ವಗಳಾಗುತ್ತವೆ. ಅವು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಮತ್ತು ಕೈ, ಕಾಲು, ವಾಕ್, ಜನನಾಂಗ, ಗುದ), ಹಾಗೂ ಇಂದ್ರಿಯಗಳ ವಿಷಯಗಳು – ನೋಟ, ಶಬ್ದ, ಗಂಧ, ರಸ, ಸ್ಪರ್ಶ, ಇವುಗಳು, ಮತ್ತು ಪ್ರಜ್ಞೆ – ಹೀಗೆ ಹದಿನಾರು ತತ್ತ್ವಗಳು. ಈ ಹದಿನಾರು ಮತ್ತು ಎಂಟು ಸೇರಿ ಒಟ್ಟು ಇಪ್ಪತ್ನಾಲ್ಕು ತತ್ತ್ವಗಳು. ಇವುಗಳ ಸಮನ್ವಯದಿಂದಲೇ ಸ್ಥಾವರ ಅಥವಾ ಜಂಗಮ ಎಂಬ ಎರಡು ರೀತಿಯ ದೇಹಗಳುಳ್ಳ ಪ್ರಪಂಚವಿದೆ. ಇಪ್ಪತ್ತೈದನೆಯ ತತ್ತ್ವವಾದ ಆತ್ಮನು ಇವುಗಳಲ್ಲಿದ್ದಾನೆ. ವೇದಾಂತಿಗಳು, `ನೇತಿ’ `ನೇತಿ’ ಎಂಬ ಬಗೆಯಿಂದ, ಅಂದರೆ, ಆತ್ಮನು ಇದಲ್ಲ ಇದಲ್ಲ ಎಂದು ಅರ್ಥೈಸಿಕೊಳ್ಳುತ್ತಾ ಕಡೆಗೆ ಆತ್ಮನನ್ನು ಕಂಡುಕೊಳ್ಳುತ್ತಾರೆ. ಈ ಆತ್ಮನು ದೇಹದಲ್ಲಿ ಇರುವಾಗ ಜಾಗೃತ್, ಸ್ವಪ್ನ, ಸುಷುಪ್ತಿ (ಗಾಢನಿದ್ರೆ) ಯೆಂಬ ಮೂರು ಅವಸ್ಥೆಗಳನ್ನು ಅನುಭವಿಸುತ್ತಾನೆ. ಆದರೆ ನಿಜವಾಗಿ ಅವನಿಗೆ ಆ ಅವಸ್ಥೆಗಳಾಗಿರುವುದಿಲ್ಲ. ಇವು ಗಾಳಿಯು ಹೊತ್ತು ತರುವ ವಿವಿಧ ಗಂಧಗಳಂತೆ, ಗಾಳಿಗೇ ಆ ಗಂಧಗಳಿಲ್ಲ ಅಲ್ಲವೇ? ಹಾಗೆಯೇ, ಆತ್ಮನು ಇವನ್ನು ಮೀರಿ ಭಗವದಂಶ ದಿವ್ಯ ಸ್ವರೂಪದಲ್ಲಿ ನೆಲೆಗೊಳ್ಳಬೇಕು.”
“ಇದನ್ನು ಹೇಗೆ ಸಾಧಿಸುವುದು ಪ್ರಹ್ಲಾದ!?”
“ಸಂಸಾರದಿಂದ ಮುಕ್ತರಾಗಿ ನಿಜಸ್ಥಿತಿಯನ್ನು ತಲಪಲು ಹಲವಾರು ಮಾರ್ಗಗಳು ಹೇಳಲ್ಪಟ್ಟಿವೆ. ಇವುಗಳಲ್ಲಿ ಭಗವಂತನೇ ಹೇಳಿರುವ ಮಾರ್ಗವು ಸರ್ವಶ್ರೇಷ್ಠವಾದುದು. ಅದೆಂದರೆ ಅವನಲ್ಲಿ ಪ್ರೇಮಯುತವಾದ ಭಕ್ತಿಯನ್ನು ಬೆಳೆಸಿಕೊಳ್ಳುವುದು. ಯೋಗ್ಯ ಗುರುಗಳ ಸೇವೆ ಮಾಡುತ್ತಾ ತನ್ನಲ್ಲಿರುವುದನ್ನೆಲ್ಲಾ ಅವರಿಗೆ ಅರ್ಪಿಸಬೇಕು; ಸಾಧು ಸಜ್ಜನರ ಸಂಗ ಮಾಡುತ್ತಾ ಅವರಿಂದ ಹರಿಕಥೆಗಳನ್ನು ಕೇಳಬೇಕು. ಅವುಗಳನ್ನು ಕೀರ್ತಿಸಬೇಕು; ಭಗವಂತನ ರೂಪಗಳನ್ನು ಕಣ್ತುಂಬಾ ನೋಡುತ್ತಾ ಅರ್ಚಿಸಬೇಕು.
ಮಿತ್ರರೇ, ಹರಿಯು ಎಲ್ಲಾ ಜೀವಿಗಳಲ್ಲೂ ಇರುವುದರಿಂದ ಎಲ್ಲಾ ಜೀವಿಗಳನ್ನೂ ಅವುಗಳ ಯೋಗ್ಯತಾನುಸಾರ ಗೌರವಿಸಬೇಕು. ಹೀಗೆ ಮಾಡುತ್ತಾ ಕ್ರಮೇಣ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಜಯಿಸಿ ಶ್ರೀಹರಿಯಲ್ಲಿ ಭಕ್ತಿಯನ್ನಾಚರಿಸಿದರೆ ಅವನಲ್ಲಿ ಪ್ರೀತಿಯು ಹುಟ್ಟುವುದು! ಭಕ್ತನು ಶ್ರೀಹರಿಯ ವಿವಿಧ ಅವತಾರಗಳ ಲೀಲೆಗಳನ್ನು ಕೇಳುತ್ತಿದ್ದರೆ ಅತ್ಯಂತ ಹರ್ಷಿತನಾಗುವನು! ಪುಳಕ, ರೋಮಾಂಚನಗೊಳ್ಳುವನು! ಕಣ್ಣುಗಳಲ್ಲಿ ಪ್ರೇಮ ಜಲಬಿಂದುಗಳನ್ನು ತುಂಬಿಕೊಂಡು ತಾನೂ ಗದ್ಗದ ಕಂಠದಿಂದ ಹಾಡುವನು! ಕೆಲವೊಮ್ಮೆ ಗ್ರಹಗ್ರಸ್ಥನಾದಂತೆ ಜೋರಾಗಿ ನಗುತ್ತಾ ಕೆಲವೊಮ್ಮೆ ಅಳುತ್ತಾ ಹರೇ ಕೃಷ್ಣ! ಹರೇ ಕೃಷ್ಣ! ನಾರಾಯಣ! ಎಂದು ಕೂಗಿ ಕೂಗಿ ಕುಣಿಯುವನು! ಆನಂದಾಮೃತ ಸಾಗರದಲ್ಲಿ ಮುಳುಗಿ ಹೋಗುವನು!! ಇಂಥವನಿಗೆ ಮುಕ್ತಿ ಕರತಲಾಮಲಕ! ಪ್ರಿಯ ಮಿತ್ರರೇ, ನೀವೂ ಇಂಥ ಕೀರ್ತನೆ, ಭಜನೆಗಳನ್ನು ಮಾಡಿ! ಹರಿಲೀಲೆಗಳನ್ನು ಕೇಳಿ ಹಾಡಿರಿ! ಇದನ್ನು ಯಾರಾದರೂ ಮಾಡಬಹುದು! ಬ್ರಾಹ್ಮಣ್ಯವಾಗಲೀ ದೇವತ್ತ್ವವಾಗಲೀ ಋಷಿತ್ತ್ವವಾಗಲೀ ಇದಕ್ಕೆ ಬೇಕಾಗಿಲ್ಲ! ದೇವ, ಅಸುರ, ಮನುಷ್ಯ, ಯಕ್ಷ, ಗಂಧರ್ವ, ಸ್ತ್ರೀ, ಪುರುಷ, ಬಾಲಕ, ಯಾರೇ ಆಗಲೀ ಈ ಹರಿಭಜನೆಯನ್ನು ಮಾಡಬೇಕು! ವ್ರತ, ಉಪವಾಸ, ದಾನ, ಯಜ್ಞ, ಶೌಚ, ಬ್ರಾಹ್ಮಣ್ಯ, ವಿಸ್ತಾರವಾದ ಅಧ್ಯಯನ, ಪಾಂಡಿತ್ಯ, ಮೊದಲಾದವುಗಳಿಂದ ಭಗವಂತ ತೃಪ್ತಿಗೊಳ್ಳುವುದಿಲ್ಲ; ಕೇವಲ ಅನನ್ಯಭಕ್ತಿಗೆ ಮಾತ್ರ ಅವನು ಸೋಲುವನು! ಎಲ್ಲ ಜೀವಿಗಳಲ್ಲೂ ಹರಿಯು ಇರುವುದರಿಂದ ಎಲ್ಲರನ್ನೂ ನಮ್ಮಂತೆಯೇ ಸಮನಾಗಿ ಕಾಣುತ್ತಾ ಹರಿಭಜನೆ ಮಾಡಬೇಕು! ನೀವೂ ಹಾಗೆ ಮಾಡಿ!”
“ಪ್ರಹ್ಲಾದ ! ನಮ್ಮ ಗುರುಗಳು ಹೇಳುವ ಪಾಠಕ್ಕಿಂತ ನೀನು ಹೇಳುವುದೇ ಬಹಳ ಚೆನ್ನಾಗಿದೆ! ಮನಸ್ಸಿಗೆ ಶಾಂತಿ ತರುವುದಾಗಿದೆ! ನಮಗೂ ಹರಿಭಜನೆ ಕಲಿಸುವೆಯಾ?”

“ಓಹೋ! ಖಂಡಿತವಾಗಿ! ನಾವೆಲ್ಲರೂ ಒಟ್ಟಿಗೆ ಹರಿನಾಮ ಸಂಕೀರ್ತನೆ ಮಾಡೋಣ!” ಪ್ರಹ್ಲಾದನು ಹೇಳಿ ಎಲ್ಲರನ್ನೂ ಎಬ್ಬಿಸಿದನು. ಅನಂತರ, ಅವನು ಹಾಡಿ ನಿರ್ದೇಶಿಸಿದಂತೆ ಎಲ್ಲರೂ, `ಹರೇಕೃಷ್ಣ! ಹರೇಕೃಷ್ಣ! ಗೋವಿಂದ ನಾರಾಯಣ!’ ಎಂದು ಹರಿನಾಮಗಳನ್ನು ರಾಗವಾಗಿ ಹಾಡತೊಡಗಿದರು! ಸ್ವಲ್ಪ ಹೊತ್ತಿನಲ್ಲಿ ಎಲ್ಲರಿಗೂ ಹರಿನಾಮದ ಮಾಧುರ್ಯದ ಅನುಭವವಾಗಿ ಅವರು ಚಪ್ಪಾಳೆ ತಟ್ಟುತ್ತಾ ಕುಣಿಯತೊಡಗಿದರು! ಬಹಳ ಬೇಗನೆ ಅವರೆಲ್ಲರೂ ಗಾಯನ, ನರ್ತನಗಳಲ್ಲಿ ಮೈಮರೆತರು!
ಷಂಡಾಮರ್ಕರು ಮನೆಯಿಂದ ಹಿಂದಿರುಗಿ ಬಂದು ನೋಡುತ್ತಾರೆ, ಭಜನಾಮೇಳವೇ ಅಲ್ಲಿ ನೆರೆದಿದೆ! ಮುಗ್ಧ ಮಕ್ಕಳ ಭಜನೆಯನ್ನು ನೋಡಿ ಅವರೂ ಒಂದು ಕ್ಷಣ ಪರವಶರಾದರು! ಆದರೆ ದೈತ್ಯಸೇವೆಯಲ್ಲಿದ್ದ ಅವರ ಮನಸ್ಸು ಮರುಕ್ಷಣವೇ ಕಲಕಿತು!
“ಅಯ್ಯೊ! ಅಯ್ಯೋ! ಏನಿದು?! ನಿಲ್ಲಿಸಿ! ನಿಲ್ಲಿಸಿ! ನಾವು ಯೋಚಿಸಿದ್ದೇ ಒಂದು! ಇಲ್ಲಿ ಆದದ್ದೇ ಒಂದು!” ಎಂದು ಅವರು ಎಲ್ಲರನ್ನೂ ಚದುರಿಸುತ್ತಾ ಪ್ರಹ್ಲಾದನನ್ನು ಹಿರಣ್ಯಕಶಿಪುವಿನ ಅರಮನೆಗೆ ಸೆಳೆದೊಯ್ದರು!
* * *
“ಪ್ರಭು! ದಾನವೇಂದ್ರ! ಕೋತಿಯು ತಾನು ಕೆಡುವುದಲ್ಲದೇ ವನವನ್ನೆಲ್ಲಾ ಕೆಡಿಸುವಂತೆ ನಿನ್ನ ಪುತ್ರನು ಗುರುಕುಲದ ಎಲ್ಲಾ ಬಾಲಕರನ್ನೂ ಹರಿಭಕ್ತರನ್ನಾಗಿ ಮಾಡುತ್ತಿದ್ದಾನೆ! ನಾವು ಅಂದುಕೊಂಡದ್ದೇ ಒಂದು; ಅಲ್ಲಿ ಆದದ್ದೇ ಒಂದು!!” ಷಂಡಾಮರ್ಕರು ಬೊಬ್ಬಿರಿದರು!
“ಏನು?! ನಿಜವೇ?!” ಹಿರಣ್ಯಕಶಿಪುವು ಅತ್ಯಂತ ಕೋಪಾವಿಷ್ಟನಾಗಿ ಅಬ್ಬರಿಸಿದನು! ಅವನ ದೇಹ ಥರಥರನೆ ನಡುಗಿತು! ಮಗನನ್ನು ತಾನೇ ಕೊಲ್ಲಬೇಕೆಂದು ನಿಶ್ಚಯಿಸಿ ಅವನನ್ನು ದುರುಗುಟ್ಟಿಕೊಂಡು ನೋಡುತ್ತಾ, ಹಾವಿನಂತೆ ಬುಸುಗುಟ್ಟುತ್ತಾ, “ಎಲವೋ ದುರ್ವಿನೀತ! ಮಂದಮತಿ! ನಮ್ಮ ಕುಲವನ್ನೇ ಒಡೆಯುತ್ತಿರುವ ಅಧಮ! ನನ್ನ ಶಾಸನವನ್ನು ಉಲ್ಲಂಘಿಸುತ್ತಿರುವ ನಿನ್ನನ್ನು ಈಗಿಂದೀಗಲೇ ಯಮಸದನಕ್ಕಟ್ಟುತ್ತೇನೆ! ಯಾರು ಕೋಪಗೊಂಡರೆ ಮೂರು ಲೋಕಗಳೂ ಅವುಗಳ ಒಡೆಯರೊಂದಿಗೆ ಕಂಪಿಸುವವೋ, ಅಂಥ ಈ ದೈತ್ಯೇಂದ್ರನ ಶಾಸನವನ್ನು ಭಯರಹಿತವಾಗಿ ಧಿಕ್ಕರಿಸುತ್ತಿರುವ ನಿನಗೆ ಎಲ್ಲಿಂದ ಬರುತ್ತಿದೆ ಈ ಶಕ್ತಿ?” ಎಂದು ಗುಡುಗಿದ!
ಪ್ರಹ್ಲಾದನು ಶಾಂತನಾಗಿಯೇ ಉತ್ತರಿಸಿದ, “ತಂದೆಯೇ! ಕೇವಲ ನನಗೆ ಮಾತ್ರವಲ್ಲ; ನಿನಗೂ ಇನ್ನಿತರ ಶಕ್ತಿವಂತರಿಗೂ ಉಚ್ಚರಿರಲಿ, ನೀಚರಿರಲಿ, ಸ್ಥಾವರಜಂಗಮಗಳಾಗಲೀ ಬ್ರಹ್ಮದೇವಾದಿಯಾಗಿ ಸಕಲರಿಗೂ ಶಕ್ತಿಯ ಮೂಲ ಆ ಶ್ರೀಹರಿಯೇ! ಅವನೇ ಎಲ್ಲರಿಗೂ ಈಶ್ವರ! ಅವನೇ ಎಲ್ಲರಿಗೂ ಈಶ್ವರ! ಅವನೇ ಕಾಲ! ಅದ್ಭುತ ಲೀಲೆಗಳನ್ನು ಮಾಡುವ ಅವನೇ ಇಂದ್ರಿಯಗಳಿಗೆ ಓಜಸ್ಸು, ಸತ್ತ್ವ ಮತ್ತು ಬಲ! ತನ್ನ ಶಕ್ತಿಗಳಿಂದ ಅವನೇ ಈ ವಿಶ್ವವನ್ನು ಸೃಷ್ಟಿಸುತ್ತಾನೆ, ಪಾಲಿಸುತ್ತಾನೆ, ಮತ್ತು ಸಂಹರಿಸುತ್ತಾನೆ! ತಂದೆಯೇ, ಈ ಆಸುರಭಾವವನ್ನು ತ್ಯಜಿಸಿ ದ್ವೇಷರಹಿತವಾದ ಸಮಭಾವನೆಯನ್ನು ರೂಢಿಸಿಕೋ! ಮನೇಂದ್ರಿಯಗಳನ್ನು ನಿಗ್ರಹಿಸಿ ಸಮಭಾವವನ್ನು ಬೆಳೆಸಿಕೊಳ್ಳುವುದೇ ಅಚ್ಯುತನಿಗೆ ಸಲ್ಲಿಸುವ ಅತ್ಯುತ್ತಮ ಪೂಜೆ! ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಜಯಿಸದೇ ಅನೇಕರು ದಶದಿಕ್ಕುಗಳನ್ನೂ ಜಯಿಸಿದೆವೆಂದು ಭಾವಿಸುತ್ತಾರೆ! ತನ್ನನ್ನೇ ದೋಚುವಂತಹ ಈ ಅರಿಷಡ್ವರ್ಗಗಳನ್ನು ಜಯಿಸುವ ಸಾಧುವಿಗೆ ವೈರಿಯಾದರೂ ಎಲ್ಲಿರುತ್ತಾನೆ? ಆದ್ದರಿಂದ ನೀನೂ ಈ ದ್ವೇಷಭಾವನೆಯನ್ನು ಬಿಟ್ಟು ಸರ್ವದೇವೋತ್ತಮ ಪುರುಷನಾದ ಆ ನಾರಾಯಣನಲ್ಲಿ ಭಕ್ತಿ ತೋರು…”

“ಸಾಕು ನಿಲ್ಲಿಸು ಮೂಢ! ನಿಯಂತ್ರಣವಿಲ್ಲದೇ ಬೊಗಳುತ್ತಿರುವ ನೀನು ನನ್ನಿಂದ ಈಗ ಸಾಯುವವನಿದ್ದೀಯೆ! ಅಂತ್ಯಕಾಲದಲ್ಲೇ ಎಲ್ಲರೂ ಹೀಗೆ ಬಡಬಡಿಸುವುದು! ನನಗಿಂತ ದೊಡ್ಡ ಜಗದೀಶ್ವರನಾದ ಆ ಹರಿಯು ಎಲ್ಲಿರುವನೋ?”
“ಅವನು ಎಲ್ಲೆಲ್ಲೂ ಇರುವನು! ಸಕಲ ಚರಾಚರವಸ್ತುಗಳಲ್ಲೂ ಇರುವನು ತಂದೆ!”
“ಎಲ್ಲೆಲ್ಲೂ ಇರುವನೋ?! ಏನೆಂದೆಯೋ? ಎಲ್ಲೆಲ್ಲೂ ಇರುವನೋ? ಹಾಗಾದರೆ ಈ ಕಂಬದಲ್ಲೇಕೆ ಕಾಣುತ್ತಿಲ್ಲ?! ಲೋ ಮೂರ್ಖ! ಈಗ ನಿನ್ನ ರುಂಡವನ್ನು ನಿನ್ನ ಮುಂಡದಿಂದ ಬೇರ್ಪಡಿಸುತ್ತೇನೆ! ಅದು ಹೇಗೆ ನಿನ್ನ ಹರಿಯು ಬಂದು ಕಾಪಾಡುವನೋ ನೋಡಿಯೇ ಬಿಡುವೆ!!”
ಹೀಗೆ ಕಟುವಾಕ್ಯಗಳಿಂದ ಪ್ರಹ್ಲಾದನನ್ನು ಮತ್ತೆ ಮತ್ತೆ ನಿಂದಿಸುತ್ತಾ, ಹಿರಣ್ಯಕಶಿಪುವು ತನ್ನ ಖಡ್ಗವನ್ನು ಝಳಪಿಸುತ್ತಾ ಸಿಂಹಾಸನದಿಂದೆದ್ದು ಬಂದನು! ಹಾಗೆ ಬರುವಾಗ ಸನಿಹದಲ್ಲೇ ಇದ್ದ ಒಂದು ಕಂಬವನ್ನು ತನ್ನ ಮುಷ್ಟಿಯಿಂದ ಬಲವಾಗಿ ಗುದ್ದಿದನು! ಆಗ ಆ ಕಂಬವು ಒಡೆದು ಬ್ರಹ್ಮಾಂಡವೇ ಬಿರಿಯುವಂಥ ಮಹಾಶಬ್ದವುಂಟಾಯಿತು! ಬ್ರಹ್ಮಾದಿ ದೇವತೆಗಳು ತಮ್ಮ ಲೋಕಗಳೇ ನಾಶವಾಗುತ್ತಿವೆಯೆಂದು ಭ್ರಮಿಸಿ ಭಯಭೀತರಾದರು! ಇಂಥ ಭಯಂಕರ ಶಬ್ದವು ಎಲ್ಲಿಂದ ಬರುತ್ತಿದೆಯೆಂದು ಹಿರಣ್ಯಕಶಿಪುವಿಗಾಗಲೀ ಇತರ ರಾಕ್ಷಸರಿಗಾಗಲೀ ತಿಳಿಯಲಿಲ್ಲ! ದೈತ್ಯರಾಜನು ಆಶ್ಚರ್ಯದಿಂದ ನೋಡುತ್ತಿರಲು, ಕಂಬದಿಂದ ಒಂದು ವಿಚಿತ್ರಾಕೃತಿಯು ಹೊರಹೊಮ್ಮಿತು! ಅದು ಪೂರ್ತಿ ಮನುಷ್ಯನೂ ಆಗಿರದೇ, ಪೂರ್ತಿ ಮೃಗವೂ ಆಗಿರದೇ, ಸಿಂಹದ ಮುಖ ಮತ್ತು ಮನುಷ್ಯನ ದೇಹವನ್ನು ಹೊಂದಿದ್ದ ವಿಚಿತ್ರಾಕೃತಿಯಾಗಿತ್ತು! ಅದು ಶ್ರೀಹರಿಯಲ್ಲದೇ ಬೇರಾರೂ ಆಗಿರಲಿಲ್ಲ! ತಾನು ಎಲ್ಲೆಲ್ಲೂ ಇರುವವನೆಂಬ ತನ್ನ ಭಕ್ತನ ಮಾತನ್ನು ನಿಜವಾಗಿಸಲೋಸುಗ, ತಾನು ಕಂಬದಲ್ಲೇ ಪ್ರಕಟವಾಗಿದ್ದನು! ಹಿರಣ್ಯಕಶಿಪುವು ತಾನು ಪ್ರಾಣಿಯಿಂದಲೂ ಮನುಷ್ಯನಿಂದಲೂ, ಬ್ರಹ್ಮಸೃಷ್ಟಿಯ ಯಾವುದೇ ಜೀವಿಯಿಂದಲೂ ವಧಿಸಲ್ಪಡಬಾರದೆಂದು ವರ ಪಡೆದಿದ್ದನು. ಅದನ್ನು ಸತ್ಯವಾಗಿಸಲು ಬ್ರಹ್ಮಸೃಷ್ಟಿಯ ಆಚೆಗಿನ ಭಗವಂತನು ನರಸಿಂಹನಾಗಿ ಅವತರಿಸಿದ್ದನು!

ನರಸಿಂಹನು ನೋಡಲು ಅತ್ಯಂತ ಭಯಂಕರನಾಗಿದ್ದನು! ಅತ್ಯುಗ್ರನಾಗಿದ್ದನು! ಕರಗಿದ ಚಿನ್ನದಂತೆ ಪ್ರಚಂಡವಾಗಿದ್ದ ಅವನ ಕ್ರೋಧಪೂರಿತ ಕೆಂಪು ಕಂಗಳು, ಅಗಲವಾದ ಮುಖದ ಸುತ್ತ ಹರಡಿದ್ದ ಹೊಳೆಯುವ ಕೇಶರ, ನಡುಕ ಹುಟ್ಟಿಸುವ ಕರಾಲದಂಷ್ಟ್ರಗಳು, ಗರಗಸದಂಥ ನಾಲಗೆ, ನೇರವಾದ ಚಲನರಹಿತ ಕಿವಿಗಳು, ಗುಹೆಯಂತೆ ಅಗಲವಾಗಿ ತೆರೆದ ಬಾಯಿ, ಆಕಾಶವನ್ನು ಮುಟ್ಟುವಂಥ ಆಕಾರ, ವಿಶಾಲ ವಕ್ಷಸ್ಥಳ, ಕಿರಿದಾದ ಕುತ್ತಿಗೆ, ಸರ್ವದಿಕ್ಕುಗಳಿಗೂ ಚಾಚುತ್ತಾ ರಾಕ್ಷಸರನ್ನು ಚದುರಿಸುತ್ತಿದ್ದ ನೀಳ ಬಲಿಷ್ಠ ಕೈಗಳು, ಅವುಗಳಲ್ಲಿ ಆಯುಧಗಳಂತಿದ್ದ ತೀಕ್ಷ್ಣ ನಖಗಳು, ಸಣ್ಣದಾದ ನಡು, ಚಂದ್ರಕಿರಣಗಳಂತೆ ಬಿಳಿಯದಾದ ರೋಮಗಳು, ನೋಡಲು ಎಂಥ ಗಂಡುಗಲಿಯನ್ನಾದರೂ ಭಯಭೀತಗೊಳಿಸುವ ಪ್ರಚಂಡ ರೌದ್ರಾಕಾರ!
“ಈ ವಿಚಿತ್ರ ಆಕೃತಿ ಯಾವುದಿರಬಹುದು?!” ಹಿರಣ್ಯಕಶಿಪುವು ಆಶ್ಚರ್ಯದಿಂದ ತನ್ನಲ್ಲೇ ಯೋಚಿಸಿದನು, “ಬಹುಶಃ ಮಹಾ ಮಾಯಾವಿಯಾದ ಹರಿಯೇ ನನ್ನನ್ನು ಕೊಲ್ಲಲು ಹೀಗೆ ಉಪಾಯ ಮಾಡಿರಬಹುದು! ಆದರೆ ಅದರಿಂದೇನು ಪ್ರಯೋಜನ? ನನ್ನನ್ನೆದುರಿಸಲು ಯಾರಿಗೆ ಸಾಧ್ಯ?”
ಹೀಗೆ ಯೋಚಿಸಿ ದೈತ್ಯರಾಜನು ಗರ್ಜಿಸುತ್ತಾ ಆನೆಯಂತೆ ನರಸಿಂಹನ ಮೇಲೆ ಬಿದ್ದನು! ಆದರೆ ಜಾಜ್ವಲ್ಯಮಾನವಾದ ನೃಸಿಂಹನ ತೇಜಸ್ಸಿನ ಮುಂದೆ ಹಿರಣ್ಯಕಶಿಪುವು ಕ್ಷುದ್ರ ಪತಂಗದಂತೆ ಕಂಡನು! ಗಾಢವಾದ ಮಾಯಾಂಧಕಾರವನ್ನೇ ನುಂಗಿಹಾಕುವ ಭಗವಂತನ ಸತ್ವದ ಮುಂದೆ ಹಿರಣ್ಯಕಶಿಪುವಿನಂಥ ಮಹಾದೈತ್ಯರೂ ಎಷ್ಟು ಮಾತ್ರ?

ಹಿರಣ್ಯಕಶಿಪುವು ತನ್ನ ಗದೆಯಿಂದ ವೇಗವಾಗಿ ಭಗವಂತನನ್ನು ಮತ್ತೆ ಮತ್ತೆ ಹೊಡೆಯ ತೊಡಗಿದನು! ಆದರೆ ನೃಸಿಂಹದೇವನು, ಗರುಡನು ಹಾವನ್ನು ಹಿಡಿಯುವಂತೆ ಅವನನ್ನು ಅವನ ಗದೆಯೊಂದಿಗೆ ಹಿಡಿದನು! ಮರುಕ್ಷಣವೇ ಗರುಡನು ಹಾವಿನೊಂದಿಗೆ ಆಡುವಂತೆ ಭಗವಂತನು ತನ್ನ ಕೈಯನ್ನು ಸಡಿಲಗೊಳಿಸಿದನು! ಆಗ ಹಿರಣ್ಯಕನು ಅವನ ಕೈಯಿಂದ ತಪ್ಪಿಸಿಕೊಂಡು ಖಡ್ಗ ಗುರಾಣಿಗಳನ್ನು ಹಿಡಿದು ಭಗವಂತನನ್ನು ಪುನಃ ಆಕ್ರಮಿಸಿದನು! ಈಗ ಅಂತರಿಕ್ಷದಲ್ಲಿ ದೇವತೆಗಳು ನೆರೆದು ಇದನ್ನು ನೋಡುತ್ತಿದ್ದರು. ಅವರಿಗೆ ಭಗವಂತನು ಹೀಗೆ ರಾಕ್ಷಸನನ್ನು ತಪ್ಪಿಸಿಕೊಳ್ಳಲು ಬಿಟ್ಟುದು ಸರಿಕಾಣಲಿಲ್ಲ. ಆದರೆ ಹದ್ದಿನ ವೇಗದಲ್ಲಿ ಮೇಲೆ ಬೀಳುತ್ತಿದ್ದ ಹಿರಣ್ಯಕನನ್ನು ನರಸಿಂಹನು ಹಾವು ಇಲಿಯನ್ನು ಹಿಡಿಯುವಂತೆ ಬಹಳ ಸುಲಭವಾಗಿ ಹಿಡಿದುಬಿಟ್ಟನು! ನೋವಿನಿಂದ ಕೈಕಾಲುಗಳನ್ನು ಬಡಿಯುತ್ತಾ ಚಡಪಡಿಸುತ್ತಿದ್ದ ಹಿರಣ್ಯಕನನ್ನು ಭಗವಂತನು ಎತ್ತಿಕೊಂಡು ಹೋಗಿ ದ್ವಾರದಲ್ಲಿನ ಹೊಸ್ತಿಲ ಮೇಲೆ ಕುಳಿತು ತನ್ನ ತೊಡೆಗಳ ಮೇಲೆ ಹಾಕಿಕೊಂಡನು! ಅತ್ಯಂತ ಭೀಕರವಾಗಿ ಅಟ್ಟಹಾಸ ಮಾಡಿ ಜೋರಾಗಿ ಗರ್ಜಿಸುತ್ತಾ, ಹಿರಣ್ಯಕಶಿಪುವು ಭಯಭೀತನಾಗಿ ನೋಡುತ್ತಾ ನಡುಗುತ್ತಿರಲು, ಗರುಡನು ವಿಷ ಸರ್ಪವನ್ನು ಸೀಳಿ ಹಾಕುವಂತೆ ಅವನ ಉದರವನ್ನು ತನ್ನ ತೀಕ್ಷ್ಣ ಉಗುರುಗಳಿಂದ ಲೀಲಾಜಾಲವಾಗಿ ಸೀಳಿಬಿಟ್ಟನು! ಅವನ ಕರುಳನ್ನು ತನ್ನ ಕೊರಳಿನ ಸುತ್ತ ಮಾಲೆ ಹಾಕಿಕೊಂಡನು! ಅವನ ಹೃದಯವನ್ನು ಕಿತ್ತೆಸೆದು ಅನಂತರ ಅವನ ಕಳೇಬರವನ್ನು ಬಿಸುಟುಬಿಟ್ಟನು!

ಆಗ ಸಂಧ್ಯಾಕಾಲವಾಗಿತ್ತು! ಹಿರಣ್ಯಕಶಿಪುವು ಮನೆಯ ಒಳಗಾಗಲೀ ಹೊರಗಾಗಲೀ ಸಾಯದೇ ದ್ವಾರದ ಹೊಸ್ತಿಲಿನ ಮೇಲೆ ಸತ್ತಿದ್ದನು! ಅವನು ಆಕಾಶದಲ್ಲಾಗಲೀ ಭೂಮಿಯಲ್ಲಾಗಲೀ ಸಾಯದೇ ನೃಸಿಂಹನ ತೊಡೆಗಳ ಮೇಲೆ ಸತ್ತಿದ್ದನು! ಅವನು ಮನುಷ್ಯನಿಂದಾಗಲೀ ಪ್ರಾಣಿಯಿಂದಾಗಲೀ ಸಾಯದೇ ನರಸಿಂಹನಿಂದ ಸತ್ತಿದ್ದನು! ಬ್ರಹ್ಮಸೃಷ್ಟಿಯ ಯಾವ ಜೀವಿಯಿಂದಲೂ ಸಾಯದೇ ಬ್ರಹ್ಮನಿಗೂ ಮುಂಚಿನ ಭಗವಂತನಿಂದ ಸತ್ತಿದ್ದನು! ಯಾವ ಆಯುಧಗಳಿಂದಲೂ ಅವನು ಸಾಯದೇ ಭಗವಂತನ ನಖಗಳಿಂದ ಸತ್ತಿದ್ದನು! ಹೀಗೆ ಭಗವಂತನು ಬ್ರಹ್ಮನ ವರವನ್ನು ಸತ್ಯವಾಗಿಸಿದ್ದನು; ಇಂದ್ರನ ವಜ್ರಾಯುಧಕ್ಕೂ ಅಭೇದ್ಯವಾಗಿದ್ದ ದೈತ್ಯೇಂದ್ರನ ದೇಹವನ್ನು ತುಂಡು ತುಂಡಾಗಿಸಿದ್ದನು!
(ಮುಂದುವರಿಯುವುದು)
Leave a Reply