ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1968ರ ಏಪ್ರಿಲ್ನಲ್ಲಿ
ಬೋಸ್ಟನ್ ವಿಶ್ವವಿದ್ಯಾಲಯದ ಮಾರ್ಶ್ ಚಾಪೆಲ್ನಲ್ಲಿ ನೀಡಿದ ಉಪನ್ಯಾಸ
ಭಗವತ್ ವಿಜ್ಞಾನವಾದ ಕೃಷ್ಣಪ್ರಜ್ಞೆಯು ಭಗವಂತನನ್ನು ಮತ್ತು ಅವನೊಂದಿಗಿನ ನಮ್ಮ ಸಂಬಂಧವನ್ನು ಅರಿತುಕೊಳ್ಳಲು ಸಹಾಯ ಮಾಡುವುದರಿಂದ ಅತಿ ಮುಖ್ಯವಾದುದಾಗಿದೆ. ಖಂಡಿತವಾಗಿ, ಪ್ರತಿಯೊಂದು ಧರ್ಮದಲ್ಲಿ ಭಗವಂತನ ಬಗ್ಗೆ ಒಂದು ವಿಚಾರ ಇದ್ದೇ ಇದೆ: ಭಗವಂತ ದೊಡ್ಡವನು. ಆದರೆ ಕೇವಲ ಭಗವಂತನು ದೊಡ್ಡವನೆಂಬುದನ್ನು ಅರಿತುಕೊಂಡರೆ ಸಾಲದು. ನಾವು ಅವನೊಂದಿಗೆ ಹೊಂದಿರುವ ಸಂಬಂಧದ ಬಗ್ಗೆಯೂ ನಮಗೆ ಅರಿವಿರಬೇಕು.

ಸಾಮಾನ್ಯವಾಗಿ, ಭಗವಂತನು ನಾವು ಕೇಳಿದ್ದೆಲ್ಲವನ್ನೂ ಪೂರೈಸುವನೆಂದು ತಿಳಿದುಕೊಳ್ಳುತ್ತೇವೆ. ಹಾಗಾಗಿ, ಯಾರಿಗೆ ಭಗವಂತನಲ್ಲಿ ನಂಬಿಕೆಯಿದೆಯೋ, ಅಂಥವರು ಸಾಮಾನ್ಯವಾಗಿ ತಾವು ಕಷ್ಟದಲ್ಲಿದ್ದಾಗ ಅಥವಾ ತಮಗೆ ಹಣದ ಆವಶ್ಯಕತೆಯಿದ್ದಾಗ ಅವನ ದರ್ಶನಕ್ಕೆಂದು ಬರುತ್ತಾರೆ. ಇನ್ನು ಕೆಲವರು ಏನೋ ಒಂದು ಕುತೂಹಲದಿಂದ ಅವನ ಬಳಿ ಬರುತ್ತಾರೆ ಮತ್ತು ಬೆರಳೆಣಿಕೆಯಷ್ಟು ಜನರು ಮಾತ್ರ ಭಗವತ್ ವಿಜ್ಞಾನವನ್ನು ಅರಿತುಕೊಳ್ಳಲೆಂದು ಅವನ ಬಳಿಗೆ ಬರುತ್ತಾರೆ. ಇವರು ಭಗವಂತನಲ್ಲಿ ಆಸಕ್ತಿಯುಳ್ಳ ಜನರಾಗಿದ್ದು, ಇವರಲ್ಲಿ ನಾಲ್ಕು ವರ್ಗಗಳಿರುತ್ತವೆ. ಇವರೆಲ್ಲರಿಗೂ ಪವಿತ್ರ ಚಟುವಟಿಕೆಗಳ ಹಿನ್ನೆಲೆ ಇರುತ್ತದೆ. ಇಂತಹ ಪವಿತ್ರ ಚಟುವಟಿಕೆಗಳ ಹಿನ್ನೆಲೆಯಿರದಿದ್ದರೆ, ಅವರಿಗೆ ಭಗವತ್ ವಿಜ್ಞಾನದಲ್ಲಿ ಆಸಕ್ತಿ ಹುಟ್ಟದು. ಆದ್ದರಿಂದ, ದುರ್ದೈವಿಗಳು, ಪಾಪ ಕೃತ್ಯಗಳಿಂದ ಪ್ರಚೋದನೆಗೊಳಗಾದವರು, ಭಗವಂತನನ್ನು ನಂಬುವುದಿಲ್ಲ. ಅವರಿಗೆ ಭಗವಂತನ ಬಗ್ಗೆ ಕಾಳಜಿಯೇ ಇರುವುದಿಲ್ಲ. ಆದ ಕಾರಣ, ನಾಸ್ತಿಕರು ಭಗವಂತನನ್ನು ಅರಿತುಕೊಳ್ಳುವುದು ತುಂಬ ಕಷ್ಟ.
ಆದರೂ, ಕೃಷ್ಣಪ್ರಜ್ಞೆಯು ಒಂದು ವಿಜ್ಞಾನವಾಗಿರುವುದರಿಂದ, ನಾಸ್ತಿಕನಾದವನು ಬುದ್ಧಿವಂತನಾಗಿದ್ದರೆ ಅದನ್ನು ಪ್ರಶಂಸಿಸುವುದು ಸಾಧ್ಯವಿದೆ. ಆಸ್ತಿಕರಾಗಲಿ ನಾಸ್ತಿಕರಾಗಲಿ, ಪ್ರತಿಯೊಬ್ಬರೂ ಪ್ರಜ್ಞೆಯುಳ್ಳವರಾಗಿದ್ದಾರೆ. ಅದೊಂದು ಸತ್ಯ. ನೀವು ಭಗವಂತನಲ್ಲಿ ನಂಬಿಕೆ ಇಡಿ ಅಥವಾ ಬಿಡಿ: ನೀವು ಪ್ರಜ್ಞೆಯುಳ್ಳವರಾಗಿರುತ್ತೀರಿ. ನಾನು ನಿಮ್ಮ ಶರೀರದ ಯಾವುದಾದರು ಭಾಗವನ್ನು ಚಿವುಟಿದ ತತ್ಕ್ಷಣವೇ ನೀವು ವಿರೋಧಿಸುತ್ತೀರಿ, “ನನ್ನನ್ನು ಯಾರೋ ಚಿವುಟುತ್ತಿದ್ದಾರೆ! ನನಗೆ ನೋವಾಗುತ್ತಿದೆ!” ಪ್ರಾಣಿಗಳಲ್ಲಿ ಕೂಡ ಪ್ರಜ್ಞೆ ಇದೆ.
ಇನ್ನು, ಪ್ರಜ್ಞೆ ಎಂದರೇನು? ಭಗವದ್ಗೀತೆ ಹೇಳುತ್ತದೆ, ಅವಿನಾಶಿ ತು ತದ್ ವಿದ್ಧಿ ಯೇನ ಸರ್ವಮ್ ಇದಂ ತತಮ್ “ನಿಮ್ಮ ದೇಹದಲ್ಲೆಲ್ಲ ಹರಡಿರುವುದೇ ಪ್ರಜ್ಞೆ. ಅದು ಶಾಶ್ವತವಾದುದಾಗಿದೆ.” ಪ್ರಜ್ಞೆಯು ಹೇಗೆ ಶಾಶ್ವತವಾಗಿದೆ? ನೀವು ಸ್ವಾನುಭವದಿಂದ ಅದನ್ನು ಅರಿತುಕೊಳ್ಳಬಹುದು. ನೀವು ಶೈಶವದಲ್ಲಿ, ಬಾಲ್ಯದಲ್ಲಿ, ಯೌವನದಲ್ಲಿ ಪ್ರಜ್ಞೆಯುಳ್ಳವರಾಗಿದ್ದಿರಿ. ನೀವು ವೃದ್ಧಾವಸ್ಥೆಯತ್ತ ಸಾಗುತ್ತಿರುವಾಗಲೂ ನಿಮ್ಮಲ್ಲಿ ಪ್ರಜ್ಞೆ ಇರುವುದು. ಅಂದರೆ, ನಿಮ್ಮ ಶರೀರ ಬದಲಾಗುತ್ತಿದೆ ಹೊರತು ನಿಮ್ಮ ಪ್ರಜ್ಞೆ ಯಾವ ಬದಲಾವಣೆಯೂ ಇಲ್ಲದೇ ಮುಂದುವರಿಯುತ್ತದೆ. ಇದನ್ನು ನೀವು ಅಲ್ಲಗಳೆಯಲಾರಿರಿ. ಭಗವದ್ಗೀತೆ ಹೇಳುತ್ತದೆ, ನ ಹನ್ಯತೇ ಹನ್ಯಮಾನೇ ಶರೀರೇ “ಪ್ರಜ್ಞೆಯು ಶಾಶ್ವತ. ತಾತ್ಕಾಲಿಕ ಶರೀರದೊಂದಿಗೆ ಅದು ನಾಶಗೊಳ್ಳದು.”

ದೇಹದಲ್ಲಿ ಪ್ರಜ್ಞೆಯು ಅನುಪಸ್ಥಿತವಾದ ತತ್ಕ್ಷಣವೇ ದೇಹವೂ ಕಾಲವಾದಂತೆ. ಹಾಗಾದರೆ, ಪ್ರಜ್ಞೆ ಎಂದರೇನು? ಅದು ಆತ್ಮದ ಉಪಸ್ಥಿತಿಯ ಲಕ್ಷಣವಾಗಿದೆ. ಹೇಗೆ ಒಂದು ಸ್ಥಳದಲ್ಲಿ ಹೊತ್ತಿಸಿದ ಅಗ್ನಿಯು ಶಾಖ ಮತ್ತು ಬೆಳಕನ್ನು ಎಲ್ಲೆಡೆ ಹರಡುತ್ತದೆಯೋ, ಹಾಗೆಯೇ ನಿಮ್ಮ ಶರೀರದಲ್ಲಿರುವ ಆತ್ಮವು ನಿಮ್ಮ ಶರೀರದೆಲ್ಲೆಡೆ ಪ್ರಜ್ಞೆಯನ್ನು ಹರಡುತ್ತದೆ. ಇದೊಂದು ಸತ್ಯಾಂಶವಾಗಿದೆ.
ನಿಮ್ಮ ಶೈಶವ ಶರೀರದಿಂದ ಬಾಲ್ಯದ ಶರೀರ, ಅನಂತರ ಯೌವನದ ಶರೀರದವರೆಗೆ ನಿಮ್ಮ ಪ್ರಜ್ಞೆ ಮುಂದುವರಿಯುತ್ತದೆ. ಅದೇ ರೀತಿ, ನಿಮ್ಮ ಪ್ರಜ್ಞೆಯು ನಿಮ್ಮನ್ನು ಇನ್ನೊಂದು ಶರೀರದೊಳಗೆ ಕರೆದುಕೊಂಡು ಹೋಗುತ್ತದೆ. ಹೀಗೆ ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ ಸ್ಥಳಾಂತರ ಹೊಂದುವ ಪ್ರಕ್ರಿಯೆಯೇ ಸಾವು. ನಿಮ್ಮ ಹಳೆಯ ಶರೀರವನ್ನು ಪೋಷಿಸುವುದು ಅಸಾಧ್ಯವಾದಾಗ, ನಿಮ್ಮ ಪ್ರಜ್ಞೆಯನ್ನು ಹೊಸ ಶರೀರಕ್ಕೆ ವರ್ಗಾಯಿಸಲೇಬೇಕು. ನಿಮ್ಮ ಬಟ್ಟೆಯು ತೀರ ಹಳೆಯದಾದರೆ ಅದನ್ನು ಬದಲಾಯಿಸಲೇಬೇಕು. ಹಾಗೆಯೇ, ಲೌಕಿಕ ಶರೀರವು ಉಳಿಸಿಕೊಂಡು ಹೋಗಲಾರದಷ್ಟು ಹಳೆಯದಾಗಿಬಿಟ್ಟರೆ, ನಿಮ್ಮ ಪ್ರಜ್ಞೆಯನ್ನು ಇನ್ನೊಂದು ಶರೀರಕ್ಕೆ ವರ್ಗಾಯಿಸಲಾಗುತ್ತದೆ ಮತ್ತು ನೀವು ಬೇರೊಂದು ಜೀವನವನ್ನು ಪ್ರಾರಂಭಿಸುತ್ತೀರಿ. ಇದೇ ನಿಸರ್ಗದ ಪ್ರಕ್ರಿಯೆ.
ದುರದೃಷ್ಟವಶಾತ್, ಇಂತಹ ಶಿಕ್ಷಣವು ಅತ್ಯಂತ ಮುಖ್ಯವಾಗಿದ್ದರೂ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಜ್ಞೆಯನ್ನು ಕುರಿತು ಅಥವಾ ಜೀವಾತ್ಮವನ್ನು ಕುರಿತು ಕಲಿಸುವಂತಹ ಯಾವುದೇ ವಿಭಾಗಗಳಿಲ್ಲ. ಪ್ರಜ್ಞೆಯಿಲ್ಲದೆ, ಆತ್ಮದ ಉಪಸ್ಥಿತಿಯಿಲ್ಲದೆ, ಶರೀರವು ನಿರುಪಯುಕ್ತ. ನಾವು ಶರೀರದ ಬಗ್ಗೆ ತುಂಬ ಕಾಳಜಿವಹಿಸುತ್ತೇವೆ ಹೊರತು ಪ್ರಜ್ಞೆಯ ಬಗ್ಗೆ ಅಥವಾ ಜೀವಾತ್ಮದ ಬಗ್ಗೆ ನಮಗೆ ಎಳ್ಳಷ್ಟೂ ಜ್ಞಾನವಿಲ್ಲ. ಈ ನಿರ್ಲಕ್ಷ್ಯಕ್ಕೆಲ್ಲ ಕಾರಣ ಮಾಯೆ ಅಥವಾ ಭ್ರಮೆ. ನಾವು ಅಶಾಶ್ವತ ವಸ್ತುಗಳ ಬಗ್ಗೆ – ಶರೀರ ಮತ್ತದರ ವಿಸ್ತರಣೆಗಳು ನಿರ್ದಿಷ್ಟ ಕಾಲದ ಅನಂತರ ಅವನತಿ ಹೊಂದುತ್ತವೆ – ತುಂಬ ಗಂಭೀರರಾಗಿರುತ್ತೇವೆ. ಆದರೆ ನಾವು ಶಾಶ್ವತ ಪ್ರಜ್ಞೆ, ದೇಹದಿಂದ ದೇಹಕ್ಕೆ ಸ್ಥಳಾಂತರಗೊಳ್ಳುತ್ತಿರುವ ಆತ್ಮದ ಬಗ್ಗೆ ಕಾಳಜಿವಹಿಸುವುದಿಲ್ಲ. ಆತ್ಮದ ನಿರ್ಲಕ್ಷ್ಯವೇ ಆಧುನಿಕ ನಾಗರಿಕತೆಯ ಮುಖ್ಯ ನ್ಯೂನತೆಯಾಗಿದೆ.
ಎಲ್ಲಿಯವರೆಗೆ ನಾವು ನಮ್ಮ ದೇಹದಲ್ಲಿ ಆತ್ಮದ ಉಪಸ್ಥಿತಿಯ ಬಗ್ಗೆ ಅರಿತಿರುವುದಿಲ್ಲವೋ, ಎಲ್ಲಿಯವರೆಗೆ ನಾವು ಆತ್ಮದ ಬಗ್ಗೆ ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಎಲ್ಲ ಚಟುವಟಿಕೆಗಳೂ ವ್ಯರ್ಥ. ಇದನ್ನು ಕುರಿತು ಭಾಗವತದಲ್ಲಿ ಹೀಗೆ ಹೇಳಲಾಗಿದೆ (5.5.5) – ಪರಾಭವಃ ತಾವದ್ ಅಬೋಧ ಜಾತೋ ಯಾವನ್ ನ ಜಿಜ್ಞಾಸತ ಆತ್ಮ ತತ್ತ್ವಮ್. ತಾತ್ಕಾಲಿಕ ಶರೀರವನ್ನು ಒಪ್ಪಿಕೊಂಡಿರುವಂಥವನನ್ನು ಮೂರ್ಖನೆಂದು ತಿಳಿಯಲಾಗುತ್ತದೆ. ನಾವೆಲ್ಲರೂ ನಮ್ಮನ್ನು ಈ ಅಶಾಶ್ವತ ಶರೀರದೊಂದಿಗೆ ಗುರುತಿಸಿಕೊಳ್ಳುವುದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ಹುಟ್ಟು ಮೂರ್ಖರು. ಈ ಶರೀರವು ಒಂದಲ್ಲ ಒಂದು ದಿನ ನಶಿಸಿ ಹೋಗುವುದೆಂದು ನಮಗೆ ಗೊತ್ತಿದ್ದರೂ, ನಾವು ಆ ಶರೀರದೊಂದಿಗೇ ನಮ್ಮನ್ನು ಗುರುತಿಸಿಕೊಳ್ಳುತ್ತೇವೆ. ಇದು ನಿರ್ಲಕ್ಷ್ಯ ಅಥವಾ ಭ್ರಮೆಯಾಗಿದೆ.

ಈ ಜಗತ್ತಿನಲ್ಲಿ ಹೆಚ್ಚು ಕಡಮೆ ಪ್ರತಿಯೊಬ್ಬರೂ ಈ ಅಜ್ಞಾನದಲ್ಲಿ ಮುಳುಗಿದ್ದಾರೆ. ಏಕೆಂದರೆ, ಅವರು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಸ್ಥಳಾಂತರಗೊಳ್ಳುವ ಆತ್ಮಗಳೆಂದು ಅವರಿಗೆ ಗೊತ್ತಿಲ್ಲ. ಯಾರೊಬ್ಬರಿಗೂ ಸಾಯುವ ಇಷ್ಟವಿಲ್ಲದಿದ್ದರೂ, ಕ್ರೂರ ಸಾವನ್ನು ಪ್ರತಿಯೊಬ್ಬರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತದೆ. ಆದರೆ ಜನರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರೆಲ್ಲರೂ ತಿನ್ನುವುದು, ಮಲಗುವುದು, ಸಂಭೋಗ ಮತ್ತು ಸಂರಕ್ಷಣೆ – ಇವುಗಳಂತಹ ಪ್ರಾಣಿ ಜೀವನದ ಸಿದ್ಧಾಂತಗಳನ್ನು ಅನುಸರಿಸುತ್ತ ತುಂಬ ಸಂತೋಷದಿಂದಿದ್ದಾರೆ ಎಂದು ಯೋಚಿಸುತ್ತಾರೆ. ಪ್ರಸ್ತುತದಲ್ಲಿ, ಜನರು ಮಾನವ ನಾಗರಿಕತೆಯ ಅಭಿವೃದ್ಧಿಯ ಬಗ್ಗೆ ತುಂಬ ಹೆಮ್ಮೆ ಪಡುತ್ತಿದ್ದಾರೆ. ಆದರೆ ಅವರು ಈ ನಾಲ್ಕು ಸಿದ್ಧಾಂತಗಳ ಬಗ್ಗೆ ತುಂಬ ಕಾಳಜಿವಹಿಸುತ್ತಿದ್ದಾರೆ. ವೈದಿಕ ಸಾಹಿತ್ಯದ ಪ್ರಕಾರ, ಇಂತಹ ಜೀವನವು ಪ್ರಾಣಿ ಜೀವನಕ್ಕಿಂತಲೂ ಕೀಳಾದುದಾಗಿದೆ.
ಮಾನವ ಜೀವನವಿರುವುದೇ ಅಭಿವೃದ್ಧ ಜ್ಞಾನಕ್ಕಾಗಿ. ಆ ಅಭಿವೃದ್ಧ ಜ್ಞಾನವೆಂದರೇನು? “ನಾನು ಯಾರು?” ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮತ್ತು ನಮ್ಮನ್ನು ನಾವು ಅರಿತುಕೊಳ್ಳುವುದು. ಪ್ರತಿಯೊಂದು ನಾಗರಿಕ ಸಮಾಜದಲ್ಲಿ ಇಸ್ಲಾಮ್ ಅಥವಾ ಕ್ರೈಸ್ತ ಧರ್ಮ ಅಥವಾ ಯಹೂದ್ಯ ಧರ್ಮ ಅಥವಾ ಹಿಂದೂ ಧರ್ಮ ಅಥವಾ ಬೌದ್ಧ ಧರ್ಮ – ಹೀಗೆ ಧಾರ್ಮಿಕ ತತ್ತ್ವಗಳ ಜೋಡಿಯಿರುತ್ತದೆ. ಹಾಗಾದರೆ ಪವಿತ್ರ ಗ್ರಂಥಗಳ ಮತ್ತು ಧಾರ್ಮಿಕ ತತ್ತ್ವಗಳ ಉದ್ದೇಶವೇನು? ಆತ್ಮವನ್ನು ಅರಿತುಕೊಳ್ಳಲು, ಪ್ರಜ್ಞೆಯನ್ನು ಅರಿತುಕೊಳ್ಳಲು ಮತ್ತು ಆತ್ಮವು ಈ ಲೌಕಿಕ, ಬದ್ಧ ಜೀವನದಲ್ಲಿ ಹೇಗೆ ಬಿದ್ದಿತು, ಅದು ವಿವಿಧ ಜೀವಿಗಳಲ್ಲಿ ಹೇಗೆ ಸ್ಥಳಾಂತರ ಹೊಂದುತ್ತಿದೆ ಮತ್ತು ಅದನ್ನು ಹುಟ್ಟು-ಸಾವುಗಳ ಚಕ್ರದಿಂದ ಹೇಗೆ ಮುಕ್ತವಾಗಿಸಬಹುದು ಎಂಬುದನ್ನು ಅರಿತುಕೊಳ್ಳುವುದಾಗಿದೆ. ಈ ಜೀವನದಲ್ಲಿ ಒಟ್ಟು 84,00,000 ಜೀವಿಗಳಿದ್ದು ನಾವು ಅವುಗಳಲ್ಲಿಯೇ ಅಲೆದಾಡುತ್ತಿದ್ದೇವೆ. ನಾವು ಮಾನವರೂಪದ ಜೀವನವನ್ನು ತಲಪಿದಾಗ ಮಾತ್ರ “ನಾನು ಏನು?” ಎಂಬ ಪ್ರಶ್ನೆ ಕೇಳಬಹುದಾಗಿದೆ. ನಾವು ಏನೆಂಬುದನ್ನೇ ನಾವು ಅರಿಯದಿದ್ದರೆ, ನಾವು ಮಾನವ ಜೀವನದ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ನಾವು ಪಶು ಜೀವನದ ಪ್ರವೃತ್ತಿಗಳಾದ ತಿನ್ನುವುದು, ಮಲಗುವುದು, ಸಂಭೋಗಿಸುವುದು ಮತ್ತು ರಕ್ಷಿಸಿಕೊಳ್ಳುವುದು – ಇವುಗಳಲ್ಲಿಯೇ ಸಮಯ ಹಾಳು ಮಾಡುತ್ತೇವೆ.

“ನನಗೆ ಸಾಯಲು ಇಷ್ಟವಿಲ್ಲ, ಆದರೆ ಸಾವನ್ನು ನನ್ನ ಮೇಲೆ ಏಕೆ ಒತ್ತಾಯಪೂರ್ವಕವಾಗಿ ಹೊರಿಸಲಾಗುತ್ತಿದೆ? ನನಗೆ ರೋಗಿಯಾಗುವ ಇಷ್ಟವಿಲ್ಲವಾದರೂ ರೋಗವನ್ನು ನನ್ನ ಮೇಲೆ ಏಕೆ ಹೇರಲಾಗುತ್ತಿದೆ?” ಎಂಬ ಪ್ರಶ್ನೆಗಳನ್ನು ಕೇಳಲೇಬೇಕು. ಆದರೆ ಸಾಮಾನ್ಯವಾಗಿ ರೋಗಗ್ರಸ್ತನಾಗುವ ಒಬ್ಬ ವ್ಯಕ್ತಿಯು ಹೀಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ಅವನು ಯೋಚಿಸುತ್ತಾನೆ, “ಸರಿ, ಈಗ ನನಗೆ ಆರೋಗ್ಯ ಸರಿಯಿಲ್ಲ. ವೈದ್ಯರ ಹತ್ತಿರ ಹೋಗಿ ಔಷಧಿ ತೆಗೆದುಕೊಂಡರಾಯಿತು.” ಆದರೆ ತನಗೆ ರೋಗ ಅಂಟಿಕೊಳ್ಳಬಾರದು ಮತ್ತು ತಾನು ಸಾಯಬಾರದು ಎಂದು ಅವನು ಹೃದಯಾಂತರಾಳದಲ್ಲಿ ಯೋಚಿಸುವುದಂತೂ ನಿಜ. ಏಕೆ? ಏಕೆಂದರೆ ಅವನು ಶಾಶ್ವತ. ಅವನ ನಿಜಸ್ಥಿತಿಯು ಸಾವು, ಜನನ ಮತ್ತು ರೋಗಗಳಿಲ್ಲದ ಆನಂದಮಯ ಮತ್ತು ಶಾಶ್ವತ ಜೀವನವಾಗಿದೆ. ಅವನು ಈ ರೀತಿಯ ಸ್ಥಿತಿಯನ್ನು ಗಳಿಸುವುದು ಹೇಗೆಂದು ಪ್ರಶ್ನಿಸದಿದ್ದರೆ ಅವನು ಮಾನವ ಜೀವನದ ಅವಕಾಶವನ್ನು ತಪ್ಪಿಸಿಕೊಂಡಂತೆ.
ಮಾನವ ರೂಪದ ಜೀವನವು ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಲು ದೊರೆತಿರುವ ಒಂದು ಅವಕಾಶವಾಗಿದೆ. ಈ ಧ್ಯೇಯೋದ್ದೇಶದತ್ತ ನಾವು ಪ್ರಗತಿ ಸಾಧಿಸದಿದ್ದರೆ, ನಾವು ಈ ಸಭ್ಯ ಮಾನವ ಜೀವನದ ಅವಕಾಶವನ್ನು ವೃಥಾ ಹಾಳು ಮಾಡುತ್ತಿದ್ದೇವೆ ಎಂದರ್ಥ. ನಾನು ವಿಶೇಷವಾಗಿ ಅಭಿವೃದ್ಧ ಪ್ರಜ್ಞೆ ಮತ್ತು ಶಿಕ್ಷಣವನ್ನು ಒಳಗೊಂಡಿರುವ ಸಭ್ಯ ಮಾನವ ಜೀವನದ ಬಗ್ಗೆ ಹೇಳುತ್ತಿರುವೆ. ಈ ಅಭಿವೃದ್ಧ ಸ್ಥಿತಿಯಲ್ಲಿ ನಾವು ಕೇಳಬೇಕಾದ ಪ್ರಶ್ನೆ “ಏಕೆ ಅನಾಹುತಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ?” ಅನಾಹುತಗಳನ್ನು ಎದುರಿಸಲು ಯಾರೂ ಸಿದ್ಧರಿಲ್ಲ. ನಿಮ್ಮ ದೇಶದ ಪ್ರತಿಯೊಂದು ನಗರದಲ್ಲಿನ ಬೀದಿಗಳಲ್ಲಿ ಪ್ರತಿನಿತ್ಯ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಗಾಡಿಗಳು ಓಡಾಡುವುದನ್ನು ಕಾಣುತ್ತೇನೆ. ತನ್ನ ಮನೆಯು ಬೆಂಕಿಗೆ ಆಹುತಿಯಾಗುವುದನ್ನು ನೋಡಲು ಯಾರಿಗೆ ತಾನೇ ಇಷ್ಟ? ಯಾರಿಗೆ ತಾನೇ ಅಪಘಾತಕ್ಕೀಡಾಗಲು ಇಷ್ಟ? ಇವೆಲ್ಲವನ್ನೂ ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಆದರೂ ನಾವು “ಈ ಅನಾಹುತಗಳು ನನಗಿಷ್ಟವಿಲ್ಲ. ಅವುಗಳನ್ನು ನನ್ನ ಮೇಲೇಕೆ ಹೇರಲಾಗುತ್ತಿದೆ?” ಎಂದು ಕೇಳುವುದಿಲ್ಲ. ಜೀವನದ ಈ ಸಂಕಟದ ಸ್ಥಿತಿಗಳನ್ನು ನಮ್ಮ ಮೇಲೆ ಹೇರಲು ಕಾರಣವೇನೆಂದು ಕೇಳುವ ಜಿಜ್ಞಾಸೆ ನಮ್ಮಲ್ಲಿ ಅಂಕುರಿಸಿದ ದಿನದಂದು ನಮ್ಮ ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯು ಪ್ರಾರಂಭವಾದಂತೆ.
ಈಗ ಈ ಸಮಸ್ಯೆಗಳನ್ನು “ವೈಜ್ಞಾನಿಕ ಸಂಶೋಧನೆ” ಅಥವಾ “ಆಧ್ಯಾತ್ಮಿಕ ಸಂಶೋಧನೆ”ಯ ಮೂಲಕ ಬಗೆಹರಿಸಲು ನೀವು ಪ್ರಯತ್ನಿಸುತ್ತಿದ್ದೀರಿ. ಆದರೆ ನಿಮ್ಮ ಪ್ರಜ್ಞೆಯನ್ನು ಸುಧಾರಿಸಿಕೊಳ್ಳುವುದು ಅಥವಾ ಪರಿಶುದ್ಧಗೊಳಿಸಿಕೊಳ್ಳುವುದು ನಿಜವಾದ ಪರಿಹಾರವಾಗಿದೆ. ಒಂದು ವೇಳೆ ನೀವು ನಿಮ್ಮ ಪ್ರಜ್ಞೆಯನ್ನು ಪರಿಶುದ್ಧಗೊಳಿಸಿಕೊಂಡರೆ ದೇಹದಿಂದ ದೇಹಕ್ಕೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯು ಅಂತ್ಯಗೊಳ್ಳುವುದು. ನೀವು ಸುಂದರವಾದ ಅಮೆರಿಕನ್ ಶರೀರವನ್ನು ಹೊಂದಿರುವುದರಿಂದ ನಿಮಗೆ ಖಂಡಿತವಾಗಿಯೂ ಅತಿ ಸಂತೋಷವಾಗಿರಬಹುದು. ನೀವು ಜೀವನವನ್ನು ಆನಂದಿಸುತ್ತಿದ್ದೀರಿ. ಆದರೆ ನಿಮ್ಮ ಮುಂದಿನ ಜನ್ಮ ಏನಾಗಿರುವುದೆಂದು ನಿಮಗೆ ಗೊತ್ತೆ? ಅದು ನಿಮಗೆ ಗೊತ್ತಿಲ್ಲ. ಆದರೆ ಜೀವನವು ನಿರಂತರವಾದುದೆಂಬುದು ನಿಮಗೆ ಗೊತ್ತಿರಬೇಕು. ಈ ಪ್ರಸ್ತುತ ಜೀವನವು ಕೇವಲ ಒಂದು ಮಿಂಚಿನಂತೆ; ಲಕ್ಷಾಂತರ ಜೀವಿಗಳ ಮೂಲಕ ನಾವು ಮಾಡುವ ಪ್ರಯಾಣದ ಒಂದು ಕ್ಷಣವಷ್ಟೆ. ಹೀಗೆ ಕೃಷ್ಣಪ್ರಜ್ಞಾ ಆಂದೋಲನವು ಪ್ರಜ್ಞೆಯನ್ನು ಪರಿಶುದ್ಧಗೊಳಿಸಲು, ಸ್ಥಳಾಂತರವನ್ನು ನಿಲ್ಲಿಸಲು ಮತ್ತು ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವುದಕ್ಕಾಗಿಯೇ ಇರುವ ಆಂದೋಲನ.

ಕೃಷ್ಣಪ್ರಜ್ಞೆಯು ಅತಿ ಸರಳವಾದುದಾಗಿದೆ. ಈ ಹದಿನಾರು ಪದಗಳನ್ನು ಪಠಿಸಿ ಸಾಕು : ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಈ ಹದಿನಾರು ಪದಗಳನ್ನು ಪಠಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇವೆ ಅಷ್ಟೆ. ಇದರಿಂದ ನಿಮಗೆ ನಷ್ಟವೇನೂ ಆಗದು. ಆದರೆ ಅಪಾರ ಲಾಭವಾಗುವುದು. ನೀವೇಕೆ ಪ್ರಯೋಗ ಮಾಡಬಾರದು? ಅದು ಅಷ್ಟೇನು ಕಠಿಣವಲ್ಲ. ಈ ಅಮೆರಿಕನ್ ಹುಡುಗರು ಪಠಿಸುತ್ತಿದ್ದಾರೆ. ಈ ಮಂತ್ರವನ್ನು ಸಂಸ್ಕೃತದಲ್ಲಿ ಬರೆಯಲಾಗಿದೆಯಾದರೂ, ಅದೊಂದು ಜಾಗತಿಕ ಆಧ್ಯಾತ್ಮಿಕ ಮಿಡಿತವಾಗಿದೆ.
ನಾವು ಈ ಮಂತ್ರವನ್ನು ಪಠಿಸಲು ಪ್ರಾರಂಭಿಸಿದರೆ, ಭಗವಂತನೊಂದಿಗೆ ನೇರವಾಗಿ ಸಂಪರ್ಕ ಪಡೆದುಕೊಳ್ಳುತ್ತೇವೆ. ಅದು ನಮ್ಮನ್ನು ಪರಿಶುದ್ಧರನ್ನಾಗಿಸುತ್ತದೆ. ನಾವು ಬೆಂಕಿಯನ್ನು ಸಮೀಪಿಸಿದಾಗ ಬೆಚ್ಚಗಾಗುತ್ತೇವೆ. ಅದೇ ರೀತಿ, ನಾವು ಪರಮಾತ್ಮನೊಂದಿಗೆ ನೇರ ಸಂಪರ್ಕ ಪಡೆದುಕೊಂಡರೆ ನಮ್ಮ ಶುದ್ಧೀಕರಣ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಹರೇಕೃಷ್ಣ ಹರೇಕೃಷ್ಣ ಎಂದು ನೀವು ಪಠಿಸಿದರೆ ನಿಮ್ಮ ಪ್ರಜ್ಞೆಯು ಪರಿಶುದ್ಧಗೊಳ್ಳುವುದು ಮತ್ತು ನೀವು ಏನಾಗಿದ್ದೀರಿ ಎಂಬುದು ನಿಮಗೆ ತಿಳಿಯುವುದು. ಹರೇಕೃಷ್ಣ ಪಠಿಸುವುದೆಂದರೆ, ಮನಸ್ಸನ್ನು ಸಕಲ ಅಶುದ್ಧ ವಿಚಾರಗಳಿಂದ ಮುಕ್ತವಾಗಿಸುವುದೆಂದರ್ಥ. ನಿಮ್ಮಲ್ಲಿರುವ ಅಶುದ್ಧತೆಯು ಮಾಯವಾಗಿ ನೀವು ಪರಿಶುದ್ಧರಾದ ತತ್ಕ್ಷಣವೇ ನಿಮ್ಮಲ್ಲಿರುವ ಆತಂಕಗಳೆಲ್ಲವೂ ಅಂತ್ಯಗೊಳ್ಳುತ್ತವೆ.
ಭಗವದ್ಗೀತೆಯಲ್ಲಿ (18.54) ಇದನ್ನು ಕುರಿತು ಹೇಳಲಾಗಿದೆ:
ಬ್ರಹ್ಮ ಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
ಸಮಃ ಸರ್ವೇಶು ಭೂತೇಶು ಮದ್ ಭಕ್ತಿಂ ಲಭತೇ ಪರಾಮ್ ॥
ಬ್ರಹ್ಮ ಭೂತಃ ಅಂದರೆ, ನೀವು ಆಧ್ಯಾತ್ಮಿಕ ಅರಿವಿನ ಹಂತವನ್ನು ತಲಪಿದ ತತ್ಕ್ಷಣವೇ ಸಕಲ ಲೌಕಿಕ ಆತಂಕಗಳಿಂದ ಮುಕ್ತರಾಗುತ್ತೀರಿ. ಅನಂತರ ನೀವು ಯಾವುದೇ ಲಾಭಕ್ಕಾಗಿ ಹಂಬಲಿಸುವುದಾಗಲಿ, ದೊಡ್ಡ ಹಾನಿಯುಂಟಾದಾಗ ವ್ಯಥೆಪಡುವುದಾಗಲಿ ಮಾಡುವುದಿಲ್ಲ (ನ ಶೋಚತಿ ನ ಕಾಂಕ್ಷತಿ). ಆಗ ನೀವು ಎಲ್ಲರನ್ನೂ ಒಂದೇ ತೆರನಾಗಿ ಕಾಣಬಹುದು ಮತ್ತು ದೇವೋತ್ತಮ ಪರಮ ಪುರುಷನೊಂದಿಗೆ ನೀವು ಕಳೆದುಕೊಂಡಂತಹ ಸಂಬಂಧವು ಮರುಸ್ಥಾಪನೆಯಾಗುವುದು. ಅಂದು ನಿಮ್ಮ ನಿಜವಾದ ಜೀವನ ಪ್ರಾರಂಭಗೊಳ್ಳುತ್ತದೆ.

ಕೃಷ್ಣಪ್ರಜ್ಞೆಯನ್ನು ಒಪ್ಪಿಕೊಳ್ಳುವುದೆಂದರೆ, ದೇಹದಿಂದ ದೇಹಕ್ಕೆ ಸ್ಥಳಾಂತರ ಹೊಂದುವ ತಾತ್ಕಾಲಿಕ ಜೀವನದಿಂದ ಮುಕ್ತರಾಗಿ ನಮ್ಮ ನಿಜವಾದ ಜೀವನವನ್ನು ಪ್ರಾರಂಭಿಸುತ್ತೇವೆ ಎಂದರ್ಥ. ಹೀಗೆ ಕೃಷ್ಣಪ್ರಜ್ಞಾ ಆಂದೋಲನವು ಅತಿ ಮುಖ್ಯವಾದ ಆಂದೋಲನವಾಗಿದೆ. ಅದನ್ನು ಅರಿತುಕೊಳ್ಳಲು ಪ್ರಯತ್ನಿಸಿ. ನಾವು “ಬ್ಯಾಕ್ ಟು ಗಾಡ್ಹೆಡ್” ನಿಯತಕಾಲಿಕವೊಂದನ್ನು ಪ್ರಕಟಿಸುತ್ತಿದ್ದೇವೆ ಮತ್ತು ನಿಮ್ಮ ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದ್ದೇವೆ.
ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅದಕ್ಕೆ ನೀವು ಹಣ ಖರ್ಚು ಮಾಡಬೇಕಾಗಿಲ್ಲ. ನೀವು ಇಲ್ಲಿಗೆ ಬಂದು ಈ ಆಂದೋಲನವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಅದು ಅಪ್ಪಟ ವಿಜ್ಞಾನವಾಗಿದೆ. ಅದೇನು ತೋರಿಕೆಯ ಆಂದೋಲನವಲ್ಲ. ನಿಮ್ಮ ವಾದ, ಬುದ್ಧಿ ಮತ್ತು ತರ್ಕಶಕ್ತಿಯಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ನಾವು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧರಿದ್ದೇವೆ.

ಈ ಆಂದೋಲನವಿರುವುದು ನಿಮ್ಮ ಅನುಕೂಲಕ್ಕಾಗಿ. ಅದು ಲಾಭಗಳಿಸುವುದಕ್ಕಾಗಿರುವ ಸಂಸ್ಥೆಯಲ್ಲ. ನೀವು ಭಗವತ್ ವಿಜ್ಞಾನವನ್ನು ಅರಿತುಕೊಂಡು, ಅದರಿಂದ ಲಾಭಪಡೆದುಕೊಳ್ಳಲು ಅನುಕೂಲವಾಗುವಂತೆ ಮನುಕುಲದ ಸೇವೆ ಮಾಡುವುದೇ ಕೃಷ್ಣಪ್ರಜ್ಞೆ. ನಾವು ಕೃಷ್ಣಪ್ರಜ್ಞೆಯನ್ನು ನಿಮ್ಮೆದುರಿಗೆ ಪ್ರಸ್ತುತ ಪಡಿಸುತ್ತಿದ್ದೇವೆಯಷ್ಟೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟ ವಿಚಾರವಾಗಿದೆ. ತುಂಬ ಧನ್ಯವಾದಗಳು. ಏನಾದರೂ ಪ್ರಶ್ನೆಗಳನ್ನು ಕೇಳುವರಿದ್ದೀರಾ?
ವಿದ್ಯಾರ್ಥಿ: ಕೃಷ್ಣಪ್ರಜ್ಞೆಯು ಅದ್ವೈತ ತತ್ತ್ವಕ್ಕೆ ಹೇಗೆ ಸಂಬಂಧಿಸಿದೆ?
ಶ್ರೀಲ ಪ್ರಭುಪಾದ: ಅದ್ವೈತ ತತ್ತ್ವದ ಮೂಲ ಸಿದ್ಧಾಂತವೆಂದರೆ, ಜೀವಾತ್ಮವು ಭಗವಂತನೊಂದಿಗೆ ಒಂದಾಗಿರುತ್ತದೆ. ಅದು ಸತ್ಯ. ನಾವು ಭಗವಂತನಿಗಿಂತ ವಿಭಿನ್ನರಾಗಿಲ್ಲ. ಉದಾಹರಣೆಗಾಗಿ, ನಿಮ್ಮ ದೇಶದ ಅಧ್ಯಕ್ಷರು ಒಬ್ಬ ಅಮೆರಿಕನ್ ಆಗಿದ್ದಾರೆ ಮತ್ತು ನೀವೂ ಅಮೆರಿಕನ್ ಆಗಿದ್ದೀರಿ. ಹಾಗಾಗಿ ನಿಮ್ಮಿಬ್ಬರ ರಾಷ್ಟ್ರೀಯತೆ ಒಂದೇ ಆಗಿದೆ. ಆ ದೃಷ್ಟಿಯಿಂದ ನೀವು ಒಂದಾಗಿದ್ದೀರಿ. ಆದರೆ ನೀವು ಅಧ್ಯಕ್ಷರಾಗಿಲ್ಲ. ನೀವು ಅಮೆರಿಕನ್ ಎಂದ ಮಾತ್ರಕ್ಕೆ ನೀವೂ ಕೂಡ ಅಧ್ಯಕ್ಷರಿಗೆ ಸರಿಸಮನಾದ ಹಂತದಲ್ಲಿದ್ದೀರಿ ಎಂದರ್ಥವಲ್ಲ. ಅದು ಸತ್ಯವಲ್ಲವೆ?
ಅದೇ ರೀತಿ, ನಾವೆಲ್ಲರೂ ಗುಣಾತ್ಮಕವಾಗಿ ಭಗವಂತನೊಂದಿಗೆ ಒಂದಾಗಿದ್ದೇವೆ. ಗುಣಾತ್ಮಕವಾಗಿ ಅಂದರೆ, ಜೀವಾತ್ಮಗಳಾಗಿ ನಮ್ಮಲ್ಲಿರುವುದೆಲ್ಲ ಭಗವಂತನಲ್ಲಿಯೂ ಇದೆ. ಗುಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಉದಾಹರಣೆಗಾಗಿ, ನೀವು ಅಟ್ಲಾಂಟಿಕ್ ಮಹಾಸಾಗರದಿಂದ ನೀರಿನ ಒಂದು ಹನಿ ತೆಗೆದುಕೊಂಡು, ಅದರಲ್ಲಿರುವ ಅಂಶಗಳನ್ನು ರಾಸಾಯನಿಕವಾಗಿ ವಿಶ್ಲೇಷಿಸುತ್ತೀರಿ ಎಂದಿಟ್ಟುಕೊಳ್ಳಿ. ಆ ಹನಿಯ ರಚನೆ ಮತ್ತು ಅಟ್ಲಾಂಟಿಕ್ ಮಹಾಸಾಗರದ ರಚನೆ ಒಂದೇ ಆಗಿರುತ್ತದೆ. ಹೀಗೆ ಗುಣಾತ್ಮಕವಾಗಿ ಹನಿಯು ಮಹಾಸಾಗರದ ಭಾರಿ ಪ್ರಮಾಣದ ನೀರಿಗೆ ಸಮನಾಗಿರುತ್ತದೆ. ಹಾಗೆಯೇ ನೀನು ದೇವೋತ್ತಮ ಪರಮ ಪುರುಷನಿಂದ ಹೊರಹೊಮ್ಮಿದ ಒಂದು ಕಿಡಿ, ಒಂದು ಜೀವಾತ್ಮವಾಗಿರುವೆ. ಭಗವಂತನಲ್ಲಿರುವ ಎಲ್ಲ ಆಧ್ಯಾತ್ಮಿಕ ಗುಣಗಳೂ ನಿನ್ನಲ್ಲಿವೆ. ಆದರೆ ಭಗವಂತನು ಸರ್ವಶ್ರೇಷ್ಠನಾಗಿದ್ದಾನೆ, ನೀನು ಅಲ್ಪನಾಗಿರುವೆ. ಅವನು ಅನಂತ, ನೀನು ಅತ್ಯಲ್ಪ. ಅಂದರೆ ನೀನು ಮತ್ತು ಭಗವಂತ ಗುಣಾತ್ಮಕವಾಗಿ ಒಂದಾಗಿದ್ದೀರಿ. ಆದರೆ ಪರಿಮಾಣಾತ್ಮಕವಾಗಿ ವಿಭಿನ್ನರಾಗಿದ್ದೀರಿ.

ಗುಣಾತ್ಮಕವಾಗಿ ಭಗವಂತನೊಂದಿಗೆ ಒಂದಾಗಿರುವುದನ್ನು ಒಪ್ಪಿಕೊಳ್ಳುತ್ತಿರುವವರನ್ನು ಅದ್ವೈತವಾದಿಗಳೆನ್ನುತ್ತಾರೆ. ಅವರು ಪರಿಮಾಣಾತ್ಮಕವಾಗಿ ಭಗವಂತನೊಂದಿಗೆ ಒಂದಾಗಲು ಸಾಧ್ಯವಿಲ್ಲವೆಂಬ ಸತ್ಯವನ್ನು ಮರೆತುಬಿಡುತ್ತಾರೆ. ಜೀವಾತ್ಮನು ಪರಿಮಾಣಾತ್ಮಕವಾಗಿ ಭಗವಂತನಿಗೆ ಸಮಾನನಾಗಿರುವುದಾದರೆ, ಅವನೇಕೆ ಈ ಲೌಕಿಕ ಅಸ್ತಿತ್ವದ ಬದ್ಧ ಜೀವನದಲ್ಲಿ ಬಿದ್ದಿದ್ದಾನೆ? ಏಕೆಂದರೆ, ಜೀವಾತ್ಮನ ದೈಹಿಕ ಸ್ಥಾನಮಾನವು ಅತ್ಯಲ್ಪವಾಗಿದ್ದು, ಅವನು ಮಾಯೆಯ ಪ್ರಭಾವಕ್ಕೊಳಗಾಗುವ ಸಾಧ್ಯತೆಗಳು ಜಾಸ್ತಿ. ಅವನೂ ಸರ್ವಶ್ರೇಷ್ಠನಾಗಿದ್ದರೆ, ಮಾಯೆಯು ಅವನನ್ನು ಆಕ್ರಮಿಸುವುದು ಹೇಗೆ ಸಾಧ್ಯ? ಆಗ ಮಾಯೆಯು ಭಗವಂತನಿಗಿಂತ ಶ್ರೇಷ್ಠವೆಂದಾಗುತ್ತದೆ. ಈ ವಿಷಯಗಳನ್ನು ಪರಿಗಣಿಸಬೇಕು.
ಹಾಗಾಗಿ ವೇದಾಂತ ತತ್ತ್ವ, ಅಚಿಂತ್ಯ ಭೇದಾಭೇದ ತತ್ತ್ವ, ನಮ್ಮ ತತ್ತ್ವವಾಗಿದೆ. ಅಂದರೆ ಊಹನಾತೀತ ಏಕಕಾಲಿಕ ಐಕ್ಯ ಹಾಗೂ ಭಗವಂತ ಮತ್ತು ಜೀವಾತ್ಮದ ನಡುವಿನ ವ್ಯತ್ಯಾಸ. ನಾವು ಗುಣಾತ್ಮಕವಾಗಿ ಭಗವಂತನೊಂದಿಗೆ ಒಂದಾಗಿದ್ದರೂ, ಪರಿಮಾಣಾತ್ಮಕವಾಗಿ ವಿಭಿನ್ನರಾಗಿದ್ದೇವೆ. ಅದೇ ನಮ್ಮ ತತ್ತ್ವ, ವೈಷ್ಣವ ತತ್ತ್ವ. ಹಾಗಾಗಿ ಅದ್ವೈತವಾದ (ಐಕ್ಯ) ಮತ್ತು ದ್ವೈತವಾದ (ವ್ಯತ್ಯಾಸ) ಗಳೆರಡೂ ಸತ್ಯ. ಗುಣಾತ್ಮಕವಾಗಿ ನಮಗೂ ಭಗವಂತನಿಗೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಪರಿಮಾಣಾತ್ಮಕವಾಗಿ ವ್ಯತ್ಯಾಸವುಂಟು. ಅದೇ ಪರಿಪೂರ್ಣ ತತ್ತ್ವವಾಗಿದೆ. ಈ ವಿಚಾರ ನಿಮಗೆ ಅರ್ಥವಾಯಿತೆ?
ವಿದ್ಯಾರ್ಥಿ: ಯಾರೋ ಒಬ್ಬರು ನಾವೆಲ್ಲರೂ ಸಾಗರದತ್ತ ಹರಿಯುತ್ತಿರುವ ನದಿಯ ಹಾಗೆ ಎಂದು ಹೋಲಿಕೆ ನೀಡಿದ್ದನ್ನು ಕೇಳಿದ್ದೇನೆ. ಪರಿಪೂರ್ಣನಾದ ಬ್ರಹ್ಮನೇ ಆ ಸಾಗರ. ನಮಗೆ ಜ್ಞಾನೋದಯವಾದಾಗ ನಾವು ಬ್ರಹ್ಮನಲ್ಲಿ ಲೀನವಾಗುತ್ತೇವೆ. ಅಲ್ಲದೇ ಆ ಪವಿತ್ರ ಜ್ಯೋತಿ ಮತ್ತು ಆತ್ಮದೊಂದಿಗೆ ಒಂದಾಗುತ್ತೇವೆ.
ಶ್ರೀಲ ಪ್ರಭುಪಾದ: ಸಾಗರದಲ್ಲಿ ನೀರನ್ನು ಸುರಿಯಲಾಗುತ್ತದೆಯಾದರೂ, ನೀರನ್ನು ತೆಗೆದುಕೊಳ್ಳುವ ಕೆಲಸವೂ ನಡೆಯುತ್ತದೆ. ಅದು ಸತ್ಯ. ಸಾಗರದ ನೀರು ಆವಿಯಾಗಿ, ಮೇಲಕ್ಕೆ ಹೋಗಿ ಮೋಡಗಳನ್ನು ರೂಪಿಸುತ್ತದೆ. ಆ ಮೋಡಗಳಿಂದಲೇ ಮಳೆಯ ರೂಪದಲ್ಲಿ ನೀರು ಮತ್ತೆ ಸಾಗರದಲ್ಲಿ ಬೀಳುತ್ತದೆ. ಸಾಗರದ ನೀರು ಒಂದೇ ತೆರನಾದ ಸ್ಥಿತಿಯಲ್ಲಿಲ್ಲ.
ಹಾಗಾಗಿ ಒಮ್ಮೆ ನೀವು ಸಾಗರದೊಂದಿಗೆ ಬೆರೆತ ಅನಂತರ ಅದರಿಂದ ಹೊರಬರಲು ಅವಕಾಶವೇ ಇಲ್ಲವೆಂದು ತಿಳಿಯಕೂಡದು. ನೀವು ಹೊರಬರಲೇಬೇಕು. ಆದರೆ ನೀವು ನೀರಿನೊಳಗೆ ಹೋಗಿ, ಅಲ್ಲಿರುವ ಜೀವಿಗಳಲ್ಲಿ ನೀವೂ ಒಬ್ಬರಾಗಿಬಿಟ್ಟರೆ, ನೀವು ಹೊರಬರುವ ಆವಶ್ಯಕತೆಯಿಲ್ಲ. ನಮ್ಮ ತತ್ತ್ವವು ನೀರಿನೊಂದಿಗೆ ಬೆರೆಯುವುದಲ್ಲ, ಅದರ ಆಳಕ್ಕಿಳಿದು, ಅಲ್ಲಿರುವ ಜಲಚರಗಳಲ್ಲಿ ಒಬ್ಬರಾಗುವುದಾಗಿದೆ. ಆಗ ಮತ್ತೆ ನಾವು ಹೊರಬರುವ ಆವಶ್ಯಕತೆಯಿಲ್ಲ.
ಶ್ರೀಮದ್ಭಾಗವತ (10.2.32) ದಲ್ಲಿ ಹೇಳಿರುವಂತೆ,
ಯೇಽನ್ಯೇಽರವಿಂದಾಕ್ಷ ವಿಮುಕ್ತಮಾನಿನ
ಸ್ತ್ವಯ್ಯಸ್ತಭಾವಾದವಿಶುದ್ಧಬುದ್ಧಯಃ ।
ಆರುಹ್ಯ ಕೃಚ್ಛ್ರೇಣ ಪರಂ ಪದಂ ತತಃ
ಪತಂತ್ಯಧೋಽನಾದೃತಯುಷ್ಮದಂಘ್ರಯಃ ॥
ಇದೊಂದು ಸೊಗಸಾದ ಶ್ಲೋಕವಾಗಿದೆ. ಈ ಶ್ಲೋಕ ಹೇಳುವುದೇನೆಂದರೆ, ಕೆಲವರು ಬ್ರಹ್ಮಸಾಕ್ಷಾತ್ಕಾರದಿಂದಾಗಿ ತಾವು ಮುಕ್ತರಾಗಿದ್ದಾರೆಂದು ಯೋಚಿಸಿದರೂ, ಅವರು ಕೃಷ್ಣಸೇವೆಯನ್ನು ತಿರಸ್ಕರಿಸುವುದರಿಂದ, ಅವರ ವಿಚಾರಗಳು ಇನ್ನೂ ಶುದ್ಧವಾಗಿರುವುದಿಲ್ಲ. ಆದ್ದರಿಂದಲೇ, ಅವರು ಕಠಿಣ ತಪಶ್ಚರ್ಯೆಗಳನ್ನು ಮಾಡಿ, ಬ್ರಹ್ಮ ಓಜಸ್ಸನ್ನು ಪ್ರವೇಶಿಸಿದರೂ ಲೌಕಿಕ ಜಗತ್ತಿಗೆ ಮರಳಿ ಬರಲೇಬೇಕಾಗುತ್ತದೆ. ನಿಮಗೆ ಲೌಕಿಕ ಜಗತ್ತಿಗೆ ಮರಳಲು ಇಷ್ಟವಿಲ್ಲದಿದ್ದರೆ, ನೀವು ಆಧ್ಯಾತ್ಮಿಕ ಸಾಮ್ರಾಜ್ಯದ `ನೀರಿನ’ ಆಳಕ್ಕಿಳಿದು, ಭಗವಂತನ ಸೇವಕರಲ್ಲೊಬ್ಬರಾಗಿ ಉಳಿದುಕೊಳ್ಳಬೇಕಾಗುತ್ತದೆ. ಇದೇ ವೈಷ್ಣವ ತತ್ತ್ವವಾಗಿದೆ.

ನಾವು ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸಿ, ಅಲ್ಲಿ ನಮ್ಮ ಅಲೌಕಿಕ ಸ್ವಸ್ವರೂಪದಲ್ಲಿ ಬದುಕಲು ಬಯಸುತ್ತೇವೆ. ನಮಗೆ ಕೇವಲ ಹೊರನೋಟಕ್ಕೆ ನೀರಿನೊಂದಿಗೆ ಬೆರೆತು, ಮತ್ತೆ ಆವಿಯಾಗಿ ಹೋಗುವುದು ಅಂದರೆ ಮರಳಿ ಬರುವುದು ಇಷ್ಟವಿಲ್ಲ. ಅದ್ವೈತವಾದದ ತತ್ತ್ವದಲ್ಲಿ ನಂಬಿಕೆಯಿರುವವರು ಸಾಮಾನ್ಯವಾಗಿ ನೀವು ನೀಡಿರುವಂತಹ ಉದಾಹರಣೆಯನ್ನೇ ನೀಡುತ್ತಾರೆ. ಆದರೆ ಕೇವಲ ಬಾಹ್ಯವಾಗಿ ಬ್ರಹ್ಮಜಲದಲ್ಲಿ ಬೆರೆತುಕೊಳ್ಳುವುದು ಪರಿಪೂರ್ಣತೆಯಲ್ಲ ಎಂಬುದನ್ನು ಯಾವುದೇ ಸ್ವಸ್ಥ ಬುದ್ಧಿಯ ವ್ಯಕ್ತಿಯು ಅರಿತುಕೊಳ್ಳುತ್ತಾನೆ. ಆಗ ನೀವು ಆವಿಯ ರೂಪದಲ್ಲಿ ಹೊರಬರಲೇಬೇಕು. ನೀವು ಆ ಉದಾಹರಣೆಯನ್ನು ಬಳಸಬಯಸಿದ್ದಲ್ಲಿ, ಈ ಸಿದ್ಧಾಂತವನ್ನೂ ಒಪ್ಪಿಕೊಳ್ಳಬೇಕು. ನೀವು ಮರಳಿ ಬರುವುದಿಲ್ಲವೆಂದು ಹೇಗೆ ತಾನೇ ಹೇಳಬಲ್ಲಿರಿ? ಅದೇ ಸತ್ಯ.
ನಿಮಗೆ ಮರಳಿ ಬರಲು ಇಷ್ಟವಿಲ್ಲದಿದ್ದರೆ, ನೀರಿನ ಆಳಕ್ಕಿಳಿದು, ಅಲ್ಲಿ ಆಶ್ರಯ ಪಡೆದಿರುವ ಜೀವಿಗಳಲ್ಲಿ ಒಬ್ಬರಾಗಿ. ಅವುಗಳಿಗೇನೂ ಸಮಸ್ಯೆಯಾಗದು. ಅವುಗಳು ಮರಳಿ ಬರುವುದಿಲ್ಲ. ದೊಡ್ಡ ದೊಡ್ಡ ಜಲಚರಗಳು ನೀರಿನಲ್ಲಿ ಶಾಂತಿಯಿಂದಿರುತ್ತವೆ. ಅವುಗಳು ಎಂದಿಗೂ ನದಿಗೆ ಬರುವುದಿಲ್ಲ. ಏಕೆಂದರೆ ನದಿಯಲ್ಲಿ ಅವುಗಳಿಗೆ ಆಶ್ರಯ ನೀಡುವಷ್ಟು ಸ್ಥಳಾವಕಾಶವಿರುವುದಿಲ್ಲ. ನೀವು ಸದಾ ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ವಾಸಿಸಬೇಕೆಂದುಕೊಂಡಿದ್ದರೆ, ನೀವು ಭಗವಂತನ ಸೇವಕರಲ್ಲಿ ಒಬ್ಬರೆಂಬುದನ್ನು ಅರಿತುಕೊಳ್ಳಬೇಕು. ಆಗ ನೀವು ಪರಿಪೂರ್ಣರಾಗುವಿರಿ. ಇಲ್ಲವಾದರೆ ದಿಗ್ಭ್ರಮೆಗೊಳ್ಳುವಿರಿ ಅಷ್ಟೆ.
ನಿಮ್ಮ ಪ್ರಶ್ನೆ ತುಂಬ ಪ್ರಬುದ್ಧವಾದುದಾಗಿದೆ. ದುರದೃಷ್ಟವಶಾತ್, ಬಹಳಷ್ಟು ಜನರು ಈ ಕೃಷ್ಣಪ್ರಜ್ಞೆಯಂತಹ ಶ್ರೇಷ್ಠ ವಿಜ್ಞಾನವನ್ನು ಕುರಿತು ಪ್ರಶ್ನೆ ಕೇಳುವಷ್ಟು ಬುದ್ಧಿವಂತರಾಗಿಲ್ಲ. ಅವರು ತಮ್ಮ ಅಭಿವೃದ್ಧ ಶಿಕ್ಷಣದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆಯಾದರೂ, ಅವರು ಯಾರು ಎಂಬುದೇ ಅವರಿಗೆ ತಿಳಿದಿಲ್ಲ. ಅವರು ಜನ್ಮ ಪಡೆಯುತ್ತಿದ್ದಾರೆ, ಕೆಲಕಾಲ ಬದುಕುತ್ತಿದ್ದಾರೆ, ಅನಂತರ ನಾಯಿ ಮತ್ತು ಬೆಕ್ಕುಗಳಂತೆ ಸಾವನ್ನಪ್ಪುತ್ತಿದ್ದಾರೆ. ಅಷ್ಟೆ. ಪ್ರಸ್ತುತದಲ್ಲಿ ಮಾನವ ನಾಗರಿಕತೆಯ ಸ್ಥಿತಿ ಅತ್ಯಂತ ಅಸಹನೀಯವಾಗಿದೆ. ಏಕೆಂದರೆ, ಜನರಿಗೆ ತಮ್ಮ ನಿಜವಾದ ಸ್ವಸ್ವರೂಪದ ಬಗ್ಗೆ ಕಾಳಜಿಯೇ ಇಲ್ಲ. ಅವರು ತಮ್ಮನ್ನು ತಮ್ಮ ಶರೀರದೊಂದಿಗೆ ತಪ್ಪುತಪ್ಪಾಗಿ ಗುರುತಿಸಿಕೊಳ್ಳುತ್ತಿದ್ದಾರೆ (ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿಧಾತುಕೇ). ಶ್ರೀಮದ್ಭಾಗವತವು ಹೇಳುವಂತೆ, ಯಾವ ವ್ಯಕ್ತಿಯು ತನ್ನ ಶರೀರವೇ ತನ್ನ ಸ್ವಸ್ವರೂಪವೆಂದು ಗುರುತಿಸಿಕೊಳ್ಳುತ್ತಾನೋ, ತಾನೇ ತನ್ನ ಸಂಬಂಧಿಗಳ ರಕ್ಷಕನೆಂದುಕೊಳ್ಳುತ್ತಾನೋ, ಈ ಜಗತ್ತಿನಲ್ಲಿ ತನ್ನ ಶರೀರವು ಸೃಷ್ಟಿಯಾದ ಭಾಗವು ಪೂಜಾರ್ಹವಾದುದೆಂದು ಯೋಚಿಸುತ್ತಾನೋ – ಅಂತಹ ವ್ಯಕ್ತಿಯು ಕತ್ತೆ ಅಥವಾ ಹಸುವಿಗಿಂತ ಉತ್ತಮನೇನಲ್ಲ (ಸ ಏವ ಗೋ-ಖರಃ). ಇದು ಶ್ರೀಮದ್ಭಾಗವತದಲ್ಲಿರುವ ಸವಾಲು.
ಆದರೆ ಜನರು ಅಜ್ಞಾನದಲ್ಲಿ ಎಷ್ಟೊಂದು ಮುಳುಗಿ ಹೋಗಿದ್ದಾರೆಂದರೆ, ಈ ವಿಷಯದ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ: “ಸರಿ, ನಾವು ಹೀಗೆಯೇ ಮುಂದುವರಿಯೋಣ.” ಆದರೆ, “ನೀನು ಸಾಕ್ಷಾತ್ ಭಗವಂತನಾಗಿರುವೆ. ನೀನು ತೀರ ಅವಿವೇಕದ ಕೆಲಸಗಳನ್ನು ಮಾಡಿದರೂ ಪರವಾಗಿಲ್ಲ” ಎಂದು ನಾನು ಹೇಳಿದರೆ ಸಾಕು, ಅವರು ತುಂಬ ಸಂತುಷ್ಟರಾಗುವರು. ಇಂತಹ ಮಾತನ್ನು ನನ್ನ ಬಾಯಿಂದ ಕೇಳಲು ಜನರು ತುಂಬ ಉತ್ಸುಕರಾಗುವರು. ಆದರೆ ನಾವು ಅಂತಹ ಮಾತುಗಳನ್ನಾಡುವುದು ಸಾಧ್ಯವಿಲ್ಲ.
ಇನ್ನೇನಾದರೂ ಪ್ರಶ್ನೆಗಳಿವೆಯೇ?

ಸರಿ ಹಾಗಾದರೆ. ಬನ್ನಿ, ಮಂತ್ರ ಪಠಿಸೋಣ. ದಯವಿಟ್ಟು, ಸ್ವಲ್ಪ ಸಮಯದವರೆಗೆ ನಮ್ಮೊಂದಿಗೆ ಹರೇಕೃಷ್ಣ ಮಂತ್ರವನ್ನು ಪಠಿಸಿ.






Leave a Reply