ವೇದಾಂತ ದರ್ಶನ

ಶ್ರೀ ಚೈತನ್ಯ ಪ್ರಭುಗಳು ಕೃಷ್ಣಭಕ್ತಿಯನ್ನು ಜನಗಳ ಹೃದಯದಲ್ಲಿ ತುಂಬಿ ಜನರ ಮನಸ್ಸು ಕೃಷ್ಣಪಜ್ಜೆಯಲ್ಲಿ ಲಯಿಸುವಂತೆ ಮಾಡಿದ ಸಂತಶ್ರೇಷ್ಠರು.

ಶ್ರೀ ಶ್ರೀಮದ್‌ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೋ ಚೈತನ್ಯ ಮಹಾಪ್ರಭುಗಳ ಅನುಭಾವವನ್ನೂ ಅವರ ಬೋಧನೆಗಳನ್ನೂ ಈ ಗ್ರಂಥದಲ್ಲಿ ಅನಾವರಣಗೊಳಿಸಿ ಚೈತನ್ಯ ಪ್ರಭುಗಳನ್ನು ಓದುಗರ ಹೃದಯಕ್ಕೆ ಹತ್ತಿರ ತಂದಿದ್ದಾರೆ. ಈ ಕೃತಿಯು ಭಗವಾನ್ ಚೈತನ್ಯರ ಅಸಾಧಾರಣ ಬದುಕನ್ನೂ ಮುಕ್ತಿಮಾರ್ಗವಾಗಿ ಅವರು ತೋರಿಸಿದ ಭಕ್ತಿಮಾರ್ಗದ ಸಾರವನ್ನೂ ವಿವರಿಸುತ್ತದೆ.

ಶ್ರೀ ಶ್ರೀಮದ್‌ ಭಕ್ತಿವೇದಾಂತ ಸ್ವಾಮಿ ಪ್ರಭುಗಳು ಕೃಷ್ಣಭಕ್ತಿಯನ್ನು ಜಗತ್ತಿನಾದ್ಯಂತ ಹರಡಿದರು. ಇವರ ಒಂದು ಅನನ್ಯತೆಯೆಂದರೆ ಶ್ರೀಕೃಷ್ಣನ ಚರಿತ್ರೆಯನ್ನೂ ಕೃಷ್ಣಭಕ್ತಿಯ ವಿಚಾರ ಹಾಗೂ ಆಚಾರಗಳನ್ನೂ ಯಥಾವತ್ತಾಗಿ ಪ್ರಚಾರ ಮಾಡಿ ನಮ್ಮ ಸಂಸ್ಕೃತಿಯ ಗ೦ಧವೂ ಇಲ್ಲದ ವಿದೇಶದ ಮನಸ್ಸುಗಳನ್ನು ಒಲಿಸಿದುದು.

ಸಾಧಾರಣವಾಗಿ ಆಯಾಯ ಕಾಲಕ್ಕೆ ಅವತರಿಸಿದ ಆಧ್ಯಾತ್ಮಿಕ ಮಹಾಪುರುಷರು ನಮ್ಮ ಚಿಂತನಗಳ ಪುನರ್ವ್ಯಾಖ್ಯೆ ಮಾಡಿ ಅವಕ್ಕೆ ಹೊಸ ರೂಪವನ್ನು ಕೊಟ್ಟು ಹೊಸ ಪ್ರಸ್ಥಾನವಾಗಿ ಪ್ರಚಾರ ಮಾಡಿದರು. ವೈಜ್ಞಾನಿಕ ಸವಾಲುಗಳನ್ನು ಎದುರಿಸಬೇಕಾಗಿ ಬಂದ ನಮ್ಮ ಚಿಂತನಗಳಿಗೆ ಹಾಗೂ ಅವಕ್ಕೆ ಸಂಬಂಧಪಟ್ಟ ಆಚಾರಗಳಿಗೆ ಹೊಸ ವ್ಯಾಖ್ಯೆಯ ಆವಶ್ಯಕತೆಯಿದೆಯೆಂಬುದನ್ನು ಅವರು ಪ್ರತಿಪಾದಿಸಿದರು.

ಹೀಗೆ ಪ್ರತಿಯೊಬ್ಬ ಅವತಾರ ಪುರುಷರೂ ಕೂಡ ಒಂದು ರೀತಿಯ ಪುನರ್ವಿಮರ್ಶಿತ ರೀತಿಯಲ್ಲಿ ನಮ್ಮ ವಿಚಾರಧಾರೆಗಳನ್ನು ಜಗತ್ತಿನಲ್ಲಿ ಹರಡಿದರು. ಪ್ರಭುಪಾದರ ವಿಶೇಷವೆಂದರೆ ಯಾವುದೇ ಸನಾತನ ವಿಚಾರಧಾರೆಯು ಪುನರ್ವ್ಯಾಖ್ಯೆಯನ್ನಾಗಲಿ ಪುನರ್ವಿಮರ್ಶೆಯನ್ನಾಗಲಿ ಬಯಸುತ್ತದೆಂದು ಅವರಿಗೆ ಅನ್ನಿಸಲಿಲ್ಲ.

ಇದರ ಅರ್ಥವೆಂದರೆ ಪ್ರಾಚೀನ ಭಾರತೀಯ ವಿಚಾರಗಳಲ್ಲಿ ಅವರಿಗಿದ್ದನಂಬಿಕೆ ಬಹಳ ದೃಢವಾದದ್ದು ಎಂಬುದೇ ಇಂತಹ ಅಪೂರ್ವ ಮನಸ್ಸಿನ ಹಾಗೂ ಅದರ ನಂಬಿಕೆಯ ಹಿನ್ನೆಲೆಯಲ್ಲಿ ಕೃಷ್ಣಭಕ್ತಿಗೆ ಒಂದು ಮತವೆನ್ನಿಸುವಷ್ಟು ರೀತಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪ್ತಿಯನ್ನು ಸಾಧಿಸಿಕೊಟ್ಟ ಪ್ರಭುಪಾದರ ಸಾಧನೆ ಅನನ್ಯ ಅಸಾಧಾರಣವಾದುದು.

ಪ್ರಭುಪಾದರು ಭಕ್ತಿಮಾರ್ಗವನ್ನು ಆರಿಸಿಕೊಂಡಿರುವುದು ಭಕ್ತಿಯು ಮನಸ್ಸಿನ ವಿಕಾಸಕ್ಕೆ, ಭಗವತ್ ಪ್ರಾಪ್ತಿಗೆ ಹಾಗೂ ಮುಕ್ತಿಗೆ ಸರ್ವಸುಲಭವಾದ ಸಾಧನವಾಗಿರುವುದರಿಂದಲೇ. ನಮ್ಮೊಳಗೇ ಬಾಳಿ ಬದುಕಿದ ಅವತಾರಪುರುಷನಾದ ಶ್ರೀಕೃಷ್ಣನು ಕೋಟಿ ಕೋಟಿ ಜನರಿಗೆ ಆರಾಧ್ಯದೈವ.

ಅವನಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ಅವನ ಭಕ್ತಿಯಲ್ಲಿ ಮಿಂದು ಆನಂದಾಮೃತ ಸಾಗರದಲ್ಲಿ ತೇಲಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಒಂದು ಸುಲಭವಾದ ಆಧ್ಯಾತ್ಮಿಕ ಪ್ರಯಾಣ. ಭಕ್ತಿಗೆ ಸಗುಣಬ್ರಹ್ಮನ ಆರಾಧನೆಯು ಬಹಳ ಆವಶ್ಯಕ. ಮನಸ್ಸನ್ನು ಏಕಾಗ್ರಗೊಳಿಸಲು ಒಂದು ಪ್ರಮೇಯವಾದ ಆಕೃತಿಬೇಕು.

ಆದ್ದರಿಂದ ನಾವು ಅಪ್ರಮೇಯ ಶಕ್ತಿಯನ್ನು ಪ್ರಮೇಯ ರೂಪದಲ್ಲಿ ಒಂದು ಆಕೃತಿಯೊಡನೆ ಸೇರಿಸಿ ಅದರಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುತ್ತೇವೆ. ಪೂರ್ಣಾವತಾರಿಯಾದ ಭಗವಾನ್ ಶ್ರೀಕೃಷ್ಣನು ನಮಗೆ ತನ್ನ ಆಕೃತಿಯನ್ನು ಒದಗಿಸಿಕೊಟ್ಟಿದ್ದಾನೆ. ಅವನೇ ಹೇಳಿರುವಂತೆ ಎಲ್ಲವನ್ನೂ ತೊರೆದು ಅವನಲ್ಲಿ ನಾವು ಶರಣಾಗತರಾದರೆ ಅವನು ನಮ್ಮನ್ನು ನೋಡಿಕೊಳ್ಳುತ್ತಾನೆ.

ನಮ್ಮ ಮನಸ್ಸು ಅವನಾಗಬೇಕು. ನಾವು ಅವನ ಭಕ್ತರಾಗಬೇಕು. ಅವನನ್ನೇ ಪೂಜಿಸಬೇಕು ಎಂದು “ಮನ್ಮನಾಭವ ಮದ್ಭಕ್ತಃ” ಎಂಬಲ್ಲಿ ಉಪದೇಶಿಸಿರುವ ಕೃಷ್ಣನು ನಮಗೆ ಪ್ರಪತ್ತಿಮಾರ್ಗವನ್ನು ಬೋಧಿಸಿದ್ದಾನೆ. ಈ ಪ್ರಪತ್ತಿ ಅಂದರೆ ಶರಣಾಗತಿಯ ಪ್ರಕ್ರಿಯೆಯಲ್ಲಿ ವ್ಯಕ್ತಿಯು ಈ ಆರು ಅಂಶಗಳಿಗೆ ಗಮನ ನೀಡಬೇಕು ಎಂದು ಶ್ರೀಪ್ರಭುಪಾದರು ಬೋಧಿಸುತ್ತಾರೆ.

1. ಭಕ್ತಿಸೇವೆಯ ಆಚರಣೆಗೆ ಅನುಕೂಲವಾಗಿ ಬರುವುದೆಲ್ಲವನ್ನೂ ಒಪ್ಪಿಕೊಳ್ಳುವುದು;

2. ಅನನುಕೂಲವಾದ ಸ೦ಗತಿಗಳನ್ನು ಪರಿತ್ಯಜಿಸುವುದು;

3. ಭಗವಂತನು ರಕ್ಷಿಸುತ್ತಾನೆಂಬ ದೃಢ ನಂಬಿಕೆ;

4. ಪ್ರಭುವಿನ ಕರುಣೆಯೊಂದನ್ನೇ ಶುದ್ಧಾಂಗವಾಗಿ ಅವಲಂಬಿಸಿಕೊಂಡಿರುವುದು;

5. ಭಗವಂತನ ಸಂತೋಷವೊಂದರ ಹೊರತು ಅನ್ಯ ಆಸಕ್ತಿ ಇಲ್ಲದಿರುವುದು ಮತ್ತು

6. ಸದಾಕಾಲವೂ ವಿನಯ ಹಾಗೂ ನಮ್ರತೆಯ ಭಾವವನ್ನು ಮೆರೆಯುವುದು.

ಶ್ರೀಕೃಷ್ಣನಲ್ಲಿ ಇಂತಹ ಪ್ರಪತ್ತಿಯನ್ನು ಸಾಧಿಸಿ ಕೃಷ್ಣಪ್ರಜ್ಞೆಯ ವಿಶ್ವರೂಪದಲ್ಲಿ ಕರಗಬೇಕೆಂದು ಪ್ರಭುಪಾದರು ಇಡೀ ಜಗತ್ತಿಗೆ ಬೋಧಿಸಿದರು. ಎಲ್ಲ ದೇಶಗಳಲ್ಲೂ ಈ ಮಾರ್ಗಕ್ಕೆ ಅನುಯಾಯಿಗಳನ್ನು ಸಾಧಿಸಿಕೊಂಡ ಶ್ರೀ ಪ್ರಭುಪಾದರ ಪ್ರಭುತ್ವ ಶಬ್ದಗಳಿಗೆ ಮೀರಿದಂತಹ ಒಂದು ಮಹಾ ಸಾಧನೆ.

ಕೃಷ್ಣಭಕ್ತಿಯು ಏಕೆ ಬೇಕು ಹಾಗೂ ಚೈತನ್ಯ ಪ್ರಭುಗಳ ಬೋಧನೆ ಮನುಷ್ಯ ಜೀವನಕ್ಕೆ ಹಾಗೂ ಪಾರಮಾರ್ಥಿಕವಾಗಿ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಪ್ರಸ್ತುತ ಕೃತಿಯ ಮೊದಲ ಮಾತುಗಳಲ್ಲಿ ಹೇಳಿರುವ ಈ ಮಾತುಗಳು ಮನನೀಯ – “ಬದ್ಧಾತ್ಮವು ಐಹಿಕ ದೇಹದಲ್ಲಿಯೇ ಮಗ್ನವಾಗಿದ್ದುಕೊಂಡು ಲೌಕಿಕ ಚಟುವಟಿಕೆಗಳ ಚರಿತ್ರೆಯ ಪುಟಗಳ ಸಂಖ್ಯೆಯನ್ನು ಬೆಳೆಸುತ್ತದಷ್ಟೆ.

ಇಂತಹ ಅನಗತ್ಯ ಹಾಗೂ ತಾತ್ಕಾಲಿಕ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಮಾನವ ಸಮಾಜಕ್ಕೆ ಚೈತನ್ಯಪ್ರಭುಗಳ ಬೋಧನೆಗಳು ನೆರವಾಗಬಲ್ಲವು. ಚೈತನ್ಯರ ಉಪದೇಶಗಳು ಮನುಕುಲವನ್ನು ಆಧ್ಯಾತ್ಮಿಕ ಚಟುವಟಿಕೆಗಳ ಅತ್ಯಂತ ಎತ್ತರದ ಮಜಲಿಗೆ ಒಯ್ಯಬಲ್ಲವು. ಕೃಷ್ಣಪ್ರಜ್ಞೆಯಲ್ಲಿದ್ದು ನಡೆಸುವ ಇಂತಹ ಮುಕ್ತ ಚಟುವಟಿಕೆಗಳು ಮಾನವನು ಪರಿಪೂರ್ಣನಾಗಬೇಕೆಂಬ ಧ್ಯೇಯವನ್ನೂ ಒಳಗೊಂಡಿರುತ್ತವೆ.”

ಭಾಗವತದಲ್ಲಿ ಬರುವ ಈ ಮಾತು ಕೂಡ ಈ ಸಂದರ್ಭದಲ್ಲಿ ಉಲ್ಲೇಖನೀಯ:

ಸತ್ಯಂ ದಿಶತಿ ಅರ್ಥಿತಮ್‌ ಅರ್ಥಿತೋ ನೃಣಾಂ

ನೈವಾರ್ಥದೋ ಯತ್‌ ಪುನರ್‌ ಅರ್ಥಿತಾ ಯತಃ|

“ಬೇಡಿದವರಿಗೆ ಬೇಡಿದುದನ್ನು ಕೃಷ್ಣನು ಖಂಡಿತವಾಗಿಯೂ ಕೊಡುತ್ತಾನೆ. ಪುನಃ ಅವನಿಗೆ ಬೇಡುವ ಸನ್ನಿವೇಶ ಬರದಂತೆ ನೋಡಿಕೊಳ್ಳುತ್ತಾನೆ.” ಆದ್ದರಿಂದ ನಾವು ಕೃಷ್ಣಮಯರಾಗಬೇಕು. ಅದರಿಂದ ಅವನ ಅನುಗ್ರಹ ದೊರಕುತ್ತದೆ. ಐಹಿಕ, ಪಾರಮಾರ್ಥಿಕ ಜೀವನಗಳೆರಡರಲ್ಲೂ ಶ್ರೇಯಸ್ಸು ಲಭಿಸುತ್ತದೆ.

ಭಕ್ತಿ ಎಂಬುದು ಪರಮಸುಲಭವಾದ ಭಾವಪೂರ್ಣ ಸಾಧನೆ. ಭಕ್ತಿಯ ಪರಾಕಾಷ್ಠೆಯಲ್ಲಿರುವವನು ಭಗವಂತನಲ್ಲಿ ಲೀನನಾಗಿರುತ್ತಾನೆ. ಅವನು ಒಮ್ಮೆ ಅಳುತ್ತಾನೆ. ಒಮ್ಮೆ ನಗುತ್ತಾನೆ. ಅವನು ಆನಂದಮಯವಾದ ಒಂದು ಪ್ರಪಂಚದಲ್ಲಿ ಇರುತ್ತಾನೆ. ಚೈತನ್ಯಪ್ರಭುಗಳು ಇಂತಹ ಮುಕ್ತ ಸ್ಥಿತಿಯನ್ನು ಸಾಧಿಸಿದವರು ಮತ್ತು ಬೋಧಿಸಿದರೂ ಕೂಡ. ಇವರ ಚರಿತ್ರೆಯನ್ನೂ ಬೋಧನೆಗಳನ್ನೂ ಈ ಕೃತಿಯ ರೂಪದಲ್ಲಿ ಜಗತ್ತಿಗೆ ಅನುಗ್ರಹಿಸಿದ ಶ್ರೀ ಪ್ರಭುಪಾದರ ಕೃಪೆ ಅಪಾರವಾದುದು.

ಪರಿಶುದ್ಧ ದೈವಪ್ರೇಮದ ಆನಂದವನ್ನು ನಮಗೆ ಒದಗಿಸಿಕೊಟ್ಟಿರುವ ವೇದಾಂತ ದರ್ಶನವೆಂಬ ಶ್ರೀ ಪ್ರಭುಪಾದರ ಈ ಕೃತಿಯು ಪ್ರತಿಯೊಬ್ಬರೂ ಓದಿ ಮನನ ಮಾಡಿ ನಿಧಿಧ್ಯಾಸನ ಮಾಡಬೇಕಾದ ವಿಚಾರಧಾರೆಯುಳ್ಳ ಕೃತಿ. ಇದನ್ನು ಓದಿ ಜಗತ್ತಿನಲ್ಲಿ ಎಲ್ಲರೂ ಕೃಷ್ಣಪ್ರಜ್ಞೆಗೆ ಸ್ಥಿತರಾಗಿ ಪ್ರಭುವಿನ ಅಲೌಕಿಕ ಸೇವೆಯಲ್ಲಿ ನಿರತವಾಗಿ ದೈವೀಗುಣಗಳನ್ನು ವೃದ್ಧಿಸಿಕೊಳ್ಳಲಿ ಎಂದು ಹಾರೈಸುತ್ತೇವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi