ಯುಕ್ತ ಮಾನವ ಆಹಾರ

ಸಂಸ್ಕರಿಸಿದ ಆಹಾರಕ್ಕಾಗಿ ಅಗತ್ಯವಾದ ವಸ್ತುಗಳನ್ನು ರೂಪಿಸಲು ತಳಿ ಶಾಸ್ತ್ರವು ದಾಪುಗಾಲು ಹಾಕುತ್ತಿದೆ. ಇದು ಯುಕ್ತವಾದ ಉತ್ತಮ ಆಹಾರ ಯಾವುದೆಂಬುದರ ಬಗೆಗೆ ಚರ್ಚಿಸಲು ಅವಕಾಶ ಕಲ್ಪಿಸಿದೆ. 

– ಆಂಗ್ಲಮೂಲ: ಕರುಣಾ ಧರಿಣಿ ದೇವಿ ದಾಸಿ

ಜೆನೆಟಿಕ್‌ ಎಂಜನಿಯರಿಂಗ್‌ (GE) ನಲ್ಲಿನ ಇತ್ತೀಚಿನ ಮುನ್ನಡೆಯು ಪ್ರಕೃತಿಯ ತೋಳುಗಳನ್ನೇ ತಿರುಚುವಂತೆ ಕಾಣುತ್ತದೆ. “ಸುಧಾರಿತ” ಗಿಡಗಳು ಮತ್ತು ಪ್ರಾಣಿಗಳನ್ನು ರೂಪಿಸಲು ಈಗ ವಿಜ್ಞಾನಿಗಳು ಬೀಜ ಅಥವಾ ಮೊಟ್ಟೆಗಳಲ್ಲಿ ಆನುವಂಶಿಕ ಸಂಕೇತ (ಜೆನೆಟಿಕ್‌ ಕೋಡ್‌) ಭಾಷೆಯನ್ನೇ ಬದಲಿಸುತ್ತಿದ್ದಾರೆ. ಜಾನುವಾರುಗಳ ಮೇವಿಗಾಗಿ ಶ್ರೀಮಂತ ರಾಷ್ಟ್ರಗಳು GE ಸೃಷ್ಟಿಸಿರುವ ವಿಶೇಷ ಮೆಕ್ಕೆ ಜೋಳ ಮತ್ತು ಸೋಯಾವನ್ನು ಬಳಸುತ್ತವೆ.

ಈವರೆಗೆ ಕೆಲವು ಬೆಳೆಗಳ ಬಗೆಗೆ ಸಾಧನೆಗೈದಿರುವ ವಿಜ್ಞಾನಿಗಳು, ರೂಪಿಸಿದ ಮೀನಿನ ಮೂಲಕ ಆಹಾರ ಉದ್ದಿಮೆಯನ್ನು ಕ್ರಾಂತಿಕಾರಿಗೊಳಿಸುವರೆ? ಬೇರೊಂದು ಜಾತಿಯಿಂದ ಜೀನ್‌ ದ್ರವ್ಯವನ್ನು ಪಡೆಯುವ ಪ್ರಕ್ರಿಯೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಕಳೆದ ನವೆಂಬರ್‌ನಲ್ಲಿ ಒಪ್ಪಿಗೆ ಸೂಚಿಸಿತು. ತಳಿ ವಿಜ್ಞಾನದ (GE) ವಿರೋಧಿಗಳು ತತ್‌ಕ್ಷಣ ಅದನ್ನು “ಫ್ರಾಂಕನ್‌ಫಿಶ್‌” (ಸೃಷ್ಟಿಸಿದವರನ್ನೇ ನಾಶಮಾಡುವ ವಿಕೃತ ರೂಪದ ಪ್ರಾಣಿ) ಎಂದು ಕರೆದರು. ಇದನ್ನು ಕಂಡು ಹಿಡಿದವರು ಅಕ್ವಾ ಬೌಂಟಿ (Aqua Bounty). ಇದನ್ನು ಅವರು ರೂಪಿಸಿದ್ದು ಕೆನಡಾದ ತಮ್ಮ ಮೀನು ಸಾಕಣೆ ಕೇಂದ್ರದಲ್ಲಿ. ಮೆಸಾಚುಸೆಟ್ಸ್‌ನ ಮೇನಾರ್ಡ್‌ನಲ್ಲಿ ಕೇಂದ್ರ ಕಚೇರಿ ಉಳ್ಳ ಅಕ್ವಾ ಬೌಂಟಿಯು 1990ರ ಆದಿ ಭಾಗದಿಂದಲೂ ಸಂಶಯಾಸ್ಪದ ಪ್ರಯೋಗಗಳನ್ನು ನಡೆಸುತ್ತಿದೆ. ಫ್ರಾಂಕನ್‌ಫಿಶ್‌ ಉತ್ಪಾದನೆಗೆ ಅಟ್ಲಾಂಟಿಕ್‌ ಸಾಗರದ ಒಂದು ಜಾತಿಯ ಮೀನಿನ ಆನುವಂಶಿಕ ವಸ್ತುವನ್ನು ಕೃತಕವಾಗಿ ಕುಗ್ಗಿಸಿದ ಸ್ಯಾಲ್ಮನ್‌ ಜಾತಿ ಮೀನಿನ ಮೊಟ್ಟೆಗೆ ಸೇರಿಸಲಾಯಿತು. ಈ ಜಾತಿಯ ಮೀನಿನಲ್ಲಿ ಸ್ಯಾಲ್ಮನ್‌ಗಿಂತ ಹೆಚ್ಚು ತ್ವರಿತವಾಗಿ ಕೊಬ್ಬು ತುಂಬಿಕೊಳ್ಳುತ್ತದೆ. ಆದುದರಿಂದ ಇವುಗಳ ಸಮ್ಮಿಲನವು ಹೆಚ್ಚು ಕೊಬ್ಬಿನ, ಪುಷ್ಟಿಯ ಮೀನನ್ನು ಮಾಡುತ್ತದೆ. ಆದರೂ ಈ ಜಾತಿಯ ಮೀನಿನ ವಸ್ತುಗಳು ಸ್ಯಾಲ್ಮನ್‌ ಡಿಎನ್‌ಎ ಜೊತೆಗೆ ಸರಿಯಾಗಿ ಸೇರುವುದಿಲ್ಲ, ಅದು ತಿರಸ್ಕರಿಸಲ್ಪಡುತ್ತದೆ. ಇದರ ಪರಿಣಾಮ ಉರಿಯೂತ. ಅನಂತರ ಈ ಉರಿಯ ಮರು ಉತ್ಪಾದನೆಯನ್ನು ತ್ವರಿತಗೊಳಿಸಲು ಒಂದು ಬೆಳವಣಿಗೆ ಅಂಶವನ್ನು ಸೇರಿಸಲಾಯಿತು. ಈ ಮೀನು ಎರಡು ಪಟ್ಟು ದೊಡ್ಡದಾಗಿ ಮತ್ತು ಮೂರು ಪಟ್ಟು ತ್ವರಿತವಾಗಿ ಬೆಳೆಯುತ್ತದೆ.

ಬೊಜ್ಜು ಮತ್ತು ಹೃದಯ ರೋಗಗಳಿಗೆ ಸಂಬಂಧ ಕಲ್ಪಿಸುವ ಕೆಂಪು ಮಾಂಸಕ್ಕೆ ಪರ್ಯಾವನ್ನು ಹುಡುಕುತ್ತಿದ್ದ ದಿಢೀರ್‌ ಆಹಾರದ ಹೊಟೇಲುಗಳಿಂದಾಗಿ ಮೀನಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಅತಿಯಾದ ಮೀನುಗಾರಿಕೆಯಿಂದ ಸಾಗರದಲ್ಲಿನ ನಿಸರ್ಗ ಮೀನುಗಳ ಸಂಖ್ಯೆಯು ಈ ಶತಮಾನದಲ್ಲಿ ತೀರ ಕಡಮೆಯಾಗುವುದೆಂದು ಊಹಿಸಲಾಗಿದೆ. ಆದುದರಿಂದ ಮೀನು ಸಾಕಣೆ ಕೇಂದ್ರಗಳೇ ಭವಿಷ್ಯ.

ಪರಿಣಾಮದ ಭೀತಿ

ಈ ಫ್ರಾಂಕನ್‌ಫಿಶ್‌ (GE) ಅನ್ನು ಸೇವಿಸಿದರೆ ಅದು ಅಹಿತ ಪ್ರತಿಕ್ರಿಯೆ (ಅಲರ್ಜಿಕ್‌) ಮತ್ತು ಉದರದಲ್ಲಿ ಹುಣ್ಣು ಉಂಟುಮಾಡುತ್ತದೆಂದು ಕೆಲವು ಜೀವ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಎಫ್‌ಡಿಎ ಸ್ವತಃ ಯಾವುದೇ ಪರೀಕ್ಷೆಗಳನ್ನು ನಡೆಸುವುದಿಲ್ಲ. ಅದು ಎಲ್ಲ ಪರೀಕ್ಷೆಗಳನ್ನೂ ಅಕ್ವಾ ಬೌಂಟಿಗೇ ಬಿಟ್ಟಿದೆ. ಅಕ್ವಾ ಬೌಂಟಿಯು ತನ್ನ ಮೀನು ಅತ್ಯಂತ ಸುರಕ್ಷಿತ ಎಂದು ಹೇಳಿಕೊಂಡಿದೆ. ಈ ಹೊಸ ಮೀನು ಸಾಗರದ ಮೀನಿಗೆ ಅಪಾಯ ಒಡ್ಡುತ್ತದೆ ಎಂದು ಕೆಲವು ಪರಿಸರ ವಿಜ್ಞಾನಿಗಳು ಹೇಳುತ್ತಾರೆ. ಸಾಗರದಲ್ಲಿ ಸ್ವತಂತ್ರವಾಗಿ ಬಿಟ್ಟ ಫ್ರಾಂಕನ್‌ಫಿಶ್‌ ಆಹಾರ ಸಮೂಹವನ್ನು ಪ್ರವೇಶಿಸುತ್ತದೆ ಮತ್ತು ಅತಿ ಶೀಘ್ರವಾಗಿ ಅಸಮತೋಲನವನ್ನು ಸೃಷ್ಟಿಸುತ್ತದೆ. ಕೆಲವು ದಶಕಗಳ ಅನಂತರ ದೇಶೀಯ ಸಾಗರ ಮೀನು ಕೊಚ್ಚಿಕೊಂಡು ಹೋಗಿಬಿಡುತ್ತದೆ.

ಪ್ರಾಣಿಗಳ ಬಗೆಗೆ ನೈತಿಕವಾಗಿ ನಡೆದುಕೊಳ್ಳಬೇಕೆಂದು ಆಶಿಸುವವರು ಈ ಮೀನು ಎಂದಿಗೂ ಮೊಟ್ಟೆ ಹಾಕುವುದಿಲ್ಲ, ಆರಾಮವಾಗಿ ಈಜುವುದಿಲ್ಲ ಅಥವಾ ಪೂರ್ಣ ಜೀವಿತಾವಧಿ ಬದುಕುವುದಿಲ್ಲ ಎಂದು ದೂರುತ್ತಾರೆ. ಪಾಪ! ಅದು ಬೆಳವಣಿಗೆಯ ಹಾರ್ಮೋನ್‌ಗಳ ಕಾರಣ ಗೂನು ಬೆನ್ನುಗಳಂತಹ ಜನ್ಮ ದೋಷಹೊಂದುವ ಪ್ರವೃತ್ತಿ ತೋರುತ್ತದೆ. ಅಲ್ಪಾಯುವಾದ ಬಂಜೆ ಮೀನುಗಳಿಗಾಗಿ ಸಣ್ಣ ಪ್ರಮಾಣದ ಅಂತರ್ಜಲ ಮೀನು ಸಾಕಾಣಿಕೆ ಕೇಂದ್ರಗಳಲ್ಲಿ ಬದುಕುಳಿಯಲು ಅಪಾರವಾಗಿ ಆಂಟಿಬಯೋಟಿಕ್ಸ್‌ ಅಗತ್ಯವಾಗುತ್ತದೆ. ಅವುಗಳೊಳಗೇ ರೋಗ ಬೆಳೆಸಿಕೊಳ್ಳುವುದನ್ನು ತಡೆಯಲು ಅವುಗಳನ್ನು ಸಣ್ಣ ಪ್ರಾಯದಲ್ಲಿಯೇ ಮಾರಾಟಕ್ಕೆ ಇಡಬೇಕಾಗುತ್ತದೆ.

ಪರಿಸರವಾದಿಗಳು ದುರಂತವನ್ನು, ಪ್ರಾಣಿ ಹಕ್ಕು ಪ್ರತಿಪಾದಕರು ಕ್ರೌರ್ಯವನ್ನು ಮತ್ತು ಜೀವ ವಿಜ್ಞಾನಿಗಳು ಆರೋಗ್ಯದ ಅಪಾಯಗಳನ್ನು ವಿವರಿಸುತ್ತಾರೆ. ವಿಶ್ವ ಆಹಾರ ಬಳಕೆಯ ನೆಲಮಾಳಿಗೆಯಲ್ಲಿ ನಿಜವಾಗಿಯೂ ಖಾದ್ಯ ಭೂತವೊಂದು ನಮಗಾಗಿ ಕಾದಿದೆಯೇ?

ಫ್ರಾಂಕನ್‌ಫಿಶ್‌ ಕುರಿತ ಸುಪ್ತ ಭೀತಿಯನ್ನು ಎದುರಿಸುವ ಮುನ್ನ ನಾವು ಒಂದು ಮೂಲ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ : ಯಾವುದು ಯುಕ್ತವಾದ ಮಾನವ ಆಹಾರ?

ಒಳ್ಳೆಯ ಆಹಾರ

ಲಕ್ಷಣ, ತೇವ, ಬಣ್ಣ, ಪರಿಮಳದಂತಹ ಗುಣಗಳಿಂದ ಸುಪ್ತ ಪೌಷ್ಟಿಕಾಂಶ ಶಕ್ತಿಯಿಂದ ತುಂಬಿದಾಗ ಆಹಾರವು ಉತ್ತಮ ಎಂದು ನಾವು ನಿರ್ಧರಿಸಬಹುದು. ಮರದಲ್ಲಿಯೇ ಕಳಿತ ಮಾವಿನ ಹಣ್ಣು, ಉಜ್ಜ್ವಲ ಬಣ್ಣ ಮತ್ತು ಪರಿಮಳದಿಂದ ದೂರದಿಂದಲೂ ಆಕರ್ಷಿಸುತ್ತದೆ. ಕುಟುಂಬ ಅಥವಾ ಮಿತ್ರರ ಜೊತೆ ಊಟ ಮಾಡುವಾಗ ಯಾರಾದರೂ. `ವಾಹ್‌! ಎಂತಹ ರುಚಿ!’ ಎಂದು ಎಷ್ಟು ಬಾರಿ ಉದ್ಗರಿಸಿಲ್ಲ? ಒಳ್ಳೆಯ ರುಚಿಯಲ್ಲಿ ಪೂರ್ಣತೆ ಇದೆ. ಅದು ನಮ್ಮನ್ನು ತಣಿಸುತ್ತದೆ, ಏಕೆಂದರೆ ಅದರಲ್ಲಿ ಗಿಡಗಳಿಗೆ ಪಾಲು ನೀಡಿದ ಭೂಮಿಯ ಜೈವಿಕ ಸೂಕ್ಷ್ಮವಾದ ಅಂಶಗಳಿವೆ. ರುಚಿಕರವಾದ ಮತ್ತು ತೃಪ್ತಿ ನೀಡುವ ಸರಳವಾದ ಹಣ್ಣುಗಳು ಅಥವಾ ತರಕಾರಿಗಳು ದೇಹವನ್ನು ಪೋಷಿಸಬಹುದು ಮತ್ತು ಇಡೀ ದಿನ ಜೀವಧಾರಕವಾಗಿರಬಹುದು. ಈ ಶಕ್ತಿಯನ್ನು ಪುರಾತನ ವೇದಗಳು ಪುಷ್ಟಿ ಎಂದು ಕರೆಯುತ್ತವೆ. “ಪೌಷ್ಟಿಕಾಂಶ” ಎಂದು ಸಾಮಾನ್ಯವಾಗಿ ಭಾಷಾಂತರಿಸಿದರೂ ಇದು ಭೂ ತಾಯಿಯ ಔದಾರ್ಯ. ಇದು ಎಲ್ಲ ಜೀವಿಗಳ ಪೋಷಣೆ ಮತ್ತು ನಿರ್ವಹಣೆಗೆ ಭಗವಂತನ ಅನುಗ್ರಹ.

ಸಸ್ಯಗಳ ಸುಪ್ತ ಮೌಲ್ಯಗಳ ಬಗೆಗೆ ಶ್ರೀಲ ಪ್ರಭುಪಾದರು ವ್ಯಾಖ್ಯಾನಿಸುತ್ತಾರೆ : “ಕೃಷ್ಣನ ವ್ಯವಸ್ಥೆಯು ಸಂಪೂರ್ಣ. ಮೂಲಿಕೆ, ಗಿಡ, ಮರ ಮತ್ತು ಬಳ್ಳಿಗಳು ಯಥೇಚ್ಛವಾಗಿ ಬೆಳೆಯುತ್ತವೆ. ಅವು ಮಾನವನ ಅಗತ್ಯಗಳನ್ನು ಪೂರೈಸುತ್ತವೆ. ಪ್ರತಿಯೊಂದು ಗಿಡ ಮತ್ತು ಬಳ್ಳಿಗಳಲ್ಲಿ ಸ್ವಲ್ಪವಾದರೂ ಉಪಯೋಗ ಇದೆ. ಅದನ್ನು ಬಳಸಿಕೊಳ್ಳುವುದು ನಮಗೆ ಗೊತ್ತಿಲ್ಲ. ಅನುಭವಿ ಮಾನವರು ಅನೇಕ ಮೂಲಿಕೆಗಳನ್ನು ಸಂಗ್ರಹಿಸುತ್ತಾರೆ. ನಾವು ಈ ಗಿಡ ಮೂಲಿಕೆ ಮತ್ತು ತರಕಾರಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ನಮಗೆ ಅವುಗಳನ್ನು ಬಳಸುವುದು ಹೇಗೆಂಬುದು ಗೊತ್ತಿಲ್ಲದಿರುವುದರಿಂದ ನಾವು ವೈದ್ಯರ ಅನೇಕ ಬಿಲ್‌ಗಳನ್ನು ಸ್ವೀಕರಿಸಬೇಕಾಗಿದೆ.” (ಉಪನ್ಯಾಸ, 1974)

ಪ್ರತಿಯೊಂದೂ ತರಕಾರಿ ಮತ್ತು ಬಳ್ಳಿಗಳಲ್ಲಿ ಮಾನವ ಜೀವಿಗೆ ಸೇವೆ ಸಲ್ಲಿಸುವ ಅಂಶ ಸ್ವಲ್ಪವಾದರೂ ಇದೆ ಎಂಬ ಸೂಕ್ಷ್ಮತೆ ತಿಳಿಯುವ ನಮ್ಮ ಸಾಮರ್ಥ್ಯವು ಆಧ್ಯಾತ್ಮಿಕ ಅರಿವು ಮತ್ತು ಉತ್ತಮ ಆರೋಗ್ಯದ ಆರಂಭ ಎನ್ನಬಹುದು. ಭಗವದ್ಗೀತೆಗೆ ನೀಡಿರುವ ಭಾವಾರ್ಥದಲ್ಲಿ (17.10) ಶ್ರೀಲ ಪ್ರಭುಪಾದರು ಬರೆಯುತ್ತಾರೆ,

ಆಹಾರದ ಉದ್ದೇಶವು ಆಯುಸ್ಸನ್ನು ಹೆಚ್ಚಿಸುವುದು, ಮನಸ್ಸನ್ನು ಪರಿಶುದ್ಧಗೊಳಿಸುವುದು ಮತ್ತು ದೇಹಶಕ್ತಿಯನ್ನು ಹೆಚ್ಚಿಸುವುದು. ಇದೇ ಅದರ ಉದ್ದೇಶ. ಹಿಂದಿನ ಕಾಲದಲ್ಲಿ ಪ್ರಾಮಾಣ್ಯರು ಆರೋಗ್ಯಕ್ಕೆ ಸಹಾಯಕವಾಗಿ ಆಯುಸ್ಸನ್ನು ಹೆಚ್ಚಿಸುವುದರಲ್ಲಿ ಅತ್ಯುತ್ತಮವಾದ ಆಹಾರಗಳನ್ನು ಆರಿಸಿದರು. ಹಾಲು ಉತ್ಪನ್ನಗಳು, ಸಕ್ಕರೆ, ಅಕ್ಕಿ, ಗೋಧಿ, ಹಣ್ಣುಗಳು ಮತ್ತು ತರಕಾರಿಗಳು ಇಂತಹ ಆಹಾರ. ಈ ಆಹಾರಗಳು ಸ್ವಭಾವತಃ ಪರಿಶುದ್ಧವಾದವು. ಮಾಂಸ ಮತ್ತು ಮದ್ಯಗಳಂತೆ ಮುಟ್ಟಬಾರದ ವಸ್ತುಗಳಿಂದ ಅವು ಭಿನ್ನವಾದವು. ಎಂಟನೆಯ ಶ್ಲೋಕದಲ್ಲಿ ಹೇಳಿದ ಕೊಬ್ಬಿನ ಆಹಾರಗಳಿಗೂ, ಪ್ರಾಣಿಗಳನ್ನು ಕೊಂದು ಪಡೆಯುವ ಪ್ರಾಣಿಗಳ ಕೊಬ್ಬಿಗೂ ಸಂಬಂಧವಿಲ್ಲ. ಪ್ರಾಣಿಗಳ ಕೊಬ್ಬು ಹಾಲಿನ ರೂಪದಲ್ಲಿ ದೊರೆಯುತ್ತದೆ; ಎಲ್ಲ ಆಹಾರಗಳಲ್ಲಿ ಅತ್ಯಂತ ಅದ್ಭುತವಾದ ಆಹಾರ ಹಾಲು. ಹಾಲು, ಬೆಣ್ಣೆ, ಪನೀರ್‌ ಮತ್ತು ಇಂತಹ ಉತ್ಪನ್ನಗಳು ಮುಗ್ಧ ಪ್ರಾಣಿಗಳನ್ನು ಕೊಲ್ಲುವ ಅಗತ್ಯವೇ ಇಲ್ಲದೆ ಪ್ರಾಣಿಗಳ ಕೊಬ್ಬನ್ನು ಕೊಡುತ್ತವೆ. ಪಾಶವೀ ಮನೋಧರ್ಮದಿಂದ ಮಾತ್ರ ಈ ಹತ್ಯೆ ನಡೆಯುತ್ತದೆ. ಸಸಾರಜನಕವು (ಪ್ರೋಟಿನ್‌) ಬಟಾಣಿ, ಬೇಳೆ, ಗೋಧಿ ಮೊದಲಾದುವುಗಳಲ್ಲಿ ಸಾಕಷ್ಟು ದೊರೆಯುತ್ತದೆ.

ಆಹಾರವು ಪರಾತ್ಪರನೊಂದಿಗೆ ನಮ್ಮ ಮೂಲ ಸಂಪರ್ಕವಾಗಿದೆ. ಭಗವಂತನು ಅತ್ಯುತ್ತಮ ರುಚಿಯ ಮಧುರ ರಹಸ್ಯವನ್ನು ಕೊಟ್ಟಿದ್ದಾನೆ ಮತ್ತು ಹಸಿವಿನಿಂದ ಮುಕ್ತಗೊಳಿಸಿದ್ದಾನೆ. ಅವನು ನಮ್ಮ ಜೀರ್ಣಶಕ್ತಿ. ಅವನ ಅನುಗ್ರಹದಿಂದ ನಾವು ಬದುಕನ್ನು ಆನಂದಿಸುತ್ತಿದ್ದೇವೆ. ಶ್ರೀಲ ಪ್ರಭುಪಾದರು ಬರೆಯುತ್ತಾರೆ,

ಆಯುರ್ವೇದ ಶಾಸ್ತ್ರಕ್ಕೆ ಅನುಗುಣವಾಗಿ, ಹೊಟ್ಟೆಗೆ ಹೋಗುವ ಆಹಾರವನ್ನೆಲ್ಲ ಅರಗಿಸುವ ಜಠರಾಗ್ನಿಯುಂಟು. ಈ ಅಗ್ನಿಯು ಪ್ರಜ್ವಲಿಸದೆ ಇರುವಾಗ ಹಸಿವು ಇರುವುದಿಲ್ಲ. ಅಗ್ನಿ ಕೆಲಸಮಾಡುತ್ತಿರುವಾಗ ನಮಗೆ ಹಸಿವಾಗುತ್ತದೆ. ಒಮ್ಮೊಮ್ಮೆ ಈ ಅಗ್ನಿ ಸರಿಯಾಗಿ ಕ್ರಿಯಾಶೀಲವಾಗಿಲ್ಲದಿದ್ದಾಗ ಚಿಕಿತ್ಸೆ ಅಗತ್ಯವಾಗುತ್ತದೆ. ಏನೇ ಇರಲಿ, ಈ ಅಗ್ನಿಯು ದೇವೋತ್ತಮ ಪರಮ ಪುರುಷನ ಪ್ರತಿನಿಧಿ… ಶಬ್ದಾಭ್ಯೋಽನ್ತಃ ಪ್ರತಿಷ್ಠಾನಾಚ್ಚ. (ವೇದಾಂತ ಸೂತ್ರ 1.2.27) : ಪ್ರಭುವು ಶಬ್ದದಲ್ಲಿದ್ದಾನೆ, ದೇಹದಲ್ಲಿದ್ದಾನೆ, ಗಾಳಿಯಲ್ಲಿದ್ದಾನೆ ಮತ್ತು ಜೀರ್ಣಶಕ್ತಿಯಾಗಿ ಉದರದಲ್ಲಿದ್ದಾನೆ. ಆಹಾರಗಳಲ್ಲಿ ನಾಲ್ಕು ವಿಧ; ಕೆಲವನ್ನು ಕುಡಿಯುತ್ತೇವೆ, ಕೆಲವನ್ನು ಅಗಿಯುತ್ತೇವೆ, ಕೆಲವನ್ನು ನೆಕ್ಕುತ್ತೇವೆ, ಕೆಲವನ್ನು ಚೀಪುತ್ತೇವೆ. ಅವೆಲ್ಲಕ್ಕೂ ಅವನೇ ಜೀರ್ಣಶಕ್ತಿ. (ಗೀತೆ 15.14, ಭಾವಾರ್ಥ)

ಇನ್ನೂ ಪ್ರಶ್ನೆ

ಈ ಮಧ್ಯೆ ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ತಳಿಶಾಸ್ತ್ರ ಆಧುನಿಕೀಕರಣಗೊಳಿಸಿರುವ ಆಹಾರ ಪದಾರ್ಥಗಳ ದೀರ್ಘಾವಧಿ ಪರಿಣಾಮವು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಜೀರ್ಣಾಗ್ನಿಯಾಗಿ ದೇವೋತ್ತಮ ಪರಮ ಪುರುಷನು ವೈದಿಕ ಶಾಸ್ತ್ರದಲ್ಲಿ ಆಯ್ಕೆಮಾಡದ, ಮಾನವ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಜೀರ್ಣಗೊಳಿಸಬೇಕಾಗಿಲ್ಲ. ಸುದೀರ್ಘ ಅಜೀರ್ಣವು ಕಾಯಿಲೆಗಳಿಗೆ ಕಾರಣವಾಗುತ್ತದೆ.

ನಾವು ಸಂಪೂರ್ಣವಾಗಿ ಆಹಾರದ ಮೇಲೆ ಅವಲಂಬಿತರು. ಆಧುನಿಕ ಉದ್ದಿಮೆಗಳಿದ್ದರೂ ನಮಗೆ ಅದರ ಸ್ಥಾನವನ್ನು ಪಡೆಯುವ ಸಾಧನವನ್ನು ರೂಪಿಸಲಾಗಿಲ್ಲ. ರಾಸಾಯನಿಕ, ಪ್ರನಾಳಗಳ ಆಧುನಿಕ ವ್ಶೆಜ್ಞಾನಿಕ ಪ್ರಯೋಗಾಲಯಗಳು ಮತ್ತು ಪಿಎಚ್‌.ಡಿ.ಗಳನ್ನು ಹೊಂದಿರುವ ವಿಜ್ಞಾನಿಗಳು ಪ್ರನಾಳದಲ್ಲಿ ಆಹಾರ ಉತ್ಪಾದನೆಯನ್ನು ಕಂಡುಹಿಡಿದಿಲ್ಲ. ಖಂಡಿತವಾಗಿ ಅವರು ಪ್ರಯತ್ನಿಸುತ್ತಾರೆ. ಅದು ಉಪಯೋಗಕರ. ಗಿಡಗಳು ಮತ್ತು ಪ್ರಾಣಿಗಳನ್ನು ತಳಿಶಾಸ್ತ್ರದಂತೆ ಆಧುನಿಕೀಕರಣಗೊಳಿಸಿದ ರೂಪದ ಅವರ ಪ್ರಯತ್ನಗಳು ಶ್ರಮದಾಯಕದ್ದು ಮತ್ತು ಅಸಂಬದ್ಧವಾದದ್ದು,

ಶ್ರೀಲ ಪ್ರಭುಪಾದರು ವಿವರಿಸುತ್ತಾರೆ : ದೈವ ರಹಿತ ನಾಗರಿಕತೆ. ಅವರು ನೈಸರ್ಗಿಕ ಕೊಡುಗೆಗಳ ಮೇಲೆ ಅವಲಂಬಿತವಾಗಬೇಕಾಗಿಲ್ಲ. ಕೈಗಾರಿಕೆಗಳಿಂದ ತಮಗೆ ಹೆಚ್ಚು ಹಣ ಬರುತ್ತದೆ ಮತ್ತು ತಾವು ತುಂಬ ಸುಖದಿಂದ ಇರಬಹುದು ಎಂದು ಅವರು ಯೋಚಿಸುತ್ತಾರೆ. ಆಹಾರ ಧಾನ್ಯ, ತರಕಾರಿ ಮತ್ತು ನೈಸರ್ಗಿಕ ಕೊಡುಗೆಗಳಿಂದಲೇ ತೃಪ್ತಿಪಟ್ಟುಕೊಳ್ಳುವುದು ಪ್ರಾಚೀನ ಕಾಲದ ಭಾವನೆ ಎಂದೂ ಅವರು ಯೋಚಿಸುತ್ತಾರೆ. ಅವರು ಅದನ್ನು `ಓಬೀರಾಯನ ಕಾಲದ್ದು’ ಎನ್ನುತ್ತಾರೆ. ಜನರು ನಾಗರಿಕರಾಗಿಲ್ಲದ್ದ ಕಾಲದಲ್ಲಿ, ಅವರು ಪ್ರಕೃತಿಯ ಮೇಲೆ ಅವಲಂಬಿತರಾಗಿರುತ್ತಿದ್ದರು. ಆದರೆ ಅವರು ನಾಗರಿಕತೆಯಲ್ಲಿ ಮುನ್ನಡೆದ ಮೇಲೆ ಉದ್ದಿಮೆಗಳನ್ನು ಕಂಡುಹಿಡಿಯಲೇಬೇಕು. (ಉಪನ್ಯಾಸ, 1974)

ಚರಿತ್ರೆಯ ಆರಂಭದಿಂದಲೂ ಮಾನವರು ಬೀಜ, ಗಿಡ ಮತ್ತು ಮರಗಳ ಕೃಷಿಕರಾಗಿ ನಿಸರ್ಗದೊಂದಿಗೆ ವಿಧೇಯರಾಗಿ ಸಹಕರಿಸಿದ್ದಾರೆ. ಆದರೆ ಈಗ ಅವರು ದೇವೋತ್ತಮನ ವ್ಯಾಪ್ತಿಯಲ್ಲಿರುವ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸುತ್ತ ದುರುಪಯೋಗಿಗಳಾಗಿದ್ದಾರೆ. ಪ್ರಕೃತಿಯ ಕೃಪೆಯ ಸಹಕಾರದೊಂದಿಗೆ ಆಹಾರ ಉತ್ಪಾದಿಸಲು ಮಾನವನಿಗೆ ಅವಕಾಶವಿದೆ. ಆದರೆ ಗರಿಷ್ಠ ಲಾಭ ಅಥವಾ ಮುಗ್ಧ ಜೀವಿಗಳ ಹತ್ಯೆಗಾಗಿ ಅವಳ ಸಂಪನ್ಮೂಲಗಳನ್ನು ಶೋಷಿಸಲು ಅವಕಾಶವಿಲ್ಲ.

ಪ್ರೀತಿಯ ಅರ್ಪಣೆ ಆಹಾರ

ಭಗವದ್ಗೀತೆಯ ಪ್ರಕಾರ (3.14) “ಎಲ್ಲ ಜೀವಿಗಳೂ ಆಹಾರ ಧಾನ್ಯಗಳಿಂದ ಬದುಕುತ್ತವೆ. ಧಾನ್ಯಗಳನ್ನು ಮಳೆ ಉತ್ಪತ್ತಿ ಮಾಡುತ್ತದೆ. ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ. ಯಜ್ಞವು ನಿಯತ ಕರ್ಮಗಳಿಂದ ಉದ್ಭವಿಸುತ್ತದೆ.”

ಶ್ರೀಲ ಪ್ರಭುಪಾದರು ವ್ಯಾಖ್ಯಾನಿಸುತ್ತಾರೆ :

ಆಹಾರ ಧಾನ್ಯಗಳು ಮತ್ತು ತರಕಾರಿಗಳು ನಿಜವಾದ ಆಹಾರ. ಮನುಷ್ಯನು ಬಗೆಬಗೆಯ ಆಹಾರ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮೊದಲಾದುವನ್ನು ಸೇವಿಸುತ್ತಾನೆ. ಪ್ರಾಣಿಗಳು ಆಹಾರಧಾನ್ಯಗಳಲ್ಲಿ ಮತ್ತು ತರಕಾರಿಗಳಲ್ಲಿ ಉಳಿದ ಭಾಗ, ಹುಲ್ಲು, ಸಸ್ಯಗಳು ಮೊದಲಾದುವನ್ನು ತಿನ್ನುತ್ತವೆ. ಮಾಂಸಾಹಾರವನ್ನು ತಿನ್ನುವ ಮನುಷ್ಯರೂ, ಪ್ರಾಣಿಗಳನ್ನು ತಿನ್ನಲು ಸಸ್ಯಗಳ ಬೆಳೆಯನ್ನು ನೆಚ್ಚಬೇಕು. ಹೀಗೆ ಅಂತಿಮವಾಗಿ ನಾವು ಹೊಲದ ಉತ್ಪನ್ನವನ್ನೇ ಅವಲಂಬಿಸಬೇಕು, ಕಾರ್ಖಾನೆಯ ಉತ್ಪನ್ನವನ್ನಲ್ಲ… ಭಗವಂತನು ಯಜ್ಞಗಳಿಂದ ಸುಪ್ರೀತನಾಗುತ್ತಾನೆ. ಆದುದರಿಂದ, ಯಜ್ಞಗಳನ್ನು ಮಾಡಲಾರದವನಿಗೆ ಅಭಾವವೇ ಗತಿ. ಇದು ನಿಸರ್ಗದ ನಿಯಮ.

ನಮ್ಮ ಉಳಿವಿಗಾಗಿ ನಾವು ಅನೇಕ ಹಣ್ಣು ಮತ್ತು ಮೀನುಗಳ ಜೀನುಗಳನ್ನು ಪರಸ್ಪರ ಸೇರಿಸುವ ಅಗತ್ಯವಿದೆ ಎಂದು ಭಗವಂತನು ಹೇಳುವುದಿಲ್ಲ. ಬದಲಿಗೆ ಅವನು ಯಜ್ಞವನ್ನು ಶಿಫಾರಸು ಮಾಡುತ್ತಾನೆ. ಅವನು ಭಗವಂತ. ನಾವು ಎಷ್ಟೇ ಜನರಿದ್ದರೂ ನಮಗೆ ಆಹಾರ ಪೂರೈಸುವುದು ಅವನ ಸಾಮರ್ಥ್ಯವನ್ನು ಮೀರಿದುದು ಅಲ್ಲವೇ ಅಲ್ಲ. ಗಾಂಧೀಜಿ ಅವರು ಹೇಳಿದಂತೆ, “ಎಲ್ಲರ ಅಗತ್ಯವನ್ನೂ ಪೂರೈಸುವಷ್ಟು ಜಗತ್ತಿನಲ್ಲಿದೆ. ಆದರೆ ಎಲ್ಲರ ದುರಾಸೆಯನ್ನು ಪೂರೈಸುವಷ್ಟು ಅಲ್ಲ.”

ಆಹಾರಕ್ಕಾಗಿ ನಾವು ಭಗವಂತನ ಸಹಾಯ ಪಡೆದುಕೊಳ್ಳಬೇಕೆಂದು ಶ್ರೀಲ ಪ್ರಭುಪಾದರು ಮತ್ತು ಭಗವದ್ಗೀತೆಯು ಬಲವಾಗಿ ಶಿಫಾರಸು ಮಾಡಿದ್ದಾರೆ. ಕಚ್ಚಾ ಸಾಮಗ್ರಿಗಳ ಪೂರೈಕೆದಾರನನ್ನು ತೃಪ್ತಿಪಡಿಸಲು ನಾವು ನಮ್ಮ ಎಲ್ಲ ಚಟುವಟಿಕೆಯನ್ನೂ ಕೈಗೊಂಡರೆ ನಾವು ಆಹಾರ ಕುರಿತ ನಮ್ಮ ಚಿಂತನೆ ಮತ್ತು ನಾವು ಬೆಳೆಯುವ, ಅಡುಗೆ ಮಾಡುವ, ವಿತರಿಸುವ ಮತ್ತು ಸೇವಿಸುವ ವಿಧಾನವನ್ನು ಪರಿವರ್ತಿಸುತ್ತೇವೆ.

ಭಕ್ತರು ತಾವು ಸ್ವೀಕರಿಸಿದ ಆಹಾರವನ್ನು ಮೊದಲು ಶ್ರೀಕೃಷ್ಣನಿಗೆ ಅರ್ಪಿಸುತ್ತಾರೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, (9.26) “ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.” ಪ್ರೀತಿಯಿಂದ ನಾವು ಅವನಿಗೆ ಆಹಾರ ಅರ್ಪಿಸಬೇಕು ಎಂದಷ್ಟೇ ಭಗವಂತನು ಹೇಳುವುದು.

ಶ್ರೀಲ ಪ್ರಭುಪಾದರು ಬರೆಯುತ್ತಾರೆ : “ಈ ರೀತಿಯಲ್ಲಿ ನಮ್ಮ ಕರ್ಮವು ನಿಷ್ಪರಿಣಾಮವಾಗುತ್ತದೆ. ಏಕೆಂದರೆ ಆರಂಭದಿಂದಲೂ ಆಹಾರವನ್ನು ಕೃಷ್ಣನಿಗೆ ಅರ್ಪಿಸುತ್ತಿದ್ದೇವೆಂದು ನಾವು ಭಾವಿಸುತ್ತೇವೆ. ನಾವು ಆಹಾರಕ್ಕಾಗಿ ಆಸೆಪಡಬಾರದು. ಕೃಷ್ಣನು ದಯಾಮಯ. ಅವನು ನಮಗೆ ಸೇವಿಸಲು ಆಹಾರವನ್ನು ಕೊಟ್ಟೇ ಕೊಡುವನು. ಹೀಗೆ ನಮ್ಮ ಆಸೆ ಪೂರೈಸುತ್ತದೆ. ಒಬ್ಬನು ಈ ರೀತಿ ಜೀವನವನ್ನು ರೂಪಿಸಿಕೊಂಡರೆ – ಅಂದರೆ ಕೃಷ್ಣನ ಆಸೆಗಳೊಂದಿಗೆ ತನ್ನ ಆಸೆಗಳನ್ನು ಹೊಂದಿಸಿಕೊಂಡರೆ – ಆಗ ಅವನು ಯೋಗಸಿದ್ಧಿ ಪಡೆದನೆಂದು ತಿಳಿಯಬೇಕು.” (ಯೋಗದ ಪರಿಪೂರ್ಣತೆ, ಅಧ್ಯಾಯ 4)

ಯೋಗಾಭ್ಯಾಸದಲ್ಲಿ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಸೂಕ್ತವಾಗಿ ಸಿದ್ಧಪಡಿಸಿದ ಆಹಾರ ಸೇವನೆ ಅಗತ್ಯ. ಹೆಚ್ಚೇನು, ಭಗವಂತನಲ್ಲಿ ನಮ್ಮ ಪ್ರೀತಿಯ ಭಾವನೆಯನ್ನು ಬೆಳೆಸಿಕೊಳ್ಳಲು ಇದು ಅಗತ್ಯವಾದ ಅಂಶ. ನೀವು ಪ್ರೀತಿಸುವವರಿಗೆ ಆಹಾರ ಸಿದ್ಧಪಡಿಸುವುದು ವಾತ್ಸಲ್ಯದ ಪ್ರತೀಕ. ಅದೇ ರೀತಿ ಭಗವಂತನಿಗೆ ನೈವೇದ್ಯ ಸಿದ್ಧಪಡಿಸುವುದು ಆಧ್ಯಾತ್ಮಿಕ ಪ್ರೀತಿಯ ವಿಶೇಷ ಕ್ರಿಯೆ. ಭಕ್ತನು ನಿಸರ್ಗದಲ್ಲಿ ಅತ್ಯುತ್ತಮ ಸಾಮಗ್ರಿಗಳನ್ನು ಸಂಗ್ರಹಿಸುತ್ತಾನೆ ಮತ್ತು ಪ್ರೀತಿಯಿಂದ ಆಹಾರ ತಯಾರಿಸಿ ಪ್ರಾರ್ಥನೆಗಳೊಂದಿಗೆ ಕೃಷ್ಣನಿಗೆ ಅರ್ಪಿಸುತ್ತಾನೆ. ದೇವರಿಗೆ ಅರ್ಪಿಸಿದ ತಾಜಾ ಆಹಾರವನ್ನು ಭಕ್ತನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತಾನೆ. ಏಕೆಂದರೆ, ಪ್ರೀತಿಯಿಂದ ತಯಾರಿಸಿದ ಮತ್ತು ಅರ್ಪಿಸಿದ ಆಹಾರವನ್ನು ಸೇವಿಸುವವರು ಯಾವುದು ಪವಿತ್ರ ಮತ್ತು ಪರಿಶುದ್ಧ ಎಂಬುವುದನ್ನು ಮೆಚ್ಚುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ. ಆಹಾರದಲ್ಲಿ ಕೃಷ್ಣನೇ ಸವಿ ಮತ್ತು ಪ್ರೀತಿಯ ಅಂಶ. ರುಚಿಪರಿಮಳದ ಸಂವೇದನೆಯ ಮೂಲಕ ದೈವೀ ಸಾಕ್ಷಾತ್ಕಾರವನ್ನು ಇನ್ನಾರು ನೀಡುವುದು ಸಾಧ್ಯ? ಅದು ಒಬ್ಬ ಬುದ್ಧಿವಂತ ವಿಜ್ಞಾನಿಯಷ್ಟೇ ಜಾಣ, ಕೌಶಲಹೊಂದಿದವನಾಗಿರಬೇಕು. ಇಲ್ಲಿ ಮನ್ನಣೆ ಎಲ್ಲಿ ನೀಡಬೇಕೋ ಅಲ್ಲಿ ಕೊಡಿ. ಮೊದಲು ನಾವು ಕೃಷ್ಣನು ಏನು ಸೇವಿಸಲು ಇಷ್ಟಪಡುತ್ತಾನೆ, ಅವನು ಯಾವುದನ್ನು ಸರಿಯಾದ ಆಹಾರವೆಂದು ಪರಿಗಣಿಸುತ್ತಾನೆ ಎಂಬುವುದನ್ನು ನಿರ್ಧರಿಸೋಣ ಮತ್ತು ಅವನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಹಾರ ತಯಾರಿಸೋಣ. ಆಗ ಆಹಾರ ಏನು ಎಂಬುದರ ಬಗೆಗೆ ಚರ್ಚೆಯೇ ಇರುವುದಿಲ್ಲ. ನಾವು ಪೂರ್ಣವಾಗಿ ತೃಪ್ತರಾಗುತ್ತೇವೆ ಮತ್ತು ಚೆನ್ನಾಗಿ ಪೋಷಿಸಲ್ಪಡುತ್ತೇವೆ ಕೂಡ.

ಈ ಲೇಖನ ಶೇರ್ ಮಾಡಿ