ದೀಪಾವಳಿ ಆಚರಣೆ

– ಗಾಯತ್ರಿ ದೇವಿ

ದೀಪಾವಳಿಯಲ್ಲಿ ಏನೆಲ್ಲಾ ಉಂಟು! ಅಲ್ಲಿ ದೀಪಗಳಿವೆ, ಬೆಳಕಿದೆ, ಸಿಹಿ ಖಾದ್ಯಗಳ ವಿನಿಮಯವಿದೆ, ನೀರು ತುಂಬುವ ಹಬ್ಬವಿದೆ, ಲಕ್ಷ್ಮೀ ಪೂಜೆ ಇದೆ, ನರಕ ಚತುರ್ದಶಿ ಇದೆ, ಬಲೀಂದ್ರನ ಪೂಜೆ ಇದೆ, ಪಟಾಕಿ ಇದೆ… ಒಟ್ಟಿನಲ್ಲಿ ದೀಪಾವಳಿಯು ಹರ್ಷದ ಹೊನಲು ಹರಿಸುವ ಹಬ್ಬ.

ದೀಪಾವಳಿ ಬರೀ ದೀಪ ಹಚ್ಚಿಡುವ, ಸಿಹಿ ಖಾದ್ಯ ಆಸ್ವಾದಿಸುವ ಅಥವಾ ಉಡುಗೊರೆ ವಿನಿಮಯಗಳ ಆಚರಣೆ ಅಲ್ಲ. ಅದಕ್ಕೆ ಆಯಾಮಗಳುಂಟು. ಮುಖ್ಯವಾಗಿ ಹೇಳುವುದಾದರೆ, 1) ಶ್ರೀ ರಾಮನು ವನವಾಸವನ್ನು ಪೂರ್ಣಗೊಳಿಸಿ ಅಯೋಧ್ಯೆಗೆ ವಾಪಸಾಗಿದ್ದು, 2) ಶ್ರೀ ಕೃಷ್ಣನ ಅವತಾರಗಳನ್ನು ಕೊಂಡಾಡುವದು, 3) ನರಕಾಸುರನ ವಧೆ, 16100 ರಾಜಕುಮಾರಿಯರನ್ನು ಅವನ ಸೆರೆಯಿಂದ ಬಿಡುಗಡೆ ಮಾಡಿದ್ದು. 4) ಬಲಿ ಚಕ್ರವರ್ತಿಗೆ ಭಗವಂತನ ಅನುಗ್ರಹ, 5) ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದುದು, 6) ಕ್ಷೀರಸಾಗರವನ್ನು ಕಡೆದಾಗ ಮಹಾಲಕ್ಷ್ಮಿಯ ಅವತಾರ, 7) ಕೃಷ್ಣನ ದಾಮೋದರ ಲೀಲೆಯನ್ನು ಕೊಂಡಾಡುವುದು ಇತ್ಯಾದಿ.

ದೀಪಗಳ ಸಾಲು, ತಳಿರು ತೋರಣ

ಅಸಂಖ್ಯ ದೀಪಗಳನ್ನು ಎಲ್ಲ ಕಡೆ ಬೆಳಗಲಾಗುತ್ತದೆ. “ತಮಸೋ ಮಾ, ಜ್ಯೋತಿರ್ಗಮಯ” ಎನ್ನುತ್ತಾರೆ. “ಕತ್ತಲಿನಲ್ಲಿ ಉಳಿಯಬೇಡ, ಬೆಳಕಿಗೆ ಬಾ” ಎಂದು ಅರ್ಥ. ಅಂದರೆ “ಆಧ್ಯಾತ್ಮಿಕ ಅರಿವು ಅಥವಾ ಜ್ಞಾನಕ್ಕೆ ಬಾ” ಎಂದು ಅರ್ಥ. ಕೆಂಪು ಮಣ್ಣಿನ ದೀಪವು ತುಂಬಾ ಶ್ರೇಷ್ಠ. ಅದರಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಬತ್ತಿಗಳನ್ನು ಇಟ್ಟು ದೀಪ ಹಚ್ಚುವುದು ಶುಭಕರ. ದೀಪದ ಬೆಳಕಿದ್ದರೆ ಕತ್ತಲೆಗೆಲ್ಲಿ ಸ್ಥಳ? ಅಜ್ಞಾನದ ಕತ್ತಲನ್ನೂ ಮೂಲೋತ್ಪಾಟನೆ ಮಾಡುವ ಶಕ್ತಿ ಈ ದೀಪಗಳ ಬೆಳಕಿನದು. ಆದುದರಿಂದಲೇ ಮನೆಗಳ ಒಳಗೆ, ಹೊರಗೆ, ಕಟ್ಟಡಗಳ ಮೇಲೆ, ಅಂಗಡಿಗಳಲ್ಲಿ ದೀಪಗಳನ್ನು ಬೆಳಗಲಾಗುತ್ತದೆ. ಭಕ್ತರು ಮಂದಿರಗಳಿಗೆ ಭೇಟಿ ನೀಡಿ ದೀಪಗಳನ್ನು ಹಚ್ಚಿ ಭಗವಂತನ ದರ್ಶನ ಪಡೆಯುತ್ತಾರೆ.

ಈ ಹರ್ಷಕ್ಕೆ ಪೂರಕವಾಗಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ, ಬಾಗಿಲುಗಳಿಗೆ ತಳಿರು ತೋರಣಗಳನ್ನು ಹಾಕಿ ಅಲಂಕರಿಸಲಾಗುವುದು. ಕೆಲವರು ಆಕಾಶಬುಟ್ಟಿಯನ್ನು ಮನೆಯ ಮುಂದೆ ಕಟ್ಟಿ ಅದರಲ್ಲಿಯೂ ದೀಪವನ್ನು ಬೆಳಗುತ್ತಾರೆ. ಆನಂದ ವಾತಾವರಣವನ್ನು ನಿರ್ಮಿಸುವುದೇ ಇದರ ಸಂಕೇತ. ಭಕ್ತಿ ಸಂಗೀತವು ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ.

ಅನೇಕ ಮನೆಗಳಲ್ಲಿ ದೀಪಾವಳಿಗಾಗಿ ತಿಂಗಳಿಗೆ ಮುನ್ನವೇ ಸಿದ್ಧತೆ ನಡೆಯುತ್ತದೆ. ಮನೆ ಶುದ್ಧೀಕರಣ ಮತ್ತು ಗೃಹಾಲಂಕಾರ. ಇವು ನಕಾರಾತ್ಮಕ ಧೋರಣೆಯನ್ನು ನಾಶಪಡಿಸಿ ಹೊಸ ಆರಂಭವನ್ನು ತರುವುದೆಂದು ನಂಬಿಕೆ. ದೀಪಾವಳಿ ಸಮಯದಲ್ಲಿ ಕೌಟುಂಬಿಕ ಉತ್ಸಾಹ ಹೆಚ್ಚು. ಹಬ್ಬ ಆಚರಣೆ, ಉಡುಗೊರೆ ವಿನಿಮಯ, ಶುಭಾಶಯ ವಿನಿಮಯ, ಸಾಮೂಹಿಕವಾಗಿ ಪಟಾಕಿ ಹಚ್ಚುವುದು ಇತ್ಯಾದಿ. ಮುಂಜಾನೆ ಏಳುವ ಜನರು ಪೂಜೆ ಮುಗಿಸಿ ಹಿರಿಯರಿಗೆ ಪಾದ ಮುಟ್ಟಿ ವಂದಿಸಿ ಆಶೀರ್ವಾದ ಪಡೆಯುವರು. ವಿವಾಹಿತ ಹೆಣ್ಣು ಮಕ್ಕಳನ್ನು ತವರು ಮನೆಗೆ ಆಹ್ವಾನಿಸಿ ಸತ್ಕರಿಸಲಾಗುವುದು.

ಅಷ್ಟೇ ಅಲ್ಲ, ದೀಪಾವಳಿಯು ಆರ್ಥಿಕ ವರ್ಷದ ಕೊನೆಯ ದಿನ. ಆದುದರಿಂದ ವ್ಯಾಪಾರಿಗಳು ಹೊಸ ಲೆಕ್ಕ ಪುಸ್ತಕಗಳ ಪೂಜೆ ಮಾಡುವರು.

ಆಧ್ಯಾತ್ಮಿಕ

ನೀರು ತುಂಬುವ ಹಬ್ಬದೊಂದಿಗೆ ಧಾರ್ಮಿಕ ಚಟುವಟಿಕೆ ಆರಂಭ. ಹಂಡೆ, ಬಿಂದಿಗೆಗಳನ್ನು ಬೆಳಗಿ, ನೀರು ತುಂಬಿ ಇಡಲಾಗುವುದು. ಮರುದಿನ ಮುಂಜಾನೆ ಅಭ್ಯಂಜನ ಮಾಡಿ ಪಟಾಕಿ ಹಚ್ಚುವುದು. ಅನಂತರ ವಿಶೇಷ ಉಪಹಾರದ ಸ್ವೀಕಾರ. ಅದರ ಅನಂತರ ನರಕ ಚತುದರ್ಶಿ. ನರಕಾಸುರನ ವಧೆಯಾಗಿ , ಕೃಷ್ಣನು 16100 ರಾಜಕುಮಾರಿಯರನ್ನು ಅವನ ಸೆರೆಯಿಂದ ರಕ್ಷಿಸಿದ ಮತ್ತು ಅವರನ್ನು ವರಿಸಿದ ಎನ್ನುವ ಪ್ರತೀತಿ. ಈ ಲೀಲೆಯನ್ನು ಕೊಂಡಾಡಲು ನರಕ ಚತುರ್ದದಶಿ ಆಚರಣೆ.

ಮರುದಿನ ಅದೃಷ್ಟ ದೇವತೆ ಲಕ್ಷ್ಮೀದೇವಿಗೆ ಪ್ರಾಶಸ್ತ್ಯ. ಲಕ್ಷ್ಮಿಯು ಈ ದಿನ ಕ್ಷೀರಸಾಗರದಿಂದ ಅವತರಿಸಿದಳು ಮತ್ತು ಸಂಪತ್ತಿನ ಸಾಕಾರ ರೂಪವೆಂದು ಅವಳಿಗೆ ಪೂಜೆ. ಅವಳ ನಾಣ್ಯಗಳಿಗೂ ಅಭಿಷೇಕ. ಮರುದಿನ ಬಲಿ ಪಾಡ್ಯಮಿ. ವಾಮನ ಅವತಾರದಲ್ಲಿ ಭಗವಂತನ ಕೃಪೆಗೆ ಪಾತ್ರನಾದ ಬಲಿ ಚಕ್ರವರ್ತಿಗೆ ಒಂದು ದಿನ ತನ್ನ ರಾಜ್ಯಕ್ಕೆ ಭೇಟಿ ನೀಡುವ ಅನುಗ್ರಹ ಲಭಿಸುತ್ತದೆ. ಅದನ್ನು ಕೊಂಡಾಡಲು ಬಲೀಂದ್ರನ ಪೂಜೆ.
ಕೃಷ್ಣನು ಗೋವರ್ಧನ ಗಿರಿಯನ್ನು ಈ ದಿನ ಎತ್ತಿದನು ಎಂದು ಪ್ರತೀತಿ. ಆದುದರಿಂದ ಗೋವರ್ಧನ ಪೂಜೆಯನ್ನು ಆಚರಿಸಲಾಗುವುದು. ಎಲ್ಲರೂ ಖಾದ್ಯ ಪದಾರ್ಥಗಳನ್ನು ತಂದು ಗಿರಿಯ ರೂಪದಲ್ಲಿ ಇಡುವರು. ವ್ರಜವಾಸಿಗಳನ್ನು ಇಂದ್ರನಿಂದ ರಕ್ಷಿಸಲು ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ ಲೀಲೆಯನ್ನು ಕೊಂಡಾಡಲು ವಿಶೇಷ ನಾಟಕಗಳ ಪ್ರದರ್ಶನ. ಗಿರಿ ರೂಪದ ಪ್ರಸಾದವನ್ನು ಅನಂತರ ಎಲ್ಲರಿಗೂ ಹಂಚಲಾಗುವುದು.

ರಾಮಾಯಣದ ಕಥೆಯಲ್ಲಿ ದೀಪಾವಳಿಗೆ ಮಹತ್ವವಿದೆ. ರಾಮ, ಲಕ್ಷ್ಮಣ ಮತ್ತು ಸೀತೆಯನ್ನು ಹನುಮಂತನೊಂದಿಗೆ ಬರಮಾಡಿಕೊಳ್ಳಲು ಭರತನು ಅತ್ಯಂತ ಕಾತರದಿಂದ ಕಾಯುತ್ತಲಿದ್ದನು. ದೀಪಾವಳಿಯಂದು ಕತ್ತಲು. ರಾಮನ ಪುಷ್ಪಕ ವಿಮಾನಕ್ಕೆ ಬೆಳಕು ತೋರಲು ಇಡೀ ಅಯೋಧ್ಯೆಯಲ್ಲಿ ದೀಪಗಳ ಸಾಲು ಸಾಲೇ ಬೆಳಗುತ್ತಿದ್ದವಂತೆ! ಆದುದರಿಂದ ಆಗ ಅಯೋಧ್ಯೆ ನಗರವನ್ನು ಸುಂದರವಾದ ದೀಪ, ಹೂವು, ರಂಗೋಲಿ, ತೋರಣ, ಸುಗಂಧ ದ್ರವ್ಯಗಳಿಂದ ಅಲಂಕರಿಸಲಾಗಿತ್ತು. ಈಗಲೂ ದೀಪಾವಳಿಯಂದು ಅಯೋಧ್ಯೆ ದೀಪಗಳಿಂದ ಬೆಳಗುತ್ತದೆ. ಹಾಗೆಯೇ ಕೃಷ್ಣನ ದಾಮೋದರ ಲೀಲೆಯನ್ನು ಕೊಂಡಾಡಲು ವೃಂದಾವನದಲ್ಲಿ ಕಾರ್ತಿಕ ಮಾಸ ಪೂರಾ ವಿಶೇಷ ಆಚರಣೆ.
ಭಗವಂತನ ಅವತಾರಗಳನ್ನು ಕುರಿತು ಅನಾದಿ ಕಾಲದಿಂದಲೂ ಜನರು ಹಾಡುತ್ತಿದ್ದಾರೆ, ಕೇಳುತ್ತಿದ್ದಾರೆ. ಅವನು ಲೀಲೆಗಳನ್ನು ತೋರಿದ ಸ್ಥಳಗಳಿಗೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಅವುಗಳಿಗೆ ಮಹತ್ವ ಹೆಚ್ಚು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi