ಭಗವಂತನ ಜೊತೆಗೂಡಿ ಆನಂದಿಸಿ

ಜನರು ದೇವರ ಬಗೆಗೆ ನಿರೀಕ್ಷಿಸುವುದಕ್ಕಿಂತ ಕೃಷ್ಣನು ಹೆಚ್ಚು ವರ್ಣರಂಜಿತ ಮತ್ತು ಆಕರ್ಷಕ.

ದೇವರು. ಕೆಲವರಿಗೆ ಇದು ಕೃತಜ್ಞತೆ ಮತ್ತು ಮೆಚ್ಚುಗೆಯ ಭಾವನೆಯನ್ನು ಉಂಟುಮಾಡುತ್ತದೆ. ಇತರ ಅನೇಕ ಜನರಿಗೆ ಇದು ಕೋಪ, ಭಯ ಅಥವಾ ಅನುಮಾನವನ್ನು ಪ್ರಚೋದಿಸಬಹುದು. ಎರಡೂ ಸಂದರ್ಭಗಳಲ್ಲಿಯೂ ಸಾಮಾನ್ಯ ಮನುಷ್ಯನ ಮನಸ್ಸನ್ನು ತುಂಬುವ ಕಲ್ಪನೆಗಳು ಬಹುತೇಕ ತಪ್ಪು ಗ್ರಹಿಕೆಯದು. ಜನರು ಸ್ಪಷ್ಟ ಅಥವಾ ಕಾಯಂ ರೂಪವಿಲ್ಲದ ಭಗವಂತನನ್ನು ಚಿತ್ರಿಸಿಕೊಳ್ಳುತ್ತಾರೆ ಮತ್ತು ಅವನ ಪ್ರಾಥಮಿಕ ವ್ಯವಹಾರವು ಈ ಲೋಕವನ್ನು ನಡೆಸುವುದು ಎಂದು ಭಾವಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವನು ಈ ಲೋಕದ ವಾಸಿಗಳ ದೈಹಿಕ ಮತ್ತು ಮಾನಸಿಕ ಆಸೆಗಳನ್ನು ತೃಪ್ತಿಪಡಿಸುತ್ತಾನೆ. ಬೈಬಲಿನ ಸಾಮಾನ್ಯ ವ್ಯಾಖ್ಯಾನಗಳಿಂದ ಹೊಮ್ಮಿರುವ ದೇವರನ್ನು ಕುರಿತ ಈ ಭಾವನೆಗಳು ಪಾಶ್ಚಿಮಾತ್ಯ ಸಮಾಜದಲ್ಲಿ ವ್ಯಾಪಿಸಿದೆ. ಎಷ್ಟು ಮಟ್ಟಕ್ಕೆ ಎಂದರೆ ಮುಖ್ಯವಾಹಿನಿಯ ಚಲನಚಿತ್ರಗಳು ಅನಿವಾರ್ಯವಾಗಿ ಅಂತಹ ದೇವರನ್ನೇ ಬಿಂಬಿಸುತ್ತವೆ. ಆದರೆ  ಪುರಾತನ ಭಾರತದ ಧರ್ಮಗ್ರಂಥಗಳು ಭಿನ್ನವಾದ ನಿಜಾಂಶವನ್ನು ಪ್ರಸ್ತುತಪಡಿಸುತ್ತವೆ. ಸತ್ಯದಲ್ಲಿ ದೇವರನ್ನು ಕಾತರದಿಂದ ಅರಸುವ ಅಪರೂಪದ ಆತ್ಮಗಳಿಗಾಗಿ ಉದ್ದೇಶಿಸಿರುವ ಅವು ತನ್ನ ಮೂಲ ರೂಪದಲ್ಲಿ ಅವನು ಪರಮ ಪುರುಷ ಕೃಷ್ಣ ಎಂದು ಹೊರಗೆಡಹುತ್ತವೆ. ಕೃಷ್ಣನು ತನ್ನದೇ ಆಧ್ಯಾತ್ಮಿಕ ಲೋಕದಲ್ಲಿ ವಾಸಿಸುತ್ತಾನೆ ಮತ್ತು ತನ್ನ ಭಕ್ತರ ಸೇವೆಯನ್ನು ಸ್ವೀಕರಿಸುತ್ತ ಆನಂದದಿಂದ ತನ್ನ ಕಾಲವನ್ನು ಕಳೆಯುತ್ತಾನೆ. ಈ ರೀತಿ, ಅವನು ದಿಟವಾಗಿ ಎಲ್ಲ ಸೃಷ್ಟಿಯ ಅಂತಿಮ ಕಾರಣ ಮತ್ತು ಎಲ್ಲ ಜೀವಿಗಳ ಆದಿಸ್ವರೂಪದ ಪಿತನಾದರೂ ಕೃಷ್ಣನು ಬಹಳ ಜನರು ಊಹಿಸುವಂತಹ ದೇವರಲ್ಲ.

ದೇವರ ರೂಪ

ದೇಹವಿರುವ ಭಗವಂತನು ಸೀಮಿತನು ಎಂಬ ಕಲ್ಪನೆಯಿರುವುದರಿಂದ, ಅವನನ್ನು ಸಾಮಾನ್ಯವಾಗಿ ಬೆಳಕಿನ ಬಿಂಬಗಳ ವರ್ತುಲಕ್ಕೆ ಇಳಿಸಿಬಿಡಲಾಗುತ್ತದೆ. ಭಗವಂತನ ಮುಖ, ಕೈಗಳು ಮತ್ತು ಬೆನ್ನಿನಂತಹ ದೇಹದ ಅನೇಕ ಭಾಗಗಳ ಬಗೆಗೆ ಹಳೆಯ ಒಡಂಬಡಿಕೆಯು ಪ್ರಸ್ತಾಪಿಸಿದರೂ ಅನೇಕ ಓದುಗರು ಪ್ರಮುಖ ಯಹೂದಿ ತತ್ತ್ವಜ್ಞಾನಿ ಮೋಸಸ್‌ ಮೈಮೊನೈಡ್‌ ಅನ್ನು ಅನುಸರಿಸಿ ಈ ವರ್ಣನೆಗಳನ್ನು ಸಾಂಕೇತಿಕ ಎಂದು ಸ್ವೀಕರಿಸುತ್ತಾರೆ. ಹೊಸ ಒಡಂಬಡಿಕೆಯು ಪಿತನಾದ ದೇವರ ಬಗೆಗೆ ಅಸ್ಪಷ್ಟವಾಗಿಯೇ ಬಿಟ್ಟು ಬಿಟ್ಟಿದೆ ಮತ್ತು ಪುತ್ರ, ಜೀಸಸ್‌ನ ವ್ಯಕ್ತಿತ್ತ್ವದ ಮೇಲೆ ಕೇಂದ್ರೀಕರಿಸಿದೆ. ಇದರ ಪರಿಣಾಮವೆಂದರೆ, ಬಹಳ ಜನರು ದೇವರನ್ನು ಕುರಿತ ನಿರಾಕಾರ ಕಲ್ಪನೆಗೆ ಅಂಟಿಕೊಂಡಿದ್ದಾರೆ. ಉದಾಹರಣೆಗೆ, 1975ರಲ್ಲಿ, ಇರಾನಿನಲ್ಲಿ ಶ್ರೀಲ ಪ್ರಭುಪಾದರೊಂದಿಗಿನ ಸಂವಾದದಲ್ಲಿ ಒಬ್ಬ ಅತಿಥಿಯು ದೇವರಿಗೆ “ನಿರ್ದಿಷ್ಟ ರೂಪ ಇರುವ ಅಗತ್ಯವಿಲ್ಲ” ಎಂದು ಪ್ರತಿಪಾದಿಸಿದ್ದರು. ಮತ್ತೊಬ್ಬ ಅತಿಥಿಯು, “ಬೆಳಕಿನ ಶಕ್ತಿಯು ಅಸ್ತಿತ್ವದಲ್ಲಿರುವ ಎಲ್ಲದರ ರೂಪವನ್ನು ಪಡೆದುಕೊಳ್ಳುವುದಿಲ್ಲ. ಅದು ವಿಶ್ವಗಳ ಸೃಷ್ಟಿಕರ್ತ” ಎಂದು ಹೇಳಿದರು. ದಿಟವಾಗಿ, ದೇವರ ಅಸ್ಪಷ್ಟಾಕಾರ “ಶ್ವೇತ ಬೆಳಕ”ನ್ನು ವಿವರಿಸುವ ಜನರು ಯಾವಾಗಲೂ ಅಸಂಖ್ಯ.

ಈ ನಂಬಿಕೆಯಂತೆ, ಅಂತಿಮವಾಗಿ ದೇವರು ಆಕಾರರಹಿತ ಮತ್ತು ವ್ಯಕ್ತಿತ್ವ ಇಲ್ಲದವ ಎಂದು ಬಿಂಬಿಸುವುದು ಆಧುನಿಕ ಸಿನಿಮಾದ ಪ್ರವೃತ್ತಿಯಾಗಿದೆ.

ಬ್ರಹ್ಮ ಸಂಹಿತೆಯು ಅವನನ್ನು “ಕಮಲ ದಳದಂತೆ ಅರಳುತ್ತಿರುವ ಕಣ್ಣುಗಳು”, “ನವಿಲುಗರಿಯಿಂದ ಅಲಂಕೃತವಾದ ಶಿರ” ಮತ್ತು “ನೀಲಿ ಮೋಡಗಳ ರಂಗಿನ ಬಣ್ಣದ ಛಾಯೆ”ಯ ದೇಹ ಉಳ್ಳವನು ಎಂದು ವರ್ಣಿಸಿದೆ. ಅವನು ತನ್ನ ಕೈಗಳಲ್ಲಿ ಕೊಳಲನ್ನು ಹಿಡಿದಿದ್ದಾನೆ.  ಭಾಗವತವು ಇನ್ನೂ ಹೆಚ್ಚು ಲಕ್ಷಣಗಳನ್ನು ವಿವರಿಸುತ್ತದೆ : ಶ್ರೀವತ್ಸ ಎಂದು ಕರೆಯುವ ಅವನ ಎದೆಯ ಮೇಲಿನ ಬಿಳಿಯ ಗುಂಗುರು ಕೂದಲು (3.19.15), ಅವನು ಧರಿಸಿದ ಪೀತಾಂಬರ (3.4.7), ಕಿವಿಯಲ್ಲಿನ ಮಕರ ಕುಂಡಲ (8.18.2), ಕೊರಳಲ್ಲಿ ಕೌಸ್ತುಭ ರತ್ನ (4.8.48) ಮತ್ತು ಅವನ ಪಾದಗಳು ಭಿನ್ನ ಎನ್ನುವುದನ್ನು ತೋರುವ ಪದ್ಮ, ತೆನೆ ಹಾಗೂ ಅಂಕುಶ ಲಕ್ಷಣಗಳುಳ್ಳ ಪಾದದ ಗುರುತುಗಳು (10.38.25).

ಕೃಷ್ಣನ ರೂಪವು ಅವನನ್ನು ಸೀಮಿತಗೊಳಿಸುವುದಿಲ್ಲ. ಏಕೆಂದರೆ ಲೌಕಿಕಕ್ಕಿಂತ ಆಧ್ಯಾತ್ಮಿಕವಾಗಿರುವುದರಿಂದ, ನಮ್ಮ ದೇಹಗಳನ್ನು ನಿಯಂತ್ರಿಸುವ ದೈಹಿಕ ಕಾನೂನುಗಳು ಅವನನ್ನು ನಿರ್ಬಂಧಿಸುವುದಿಲ್ಲ ಎಂದು ಶ್ರೀಲ ಪ್ರಭುಪಾದರು ಮೇಲೆ ಹೇಳಿದ ಇರಾನ್‌ ಸಂವಾದದಲ್ಲಿ ಸಭಿಕರಿಗೆ ಬೋಧಿಸಿದರು. ನಮ್ಮ ಈ ಮಂದ ಲೌಕಿಕ ಇಂದ್ರಿಯಗಳಿಂದ ಈ ಭವ್ಯ ರೂಪವನ್ನು ನೋಡುವುದು ಸಾಧ್ಯ ಎಂದು ನಾವು ನಿರೀಕ್ಷಿಸಬಾರದು. ಬದಲಿಗೆ ಕೃಷ್ಣನು ನಮ್ಮ ಪ್ರೀತಿಯ ಭಾವನೆಗಳಿಗೆ ಸ್ಪಂದಿಸುವವರೆಗೂ ಕಾಯಬೇಕು.

ಭಗವಂತನ ಲೋಕ

ಮತ್ತೊಂದು ವಿಷಯವೆಂದರೆ, ಭಗವಂತನ ಮೂಲ ಲೀಲೆಗಳ ಪ್ರದೇಶ.   ಅವನು ಹೇಗಾದರೂ ಕಾಣಲಿ, ದೇವರ ಸ್ಥಳವು ಇಲ್ಲಿ, ಭೂ ಗ್ರಹದ ನಿಯಂತ್ರಣದಲ್ಲಿ ಎನ್ನುವುದು ಪ್ರಾಯೋಗಿಕವಾದ ಒಟ್ಟಭಿಪ್ರಾಯ. ಈ ಜನ್ಮದ ಅನಂತರದ ಸ್ವರ್ಗದ ಜೀವನದ ಬಗೆಗೆ ಬೈಬಲ್‌ ಪದೇ ಪದೇ ಪರೋಕ್ಷವಾಗಿ ಪ್ರಸ್ತಾವಿಸಿದರೂ ಆ ಬದುಕಿನಲ್ಲಿ ಏನೇನಿದೆ ಎನ್ನುವುದರ ಬಗೆಗೆ ಹೆಚ್ಚೇನೂ ತಿಳಿಸಿಲ್ಲ. ಪರಿಣಾಮವಾಗಿ, ಭಗವಂತನ ಸಾಮ್ರಾಜ್ಯವು ಬಹಳ ಜನರ ಪ್ರಜ್ಞೆಯ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿದೆ. ಹೇಗೆ? ವಿಶೇಷವಾಗಿ ಆಕರ್ಷಕವಲ್ಲದ, ಆದರೆ ಸಹಾನುಭೂತಿ ಮತ್ತು ಸುರಕ್ಷಿತ ಹಾಗೂ ಇಲ್ಲಿನ “ನಿಜವಾದ” ಬದುಕು ಮುಗಿದ ಮೇಲೆ ಹೋಗಲು ಒಂದು ರೀತಿಯಲ್ಲಿ ಶಾಶ್ವತವಾದ ನಿವೃತ್ತಿ ಸಮುದಾಯದ ಒಳ್ಳೆಯ ಸ್ಥಳ. ಈ ವಿಶ್ವದ ಇನ್ನಿತರ ಗ್ರಹಗಳ ಬಗೆಗೆ ಬೈಬಲ್‌ ಹೆಚ್ಚೂ ಕಡಮೆ ಮೌನವಾಗಿದೆ. ಆಧುನಿಕ ವಿಜ್ಞಾನವು ಅವುಗಳನ್ನು ಜೀವರಹಿತ ಎಂದು ಭಾವಿಸಿದೆ. ಆದುದರಿಂದ ಅವುಗಳ ಬಗೆಗೆ ಭಗವಂತನು ಲಕ್ಷಿಸುತ್ತಾನೆ ಎಂದು ನಿರೀಕ್ಷಿಸಲು ಕಾರಣಗಳಿಲ್ಲ. ಆದುದರಿಂದ, ನಿಜವಾಗಿಯೂ ಆಸಕ್ತಿದಾಯಕ ಘಟನೆಗಳು ನಡೆಯುವ ಏಕೈಕ ಸ್ಥಳವಾದ ನಮ್ಮ ಗ್ರಹದ ಮೇಲೆ ಭಗವಂತನ ಗಮನ, ವಿಶೇಷವಾಗಿ ಅಲ್ಲದಿದ್ದರೂ ಪ್ರಮುಖವಾಗಿ ಕೇಂದ್ರೀಕೃತವಾಗಿದೆ ಎಂದುಕೊಳ್ಳಲಾಗಿದೆ.

ಭಗವಂತನ ಸಾಮ್ರಾಜ್ಯದಲ್ಲಿ ಈ ಒಂದು ಗ್ರಹಕ್ಕಿಂತ ಇನ್ನೂ ಹೆಚ್ಚಿನವು ಇವೆ ಎಂದು ಭಾಗವತವು ತೋರಿಸುತ್ತದೆ. 5ನೆಯ ಸ್ಕಂಧವು ಹೇಗೆ ನಮ್ಮ ಬ್ರಹ್ಮಾಂಡವು 14 ಗ್ರಹ ವ್ಯವಸ್ಥೆಯನ್ನು ಹೊಂದಿದೆ, ಪ್ರತಿಯೊಂದೂ ಅಸಂಖ್ಯ ಪ್ರದೇಶಗಳಿಂದ ಮಾಡಲ್ಪಟ್ಟಿದೆ ಮತ್ತು ಭಿನ್ನ ಜೀವಿಗಳಿಗೆ ವಾಸ ಸ್ಥಳವಾಗಿದೆ ಎನ್ನುವುದನ್ನು ವಿವರಿಸುತ್ತದೆ. ಈ ವಿಶ್ವವು ಅಂತಹ ಅಥವಾ ಅದಕ್ಕಿಂತ ದೊಡ್ಡದಾದ ಅಸಂಖ್ಯ ಬ್ರಹ್ಮಾಂಡಗಳಲ್ಲಿ ಕೇವಲ ಒಂದು. ಹೀಗಾಗಿ, ಭಗವಂತನ ಜಾತ್ಯತೀತ ಸಾಮ್ರಾಜ್ಯವು ಬಹಳ ಜನರು ಅರಿಯಲು ಸಾಧ್ಯವಾಗುವುದಕ್ಕಿಂತ ಬಹಳ ಆಚೆಗೆ ವಿಸ್ತರಿಸಿದೆ. ಆದರೆ ಒಟ್ಟಾರೆ, ಸೃಷ್ಟಿಯಾಗಿರುವ ಲೋಕದ ಆಚೆಗೆ ಆಧ್ಯಾತ್ಮಿಕ ಲೋಕವಿದೆ. ಭಗವದ್ಗೀತೆಯಲ್ಲಿ ಕೃಷ್ಣನು “ಈ ವ್ಯಕ್ತ ಮತ್ತು ಅವ್ಯಕ್ತ ವಸ್ತುವಿಗೆ ಶಾಶ್ವತ ಮತ್ತು ಅಲೌಕಿಕ”ವಾದ ಆ ಲೋಕವನ್ನು ತನ್ನ ಪರಮ ಧಾಮವೆಂದು ವಿವರಿಸುತ್ತಾನೆ (8.20-21). ಅಸಂಖ್ಯ ಲೌಕಿಕ ವಿಶ್ವಗಳ ಆಡಳಿತವನ್ನು ತನ್ನ ವಿವಿಧ ಬದಲಿ ಅಹಂಗಳಿಗೆ ಬಿಟ್ಟುಕೊಟ್ಟು ಆದಿ ದೇವ ಕೃಷ್ಣನು ತನ್ನ ವಿಶ್ರಾಂತ ಸಮಯವನ್ನು ಅಲ್ಲಿ ಕಳೆಯುತ್ತಾನೆ. (ದಿಟವಾಗಿ, ಭೂಮಿಯನ್ನು ಅಸ್ತಿತ್ವದ ಕೇಂದ್ರವೆಂದು ಕೊಂಡಾಡುವುದರಿಂದ ದೂರವಾಗಿ, ಭಾಗವತವು ಇಡೀ ಲೌಕಿಕ ಸೃಷ್ಟಿಯನ್ನು ಕೇವಲ ಕೃಷ್ಣನ ಕನಸು ಎಂದು ಪ್ರಸ್ತುತಪಡಿಸುತ್ತದೆ.)

ಪ್ರತಿಯೊಂದು ಅನಂತ ಆಧ್ಯಾತ್ಮಿಕ ಗ್ರಹಗಳಲ್ಲಿ ಅಥವಾ ವೈಕುಂಠಗಳಲ್ಲಿ, ನಾರಾಯಣನಾಗಿ ಕೃಷ್ಣನು ಅಪೂರ್ವ ರೂಪವನ್ನು ಹೊಂದಿದ್ದಾನೆ ಮತ್ತು ವಿಶೇಷವಾಗಿ ಆ ರೂಪಕ್ಕೆ ಆಕರ್ಷಿತರಾದ ಜೀವಿಗಳ ಜೊತೆ ಪ್ರೀತಿಯ ವಿನಿಮಯದಲ್ಲಿ ತೊಡಗಿದ್ದಾನೆ. ಮುಖ್ಯ ಗ್ರಹ ಗೋಲೋಕ ವೃಂದಾವನದಲ್ಲಿ ಕೃಷ್ಣನು ತನ್ನ ಮೂಲ ರೂಪದಲ್ಲಿ, ತನ್ನ ಅತ್ಯಂತ ಆಪ್ತ ಭಕ್ತರ ಜೊತೆಯಲ್ಲಿ, ಅವರ ಪ್ರೀತಿ ಮತ್ತು ವಾತ್ಸಲ್ಯದಲ್ಲಿ ಶಾಶ್ವತವಾಗಿ ಸುಖಿಸುತ್ತ ಜೀವಿಸುತ್ತಿದ್ದಾನೆ. ಗೋಲೋಕ ವೃಂದಾವನದಲ್ಲಿ ಅಮೃತದಂತಹ ಜಲ ಉಳ್ಳ ಸರೋವರಗಳು ರತ್ನಗಳಿಂದ ಮಾಡಿರುವ ತೀರವನ್ನು ಆವರಿಸುತ್ತವೆ, ವೃಕ್ಷವು ಬಯಸಿದ್ದನ್ನೆಲ್ಲ ನೀಡುತ್ತವೆ, ನಡಿಗೆಯೇ ನೃತ್ಯ, ಮಾತೇ ಹಾಡು ಮತ್ತು ಕೃಷ್ಣನು ತನ್ನ ಮೂಲ ಪ್ರಕೃತಿ ಗುಣವನ್ನು ಪ್ರದರ್ಶಿಸುತ್ತಾನೆ. ನಮ್ಮ ಲೋಕದ ಕಾರ್ಯಭಾರವನ್ನು ಸ್ವತಃ ವಹಿಸಿಕೊಳ್ಳುವುದಕ್ಕಿಂತ ಅವನು ತನ್ನದೇ ಲೋಕದಲ್ಲಿ ಪ್ರೀತಿಯ ಬಾಂಧವ್ಯದ ಆನಂದದಲ್ಲಿಯೇ ಉಳಿಯಲು ಇಷ್ಟಪಡುತ್ತಾನೆ.

ಭಗವಂತನ ಪಾತ್ರ

ಈ ಲೋಕದ ವಸ್ತುಗಳಿಗಾಗಿ ನಮ್ಮ ಹಂಬಲವನ್ನು ತೃಪ್ತಿಪಡಿಸುವುದೇ ಭಗವಂತನ ಮುಖ್ಯ ವ್ಯವಹಾರವೆಂದು ಭಾವಿಸುವುದೇ ಭಗವಂತನನ್ನು ಕುರಿತಂತೆ ಇರುವ ಸಾಮಾನ್ಯ ತಪ್ಪು ಗ್ರಹಿಕೆಗಳಲ್ಲಿ ಅತ್ಯಂತ ಹಾನಿಕರವಾದುದು. ಹೆಚ್ಚೂ ಕಮ್ಮಿ ಬೈಬಲ್‌ ದೇವರನ್ನು ತಂದೆಯ ಪಾತ್ರದಲ್ಲಿಟ್ಟಿದೆ. ಆದುದರಿಂದ ನಮ್ಮನ್ನು ಕಾಪಾಡುವುದು ಮತ್ತು ನಮ್ಮ ಸಂತೋಷಕ್ಕೆ ವಸ್ತುಗಳನ್ನು ತಂದು ಕೊಡುವುದು ನಮ್ಮ ಜೈವಿಕ ತಂದೆ ಎಂದು ನಾವು ನೋಡುವಂತೆ, ನಾವು ನಮ್ಮ ಲೌಕಿಕ ಆಸೆಗಳನ್ನು ಪೂರೈಸಲು ಸ್ವರ್ಗದ ತಂದೆಯತ್ತ ತಿರುಗುತ್ತೇವೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಕ್ರಿಸ್‌ಮಸ್‌ ಸಮಯದಲ್ಲಿ ಅಮೆರಿಕದ ಮಕ್ಕಳಿಗೆ ಸಾಂತಾಕ್ಲಾಸ್‌ ಇದ್ದಂತೆ ಭಗವಂತನು ಅವರ ತಂದೆತಾಯಿಗೆ ಇಡೀ ವರ್ಷ ಸಾಂತಾಕ್ಲಾಸ್‌. ಅಂದರೆ, ಪರೋಪಕಾರಿ ಮತ್ತು ಗಡ್ಡಧಾರಿ ಹಿರಿಯ ವ್ಯಕ್ತಿಯು ಅವರ ಸಾಮಾನುಗಳ ಪಟ್ಟಿಯನ್ನು ನೋಡಿ ಅವುಗಳನ್ನು ಪೂರೈಸಬೇಕು.

ಆದರೆ ಕೃಷ್ಣನು ಮುಖ್ಯ ಬೇಡಿಕೆಗಳ ಪೂರೈಕೆಗಾರನಲ್ಲ, ಆದರೆ ಪರಮ ಭೋಕ್ತ. ಎಲ್ಲ ಜೀವಿಗಳ ಹೃದಯಗಳಲ್ಲಿ ಪರಮಾತ್ಮನ ರೂಪದಲ್ಲಿ ನೆಲೆಸಿ ಅವನು ನಾವು ಪಡೆಯುವ ಎಲ್ಲ ನೋವು ಮತ್ತು ನಲಿವನ್ನು ಮಂಜೂರು ಮಾಡುತ್ತಾನೆ. ಆದರೆ ಭಗವಾನ್‌ ಆಗಿ ತನ್ನ ಮೂಲ ರೂಪದಲ್ಲಿ ಅವನು ಮೇಲೆ ತಿಳಿಸಿದಂತೆ ಆಧ್ಯಾತ್ಮಿಕ ಲೋಕದಲ್ಲಿ ತನ್ನ ಶಾಶ್ವತ ಮಿತ್ರರು ಮತ್ತು ಬಂಧುಗಳೊಂದಿಗೆ ಆನಂದದಿಂದ ಆಡುತ್ತಾನೆ. ಅವನು ಲೌಕಿಕ ಲೋಕಕ್ಕೆ ಬರುವ ನಿರ್ಧಾರ ಮಾಡಿದಾಗ, ಅವನ ವಿವಿಧ ಅವತಾರಗಳ ಲೀಲೆಯು ತೋರಿಸುವಂತೆ ಅದು ಆನಂದವನ್ನು ಹುಡುಕುವುದಕ್ಕಾಗಿ. ಒಳ್ಳೆಯ ಕಾಳಗವನ್ನು ಆನಂದಿಸಲು ಬಯಸಿದರೆ ಅವನು ನರಸಿಂಹನಾಗಿ ಬರುತ್ತಾನೆ. ಬೆನ್ನಿನ ಮೇಲಿನ ಪರಚುವಿಕೆಯನ್ನು ಆನಂದಿಸಬೇಕೆಂದರೆ ಅವನು ಕೂರ್ಮನಾಗಿ ಬರುತ್ತಾನೆ. ಮಣ್ಣಿನಲ್ಲಿ ಆಡುವ ಆಸೆಯಾದರೆ ಅವನು ವರಾಹನಾಗುತ್ತಾನೆ. ತನ್ನ ಭಕ್ತರ ಬಗೆಗೆ ಹಾಸ್ಯ ಮಾಡಬೇಕೆಂದರೆ, ಕಾಲೆಳೆಯಬೇಕೆಂದರೆ ಅವನು ವಾಮನ ಅಥವಾ ಮತ್ಸ್ಯನಾಗಿ ಅವತರಿಸುತ್ತಾನೆ.

ಆದರೆ ಬೇರೆ ಜೀವಿಗಳಿಗೆ ಹಾನಿ ಉಂಟುಮಾಡಿ ಕೃಷ್ಣನು ಆನಂದಿಸುತ್ತಾನೆ ಎಂದು ಯಾರೂ ಭಾವಿಸಬಾರದು. (ದಿಟವಾಗಿ ಅವನು ಭಗವದ್ಗೀತೆಯಲ್ಲಿ ತಾನು ಅಂತಿಮ ಭೋಕ್ತ ಮತ್ತು ಪ್ರತಿಯೊಬ್ಬರ ಮಿತ್ರ ಎರಡೂ ಕೂಡ ಎಂದು ಸಾರುತ್ತಾನೆ (5.29)). ಅದಕ್ಕೆ ಪ್ರತಿಯಾಗಿ ಇತರರ ನಿಜವಾದ ಸಂತೋಷಕ್ಕೆ ಅವನ ಆನಂದವು ಅಗತ್ಯ. ಕೃಷ್ಣನು ಪರಮ ಪರಿಪೂರ್ಣ. ಆದುದರಿಂದ ನಿಜವಾಗಿಯೂ ಅವನಿಂದ ಯಾವುದೂ ಪ್ರತ್ಯೇಕವಲ್ಲ. ಪರಿಣಾಮವಾಗಿ, ಯಾವುದು ಏನೇ ಇರಲಿ, ಎಷ್ಟೇ ಸ್ವತಂತ್ರವಾಗಿರಲಿ, ಭಗವಂತನೊಂದಿಗೆ ಹೊಂದಿರುವ ಬಾಂಧವ್ಯ ಸಂಪರ್ಕದ ಅವಲಂಬನೆ ಸತ್ಯವಾದುದು. ಅಂದರೆ, ಅಸ್ತಿತ್ವದ ವೃತ್ತಕ್ಕೆ ಒಂದೇ ಒಂದು ಕೇಂದ್ರವಿರುವುದು ಸಾಧ್ಯ ಮತ್ತು ಎಲ್ಲವೂ ಅದರ ಸುತ್ತ ಸುತ್ತಬೇಕು. ಹಾಗೆ ನೆಲೆಗೊಂಡ ಎಲ್ಲ ಜೀವಿಗಳು ದ್ವಿತೀಯ ಭೋಕ್ತರು ಮತ್ತು ಕೃಷ್ಣನೊಬ್ಬನೇ ನೇರವಾದ ಭೋಕ್ತ. ಹೇಗೆ ಉದರಕ್ಕೆ ನೀಡಿದ ಆಹಾರವು ಇಡೀ ದೇಹವನ್ನು ಪೋಷಿಸುತ್ತದೆ ಮತ್ತು ಬೇರಿಗೆ ಹಾಕಿದ ನೀರು ಇಡೀ ಮರವನ್ನು ಪೋಷಿಸುತ್ತದೆ ಎಂದು ಭಾಗವತವು (4.31.14) ವಿಶ್ಲೇಷಿಸುತ್ತದೆ. ಕನ್ನಡಿ ಮುಂದೆ ನಿಂತಿರುವ ವ್ಯಕ್ತಿಗೆ ಆಭರಣಗಳನ್ನು ತೊಡಿಸಿದರೆ, ಆ ಮನುಷ್ಯನ ಪ್ರತಿಬಿಂಬ ಕೂಡ ಅಲಂಕರಿಸಲ್ಪಡುತ್ತದೆ ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ.

ನಾವು ಈ ವಾಸ್ತವವನ್ನು ಒಪ್ಪಿಕೊಂಡು ಮತ್ತು ನಮ್ಮ ಸಹಜ ಸ್ವಭಾವಕ್ಕೆ ಅನುಗುಣವಾಗಿ ಭಗವಂತನಿಗೆ `ಪ್ರದಕ್ಷಿಣೆ’ ಮಾಡಿದಾಗ ನಾವು ಸರಿಯಾಗಿ ನೆಲೆಸಿರುತ್ತೇವೆ ಮತ್ತು ಸಹಜವಾಗಿ ಸಂತೋಷದಿಂದ ಇರುತ್ತೇವೆ. ಆದರೆ ನಾವು ನಮ್ಮ ಅವಲಂಬಿತ ಸ್ಥಿತಿಯನ್ನು ನಿರ್ಲಕ್ಷಿಸಿ ಮತ್ತು ಕೃಷ್ಣನ ಸ್ಥಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗ, ನಾವು ಕೃತಕ ಸಂಕಟದಲ್ಲಿ ಸಿಕ್ಕಿ ಬೀಳುತ್ತೇವೆ. ನಿಜವಾದ ಆನಂದದ ಏಕೈಕ ಮೂಲದಿಂದ ಸ್ವತಃ ಸಂಪರ್ಕ ಕಳೆದುಕೊಂಡು ನಾವು ತಾತ್ಕಾಲಿಕ ಮತ್ತು ಅನಿವಾರ್ಯವಾಗಿ ಹೆಚ್ಚಿನ ದುಃಖಕ್ಕೆ ಒಯ್ಯುವ ಅದರ ಮಂಕಾದ ಪ್ರತಿಬಿಂಬ, ಇಂದ್ರಿಯ ತೃಪ್ತಿಯಲ್ಲಿ ಭಾಗಿಯಾಗುವ ದುರವಸ್ಥೆಗೆ ತಲಪುತ್ತೇವೆ. (ಗೀತೆ 5.22). ಆದುದರಿಂದ ನಾವು ಭಕ್ತಿಯೋಗ ವಿಧಾನವನ್ನು ಕೈಗೊಳ್ಳಬೇಕು ಮತ್ತು ಭಗವಂತನ ಸೇವೆಯಲ್ಲಿ ನಿರತರಾಗಬೇಕು ಎಂದು ನಾರದ ಮುನಿಗಳು ಶಿಫಾರಸು ಮಾಡುತ್ತಾರೆ. ಅದೇ ಕಾರಣಗಳಿಗಾಗಿ, ಕೃಷ್ಣನು ನಮ್ಮ ಕ್ಷಣಿಕ ಮತ್ತು ವಿಚಿತ್ರ ಬಯಕೆಗಳನ್ನು ಈಡೇರಿಸಲು ಕಾಲ ವ್ಯರ್ಥ ಮಾಡುವ ಬದಲು ಅವನ ಚರಣಾರವಿಂದಗಳಿಗೆ ಸೇವೆ ಸಲ್ಲಿಸಲು ನಮಗೆ ಪ್ರೇರೇಪಿಸಲು ಬಯಸುತ್ತಾನೆ.

ನಾವು ನೋಡುವಂತೆ, ವೈದಿಕ ಸಾಹಿತ್ಯದಲ್ಲಿ ವರ್ಣಿಸಿರುವ ಶ್ರೀ ಕೃಷ್ಣನು ಬಹಳ ಜನರು ಯೋಚಿಸುವಂತಹ ದೇವರಲ್ಲ. ಬೈಬಲ್‌ನಿಂದ ಸಮಕಾಲೀನ ಸಿನಿಮಾಗಳವರೆಗೆ, ಭಗವಂತನನ್ನು ಒಬ್ಬ ಅಸಂಗತ ಜೀವಿ ಮತ್ತು ಈ ಜಗತ್ತನ್ನು ನಡೆಸಿ ಇಲ್ಲಿನ ಜೀವಿಗಳನ್ನು ಸುಖವಾಗಿ ಇಡುವುದು ಅವನ ಕೆಲಸ ಎಂಬಂತೆ ಚಿತ್ರಿಸಲಾಗಿದೆ. ಆದರೆ ಕೃಷ್ಣನು ಆಕರ್ಷಕ ಬಾಲಕ. ಅವನು ತನ್ನದೇ ಗ್ರಾಮೀಣ ಸ್ವರ್ಗದಲ್ಲಿ ನಲಿದಾಡುತ್ತಾನೆ. ದೈವದ ಬಗೆಗಿನ ಸಾಮಾನ್ಯ ಕಲ್ಪನೆಯಿಂದ ಪ್ರಭಾವಿತರಾಗಿಲ್ಲದವರನ್ನು ಅವನು ಕರೆಯುತ್ತಾನೆ. ಮತ್ತು ಧರ್ಮವನ್ನು ಮರೆಯಲು ಪ್ರಾಪಂಚಿಕ ಸುಖಕ್ಕಾಗಿ ವ್ಯರ್ಥ ಪ್ರಯತ್ನದಿಂದ ಹತಾಶರಾದವರನ್ನು ಅವನು ಆಹ್ವಾನಿಸುತ್ತಾನೆ.  ಅವರು ಲೌಕಿಕ ಆಕಾಂಕ್ಷೆಗಳನ್ನು ಬಿಡಲು  ಮತ್ತು ಅವರ ಶಕ್ತಿ ಮತ್ತು ಗಮನವನ್ನು ಅವನತ್ತ ತಿರುಗಿಸಲು ಅವನು ಕರೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಅವನು ನಮ್ಮನ್ನು ದೇವೋತ್ತಮನಲ್ಲಿಗೆ, ನಾವು ಎಲ್ಲಿಗೆ ಸೇರಿದ್ದೇವೆಯೋ ಅಲ್ಲಿಗೆ, ಅವನ ಪ್ರೀತಿಯ ವೃತ್ತವನ್ನು ಪುನಃ ಸೇರಲು ಮತ್ತು ಎಲ್ಲ ಎಲ್ಲೆಗಳನ್ನು ಮೀರಿ ಆನಂದವನ್ನು ಅನುಭವಿಸಲು ನಮಗೆ ಆಶ್ವಾಸನೆ ನೀಡುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi