ಸಗರ ಚಕ್ರವರ್ತಿ – ಕಪಿಲ ಮುನಿ

ನೈಮಿಷಾರಣ್ಯದಲ್ಲಿ ಎರಡು ದಿವಸಗಳಿಂದ ದೊಡ್ಡದಾಗಿ ಮಳೆ ಬಿದ್ದಿತ್ತು. ಇಡೀ ಅರಣ್ಯವನ್ನು ಜಲಪ್ರವಾಹ ಎಳೆದುಕೊಂಡು ಹೋಗಿ ಬಿಡುತ್ತದೇನೋ ಎಂಬಂತಹ ಜಲಕ್ರೀಡೆ. ನೈಮಿಷಾರಣ್ಯದ ಮುನಿಗಳನೇಕರ ಆಶ್ರಮಗಳಲ್ಲಿ ಬದುಕು ವ್ಯತ್ಯಯವಾಗಿತ್ತು. ವಾಸದ, ಆರಾಧನೆಯ ತಾಣಗಳಲ್ಲೆಲ್ಲ ನೀರು ಹರಿದು ಬಂದು ಬಿಟ್ಟಿತ್ತು. ದೈನಂದಿನ  ಚಟುವಟಿಕೆಗಳು ಏರುಪೇರಾಗಿದ್ದರೂ ಜಲಧಾರೆ ಅಲ್ಲಿನ ವಾತಾವರಣವನ್ನು ಇನ್ನಷ್ಟು ತಂಪು ಮಾಡಿತ್ತು. ಗ್ರೀಷ್ಮ  ಋತುವಿನಲ್ಲಿ ಮಹಾವೃಕ್ಷಗಳು ಚೆಲ್ಲಿ , ಭೂಮಿಯನ್ನೆಲ್ಲ ಹರಡಿಕೊಂಡಿದ್ದ ಎಲೆಗಳು, ಕಸ, ಕೊಳೆಗಳೆಲ್ಲವೂ ಒಂದೇ ಸಲಕ್ಕೆ ವರ್ಷ ಋತುವಿನ ಆಗಮನದಿಂದ  ಕೊಚ್ಚಿ ಹೋಗಿದ್ದವು. ಎಲ್ಲೆಲ್ಲೂ ಚೊಕ್ಕಟವಾದ ಪರಿಸರ, ಎಲೆ ಕೊಂಬೆಗಳಿಂದ ತೊಟ್ಟಿಕ್ಕುತ್ತಿದ್ದ ಮುತ್ತಿನ ಹನಿಗಳು ಬಹಳ ಕಾಲ ಜಿನುಗುತ್ತಲೇ ಇದ್ದವು.

ವರ್ಷ ಋತುವಿನ ಆಗಮನ, ವರ್ಷಧಾರೆ, ಜಲಪಾತ-ಜಲದ್ವೀಪಗಳು ನೈಮಿಷಾರಣ್ಯದ ಮುನಿಜನರಿಗೆಲ್ಲ  ಅತೀವ ಸಂತಸವನ್ನುಂಟು ಮಾಡಿತ್ತು. ಋಷಿ ಪತ್ನಿಯರು, ಪುತ್ರ-ಪುತ್ರಿಯರು, ಅಪಾರ ಶಿಷ್ಯ ಸಮೂಹ, ಆಶ್ರಮಗಳ ಸುತ್ತಲೂ ನಡೆದಾಡುತ್ತಿದ್ದ ಸಾತ್ವಿಕ ಮೃಗಗಳು, ಪಕ್ಷಿ ಸಮೂಹ ಎಂದು ಎಲ್ಲರಿಗೂ ಹೊಸ ಜೀವಂತಿಕೆ ಬಂದ ಹಾಗಿತ್ತು. ಋಷಿ  ಸಮೂಹದ ದೈನಂದಿನ ಆಚರಣೆಗಳೆಲ್ಲ ಆಶ್ರಮದೊಳಗೆ ವರ್ಗಾವಣೆಗೊಂಡಿತ್ತು.

ಎಲ್ಲ ಗುರುಗಳ ಗುರುಗಳಾದ  ಸೂತ  ಮುನಿಗಳು ಉಲ್ಲಸಿತರಾಗಿದ್ದರು. ಎಲ್ಲ ಋಷ್ಯಾಶ್ರಮಗಳಿಗೂ ನಡೆದು ಬಂದರು. ಜಲಾವೃತ ಪ್ರದೇಶಗಳಲ್ಲೆಲ್ಲ ಓಡಾಡಿದರು. ಒಂದೊಂದು ಕಡೆಯೂ ಅವರಿಗೆ ವೇದಘೋಷಗಳ ಸ್ವಾಗತ, ಆತ್ಮೀಯ ಸೇವಾ ಕೈಂಕರ್ಯಗಳು ನಡೆದವು.

ಶ್ರೀಮದ್ಭಾಗವತ ಮಹಾಪುರಾಣದ ಒಂಬತ್ತನೆಯ ಸ್ಕಂಧದ ವಾಚನ ವಿವರಣೆಯ ಪುಣ್ಯ ಶ್ರವಣ ಮುಂದುವರಿಯಿತು.

ಸಂತೋಷಚಿತ್ತರಾಗಿಯೇ ಇದ್ದ ಸೂತ ಮುನಿಗಳು ಹೇಳಿದರು :

“ಋಷ್ಯೋತ್ತಮರೆ, ಕೆಲ ದಿನಗಳು ವರುಣ ದೇವರ ಕೃಪೆ ನಮ್ಮೆಲ್ಲರ ಮನಸ್ಸುಗಳನ್ನು ಮತ್ತು ಸುತ್ತಮುತ್ತಲ ಪರಿಸರವನ್ನು ಹಸಿರಾಗಿಸಿದೆ. ವರುಣನ ಆಗಮನದ ಸಂತಸವೇ ಅಂತಹುದು. ಗ್ರೀಷ್ಮದ ಬೇಗೆಯ ನೆನಪು ಕ್ಷಣ ಮಾತ್ರದಲ್ಲಿ ಅಳಿಸಿಹೋಗುವ ಹಾಗೆ ವರ್ಷದ ಸಂಪ್ರೋಕ್ಷಣೆ ಎಲ್ಲೆಡೆಯೂ ನಾವಿನ್ಯವನ್ನು ಸೃಷ್ಟಿ ಮಾಡಿಬಿಟ್ಟಿದೆಯೇನೋ ಅನ್ನಿಸುತ್ತದೆ.

`ಶ್ರೀಮದ್ಭಾಗವತದ ಈ ಸ್ಕಂಧದಲ್ಲಿ ಹಂತ ಹಂತದಲ್ಲೂ ನಾವು ಮಹಾಮಹಿಮರನ್ನು ಸಂಧಿಸುತ್ತೇವೆ. ಪ್ರತಿಯೊಬ್ಬರ ಬದುಕಿಗೂ ಆದರ್ಶವೆನಿಸಬಲ್ಲ ಪಾತ್ರಗಳನ್ನೇ ಕಾಣುತ್ತೇವೆ. ಈ ಘಟ್ಟದ ಕಥಾಭಾಗದಲ್ಲಿ ಎಂತೆಂತಹ ಆದರ್ಶ ಪುರುಷರು-ವಂಶೋದ್ಧಾರಕರು ಬರುತ್ತಾರೆ ಗೊತ್ತೆ? ಬಹುಶಃ ಇವರೆಲ್ಲರ ಆಗಮನದ ಆನಂದ  ಸೂಚನೆಯೇನೊ ಎಂಬಂತೆ ಈ ಶುಭ್ರ ವರ್ಷಧಾರೆಯ ಅನುಗ್ರಹವಾಗಿದೆ. ಪುಣ್ಯ ಪುರುಷ  ಸಗರ ಚಕ್ರವರ್ತಿಯು ಯಜ್ಞ ಯಾಗಾದಿ ಮಹೋನ್ನತ ಕಾರ್ಯಗಳು ಮತ್ತು ತನ್ನವರ ಉದ್ಧಾರಕ್ಕಾಗಿ ತಾಯಿಗಂಗೆಯನ್ನೇ ಭೂಮಿಗೆ ಅವತರಣ ಮಾಡಿದ ಮಹಾಮಹಿಮ ಭಗೀರಥನ ಕಥೆ ಇಲ್ಲಿ ಅಡಕವಾಗಿದೆ. ಮುಂದೆ ಇದು ದೇವೋತ್ತಮ ಪರಮ ಪುರುಷನಾದ ಶ್ರೀ ರಾಮಚಂದ್ರನ ವೃತ್ತಾಂತ ಚರಿತೆಗೆ ದಾರಿಮಾಡಿಕೊಡುತ್ತದೆ. ಈ ಕೆಲದಿನಗಳ ವರ್ಷಧಾರೆ, ಈ ಪುಣ್ಯ ಪುರುಷರ ಆಗಮನ ಮತ್ತು ಗಂಗಾವತರಣದ ಫಲಶ್ರುತಿಯೇನೊ ಅನ್ನಿಸುತ್ತದೆ. ಇಂತಹ ಆದರ್ಶ ಜೀವನ ಚರಿತ್ರೆಗಳನ್ನು ಶ್ರವಣ ಮಾಡಲು ನಮ್ಮಿಂದ ಸಾಧ್ಯವಾಗುತ್ತಿರುವುದೇ ಒಂದು ಮಹಾಪುಣ್ಯ. ಅಷ್ಟರ ಮಟ್ಟಿಗೆ ನಾವೆಲ್ಲರೂ ಧನ್ಯರು!’

ಸೂತಮುನಿ ಇಷ್ಟು ಹೇಳಿ ಆಂತರಿಕವಾಗಿ ಒಂದಿಷ್ಟು ಭಾವುಕರಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನದಲ್ಲಿ ಕುಳಿತರು. ಅವರೆದುರು ನೆರೆದಿದ್ದ ಋಷಿಗಳೂ ಸಹ ಮನದಾಳದೊಳಗಿಳಿದರು.

ಮುಂದೆ ಸೂತ ಮುನಿಗಳು ಕಥಾಶ್ರವಣ ಪ್ರಾರಂಭಿಸಿದರು:

ತ್ರಿಶಂಕು ಮಹಾರಾಜನ ಮಗ ಪುಣ್ಯ ಪುರುಷ, ಸತ್ಯ ಸಂದ ಹರಿಶ್ಚಂದ್ರನ ಪುತ್ರನಾದ ರೋಹಿತನಿಗೆ ಚಂಪ ಎನ್ನುವ ಮಗ ಹುಟ್ಟಿದ. ಮುಂದೆ ಇವನು ಚಂಪಾಪುರಿ ಎನ್ನುವ ಪಟ್ಟಣವನ್ನು ನಿರ್ಮಿಸಿದ. ಇವನ ಮಗ ಸುದೇವ. ಸುದೇವನ ಮಗ ವಿಜಯ. ವಿಜಯನ ಮಗ ಭರುಕ. ಭರುಕನ ಮಗ ವೃಕ. ವೃಕನ ಮಗ ಬಾಹುಕ. ಈ ಬಾಹುಕನಿಗೆ ಅವನ ಹಿರಿಯರನ್ನು ಕಾಡದ ಒಂದು ಗಂಡಾಂತರ ಕಾಡಿತು. ಒಂದು ಸಲ ವೈರಿಗಳು ಬಾಹುಕನ ಮೇಲೆ ಆಕ್ರಮಣ ಮಾಡಿ ಅವನ ಸ್ವತ್ತನ್ನೆಲ್ಲ ಅಪಹರಿಸಿಬಿಟ್ಟರು. ಏನೇನು ಪ್ರಯತ್ನ ಪಟ್ಟರೂ ಬಾಹುಕನಿಗೆ ಈ ವೈರಿಗಳೆದುರು ತನ್ನ ಸೈನ್ಯವನ್ನು ಹುರಿದುಂಬಿಸಿ ಹೋರಾಡಿ ಗೆಲ್ಲಲು ಸಾಧ್ಯವಾಗಲೇ ಇಲ್ಲ.

ಬರೀ ರಾಜ್ಯವನ್ನು ಕಾಪಾಡುವುದರಲ್ಲಿ ಮಾತ್ರವಲ್ಲ, ವಂಶಾಭಿವೃದ್ಧಿ ವಿಷಯದಲ್ಲೂ ಅವನು ಗೆಲ್ಲಲಿಲ್ಲ. ಎಷ್ಟು ಹೆಂಡತಿಯರಿದ್ದರೂ ಅವನು ಮಕ್ಕಳ ಭಾಗ್ಯ  ಪಡೆಯಲಿಲ್ಲ. ಅವನಿಗೆ ಜೀವನವೇ ಬೇಸರವಾಯಿತು, ಅರ್ಥವಿಲ್ಲದಂತಾಯಿತು.

ಬಾಹುಕ ರಾಜ ಒಂದು ದಿವಸ ತನ್ನ ಮಂತ್ರಿ, ಸೇನಾಧಿಪತಿಗಳನ್ನೆಲ್ಲ ಆಹ್ವಾನಿಸಿ ಹೇಳಿದ : `ನನ್ನ ಪ್ರಿಯರೆ, ತ್ರಿಶಂಕು, ಹರಿಶ್ಚಂದ್ರ, ರೋಹಿತರಂತಹ ಅತಿರಥ-ಮಹಾರಥರು ಕಟ್ಟಿದ ಈ ಮಹಾ ಸಾಮ್ರಾಜ್ಯವನ್ನು ಶಕ್ತಿಯುತವಾಗಿ ಆಳಲು ನನಗಾಗಲಿಲ್ಲ, ಜೊತೆಗೆ ಈ ರಾಜ್ಯಕ್ಕೊಬ್ಬ ಉತ್ತರಾಧಿಕಾರಿಯನ್ನೂ ನನ್ನಿಂದ ಕೊಡಲಾಗಲಿಲ್ಲ. ಇನ್ನು ನಾನು ಇಲ್ಲಿದ್ದು ಮಾಡುವುದು ಏನೂ ಇಲ್ಲ. ಯಾವುದಕ್ಕೂ ಅರ್ಥವಿಲ್ಲದಾಗಿದೆ. ಬೇಸರ-ಅಸಹ್ಯಗಳಿಂದ ಮನಸ್ಸು ತುಂಬ ನೊಂದಿದೆ. ಅಶಾಂತವಾಗಿದೆ. ಇವೆಲ್ಲ ಕೊನೆ ಕಾಣಬೇಕಾದರೆ ನಾನು ವಾನಪ್ರಸ್ಥಾಶ್ರಮ ಸ್ವೀಕರಿಸುವುದೇ ಒಳ್ಳೆಯದೆಂದು ಭಾವಿಸುತ್ತೇನೆ. ಮುಂದೆ ಭಗವದನುಗ್ರಹದಿಂದ ಯಾವನಾದರೂ ದಿವ್ಯ ಪುರುಷ, ಸಾಹಸಿಯೊಬ್ಬ ಖಂಡಿತ ಬರುತ್ತಾನೆ, ಈ ರಾಜ್ಯವನ್ನು ಸುಭಿಕ್ಷ-ಸುರಕ್ಷೆಯತ್ತ ಕೊಂಡೊಯ್ಯುತ್ತಾನೆ. ಅಲ್ಲಿಯವರೆವಿಗೆ ಈ ಮಹಾನ್‌ ರಾಜ್ಯದ ಜನರ ರಕ್ಷಣೆ-ಪೋಷಣೆಯ ಜವಾಬ್ದಾರಿಯನ್ನು ನೀವೆಲ್ಲ ಹೊರಬೇಕೆಂದು ಕೋರುತ್ತೇನೆ!’

ಅಮಾತ್ಯರು ಮತ್ತಿತರರಿಗೆ ಮಾತೇ ಹೊರಡಲಿಲ್ಲ. ಮಹಾರಾಜನನ್ನು ಯಾವ ರೀತಿ, ಏನು ಹೇಳಿ ಸಮಾಧಾನಪಡಿಸಬೇಕೆಂದು ಅವರಿಗೆ ತೋರಲಿಲ್ಲ. ಸುಮ್ಮನೆ ಮೂಕರಂತೆ ನಿಂತರು. ಬಾಹುಕನಿಗೆ ತನ್ನವರ ಈ ತೊಳಲಾಟ ಅರ್ಥವಾಯಿತು.

`ನನ್ನ ಪ್ರೀತಿ ಪಾತ್ರರೆ, ನಿಮ್ಮ ಹೃದಯದಲ್ಲಿ ಎಷ್ಟು ಬಿರುಗಾಳಿ ಎದ್ದಿದೆ ಎನ್ನುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಮ್ಮಲ್ಲೆದ್ದಿರುವ ಬಿರುಗಾಳಿ ಕ್ಷಣಿಕ, ಆದರೆ ನನ್ನಲ್ಲೆದ್ದಿರುವ ಬಿರುಗಾಳಿ ನನ್ನನ್ನು  ಬೇರು ಸಮೇತ ಅಲುಗಾಡಿಸುತ್ತಿದೆ. ನನ್ನನ್ನೆ ಕಿತ್ತೊಗೆಯುವಂತಿದೆ. ಹೀಗೊಂದು ಟೊಳ್ಳು ಬದುಕು ಕಾಣಿಸುತ್ತ, ಹೃದಯದ ತುಂಬ ದಾವಾನಲವನ್ನೇ ತುಂಬಿಸಿಕೊಂಡು ನಾನಿಲ್ಲಿರಬೇಕೆ? ಅರಣ್ಯದಲ್ಲಿ ಮಹಾನ್‌ ಋಷಿಗಳ ಸಂಗದಲ್ಲಿ ಈ ಜ್ವಾಲೆಯನ್ನು  ನಂದಿಸಬಹುದಲ್ಲವೇ? ಅಂತೆಯೇ ಈ ನಿರ್ಧಾರ. ನೀವೆಲ್ಲರೂ ಸಹಕರಿಸಬೇಕು!’

ಮಹಾರಾಜ ಬಾಹುಕ ಹೊರಟು ನಿಂತ. ಕಣ್ಣೀರು ಸುರಿಸುತ್ತ ಇಡೀ ರಾಜ್ಯ ಅವನನ್ನು ಬೀಳ್ಕೊಟ್ಟಿತು. ಮಹಾರಾಜನ ಈ ಪ್ರಯಾಣ ಅಂತಿಮ ಪ್ರಯಾಣ ಎನ್ನುವುದು ಪ್ರಜೆಗಳೆಲ್ಲರಿಗೂ ಅರ್ಥವಾಗಿತ್ತು.

ಬಾಹುಕ ತನ್ನ ಪತ್ನಿಯರೊಂದಿಗೆ ಅರಣ್ಯ ಲೋಕ ಸೇರಿದ. ಪುಣ್ಯಾತ್ಮರಾದ ತಪಸ್ವಿಗಳಾದ ಮುನಿಗಳೊಂದಿಗೆ ವಾಸಿಸಿದ. ಅವನ ಮೈ ಮನಸ್ಸುಗಳು ಎಷ್ಟೋ ಸಡಿಲಗೊಂಡವು, ಉಲ್ಲಸಿತಗೊಂಡವು. ಒಂದು ರೀತಿ ಅವನು ತನ್ನ  ಪತ್ನಿಯರೊಂದಿಗೆ ಸುಖವಾಗಿಯೇ ಇದ್ದ. ಆದರೆ ಕ್ರಮೇಣ ವೃದ್ಧಾಪ್ಯ ಬಾಹುಕನ ಮೇಲೆ ಕವಿಯಿತು. ವೃದ್ಧನಾದ ಬಾಹುಕನು ಸಾವಿಗೀಡಾದನು. ಆಗ ಅವನ ಮಹಾರಾಣಿ ಗಂಡನೊಂದಿಗೆ ಸಹಗಮನ ಮಾಡಿ ಸತಿಯಾಗಲು ನಿರ್ಧರಿಸಿದಳು.

ಸಾಯಲು ಅವಳು ಸಿದ್ಧಳಾಗುತ್ತಿದ್ದಾಗ ಇದ್ದಕ್ಕಿದ್ದ ಹಾಗೆಯೇ ಅಲ್ಲೊಬ್ಬ ಋಷಿಗಳು ಬಂದರು. ಔರ್ವ ಎಂದು ಪ್ರಸಿದ್ಧರಾಗಿದ್ದ ಆ ತಪಸ್ವಿ ರಾಣಿಗೆ ಹೇಳಿದರು : `ತಾಯಿ, ನಿನ್ನ ಗಂಡ ಕೊನೆಯುಸಿರೆಳೆದದ್ದು ನೋವಿನ ವಿಷಯವೇ ಹೌದು. ಸಾಮಾನ್ಯ ಸಂದರ್ಭಗಳಲ್ಲಾಗಿದ್ದರೆ ಗಂಡನೊಂದಿಗೆ ಹೆಂಡತಿಯೂ ಸಹಗಮನ ಮಾಡುವುದು ದೊಡ್ಡ ವಿಷಯವೇನಾಗಿರುತ್ತಿರಲಿಲ್ಲ. ಆದರೆ, ತಾಯಿ ನೀನೀಗ ಗರ್ಭಿಣಿಯಾಗಿದ್ದೀಯಮ್ಮ. ಆದ್ದರಿಂದ ನೀನು ಸಾಯಬೇಡ. ನಿನ್ನ ಹೊಟ್ಟೆಯಲ್ಲಿ ಒಬ್ಬ ಕೀರ್ತಿಶಾಲಿ ಇದ್ದಾನೆ!’ ಎಂದರು. ಮಹಾರಾಣಿ ಸಹಗಮನ ಮಾಡಲಿಲ್ಲ. ಔರ್ವ ಮುನಿ ಹೇಳಿದರು : `ಬಾಹುಕ ಚಕ್ರವರ್ತಿ ಬದುಕಿದ್ದಾಗ ತನ್ನ ವಂಶೋದ್ಧಾರಕನನ್ನು ಕಾಣಲಾಗಲಿಲ್ಲ. ಅವನ ರಾಜ್ಯವನ್ನು ನೋಡಿಕೊಳ್ಳುವಂಥವನನ್ನು ಕಾಣಲಾಗಲಿಲ್ಲ. ಈಗ ಅಂತಹವನೊಬ್ಬ ಹುಟ್ಟಲಿದ್ದಾನೆ. ಅವನ ಕ್ಷೇಮದ ಜವಾಬ್ದಾರಿ ನಿನ್ನದು!’ ಎಂದು ಅವರು ಹೇಳಿದಾಗ ಮಹಾರಾಣಿ ಜಾಗೃತಳಾದಳು.

ಆದರೆ ಅವಳ ಸವತಿಯರಿಗೆ ಈ ವಿಷಯವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ.  ಅನ್ನದೊಂದಿಗೆ ವಿಷ ಬೆರೆಸಿ ರಾಣಿಗೆ ಉಣಬಡಿಸಿದರು. ದೈವಾನುಗ್ರಹದಿಂದ ಈ ವಿಷ ಪರಿಣಾಮ ಬೀರಲಿಲ್ಲ. ಮಹಾರಾಣಿ  ಒಂದು ಗಂಡು ಮಗುವನ್ನು ಹೆತ್ತಳು. ಮಗುವಿನೊಂದಿಗೆ ಆ  ವಿಷವೂ ಹೊರಗೆ ಬಂದಿತು. `ಗರ’ ಎಂದರೆ ವಿಷ , `ಸ’ ಎಂದರೆ ಇದರೊಂದಿಗೆ ಹುಟ್ಟಿದವ ನಾದ್ದರಿಂದ ಈ ಮಗುವಿಗೆ `ಸಗರ’ ಎಂದು ಔರ್ವ ಮುನಿಗಳೇ ನಾಮಕರಣ ಮಾಡಿದರು. ಅಷ್ಟೇ ಅಲ್ಲ, `ಈ ಮಗು ಈ ಲೋಕದ ಅತ್ಯಂತ ಕೀರ್ತಿಶಾಲಿ ಸಾಧನ ಶಾಲಿ ಚಕ್ರವರ್ತಿಯಾಗುತ್ತಾನೆ!’ ಎಂದು ಭವಿಷ್ಯ ನುಡಿದರು.

ಆ ತಪಸ್ವಿಯ ಶುಭ ನುಡಿ ನಿಜವಾಯಿತು!

ಔರ್ವಮುನಿಗಳ ಮಾರ್ಗದರ್ಶನದಲ್ಲಿಯೆ ಬೆಳೆದು ಸಗರ ದೊಡ್ಡವನಾದ. ಸರ್ವ ವಿದ್ಯಾಪಾರಂಗತನಾದ. ಯುದ್ಧ ಕೌಶಲ, ಆಡಳಿತ ಕೌಶಲಗಳಲ್ಲಿ ಪರಿಣತನಾದ. ಮತ್ತೆ ತನ್ನ ತಂದೆಯ ರಾಜ್ಯವನ್ನು ತನ್ನ ಕೈಗೆ ತೆಗೆದುಕೊಂಡ, ಮೊಟ್ಟ ಮೊದಲ ಕೆಲಸವಾಗಿ ತನ್ನ ತಂದೆಗೆ  ತೊಂದರೆ ಕೊಡುತ್ತ, ಅವರು ದೇಶಾಂತರ ಹೋಗುವಂತೆ ಮಾಡಿದ, ಪುಂಡು ವೈರಿಗಳಾದ ತಾಲ, ಜಂಘ, ಯವನ, ಶಕ, ಹೈಹಯ, ಬರ್ಬರ ಮುಂತಾದ ಅನಾಗರಿಕರನ್ನು ಸದೆಬಡಿದ. ಆದರೆ, ಗುರುಗಳ ಆಜ್ಞೆಯಂತೆ ಇವರನ್ನು ಕೊಲ್ಲದೆ, ಅವರನ್ನು ವಿಕಾರರೂಪಿಗಳನ್ನಾಗಿ ಮಾಡಿದ.  ಕೆಲವರಿಗೆ ವಿಚಿತ್ರ ವೇಷಗಳನ್ನು  ತೊಡಿಸಿದ. ಕೆಲವರಿಗೆ ತಲೆ ಬೋಳು ಮಾಡಿ ಗಡ್ಡ ಬಿಡಿಸಿದ. ಕೆಲವರಿಗೆ ಉದ್ದ ಕೂದಲು ಬಿಡಿಸಿದ. ಕೆಲವರಿಗೆ ಅರ್ಧ ತಲೆ ಬೋಳು ಮಾಡಿಸಿದ. ಕೆಲವರಿಗೆ ಒಳ ಉಡುಪು ತೊಡದಂತೆ ಮಾಡಿದ. ಕೆಲವರಿಗೆ ಹೊರ ಉಡುಪು ತೊಡದಂತೆ ಮಾಡಿದ. ಹೀಗೆ ವಿವಿಧ ಜನಾಂಗಗಳು ವಿಭಿನ್ನ ವೇಷ ಹಾಕುವಂತೆ ಮಾಡಿದ ಸಗರ ರಾಜ ಅವರನ್ನು ಕೊಲ್ಲದೆ ಉಳಿಸಿದ.

ಈಗ ಅವನ ಪೂರ್ವಿಕರ ಇಡೀ ರಾಜ್ಯ ಅವನ ಕೈಗೆ ಬಂದಿತ್ತು.  ತಂದೆ ಬಾಹುಕನ ಆತ್ಮ ಶಾಂತವಾಗುವ ಹಾಗೆ ಶತ್ರು  ಸಂಕುಲ ವಿನಾಶವಾಗಿತ್ತು. ಸುತ್ತಮುತ್ತಲ ರಾಜ್ಯಗಳೆಲ್ಲ ಅವನ ಪಾಲಾಗಿದ್ದವು. ತನ್ನ ರಾಜ್ಯ ಇನ್ನೂ ವಿಸ್ತಾರಗೊಂಡು ರಾಜರೆಲ್ಲರೂ ತನ್ನ ಸಾಮಂತರಾಗಬೇಕು. ತನ್ನ ರಾಜ್ಯದ-ವಂಶದ ಕೀರ್ತಿ ಸೂರ್ಯಚಂದ್ರರಿರುವವರೆಗೂ ಉಳಿಯಬೇಕು. ತನ್ನ ವಂಶ  ಸಾಧನಶೀಲರ-ಕೀರ್ತಿವಂತರ ವಂಶವಾಗಿ ಬೆಳೆಯಬೇಕು ಎಂದವನು ನಿರ್ಧರಿಸಿದ. ಅವನನ್ನು  ಬೆಳೆಸಿದವರೂ ದೊಡ್ಡ ಮಾರ್ಗದರ್ಶಕರೂ, ಗುರುಗಳೂ ಆಗಿದ್ದ ಔರ್ವ ಮುನಿಗಳು ಅವನ ಮಹತ್ವಾಕಾಂಕ್ಷೆಗಳನ್ನು ಒಪ್ಪಿ ಆಶೀರ್ವದಿಸಿದರು.  `ಒಂದು ನೂರು ಅಶ್ವಮೇಧ ಯಾಗಗಳನ್ನು  ಮಾಡಿ ನೀನು ಎಲ್ಲ ಲೋಕಗಳ ಮಾನ್ಯತೆ ಪಡೆಯಬೇಕು ಎನ್ನುವುದೇ ನನ್ನ ಬಯಕೆ. ಇದು ನಿನ್ನ ಹಿಂದಿನವರಿಗೂ ಮತ್ತು ಮುಂದಿನವರಿಗೂ ಶ್ರೀರಕ್ಷೆಯಾಗಿದ್ದು ನಿನ್ನ ವಂಶವನ್ನು ಕಾಪಾಡುತ್ತದೆ! ಅಷ್ಟೇ ಅಲ್ಲ, ಮುಂದೆ ನೀನು ಇಂದ್ರ ಪದವಿಗೂ ಅರ್ಹನಾಗುತ್ತೀಯ!’ ಎಂದು ಹೇಳಿದರು.

ಸಗರ ಮಹಾರಾಜ ಗುರುಗಳ ಆಶೀರ್ವಾದದಿಂದ, ಮಾರ್ಗದರ್ಶನದಿಂದ, ಉಪದೇಶಗಳಿಂದ ಯಶಸ್ವಿಯಾಗಿ ಅಶ್ವಮೇಧ ಯಾಗವನ್ನು ಒಂದಾದ ಮೇಲೊಂದರಂತೆ ಮಾಡತೊಡಗಿದ. ತನ್ಮೂಲಕ ಪರಮ ನಿಯಾಮಕನೂ, ಎಲ್ಲ ವಿದ್ವಾಂಸರ ಪರಮಾತ್ಮನೂ, ಸಕಲ ವೇದಗಳ ಜ್ಞಾತೃವೂ, ದೇವೋತ್ತಮ ಪರಮ ಪುರುಷನೂ ಆದ ಪರಮ ಪ್ರಭುವನ್ನು ತೃಪ್ತಿಪಡಿಸಿದ.

ಹೀಗೆ ಸಗರ ಮಹಾರಾಜ ತೊಂಬತ್ತೊಂಬತ್ತು ಸಲ ಅಶ್ವಮೇಧ ಯಾಗವನ್ನು  ಮುಗಿಸಿ,  ಮೇಲೆ ನೂರನೇ ಯಾಗ ಪ್ರಾರಂಭಿಸಿದ. ಆಗ ಅವನ ಯಜ್ಞಾಶ್ವ ಎಲ್ಲ ಕಡೆಯೂ ವಿಜಯ ಧ್ವಜ ಸ್ಥಾಪಿಸಲು ಸಂಚರಿಸುತ್ತಿದ್ದಾಗ, ಸ್ವರ್ಗಾಧಿಪತಿಯಾದ ದೇವೇಂದ್ರ ಯಜ್ಞಾಶ್ವವನ್ನು ಕದ್ದು ದೀರ್ಘ ತಪಸ್ಸಿನಲ್ಲಿ ತೊಡಗಿದ್ದ ಕಪಿಲ ಮಹರ್ಷಿಗಳ  ಬೆನ್ನ ಹಿಂದೆ ಕಟ್ಟಿಹಾಕಿಬಿಟ್ಟ.

ಅಶ್ವಮೇಧಯಾಗದಲ್ಲಿ ತೊಡಗಿಕೊಂಡಿದ್ದ, ಶತಅಶ್ವಮೇಧಗಳನ್ನು ಪೂರೈಸುವ ಸಂತಸದಲ್ಲಿ ಬೀಗುತ್ತಿದ್ದ ಸಗರನಿಗೆ ಯಜ್ಞಾಶ್ವ ಕಾಣದಾದದ್ದು ದಿಕ್ಕು ತೋಚದಂತೆ ಮಾಡಿತು. ಎಲ್ಲ ಲೋಕಗಳಲ್ಲೂ ಹುಡುಕಲು ತನ್ನ  ಸಮಸ್ತ ಬಲವನ್ನೂ ಅವನು ಕಳುಹಿಸಿದ.

ಸಗರನಿಗೆ ಸುಮತಿ ಮತ್ತು ಕೇಶಿನೀ ಎಂಬ ಇಬ್ಬರು ಹೆಂಡತಿಯರಿದ್ದರು. ಸುಮತಿಯಲ್ಲಿ ಅವನಿಗೆ ಅರವತ್ತು ಸಾವಿರ ಮಕ್ಕಳು. ಅವರೆಲ್ಲರೂ ಶಕ್ತಿಯಿಂದ ಕೊಬ್ಬಿದವರಾಗಿ ತಮ್ಮ ಶಕ್ತಿಸಾಹಸಗಳ ಬಗ್ಗೆ  ತುಂಬ ಗರ್ವಿತರಾಗಿದ್ದರು. ತಮ್ಮ ಯುದ್ಧ ಕೌಶಲಗಳ ಬಗ್ಗೆ ಅವರಿಗೆ ಬಹಳ ನಂಬಿಕೆಯಿತ್ತು. ಯಜ್ಞಾಶ್ವವನ್ನು ಹುಡುಕಿ ತರುವಂತೆ ಸಗರ ತನ್ನ ಈ ಮಕ್ಕಳಿಗೂ ಹೇಳಿದ. ಈ ಮಕ್ಕಳಿಗೂ ಬಹು ಕಾಲದಿಂದ ಶೌರ್ಯ ಸಾಹಸಗಳ ಪ್ರದರ್ಶನಕ್ಕೆ ಅವಕಾಶವಿಲ್ಲದೆ ಸುಮ್ಮನಿದ್ದದ್ದು ಬೇಸರವಾಗಿತ್ತು. ಈಗ ತಂದೆ ಹೇಳಿದ ಕೂಡಲೇ ರಭಸದಿಂದ, ಕೋಪದಿಂದ ಹೊರಟರು. `ನಮ್ಮ ತಂದೆಯಂತಹ ಮಹಾನ್‌ ರಾಜನ ಅಶ್ವಮೇಧಯಾಗಕ್ಕೆ ಅಡ್ಡಬಂದವರನ್ನು ಸುಮ್ಮನೆ ಬಿಡುವುದಿಲ್ಲ!  ಸದೆ ಬಡಿದು ಚಚ್ಚಿ ಹಾಕುತ್ತೇವೆ!’ ಎಂದು ಶಪಥ ಮಾಡಿಕೊಂಡೇ ಹೊರಟರು. ಎಲ್ಲೆಲ್ಲಿ ಹೋಗಿ ನೋಡಿದರೂ ಯಜ್ಞಾಶ್ವದ ವಿಷಯ ತಿಳಿಯಲಿಲ್ಲ. ಕೊನೆಗವರು ಭೂಮಿಯನ್ನು ಆಳವಾಗಿ ತೋಡಲಾರಂಭಿಸಿದರು.

ಬಹಳ ಆಳವಾಗಿ ತೋಡಿದ ಮೇಲೆ ಈಶಾನ್ಯ ದಿಕ್ಕಿನಲ್ಲಿ ಈ ಕಪಿಲ ಮುನಿಯ ಆಶ್ರಮ ಕಾಣಿಸಿತು. ಅಲ್ಲೇ ಕಟ್ಟಿಹಾಕಲಾಗಿದ್ದ ಇವರ ಯಜ್ಞಾಶ್ವವೂ ಕಾಣಿಸಿತು. ಅದರ ಮುಂದೆ ದೀರ್ಘ ತಪಸ್ಸಿನಲ್ಲಿ ಕಪಿಲ ಮಹರ್ಷಿ ಕುಳಿತಿದ್ದರು.

ಅರವತ್ತು ಸಾವಿರ ಕೋಪಗಳು ಒಂದೇ ಸಲಕ್ಕೆ ಭುಗಿಲೆದ್ದವು. `ಇಗೋ ಇಲ್ಲಿದ್ದಾನೆ ನಮ್ಮ ಕುದುರೆ ಕಳ್ಳ!’ – ಎಂದು ಕೂಗುತ್ತ ಅವರೆಲ್ಲರೂ ಕಪಿಲ ಮಹರ್ಷಿಯತ್ತ ನುಗ್ಗಿ ಬಂದರು. ತಮ್ಮ ತಮ್ಮ ಆಯುಧಗಳನ್ನು ಹೊರತೆಗೆದು ಕೈಯಲ್ಲಿ ಹಿಡಿದು ಋಷಿಯತ್ತ ಕೂಗುತ್ತ ನುಗ್ಗಿ ಬಂದರು. `ಏನೂ ತಿಳೀದೇ ಇರೋನ ಹಾಗೆ ಕಣ್ಣು ಮುಚ್ಚಿಕೊಂಡು ಕೂತಿದ್ದಾನೆ ನೋಡಿ ಪಾಪಿ, ಮಹಾ ಪಾಪಿ, ಕೊಲ್ಲಿ ಅವನನ್ನು, ಸಾಯಿಸಿ ಮುಗಿಸಿಬಿಡಿ!’ ಎಂದು ಕಿರಿಚುತ್ತ ಬಂದರು.

ಅಷ್ಟೇ! ಕ್ಷಣಮಾತ್ರದಲ್ಲಿ ಆ ಅರವತ್ತು ಸಾವಿರ ಸಗರ ಪುತ್ರರೂ ಸುಟ್ಟು ಬೂದಿಯಾಗಿದ್ದರು-ದೇವೇಂದ್ರನ ಪ್ರಭಾವದಿಂದ ಬುದ್ದಿಯನ್ನು  ಕಳೆದುಕೊಂಡು, ಮಹಾನ್‌ ವ್ಯಕ್ತಿಗೆ ಅಗೌರವ ತೋರಿದವರಿಗೆ ತಕ್ಕ ಶಾಸ್ತಿಯಾಗಿತ್ತು. ಆ ಮಹಾನ್‌ ತಪಸ್ವಿಯ ಯೋಗಶಕ್ತಿಯ ಮುಂದೆ ನಿಲ್ಲುವುದು ಅವರಿಂದಾಗಲಿಲ್ಲ. ಆ ಮಹರ್ಷಿಯ ತಪೋಬಲದ ಪ್ರಖರತೆಗೆ ಸಗರ ಪುತ್ರರೆಲ್ಲರ ಶರೀರಗಳಿಂದಲೇ ಅಗ್ನಿ ಆವಿರ್ಭವಿಸಿ ಅವರನ್ನೆಲ್ಲ ಸುಟ್ಟು ಭಸ್ಮಮಾಡಿತು.

ಈ ಸಂದರ್ಭದಲ್ಲಿ ಸೂತ ಮುನಿಗಳು ವಿವರಣಾತ್ಮಕವಾದ ಕೆಲವು ಮಾತುಗಳನ್ನಾಡಿದರು :

`ಮುನಿವರ್ಯರೆ, ಕಪಿಲ ಮುನಿಗಳು ಕಣ್ತೆರೆದ ಕೂಡಲೇ ಎದುರಿನಲ್ಲಿ ಆಯುಧಗಳನ್ನು ಹಿಡಿದು ತಮ್ಮ  ಮೇಲೆ ಮುನ್ನುಗ್ಗಿದವರನ್ನು ನೋಡಿ ಕೋಪದಿಂದ ಭಸ್ಮ ಮಾಡಿಬಿಟ್ಟರು ಎಂದು  ಯಾರೂ ಭಾವಿಸಬಾರದು. ಏಕೆಂದರೆ ಕಪಿಲ ಮುನಿಯ ದೇಹ ಸಂಪೂರ್ಣವಾಗಿ ಸತ್ವಗುಣದಲ್ಲಿದೆ. ಆದ್ದರಿಂದ ಅದು ಕೋಪದ ರೂಪದಲ್ಲಿ ತಮೋಗುಣವನ್ನು ಮರೆಯಲಾರದು; ಹೇಗೆ ಶುದ್ಧ ಆಕಾಶವು ಈ ನೆಲದ ಧೂಳಿನಿಂದ ಮಲಿನವಾಗಲಾರದೋ ಹಾಗೆ ಕಪಿಲರ ಮೇಲೆ ಇಂಥ ಪ್ರಭಾವಗಳಾಗುವುದಿಲ್ಲ ಎಂದು ಶ್ರೀ ವ್ಯಾಸ ಮುನಿಗಳೇ ಕೆಲವು ಶ್ಲೋಕಗಳಲ್ಲಿ  ಹೇಳುತ್ತಾರೆ. ಕಪಿಲಮುನಿ ಈ ಲೌಕಿಕ ಜಗದಲ್ಲಿ ಸಾಂಖ್ಯ ದರ್ಶನವನ್ನು ನಿರೂಪಿಸಿದವರು. ಅದು ಅವಿದ್ಯೆಯ ಸಾಗರವನ್ನು  ದಾಟುವುದಕ್ಕೆ ಸಬಲ ಹಾಗೂ ಗಟ್ಟಿಮುಟ್ಟಾದ ನೌಕೆ. ನಿಜಕ್ಕೂ ಐಹಿಕ ಸಂಸಾರ ಸಾಗರವನ್ನು ದಾಟಲು ಕಾತರನಾದವನು ಈ ದರ್ಶನದ ಸಹಾಯ ಪಡೆಯಬಹುದು. ಅಲೌಕಿಕ ವೇದಿಕೆಯನ್ನು ಏರಿಕುಳಿತ ಅಂತಹ ಮಹಾವಿದ್ವಾಂಸರಲ್ಲಿ ಶತ್ರು-ಮಿತ್ರರೆಂಬ ಭೇದ ಹೇಗೆ ತಾನೇ ಇದ್ದೀತು ಎನ್ನುತ್ತಾರೆ ವೇದ ವ್ಯಾಸರು’.

`ಐಹಿಕ ದೇಹವು ಪೃಥಿವಿ, ಅಪ್‌, ತೇಜಸ್‌, ವಾಯು, ಆಕಾಶಗಳ  ಸಮ್ಮಿಶ್ರಣ. ಬೆಂಕಿ ಶರೀರದೊಳಗೆ ಇದೆ. ಉಷ್ಣತೆಯ ಏರಿಳಿತವು ತಮ್ಮ ಅನುಭವಕ್ಕೆ ಬರುತ್ತದೆ. ಸಗರ ಮಹಾರಾಜನ ಮಕ್ಕಳ ದೇಹದೊಳಗಿನ ಬೆಂಕಿ ಎಷ್ಟು ಪ್ರಖರವಾಯಿತೆಂದರೆ, ಅದರಿಂದ ಅವರೆಲ್ಲ ಸುಟ್ಟು ಬೂದಿಯಾದರು. ಮಹಾವ್ಯಕ್ತಿಯೊಡನೆ ಅವರ ದುರ್ನಡತೆಯೇ  ಆ ಬೆಂಕಿ ಅಷ್ಟು ಪ್ರಖರವಾಗಲು ಕಾರಣವಾಯಿತು. ಅಂತಹ ದುರ್ನಡತೆಯನ್ನು ಮಹದ್‌ ವ್ಯತಿಕ್ರಮ ಎಂದು ಕರೆಯಲಾಗಿದೆ. ಮಹಾನ್‌ ವ್ಯಕ್ತಿಗೆ ಮಾಡಿದ ಅವಮಾನದಿಂದ ಅವರ ದೇಹದ ಬೆಂಕಿಯೇ ಅವರನ್ನು ಕೊಂದಿತು.

`ಅಲೌಕಿಕ ಸ್ಥಿತಿಗೆ ಏರಿದವನು ಸದಾ ಪ್ರಶಾಂತನಾಗಿರುವವನು – ಪ್ರಸನ್ನಾತ್ಮ. ಈ ಲೌಕಿಕ ಪ್ರಪಂಚದಲ್ಲಿ ಒಳಿತು ಕೆಡುಕುಗಳೆಂಬ ಹುಸಿ ಭೇದವು ಅವನನ್ನು ಬಾಧಿಸುವುದಿಲ್ಲ.  ಆದ್ದರಿಂದ ಅಂತಹ ಉನ್ನತ ವ್ಯಕ್ತಿಯು ಶತ್ರುಮಿತ್ರರೆಂಬ ಭೇದವನ್ನೆಣಿಸದೆ ಎಲ್ಲರಲ್ಲೂ ಸಮಾನರಾಗಿರುತ್ತಾನೆ- ಸಮಃ ಸರ್ವೇಷು ಭೂತೇಷು ಎನ್ನುವಂತೆ. ಆತನು ಐಹಿಕ ಕಾಲುಷ್ಯವಿಲ್ಲದ ಪರಾತ್ಪರದ ನೆಲೆಯಲ್ಲಿ ಇರುವುದರಿಂದಲೇ, ಆತನನ್ನು ಪರಾತ್ಮ ಭೂತ ಅಥವಾ ಬ್ರಹ್ಮಭೂತ ಎಂದು ಕರೆಯಲಾಗಿದೆ. ಆದ್ದರಿಂದ ಕಪಿಲಮುನಿಯು ಸಗರ ಮಹಾರಾಜನ ಮಕ್ಕಳ ಮೇಲೆ ಕೋಪಗೊಳ್ಳಲೇ ಇಲ್ಲ. ನಿಜವಾಗಿ ಹೇಳುವುದಾದರೆ ಅವರ ಸ್ವಂತ ದೇಹದ ಉಷ್ಣತೆಯಿಂದ ಅವರೇ ಸುಟ್ಟು ಬೂದಿಯಾದರು!’

ನೈಮಿಷಾರಣ್ಯದ ಮುನಿಗಳೆಲ್ಲ ಮೌನರಾಗಿ ಕುಳಿತು ಸೂತ ಮುನಿಗಳ ವಿವರಣೆಯನ್ನು ಕೇಳುತ್ತಿದ್ದರು. ಇವರು ಎಷ್ಟು ಚೆನ್ನಾಗಿ ತಪಸ್ವಿಗಳನ್ನು ಸಾಧು ಸಂತರನ್ನು ಎಷ್ಟು ಗೌರವದಿಂದ ಭಾವಿಸಿಕೊಂಡಿದ್ದಾರೆ, ಕಪಿಲರನ್ನು ಎಷ್ಟು ಎತ್ತರದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕೊಳ್ಳುವಂತಾಯಿತು ಅವರಿಗೆಲ್ಲ. ಉನ್ನತ ವ್ಯಕ್ತಿ ಮಾತ್ರ ಇನ್ನೊಬ್ಬ ಉನ್ನತ ವ್ಯಕ್ತಿಯಲ್ಲಿ ಉನ್ನತ ಗುಣಗಳನ್ನು  ತಾನೇ ಕಾಣಲು ಸಾಧ್ಯ!

ಕೆಲ ಕ್ಷಣಗಳು ಎದುರಿಗಿದ್ದ ಮುನಿಗಳೆಲ್ಲರ ಮುಖ ಭಾವಗಳನ್ನು ನೋಡುತ್ತ, ಅವರ ಹೃದಯಗಳಲ್ಲಾಗುತ್ತಿರುವ ಭಾವನೆಗಳ  ಏರಿಳಿತಗಳನ್ನು ಕಂಡುಕೊಂಡವರಂತೆ ಮುಗುಳು ನಕ್ಕರು ಸೂತ ಮುನಿಗಳು.

ಮತ್ತೆ ಭಾಗವತ ಶ್ರವಣ ಮುಂದುವರಿಯಿತು :

ಸಗರ ಮಹಾರಾಜನ ಮಕ್ಕಳೆಲ್ಲ ಒಂದೇ ಏಟಿಗೆ ಹೀಗೆ ಇಲ್ಲವಾಗಿಬಿಟ್ಟರು. ಸಗರನಿಗೆ ಉಳಿದಿದ್ದವನು ಬರೀ ಇನ್ನೊಬ್ಬ ಮಗ ಮಾತ್ರ. ಅವನು ಅವನ ಎರಡನೆ ಹಂಡತಿ ಕೇಶಿನಿಗೆ ಹುಟ್ಟಿದವನು. ಅವನೇ ಅಸಮಂಜಸ. ಅವನ ಮಗ ಅಂಶುಮಾನ್‌. ಇವನಿಗೆ ತಾತ ಸಗರನೆಂದರೆ ತುಂಬ ಪ್ರೀತಿ, ವಿಶ್ವಾಸ, ಹೆಮ್ಮೆ. ಸಗರ ತಾತ ದೈವಿಕವಾಗಿ ಎಷ್ಟೊಂದು ಶ್ರಮ ವಹಿಸುತ್ತಾರೆ ಎಂದೆಲ್ಲ ಯೋಚಿಸುತ್ತಿದ್ದ ಅಂಶುಮಾನ್‌ ಯಾವಾಗಲೂ ತಾತನ ಹತ್ತಿರವೇ ಓಡಾಡುತ್ತಿದ್ದ. ತಾತನ ಒಳಿತಿಗಾಗಿ ಅಂಶುಮಾನ್‌ ನಿರಂತರವಾಗಿ ಕಾರ್ಯ ನಿರತನಾಗಿದ್ದ.

ಅವನ ತಂದೆ ಅಸಮಂಜಸ ಯಾವಾಗಲೂ ಅರೆಹುಚ್ಚನ ಹಾಗೆ, ಬುದ್ಧಿ  ಸ್ಥಿಮಿತದಲ್ಲಿ ಇರದವನಂತೆ ನಡೆದುಕೊಳ್ಳುತ್ತಿದ್ದ. ಯಾವನೋ ಒಬ್ಬ ಹುಚ್ಚು ತಪಸ್ವಿಯ ಹಾಗೆ, ಹಠಯೋಗಿಯ ಹಾಗೆ ಕಾಣಿಸುತ್ತಿದ್ದ. ಅಂಶುಮಾನನಿಗೆ ಇಂಥ ತಂದೆ ಹತ್ತಿರ ಪ್ರೀತಿಯಿಂದ ಆತ್ಮೀಯತೆಯಿಂದ ಹೋಗಲು ಸಾಧ್ಯವೇ ಆಗುತ್ತಿರಲಿಲ್ಲ. ಅಂತಹ ಸಗರ ಚಕ್ರವರ್ತಿಗೆ ಪಾಪಕರ್ಮವೋ ಎಂದೆಲ್ಲ ಅವನಿಗೆ ಅನ್ನಿಸುತ್ತಿತ್ತು. ಆದರೆ, ತಾತ ತುಂಬು ಪ್ರೀತಿಯಿಂದ, ಸರಿಸಮಾನ ಸ್ನೇಹದಿಂದ ಮೊಮ್ಮಗನನ್ನು ಅಪ್ಪಿ ಮುದ್ದಿಸುತ್ತಿದ್ದ.

ಯಾರಿಗೂ ಅರ್ಥವಾಗದ ಅಸಮಂಜಸನಿಗೆ ತಾನು ಹಿಂದಿನ ಜನ್ಮದಲ್ಲಿ  ಒಬ್ಬ  ಮಹಾನ್‌ ಹಠಯೋಗಿ ಆಗಿದ್ದನೆಂದು ತಿಳಿದಿತ್ತು.  ಅವನಿಗೆ ಅವನ ಹಿಂದಿನ ಜನ್ಮದ ನೆನಪಿತ್ತು. ಆ ಜನ್ಮದಲ್ಲಿ ತಾನು ದುಷ್ಟ ಸಂಗದಲ್ಲಿ ಅಧೋಗತಿ ತಲುಪಿ, ಉನ್ನತ ಸ್ಥಾನದಿಂದ ಪತಿತನಾಗಿದ್ದದ್ದು ಅವನನ್ನು ಈ ಜನ್ಮದಲ್ಲಿ ಕಾಡುತ್ತಿತ್ತು. ತಾನು ನಿಜವಾಗಲೂ ಪಾವನಾತ್ಮನಲ್ಲ, ಒಬ್ಬ ಪತಿತಾತ್ಮ ಎಂದೇ ಸಾರ್ವಜನಿಕವಾಗಿ ಎಲ್ಲರಿಗೂ ತೋರಿಸಿಕೊಳ್ಳಲು ಅವನು ಬಯಸುತ್ತಿದ್ದ. ಅರಸು ಮನೆತನದ ದೊಡ್ಡಸ್ಥಿಕೆಯಾಗಲಿ, ರಾಜ ಗಾಂಭೀರ್ಯಗಳಾಗಲಿ ಅವನನ್ನು ಆವರಿಸಿಕೊಂಡಿರಲಿಲ್ಲ. ತನ್ನ ತಂದೆಯ ಪ್ರಜೆಗಳ ದೃಷ್ಟಿಯಲ್ಲಿ ಅತಿ ಸಾಮಾನ್ಯನ ಹಾಗೆ ಕಾಣುವಂತೆ ಅಸಹ್ಯವಾಗಿ ತೋರಿಕೊಳ್ಳುತ್ತ ಕುಟುಂಬದವರಿಗೆ ಅನಾನುಕೂಲವಾಗುವಂತೆ ಏನಾದರೂ ಮಾಡುತ್ತಲೇ ಇದ್ದ. ಇದರಲ್ಲಿ ಸರಯೂ ನದಿಯಲ್ಲಿ ಆಡುತ್ತಿರುವ ಮಕ್ಕಳನ್ನು ಎತ್ತಿ ಮಡುವಿಗೆ ಎಸೆಯುವುದೂ ಒಂದು ಕೆಲಸವಾಗಿತ್ತು.

ಸಗರ ಮಹಾರಾಜನಿಗೆ ಮಗನ ಭಾವನೆಗಳು, ಹಿನ್ನೆಲೆ ಯಾವುದೂ ಅರ್ಥವಾಗಿರಲಿಲ್ಲ. ಮುಂದೆ ಚಕ್ರವರ್ತಿ ಆಗಬೇಕಾದವನು ಹೀಗೆಲ್ಲ ನಡೆದುಕೊಳ್ಳುವುದೇ ಎಂದವನು ಕೋಪಗೊಳ್ಳುತ್ತಿದ್ದ, ಚಿಂತಿತನಾಗುತ್ತಿದ್ದ.  ತನ್ನ ರಾಜ ಕಾರ್ಯಗಳಲ್ಲಿ ಯಾವ ಬೆಂಬಲವನ್ನೂ ನೀಡದ ಇಂಥವನಿಂದ ಮುಂದೆ ರಾಜ್ಯದ ಗತಿಯೇನಾಗುವುದೋ ಎಂದು ಖಿನ್ನನಾಗುತ್ತಿದ್ದ.

ಕೊನೆಗೆ ತಡೆಯಲಾಗದೆ, ಬೇರೆ ದಾರಿಯಿಲ್ಲದೆ, ಮಗನ ಮೇಲೆ ಬರುತ್ತಿರುವ ಆಪಾದನೆಗಳನ್ನು ಸಹಿಸಲಾಗದೆ, ಪುತ್ರ ವಾತ್ಸಲ್ಯವನ್ನು ತೊರೆದು ಅವನನ್ನು ದೇಶದಿಂದ ಹೊರಹಾಕಿಬಿಟ್ಟ.

ಅಸಮಂಜಸನಿಗೆ ಅದೇ ಬೇಕಾಗಿತ್ತೇನೋ!

ತನ್ನ ಯೋಗ ಶಕ್ತಿಯಿಂದ ಸರಯೂ ನದಿಗೆಸೆದಿದ್ದ ಮಕ್ಕಳನ್ನೆಲ್ಲ ಬದುಕಿಸಿದ. ನಿರ್ಲಿಪ್ತನಾಗಿ ಅಯೋಧ್ಯೆಯನ್ನು ಬಿಟ್ಟು ದೂರ ಹೊರಟುಬಿಟ್ಟ.

ನದಿಗೆ ಎಸೆಯಲ್ಪಟ್ಟ ಮಕ್ಕಳೆಲ್ಲ ಬದುಕಿ ಬಂದದ್ದನ್ನು ನೋಡಿ ಅವರ ತಂದೆ ತಾಯಿಗಳಿಗೆಲ್ಲ ತುಂಬಾ ಸಂತೋಷ. `ಓಹ್‌, ಎಂತಹ ಮಹಾತ್ಮ ನಮ್ಮ ರಾಜಕುಮಾರ. ಎಂತಹ ಯೋಗ ಶಕ್ತಿ ಇರುವವನು. ಇಂತಹವನನ್ನು ಅರಿತುಕೊಳ್ಳದೆ ಸುಮ್ಮನೆ ದೇಶಾಂತರ ಓಡಿಸುವಂತಾಯಿತಲ್ಲ! ಎಂದೆಲ್ಲ ಚಡಪಡಿಸುತ್ತ ಸಗರನ ಬಳಿಗೆ ಬಂದರು.

`ಮಹಾರಾಜ, ನಾವೆಲ್ಲ ತಪ್ಪು ಮಾಡಿದೆವು. ಅಸಮಂಜಸ ರಾಜಕುಮಾರ ಸಾಮಾನ್ಯ ಮನುಷ್ಯನಲ್ಲ, ಅಸಾಮಾನ್ಯ ಯೋಗಿ. ನಮ್ಮ ದೇಶಕ್ಕೆ ದಾರಿದೀಪವಾಗ ಬಲ್ಲಂಥವನನ್ನು ನಾವೆಲ್ಲ ಕಳೆದುಕೊಂಡೆವು. ನಾವು ತಪ್ಪಾಗಿ ದೂರು ತಂದದ್ದಕ್ಕಾಗಿ ನಮ್ಮನ್ನು ಕ್ಷಮಿಸಬೇಕು!’ ಎಂದರು

ಸಗರ ಮಹಾರಾಜ ಇವೆಲ್ಲ ಮಾತುಗಳಿಂದ ಕಂಗೆಟ್ಟುಹೋದ. ಸಾವಿರಾರು ಮಕ್ಕಳನ್ನು ಕಳೆದುಕೊಂಡ ದುಃಖ ಒಂದು ಕಡೆ, ಇದ್ದೊಬ್ಬ ಸುಪುತ್ರನನ್ನು ತಾನೇ ಗಡಿಪಾರು ಮಾಡಿದ ಶೋಕ ಇನ್ನೊಂದು ಕಡೆ. ಇವನ ಶೋಕಕ್ಕೆ ಮಿತಿಯೇ ಇಲ್ಲದಂತಾಯಿತು.

ಆದರೆ ಕಾಲ ಮಿಂಚಿ ಹೋಗಿತ್ತು, ಚಿಂತಿಸಿ ಫಲವಿರಲಿಲ್ಲ!

ಸಗರ ಮಹಾರಾಜ ಮೊಮ್ಮಗ ಅಂಶುಮಾನನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಪ್ರೀತಿಯಿಂದ ಬೆನ್ನು ಸವರುತ್ತ ಹೇಳಿದ :

`ಮಗೂ ಅಂಶುಮಾನ್‌, ನಿನ್ನ ದೊಡ್ಡಪ್ಪಂದಿರೆಲ್ಲರೂ ಬೆಂಕಿಗಾಹುತಿಯಾದರು ಎಂಬ ಸುದ್ದಿ ಕೇಳಿಯೇ ನಾನು ಉಡುಗಿ ಹೋಗಿದ್ದೆ, ಈಗ ನಿನ್ನ ತಂದೆಯನ್ನು ವೃಥಾ ಕಾರಣ ದೇಶದಿಂದ ಅಟ್ಟಿ ದುಃಖವನ್ನು ಮೈಮೇಲೆ ಹಾಕಿಕೊಂಡಿದ್ದೇನೆ. ಮಗೂ, ಈಗ ನಿನ್ನಿಂದಲೇ ಈ ರಾಜ್ಯ ಮುಂದುವರಿಯಬೇಕಾಗಿದೆ. ನಿನ್ನ ದೊಡ್ಡಪ್ಪಂದಿರ ಉದ್ಧಾರವಾಗಬೇಕಾಗಿದೆ. ನಿನ್ನ ತಂದೆಯ ಹಿಂತಿರುಗುವಿಕೆ ಸಾಧ್ಯವಾಗಬೇಕಾಗಿದೆ. ಜೊತೆಗೆ, ನನ್ನ  ನೂರನೆಯ ಅಶ್ವಮೇಧ ಯಾಗ ಅಪೂರ್ಣವಾಗಿ ಹೋಗಿ ನಿಲ್ಲದಂತೆ ಪರಿಪೂರ್ಣವಾಗಬೇಕಾದರೆ ನೀನೀಗ ಕಾರ್ಯೋನ್ಮುಖನಾಗಬೇಕು, ಯಜ್ಞಾಶ್ವವನ್ನು ಹುಡುಕಿ ತರಬೇಕು! ಯಜ್ಞ ಮುಂದುವರಿಯಬೇಕು!’

ಅಂಶುಮಾನ್‌ ಹೇಳಿದ : `ತಾತ, ನಿಮ್ಮ ಮನದಾಳದ ನೋವನ್ನು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಇವೆಲ್ಲವೂ ನನ್ನ ನೋವು, ನನ್ನ ಕರ್ತವ್ಯವೂ ಆಗಿವೆ. ಇಗೋ, ಹೊರಟೆ, ಮೊದಲು ಯಜ್ಞಾಶ್ವವನ್ನು ಪಡೆದುಕೊಂಡು ಬರುತ್ತೇನೆ!

ಪಾದಕ್ಕೆರಗಿದ ಮೊಮ್ಮಗನಿಗೆ `ಆಯುಷ್ಮಾನ್‌ ಭವ!’ ಎಂದು ಆಶೀರ್ವದಿಸಿದ ಸಗರ ಮಹಾರಾಜ.

ಅಂಶುಮಾನ್‌ ತನ್ನ ದೊಡ್ಡಪ್ಪಂದಿರು ಹೊರಟಿದ್ದ ದಾರಿಯಲ್ಲೆ ಮುನ್ನಡೆದ. ಕಪಿಲ ಮಹಾಮುನಿಯನ್ನು ಕಂಡ. ಮುನಿಯ ಹಿಂದೆ ತನ್ನ ಯಜ್ಞಾಶ್ವನ್ನೂ ನೋಡಿದ.

ವಿಷ್ಣುವಿನ ಅವತಾರವಾದ ಆ ಮಹಾಮುನಿಯನ್ನು ನೋಡಿದ ಕೂಡಲೇ ಅಂಶುಮಾನ ಆತನಲ್ಲಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿ ಭಕ್ತಿಪೂರ್ವಕವಾಗಿ ಕೈಗಳನ್ನು ಜೋಡಿಸಿ ನಿಂತುಕೊಂಡ. ಮಾನಸಿಕವಾಗಿ ಆ ಮುನಿಗಳಿಗೆ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ :

`ಪ್ರಭುವೇ, ಇಂದಿನವರೆಗೆ ಬ್ರಹ್ಮದೇವರಿಗೂ ಕೂಡ ಧ್ಯಾನದಿಂದಲೂ, ಊಹಾತ್ಮಕ ಚಿಂತನೆಯಿಂದಲೂ ನಿಮ್ಮ ಸ್ಥಾನವನ್ನು ಅರ್ಥಮಾಡಿಕೊಳ್ಳಲಿಕ್ಕಾಗಲಿಲ್ಲ. ಅಂದ ಮೇಲೆ ನಮ್ಮಂತಹವರ ಬಗ್ಗೆ ಹೇಳಬೇಕಾದ್ದೇನಿದೆ? ಬ್ರಹ್ಮದೇವರೇ ನಮ್ಮನ್ನೆಲ್ಲ ನಾನಾ ರೂಪಗಳಲ್ಲಿ – ಅಂದರೆ, ದೇವತೆ, ಪ್ರಾಣಿ, ಮನುಷ್ಯ, ಪಕ್ಷಿ, ಪಶು ಎಂದು ವಿವಿಧ ರೂಪಗಳಲ್ಲಿ ಸೃಷ್ಟಿಸಿದವರು. ನಾವು ಸಂಪೂರ್ಣವಾಗಿ ಅಜ್ಞಾನದಲ್ಲಿದ್ದೇವೆ. ಆದ್ದರಿಂದ ದಿವ್ಯ ಪುರುಷರಾದ ನಿಮ್ಮನ್ನು ನಾವು ಹೇಗೆ ತಾನೇ ಅರಿಯಬಲ್ಲೆವು?’

`ನನ್ನ ದೊಡ್ಡಪ್ಪಂದಿರ ಮೇಲೂ ತ್ರಿಗುಣಗಳ ಪ್ರಭಾವವಿತ್ತು, ಆದ್ದರಿಂದಲೇ ಅವರಿಗೆ ಹೀಗಾಯಿತು. ಅವರಿಗೆ ನಿಮ್ಮನ್ನು ಅರಿಯಲಾಗಲಿಲ್ಲ ಎಂದೇ ನನಗನ್ನಿಸಿದೆ. ನೀವು ಭಗವಾನ್‌ ಬ್ರಹ್ಮದೇವರ ಪ್ರತ್ಯಕ್ಷ ಹಾಗೂ ಪರೋಕ್ಷ ಬುದ್ಧಿಗೂ ನಿಲುಕದವರು. ಆದ್ದರಿಂದಲೇ ನೀವು ನನಗೆ ಜ್ಞಾನೋದಯವನ್ನು ಕರುಣಿಸದೆ ನಾವು ನಿಮ್ಮನ್ನು ಅರಿಯುವುದು ಸಾಧ್ಯವಿಲ್ಲ.’

`ಪ್ರಭುವೇ, ನಿಮ್ಮ ಪಾದಕಮಲಗಳ ಅನುಗ್ರಹವು ಲೇಶಮಾತ್ರ ಲಭಿಸಿದರೂ ಸಾಕು. ಅಂಥವರು  ನಿಮ್ಮ  ವ್ಯಕ್ತಿತ್ವದ ಮಹಿಮೆಯನ್ನು ಕಿಂಚಿತ್ತಾದರೂ ಅರಿಯುವಂತಾಗುತ್ತಾರೆ. ಆದರೆ ದೇವೋತ್ತಮ ಪರಮ ಪುರುಷನನ್ನು ಅರಿಯಲಿಕ್ಕಾಗಿ ಊಹಾತ್ಮಕ ಚಿಂತನೆ ಮಾಡುವವರು ಅನೇಕ ವರ್ಷಗಳ ಕಾಲ ವೇದಾಧ್ಯಯನ ಮಾಡುತ್ತಿದ್ದರೂ ನಿಮ್ಮನ್ನು ಅರಿಯಲಾರರು.’

`ಪ್ರಭುವೇ, ನೀವು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿರುವಿರಿ; ಈ ಐಹಿಕ ದೇಹದ ಹೊದಿಕೆಯುಳ್ಳ ಜೀವಿಗಳು ನಿಮ್ಮನ್ನು ಕಾಣಲಾರರು; ಏಕೆಂದರೆ ಅವರ ಮೇಲೆ ತ್ರಿಗುಣಗಳಿಂದಾದ ಬಹಿರಂಗ ಶಕ್ತಿಯ ಪ್ರಭಾವವಿದೆ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳು ಅವರ ಬುದ್ಧಿಯನ್ನು ಆವರಿಸಿವೆ. ಅದರಿಂದಾಗಿ ಅವರು ಆ ಐಹಿಕ ತ್ರಿಗುಣಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಮಾತ್ರ ಕಾಣುತ್ತಾರೆ. ತಮೋಗುಣದ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಂದಾಗಿ ಜೀವಿಗಳು ಎಚ್ಚರವಿರುವಾಗಲೂ, ಮಲಗಿರುವಾಗಲೂ ತ್ರಿಗುಣಗಳ ಕಾರ್ಯಗಳನ್ನು ಮಾತ್ರ ಕಾಣುತ್ತಾರೆ; ಅವರು ನಿಮ್ಮನ್ನು ಕಾಣಲಾರರು!’

ಅಂಶುಮಾನನ ಪ್ರಾರ್ಥನಾ ನುಡಿಗಳನ್ನು ಹೇಳುತ್ತಿದ್ದ ಸಂದರ್ಭದಲ್ಲಿಯೇ ಸೂತ ಮುನಿಗಳು ಒಂದು ವಿವರಣಾತ್ಮಕ ಮಾತು ಹೇಳಿದರು :

`ಮುನಿಗಳೇ, ಭಗವಂತನ ಅಲೌಕಿಕ ಪ್ರೇಮ ಸೇವೆಯಲ್ಲಿ ನೆಲೆಸದೆ ದೇವೋತ್ತಮ ಪರಮ ಪುರುಷನನ್ನು ಅರಿಯಲು ಯಾರೂ ಸಮರ್ಥರಲ್ಲ. ಭಗವಂತನು ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾನೆ. ಆದರೂ ಬದ್ಧಾತ್ಮರ ಮೇಲೆ ಐಹಿಕ ತ್ರಿಗುಣಗಳ ಪ್ರಭಾವವಿದೆ. ಅದರಿಂದಾಗಿ ಅವರು ಐಹಿಕ ತ್ರಿಗುಣಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಮಾತ್ರ ಕಾಣುವರೇ ವಿನಾ ದೇವೋತ್ತಮ ಪರಮ ಪುರುಷನನ್ನಲ್ಲ. ಆದ್ದರಿಂದ ಪ್ರತಿಯೊಬ್ಬನೂ, ತನ್ನ ಅಂತರಂಗ, ಬಹಿರಂಗಗಳನ್ನು ಪವಿತ್ರಗೊಳಿಸಿಕೊಳ್ಳಲೇಬೇಕು. ನಮ್ಮನ್ನು ಬಾಹ್ಯವಾಗಿ ಶುಚಿಗೊಳಿಸಿಕೊಳ್ಳಲು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಕು. ಅಂತರಂಗದ ಶುದ್ಧತೆಗೆ ಸದಾ ಹರೇಕೃಷ್ಣ ಮಹಾಮಂತ್ರವನ್ನು ಜಪಿಸಿ ಹೃದಯವನ್ನು ಸ್ವಚ್ಛವಿಟ್ಟುಕೊಳ್ಳಬೇಕು. ದೇವೋತ್ತಮನ ಆರಾಧಕರೆಲ್ಲರೂ ಬಾಹ್ಯಾಭ್ಯಂತರಃ ಶುಚಿಃ ಎನ್ನುವ ತತ್ವವನ್ನು ಸದಾ ಪಾಲಿಸುತ್ತಿರಬೇಕು. ಆಗ ಒಂದು ದಿನ ದೇವೋತ್ತಮ ಪರಮ ಪುರುಷನನ್ನು  ಪ್ರತ್ಯಕ್ಷವಾಗಿ ಕಾಣಲು ಸಾಧ್ಯ!’

ಸೂತ ಮುನಿಗಳು ಇಷ್ಟು ಹೇಳಿ ಅಂಶುಮಾನನ ಮಾತುಗಳನ್ನು ಮುಂದುವರಿಸಿದರು :

ಕಪಿಲ ಮಹಾಮುನಿಗಳ ಮುಂದೆ ! ಜೋಡಿಸಿ ನಿಂತಿದ್ದ ಅಂಶುಮಾನ ಮೌನವಾಗಿ ತನ್ನ ಹೃದಯದಿಂದಲೇ ಭಕ್ತಿಪೂರ್ವಕ ಪ್ರಾರ್ಥನೆ ಮುಂದುವರಿಸಿದ.

`ಪ್ರಭುವೇ, ಐಹಿಕ ತ್ರಿಗುಣಗಳ ಪ್ರಭಾವದಿಂದ ಮುಕ್ತರಾದ ಋಷಿಗಳು – ಸನತ್‌, ಸನಕ, ಸನಂದನ, ಸನಾತನ ಎನ್ನುವ ನಾಲ್ಕು ಋಷಿಗಳು ಜ್ಞಾನಘನರಾದ ನಿಮ್ಮನ್ನು ಪರಿಭಾವಿಸಲು ಅರ್ಹರಾಗಿದ್ದಾರೆ. ಆದರೆ ನನ್ನಂತಹ ಅಜ್ಞಾನಿಗಳು ಹೇಗೆ ತಾನೆ ನಿಮ್ಮನ್ನು ಪರಿಭಾವಿಸಬಲ್ಲರು?

`ಸಂಪೂರ್ಣ ಪ್ರಶಾಂತರಾದ ಪ್ರಭುವೇ, ತ್ರಿಗುಣಗಳು, ಕಾಮ್ಯ ಕರ್ಮಗಳು, ತತ್ಪರಿಣಾಮವಾದ ಐಹಿಕ ನಾಮಗಳು, ರೂಪಗಳು ಎಲ್ಲವೂ ನಿಮ್ಮದೇ ಸೃಷ್ಟಿ; ಆದರೂ ಅವು ನಿಮ್ಮನ್ನು ಬಾಧಿಸಲಾರವು. ಆದ್ದರಿಂದ ನಿಮ್ಮ ದಿವ್ಯ ನಾಮವು ಐಹಿಕ ನಾಮಗಳಿಗಿಂತಲೂ ಬೇರೆಯೇ ಆಗಿದೆ. ನಿಮ್ಮ ರೂಪವೂ ಐಹಿಕ ರೂಪಗಳಿಗಿಂತಲೂ ಬೇರೆಯೇ ಆಗಿದೆ. ಜ್ಞಾನ ಪ್ರದಾನ ಮಾಡುವುದಕ್ಕಾಗಿಯೇ ನೀವು ಐಹಿಕ ದೇಹವನ್ನು ಹೋಲುವ ರೂಪವನ್ನು ತಳೆದಿದ್ದೀರಿ. ಆದರೆ ವಾಸ್ತವಿಕವಾಗಿ ನೀವು ಪರಮ ಮೂಲ ಪುರುಷರಾಗಿದ್ದೀರಿ. ಆದ್ದರಿಂದ ನಾನು ನಿಮಗೆ ಆದರಪೂರ್ಣ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

`ಪ್ರಭುವೇ, ಕಾಮ, ಲೋಭ, ಮತ್ಸರತೆ, ಮೋಹಗಳ ಪ್ರಭಾವದಿಂದ ತುಂಬ ಭ್ರಾಂತವಾದ ಮನಸ್ಸುಳ್ಳವರು ಕೇವಲ ಈ ಲೋಕದ ಹುಸಿ ಮಾಯೆ. ಅವರು ಮನೆ, ಹೆಂಡತಿ, ಮಕ್ಕಳಿಗೆ ಗಂಟು ಬಿದ್ದು ಈ ಸಾಂಸಾರಿಕ ಪ್ರಪಂಚದಲ್ಲಿ ಎಡೆಬಿಡದೆ ಅಲೆಯುವರು. ಸಕಲ ಜೀವಿಗಳ ಪರಮಾತ್ಮ, ದೇವೋತ್ತಮ ಪರಮ ಪುರುಷ, ನಿಮ್ಮನ್ನು ನೋಡಿದ್ದರಿಂದಲೇ ಎಲ್ಲ ಕಾಮನೆಗಳೂ ನನ್ನಿಂದ ದೂರವಾದವು. ಅವೇ ದುಸ್ತರವಾದ ಮೋಹ ಮತ್ತು ಸಾಂಸಾರಿಕ ಪ್ರಪಂಚದ ಬಂಧನಗಳಿಗೆ ಮೂಲ ಕಾರಣಗಳಾಗಿವೆ. ನಿಮ್ಮ ಪಾದ ಪದ್ಮಗಳಿಗೆ ಶರಣಾಗಿ ಬಂದಿದ್ದೇನೆ. ಅನುಗ್ರಹಿಸಿ ಕೃಪೆತೋರಿ!’

ವಿಷ್ಣುವಿನ ಶಕ್ತಿ ಸಂಪನ್ನ ಅವತಾರವಾದ ಕಪಿಲ ಮಹರ್ಷಿ ಮೆಲ್ಲನೆ ಮಂದಹಾಸ ಬೀರುತ್ತ ಕಣ್ಣು ತೆರೆದು ದೀನನಾಗಿ ತಮ್ಮ ಮುಂದೆ ಶರಣಾಗತನಾಗಿ ಕುಳಿತಿದ್ದ ಅಂಶುಮಾನನನ್ನು ನೋಡಿದರು. ಮಾತೃವಾತ್ಸಲ್ಯದ ನೋಟ ಅಲ್ಲಿ ಕಂಡಿತು. ಅತ್ಯಂತ ಕರುಣೆಯಿಂದ ಕಪಿಲ ಮುನಿಗಳು ಅಂಶುಮಾನನಿಗೆ ಅನುಗ್ರಹಿಸಿ ಜ್ಞಾನ ಮಾರ್ಗವನ್ನು ವಿವರಿಸಿದರು.

`ಪ್ರಿಯ ಅಂಶುಮಾನ್‌, ನಿನ್ನ ಅಜ್ಜನ ಯಜ್ಞದ ಪಶು ಇಲ್ಲಿದೆ. ತೆಗೆದುಕೋ. ಆದರೆ, ಸುಟ್ಟು  ಬೂದಿಯಾದ ನಿನ್ನ ದೊಡ್ಡಪ್ಪಂದಿರ ವಿಮೋಚನೆ ಗಂಗಾಜಲದಿಂದ ಮಾತ್ರ ಸಾಧ್ಯ. ಬೇರೆ ಯಾವ ಮಾರ್ಗದಿಂದಲೂ ಸಾಧ್ಯವಿಲ್ಲ!’

ಅಂಶುಮಾನ ಯಜ್ಞಾಶ್ವದೊಂದಿಗೆ ಅಯೋಧ್ಯೆಗೆ ಮರಳಿದನು. ಆನಂದಿತನಾದಿ ಸಗರ ಮಹಾರಾಜ ತನ್ನ ಶತಾಶ್ವಮೇಧವನ್ನು ಉಳಿದೆಲ್ಲ ಆಚರಣೆಗಳೊಂದಿಗೆ ಪೂರೈಸಿದನು.

ಮುಂದೆ ಸಗರ ಮಹಾರಾಜ ರಾಜ್ಯಭಾರವನ್ನು ಅಂಶುಮಾನನಿಗೆ ವಹಿಸಿ ಸಕಲ ಸಾಂಸಾರಿಕ ವ್ಯಾಕುಲತೆ ಮತ್ತು ಬಂಧನಗಳಿಂದ ಬಿಡುಗಡೆ ಹೊಂದಿದನು. ಪರಮ ಗುರಿಯನ್ನು ತಲುಪಿದನು. ಔರ್ವ  ಮುನಿಯು ಉಪದೇಶಿಸಿದ  ಮಾರ್ಗವನ್ನು  ಅನುಸರಿಸಿ ಪರಮಗತಿಯನ್ನು ಸಾಧಿಸಿದನು.

ಸೂತ ಮುನಿಗಳು ಹೇಳಿದರು :

`ಅಂಶುಮಾನನ ರಾಜವಂಶದ ವಿವರಣೆಯೊಂದಿಗೆ ಮಹಾಮಹಿಮನಾದ ಭಗೀರಥ ಭೂಮಿಗೆ ಗಂಗೆ ತಂದ ಸಾಹಸದ ಕಥೆಯನ್ನು ಮುಂದೆ ನೀವು ಕೇಳಲಿದ್ದೀರಿ!

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi