ಭಗವಂತನ ಅವತಾರಗಳಲ್ಲಿ ಶ್ರೀ ನರಸಿಂಹ ಅವತಾರ ಮಹತ್ವವಾದುದು. ಮಹಾನ್ ಭಕ್ತ ಪ್ರಹ್ಲಾದ ಮಹಾರಾಜನನ್ನು ರಕ್ಷಿಸಲು ದೇವೋತ್ತಮ ಪರಮ ಪುರುಷನು ಅರೆ ಮಾನವ ಮತ್ತು ಅರೆ ಸಿಂಹದ ರೂಪದಲ್ಲಿ ಅವತರಿಸಿ ಅಸುರ ಹಿರಣ್ಯಕಶಿಪುವನ್ನು ಸಂಹರಿಸಿದನು.
ವಿಷ್ಣು-ಭಕ್ತನಾಗಿದ್ದ ಪ್ರಹ್ಲಾದ ಮಹಾರಾಜನನ್ನು ಅವನ ತಂದೆ, ಅಸುರ ರಾಜ ಹಿರಣ್ಯಕಶಿಪು ನಾನಾ ವಿಧವಾಗಿ ಹಿಂಸಿಸಿದನು. ಆದರೆ ಭಗವಂತನಿಂದ ರಕ್ಷಿತನಾದ ಪ್ರಹ್ಲಾದನಿಗೆ ಅದರಿಂದ ಏನೂ ತೊಂದರೆಯಾಗಲಿಲ್ಲ. ಆದರೂ ಹಿರಣ್ಯಕಶಿಪು ಪಟ್ಟು ಬಿಡಲಿಲ್ಲ. ಮಗನನ್ನೇ ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡಿದನು. ಅದುವೇ ಶ್ರೀ ನರಸಿಂಹ ಅವತಾರಕ್ಕೆ ಕಾರಣವಾಯಿತು. ತನ್ನ ಮಹಾನ್ ಭಕ್ತ ಪ್ರಹ್ಲಾದನನ್ನು ಅವನ ತಂದೆಯಿಂದಲೇ ರಕ್ಷಿಸಲು ಆವಿರ್ಭವಿಸಿದ ದೇವೋತ್ತಮ ಪರಮ ಪುರುಷನು ಭಕ್ತವತ್ಸಲನಾದನು.

ಹಿರಣ್ಯಕಶಿಪುವಿಗೂ ಅವನ ಪ್ರೀತಿಯ ಮಗನಿಗೂ ಅಂತಹ ವಿದ್ವೇಷ ಏಕೆ ಇತ್ತು ಮತ್ತು ಪ್ರಹ್ಲಾದನು ಅಂತಹ ಮಹಾನ್ ಭಕ್ತ ಹೇಗಾದನು?
ಇದಕ್ಕಾಗಿ ಒಂದಷ್ಟು ಹಿನ್ನೆಲೆ ನೋಡೋಣ. ಇದರಿಂದ ಹಿರಣ್ಯಕಶಿಪು ವಿಷ್ಣುವನ್ನು ದ್ವೇಷಿಸಿದ ಕಾರಣವೂ ತಿಳಿಯುತ್ತದೆ.
ಋಷಿಗಳಿಂದ ಶಪಿತರಾದ ಜಯ, ವಿಜಯರು ಭೌತಿಕ ಪ್ರಪಂಚಕ್ಕೆ ಬೀಳುತ್ತಿದ್ದಾಗ ಅವರ ಮೇಲೆ ಕೃಪೆ ತೋರಿ ಮುನಿಗಳು ಹೇಳಿದರು, “ಮೂರು ಜನ್ಮಗಳ ಅನಂತರ ನೀವು ವೈಕುಂಠ ಲೋಕದಲ್ಲಿ ನಿಮ್ಮ ಸ್ಥಾನಗಳಿಗೆ ಹಿಂದಿರುಗಲು ಅರ್ಹರಾಗುವಿರಿ. ಅಷ್ಟರೊಳಗೆ ಶಾಪದ ಅವಧಿ ಮುಗಿದಿರುವುದು.”
ಅದರಂತೆ ಅವರು ದಿತಿಯ ಮಕ್ಕಳಾಗಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುವಾಗಿ ಹುಟ್ಟಿದರು. ದೇವೋತ್ತಮ ಪರಮ ಪುರುಷನು ನೃಸಿಂಹನಾಗಿ ಅವತರಿಸಿ ಹಿರಣ್ಯಕಶಿಪುವನ್ನು ಸಂಹರಿಸಿದನು. ಗರ್ಭೋಧಕ ಸಾಗರದಲ್ಲಿ ಬಿದ್ದಿದ್ದ ಭೂಮಿಯನ್ನು ಭಗವಂತನು ಉದ್ಧರಿಸುವಾಗ ತಡೆ ಒಡ್ಡಿದ ಹಿರಣ್ಯಾಕ್ಷನನ್ನು ಪ್ರಭುವು ವರಾಹ ರೂಪದಲ್ಲಿ ಸಂಹರಿಸಿದನು.
ದಾನವರ ದೊರೆ ಹಿರಣ್ಯಕಶಿಪು
ಹಿರಣ್ಯಾಕ್ಷನ ಸಂಹಾರವಾದ ಮೇಲೆ ಅವನ ಅಣ್ಣ ಹಿರಣ್ಯಕಶಿಪು ತುಂಬಾ ದುಃಖಿತನಾದನು. ಅನಂತರ ಕೋಪೋದ್ರಿಕ್ತನಾದನು. ಅವನು ಜನರ ಧಾರ್ಮಿಕ ಚಟುವಟಿಕೆಗಳನ್ನು ಅಡಗಿಸಲು ಪ್ರಯತ್ನಿಸಿದನು. ಪಾಪಿಷ್ಟನಾಗಿ ವರ್ತಿಸಿದನು. ತನ್ನ ತಮ್ಮನನ್ನು ಕೊಲ್ಲಲು ಭಗವಂತನು ವರಾಹಾವತಾರ ತಾಳಿದನೆಂದು ಅಪಹಾಸ್ಯ ಮಾಡಿದನು. ಅವನು ಎಲ್ಲ ದೈತ್ಯದಾನವರನ್ನು ಕೆರಳಿಸಿದನು. ಶಾಂತರಾದ ಋಷಿಗಳ ಹಾಗೂ ಭೂಮಂಡಲದ ಇತರ ಜನರ ಧಾರ್ಮಿಕ ವ್ರತಾಚರಣೆಗಳೆಲ್ಲವನ್ನೂ ಹಾಳುಗೆಡವಲಾರಂಭಿಸಿದನು. ಯಜ್ಞಾದಿಗಳ ಆಚರಣೆಗೆ ಭಾರಿ ಅಡ್ಡಿಯಾಯಿತು. ಇದರಿಂದ ಆತಂಕಗೊಂಡ ಮುನಿವರೇಣ್ಯರು ಯಜ್ಞಗಳನ್ನು ಮಾಡಲಾಗದೆ ಪರಿತಪಿಸಿದರು.

ಇತ್ತ ಹಿರಣ್ಯಕಶಿಪು, ವಿಷ್ಣುವನ್ನು ಸಂಹರಿಸಿ ಅವನ ರಕ್ತದಿಂದ ಹಿರಣ್ಯಾಕ್ಷನನ್ನು ತೃಪ್ತಿಪಡಿಸುವುದಾಗಿ ಹೇಳುತ್ತಾನೆ. ಚತುರನಾದ ವಿಷ್ಣುವನ್ನು ಕೊಂದುಬಿಟ್ಟರೆ, ವಿಷ್ಣುವೇ ಪ್ರಾಣವಾಗಿರುವ ದೇವತೆಗಳು ತಮ್ಮ ಜೀವನದ ಮೂಲವನ್ನೇ ಕಳೆದುಕೊಂಡು ಒಣಗಿಹೋಗುತ್ತಾರೆ ಎಂದು ಅವನು ಇತರ ಅಸುರರಿಗೆ ಹೇಳುತ್ತಾನೆ. “ನಾನು ವಿಷ್ಣುವನ್ನು ಕೊಲ್ಲುತ್ತಿರುವಾಗ, ನೀವು ಬ್ರಾಹ್ಮಣರಿಂದಲೂ ಕ್ಷತ್ರಿಯರಿಂದಲೂ ಅಭಿವೃದ್ಧಿ ಹೊಂದುತ್ತಿರುವ ಭೂಲೋಕಕ್ಕೆ ಹೋಗಿ. ಅಲ್ಲಿ ಜನರು ತಪಸ್ಸು, ಯಜ್ಞ, ವೇದಾಧ್ಯಯನ, ವ್ರತ, ದಾನ ಧರ್ಮಗಳಲ್ಲಿ ತೊಡಗಿದ್ದಾರೆ. ಇವುಗಳಲ್ಲಿ ನಿರತರಾಗಿರುವ ಎಲ್ಲರನ್ನೂ ಕೊಂದು ಹಾಕಿ” ಎಂದು ಸೂಚಿಸುತ್ತಾನೆ.
ಬ್ರಾಹ್ಮಣರನ್ನು ಕೊಂದುಬಿಟ್ಟರೆ, ಯಜ್ಞಗಳನ್ನು ಮಾಡುವಂತೆ ಕ್ಷತ್ರಿಯರನ್ನು ಪ್ರೋತ್ಸಾಹಿಸುವವರು ಯಾರೂ ಇರುವುದಿಲ್ಲ. ಆಗ ದೇವತೆಗಳು ಯಜ್ಞಯಾಗಾದಿಗಳ ಹವಿಸ್ಸಿಲ್ಲದೆ ತೊಂದರೆಗೆ ಒಳಗಾಗುತ್ತಾರೆ. ಇದು ಹಿರಣ್ಯಕಶಿಪುವಿನ ಲೆಕ್ಕಾಚಾರ. ಅವನ ಮುಖ್ಯ ಉದ್ದೇಶ ದೇವತೆಗಳಿಗೆ ಕಿರುಕುಳ ಕೊಡುವುದು. ಆದುದರಿಂದ ಮೊದಲು ಭಗವಾನ್ ವಿಷ್ಣುವನ್ನು ಕೊಲ್ಲಲು ಯೋಜಿಸಿದನು. ವಿಷ್ಣುವು ಇಲ್ಲವಾದರೆ ದೇವತೆಗಳು ಶಕ್ತಿಹೀನರಾಗಿ ತಾವಾಗಿಯೇ ಸಾಯುತ್ತಾರೆ. ಇದು ಅವನ ಯೋಜನೆ. ಅವನ ಇನ್ನೊಂದು ಯೋಜನೆಯೆಂದರೆ, ಭೂಲೋಕದ ನಿವಾಸಿಗಳಿಗೆ ಕಿರುಕುಳ ನೀಡುವುದು ಅಥವಾ ಕೊಲ್ಲಿಸುವುದು, ಗೋವುಗಳನ್ನು ಕೊಲ್ಲುವುದು. ಅದರಿಂದ ಯಜ್ಞಯಾಗಾದಿಗಳು ನಿಂತು ಹೋಗುತ್ತವೆ ಎನ್ನುವುದು ಅವನ ರಾಕ್ಷಸೀ ಯೋಜನೆಗಳು.
ವಿನಾಶಾಕಾರಿ ಚಟುವಟಿಕೆಗಳ ಪ್ರಿಯರಾದ ರಾಕ್ಷಸರು ಹಿರಣ್ಯಕಶಿಪುವಿನ ಯೋಜನೆಗಳನ್ನು ಸಾಕಾರಗೊಳಿಸಲು ಯತ್ನಿಸಿದರು. ಅದರಂತೆ ಅವರು ಸಕಲ ಜೀವಿಗಳ ವಿರುದ್ಧ ದ್ವೇಷಪೂರ್ಣ ಕೃತ್ಯಗಳಲ್ಲಿ ತೊಡಗಿದರು. ಅವರು ಪಟ್ಟಣಗಳಿಗೆ, ಹಳ್ಳಿಗಳಿಗೆ, ಗೋಮಾಳಗಳಿಗೆ ಬೆಂಕಿಯಿಟ್ಟರು. ಋಷಿಗಳ ಆಶ್ರಮವನ್ನೂ ಸುಟ್ಟರು. ಒಟ್ಟಿನಲ್ಲಿ ಎಲ್ಲೆಲ್ಲೂ ವಿಧ್ವಂಸಕ ಕೃತ್ಯ.
ಇದರಿಂದ ಜನರಿಗೆ ಉಪಟಳ ಹೆಚ್ಚಾಗಿ ಅವರು ವೈದಿಕ ಸಂಸ್ಕೃತಿಯ ಕಾರ್ಯಗಳನ್ನು ನಿಲ್ಲಿಸಬೇಕಾಯಿತು. ಇದರಿಂದ ದೇವತೆಗಳು ಸಹಜವಾಗಿ ಯಜ್ಞಫಲವಿಹೀನರಾದರು. ಆಗ ಅವರಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಕಷ್ಟವಾಯಿತು.
ಪರಿಸ್ಥಿತಿಯನ್ನು ಹೀಗೆ ತಲ್ಲಣಗೊಳಿಸಿ ಹಿರಣ್ಯಕಶಿಪು ಉಗ್ರ ತಪಸ್ಸು ಮಾಡಲು ಹೋದನು. ಜಗತ್ತನ್ನು ಇನ್ನಷ್ಟು ಆತಂಕಕ್ಕೆ ಗುರಿ ಮಾಡಿದನು ಮತ್ತು ಬ್ರಹ್ಮನಿಂದ ವರವನ್ನೂ ಪಡೆದುಕೊಂಡನು. ಏನದು?

ಹಿರಣ್ಯಕಶಿಪು ಅಮರನಾಗಿರಲು ಬಯಸಿದನು. ಜಗತ್ತಿನ ಏಕಾಧಿಪತಿಯಾಗಬೇಕೆಂದು ಅಪೇಕ್ಷಿಸಿದನು. ಅದಕ್ಕಾಗಿ ಉಗ್ರ ತಪಸ್ಸು ಕೈಗೊಂಡನು. ಆಗ ಅವನಿಂದ ಎದ್ದ ತಪೋಜ್ವಾಲೆಯು ಎಲ್ಲಕಡೆ ಸುತ್ತುವರಿದಾಗ ಎಲ್ಲರೂ ಗಾಬರಿಗೊಂಡರು. ದೇವತೆಗಳು ಬ್ರಹ್ಮನ ಮೊರೆಹೊಕ್ಕರು. ಬ್ರಹ್ಮನು ಹಿರಣ್ಯಕಶಿಪುವನ್ನು ನೋಡಲು ಹೋದನು. ಬ್ರಹ್ಮನು ಅವನಿಗೆ ವರವನ್ನು ಕೊಡುವುದಾಗಿ ಒಪ್ಪಿಕೊಂಡ ಮೇಲೆ ಅವನು ತಪಸ್ಸಿನ ಉದ್ದೇಶ ಹೇಳಿದನು. ಯಾವುದೇ ಸ್ಥಳದಲ್ಲಾಗಲೀ, ಮನೆಯ ಒಳಗಾಗಲಿ, ಹೊರಗಾಗಲಿ, ಹಗಲಿನಲ್ಲಾಗಲಿ, ರಾತ್ರಿಯಲ್ಲಾಗಲಿ ಅಸ್ತ್ರದಿಂದಾಗಲಿ, ಭೂಮಿಯ ಮೇಲಾಗಲಿ, ಆಕಾಶದಲ್ಲಾಗಲಿ, ಮನುಷ್ಯರಿಂದಾಗಲಿ, ಪ್ರಾಣಗಳಿಂದಾಗಲಿ, ದೇವತೆಯಿಂದಾಗಲಿ, ಸಾವು ಉಂಟಾಗದಂತೆ ಅನುಗ್ರಹಿಸಬೇಕೆಂದು ಅವನು ಕೋರಿದನು. ಅವನು ಕೇಳಿದ ವರಗಳನ್ನು ಬ್ರಹ್ಮನು ಅನುಗ್ರಹಿಸಿದನು. ಸಂತೃಪ್ತನಾದ ಹಿರಣ್ಯಕಶಿಪು ವಿಷ್ಣುವನ್ನು ದ್ವೇಷಿಸುವುದನ್ನು ಮಾತ್ರ ಮುಂದುವರಿಸುತ್ತಾನೆ.
ಹಿರಣ್ಯಕಶಿಪು ವಿಶ್ವವನ್ನು ಜಯಿಸಿದನು. ಅಷ್ಟೇ ಏಕೆ, ಮೇಲಿನ, ಮಧ್ಯದ ಮತ್ತು ಕೆಳಗಿನ ಲೋಕಗಳನ್ನೂ ಗೆದ್ದನು. ಹೀಗೆ ಅಲ್ಲಲ್ಲಿನ ಅಧಿಕಾರ ಸ್ಥಾನವನ್ನು ತನ್ನ ವಶಕ್ಕೆ ತೆಗೆದುಕೊಂಡನು.
ಭಕ್ತ ಪ್ರಹ್ಲಾದ
ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದ. ಅವನು ವಿಷ್ಣುವಿನ ಪರಮ ಭಕ್ತ. ಎಲ್ಲ ಸದ್ಗುಣಗಳು ಅವನಲ್ಲಿ ನೆಲೆಸಿದ್ದವು. ಕೃಷ್ಣಪ್ರಜ್ಞೆಯಲ್ಲಿ ತನ್ಮಯರಾಗಿರುವ ಮಹಾಭಕ್ತರಿಗೆ ಜ್ವಲಂತ ಉದಾಹರಣೆ ಪ್ರಹ್ಲಾದ.

ಹಿರಣ್ಯಕಶಿಪುವಿನ ಗುರುಗಳಾದ ಶುಕ್ರಾಚಾರ್ಯರ ಪುತ್ರರ ಬಳಿ ಪ್ರಹ್ಲಾದನನ್ನು ವಿಧ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು. ರಾಜಕೀಯ, ಅರ್ಥಶಾಸ್ತ್ರ, ಮತ್ತಿತರ ಭೌತಿಕ ವಿದ್ಯೆಗಳಲ್ಲಿ ಬಾಲಕ ಪ್ರಹ್ಲಾದನನ್ನು ಶಿಕ್ಷಿತನನ್ನಾಗಿ ಮಾಡಲು ಅವರು ಎಷ್ಟೇ ಪ್ರಯತ್ನಿಸಿದರೂ ಅವನ ಆಧ್ಯಾತ್ಮಿಕ ಮನಸ್ಸು ಕಿಂಚಿತ್ತೂ ಬದಲಾಗಲಿಲ್ಲ.
ಹಿರಣ್ಯಕಶಿಪು ಪ್ರೀತಿಯಿಂದ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಶಿಕ್ಷಕರಿಂದ ಕಲಿತ ಅತ್ಯುತ್ತಮವಾದುದು ಯಾವುದು ಎಂದು ಕೇಳಿದನು. ಆಗ ಪ್ರಹ್ಲಾದನು ಭಕ್ತಿಸೇವೆಯ ವಿವಿಧ ವಿಧಾನಗಳನ್ನು ವಿವರಿಸುತ್ತಾನೆ! ಇದರಿಂದ ಸಿಟ್ಟಾದ ಹಿರಣ್ಯಕಶಿಪು ಮಗನನ್ನು ಕೆಳಗೆ ತಳ್ಳಿದನು. ತನ್ನ ಚಿಕ್ಕಪ್ಪ ಹಿರಣ್ಯಾಕ್ಷನನ್ನು ಕೊಂದ ವಿಷ್ಣುವಿನ ಭಕ್ತನಾಗಿ ಪ್ರಹ್ಲಾದನು ದ್ರೋಹಿ ಎಂದು ಅವನಿಗನ್ನಿಸಿತು. ಅವನನ್ನು ಕೊಲ್ಲುವಂತೆ ಸೇವಕರಿಗೆ ಆದೇಶವಿತ್ತನು. ನಾನಾ ವಿಧಗಳಲ್ಲಿ ಪ್ರಯತ್ನಿಸಿದರೂ ಅವನನ್ನು ಕೊಲ್ಲಲು ಸಾಧ್ಯವಾಗಲಿಲ್ಲ.
ಪ್ರಹ್ಲಾದನು ತನ್ನ ಶತ್ರುವಾದ ವಿಷ್ಣುವಿನ ಗುಣಗಾನ ಮಾಡುವುದನ್ನು ಹಿರಣ್ಯಕಶಿಪು ಸಹಿಸಲಿಲ್ಲ. ಕುಪಿತನಾದನು. ತನ್ನ ಮಗನ ಮನಸ್ಸನ್ನು ಯಾರೋ ಕೆಡಿಸುತ್ತಿದ್ದಾರೆಂದು ಭಾವಿಸಿದನು. ಭಕ್ತಿಸೇವೆಯಲ್ಲಿ ತೊಡಗಿರುವುದರಿಂದ ಮತ್ತು ತನ್ನ ತಮ್ಮನನ್ನು ಕೊಂದ ವಿಷ್ಣುವಿನ ಪರ ಮಾತನಾಡುವುದರಿಂದ ಪ್ರಹ್ಲಾದನೂ ತನ್ನ ತಮ್ಮನ ಕೊಲೆಗಾರ ಎಂದು ಹಿರಣ್ಯಕಶಿಪು ಪರಿಗಣಿಸಿದನು. ಹೀಗಾಗಿ ಮಗನನ್ನು ಕೊಲ್ಲಿಸಲು ಮುಂದಾದನು. ಅವನು ಭಗವಂತನ ಭಕ್ತನಾಗಿದ್ದ ಎನ್ನುವ ಏಕಮಾತ್ರ ಕಾರಣದಿಂದ ತನ್ನ ಪುಟ್ಟ ಬಾಲಕನನ್ನು ಕೊಲ್ಲಿಸಲು ಪ್ರಯತ್ನಿಸಿದ.
ಭಕ್ತರಲ್ಲದವರ ಮನೋಭಾವವಿದು. ಅವನ ಸೇವಕರು ನಾನಾ ವಿಧದಲ್ಲಿ ಪ್ರಯತ್ನಿಸಿದರೂ ಭಕ್ತ ಪ್ರಹ್ಲಾದನ ಕೂದಲನ್ನೂ ಕೊಂಕಿಸಲಾಗಲಿಲ್ಲ. ಹಿರಣ್ಯಕಶಿಪುವಿಗೆ ಆತಂಕವಾಯಿತು.
ಶಾಲೆಯಲ್ಲಿ ಅಧ್ಯಾಪಕರಿಲ್ಲದ ವೇಳೆಯಲ್ಲಿ ಪ್ರಹ್ಲಾದನು ಅಸುರ ಪುತ್ರರಾಗಿದ್ದ ತನ್ನ ಸಹಪಾಠಿಗಳಲ್ಲಿ ಕೃಷ್ಣಪ್ರಜ್ಞೆಯನ್ನು ಬಿತ್ತಿದನು. ಆಧ್ಯಾತ್ಮಿಕದ ತಿಳಿವಳಿಕೆ ನೀಡಿದನು ಮತ್ತು ಅವರಿಗೆ ಭಕ್ತಿಸೇವೆಯ ಲಾಭವನ್ನು ವಿವರಿಸಿದನು. ಅವರು ಅದನ್ನು ಸ್ವೀಕರಿಸಿದರು.
ಗರ್ಭದಲ್ಲಿಯೇ ಭಕ್ತಿರಸ

ಅಷ್ಟು ಎಳೆಯ ವಯಸ್ಸಿನಲ್ಲಿಯೇ ಪ್ರಹ್ಲಾದನು ಭಗವತ್ ಭಕ್ತಿಯನ್ನು ಅರಿತದ್ದು ಹೇಗೆ? ಅವನು ಅದು ಹೇಗೆ ಪರಮ ಭಕ್ತನಾದನು? ಸಹಪಾಠಿಗಳ ಪ್ರಶ್ನೆಗೆ ಪ್ರಹ್ಲಾದ ಉತ್ತರಿಸುತ್ತಾನೆ. ತಾಯಿಯ ಗರ್ಭದಲ್ಲಿ ಕಲಿತದ್ದನ್ನು ಹೇಳುತ್ತಾನೆ. ಹಿರಣ್ಯಕಶಿಪು ಉಗ್ರ ತಪಸ್ಸಿಗೆ ಹೋದಾಗ ಅವನ ಪತ್ನಿ ಕಯಾಧು ಗರ್ಭಿಣಿ. ಅವಳು ಇನ್ನೊಬ್ಬ ಅಸುರನಿಗೆ ಜನ್ಮ ನೀಡಬಹುದೆಂದು ದೇವತೆಗಳು ಅವಳನ್ನು ಸೆರೆಹಿಡಿದರು ಮತ್ತು ಮಗು ಹುಟ್ಟಿದೊಡನೆ ಕೊಲ್ಲಬೇಕೆಂದು ನಿರ್ಧರಿಸಿದರು. ಆದರೆ ನಾರದ ಮುನಿ ಅವರನ್ನು ತಡೆದು ಕಯಾಧುವನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋದರು. ಅವಳು ಮಗುವಿನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದಳು. ನಾರದರು ಅವಳಿಗೆ ಧರ್ಮೋಪದೇಶ ಮಾಡಿದರು. ಪ್ರಹ್ಲಾದನು ಗರ್ಭದಲ್ಲಿದ್ದರೂ ಈ ಧರ್ಮೋಪದೇಶವನ್ನು ಕೇಳಿಸಿಕೊಂಡನು.
ನರಸಿಂಹ ಪ್ರತ್ಯಕ್ಷ, ಅಸುರ ರಾಜನ ಸಂಹಾರ

ಪ್ರಹ್ಲಾದನ ಸಹಪಾಠಿಗಳೂ ಅಸುರ ಪುತ್ರರೇ. ಈಗ ಅವರೂ ಪ್ರಹ್ಲಾದನ ಬೋಧನೆಯಿಂದ ಪರಿವರ್ತಿತರಾಗಿ ವಿಷ್ಣುಭಕ್ತರಾಗಿದ್ದಾರೆ. ಇದನ್ನು ಕಂಡ ಅವರ ಗುರುಗಳು ಹೆದರಿದರು ಮತ್ತು ಹಿರಣ್ಯಕಶಿಪುವಿನ ಬಳಿಗೆ ಹೋಗಿ ಪ್ರಹ್ಲಾದನ ಬಗೆಗೆ ವಿವರವಾಗಿ ತಿಳಿಸಿದರು. ಅವನು ಪ್ರಹ್ಲಾದನನ್ನು ಕೊಲ್ಲಲು ತೀರ್ಮಾನಿಸಿದನು. ಆದರೆ ಪ್ರಹ್ಲಾದನು ಹಿರಣ್ಯಕಶಿಪು ದೇವರಲ್ಲ, ಭಗವಂತನು ಸರ್ವವ್ಯಾಪಿ, ಅವನಿಗೆ ಸರಿಸಮಾನರಾಗಲಿ ಅವನಿಗಿಂತ ಶ್ರೇಷ್ಠರಾಗಲಿ ಯಾರೂ ಇಲ್ಲ ಎಂದು ದೇವೋತ್ತಮ ಪರಮ ಪುರುಷನ ಗುಣಗಾನ ಮಾಡಲಾರಂಭಿಸಿದನು. ಆದುದರಿಂದ ಸರ್ವಶಕ್ತನಾದ ಪರಮ ಪ್ರಭುವಿಗೆ ಶರಣಾಗಬೇಕೆಂದು ತನ್ನ ತಂದೆಯನ್ನು ಕೋರಿದನು. ಪ್ರಹ್ಲಾದನು ಭಗವಂತನನ್ನು ಎಷ್ಟೆಷ್ಟು ಕೊಂಡಾಡಿದನೋ ಅಷ್ಟಷ್ಟು ಹಿರಣ್ಯಕಶಿಪು ಕೆರಳಿದನು. “ನಿನ್ನ ದೇವರು ಅರಮನೆಯ ಈ ಕಂಭದಲ್ಲಿ ಇದ್ದಾನೆಯೇ?” ಎಂದು ಕೇಳಿದನು. ಭಗವಂತನು ಎಲ್ಲೆಲ್ಲೂ ಇರುವುದರಿಂದ ಈ ಕಂಭದಲ್ಲಿಯೂ ಇದ್ದಾನೆ ಎಂದು ಪ್ರಹ್ಲಾದನು ಹೇಳಿದನು.
ಕಂಭದಿಂದ ಬಂದ ನೃಸಿಂಹ

ಎಳೆಯ ವಯಸ್ಸಿನ ಮಗನ ಬಾಲಿಶ ಮಾತು ಎಂದು ಹಿರಣ್ಯಕಶಿಪು ತಿರಸ್ಕಾರ ತೋರಿ ತನ್ನ ಮುಷ್ಟಿಯಿಂದ ಕಂಭವನ್ನು ಗುದ್ದಿದನು. ಆ ಕೂಡಲೇ ಭಾರೀ ಶಬ್ದ ಉಂಟಾಯಿತು. ಮೊದಲು ಹಿರಣ್ಯಕಶಿಪುವಿಗೆ ಏನೂ ಕಾಣಲಿಲ್ಲ. ಆದರೆ ಅನಂತರ ಪ್ರಹ್ಲಾದನ ಮಾತನ್ನು ಪುಷ್ಟೀಕರಿಸಲು ವಿಷ್ಣುವು ನರಸಿಂಹ ರೂಪದಲ್ಲಿ ಆವಿರ್ಭವಿಸಿದನು. ಅರ್ಧ ಮನುಷ್ಯ ಮತ್ತು ಅರ್ಧ ಸಿಂಹದ ಆಕಾರದ ಭಗವಂತನ ರೂಪವನ್ನು ಕಂಡು ತನ್ನ ಸಾವಿಗಾಗಿ ಬಂದಿರುವುದೆಂದು ಅರಿತುಕೊಂಡನು. ಅವನು ಕೂಡಲೇ ಈ ಅರೆ ಮಾನವ ಮತ್ತು ಅರೆ ಸಿಂಹದ ಆಕಾರದೊಂದಿಗೆ ಕಾದಾಡಲು ಮುಂದಾದನು. ಕೆಲಕಾಲ ಭಗವಂತನು ಆ ಅಸುರನೊಡನೆ ಕಾದಾಡುತ್ತಾ ತನ್ನ ಲೀಲೆಗಳನ್ನು ತೋರಿಸಿದನು. ಅನಂತರ ಮುಸ್ಸಂಜೆಯಲ್ಲಿ ರಾಕ್ಷಸ ರಾಜನನ್ನು ಬಲವಾಗಿ ಹಿಡಿದು ತನ್ನ ತೊಡೆಯ ಮೇಲೆ ಎಳೆದುಕೊಂಡನು. ತನ್ನ ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿ ಕೊಂದು ಹಾಕಿದನು. ಹಿರಣ್ಯಕಶಿಪುವಿನ ಅನುಯಾಯಿಗಳನ್ನೂ ಕೊಂದ ಭಗವಂತನು ಕೋಪದಿಂದ ಗರ್ಜಿಸುತ್ತಾ ಹಿರಣ್ಯಕಶಿಪುವಿನ ಸಿಂಹಾಸನದ ಮೇಲೆ ಕುಳಿತನು. ಹೀಗೆ ಇಡೀ ಜಗತ್ತು ಹಿರಣ್ಯಕಶಿಪುವಿನ ಆಳ್ವಿಕೆಯಿಂದ ಮುಕ್ತವಾಯಿತು. ಎಲ್ಲರೂ ಆನಂದತುಂದಿಲರಾದರು. ಬ್ರಹ್ಮನ ನಾಯಕತ್ವದಲ್ಲಿ ದೇವತೆಗಳೆಲ್ಲರೂ ಅಲ್ಲಿಗೆ ಬಂದರು. ಅವರಲ್ಲಿ ಮಹಾಮುನಿಗಳು, ಪಿತೃಗಳು, ವಿದ್ಯಾಧರರು, ನಾಗರು, ಪ್ರಜಾಪತಿಗಳು, ಗಂಧರ್ವರು, ಯಕ್ಷರು, ಕಿನ್ನರರು ಮತ್ತಿತರರು ಇದ್ದರು. ಅವರೆಲ್ಲರೂ ಭಗವಾನ್ ನೃಸಿಂಹನಿಗೆ ಪ್ರಾರ್ಥನೆ ಸಲ್ಲಿಸಿದರು. ಭಗವಂತನು ಅವರನ್ನು ಅನುಗ್ರಹಿಸಿದನು.

ಆದರೆ ನರಸಿಂಹನ ಕೋಪ ಶಮನವಾಗಿರಲಿಲ್ಲ. ಕೋಪಗೊಂಡ ಭಗವಂತನನ್ನು ಶಾಂತವಾಗಿಸುವುದು ಬ್ರಹ್ಮ, ದೇವತೆಗಳು ಅಥವಾ ಮಹಾಲಕ್ಷ್ಮಿಗೂ ಕಷ್ಟವಾಗಿತ್ತು. ಆಗ ಬ್ರಹ್ಮನು ಪ್ರಹ್ಲಾದನಿಗೆ ಶ್ರೀ ನರಸಿಂಹನ ಕೋಪವನ್ನು ಶಮನ ಮಾಡುವಂತೆ ಹೇಳಿದನು. ಪ್ರಹ್ಲಾದನು ಭಗವಾನ್ ನರಸಿಂಹನ ಮುಂದೆ ಅಂಜಲೀಬದ್ಧನಾಗಿ ನಿಂತು ದೀರ್ಘವಾಗಿ ಸ್ತುತಿಸುತ್ತಾನೆ.






Leave a Reply