ತಿರುವೆಳ್ಳಿಯಾಂಗುಡಿ ರಾಮ ದೇವಾಲಯ

– ಆಂಗ್ಲಮೂಲ: ಸಂಪತ್‌ಕುಮಾರ ರಾಮಾನುಜ ದಾಸನ್‌ (ಅಶ್ವಿನ್‌ ಎಸ್‌.)

ದಿವ್ಯದೇಶಂಗಳಲ್ಲಿ ಪ್ರಮುಖವಾದ ತಿರುವೆಳ್ಳಿಯಾಂಗುಡಿ ರಾಮ ದೇವಸ್ಥಾನವು ತಮಿಳುನಾಡಿನ ಕುಂಭಕೋಣಂಗೆ ಸುಮಾರು 25 ಕಿ.ಮೀ. ದೂರದಲ್ಲಿದೆ.

ಲೀಲೆ

ಶುಕ್ರಾಚಾರ್ಯರು ಭೃಗು ಮುನಿ ಮತ್ತು ಉಷಾನರ ಪುತ್ರ. ಶ್ರಾವಣ ಶುದ್ಧ ಅಷ್ಟಮಿ, ಶುಕ್ರವಾರದಂದು ಜನಿಸಿದರು. ಅವರದು ಸ್ವಾತಿ ನಕ್ಷತ್ರ. ಅವರು ಅಂಗೀರಸ ಮತ್ತು ಗೌತಮರಂತಹ ಋಷಿಗಳ ಆಶ್ರಮದಲ್ಲಿ ತಮ್ಮ ಬ್ರಹ್ಮಚಾರಿ ಜೀವನವನ್ನು ಕಳೆದರು. ಬ್ರಹ್ಮಚಾರಿ ಶುಕ್ರರು ಶಿವನನ್ನು ಪ್ರಾರ್ಥಿಸಿ ಕಠಿಣ ತಪಸ್ಸು ಕೈಗೊಂಡರು. ಸಂಪ್ರೀತನಾದ ಶಿವನಿಂದ ಅವರು ಸಂಜೀವಿನಿ ಮಂತ್ರವನ್ನು ಪಡೆದರು. ಅನಂತರ ಅವರು ಉರ್ಜಸ್ವತಿ ಮತ್ತು ಜಯಂತಿಯನ್ನು ವಿವಾಹವಾದರು. ಇವರಿಗೆ ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ. ಶುಕ್ರಾಚಾರ್ಯರನ್ನು ಅನೇಕ ರೀತಿಯಲ್ಲಿ ವರ್ಣಿಸಲಾಗುತ್ತದೆ. ಅವರ ವಾಹನ ಒಂಟೆ, ಕುದುರೆ ಅಥವಾ ಮೊಸಳೆ ಎಂದು ವರ್ಣಿಸಲಾಗುತ್ತದೆ. ಅವರು ದಂಡ, ಜಪಮಾಲೆ ಮತ್ತು ಕಮಲದ ಪುಷ್ಪವನ್ನು ಹಿಡಿದಿದ್ದಾರೆ ಎಂದೂ ವರ್ಣಿಸಲಾಗಿದೆ.

ಒಮ್ಮೆ ಭಗವಾನ್‌ ವಿಷ್ಣುವು ರಾಕ್ಷಸನೊಬ್ಬನನ್ನು ಹುಡುಕುತ್ತಿದ್ದನು. ಶುಕ್ರಾಚಾರ್ಯರ ತಾಯಿಯು ಆ ಅಸುರನಿಗೆ ಆಶ್ರಯ ನೀಡಿದಳು. ಇದರಿಂದ ಕುಪಿತನಾದ ವಿಷ್ಣುವು ಅವರಿಬ್ಬರನ್ನೂ ಸಂಹರಿಸಿದ. ಇದರಿಂದ ಕೋಪೋದ್ರಿಕ್ತರಾದ ಶುಕ್ಲಾಚಾರ್ಯರು ಅಸುರರ ಗುರುವಾಗಲು ನಿರ್ಧರಿಸಿದರು. ರಾಕ್ಷಸರು ವಿಷ್ಣುವಿನ ಬದ್ಧ ವೈರಿಗಳು. ಶುಕ್ರಾಚಾರ್ಯರು ಅನೇಕ ಯುದ್ಧಗಳಲ್ಲಿ ರಾಕ್ಷಸರಿಗೆ ನೆರವಾದರಲ್ಲದೆ ಸಂಜೀವಿನಿ ಮಂತ್ರವನ್ನು ಬಳಸಿ ಆ ಅಸುರರಿಗೆ ಮರು ಜೀವ ನೀಡುತ್ತಿದ್ದರು.

ತ್ರೇತಾ ಯುಗದಲ್ಲಿ, ವಿಷ್ಣುವು ವಾಮನನಾಗಿ ಅವತರಿಸಿದ. ಬಲಿ ಚಕ್ರವರ್ತಿಗೆ ಅನುಗ್ರಹ, ಇಂದ್ರನಿಗೆ ಅಧಿಕಾರ ವಾಪಸು ಮತ್ತು ಶುಕ್ರಾಚಾರ್ಯರನ್ನು ಶಿಕ್ಷಿಸುವುದೇ ವಿಷ್ಣುವಿನ ಈ ಅವತಾರದ ಉದ್ದೇಶವಾಗಿತ್ತು. ವಾಮನನು ಬಲಿಯ ಬಳಿ ಬಂದು ಮೂರು ಹೆಜ್ಜೆಯಷ್ಟು ಭೂಮಿ ಕೊಡು ಎಂದು ಕೇಳಿದ. ಈ ವಾಮನನೇ ಶ್ರೀ ವಿಷ್ಣುವೆಂದು ಶುಕ್ರಾಚಾರ್ಯರಿಗೆ ತಿಳಿಯಿತು. ಅವರು ತತ್‌ಕ್ಷಣ ಬಲಿ ಮಹಾರಾಜನನ್ನು ಎಚ್ಚರಿಸಿದರು. ಆದರೆ ವಿಷ್ಣುವಿನ ಪರಮ ಭಕ್ತನಾಗಿದ್ದ ಬಲಿಯು ಗುರುವಿನ ಮಾತಿಗೆ ಕಿವಿಗೊಡಲಿಲ್ಲ. ಆಗ ಶುಕ್ರಚಾರ್ಯರು ಜೇನಿನ ರೂಪ ತಾಳಿ ಕಮಂಡಲುವಿನಿಂದ ನೀರು ಬಿಡುವ ಮೂತಿಯಲ್ಲಿ ಕುಳಿತರು. ಬಲಿಯು ಈ ಕಮಂಡಲುವಿನಿಂದ ನೀರು ಹಾಕಿ ವಾಮನನಿಗೆ ಪ್ರಮಾಣ ಮಾಡಬೇಕಾಗಿತ್ತು. ವಿಷ್ಣುವು ಕೆಳಗಿನಿಂದ ಹುಲ್ಲುಕಡ್ಡಿಯನ್ನು ತೆಗೆದುಕೊಂಡು ಶುಕ್ರಾಚಾರ್ಯರ ಎಡಗಣ್ಣಿಗೆ ಚುಚ್ಚಿ ಕಮಂಡಲುವಿನ ಮೂತಿಯನ್ನು ಸರಿಪಡಿಸಿದನು. ಶುಕ್ರಾಚಾರ್ಯರು ತಮ್ಮ ದೃಷ್ಟಿಯನ್ನು ಪುನಃ ಪಡೆಯಲು ಅನೇಕ ಮಂದಿರಗಳಿಗೆ ಭೇಟಿ ನೀಡಿದರು ಮತ್ತು ಅಂತಿಮವಾಗಿ ತಿರುವೆಳ್ಳಿಯಾಂಗುಡಿಯನ್ನು ತಲಪಿದರು. ಅವರು ಶ್ರೀ ವಿಷ್ಣುವನ್ನು ಪ್ರಾರ್ಥಿಸಿ ಕಠಿಣ ತಪಸ್ಸು ಕೈಗೊಂಡರು. ಆಗ ವಿಷ್ಣುವು ಪ್ರತ್ಯಕ್ಷನಾಗಿ ಅವರಿಗೆ ಪುನಃ ದೃಷ್ಟಿ ನೀಡಿದನು. ಕ್ಷೀರ ಸಾಗರದಲ್ಲಿರುವಂತೆ ತಿರುವೆಳ್ಳಿಯಾಂಗುಡಿಯಲ್ಲಿ ನೆಲೆಸುವಂತೆ ಅವರು ವಿಷ್ಣುವನ್ನು ಪ್ರಾರ್ಥಿಸಿದರು. ಶುಕ್ರಾಚಾರ್ಯರ ಪುತ್ರಿ ಮರಗತವಲ್ಲಿಯು ಭಗವಂತನಲ್ಲಿ ಅನುರಕ್ತಳಾದಳು. ಪ್ರಭುವು ಕೃಪೆ ತೋರಿ ಅವಳನ್ನು ವರಿಸಿದನು.

ಮತ್ತೊಂದು ಲೀಲೆಯನ್ನು ಈ ದೇವಸ್ಥಾನದ ಕುರಿತು ಹೇಳಲಾಗುತ್ತದೆ. ಇದು ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದ್ದು. ವಿಶ್ವಕರ್ಮನು ದೇವತೆಗಳ ವಾಸ್ತು ಶಿಲ್ಪಿ. ಮಯಾಸುರನು ಅಸುರರ ವಾಸ್ತುಶಿಲ್ಪಿ. ಮಯಾಸುರನು ದಿತಿಯ ಪುತ್ರ. ಅವನು ತನ್ನ ರಾಜಧಾನಿಯನ್ನು ನಿರ್ಮಿಸಿ ಅದನ್ನು ಮಯಾರಾಷ್ಟ್ರ (ಮೀರಠ್‌) ಎಂದು ಕರೆದನು. ಅವನು ತನ್ನ ವಾಸ್ತುಶಿಲ್ಪ ಪ್ರತಿಭೆಯಿಂದ ಪ್ರಸಿದ್ಧನಾಗಿದ್ದನು. ಲಂಕಾ ನಗರವನ್ನು ನಿರ್ಮಿಸಿದ ಕೀರ್ತಿ ಮಯಾಸುರನಿಗೆ ಸಲ್ಲುತ್ತದೆ. ರಾವಣನು ಮಯಾಸುರನ ಪುತ್ರಿ ಮಂಡೋದರಿಯನ್ನು ವಿವಾಹವಾದಾಗ ಅವನು ಈ ಸುಂದರ ನಗರವನ್ನು ತನ್ನ ಅಳಿಯನಿಗೆ ವರದಕ್ಷಿಣೆಯಾಗಿ ನೀಡಿದನು. ಆಕಾಶದಲ್ಲಿ ತೇಲುತ್ತಿರುವ ಸಂದರ ತ್ರಿಪುರ ಲೋಕ ಮುಂತಾದ ಅನೇಕ ಸ್ಥಳಗಳನ್ನು ನಿರ್ಮಿಸಿದ ಪ್ರತಿಭೆ ಅವನದು. ತನ್ನ ಸಮುದಾಯಕ್ಕೆ ತದ್ವಿರುದ್ಧವಾಗಿ ಮಯಾಸುರನು ದೇವೋತ್ತಮನ ಪರಮ ಭಕ್ತನಾಗಿದ್ದನು. ಅರ್ಜುನನಿಗೆ ನೆರವಾಗಲು ಭಗವಂತನು ಮಯಾಸುರನನ್ನು ಕರೆಸಿಕೊಂಡಾಗ ಅವನು ಅತ್ಯಂತ ಸುಂದರ ಇಂದ್ರಪ್ರಸ್ಥವನ್ನು ನಿರ್ಮಿಸಿದನು. ಇದು ದೇವತೆಗಳ ಸ್ವರ್ಗ ಲೋಕಕ್ಕಿಂತ ನೂರು ಪಾಲು ಸುಂದರ. ಇಂದ್ರಪ್ರಸ್ಥದಲ್ಲಿ ಅನೇಕ ವೈಶಿಷ್ಟ್ಯಗಳಿದ್ದವು. ನೀರೆಂದು ತಪ್ಪಾಗಿ ಬಿಂಬಿಸುವ ನೆಲಗಳಿದ್ದವು. ಅಲ್ಲಿದ್ದ ನೀರಿನ ಕೊಳಗಳು ಅಲಂಕೃತ ನೆಲಗಳನ್ನು ಸ್ವಲ್ಪವೂ ವ್ಯತ್ಯಾವಿಲ್ಲದಂತೆ ಅನುಕರಿಸುವಂತಿದ್ದವು.

ಆದರೆ ಮಯಾಸುರನು ದೇವೋತ್ತಮ ಪರಮ ಪುರುಷನಿಗೆ ತಾನು ಸಲ್ಲಿಸುತ್ತಿದ್ದ ಭಕ್ತಿಸೇವೆಯಿಂದ ತೃಪ್ತನಾಗಿರಲಿಲ್ಲ. ಆದುದರಿಂದ ಅವನು ತಿರುವೆಳ್ಳಿಯಾಂಗುಡಿಯಲ್ಲಿ ತೀವ್ರ ತಪಸ್ಸು ಕೈಗೊಂಡ. ದಿವ್ಯ ದೇಶಂಗಳನ್ನು ನಿರ್ಮಿಸಿದ ಎಲ್ಲ ಕೀರ್ತಿಯನ್ನು ವಿಶ್ವಕರ್ಮನೇ ಪಡೆದುಕೊಳ್ಳುತ್ತಿರುವುದನ್ನು ಕಂಡು ಅವನು ದುಃಖಿತನಾದ. ಆಗ ಅವನು ತಾನು ನಿರ್ಮಿಸಿದ ಮಂದಿರದಲ್ಲಿ ನೆಲೆಸಬೇಕೆಂದು ಭಗವಂತನನ್ನು ಕೋರಿದ. ಅದು ಆ ಕ್ಷಣ ನೆರವೇರಿತು. ಭಗವಂತನು ಮಯಾಸುರನಿಗೆ ಚಕ್ರ, ಶಂಖ, ಕಮಲ ಮತ್ತು ಗದೆಗಳನ್ನು ಹಿಡಿದಿದ್ದ ತನ್ನ ಚತುರ್ಭುಜ ರೂಪದಲ್ಲಿ ದರ್ಶನ ನೀಡಿದ. ಆದರೆ ಶ್ರೀರಾಮನ ರೂಪದಲ್ಲಿ ದರ್ಶನ ನೀಡಬೇಕೆಂದು ಮಯಾಸುರನು ಭಗವಂತನಲ್ಲಿ ಪ್ರಾರ್ಥಿಸಿದ. ಆಗ ಪ್ರಭುವು ತನ್ನ ಕೈಯಲ್ಲಿದ್ದ ಶಂಖ ಮತ್ತು ಚಕ್ರವನ್ನು ಗರುಡನಿಗೆ ನೀಡಿ ಮಯಾಸುರನು ಅಪೇಕ್ಷಿಸಿದಂತೆ ಶ್ರೀರಾಮನ ರೂಪದಲ್ಲಿ ದರ್ಶನ ನೀಡಿದ. ಇಂದಿಗೂ ಕೂಡ 108 ದಿವ್ಯ ದೇಶಂಗಳಲ್ಲಿ ಗರುಡನು ಶಂಖ ಮತ್ತು ಚಕ್ರ ಹಿಡಿದಿರುವ ಏಕೈಕ ಸ್ಥಳ ಇದಾಗಿದೆ. ಕೃಪಾಳು ಭಗವಂತನು ತನ್ನ ಭಕ್ತರ ಭಕ್ತಿಯನ್ನು ಕೊಂಡಾಡಲು ಎಂದೂ ಮರೆಯುವುದಿಲ್ಲ!

ಪೆರಿಯವಚನ ಪಿಳ್ಳೈ

ಶ್ರೇಷ್ಠ ಶ್ರೀವೈಷ್ಣವ ಆಚಾರ್ಯರಾದ ಪೆರಿಯವಚನ ಪಿಳ್ಳೈ ಅಥವಾ ಶ್ರೀ ಕೃಷ್ಣಸೂರಿ ಅವರು ತಿರುವೆಳ್ಳಿಯಾಂಗುಡಿ ಸಮೀಪದಲ್ಲಿಯೇ ಜನಿಸಿದವರು. ಅವರು `ವ್ಯಾಖ್ಯಾನಕಾರ’ ಎಂದೇ ಪ್ರಸಿದ್ಧರು. ಏಕೆಂದರೆ ಅವರು ತಮ್ಮ ಬದುಕಿನ 95 ವರ್ಷಗಳಲ್ಲಿ ಹೆಚ್ಚೂಕಮ್ಮಿ ವೈಷ್ಣವರ ಎಲ್ಲ ಧರ್ಮ ಗ್ರಂಥಗಳಿಗೆ ವ್ಯಾಖ್ಯಾನ ರಚಿಸಿದ್ದಾರೆ. ಶ್ರೇಷ್ಠ ವೈಷ್ಣವ ಸಂತ ಶ್ರೀ ಯಾಮುನಾಚಾರ್ಯರ ಪುತ್ರರಾದ ಶ್ರೀ ಕೃಷ್ಣಸೂರಿ ಕ್ರಿಸ್ತ ಶಕ 1167ರ ಜನ್ಮಾಷ್ಟಮಿಯಂದು ಜನಿಸಿದರು. ವಿಶಿಷ್ಟಾದ್ವೈತ ತತ್ತ್ವಕ್ಕೆ ಸಂಬಂಧಿಸಿದ ರಹಸ್ಯ ಕೃತಿಗಳಿಗೆ ಗಮನಾರ್ಹ ಕೊಡುಗೆ ಸಲ್ಲಿಸಿದ್ದಾರೆ. ಮಹಾಭಾರತ, ರಾಮಾಯಣ, ವರಾಹ ಪುರಾಣ ಮತ್ತು ವಿಷ್ಣು ಪುರಾಣಗಳಿಂದ ಆಯ್ದ ಶ್ಲೋಕಗಳಿಗೆ ಅವರು ಬರೆದಿರುವ ಚಿಂತನ ಪ್ರಚೋದಕ ವ್ಯಾಖ್ಯಾನ ತನಿಶ್ಲೋಕಿಯು ವಿಷಯದ ಮೇಲಿನ ಅವರ ಅಪಾರ ಜ್ಞಾನ ಮತ್ತು ಪಾಂಡಿತ್ಯವನ್ನು ಹೊರಗೆಡಹುವ ಅದ್ಭುತ ಕೃತಿಯಾಗಿದೆ. ಯಾಮಾನುಚಾರ್ಯರ ಸ್ತೋತ್ರರತ್ನ, ಚತುಃಶ್ಲೋಕಿ ಮತ್ತು ರಾಮಾನುಜಾಚಾರ್ಯರ ಗ್ರಂಥ್ಯಾತ್ಮಯಂ ಕುರಿತ ಅವರ ವ್ಯಾಖ್ಯಾನಗಳು ಇಂದಿಗೂ ಓದುಗರನ್ನು ಮಂತ್ರಮುಗ್ಧಗೊಳಿಸುತ್ತಿವೆ. ಅವರ ಕೃತಿಗಳಿಂದಾಗಿ ನಾವು ಆಳ್ವಾರರ ಮತ್ತು ರಾಮಾನುಜ ಮತ್ತು ಯಾಮುನಾಚಾರ್ಯರಂತಹ ಆಚಾರ್ಯರ ಶ್ಲೋಕಗಳಲ್ಲಿ ಅಡಗಿರುವ ಗೋಪ್ಯ ಸತ್ಯವನ್ನು ಮೆಚ್ಚುವುದು ಸಾಧ್ಯವಾಗಿದೆ ಎಂದರೆ ಅದು ಅತಿಶಯೋಕ್ತಿಯಾಗದು.

ದೇವಸ್ಥಾನ

ಈ ಎರಡು ಸಾವಿರ ವರ್ಷಗಳಷ್ಟು ಪುರಾತನ ದೇವಸ್ಥಾನವು ಮೂರು ಶ್ರೇಣಿಯ (ಅಂತಸ್ತಿನ) ಅದ್ಭುತ ರಾಜಗೋಪುರವನ್ನು ಹೊಂದಿದೆ. ಒಳಗೆ ಸಾಗುತ್ತಿದ್ದಂತೆಯೇ ಎರಡು ಪ್ರಾಕಾರಗಳನ್ನು ಕಾಣಬಹುದು. ಅತಿ ಒಳಗಿನ ಪ್ರಾಕಾರವು ಮುಖ್ಯ ಗರ್ಭಗುಡಿಯ ಸುತ್ತ ಇದೆ. ಸುಂದರ ಶ್ರೀ ಕೋಲವಿಲ್ಲಿ ರಾಮನು ಆದಿಶೇಷನ ಮೇಲೆ ಪವಡಿಸಿರುವುದನ್ನು ನೋಡಬಹುದು. ಅವನ ಕೈಗಳು ಅವನ ಕಿರೀಟದ ಕೆಳಗೆ ವಿರಾಮದ ಭಂಗಿಯಲ್ಲಿವೆ. ಮಾರ್ಕಂಡೇಯ ಮಹರ್ಷಿ ಭಗವಂತನ ಶಿರದ ಬಳಿ ಕಾಣಿಸಿದರೆ ಬ್ರಹ್ಮನು ಪ್ರಭುವಿನ ನಾಭಿಯಿಂದ ಕಾಣುತ್ತಾನೆ. ಶುಕ್ರಾಚಾರ್ಯರು ಬೆಳಗಿಸಿದ ದೀಪವು ಶುಕ್ರಾಚಾರ್ಯರ ಭಕ್ತಿಗೆ ಕೃತಜ್ಞತೆಯಾಗಿ ಇಂದಿಗೂ ಉರಿಯುತ್ತಿದೆ! ಉತ್ಸವ ಮೂರ್ತಿಯನ್ನು ಶೃಂಗಾರ ಸುಂದರ ಎಂದು ಕರೆಯುತ್ತಾರೆ. ತಿರುವೆಳ್ಳಿಯಾಂಗುಡಿಯ ದೇವೋತ್ತಮನತ್ತ ಮುಖ ಮಾಡಿರುವ ಚತುರ್ಭುಜ ಗರುಡನನ್ನು ನೋಡಬಹುದು. ಎರಡನೆಯ ಪ್ರಾಕಾರದಲ್ಲಿ ಯೋಗ ನರಸಿಂಹ ಮತ್ತು ಮರಗತವಲ್ಲಿ ತಾಯಿಯ (ಲಕ್ಷ್ಮೀದೇವಿ) ದರ್ಶನ ಮಾಡಬಹುದು. ಗರ್ಭಗುಡಿಯ ಮೇಲಿನ ವಿಮಾನವು ಪುಷ್ಕಲ ವರ್ತಕ ವಿಮಾನಂ ಎಂದು ಪ್ರಸಿದ್ಧಿಯಾಗಿದೆ. ದೇವಸ್ಥಾನದ ಪಕ್ಕದಲ್ಲಿ ಶುಕ್ರ ಪುಷ್ಕರಿಣಿ ಎಂಬ ಸುಂದರ ಕೊಳವಿದೆ. ಬಂಡೆಗಳ ಮೇಲೆ ವರ್ಷಕ್ಕೊಮ್ಮೆ ಕೆಂಪು ಬಾಳೆಹಣ್ಣು ಬಿಡುವ ಬಾಳೆ ಗಿಡಗಳಿರುವುದು ಈ ಸ್ಥಳದಲ್ಲಿ ಮಾತ್ರ. ವೈಖಾಸನ ಮಹರ್ಷಿಗಳು ಪ್ರಚುರಪಡಿಸಿದ ಪೂಜಾ ವಿಧಿಗಳನ್ನು ಇಲ್ಲಿ ಅನುಸರಿಸಲಾಗುತ್ತಿದೆ.

ಹಬ್ಬಗಳು

ತಿರುವೆಳ್ಳಿಯಾಂಗುಡಿಯಲ್ಲಿ ಬ್ರಹ್ಮೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ರಾಮ ನವಮಿ, ವೈಕುಂಠ ಏಕಾದಶಿ, ಶುಕ್ರವಾರಗಳಂದು ವಿಶೇಷ ಹೋಮ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗರುಡ ಪಂಚಮಿ, ಆಳ್ವಾರರು ಮತ್ತು ಆಚಾರ್ಯರ ಜನ್ಮ ದಿನೋತ್ಸವಗಳೂ ಭಕ್ತರನ್ನು ಆಕರ್ಷಿಸುತ್ತವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi