ಆ ಕಾಲದಲ್ಲಿ ಇದ್ದ ಸೌಭರಿ ಎನ್ನುವ ಋಷಿ ಯಾವಾಗಲೂ ತಪಸ್ಸಿಲ್ಲಿಯೇ ಮಗ್ನರಾಗಿದ್ದವರು. ತಮ್ಮ ಧೀರ್ಘ ತಪಸ್ಸಿನಿಂದ ಅವರು ಅಪೂರ್ವ ತೇಜೋಶಕ್ತಿಯನ್ನು ಮತ್ತು ಮಂತ್ರಶಕ್ತಿಯನ್ನು, ಸಂಪಾದಿಸಿಕೊಂಡಿದ್ದರು. ನಿರಂತರವಾಗಿ ಯೋಗಾಭ್ಯಾಸ ಮಾಡುತ್ತ ಯಮುನಾ ನದಿಯ ಮಡುವಿನಲ್ಲಿ ಮುಳುಗಿ ತಪೋಮಗ್ನರಾಗಿದ್ದಾಗ, ಒಮ್ಮೆ ತಮ್ಮ ಮುಂದೆಯೇ ಮೀನುಗಳ ಜೋಡಿಯೊಂದು ಮೈಥುನದಲ್ಲಿ ಮಗ್ನವಾಗಿರುವುದನ್ನು ನೋಡಿದರು. ಆ ಕ್ಷಣವೇ ಅವರ ಮೈಮನಸ್ಸು ಕಾವೇರಿ ಕಾಮನೆಯಲ್ಲಿ ಮುಳುಗಿ ಹೋಯಿತು. ಹೆಣ್ಣಿನ ಸಂಗವನ್ನು ಬಯಸಿತು. ಮಾಡುತ್ತಿದ್ದ ತಪಸ್ಸನ್ನು ಹಾಗೆಯೇ ನಿಲ್ಲಿಸಿದರು. ಮಥುರೆಯ ರಾಜ ಮಾಂಧಾತನಿಗೆ ಐವತ್ತು ಹೆಣ್ಣು ಮಕ್ಕಳಿದ್ದಾರೆ, ಅವರಲ್ಲಿ ಒಬ್ಬಳನ್ನು ಕೇಳಿ ಪಡೆದುಕೊಂಡು ತಮ್ಮಾಸೆ ತೀರಿಸಿಕೊಳ್ಳಬಹುದು ಎನಿಸಿತವರಿಗೆ.

ಕೂಡಲೇ ಮಾಂಧಾತನ ಹತ್ತಿರ ಬಂದರು. `ರಾಜನ್, ನನಗೆ ಮದುವೆ ಆಗಬೇಕೆಂದನ್ನಿಸಿದೆ. ನಿನ್ನ ಐವತ್ತು ಮಕ್ಕಳಲ್ಲಿ ಒಬ್ಬಳನ್ನು ನನಗೆ ಮದುವೆ ಮಾಡಿಕೊಡು! – ಎಂದು ಕೇಳಿದರು.
ಮುಪ್ಪಿನಿಂದ ದುರ್ಬಲರಾಗಿದ್ದ, ಕೂದಲು ಹಣ್ಣಾಗಿದ್ದ, ಚರ್ಮ ಸುಕ್ಕುಗಟ್ಟಿದ್ದ, ತಲೆ ಸದಾ ಕಂಪಿಸುತ್ತಿದ್ದ ಈ ಉದ್ದ ಗಡ್ಡದ ಕೌಪೀನ ಯೋಗಿಗೆ ತನ್ನ ರಾಜಕುಮಾರಿಯೊಬ್ಬಳನ್ನು ಹೇಗೆ ಮದುವೆ ಮಾಡಿ ಕೊಡುವುದು? ಸುಕುಮಾರಿಯಾದವಳಿಗೆ ಈ ಸಂಬಂಧ ಸುಖವಾಗಿರುವುದೇ? ರಾಜ ಯೋಚಿಸಿ ಯೋಚಿಸಿ ಕಂಗೆಟ್ಟ. ಕೊನೆಗೆ ಒಂದು ಹಾರಿಕೆಯ ಉತ್ತರ ಕೊಟ್ಟ : `ಪೂಜ್ಯ ಋಷಿಪುಂಗವರೆ, ನನ್ನ ಐವತ್ತು ಹೆಣ್ಣು ಮಕ್ಕಳನ್ನೂ ನಿಮ್ಮ ಮುಂದೆ ನಿಲ್ಲಿಸುತ್ತೇನೆ. ಅವರಲ್ಲಿ ಯಾರಾದರೊಬ್ಬರು ನಿಮ್ಮನ್ನು ಮದುವೆಯಾಗಲು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ!’
ಸೌಭರಿ ಮುನಿಗೆ ರಾಜನ ಮಾತಿನ ಅಂತರಾಳ ಅರ್ಥವಾಯಿತು. ತನ್ನಂತಹ ಮುದುಕನಿಗೆ ಮಗಳನ್ನು ಕೊಡಲು ಇಷ್ಟವಿಲ್ಲದೆ ಒಂದು ದಾರಿಯನ್ನು ಹುಡುಕಿದ್ದಾನೆ ಎನಿಸಿತು. ಕೂಡಲೇ ಹೇಳಿದರು : `ಹಾಗೇ ಆಗಲಿ, ಯಾರಿಗೆ ಇಷ್ಟವಾಗುತ್ತದೋ ಅವರನ್ನೇ ಮದುವೆಯಾಗುತ್ತೇನೆ.!’

ಆ ಐವತ್ತು ರಾಜಕನ್ಯೆಯರು ತಮ್ಮ ಮುಂದೆ ಬಂದು ನಿಲ್ಲುವ ವೇಳೆಗೆ ಸರಿಯಾಗಿ ಈ ಋಷಿ ಮಂತ್ರಶಕ್ತಿಯಿಂದ ತಮ್ಮ ಆಕಾರವನ್ನು ಅತಿ ಸುಂದರ ಪುರುಷನನ್ನಾಗಿ ಪರಿವರ್ತಿಸಿಕೊಂಡುಬಿಟ್ಟರು. ಅತಿ ಆಕರ್ಷಕ ಮನ್ಮಥ ಪುರುಷನಾದರು. ಆ ಹೆಣ್ಣುಗಳು ಇವರ ಮುಂದೆ ಬಂದು ನಿಂತಾಗ, ಅವರವರಲ್ಲೇ ಸ್ಪರ್ಧೆ ಮೊದಲಾಗಿತ್ತು. ಈ ಸುಂದರನನ್ನು ಮದುವೆಯಾಗಲು ಎಲ್ಲರೂ ಸಿದ್ಧರಾಗಿ ಬಿಟ್ಟರು. ರಾಜನಿಗೆ ಬೇರೆ ದಾರಿಕಾಣದೆ ತನ್ನ ಐವತ್ತು ರಾಜಕುಮಾರಿಯರನ್ನು ಆ ಕಾಡಿನ ಋಷಿಗೆ ಧಾರೆಯೆರೆದುಬಿಟ್ಟ.
ಸೌಭರಿ ಮುನಿ ತಮ್ಮ ಮಂತ್ರಬಲದಿಂದ ತಮ್ಮ ಈ ಐವತ್ತು ಹೆಂಡತಿಯರಿಗೆ ಐವತ್ತು ವೈಭವದ ಅರಮನೆಗಳನ್ನು ನಿರ್ಮಿಸಿದರು. ಉಡುಗೆ ತೊಡಗೆ, ಆಳುಕಾಳು, ಉದ್ಯಾನಗಳು, ಸರೋವರ ಹೂದೋಟಗಳು ಅಲ್ಲಿದ್ದವು. ಮೃದುತಲ್ಪ, ಸುಖಾಸನ, ಆಭರಣ, ಸ್ನಾನಗೃಹಗಳು, ರುಚಿಕರ ಆಹಾರ ಎಲ್ಲವೂ ಇದ್ದವು. ಸೌಭರಿಯ ಕಾಮಲಾಲಸೆ ಐವತ್ತು ರೂಪಗಳಲ್ಲಿ ತೃಪ್ತಗೊಳ್ಳತೊಡಗಿತು.
ಇವೆಲ್ಲಕ್ಕೂ ಒಂದು ಕೊನೆಗಾಲ ಬಂದಿತು. ಸಮಸ್ತ ಸೌಖ್ಯವನ್ನೂ ಅನುಭವಿಸಿದ ಸೌಭರಿ ಕೊನೆಗೊಮ್ಮೆ ಅಪೂರ್ಣತೆಯ ಅಶಾಂತಭಾವ ಅನುಭವಿಸುವಂತಾಯಿತು. ಐಹಿಕ ಸಮೃದ್ಧಿ ಅತೃಪ್ತಿ ತಂದಿತು. ಗೃಹಸ್ಥಾಶ್ರಮ ಸಾಕಾಯಿತು. ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿಗೆ ಹೋಗಬೇಕೆನಿಸಿತು. ಮೀನುಗಳ ಮೈಥುನ ಕ್ರಿಯೆಯನ್ನು ಹತ್ತಿರದಿಂದ ಕಂಡದ್ದೇ ಈ ಅಧಃಪತನಕ್ಕೆ ಕಾರಣವಾಯಿತು ಎಂದು ಅರ್ಥಮಾಡಿಕೊಂಡರು. `ಅಯ್ಯೋ, ಮಡುವಿನ ಆಳದಲ್ಲಿ ತಪಸ್ಸು ಮಾಡುತ್ತಿದ್ದೆ. ಸಾಧುಪುರುಷರು ರೂಢಿಸಿದ್ಧ ವಿಧಿ ನಿಯಮಗಳನ್ನು ಪಾಲಿಸಿದ್ದೆ. ಆದರೂ ನನ್ನ ದೀರ್ಘ ತಪಸ್ಸಿನ ಫಲವನ್ನು ಕಳೆದುಕೊಂಡೆ!’ ಎನಿಸಿತವರಿಗೆ.
ಸೂತ ಮುನಿಗಳು ಹೇಳಿದರು.
“ಈ ಸಂದರ್ಭದಲ್ಲಿ ವೇದವ್ಯಾಸರು ಸರ್ವಕಾಲಿಕವಾದ ಒಂದು ಎಚ್ಚರಿಕೆಯ ಬುದ್ಧಿವಾದವನ್ನು ಹೇಳಿದ್ದಾರೆ. ಐಹಿಕ ಬಂಧನದಿಂದ ಮುಕ್ತಿಯನ್ನು ಬಯಸುವವನು ಕಾಮ ಜೀವನದಲ್ಲಿ ಆಸಕ್ತರಾದವರ ಒಡನಾಟವನ್ನು ತ್ಯಜಿಸಬೇಕು. ಇಂದ್ರಿಯಗಳನ್ನು ಬಹಿರ್ಮುಖವಾಗಿ ಪ್ರಚೋದಿಸಬಾರದು. ಸದಾ ನಿರ್ಜನ ಪ್ರದೇಶದಲ್ಲಿ ನೆಲೆಸಬೇಕು. ಅನಂತನಾದ ದೇವೋತ್ತಮ ಪರಮ ಪುರುಷನ ಪಾದಕಮಲಗಳಲ್ಲಿ ಮನಸ್ಸನ್ನು ಸಂಪೂರ್ಣವಾಗಿ ಸ್ಥಿರಗೊಳಿಸಬೇಕು. ಸಂಗ ಮಾಡಲು ಬಯಸಿದ್ದೇ ಆದಲ್ಲಿ ಸಮಾನ ಮನಸ್ಕರ ಸಂಗ ಮಾಡಬೇಕು. `ಐವತ್ತು ಹೆಂಡತಿಯರು ಒಬ್ಬೊಬ್ಬರಿಗೆ ನೂರು ನೂರು ಮಕ್ಕಳು, ಹೀಗೆ ಐಹಿಕ ತ್ರಿಗುಣಗಳ ಪ್ರಭಾವದಿಂದ ನಾನು ಪತಿತನಾದೆ. ಈ ಜನ್ಮದಲ್ಲೂ ಮುಂದಿನ ಜನ್ಮದಲ್ಲೂ ನನ್ನ ಪ್ರಾಪಂಚಿಕ ಅನುಭೋಗದ ಬಯಕೆಗೆ ಕೊನೆಯೇ ಇಲ್ಲವಾಯಿತು!’ ಎಂದೆಲ್ಲ ಸೌಭರಿ ಮುನಿ ಪಶ್ಚಾತ್ತಾಪ ಪಡುವಂತಾಯಿತು. ಆತ್ಮವನ್ನು ಅರಿತ ಈ ಮುನಿ ಅನಂತರ ಕಾಡಿಗೆ ಹೋಗಿ ಘೋರ ತಪಸ್ಸು ಮಾಡಿ ಅಲ್ಲಿಯೆ ಅಗ್ನಿಗೆ ಆಹುತಿಯಾದರು. ಪತಿವ್ರತೆಯರಾಗಿದ್ದ ಅವರ ಐವತ್ತು ಹೆಂಡತಿಯರೂ ಪತಿಯ ದಾರಿಯನ್ನು ಹಿಂಬಾಲಿಸಿದರು. ಮುನಿಗಳೇ, ಬೆಂಕಿಯೇ ಆರಿದಾಗ ಜ್ವಾಲೆಗಳು ಎಲ್ಲಿರುತ್ತವೆ? ಆ ಋಷಿಯೊಂದಿಗೆ ಆ ಹೆಂಡತಿಯರೂ ಇಲ್ಲವಾದರು.!”
ನೈಮಿಷಾರಣ್ಯದಲ್ಲಿ ಕೆಲ ಕ್ಷಣ ಮೌನ ಆವರಿಸಿಕೊಂಡಿತು. ಮಹಾತಪಸ್ವಿಯೊಬ್ಬರು ಹೇಗೆ ಐಹಿಕ ಸುಖಭೋಗಗಳ ಆಮಿಷದಿಂದ ಅಧಃಪತನಕ್ಕಿಳಿಯಬಹುದು ಎನ್ನುವುದುನ್ನು ಸೌಭರಿ ಮುನಿಯ ಕಥೆಯ ಮೂಲಕ ಕೇಳಿದ ಮೇಲೆ ಅಲ್ಲಿ ನೆರದಿದ್ದ ಮುನಿಗಳೆಲ್ಲರೂ ಆಲೋಚನ ಪರರಾದರು, ಬದುಕಿನ ಒಂದು ತಪ್ಪು ಹೆಜ್ಜೆ ಏನೇನು ಮಾಡಬಹುದೆಂಬ ಕಟು ಸತ್ಯ ಅವರನ್ನೆಲ್ಲ ದಿಙ್ಮೂಢರನ್ನಾಗಿಸಿತ್ತು.
ಸೂತ ಮುನಿಗಳು ಹೇಳಿದರು : “ದೇವೋತ್ತಮ ಪರಮ ಪುರುಷನ ಮೇಲೆ ದೃಷ್ಟಿ ಇಟ್ಟವರು ಮನಸ್ಸನ್ನು ಅತ್ತಿತ್ತ ಸರಿಸಬಾರದು. ಹಾಗೆ ಮಾಡಿದಾಗ ಕಳೆದುಕೊಳ್ಳುವುದು ಬಹಳ ದೊಡ್ಡದಾಗಿರುತ್ತದೆ!”
ಅನಂತರ ಅವರು ಭಾಗವತ ಕಥೆ ಮುಂದುವರಿಸಿದರು-
ಸೌಭರಿಗೆ ಐವತ್ತು ಹೆಣ್ಣು ಮಕ್ಕಳನ್ನು ಧಾರೆಯೆರೆದುಕೊಟ್ಟ ಮಾಂಧಾತ ಮಹಾರಾಜನ ಮೂವರು ಗಂಡು ಮಕ್ಕಳಲ್ಲಿ ಅಂಬರೀಷನೇ ಬಹಳ ಪ್ರಖ್ಯಾತನಾದವನು. ಇನ್ನೊಬ್ಬ ಮಗ ಪುರುಕುತ್ಸನಿಗೆ ಸರ್ಪಸೋದರರು ತಮ್ಮ ಸೋದರಿಯನ್ನು ನೀಡಿ ಅವನನ್ನು ರಸಾತಲಕ್ಕೆ ಕಳುಹಿಸಿಕೊಟ್ಟರು. ಇಲ್ಲಿ ಅವನು ಸರ್ಪಗಳಿಂದಲೂ ವರವನ್ನು ಪಡೆದನು. ಇವನ ಮಗ ತ್ರಸದ್ದಸ್ಯು. ಅವನ ಮಗ ಅನರಣ್ಯ. ಇವನ ಮಗ ಹರ್ಯಶ್ವ, ಇವನ ಮಗ ಪ್ರಾರುಣ. ಇವನ ಮಗ ತ್ರಿಬಂಧನ. ಈ ತ್ರಿಬಂಧನನ ಮಗನೇ ತ್ರಿಶಂಕು ಎಂದು ಕುಪ್ರಸಿದ್ಧನಾದ, ಕೀರ್ತಿ – ಸ್ಥಾನಮಾನಗಗಳನ್ನು ಗಳಿಸಿದ ಸತ್ಯವ್ರತ. ಇವನು ತಂದೆಯಿಂದಲೇ ಶಾಪಗ್ರಹಸ್ಥನಾಗಿ, ತಾನು ಹೇಗಾದರೂ ಸ್ವರ್ಗಕ್ಕೆ ಹೋಗಲೇಬೇಕೆಂದು ವಿಶ್ವಾಮಿತ್ರ ಋಷಿಗಳ ಬಳಿಗೆ ಬಂದು ಕೇಳಿದ: `ಮಹಾತಪಸ್ವೀ, ನನ್ನ ತಂದೆ ನನಗೆ ಚಂಡಾಲನಾಗು ಎಂದು ಶಪಿಸಿಬಿಟ್ಟಿದ್ದಾನೆ. ಈ ಕಾರಣಕ್ಕಾಗಿ ನಾನು ಸ್ವರ್ಗಕ್ಕೆ ಅರ್ಹನಾಗುವುದಿಲ್ಲ. ಆದರೆ, ನಿಮ್ಮ ತಪಸ್ಸಿನ ಪ್ರಭಾವದಿಂದ ನನ್ನನ್ನು ಸ್ವರ್ಗಕ್ಕೆ ಕಳುಹಿಸಬೇಕೆಂದು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ನೀವು ಹೇಳುವ ಯಾಗವನ್ನು ಮಾಡುತ್ತೇನೆ.!’ ಎಂದು ಹೇಳಿದ. ವಿಶ್ವಾಮಿತ್ರರು ಒಪ್ಪಿ ಯಾಗ ಮಾಡಿ, ತಮ್ಮ ಶಕ್ತಿಯಿಂದ ಅವನನ್ನು ಸ್ವರ್ಗದ ದಾರಿಯಲ್ಲಿ ಕಳುಹಿಸಿದರು. ಆದರೆ ದೇವತೆಗಳು ಅವನನ್ನು ಸ್ವರ್ಗದೊಳಗೆ ಬಿಡದೆ’ ತಳ್ಳಿಬಿಟ್ಟರು. ಮುಖ ಕೆಳಗೆ ಮಾಡಿಕೊಳ್ಳುತ್ತ ಬೀಳುತ್ತಿದ್ದ ಅವನನ್ನು ನೋಡಿ ವಿಶ್ವಾಮಿತ್ರರು `ಬೀಳಬೇಡ, ಅಲ್ಲಿಯೇ ನಿಲ್ಲು!’ ಎಂದರು. ಅವನು ತಲೆಕೆಳಗಾಗಿ ಹಾಗೆಯೇ ನಿಂತ. ವಿಶ್ವಾಮಿತ್ರರು ಅವನಿಗಾಗಿ ಅಲ್ಲಿಯೇ ಒಂದು ಸ್ವರ್ಗಲೋಕವನ್ನು ಸೃಷ್ಟಿಸಿದರು. ಅದಕ್ಕೆ ತ್ರಿಶಂಕು ಸ್ವರ್ಗ ಎಂದೇ ಹೆಸರಾಯಿತು.
ಈ ತ್ರಿಶಂಕುವಿನ ಮಗನೇ ರಾಜಾ ಹರಿಶ್ಚಂದ್ರ. ಮಹಾ ಪರಾಕ್ರಮಶಾಲಿ, ಮಹಾಸತ್ಯವಂತ. ವಿಶ್ವಾಮಿತ್ರ-ವಸಿಷ್ಟರ ತಿಕ್ಕಾಟದಲ್ಲಿ ಇವನನ್ನು ಘೋರ ಪರೀಕ್ಷೆಗೊಡ್ಡಿದ್ದರು. ಹರಿಶ್ಚಂದ್ರನಿಗೆ ಮಕ್ಕಳಿರಲಿಲ್ಲ. ಬಹಳ ಚಿಂತಿತನಾಗಿದ್ದ. ಆಗೊಮ್ಮೆ ನಾರದರು ಬಂದು, `ಹರಿಶ್ಚಂದ್ರ, ನಿನಗೆ ಪುತ್ರಪ್ರಾಪ್ತಿಯಾಗಬೇಕಾದರೆ ವರುಣದೇವರ ಮೊರೆ ಹೋಗು’ – ಎಂದರು. ಅದರಂತೆ ಹರಿಶ್ಚಂದ್ರ ವರುಣದೇವನನ್ನು ಕುರಿತು ಪ್ರಾರ್ಥಿಸಿದ. ವರುಣನ ದರ್ಶನವಾದಾಗ, `ದೇವರೇ, ನನಗೆ ಮಗನಿಲ್ಲ, ನನಗೊಬ್ಬ ಮಗನನ್ನು ಕರುಣಿಸುತ್ತಿಯಾ?’ ಎಂದದ್ದಷ್ಟೇ ಅಲ್ಲ, ಪ್ರಭೂ ನನಗೊಬ್ಬ ಮಗನನ್ನು ನೀಡಿದರೆ, ಅವನನ್ನು ನಿನ್ನ ತೃಪ್ತಿಗೋಸ್ಕರ ಯಜ್ಞಕ್ಕೆ ಅರ್ಪಿಸಿ ಬಿಡುತ್ತೇನೆ!’ ಎಂದೂ ಹೇಳಿಬಿಟ್ಟ.

ಹರಿಶ್ಚಂದ್ರನಿಗೆ ವರುಣಾನುಗ್ರಹದಿಂದ ಪುತ್ರ ಸಂತಾನವಾಯಿತು. ರೋಹಿತ ಎನ್ನುವ ಹೆಸರನ್ನಿಟ್ಟ. ಪುತ್ರ ಸಂತಾನವಾದ ಕೂಡಲೇ ವರುಣ ಬಂದು ಹರಿಶ್ಚಂದ್ರನನ್ನು ಕೇಳಿದ : `ಮಗ ಹುಟ್ಟಿದನಲ್ಲ! ಯಜ್ಞ ಮಾಡು, ನನಗರ್ಪಿಸು!’ ಎಂದ. `ಹತ್ತು ದಿನ ಕಳೆಯಿಲಿ, ಅನಂತರ ಯಜ್ಞ ಪ್ರಾರಂಭಿಸುತ್ತೇನೆ’ ಎಂದ ಹರಿಶ್ಚಂದ್ರ. ಹತ್ತು ದಿನ ಕಳೆದ ಮೇಲೆ ವರುಣ ಮತ್ತೆ ಬಂದು ಕೇಳಿದ. `ಬಲಿಪಶುವಾದ ನನ್ನ ಮಗನಿಗೆ ಹಲ್ಲು ಹುಟ್ಟಿದಾಗ ಅದು ಯಜ್ಞಕ್ಕೆ ತಕ್ಕಷ್ಟು ಪವಿತ್ರವಾಗುತ್ತದೆ!’ ಎಂದ ಹರಿಶ್ಚಂದ್ರ. ಹಲ್ಲುಗಳು ಹುಟ್ಟಿದ್ದೂ ಆಯಿತು. ವರುಣ ಮತ್ತೆ ಪ್ರತ್ಯಕ್ಷನಾದಾಗ, `ಮಗುವಿನ ಹಲ್ಲುಗಳೆಲ್ಲ ಬಿದ್ದು ಹೋದಾಗ ಅದು ಯಜ್ಞಕ್ಕೆ ತಕ್ಕದ್ದಾಗುತ್ತದೆ.!’ ಎಂದುತ್ತರ ಬಂದಿತು. ಹಾಲು ದಂತಗಳೆಲ್ಲ ಬಿದ್ದ ಮೇಲೆ ವರುಣ ಮತ್ತೆ ಬಂದ. `ಹಲ್ಲುಗಳು ಬಿದ್ದಾಯಿತಲ್ಲ, ಯಜ್ಞ ಮಾಡು’ – ಎಂದ. ಆಗ ಹರಿಶ್ಚಂದ್ರ ಹೇಳಿದ: `ಪಶುವಿನ ಹಲ್ಲು ಮತ್ತೆ ಹುಟ್ಟಿದಾಗ ಅದು ಯಜ್ಞಕ್ಕೆ ತಕ್ಕಷ್ಟು ಪವಿತ್ರವಾಗುತ್ತದೆ.!’
ರೋಹಿತ ರಾಜಕುಮಾರನಿಗೆ ಮತ್ತೆ ಹಲ್ಲುಗಳು ಹುಟ್ಟಿದವು. ವರುಣ ಕಾಣಿಸಿಕೊಂಡ. `ಪ್ರಭುವೇ, ಯಜ್ಞಪಶುವು ಕ್ಷತ್ರಿಯನಾಗಿ, ವೈರಿಗಳೊಂದಿಗೆ ಕಾದಾಡಲು ಸ್ವಯಂ ಶಸ್ತ್ರ ಸನ್ನದ್ದನಾದಾಗ ಪವಿತ್ರವಾಗುವುದು!’ ಎಂದ ಹರಿಶ್ಚಂದ್ರ.
ಅಷ್ಟು ಸಮಯದಲ್ಲಿ ಹರಿಶ್ಚಂದ್ರನಿಗೆ ಅಪಾರವಾದ ಪುತ್ರವ್ಯಾಮೋಹ ಹುಟ್ಟಿಬಿಟ್ಟಿತ್ತು. ಪುತ್ರವಾತ್ಸಲ್ಯವನ್ನು ಹತ್ತಿಕ್ಕಲಾರದೆ ದಿನಗಳನ್ನು ಮುಂದುಡುತ್ತ ಬಂದ. ವರುಣ ಕಾಯುತ್ತಲೇ ಇದ್ದ.
ದೊಡ್ಡ ಬಾಲಕನಾಗಿ ಬೆಳೆದ ಮೇಲೆ ರೋಹಿತನಿಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ತನ್ನ ತಂದೆ ತನ್ನನ್ನು ಯಜ್ಞಪಶು ಮಾಡಲಿದ್ದಾನೆ ಎಂದೂ ತಿಳಿದುಹೋಯಿತು. ಅದರಿಂದ ಪಾರಾಗಲಿಕ್ಕಾಗಿ ಬಿಲ್ಲುಬಾಣ ಹಿಡಿದು ಕಾಡಿಗೆ ನಡೆದು ಬಿಟ್ಟು.
ಮುಂದೊಮ್ಮೆ ಅವನಿಗೆ ಹೃದಯ ವಿದ್ರಾವಕ ಸುದ್ಧಿಯೊಂದು ಬಂದು ತಲುಪಿತು. ತಂದೆ ಹರಿಶ್ಚಂದ್ರ ಜಲೋದರ ರೋಗಕ್ಕೆ ತುತ್ತಾಗಿದ್ದಾನೆ ಎನ್ನುವುದು ತಿಳಿಯಿತು. ತಂದೆಯನ್ನು ನೋಡಲು ಹೊರಟು ನಿಂತ ಅವನನ್ನು ದೇವೇಂದ್ರ ತಡೆದು ನಿಲ್ಲಿಸಿದ. `ನಾನಾ ತೀರ್ಥಕ್ಷೇತ್ರಗಳನ್ನು, ಪವಿತ್ರ ಪ್ರದೇಶಗಳನ್ನೂ ಸಂಚರಿಸಿಕೊಂಡು ಬಾ. ಆಗ ಪುಣ್ಯ ಸಂಗ್ರಹವಾಗಿ ನಿಮ್ಮ ತಂದೆಗೆ ಒಳ್ಳೆಯದಾಗುತ್ತದೆ. ಎಂದು ಹೇಳಿದ. ರೋಹಿತ ಒಂದು ವರ್ಷ ಸುತ್ತಾಡಿ ಕಳೆದ. ಹೀಗೆ ಎರಡು ಮೂರು, ನಾಲ್ಕು ಐದು ವರ್ಷಗಳು ಇಂದ್ರನ ಮಾತಿನಂತೆ ಹೋಗದೆ ತಡೆದ. ಐದನೆಯ ವರ್ಷದ ಕೊನೆಯಲ್ಲಿ `ಈ ಸಲ ಹೊರಟೇ ಬಿಡುತ್ತೇನೆ!’ ಎಂದು ಹೊರಟಾಗಲೂ ದೇವೇಂದ್ರ ಮತ್ತೆ ಬಂದು ತಡೆದು ನಿಲ್ಲಿಸಿದ. ಆರನೆಯ ವರ್ಷ ಅವನಿಗೆ ತಡೆಯಲಾಗಲಿಲ್ಲ. ಇಂದ್ರನ ಮಾತನ್ನೂ ಕೇಳದೆ ಹೊರಟು ತಂದೆಯ ರಾಜಧಾನಿಗೆ ಹಿಂತಿರುಗಿದ. ಆದರೆ, ಒಂದು ಜಾಣತನದ ಮುನ್ನೆಚ್ಚರಿಕೆಯ ಕೆಲಸ ಮಾಡಿದ್ದ. ತಂದೆಯ ಯಜ್ಞಕ್ಕೆ ಪಶುವಾಗಿ ಬಳಸಲು ಶುನಶ್ಯೇಪ ಎನ್ನುವನೊಬ್ಬ ಹುಡುಗನನ್ನೂ ಕೊಂಡು ತಂದಿದ್ದ. ಹರಿಶ್ಚಂದ್ರನ ಪುರುಷಮೇಧ ಮಹಾಯಜ್ಞ ಸಾಂಗವಾಗಿ ನೆರವೇರಿತು. ದೇವತೆಗಳೂ ಸಂತುಷ್ಟರಾದರು. ದೇವತೆಗಳಿಂದ ಉಂಟಾದ ಮಹೋದರ ರೋಗವೂ ಗುಣವಾಯಿತು. ಯಾಗದಿಂದ ಸುಪ್ರಸನ್ನನಾದ ದೇವೇಂದ್ರ ಒಂದು ಚಿನ್ನದ ತೇರನ್ನು ಹರಿಶ್ಚಂದ್ರನಿಗೆ ಉಡುಗೊರೆಯಾಗಿ ನೀಡಿದ.
ವಿಶ್ವಾಮಿತ್ರಾದಿ ಋಷಿಗಳೆಲ್ಲರಿಗೂ ಹರಿಶ್ಚಂದ್ರನ ಸತ್ಯಪರತೆ, ತಾಳ್ಮೆ, ಸಾರಗ್ರಹಣ ಚೆನ್ನಾಗಿ ತಿಳಿಯಿತು. ಹರಿಶ್ಚಂದ್ರನಿಗೆ ಅಪಾರ ಜ್ಞಾನವನ್ನು ಕರುಣಿಸಲಾಯಿತು.
ಸೂತ ಮುನಿಗಳು ಹೇಳಿದರು –
`ಹರಿಶ್ಚಂದ್ರ ಮಹಾರಾಜನ ಮನಸ್ಸು ಐಹಿಕ ಅನುಭೋಗದಿಂದ ತುಂಬಿತು; ಅದನ್ನು ಪೃಥ್ವಿಯಲ್ಲಿ ಲೀನಗೊಳಿಸಿ ಮೊದಲು ಶುಚಿ ಮಾಡಿದನು. ಅನಂತರ ಪೃಥ್ವಿಯನ್ನು ಜಲದಲ್ಲೂ, ಜಲವನ್ನು, ತೇಜಸ್ಸಿನಲ್ಲೂ, ತೇಜಸ್ಸನ್ನು ವಾಯುವಿನಲ್ಲೂ, ವಾಯುವನ್ನು ಆಕಾಶದಲ್ಲೂ ಲೀನಗೊಳಿಸಿದನು. ಆ ಬಳಿಕ ಆಕಾಶವನ್ನು ಮಹತ್ ತತ್ವದಲ್ಲೂ, ಮಹತ್-ತತ್ವವನ್ನು ಆಧ್ಯಾತ್ಮಿಕ ಜ್ಞಾನದಲ್ಲೂ ಲೀನಗೊಳಿಸಿದನು. ತಾನು ದೇವೋತ್ತಮ ಪರಮ ಪುರುಷನಾದ ಕೃಷ್ಣನ ಅಂಶವೆಂದು ಸಾಕ್ಷಾತ್ಕಾರ ಪಡೆದುಕೊಳ್ಳುವುದೇ ಈ ಆಧ್ಯಾತ್ಮಿಕ ಜ್ಞಾನ. ಆತ್ಮ ಸಾಕ್ಷಾತ್ಕಾರ ಪಡೆದ ಆಧ್ಯಾತ್ಮಿಕ ಚೇತನನು ಭಗವಂತನ ಸೇವೆಯಲ್ಲಿ ನಿರತನಾದಾಗ, ಶಾಶ್ವತವಾಗಿ ಅಗ್ರಾಹ್ಯನೂ, ಅಂಚಿತ್ಯನೂ ಆಗುತ್ತಾನೆ. ಹೀಗೆ ಆಧ್ಯಾತ್ಮಿಕ ಜ್ಞಾನದಲ್ಲಿ ನೆಲೆಸಿ, ಆತನು ಐಹಿಕ ಬಂಧನದಿಂದ ಸಂಪೂರ್ಣವಾಗಿ ಮುಕ್ತನಾಗುತ್ತಾನೆ.
ವ್ಯಾಸದರ್ಶನವೇ ತಮಗಾದಂತೆ ನೈಮಿಷಾರಣ್ಯದ ಮುನಿಗಳೆಲ್ಲ ಭಕ್ತಿ-ಗೌರವಗಳಿಂದ ಸೂತ ಮುನಿಗಳನ್ನು ನೋಡುತ್ತ ಕುಳಿತರು.