ರಾವಣನನ್ನು ಸಂಹರಿಸಿ

ರಾವಣನ ಬದುಕಿನಿಂದ ನಾವು ನಮ್ಮ ಜೀವನನ್ನೇ ನಾಶಪಡಿಸುವ ಅಪಾಯಕಾರಿ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಬೇಕು. ದಸರಾ ಸಂದರ್ಭದಲ್ಲಿ ನಿಮ್ಮಲ್ಲಿರುವ ರಾವಣನನ್ನು ಸಂಹರಿಸಿ! ಇಲ್ಲವಾದರೆ ಅವನೇ ನಿಮ್ಮನ್ನು ಕೊಲ್ಲಬಹುದು!

ಈ ಜಗತ್ತನ್ನು ರಾವಣನ ದೌರ್ಜನ್ಯದಿಂದ ಮುಕ್ತಗೊಳಿಸಲು ದೇವೋತ್ತಮ ಪರಮ ಪುರುಷನಾದ ಶ್ರೀ ರಾಮಚಂದ್ರನು ಖುದ್ದಾಗಿ ಪ್ರಕಟಗೊಳ್ಳಬೇಕಾಗಿರಲಿಲ್ಲ. ಸಂಕಲ್ಪ ಮಾತ್ರದಿಂದ ರಾವಣನನ್ನು ವಧಿಸಬಹುದಿತ್ತು. ಆದರೆ ಬದ್ಧಾತ್ಮರನ್ನು ಕ್ಷಮಿಸಲು ತಾನು ಸಿದ್ಧ, ಅವರು ಆಶ್ರಯ ಕೋರಿ ಬಂದರೆ ಅವರಿಗೆ ಅದನ್ನು ನೀಡುತ್ತೇನೆ ಎನ್ನುವುದನ್ನು ತಿಳಿಯಪಡಿಸಲು ಅವನು ಅವತರಿಸಿದನು.

ಒಮ್ಮೆ ರಾಮಾಯಣವನ್ನು ನೆನಪು ಮಾಡಿಕೊಳ್ಳಿ. ರಾವಣನ ಎಲ್ಲ ದುಷ್ಕೃತ್ಯಗಳನ್ನು ಕ್ಷಮಿಸಲು ರಾಮನು ಸಿದ್ಧನಿದ್ದನು. ತನ್ನ ತಪ್ಪುಗಳನ್ನು ತಿದ್ದಿಕೊಂಡು ಭಕ್ತನಾಗಲು ಅಸುರ ರಾಜನಿಗೆ ರಾಮನು ಅನೇಕ ಅವಕಾಶಗಳನ್ನು ನೀಡಿದನು. ಆದರೆ ದುಃಖದ ಸಂಗತಿಯೆಂದರೆ ಲೋಭ ಮತ್ತು ಹುಸಿ ಅಹಂನಿಂದ ಬೀಗುತ್ತಿದ್ದ ರಾವಣನು ರಾಮನ ಆಶ್ರಯ ಪಡೆಯಲಿಲ್ಲ. ಅದರ ಪರಿಣಾಮ ಏನಾಯಿತೆಂದು ನಿಮಗೇ ಗೊತ್ತಿದೆ.

ರಾಮನ ಪರಮ ಭಕ್ತನಾದ ಹನುಮಾನ್‌‍ ಸೀತೆಯನ್ನು ರಾಮನಿಗೆ ಹಿಂದಿರುಗಿಸಿ ಶರಣಾಗಬೇಕೆಂದು ಪರಿಪರಿಯಾಗಿ ಬುದ್ಧಿವಾದ ಹೇಳಿದನು. ಆದರೆ ರಾವಣನು ಅದಕ್ಕೆ ಕಿವಿಗೊಡಲಿಲ್ಲ, ಬದಲಿಗೆ ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟು ಅಪಮಾನಿಸಿದನು. ರಾಮಭಕ್ತ ಹನುಮಂತನಾದರೋ ತನ್ನ ಶಕ್ತಿಯನ್ನು ತೋರಲು ಲಂಕಾದಹನ ಮಾಡಿದನು. ಧರ್ಮದ ತತ್ತ್ವಗಳನ್ನು ಅನುಸರಿಸಿ ಸೀತೆಯನ್ನು ರಾಮನಿಗೆ ಹಿಂದಿರುಗಿಸು ಎಂದು ಸಮರಕ್ಕೆ ಮುನ್ನ ಅಂಗದನು ಮನವಿಮಾಡಿಕೊಂಡನು. ಆದರೆ ಅಹಂ ಮತ್ತು ಗರ್ವದ ರಾವಣನು ಅದಕ್ಕೆ ಒಪ್ಪಲಿಲ್ಲ. ಯುದ್ಧದಲ್ಲಿ ರಾಮನನ್ನು ಸೋಲಿಸಿ ಸೀತೆಯನ್ನು ಪಡೆಯುವ ಕನಸು ಕಾಣಲಾರಂಭಿಸಿದನು. ರಾವಣನ ಹಠಮಾರಿತನವು ಅವನನ್ನು ನಾಶಪಡಿಸಿದಲ್ಲದೆ, ಅವನ ಮಕ್ಕಳು, ಸಹೋದರರು ಮತ್ತು ಅಸಂಖ್ಯ ಯೋಧರ ಸಾವಿಗೂ ಕಾರಣವಾಯಿತು. ಅನೇಕ ಮಹಿಳೆಯರು ವಿಧವೆಯಾದರು, ಮಕ್ಕಳು ಅನಾಥರಾದರು. ಆದರೆ ರಾವಣನ ಮನ ಮಾತ್ರ ಕರಗಲಿಲ್ಲ.

ಕಾಮ, ಕ್ರೋಧ ಮತ್ತು ಲೋಭವು ನರಕಕ್ಕೆ ದಾರಿ ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (16.21) ಹೇಳಿದ್ದಾನೆ. ವಿವೇಕಿಯಾದವನು ಅದನ್ನು ಬಿಡಬೇಕು. ರಾವಣನು ಕಾಮದ ಅಥವಾ ಅನಿಯಂತ್ರಿತ ಅಪೇಕ್ಷೆ, ಮುಖ್ಯವಾಗಿ ಲೈಂಕಿಕ ಅಪೇಕ್ಷೆಯ ಸಂಕೇತವಾಗಿದ್ದಾನೆ. ಕಾಮವು ಎಷ್ಟು ಅಪಾಯಕಾರಿ ಮತ್ತು ಹೇಗೆ ವ್ಯಕ್ತಿಯನ್ನು ನಾಶಪಡಿಸುತ್ತದೆ ಎನ್ನುವುದನ್ನು ನಾವು ರಾವಣನ ಬದುಕಿನಿಂದ ಅರ್ಥ ಮಾಡಿಕೊಳ್ಳಬೇಕು.

ಸೀತೆಯನ್ನು ಹೊಂದಬೇಕೆಂದು ಅಪೇಕ್ಷಿಸಿದ ಕೂಡಲೇ ರಾವಣನ ಸಂಕಷ್ಟದ ಸರಮಾಲೆ ಆರಂಭವಾಯಿತು. ಸೀತೆಯನ್ನು ಅಪಹರಿಸುವಲ್ಲಿ ಯಶಸ್ವಿಯಾದರೂ ರಾವಣನು ಅವಳ ನಿಕಟಕ್ಕೆ ಬರಲಾಗಲಿಲ್ಲ. ಬದಲಿಗೆ ನಾಶವಾದನು. ತನ್ನ ಸಾಹಸ, ಐಶ್ವರ್ಯ ಮತ್ತು ರಾಜ್ಯಗಳಿಂದ ಸೀತೆಯನ್ನು ಒಲಿಸಿಕೊಳ್ಳಬಹುದೆಂದು ಯೋಚಿಸಿ ಮೂರ್ಖನಾದನು. ತನ್ನ ಕಾಮಾಪೇಕ್ಷೆಯಿಂದ ಅವನು ಬಂಧುಗಳ ಖಂಡನೆಗೂ ತುತ್ತಾದನು. ಅವನ ಮಕ್ಕಳೇ ಅವನಿಗೆ ಸೀತೆಯನ್ನು ಹಿಂದಿರುಗಿಸುವಂತೆ ಸಲಹೆ ಮಾಡಿದರು. ಆದರೆ ರಾವಣನು ಯಾರ ಮಾತಿಗೂ ಕಿವಿಗೊಡದೆ ನಾಶವಾದನು, ಬಂಧುಬಳಗವನ್ನೂ ನಾಶಪಡಿಸಿದನು. ಅಂತಹ ಕಾಮದ ಯೋಚನೆಗಳು ನಮ್ಮ ಬಳಿ ಸುಳಿಯದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ರಾವಣನಂತೆ ನಾಶವಾಗುತ್ತೇವೆ.

ಶ್ರೀ ರಾಮಚಂದ್ರನು ರಾವಣನನ್ನು ಸಂಹರಿಸಿ ಈಗ ಬಹಳ ಸಮಯವಾಗಿದೆ. ಆದರೆ ಅಸುರನು ಕಾಮದ ರೂಪದಲ್ಲಿ ಇನ್ನೂ ನಮ್ಮ ಹೃದಯಗಳಲ್ಲಿ ನೆಲೆಸಿದ್ದಾನೆ. ನಾವು ಜಾಗರೂಕರಾಗಿಲ್ಲದಿದ್ದರೆ, ಅವನು ನಮ್ಮನ್ನು ಪಾಪಕೃತ್ಯಗಳಲ್ಲಿ ತೊಡಗುವಂತೆ ಮಾಡುತ್ತಾನೆ. ಅದು ನಮ್ಮ ಬದುಕಿನಲ್ಲಿ ದುರದೃಷ್ಟವನ್ನು ತರುತ್ತದೆ. ಕಾಮವು ನಮ್ಮ ದೊಡ್ಡ ವೈರಿ, ಅದರಿಂದ ಮುಕ್ತರಾಗಲು ನಾವು ತೀವ್ರ ಪ್ರಯತ್ನ ನಡೆಸಬೇಕು. ಶ್ರೀ ರಾಮನು ರಾವಣನಿಗೆ ಸುಧಾರಣೆಹೊಂದಲು ಅನೇಕ ಅವಕಾಶಗಳನ್ನು ನೀಡಿದನು. ನಾವು ನಮ್ಮೊಳಗಿನ ರಾವಣನನ್ನು ಕೊಲ್ಲಲು ಭಗವಂತನು ನಮಗೂ ಅವಕಾಶಗಳನ್ನು ನೀಡುತ್ತಾನೆ. ನಾವು ಸುಧಾರಣೆಗೆ ಪ್ರಯತ್ನಿಸಬೇಕಷ್ಟೆ.

ನಾವು ಕಾಮಪ್ರಚೋದಿತ ಕೃತ್ಯಗಳನ್ನು ಎಸಗುತ್ತೇವೆ ಮತ್ತು ಅದರಿಂದ ಆನಂದ ಲಭಿಸುತ್ತದೆ ಎಂದು ಭಾವಿಸುತ್ತೇವೆ. ಅಂತಹ ಆನಂದವನ್ನು ಕಳೆದುಕೊಳ್ಳಬಾರದೆಂದು ಮುಂದುವರಿಯುತ್ತೇವೆ. ಆದರೆ ನಾವು ಬದುಕನ್ನು ವಿಶ್ಲೇಷಿಸಿದರೆ, ಕಾಮದ ಕರ್ಮಗಳು ತಾತ್ಕಾಲಿಕ ಸುಖವನ್ನು ನೀಡದರೂ ಅಂತಿಮವಾಗಿ ಸಂಕಷ್ಟಗಳನ್ನೇ ಉಂಟು ಮಾಡುತ್ತವೆ ಎಂದು ಅರ್ಥವಾಗುತ್ತದೆ. ರಾಮಾಯಣದ ಕೆಲವು ಪಾತ್ರಗಳನ್ನು ಗಮನಿಸಿ. ವಾನರರು ತಮ್ಮ ಸ್ವಾಮಿ ರಾಮನಿಗೆ ಅವನ ಗುರಿ ಸಾಧನೆಗೆ ನೆರವಾದರು. ರಾಮನ ಸೇವೆ ಸಲ್ಲಿಸಿ ಪುನೀತರಾದರು. ಮತ್ತು ಧರ್ಮಗ್ರಂಥಗಳು ವಾನರರ ಸೇವೆಯನ್ನು ಕೊಂಡಾಡಿವೆ.

ಭಗವಂತನಿಗೆ ಸಲ್ಲಿಸುವ ಸೇವೆಗೆ ಸಮಾನವಾದುದೇ ಇಲ್ಲ. ವಿಭೀಷಣನು ರಾವಣನ ಆಶ್ರಯವನ್ನು ಬಿಟ್ಟು ದೃಢ ಸಂಕಲ್ಪದಿಂದ ರಾಮನಿಗೆ ಶರಣಾದನು. ವಿಭೀಷಣನನ್ನು ಸ್ವೀಕರಿಸಿದಂತೆ ಭಗವಂತನು ನಮ್ಮನ್ನೂ ಸ್ವೀಕರಿಸುತ್ತಾನೆ, ನಮ್ಮಲ್ಲಿಯೂ ಅಂತಹ ಸಂಕಲ್ಪವಿದ್ದರೆ.

ದೇವೋತ್ತಮ ಪರಮ ಪುರುಷನ ಆಶ್ರಯ ಪಡೆಯುವ ಅತ್ಯುನ್ನತ ಮಾರ್ಗವೆಂದರೆ ಅವನ ಪವಿತ್ರ ನಾಮಗಳನ್ನು ಪಠಿಸುವುದು. ಮುಖ್ಯವಾಗಿ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಮಹಾಮಂತ್ರವನ್ನು ಜಪಿಸುವುದರಿಂದ ಅದು ಸಾಧ್ಯ. ಜಪವು ಎಷ್ಟು ಶಕ್ತಿಶಾಲಿಯೆಂದರೆ, ನಮ್ಮ ಹೃದಯದಲ್ಲಿ ಶೇಖರವಾಗಿರುವ ಎಲ್ಲ ಅಶುದ್ಧ ಕಲ್ಮಶಗಳೂ ಶುದ್ಧಿಗೊಳ್ಳುತ್ತವೆ ಎಂದು ಶ್ರೀ ಚೈತನ್ಯ ಮಹಾಪ್ರಭು ಹೇಳಿದ್ದಾರೆ. ಜಪಿಸಲಾರಂಭಿಸಿದ ಕೂಡಲೇ ವ್ಯಕ್ತಿಗೆ ಲೌಕಿಕದಲ್ಲಿ ಆಸಕ್ತಿ ಕಡಮೆಯಾಗಿ ಅಲೌಕಿಕ ಆನಂದ ಹೆಚ್ಚುತ್ತದೆ.

ಕಾಮಾಗ್ನಿಯು ನಮ್ಮ ಬದುಕನ್ನು ನಾಶಪಡಿಸುತ್ತದೆ, ಆದರೆ ಭಗವಂತನಲ್ಲಿನ ನಮ್ಮ ಪ್ರೇಮವು ಅದನ್ನು ಶುದ್ಧೀಕರಿಸುತ್ತದೆ. ಭಗವಂತನ ನಿಷ್ಠಾವಂತ ಭಕ್ತರಾಗಿ ಮತ್ತು ಅವನ ಭಕ್ತಿಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡು ನಾವು ನಮ್ಮೊಳಗಿನ ರಾವಣನನ್ನು ಸಂಹರಿಸೋಣ. ಇಲ್ಲವಾದರೆ ಅಸುರನು ನಮ್ಮನ್ನು ನಾಶಪಡಿಸುತ್ತಾನೆ. ಪ್ರಬಲ ರಾವಣನನ್ನು ಪರಾಜಯಗೊಳಿಸಿದ ರಾಮನು ನಮಗೆ ಕಾಮವನ್ನು ಜಯಿಸಲು ಸಹಾಯ ಮಾಡುತ್ತಾನೆ. ಇದರಿಂದ ಅಸೀಮಿತ ಅಲೌಕಿಕ ಆನಂದದ ದ್ವಾರ ತೆರೆದುಕೊಳ್ಳುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi