ಸ್ಥಳ: ನವ ವೃಂದಾವನ, ವೆಸ್ಟ್‌ವರ್ಜೀನಿಯಾ, ದಿನಾಂಕ 26ನೇ ಜೂನ್, 1976
ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದದ ಮುಂದುವರಿಕೆ
ಅನುವಾದ : ಡಾ. ಕೆ. ವೈ. ಬಾಲರಾಜ್
ಶ್ರೀ ಪ್ರಭುಪಾದ : ಯಾರು ಭಗವಂತನಿಗೆ ಸಮರ್ಪಿತರಾಗಿದ್ದಾರೆ, ಅವರು ಬೇರೆಯವರ ಸಂತೋಷವನ್ನು ಕಂಡು ತಾವು ಸಂತೋಷಗೊಳ್ಳುತ್ತಾರೆ. (ಶಿಷ್ಯನಿಗೆ) ಮುಂದಿನ ಶ್ಲೋಕವನ್ನು ಓದಿ.

ಶಿಷ್ಯ : (ಭಗವದ್ಗೀತೆಯ 16.11-12 ಶ್ಲೋಕದಿಂದ ಓದುತ್ತಿರುವುದು): “ಇಂದ್ರಿಯ ಭೋಗವೇ ಮಾನವ ನಾಗರಿಕತೆಯ ಮುಖ್ಯ ಅಗತ್ಯ ಎಂದು ಅವರು ನಂಬುತ್ತಾರೆ. ಹೀಗೆ ಬದುಕಿನ ಕೊನೆಯವರೆಗೆ ಅವರದು ಅಳೆಯಲಾಗದ ಆತಂಕ. ಲಕ್ಷಾಂತರ ಬಯಕೆಗಳ ಬಲೆಯಲ್ಲಿ ಸಿಕ್ಕಿಬಿದ್ದು ಕಾಮಕ್ರೋಧಗಳಲ್ಲಿ ತನ್ಮಯರಾಗಿ ಅವರು ಇಂದ್ರಿಯ ತೃಪ್ತಿಗಾಗಿ ಅನ್ಯಾಯವಾದ ರೀತಿಯಲ್ಲಿ ಹಣವನ್ನು ಸಂಗ್ರಹಿಸುತ್ತಾರೆ.
ಶ್ರೀಲ ಪ್ರಭುಪಾದ : ”ಅನ್ಯಾಯ, ಭಾವಾರ್ಥ ಓದು.
ಶಿಷ್ಯ : ”ಇಂದ್ರಿಯ ಭೋಗವೇ ಬದುಕಿನ ಪರಮ ಗುರಿ ಎಂದು ರಾಕ್ಷಸೀ ಸ್ವಭಾವದವರು ಒಪ್ಪುತ್ತಾರೆ. ಸಾಯುವವರೆಗೆ ಈ ಪರಿಕಲ್ಪನೆಯನ್ನೇ ಸಾಧಿಸುತ್ತಾರೆ. ಸಾವಿನಾಚೆಯ ಬದುಕಿನಲ್ಲಿ ಅವರಿಗೆ ನಂಬಿಕೆಯಿಲ್ಲ. ತನ್ನ ಕರ್ಮಗಳಿಗೆ ಅನುಗುಣವಾಗಿ ಮನುಷ್ಯನು ಬೇರೆ ಬೇರೆ ರೀತಿಗಳ ದೇಹವನ್ನು ಪಡೆಯುತ್ತಾನೆ ಎಂದು ಅವರಿಗೆ ನಂಬಿಕೆಯಿಲ್ಲ.
ಅವರ ಬದುಕಿನ ಯೋಜನೆಗಳು ಮುಗಿಯುವುದೇ ಇಲ್ಲ. ಅವರು ಯೋಜನೆಯ ಮೇಲೆ ಯೋಜನೆಯನ್ನು ಸಿದ್ಧಗೊಳಿಸುತ್ತಾ ಹೋಗುತ್ತಾರೆ. ಅವುಗಳಿಗೆ ಮುಕ್ತಾಯವೇ ಇಲ್ಲ. ಇಂತಹ ಆಸುರೀ ಸ್ವಭಾವದ ಒಬ್ಬ ವ್ಯಕ್ತಿಯ ವೈಯಕ್ತಿಕ ಅನುಭವ ನಮಗಿದೆ. ಇನ್ನೇನು ಸಾಯುವಾಗಲು ಅವನು ತನ್ನ ಯೋಜನೆಗಳು ಮುಗಿದಿಲ್ಲ.
ಆದುದರಿಂದ ತನ್ನ ಆಯಸ್ಸನ್ನು ಇನ್ನು ನಾಲ್ಕು ವರ್ಷಗಳ ಕಾಲ ಹೆಚ್ಚಿಸಬೇಕೆಂದು ವೈದ್ಯರನ್ನು ಬೇಡಿಕೊಳ್ಳುತ್ತಿದ್ದ. ವೈದ್ಯನು ಆಯಸ್ಸನ್ನು ಒಂದು ಕ್ಷಣದ ಮಟ್ಟಿಗೂ ಹೆಚ್ಚಿಸಲಾರ ಎನ್ನುವುದು ಇಂತಹ ಮೂರ್ಖರಿಗೆ ತಿಳಿಯದು. ಎಚ್ಚರಿಕೆಯ ಪತ್ರವನ್ನು ಕೊಟ್ಟ ಮೇಲೆ ಮನುಷ್ಯನ ಅಪೇಕ್ಷೆಯ ಪರಿಗಣನೆಯೇ ಇಲ್ಲ. ಮನುಷ್ಯನು ಅನುಭವಿಸಲು ನಿಗದಿ ಮಾಡಿರುವ ಕಾಲಕ್ಕೆ ಒಂದು ಕ್ಷಣವನ್ನು ಸೇರಿಸುವುದಕ್ಕೂ ಪ್ರಕೃತಿಯ ನಿಯಮಗಳು ಅವಕಾಶ ಕೊಡುವುದಿಲ್ಲ.
ದೇವರಲ್ಲಾಗಲೀ ತನ್ನೊಳಗಿರುವ ಪರಮಾತ್ಮನಲ್ಲಾಗಲೀ ನಂಬಿಕೆಯಿಲ್ಲದ ಆಸುರೀ ಸ್ವಭಾವದ ಮನುಷ್ಯನು ಇಂದ್ರಿಯ ತೃಪ್ತಿಗಾಗಿ ಮಾತ್ರವೇ ಎಲ್ಲ ವಿಧದ ಪಾಪಕರ್ಮಗಳನ್ನು ಮಾಡುತ್ತಾನೆ. ತನ್ನ ಹೃದಯದಲ್ಲಿ ಒಬ್ಬ ಸಾಕ್ಷಿ ಕುಳಿತಿದ್ದಾನೆ ಎಂದು ಅವನಿಗೆ ತಿಳಿಯದು. ವ್ಯಕ್ತಿಗತ ಆತ್ಮದ ಕರ್ಮಗಳನ್ನು ಪರಮಾತ್ಮನು ವೀಕ್ಷಿಸುತ್ತಿರುತ್ತಾನೆ.
ಉಪನಿಷತ್ತುಗಳಲ್ಲಿ ಹೇಳಿರುವಂತೆ ಒಂದು ಮರದ ಮೇಲೆ ಎರಡು ಪಕ್ಷಿಗಳು ಕುಳಿತಿವೆ. ಒಂದು ಕ್ರಿಯೆಯಲ್ಲಿ ನಿರತವಾಗಿದ್ದು, ರೆಂಬೆಯಲ್ಲಿನ ಹಣ್ಣುಗಳನ್ನು ಸವಿಯುತ್ತಿರುತ್ತದೆ ಅಥವಾ ಅವುಗಳಿಂದ ಕಷ್ಟಪಡುತ್ತಿರುತ್ತದೆ; ಇನ್ನೊಂದು ಸಾಕ್ಷಿಯಾಗಿ ನೋಡುತ್ತಿರುತ್ತದೆ.

ಆಸುರೀ ಸ್ವಭಾವದವನಿಗೆ ವೈದಿಕ ಧರ್ಮಗ್ರಂಥಗಳ ತಿಳುವಳಿಕೆಯಿಲ್ಲ. ಅವನಿಗೆ ಶ್ರದ್ಧೆಯೂ ಇಲ್ಲ. ಆದುದರಿಂದ ಪರಿಣಾಮ ಏನೇ ಆಗಲಿ, ಇಂದ್ರಿಯ ಭೋಗಕ್ಕಾಗಿ ಏನನ್ನು ಬೇಕಾದರೂ ಮಾಡುವ ಸ್ವಾತಂತ್ರ್ಯವು ತನಗಿದೆ ಎಂದು ಭಾವಿಸುತ್ತಾನೆ.”
ಶ್ರೀಲ ಪ್ರಭುಪಾದ : ಈಗ ಚರ್ಚೆ ಮಾಡಿ.
ಶಿಷ್ಯ : ಶ್ರೀಲ ಪ್ರಭುಪಾದರೆ, ಅಮೆರಿಕದ ಶ್ರೀಮಂತ ಮನುಷ್ಯರಲ್ಲಿ ಒಬ್ಬನಾದ ಹೋವಾರ್ಡ್ ಹ್ಯೂಸ್ ಕೆಲವು ದಿವಸಗಳ ಹಿಂದೆ ತೀರಿಕೊಂಡ. ಅವನು ಉದ್ದುದ್ದವಾದ ಕೂದಲು, ಗಡ್ಡ ಮತ್ತು ಉದ್ದ ಉಗುರುಗಳನ್ನು ಇಟ್ಟುಕೊಂಡು ಒರಟ ಒರಟನಾಗಿ ಹೃದಯವಿದ್ರಾವಕ ಸ್ಥಿತಿಯಲ್ಲಿದ್ದನು. ಅವನ ದೇಹದ ಮೇಲೆಲ್ಲ ಹುಣ್ಣುಗಳಿದ್ದವು. ಲಕ್ಷಾಂತರ ಡಾಲರ್ ಗಳು ಅವನ ಬಳಿ ಇದ್ದವು. ಆದರೂ ಅವನು ಬಹಳ ತುಚ್ಚ ಸ್ಥಿತಿಯಲ್ಲಿ ಸತ್ತನು. ಅವನು ಸಾಯುವಾಗ ‘ನಾನು ತಪ್ಪು ಮಾಡಿದೆ’ ಎಂದು ಶೋಕಿಸಿದನು.
ಶ್ರೀಲ ಪ್ರಭುಪಾದ : ಅವನ ಜೀವನದಲ್ಲಿ ಅವನೇನು ಮಾಡಿದ?
ಶಿಷ್ಯ : ಅವನ ಯೌವನದಲ್ಲಿ ಅವನು ವಿಮಾನಗಳ ವಿನ್ಯಾಸವನ್ನು ಸಿದ್ಧಪಡಿಸುತ್ತಿದ್ದನು. ಮತ್ತು ವಾಣಿಜ್ಯ ವಾಯು ಮಾರ್ಗಗಳನ್ನು ಸ್ಥಾಪಿಸಲು ಅವನು ಜಗತ್ತಿನಾದ್ಯಂತ ವಿಮಾನದಲ್ಲಿ ಹಾರಾಡುತ್ತಿದ್ದನು. ಅನಂತರ ಅವನು ‘ಟ್ರಾನ್ಸ್ ವರ್ಲ್ಡ್ ಏರ್ ಲೈನ್ಸ್ʼ ಮೇಲೆ ತನ್ನ ನಿಯಂತ್ರಣವನ್ನು ಹೊಂದಿದನು.
ಇದರ ಜೊತೆಯಲ್ಲಿಯೇ ಆತ ದೊಡ್ಡ ಮೆಷಿನ್ ಟೂಲ್ ಮತ್ತು ಏರ್ ಕ್ರಾಫ್ಟ್ ಕಂಪೆನಿಗಳನ್ನು ನಡೆಸುತ್ತಿದ್ದನು. ಬೇರೆಯವರ ಕಂಪೆನಿಗಳನ್ನು ಮತ್ತು ಬೇರೆ ಜನರನ್ನು ನಿರ್ದಯಿಯಾಗಿ ಕಾಣುತ್ತಿದ್ದನು. ಎರಡನೆಯ ಜಾಗತಿಕ ಯುದ್ಧದ ಅನಂತರ ಕಾಂಗ್ರೆಸ್ ತನಿಖೆಯನ್ನು ನಡೆಸಿದಾಗ, ಅಸ್ತ್ರಗಳ ಒಪ್ಪಂದಗಳು ತನಗೇ ಸಿಗಲು ಈತ ಸರ್ಕಾರಿ ಅಧಿ ಕಾರಿಗಳಿಗೆ ಲಂಚ ಕೊಟ್ಟಿರುವುದು ಸಾಬೀತಾಯಿತು.
1968ರಲ್ಲಿ ಹೊಸದಾಗಿ ಚುನಾಯಿತವಾಗಿದ್ದ ನಿಕ್ಸ್‌ನ್ ಆಡಳಿತಕ್ಕೆ ವಿಯೆಟ್ನಾಂ ಯುದ್ಧ ಹಾಗೆಯೇ ಮುಂದುವರಿಸಿಕೊಂಡು ಹೋಗಲು ಈತ ನಿವೇದನೆ ಮಾಡಿಕೊಂಡಿದ್ದನೆಂದು ಗೊತ್ತಾಗಿದೆ. ಅವನ ಅಸ್ತ್ರಗಳಿಂದ ಸಾವಿರಾರು ಜನರು ಸತ್ತರು. ಆದರೆ ಇವನು ಯುದ್ಧವನ್ನು ನಿಲ್ಲಿಸಲಿಲ್ಲ. ಅದರಿಂದ ಅವನು ಬಹಳಷ್ಟು ಹಣವನ್ನು ಸಂಪಾದಿಸಿದನು.

ಇದಲ್ಲದೆ ಆತ ಚಲನಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದನು. ಅವನು 1930 ಮತ್ತು 1940ರಲ್ಲಿ ನಟಿಯರು ಅತ್ಯಂತ ಕಡಿಮೆ ಬಟ್ಟೆ ತೊಟ್ಟಿರುವ ”ಲೈಂಗಿಕ ಶೋಷಣೆ’ಯ ಚಿತ್ರಗಳನ್ನು ಪರಿಚಯಿಸಿದನು.
ಅನೇಕ ನಟಿಯರೊಂದಿಗೆ ಆತನ ಸಂಬಂಧವಿತ್ತು. ಅವನ ಜೀವನದ ಅಂತ್ಯದಲ್ಲಿ ಆತ ಹೆಂಗಸರೊಂದಿಗೆ ಬೆರೆಯಲಿಲ್ಲ. ಅವನು ಖಿನ್ನನಾಗಿದ್ದ ಮತ್ತು ನಿರಾಶನಾಗಿದ್ದನು. ಅವನು ಸಂನ್ಯಾಸಿಯ ಹಾಗೆ ಜೀವಿಸುತ್ತಿದ್ದನು ಮತ್ತು ರೋಗಾಣುಗಳಿಂದ ತುಂಬಾ ಭಯಗ್ರಸ್ಥನಾಗಿದ್ದನು.
ಶ್ರೀಲ ಪ್ರಭುಪಾದ : ಹೋ?
ಶಿಷ್ಯ : ಅವನು ಸಂನ್ಯಾಸಿಯ ಹಾಗೆ ಆದ ಮತ್ತು ಯಾವಾಗಲೂ ಒಂಟಿಯಾಗಿದ್ದ. ಯಾರಿಗೂ ಕೂಡ ಅವನ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ ಮತ್ತು ಅವನು ತುಂಬಾ ನಿಗೂಢನಾಗಿದ್ದ. ಕೊನೆಯ ಕ್ಷಣಗಳಲ್ಲಿ ಆತ ಇಂದ್ರಿಯ ತೃಪ್ತಿಯ ಜೀವನವನ್ನು ಅನುಭವಿಸಲೇ ಇಲ್ಲ. ತನ್ನನ್ನು ಸಾವಿನಿಂದ ರಕ್ಷಿಸಲು ವೈದ್ಯರುಗಳನ್ನು ನಿಯೋಜಿಸಿದ್ದ, ಅವನು ತನ್ನ ಕೊನೆಯ ದಿನಗಳನ್ನು ಭಯದಿಂದಲೇ ಕಳೆದ.
ಭಗವದ್ಗೀತೆಯಲ್ಲಿನ ಅಸುರರ ವಿವರಣೆ ಸರಿಯಾಗಿಯೇ ಇದೆ. ಹ್ಯೂಸ್‌ನು ಬಹಳಷ್ಟು ಆಸ್ತಿಯನ್ನು ಅನ್ಯಾಯವಾಗಿ ಸಂಪಾದಿಸಿದನು. ತನ್ನ ವಿಮಾನಗಳ ಕಂಪೆನಿಯ ಹಾಗೆ ಅನೇಕ ದೊಡ್ಡ ದೊಡ್ಡ ಒಪ್ಪಂದಗಳನ್ನು ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಡುವುದರ ಮೂಲಕ ಪಡೆದುಕೊಂಡಿದ್ದ.
ಲಾಸ್ ವೇಗಾಸ್‌ನಲ್ಲಿ ಅವನ ಜಮೀನುಗಳು ಇದ್ದವು ಮತ್ತು ಆತ ಅನೇಕ ನಿಗೂಢ ತಂತ್ರಗಳಲ್ಲಿ ತೊಡಗಿದ. ಇವೆಲ್ಲದರಿಂದಲೇ ಆತನಿಗೆ ಅನ್ಯಾಯವಾಗಿ ಬಹಳ ಹಣ ಬಂದು ಸೇರಿತು.
ಕಾಲಾಂತರಲ್ಲಿ ಆತ ಬಾಹ್ಯ ಪ್ರಪಂಚದಿಂದ ತುಂಬಾ ಭಯಭೀತನಾಗಿದ್ದನು ಮತ್ತು ತನ್ನ ವೃದ್ಧಾಪ್ಯದಲ್ಲಿ ರೋಗಾಣುಗಳಿಗೆ ತುಂಬಾ ಹೆದರುತ್ತಿದ್ದನು. ತನಗೆ ಯಾವುದಾದರೂ ಕಾಯಿಲೆ ಅಂಟಿಕೊಂಡು ತಾನು ಅದರಿಂದ ಸಾಯುವೆನೆಂದು ಆತ ಸಾವಿನಿಂದ ತುಂಬಾ ಹೆದರುತ್ತಿದ್ದ.
ಅದಕ್ಕಾಗಿಯೇ ಆತ ಏಕಾಂತವಾದ ಮುಚ್ಚಿರುವ ಕೊಠಡಿಗಳಲ್ಲಿ ವಾಸಿಸುತ್ತಿದ್ದ. ಜೀವಾಣುಗಳು ಪ್ರವೇಶಿಸಬಾರದೆಂದು ಅದರಲ್ಲಿ ಕೃತಕವಾದ ಶುದ್ಧಗಾಳಿ ಮತ್ತು ಬೆಳಕು ಇರುತ್ತಿತ್ತು. ಅವನು ರೋಗಾಣು ನಿರೋಧಕ ಬಟ್ಟೆಗಳನ್ನು ಹಾಕುತ್ತಿದ್ದನು.

ಶ್ರೀಲ ಪ್ರಭುಪಾದ : ತನ್ನ ದೇಹದಲ್ಲಿಯೇ ಜೀವಾಣುಗಳು ಉತ್ಪತ್ತಿಯಾಗುತ್ತವೆ ಎಂದು ಆತನಿಗೆ ಗೊತ್ತಿರಲಿಕ್ಕಿಲ್ಲ.
ಶಿಷ್ಯ : ಹೌದು ಶ್ರೀಲ ಪ್ರಭುವಾದರೇ, ತನ್ನ ಲಕ್ಷಾಂತರ ಡಾಲರ್ ಗಳಿಂದಲೂ ಕೂಡ ಆತ ಸಾವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಅವನು ಬಹಳಷ್ಟು ಹಣವನ್ನು ಜೀವಾಣುಗಳಿಂದ ಮುಕ್ತನಾಗಲು ಉಪಯೋಗಿಸಿದ. ಆದರೆ ಅದರಿಂದೇನೂ ಸಫಲವಾಗಲಿಲ್ಲ.
ಶ್ರೀಲ ಪ್ರಭುಪಾದ : ಹೌದು, ಒಂದು ವೇಳೆ ಆತ ಜೀವಾಣುಗಳಿಂದ ಮುಕ್ತನಾಗಿದ್ದರೆ ಅವನು ಹೇಗೆ ಸತ್ತ? (ಮೌನ ಆವರಿಸಿತು)
ಶಿಷ್ಯ : ಅದಕ್ಕೆ ಆತ ನಾನು ಜೀವನದಲ್ಲಿ ಬಹಳಷ್ಟನ್ನು ಗಳಿಸಿದ್ದೇನೆ. ಆದರೆ ನಿಜವಾಗಿಯೂ ಜೀವನ ಏನು ಎಂಬುದು ನನಗೆ ಗೊತ್ತಾಗಲಿಲ್ಲ. ಬಹುಶಃ ನಾನು ತಪ್ಪು ಮಾಡಿದೆ.”
ಶ್ರೀಲ ಪ್ರಭುಪಾದ : ಹೌದು, ಅದು ತಪ್ಪು.






Leave a Reply