ಸಂಭ್ರಮಕ್ಕೊಂದು ಕಾರಣ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
1972ರಲ್ಲಿ ಆಕ್ಲೆಂಡ್‌ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸ

ಕೃಷ್ಣಪ್ರಜ್ಞಾ ಆಂದೋಲನವು ಸಂಕೀರ್ತನಾ ಆಂದೋಲನ ಎಂದೂ ಪ್ರಸಿದ್ಧವಾಗಿದೆ. ಇದು ಹರೇಕೃಷ್ಣ ಮಂತ್ರದ ಸಂಕೀರ್ತನೆಯನ್ನು ಪ್ರಸಾರ ಮಾಡುವ ಆಂದೋಲನ. ಮೇಲುನೋಟಕ್ಕೆ ಈ ಸಂಕೀರ್ತನೆಯು ಕೆಲವು ಸಾಧಾರಣ ಶಬ್ದಗಳ ಪುನರಾವರ್ತನೆ ಎಂಬಂತೆ ತೋರಬಹುದು. ಆದರೆ ಅದು ಹಾಗಲ್ಲ. ಅದರ ಪರಿಣಾಮವನ್ನು ಅನುಭವಿಸಲು ನಾವು ಅದನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡಬೇಕಷ್ಟೆ.

ಹರೇಕೃಷ್ಣ ಮಂತ್ರದ ಸಂಕೀರ್ತನೆಯ ಪರಿಣಾಮವನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಹೀಗೆ ಹೇಳಿದ್ದಾರೆ : ಚೇತೋದರ್ಪಣ ಮಾರ್ಜನಮ್‌. “ಅದು ನಿಮ್ಮ ಹೃದಯವನ್ನು ಸ್ವಚ್ಛಗೊಳಿಸುತ್ತದೆ.” ಹರೇಕೃಷ್ಣ ಮಂತ್ರವನ್ನು ನಾವು ಜಪಿಸುತ್ತಾ ಹೋದಂತೆ, ನಮ್ಮ ಹೃದಯದಲ್ಲಿ ಸಂಚಿತವಾಗಿರುವ ಕೊಳಕು ಕ್ರಮೇಣ ಸ್ವಚ್ಛಗೊಳ್ಳುತ್ತವೆ. ಇದು ಚೈತನ್ಯ ಮಹಾಪ್ರಭುಗಳು ನೀಡಿದ ಭರವಸೆ. ನಮ್ಮ ಹೃದಯಾಂತರಾಳದಲ್ಲಿರುವ ಅತ್ಯಂತ ಕೊಳಕಾದ ಭಾವನೆಯೆಂದರೆ ಈ ದೇಹವೇ ನಾವು ಎಂಬ ಗ್ರಹಿಕೆ. ವಾಸ್ತವದಲ್ಲಿ ಸಮಸ್ತ ಆಧುನಿಕ ಜಗತ್ತು ಈ ತಪ್ಪುಗ್ರಹಿಕೆಯಿಂದ ನರಳುತ್ತಿದೆ. ವ್ಯಕ್ತಿಯೊಬ್ಬನು ಈ ದೇಹಾತ್ಮ ಬುದ್ಧಿಯಲ್ಲಿ “ನಾನೇ ನನ್ನ ದೇಹ” ಎಂದು ಯೋಚಿಸುತ್ತಿದ್ದರೆ, ಆಗ ಅವನ ಜೀವನದ ಮೂಲಭೂತ ತತ್ತ್ವವೇ ತಪ್ಪಾಗಿರುತ್ತದೆ. ಆದ್ದರಿಂದ ದೈಹಿಕವಾಗಿ ನಮ್ಮನ್ನು ಗುರುತಿಸಿಕೊಳ್ಳುವುದೇ ನಮ್ಮ ಹೃದಯದಲ್ಲಿರುವ ಅತ್ಯಂತ ಕೊಳಕಾದ ಭಾವನೆ.

ಈಗ, ನಾವು ಈ ಹರೇಕೃಷ್ಣ ಮಂತ್ರವನ್ನು ಜಪಿಸಿದರೆ, ಕ್ರಮೇಣ “ನಾನು ನನ್ನ ದೇಹವನಲ್ಲ; ನಾನು ಒಂದು ಚೇತನಾತ್ಮ (ಅಹಂ ಬ್ರಹ್ಮಾಸ್ಮಿ)” ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ನಾವು ಈ ದೇಹವಲ್ಲ, ಬದಲಿಗೆ ನಾವೊಂದು ಚೇತನಾತ್ಮ ಎಂದು ಅರ್ಥಮಾಡಿಕೊಳ್ಳುವ ಹಂತಕ್ಕೆ ನಾವು ಬಂದರೆ ಅನಂತರ ಉಳಿದ ಸಂಗತಿಗಳು ಅನುಸರಿಸಿ ಬರುತ್ತವೆ.

ಭಗವದ್ಗೀತೆಯು ಹೇಳುವಂತೆ: ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ:

“ಒಬ್ಬ ವ್ಯಕ್ತಿಗೆ ಬ್ರಹ್ಮ ಸಾಕ್ಷಾತ್ಕಾರವಾದಾಗ, ತಾನು ಒಂದು ಚೇತನಾತ್ಮ ಎಂದು ಅವನು ಅರ್ಥಮಾಡಿಕೊಂಡಾಗ ಮೊಟ್ಟಮೊದಲನೆಯ ಪ್ರಯೋಜನವೆಂದರೆ ಎಲ್ಲ ಬಗೆಯ ಹಾತೊರೆತ ಮತ್ತು ವಿಲಾಪಗಳಿಂದ ಅವನು ಮುಕ್ತನಾಗುತ್ತಾನೆ.” ಈ ಐಹಿಕ ಪ್ರಪಂಚದಲ್ಲಿ ಎರಡು ಸಂಗತಿಗಳು ನಡೆಯುತ್ತಾ ಇವೆ: ಹಾತೊರೆತ ಮತ್ತು ವಿಲಾಪ. ನಮ್ಮಲ್ಲಿಲ್ಲದ ವಸ್ತುಗಳಿಗಾಗಿ ನಾವು ಹಾತೊರೆಯುತ್ತೇವೆ, ಮತ್ತು ನಮ್ಮಲ್ಲಿರುವ ವಸ್ತುಗಳನ್ನು ಹೇಗೋ ಕಳೆದುಕೊಂಡರೆ ಅದಕ್ಕೆ ವಿಲಾಪಿಸುತ್ತೇವೆ. ದಿಟದಲ್ಲಿ ಇಡೀ ಸನ್ನಿವೇಶವೇ ವಿಲಾಪದಿಂದ ಕೂಡಿದೆ, ಏಕೆಂದರೆ ನಾವು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇರುತ್ತೇವೆ. ಉದಾಹರಣೆಗೆ, ನಮ್ಮ ದೇಹವನ್ನೇ ತೆಗೆದುಕೊಳ್ಳಿ. ಯಾವುದೋ ಒಂದು ನಿಶ್ಚಿತ ದಿನಾಂಕದಂದು ಅದನ್ನು ನಾವು ನಮ್ಮ ತಂದೆ ತಾಯಿಗಳಿಂದ ಪಡೆದಿದ್ದೇವೆ. ಕ್ರಮೇಣ ನಾವು ಅದನ್ನು ಕಳೆದುಕೊಳ್ಳುತ್ತಿದ್ದೇವೆ. ನಿಮಗೆ ಇಪ್ಪತ್ತು ವರ್ಷ ವಯಸ್ಸಾಗಿದೆ ಎಂದಿಟ್ಟುಕೊಳ್ಳಿ. ಅಂದರೆ ನೀವು ಈಗಾಗಲೇ ನಿಮ್ಮ ಜೀವನದ ಇಪ್ಪತ್ತು ವರ್ಷಗಳನ್ನು ಕಳೆದುಕೊಂಡಿದ್ದೀರಿ. ನನಗೆ ಈಗ ಎಪ್ಪತ್ತಾರು ವರ್ಷ ವಯಸ್ಸು. ಅಂದರೆ ನಾನು ನನ್ನ ಜೀವನದ ಎಪ್ಪತ್ತಾರು ವರ್ಷಗಳನ್ನು ಕಳೆದುಕೊಂಡಿದ್ದೇನೆ.

ಹೀಗೆ, ನಮ್ಮ ಜೀವನದ ಅವಧಿಯು ಪರಿಮಿತವಾದದ್ದು. ಅದರ ಕೊನೆಯು ಆಗಲೇ ನಿಶ್ಚಿತವಾಗಿದೆ. ನಮ್ಮ ಹಿಂದಿನ ಕರ್ಮಗಳಿಗೆ ಅನುಗುಣವಾಗಿ ನಮಗೊಂದು ದೇಹ ದೊರೆತಿದೆ. ಅದರ ಜೀವಿತಾವಧಿಯು ಆಗಲೇ ನಿಶ್ಚಿತವಾಗಿದೆ. ನಮ್ಮ ಸಂತೋಷದ ಮತ್ತು ದುಃಖದ ಮಟ್ಟವೂ ಆಗಲೇ ನಿಶ್ಚಿತವಾಗಿದೆ. ನೀವು ಅದನ್ನು ಬದಲಾಯಿಸಲಾರಿರಿ. ನೀವೆಲ್ಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಜೀವನದ ಅವಧಿಯನ್ನು ಹೆಚ್ಚಿಸುವ ಅಥವಾ ಮೃತ್ಯುವನ್ನು ತಡೆಹಿಡಿಯುವ ಯಾವುದಾದರೂ ವಿಜ್ಞಾನವನ್ನು ಇಲ್ಲಿ
ಬೋಧಿಸಲಾಗುತ್ತಿದೆಯೆ? ಇಲ್ಲ. ಅದು ಸಾಧ್ಯವಿಲ್ಲ.

ಜನನ, ವೃದ್ಧಾಪ್ಯ, ವ್ಯಾಧಿ ಮತ್ತು ಮರಣ – ಇವು ಜೀವನದ ಪ್ರಮುಖ ಸಮಸ್ಯೆಗಳು. ಸಾಯಲು ಯಾರೂ ಇಷ್ಟಪಡುವುದಿಲ್ಲ. ಆದರೆ ಮರಣವು ನಿಶ್ಚಿತ. ನಾವು ಸಾಯಲೇಬೇಕು. ಹುಟ್ಟುವುದನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಜನನವೆನ್ನುವುದು ಇದ್ದೇ ಇದೆ. ಈಗ ಜನನವನ್ನು ತಡೆಗಟ್ಟಲು ಅನೇಕ ಗರ್ಭನಿರೋಧಕ ವಿಧಾನಗಳು ಇವೆ. ಆದರೆ ಜಗತ್ತಿನ ಜನಸಂಖ್ಯೆಯು ಇನ್ನೂ ಹೆಚ್ಚಾಗುತ್ತಲೇ ಇದೆ. ಯಾರೂ ವೃದ್ಧರಾಗಲು ಬಯಸುವುದಿಲ್ಲ. ಪ್ರತಿಯೊಬ್ಬರೂ ತರುಣರಾಗಿಯೇ ಮತ್ತು ನೂತನವಾಗಿಯೇ ಇರಲು ಬಯಸುತ್ತಾರೆ. ಆದರೆ ಪ್ರತಿಯೊಬ್ಬರ ಮೇಲೂ ವೃದ್ಧಾಪ್ಯ ಕವಿಯುತ್ತದೆ. ಅದೇ ರೀತಿಯಲ್ಲಿ ವ್ಯಾಧಿಯು ಅನಿವಾರ್ಯ. ವಿಜ್ಞಾನದ ತಿಳುವಳಿಕೆಯಲ್ಲಿ ಅನೇಕಾನೇಕ ಪ್ರಗತಿಗಳನ್ನು ಸಾಧಿಸಲಾಗಿದೆ. ಆದರೆ ವ್ಯಾಧಿಯನ್ನು ತಡೆಯುವ ಅಥವಾ ಮರಣವನ್ನು ತಡೆಯುವ ಯಾವ ವಿಜ್ಞಾನವೂ ಇಲ್ಲ.

ಆದ್ದರಿಂದ ಜನನ, ವೃದ್ಧಾಪ್ಯ, ವ್ಯಾಧಿ ಮತ್ತು ಮರಣ ನಮ್ಮ ನಿಜವಾದ ಸಮಸ್ಯೆಗಳಾಗಿವೆ. ಆದರೆ ಈ ಸಮಸ್ಯೆಗಳು ದೇಹಕ್ಕೆ ಸಂಬಂಧಪಟ್ಟವು. ಆತ್ಮವು ದೇಹಕ್ಕಿಂತ ವಿಭಿನ್ನವಾದದ್ದು. ನಾನು ಒಂದು ಆತ್ಮ. ನೀವು ಒಂದು ಆತ್ಮ. ಆದರೆ ಹೇಗೋ ನಾವು ಈ ಐಹಿಕ ದೇಹಗಳಲ್ಲಿ ಬಂಧಿತರಾಗಿದ್ದೇವೆ ಮತ್ತು ದೇಹದ ಬದಲಾವಣೆಗಳನ್ನು ಅನುಭವಿಸುತ್ತಿದ್ದೇವೆ. ನೀವು, ಎಂದರೆ ಆತ್ಮನು ಬದಲಾಗದೆ ಉಳಿದಿರುತ್ತ, ನಿಮ್ಮ ದೇಹವು ಬದಲಾಗುತ್ತಿದೆ ಎಂದು ನೀವೆಲ್ಲರೂ ಅರ್ಥಮಾಡಿಕೊಳ್ಳಬಲ್ಲಿರಿ. ಒಂದು ಕಾಲದಲ್ಲಿ ನಿಮಗೆ ಒಂದು ಕಂದನ ದೇಹವಿತ್ತು. ಅನಂತರ ನಿಮಗೆ ಒಂದು ಮಗುವಿನ ದೇಹ ಬಂದಿತು. ಈಗ ನಿಮಗೆ ಪ್ರಾಯಸಮರ್ಥವಾದ ದೇಹವಿದೆ. ಇಲ್ಲಿಂದ ಮುಂದೆ ಸ್ವಲ್ಪ ವರ್ಷಗಳ ಅನಂತರ ನಿಮಗೆ ನನ್ನ ದೇಹದಂತಹ, ಅಂದರೆ ವೃದ್ಧ ದೇಹ ಬರುತ್ತದೆ.

ಆದ್ದರಿಂದ ದೇಹ ಬದಲಾಗುತ್ತಿದೆ, ಆದರೆ ನಾನು, ಆತ್ಮ, ಒಂದೇ ರೀತಿಯಲ್ಲಿದ್ದೇನೆ. ಆದ್ದರಿಂದ ನಮ್ಮ ನಿಜವಾದ ಗುರುತು ಎಂದರೆ, ಬದಲಾಗುತ್ತಿರುವ ದೇಹಗಳಲ್ಲಿರುವ ಶಾಶ್ವತವಾದ ಆತ್ಮಗಳು. ಪ್ರಭು ಕೃಷ್ಣನು ಇದನ್ನು ಭಗವದ್ಗೀತೆಯಲ್ಲಿ ಹೀಗೆ ವಿವರಿಸುತ್ತಾನೆ (2.13):

ದೇಹಿನೋಽಸ್ಮಿನ್‌ ಯಥಾ ದೇಹೇ ಕೌಮಾರಂ ಯೌವನಂ ಜರಾ

ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ

ಭಗವದ್ಗೀತೆಯ ಈ ಶ್ಲೋಕದಲ್ಲಿ ಆತ್ಮವು ಹೇಗೆ ಒಂದು ದೇಹದಿಂದ ಇನ್ನೊಂದಕ್ಕೆ ದೇಹಾಂತರ ಮಾಡುತ್ತದೆ ಎಂದು ಕೃಷ್ಣನು ವಿವರಿಸುತ್ತಾನೆ. ನಾವು ಕೇವಲ ಈ ಒಂದು ಶ್ಲೋಕವನ್ನು ಅಧ್ಯಯನ ಮಾಡಿದರೆ, ನಮ್ಮ ಜೀವನವು ಬದಲಾಗುತ್ತದೆ. ಆತ್ಮವು ಶಾಶ್ವತವಾದದ್ದು ಮತ್ತು ಅದು ಒಂದು ಬಗೆಯ ದೇಹದಿಂದ ಇನ್ನೊಂದಕ್ಕೆ ದೇಹಾಂತರವನ್ನು ಮಾಡುತ್ತದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. 8,400,000 ಜೀವಜಾತಿಗಳು ಅಥವಾ ದೇಹಗಳ ಮಾದರಿಗಳು ಇವೆ. ಜನನ, ವೃದ್ಧಾಪ್ಯ, ವ್ಯಾಧಿ ಮತ್ತು ಮರಣದ ಚಕ್ರದಲ್ಲಿ ಬಂಧಿತರಾಗಿರುವ ನಾವು ಅನಾದಿಕಾಲದಿಂದಲೂ ಒಂದು ದೇಹದಿಂದ ಇನ್ನೊಂದಕ್ಕೆ ದೇಹಾಂತರವನ್ನು ಮಾಡುತ್ತಲೇ ಇದ್ದೇವೆ. ಇದೇ ನಮ್ಮ ನಿಜವಾದ ಸಮಸ್ಯೆ.

ಆದರೆ ವಿಶ್ವವಿದ್ಯಾನಿಲಯಗಳಲ್ಲಾಗಲಿ ಅಥವಾ ಇತರ ವಿದ್ಯಾಸಂಸ್ಥೆಗಳಲ್ಲಾಗಲಿ ದೇಹದೊಳಗೆ ಬಂಧಿತವಾಗಿರುವ ಆ ವಸ್ತು ಏನು ಎನ್ನುವುದನ್ನು ಕಂಡುಹಿಡಿಯಲು ಯಾವ ಇಲಾಖೆಯೂ ಇಲ್ಲ. ಈ ಮಾಹಿತಿಯನ್ನು ಪಡೆಯಲು ನಾವು ಭಗವದ್ಗೀತೆಯ ಕಡೆಗೆ ತಿರುಗಬೇಕು: ದೇಹಿನೋಽಸ್ಮಿನ್‌ ಯಥಾ ದೇಹೇ. ದೇಹೇ ಎಂದರೆ “ಈ ಶರೀರದಲ್ಲಿ” ಎಂದು ಅರ್ಥ ಮತ್ತು ದೇಹಿನಃ ಎಂದರೆ “ದೇಹದಲ್ಲಿ ವಾಸಿಸುವವನು.” ದೇಹವು ಒಂದು ಅಂಗಿ ಮತ್ತು ಕೋಟಿನಂತೆ. ನೀವು ಅಂಗಿ ಮತ್ತು ಕೋಟಿನ ಒಡೆಯರು. ಆದರೆ ಅಂಗಿ ಮತ್ತು ಕೋಟು ನೀವಲ್ಲ. ನೀವು ಅಂಗಿ ಮತ್ತು ಕೋಟಿಗಿಂತ ವಿಭಿನ್ನವಾಗಿದ್ದೀರಿ. ಅದೇ ರೀತಿಯಲ್ಲಿ ನಮಗೆ ಎರಡು ಬಗೆಯ ದೇಹಗಳಿವೆ. ಸೂಕ್ಷ್ಮ ಮತ್ತು ಸ್ಥೂಲ ದೇಹಗಳು. ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶಗಳಿಂದ ಈ ಸ್ಥೂಲ ಶರೀರವು ಸೃಷ್ಟಿಸಲ್ಪಟ್ಟಿದೆ ಮತ್ತು ಮನಸ್ಸು, ಬುದ್ಧಿ ಹಾಗೂ ಅಹಂಗಳಿಂದ ಸೂಕ್ಷ್ಮ ಶರೀರ ಸೃಷ್ಟಿಸಲ್ಪಟ್ಟಿದೆ. ಆದ್ದರಿಂದ ಸ್ಥೂಲ ಶರೀರವನ್ನು ನಾವು ತೊರೆದಾಗ, ಸೂಕ್ಷ್ಮಶರೀರವು ಇನ್ನೊಂದು ಸ್ಥೂಲ ಶರೀರಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಇದೇ ಆತ್ಮದ ದೇಹಾಂತರವಾಸದ ಪ್ರಕ್ರಿಯೆ.

ದೇಹಾಂತರವಾಸವು ಒಂದು ನಂಬಿಕೆಯ ಪ್ರಶ್ನೆಯಲ್ಲ. ಅದೊಂದು ಸತ್ಯಸಂಗತಿ. ಈ ವೈಜ್ಞಾನಿಕ ತಿಳುವಳಿಕೆಯನ್ನು ಅಧ್ಯಯನ ಮಾಡಲು ನಾವು ನಿರ್ಲಕ್ಷಿಸಿದರೆ, ಒಂದು ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ ಈ ಮಾನವ ಜನ್ಮದಲ್ಲಿ ಮಾತ್ರ, ದೇಹದೊಳಗಿರುವ ಅತ್ಯಂತ ಮುಖ್ಯವಾದ ವಸ್ತು ಯಾವುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಮರ್ಥವಾದ ವಿಕಸಿತ ಬುದ್ಧಿವಂತಿಕೆಯನ್ನು ನಾವು ಪಡೆದಿದ್ದೇವೆ.

ಆದ್ದರಿಂದ ಕೃಷ್ಣಪ್ರಜ್ಞಾ ಆಂದೋಲನವು ಆತ್ಮದ ಪ್ರಾಮುಖ್ಯವನ್ನು ಬೋಧಿಸುತ್ತಿದೆ. ಆತ್ಮವೆಂದರೆ ಏನು? ಆತ್ಮದ ಅಗತ್ಯಗಳು ಯಾವುವು? ಈ ಐಹಿಕ ದೇಹದಲ್ಲಿ ಆತ್ಮವು ಏಕೆ ಬಂಧಿತವಾಗಿದೆ? ಆತ್ಮವನ್ನು ಹೇಗೆ ಬಿಡುಗಡೆ ಮಾಡಬಹುದು? ಬಿಡುಗಡೆಯ ಅನಂತರ ಆತ್ಮದ ಕಾರ್ಯವೇನು? ನಾವು ವ್ಯವಹರಿಸುತ್ತಿರುವ ಪ್ರಶ್ನೆಗಳು ಇವು. ಈ ಪ್ರಶ್ನೆಗಳಿಗೆ ಆದಿಮ ಆಧ್ಯಾತ್ಮಿಕ ಅಧ್ಯಯನವಾದ ಭಗವದ್ಗೀತೆಯಲ್ಲಿ ಬಹಳ ಸೊಗಸಾದ ಉತ್ತರಗಳನ್ನು ನೀಡಲಾಗಿದೆ. ಇನ್ನೂ ಉನ್ನತ ಅಧ್ಯಯನಕ್ಕೆ ನಮ್ಮಲ್ಲಿ ಶ್ರೀಮದ್‌ ಭಾಗವತಮ್‌ ಇದೆ. ನಮ್ಮ ಏಕಮೇವ ಪ್ರಾರ್ಥನೆಯೆಂದರೆ ನೀವು ಈ ವಿಷಯವನ್ನು, ಈ ವಿಜ್ಞಾನವನ್ನು ನಿರ್ಲಕ್ಷಿಸಬೇಡಿ. ಆತ್ಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಪ್ರಸ್ತುತದಲ್ಲಿ, ಜೀವಂತ ದೇಹದಲ್ಲಿ ಇರುವ ಮತ್ತು ಮೃತದೇಹದಲ್ಲಿ ಇಲ್ಲದ ಆ ವಸ್ತುವನ್ನು ಕುರಿತ ಯಾವ ವಿಜ್ಞಾನದ ಪ್ರಾಧ್ಯಾಪಕರೂ ವಿವರಿಸಲಾರರು. ವಾಸ್ತವದಲ್ಲಿ, ವೈದಿಕ ಸಾಹಿತ್ಯದ ಪ್ರಕಾರ ದೇಹವು ಸದಾ ಮೃತವಾಗಿರುತ್ತದೆ. ಆದರೆ ಆತ್ಮವು ದೇಹದಲ್ಲಿ ಇರುವವರೆಗೂ, ದೇಹವು ಜೀವದಿಂದಿರುವಂತೆ ತೋರುತ್ತದೆ. ನೀವು ಕೋಟನ್ನು ಧರಿಸಿರುವವರೆಗೂ ಅದು ಜೀವಂತವಾಗಿರುವಂತೆ ತೋರುತ್ತದೆ – ಅದು ಚಲಿಸುತ್ತದೆ. ಕೋಟಿಗೆ ಜೀವವಿಲ್ಲ. ಆದರೆ ನಿಮ್ಮ ದೇಹವು ಚಲಿಸುವುದರಿಂದ ಕೋಟು ಕೂಡ ಚಲಿಸುತ್ತದೆ ಮತ್ತು ಜೀವಿಸಿರುವಂತೆ ತೋರುತ್ತದೆ. ಅದೇ ರೀತಿಯಲ್ಲಿ ದೇಹದೊಳಗಿರುವ ಆತ್ಮವು ಚಲಿಸುತ್ತಿರುವುದರಿಂದ ದೇಹವು ಕೂಡ ಚಲಿಸುತ್ತಿದೆ. ಆತ್ಮವು ದೇಹದಿಂದ ಹೊರಗೆ ಹೋಗುತ್ತಿದ್ದಂತೆಯೇ ದೇಹವು ನಿಷ್ಕ್ರಿಯವಾಗುತ್ತದೆ, ಮತ್ತು ನಾವು ಅದನ್ನು “ಸಾವು” ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ದೇಹವು ಸದಾ ಮೃತವಾಗಿರುತ್ತದೆ.

ಆದ್ದರಿಂದ ಕೃಷ್ಣಪ್ರಜ್ಞೆಯ ವಿಜ್ಞಾನವು ಬಹಳ ಮುಖ್ಯವಾದದ್ದು ಮತ್ತು ಅದರ ಮೂಲಭೂತ ತತ್ತ್ವವೆಂದರೆ ಆತ್ಮವನ್ನು ಅರ್ಥಮಾಡಿಕೊಳ್ಳುವುದು. ಆತ್ಮದ ಅಸ್ತಿತ್ವವನ್ನು ಕುರಿತು ನಾವು ನಂಬಬಹುದು ಅಥವಾ ನಂಬದಿರಬಹುದು. ಆದರೆ ಸತ್ಯಸಂಗತಿಯು ಸತ್ಯವಾಗಿಯೇ ಇರುತ್ತದೆ. ನಾವು ನಂಬಲಿ ಬಿಡಲಿ, ಎರಡಕ್ಕೆ ಎರಡನ್ನು ಸೇರಿಸಿದರೆ ನಾಲ್ಕಾಗುತ್ತದೆ. ಯಾರಾದರೂ ಅದನ್ನು ನಂಬದೆ, ಎರಡಕ್ಕೆ ಎರಡನ್ನು ಸೇರಿಸಿದರೆ ಐದಾಗುತ್ತದೆ ಅಥವಾ ಮೂರಾಗುತ್ತದೆ ಎಂದು ಹೇಳಿದರೆ ಸತ್ಯ ಸಂಗತಿಯೇನು ಬದಲಾಗುವುದಿಲ್ಲ. ಅದೇ ರೀತಿಯಲ್ಲಿ ಆತ್ಮದ ಅಸ್ತಿತ್ವವನ್ನು ಕುರಿತು ನಾವು ನಂಬದೇ ಇರಬಹುದು. ಆದರೆ ಆತ್ಮದ ಅಸ್ತಿತ್ವವಂತೂ ಸತ್ಯಸಂಗತಿಯಾಗಿಯೇ ಇರುತ್ತದೆ. ನಾವು ಈ ವಿಷಯವನ್ನು ಬಹಳ ಗಂಭೀರವಾಗಿಯೂ ಮತ್ತು ವೈಜ್ಞಾನಿಕವಾಗಿಯೂ ಅಧ್ಯಯನ ಮಾಡಿದರೆ, ಆತ್ಮವನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ.

ವೈದಿಕ ಸಾಹಿತ್ಯದಲ್ಲಿ ಶಿಫಾರಸು ಮಾಡಿದಂತೆ, ಆತ್ಮವನ್ನು ಅರ್ಥಮಾಡಿಕೊಳ್ಳಲು ಇರುವ ಸರಳವಾದ ವಿಧಾನವೆಂದರೆ ಹರೇಕೃಷ್ಣ ಮಂತ್ರವನ್ನು ಜಪಿಸುವುದು. ಆಗ ಕ್ರಮೇಣವಾಗಿ ನಿಮ್ಮ ಬುದ್ಧಿಶಕ್ತಿ ಅಥವಾ ಪ್ರಜ್ಞೆಯು ಶುಚಿಗೊಳ್ಳುತ್ತದೆ ಮತ್ತು ನೀವು ಈ ದೇಹವಲ್ಲ, ಬದಲಿಗೆ ನೀವು ಒಂದು ಚೇತನಾತ್ಮ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಒಂದು ಚೇತನಾತ್ಮ, ನೀವು ಬ್ರಹ್ಮನ್‌ (ಚೇತನ) ಎಂದು ಅರ್ಥಮಾಡಿಕೊಂಡರೆ ನೀವು ಐಹಿಕ ಅಸ್ತಿತ್ವದ ದಾವಾಗ್ನಿಯಿಂದ ಮುಕ್ತರಾಗುತ್ತೀರಿ.

ಇಂದು ಬೆಳಗ್ಗೆ ನಮ್ಮ ಸಂನ್ಯಾಸಿಗಳಲ್ಲೊಬ್ಬರು, ಹೆಚ್ಚು ಹೆಚ್ಚು ತರುಣರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಹೇಳಿದರು. ಏಕೆ? ಇಷ್ಟೆಲ್ಲಾ ಶಿಕ್ಷಣವಿದ್ದರೂ ತರುಣರು ಏಕೆ ಹತಾಶರಾಗುತ್ತಿದ್ದಾರೆ ಮತ್ತು ಗೊಂದಲಗೊಳ್ಳುತ್ತಿದ್ದಾರೆ? ಪಾಶ್ಚಾತ್ಯ ದೇಶಗಳಲ್ಲಿ ಬಡತನದ ಪ್ರಶ್ನೆ ಇಲ್ಲ. ನೀವೆಲ್ಲ ಶ್ರೀಮಂತರು. ನಾನು ಆಸ್ಟ್ರೇಲಿಯದಲ್ಲಿ ಪ್ರವಾಸ ಮಾಡಿ ನಿಮ್ಮ ದೇಶಕ್ಕೆ ಬಂದಿದ್ದೇನೆ. ಐಹಿಕ ಆವಶ್ಯಕತೆಗಳನ್ನು ಹೇಳುವುದಾದರೆ ನೀವೆಲ್ಲ ಅನುಕೂಲವಂತರೇ ಆಗಿದ್ದೀರಿ. ಹಾಗಾದರೆ ನಮ್ಮ ಸಂನ್ಯಾಸಿಯೊಬ್ಬರು ನನಗೆ ವರದಿ ಮಾಡಿದಂತೆ ಈ ಹತಾಶಮನೋಭಾವನೆ ಏತಕ್ಕಾಗಿ?

ದಿಟವಾಗಿ, ಹತಾಶೆಗೊಳ್ಳುವ ಕಾರಣವಿಲ್ಲ – ಪರಮಾನಂದವನ್ನು ಪಡಲು ಉತ್ತಮವಾದ ಕಾರಣವಿದೆ. ಏಕೆ? ಕೃಷ್ಣಪ್ರಜ್ಞಾ ಆಂದೋಲನದ ಕಾರಣದಿಂದ. ಹತಾಶೆಗೊಳ್ಳಬೇಡಿ. ಕಷ್ಣಪ್ರಜ್ಞಾ ಆಂದೋಲನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡಿ: ಅದು ಹೇಗೆ ವೈಜ್ಞಾನಿಕವಾಗಿದೆ; ಅದು ಹೇಗೆ ಅಧಿಕೃತವಾಗಿದೆ; ಅದು ಹೇಗೆ ಮಹಾನ್‌ ಆಚಾರ್ಯರು, ಶ್ರೇಷ್ಠರಾದ ವಿದ್ವಾಂಸರುಗಳಿಂದ ಅಂಗೀಕೃತವಾಗಿದೆ; ಮತ್ತು ಜಗತ್ತಿನಾದ್ಯಂತ ಪ್ರಮುಖ ವ್ಯಕ್ತಿಗಳು ಹೇಗೆ ಅದನ್ನು ಅತ್ಯುನ್ನತ ಗೌರವದಿಂದ ಕಾಣುತ್ತಾರೆ – ಎನ್ನುವುದನ್ನು ಅರ್ಥಮಾಡಿಕೊಳ್ಳಿ.

ಆದ್ದರಿಂದ ನಮ್ಮ ಪ್ರಾರ್ಥನೆಯೇನೆಂದರೆ ಯುವ ಜನಾಂಗವಾದ ನೀವು ಗೊಂದಲಗೊಳ್ಳಬೇಡಿ ಮತ್ತು ಹತಾಶೆಗೊಳ್ಳಬೇಡಿ. ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುತ್ತಿರುವವರಲ್ಲಿ ಬಹುಪಾಲು ಯುವ ಜನರೇ ಇದ್ದಾರೆ. ಅವರು ಈಗ ಎಷ್ಟು ಆಶಾಭಾವನೆಯಿಂದಿದ್ದಾರೆ, ಎಷ್ಟು ಸಂತೋಷವಾಗಿದ್ದಾರೆ ಎಂದು ಅವರನ್ನು ಕೇಳಿ. ಆದ್ದರಿಂದ ನಾನು, ನಿಮ್ಮ ದೇಶದ ಪುಷ್ಪಗಳಾದ ನೀವೆಲ್ಲ ತರುಣ ತರುಣಿಯರಲ್ಲಿ ಕೇಳಿಕೊಳ್ಳುತ್ತೇನೆ : ದಯವಿಟ್ಟು ಹತಾಶರಾಗಬೇಡಿ ಮತ್ತು ಗೊಂದಲಕ್ಕೊಳಗಾಗಬೇಡಿ. ಕೃಷ್ಣಪ್ರಜ್ಞೆಯಲ್ಲಿ ಒಂದು ಸೊಗಸಾದ ಆಶಾಭಾವನೆಯಿದೆ. ನನ್ನ ಏಕಮೇವ ಪ್ರಾರ್ಥನೆಯೆಂದರೆ ಈ ತತ್ತ್ವಜ್ಞಾನ ಮತ್ತು ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿ ಮತ್ತು ಸಂತಸದಿಂದಿರಿ. ಅದೇ ನನ್ನ ಪ್ರಾರ್ಥನೆ.

ವಂದನೆಗಳು. ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi