ಮಗು, ವಿಶ್ವದ ಇತಿಹಾಸದಲ್ಲೇ ಅತಿ ದೊಡ್ಡ ಯುದ್ಧ ಯಾವುದು ಗೊತ್ತೇ? ಅದೇ ಮಹಾಭಾರತ ಯುದ್ಧ. ಐದು ಸಾವಿರ ವರ್ಷಗಳ ಹಿಂದೆ ಪಾಂಡವ-ಕೌರವರ ನಡುವೆ ನಡೆದ ಈ ಕಾಳಗದಲ್ಲಿ ಶ್ರೀಕೃಷ್ಣನ ಕೃಪೆಯಿಂದ ಭಕ್ತರಾದ ಪಾಂಡವರು ಜಯಶಾಲಿಗಳಾಗಿದ್ದರು. ಪಾಂಡವ-ಕೌರವರಿಬ್ಬರಿಗೂ ದ್ರೋಣಾಚಾರ್ಯರೇ ಗುರುಗಳಾಗಿದ್ದರೂ, ಆಚಾರ್ಯರು ಯುದ್ಧದಲ್ಲಿ ಕೌರವ ಪಕ್ಷ ಸೇರಿದ್ದರು. ಹೀಗೆ, ಕೌರವರ ಪಕ್ಷ ಅಗಾಧ ಸಂಖ್ಯೆಯ ಸೈನಿಕರನ್ನು ಮತ್ತು ಪ್ರಚಂಡರಾದ ಯೋಧರನ್ನು ಹೊಂದಿ ಜಯವನ್ನು ನಿರೀಕ್ಷಿಸಿತ್ತಾದರೂ, ಕೃಷ್ಣಾರ್ಜುನರ ದಿವ್ಯ ತೇಜೋಬಲದ ಮುಂದೆ ತತ್ತರಿಸಿ ನಿರ್ನಾಮವಾಗಿ ಹೋಗಿತ್ತು. ಸೇನಾಪತಿಗಳಾದ ಭೀಷ್ಮ-ದ್ರೋಣರು ಮಡಿದಿದ್ದರು; ಕೌರವರ ನಾಯಕ ದುರ್ಯೋಧನ ಭೀಮನ ಏಟಿಗೆ ಸೋತು, ಸೊಂಟ ಮುರಿದು ಬಿದ್ದಿದ್ದ. ಇಂತಹ ಸೋಲಿನ, ಹತಾಶೆಯ ಪರಿಸ್ಥಿತಿಯಲ್ಲಿ ಹೇಗಾದರೂ ಮಾಡಿ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಹಂಬಲ, ತೀವ್ರ ತವಕ ದ್ರೋಣಪುತ್ರ ಅಶ್ವತ್ಥಾಮನದು. ಮುಂದೆ ಏನಾಯಿತು ಓದಿಕೋ…
ದ್ರೌಪದಿಯ ಐದು ಜನ ಮಕ್ಕಳ ಮೇಲೆ ಕಣ್ಣಿಟ್ಟಿದ್ದ ಅಶ್ವತ್ಥಾಮಾ ಒಂದು ರಾತ್ರಿ ಅವರ ಮೇಲೆ ಎರಗಿ ಅವರನ್ನು ಕೊಂದೇಬಿಟ್ಟ ! ಬಾಲಕರ ಶಿರಚ್ಛೇದ ಮಾಡಿ ಅವುಗಳನ್ನು ದುರ್ಯೋಧನನಿಗೆ ಉಡುಗೊರೆಯಾಗಿ ಅರ್ಪಿಸಿದ. ಆದರೆ ದುರ್ಯೋಧನನು ಈ ಕುಕೃತ್ಯವನ್ನು ಮೆಚ್ಚದೆ, ಸಂತೋಷಪಡುವ ಬದಲು ಬೇಸರಗೊಂಡ.
ಇತ್ತ ತನ್ನ ಪುತ್ರರ ವಧೆಯಾಗಿರುವುದನ್ನು ತಿಳಿದ ದ್ರೌಪದಿ ದುಃಖಿತಳಾಗಿ ಅಳಲಾರಂಭಿಸಿದಳು. ಅವಳಿಗೆ ಸ್ವಲ್ಪ ಸಮಾಧಾನ ನೀಡಲು ಅರ್ಜುನ ಹೀಗೆಂದ – “ಸ್ವೕಾಮಣಿಯೇ, ಆ ಬ್ರಾಹ್ಮಣನ ಶಿರಚ್ಛೇದನ ಮಾಡಿದ ಬಳಿಕ, ನಿನ್ನ ಕಂಬನಿ ಒರಸಿ ಸಾಂತ್ವನಗೊಳಿಸುವೆ. ಅನಂತರ ಆ ಶಿರದ ಮೇಲೆ ನಿಂತು ನೀನು ಸ್ನಾನ ಮಾಡಬಹುದು.”
ಹೀಗೆ ಹೇಳಿ, ಬತ್ತಳಿಕೆಯಲ್ಲಿ ಭಯಂಕರ ಬಾಣಗಳನ್ನು ತುಂಬಿ ಕವಚ ಧರಿಸಿ ಸಜ್ಜಾದ ಅರ್ಜುನನು ದ್ರೋಣಸುತನ ಬೇಟೆಗೆ ಮುಂದಾದ. ಅರ್ಜುನನು ತನ್ನ ಕಡೆಗೇ ಬರುತ್ತಿರುವುದನ್ನು ಬಹುದೂರದಿಂದಲೇ ನೋಡಿದ ಅಶ್ವತ್ಥಾಮಾ ಪ್ರಾಣಭಯದಿಂದ ರಥವನ್ನೇರಿ ಓಡಹತ್ತಿದ. ಓಡಿ ಓಡಿ ಕುದುರೆಗಳು ದಣಿದಾಗ, ಇನ್ನು ರಕ್ಷಣೆಗೆ ಬ್ರಹ್ಮಾಸ್ತ್ರದ ಹೊರತು ಅನ್ಯ ಮಾರ್ಗವಿಲ್ಲ ಎಂದು ಅಶ್ವತ್ಥಾಮಾ ಯೋಚಿಸಿದ. ಮಂತ್ರವನ್ನು ಜಪಿಸಿ ಬ್ರಹ್ಮಾಸ್ತ್ರವನ್ನು ಬಿಟ್ಟ. ಕೂಡಲೇ ದಶ ದಿಕ್ಕುಗಳಲ್ಲಿ ಎಂತಹ ಪ್ರಜ್ವಲಿಸುವ ಬೆಳಕು ಹರಡಿತೆಂದರೆ, ಅರ್ಜುನ ತನ್ನ ಜೀವಕ್ಕೇ ಅಪಾಯವಾಗಿದೆ ಎಂದುಕೊಂಡ. ಕೃಷ್ಣನ ಮೊರೆಹೋದಾಗ ತನ್ನದೇ ಆದ ಇನ್ನೊಂದು ಬ್ರಹ್ಮಾಸ್ತ್ರದಿಂದ ಅರ್ಜುನನು ಅದನ್ನು ನಿಷ್ಫಲಗೊಳಿಸಬೇಕೆಂದು ಪರಮಾತ್ಮ ಹೇಳಿದ. ಎರಡೂ ಬ್ರಹ್ಮಾಸ್ತ್ರಗಳ ಜ್ವಾಲೆ ಸೇರಿ ಒಂದಾದಾಗ, ಭಯಂಕರ ಶಾಖ ಉಂಟಾಯಿತು. ಪ್ರಳಯವೇ ಆಗುತ್ತಿದೆ ಎನ್ನುವ ಹಾಗಿದ್ದ ಆ ಬಿಸಿಯಿಂದ ಎಲ್ಲ ಲೋಕಗಳ ಜೀವಿಗಳು ಬಳಲಿ ಬೆಂಡಾದರು. ಆಗ ಅರ್ಜುನನು ಎರಡೂ ಅಸ್ತ್ರಗಳನ್ನು ಹಿಂದಕ್ಕೆ ಎಳೆದುಕೊಂಡನು.
ಕೆಂಡಾಮಂಡಲನಾಗಿದ್ದ ಅರ್ಜುನನು ಅಶ್ವತ್ಥಾಮನನ್ನು ಕೂಡಲೇ ಸೆರೆಹಿಡಿದ. ಅರ್ಜುನನನ್ನು ಧಾರ್ಮಿಕ ತತ್ತ್ವಗಳಲ್ಲಿ ಪರೀಕ್ಷಿಸುತ್ತಾ ಕೃಷ್ಣನು ಅವನನ್ನು ವಧಿಸಲು ಹೇಳಿದ. ಅರ್ಜುನನು ಅಶ್ವತ್ಥಾಮನನ್ನು ವಧಿಸದೆ ಧರ್ಮದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ಶಿಬಿರಕ್ಕೆ ಕರೆದೊಯ್ದು ಅವನನ್ನು ದ್ರೌಪದಿಗೆ ಒಪ್ಪಿಸಿದ.

ಸುಸಂಸ್ಕೃತಳೂ, ಮಹಾಭಕ್ತೆಯೂ ಆಗಿದ್ದ ದ್ರೌಪದಿಗೆ ಅಶ್ವತ್ಥಾಮನನ್ನು ಪಶುವಿನ ಹಾಗೆ ಕಟ್ಟಿಹಾಕಿದ್ದು ಸರಿದೋರಲಿಲ್ಲ. ಅಶ್ವತ್ಥಾಮಾ ಸತ್ತರೆ, ಅವನ ತಾಯಿಯೂ ತನ್ನಂತೆ ಕಣ್ಣೀರಿಡುವುದು ದ್ರೌಪದಿಗೆ ಇಷ್ಟವಿರಲಿಲ್ಲ. ಅವನನ್ನು ತತ್ಕ್ಷಣ ಬಿಟ್ಟುಬಿಡಬೇಕು, ಇಲ್ಲದಿದ್ದರೆ ಬ್ರಾಹ್ಮಣ ಕೋಪಕ್ಕೆ ತಾವೆಲ್ಲ ತುತ್ತಾಗಬೇಕಾದೀತು ಎಂದು ಅವಳು ಕೋರಿದಳು. ಯುಧಿಷ್ಠಿರ, ಅರ್ಜುನ, ನಕುಲ, ಸಹದೇವ, ಶ್ರೀಕೃಷ್ಣ ಮತ್ತು ಸಾತ್ಯಕಿ ಸೇರಿದಂತೆ ಎಲ್ಲರೂ ದ್ರೌಪದಿಯ ಮಾತುಗಳನ್ನು ಒಪ್ಪಿಕೊಂಡರೂ, ಭೀಮನೊಬ್ಬನೇ ಒಪ್ಪಲಿಲ್ಲ! ಅವನೊಬ್ಬನೇ ಆ ಪಾತಕಿಯನ್ನು ಕೂಡಲೇ ಕೊಲ್ಲಬೇಕು ಎಂದ.
ದೇವೋತ್ತಮ ಶ್ರೀಕೃಷ್ಣನು ಎಲ್ಲರ ಮಾತನ್ನು ಕೇಳಿ, ಅರ್ಜುನನನ್ನು ನೋಡಿ ನಗುತ್ತ ಹೀಗೆಂದ – “ಬ್ರಾಹ್ಮಣನೊಬ್ಬನನ್ನು ಕೊಲ್ಲಬಾರದು. ಆದರೆ ಅವನು ಪಾಪಿಯಾಗಿದ್ದರೆ ಕೊಲ್ಲಬೇಕು. ನಿನ್ನ ಪತ್ನಿಗೆ ನೀಡಿದ ವಚನವನ್ನು ನೀನು ಪಾಲಿಸಬೇಕು. ಅಲ್ಲದೆ, ಭೀಮಸೇನನಿಗೆ ಹಾಗೂ ನನಗೆ ತೃಪ್ತಿಯಾಗುವಂತೆ ವರ್ತಿಸಬೇಕು.”
ಪ್ರಭುವಿನ ಎರಡರ್ಥದ ಸಂದಿಗ್ಧ ಆದೇಶವನ್ನು ಕೇಳಿ, ಅವನ ಉದ್ದೇಶ ಅರ್ಥಮಾಡಿಕೊಂಡ ಅರ್ಜುನನು, ಅಶ್ವತ್ಥಾಮನ ತಲೆಗೂದಲನ್ನು ಮತ್ತು ಅವನು ತಲೆಯಲ್ಲಿ ಹೊಂದಿದ್ದ ಮಣಿಯನ್ನು ಕತ್ತರಿಸಿದನು. ಇದರ ಅನಂತರ ಹಗ್ಗವನ್ನು ಬಿಚ್ಚಿ ಅವನನ್ನು ಆಚೆ ದೂಡಿದನು. ಹೀಗೆ ಮುಖಭಂಗ ಅನುಭವಿಸಿದ ಅಶ್ವತ್ಥಾಮನು ಕೃಷ್ಣಾರ್ಜುನರ ಜಾಣ, ಚುರುಕು ಬುದ್ಧಿಯಿಂದ ಹತನಾಗದಿದ್ದರೂ ಹತನಾದನು! ಕೊನೆಗೂ ದ್ರೋಣಸುತನಿಗೆ ತನ್ನ ಹೀನ ಕೃತ್ಯಕ್ಕೆ ಸರಿಯಾದ ಶಿಕ್ಷೆ ಆಯಿತು. ಅಧರ್ಮದ ದಾರಿ ಹಿಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.






Leave a Reply