“ಉನ್ನತ ತಂತ್ರಜ್ಞಾನದಿಂದ ಆಕರ್ಷಿತರಾಗುವ ಜನರು ಬದುಕಿನ ಆಧ್ಯಾತ್ಮಿಕ ಉದ್ದೇಶವನ್ನು ಕುರಿತು ಯೋಚಿಸುವುದೇ ಇಲ್ಲ. ಅದನ್ನು ಅವೈಜ್ಞಾನಿಕ ಮತ್ತು ಹಳೆಯದು ಎಂದು ತಪ್ಪಾಗಿ ಭಾವಿಸುತ್ತಾರೆ.”

ನಾವು ತಂತ್ರಜ್ಞಾನಯುಗದಲ್ಲಿದ್ದೇವೆ. ನಾವು ಮೋಟಾರು ಮತ್ತು ವಿಮಾನಗಳಲ್ಲಿ ಸಂಚರಿಸುತ್ತೇವೆ. ಇ ಮೇಲ್ ಮತ್ತು ಮೊಬೈಲ್‌ಫೋನ್ ಮೂಲಕ ಸಂಪರ್ಕಿಸುತ್ತೇವೆ. ಮಾಧ್ಯಮಗಳು ಮತ್ತು ಅಂತರ್‌ಜಾಲವು ಇಡೀ ಜಗತ್ತಿನ ಮಾಹಿತಿಗಳನ್ನು ಮತ್ತು ತಾಜಾ ಸುದ್ದಿಯನ್ನು ಒದಗಿಸುತ್ತವೆ. ಉನ್ನತ ತಂತ್ರಜ್ಞಾನದ ವಿಶೇಷ ಪರಿಣಾಮಗಳಿರುವ ಚಲನಚಿತ್ರಗಳು ನಮಗೆ ಮನರಂಜನೆ ನೀಡುತ್ತವೆ. ಪ್ರತೀಕೂಲ ಹವಾಮಾನದಲ್ಲಿಯೂ ಕೂಡ ಹವಾ ನಿಯಂತ್ರಿತ ವ್ಯವಸ್ಥೆಯು ನಮ್ಮನ್ನು ಹಿತವಾಗಿಡುತ್ತದೆ. ತಂತ್ರಜ್ಞಾನವು ಉತ್ಪಾದಿಸುವ ಮಾಲಿನ್ಯ ಮತ್ತು ಪರಿಸರ ಸಮಸ್ಯೆಗಳನ್ನು ಕುರಿತು ಆತಂಕಗಳಿದ್ದರೂ ತಂತ್ರಜ್ಞಾನವು ನಮಗೆ ತುಂಬಾ ಲಾಭದಾಯವಾಗಿದೆ ಎಂದು ಜನರು ಭಾವಿಸುತ್ತಾರೆ.
ತಂತ್ರಜ್ಞಾನವು ಎಲ್ಲಿಗೆ ಒಯ್ಯುತ್ತಿದೆ?
ಸೌಲಭ್ಯಗಳು, ಭೋಗವಸ್ತುಗಳು ಮತ್ತು ಉನ್ನತ ತಾಂತ್ರಿಕ ಸಾಧನಗಳ ಥಳಕುಪಳಕು ಮಾನವ ಸಮಾಜವನ್ನು ಪ್ರಗತಿಯತ್ತ ಸಾಗುವಂತೆ ಮಾಡುತ್ತಿದೆ ಎನ್ನುವಂತೆ ಕಾಣಿಸುತ್ತದೆ. ಆದರೆ ನಮ್ಮ ಬದುಕಿನ ಜೀವನಮಟ್ಟ ಸುಧಾರಿಸಿದೆಯೇ?
• ಈ ಹಿಂದೆ ನಾವು ಯಾವ ಭಯವೂ ಇಲ್ಲದೆ ಮನೆ ಬಾಗಿಲುಗಳನ್ನು ತೆರೆದು ಹೋಗುತ್ತಿದ್ದೆವು. ಈಗ ಬೀಗ, ಸರಪಳಿ, ಎಚ್ಚರಿಕೆಯ ಗಂಟೆಗಳಿದ್ದರೂ ನಮಗೆ ಭಯ. ಇದು ಪ್ರಗತಿಯೇ?
• ನಮ್ಮ ಭವ್ಯ ಮನೆಗಳು, ಐಷಾರಾಮಿ ಕಾರುಗಳು, ಒಳ್ಳೆಯ ರಸ್ತೆಗಳು ಮತ್ತು ಬಹುಮಹಡಿ ಕಚೇರಿಗಳಿಂದ ಹೆಮ್ಮೆಪಟ್ಟುಕೊಳ್ಳುತ್ತೇವೆ. ಆದರೆ ಮಾತ್ರೆಯಿಲ್ಲದೆ ನಮಗೆ ನಿದ್ರೆ ಬರುವುದಿಲ್ಲ. ನಮ್ಮ ಗ್ರಾಮೀಣರಿಗೆ ಯಾವುದೇ ಶ್ರಮವಿಲ್ಲದೆ ಸಿಗುವ ನಿದ್ರೆಯ ಆನಂದವನ್ನು ಪಡೆಯಲು ನಾವು ಹೋರಾಡಬೇಕೆಂದರೆ ಅಂತಹ ಸಮಾಜವನ್ನು ಪ್ರಗತಿದಾಯಕ ಎಂದು ಕರೆಯಬಹುದೇ?
• ಲೌಕಿಕವಾದ ತಾಂತ್ರಿಕ ವಿಶ್ವ ದೃಷ್ಟಿಕೋನವು ಸ್ವಾರ್ಥ, ಸ್ಪರ್ಧೆ ಮತ್ತು ಶೋಷಣೆಯನ್ನು ಹುಟ್ಟುಹಾಕುತ್ತದೆ. ಪ್ರೀತಿ-ಪ್ರೇಮವನ್ನು ತೋರಿದರೂ ನಾವು ನಮ್ಮ ಸಂಗಾತಿಗಳನ್ನೇ ನಂಬುವುದಿಲ್ಲ. ಇನ್ನು ಪೋಷಕರು, ಮಕ್ಕಳು, ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳ ಬಗೆಗೆ ಏನು ಹೇಳುವುದು? ಪ್ರತ್ಯೇಕ, ಶಂಕಾಸ್ಪದ ಜನರು ಪ್ರಗತಿದಾಯಕ ಸಮಾಜವನ್ನು ರಚಿಸುವರೇ?

• ಯಾಂತ್ರೀಕೃತ ಕಾರ್ಖಾನೆಗಳು ಹಿಂದಿನ ಕೃಷಿ ಕ್ಷೇತ್ರ ನೀಡುತ್ತಿದ್ದಷ್ಟು ಉದ್ಯೋಗವನ್ನು ಕೊಡುತ್ತಿಲ್ಲ. ಆದುದರಿಂದ ಅಸಂಖ್ಯ ಜನರು ನಿರುದ್ಯೋಗವನ್ನು ಎದುರಿಸಬೇಕಾಗಿದೆ. ಕೆಲವು ನಿರುದ್ಯೋಗಿಗಳು ಬದುಕಲು ಅಪರಾಧ ಪ್ರಕರಣಗಳಲ್ಲಿ ತೊಡಗುತ್ತಾರೆ. ಒಟ್ಟಾರೆ, ಆಧುನಿಕ ಕೈಗಾರಿಕೆ ಪರಿಸರವು ಎಷ್ಟು ಕ್ಷೋಭೆಯದ್ದಾಗಿದೆ ಎಂದರೆ ಅನೇಕ ಜನರಿಗೆ ಸ್ವಯಂ ನಾಶಕ ಚಟಗಳೇ ಉಪಶಮನ ಎನ್ನಿಸಿಕೊಂಡು ಬಿಡುತ್ತವೆ. ಅಪರಾಧ, ಚಟ, ಮತ್ತು ನಿರುದ್ಯೋಗವು ಪ್ರಗತಿಯ ಚಿಹ್ನೆಗಳೇ?
• ತಂತ್ರಜ್ಞಾನವು ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ಅತಿ ವೇಗದ, ಅತಿ ಒತ್ತಡದ ತಂತ್ರಜ್ಞಾನ ಕೇಂದ್ರೀಕೃತ ಜೀವನಶೈಲಿಯು ಆ ಸೌಲಭ್ಯಗಳನ್ನು ಆನಂದಿಸಲು ಅಗತ್ಯವಾದ ಮನಶಾಂತಿಯನ್ನೇ ಕಿತ್ತುಕೊಳ್ಳುತ್ತದೆ. ಒಬ್ಬ ಸಾಫ್ಟ್ವೇರ್‌ಎಂಜನಿಯರ್ಗೆ ಕಚೇರಿಯಲ್ಲಿ ಎ.ಸಿ. ಇರುತ್ತದೆ. ಆದರೂ ಅವನು ಬೆವರುತ್ತಾನೆ. ಸೆಖೆಯಿಂದಲ್ಲ, ಒತ್ತಡದ ಕಾರಣದಿಂದ. ತಂತ್ರಜ್ಞಾನವು ನಮ್ಮನ್ನು ಸರಾಗವಾಗಿ ದುಃಖಿಗಳನ್ನಾಗಿ ಮಾಡುತ್ತದೆ.

• ವೈದ್ಯಕೀಯ ತಂತ್ರಜ್ಞಾನವು ಕೆಲವು ರೋಗಗಳನ್ನು ನಿರ್ನಾಮಗೊಳಿಸಿರಬಹುದು. ಮತ್ತು ಕೆಲವು ರೋಗಗಳಿಗೆ ಚಿಕಿತ್ಸೆ ನೀಡಬಹುದು. ಆದರೆ ಹಿಂದಿಗಿಂತಲೂ ಈಗ ಹೆಚ್ಚು ಜನರಿಗೆ ವೈದ್ಯಕೀಯ ಗಮನ ಅಗತ್ಯವಾಗಿದೆ. ಏಕೆಂದರೆ, ಅನಾರೋಗ್ಯಕರ, ಜನದಟ್ಟಣೆಯ ನಗರ ಜೀವನ, ಜೀವನಶೈಲಿ, ಮತ್ತು ಮಾಲಿನ್ಯವಾದ ಗಾಳಿ, ನೀರು ಮತ್ತು ಆಹಾರ. ಹೆಚ್ಚುತ್ತಿರುವ ಚಿಕಿತ್ಸಾಲಯ, ಆಸ್ಪತ್ರೆ, ಮತ್ತು ಔಷಧದ ಅಂಗಡಿಗಳಿಂದ ಇದು ವೇದ್ಯ. ಅಲ್ಲದೆ, ಅನೇಕ ಆಧುನಿಕ ವೈದ್ಯಕೀಯ ಚಿಕಿತ್ಸೆಗಳು ಪಾರಂಪರಿಕ ಗಿಡಮೂಲ ಚಿಕಿತ್ಸೆಗಿಂತ ತುಂಬಾ ದುಬಾರಿ.
• ಅನೇಕ ಜನರು ಈಗ ಟಿವಿ, ಚಲನಚಿತ್ರ ಮತ್ತು ಉನ್ನತ ತಂತ್ರಜ್ಞಾನದ ಇತರ ಮನರಂಜನೆ ವಿಧಾನಗಳಿಲ್ಲದೆ ಬದುಕನ್ನೇ ಕಲ್ಪಿಸಿಕೊಳ್ಳುವುದಿಲ್ಲ. ತಮ್ಮ ಹಿರಿಕರಿಗೆ ಈ ಆನಂದಗಳೇ ಇರಲಿಲ್ಲ ಎಂದು ಅವರು ವ್ಯಥೆ ಪಡುತ್ತಾರೆ. ಆದರೆ ಹಿಂದಿನವರಿಗೆ ಬದುಕಿನ ಸರಳ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಗೊತ್ತಿತ್ತು. ಜಂಟಿ ಕುಟುಂಬಗಳಲ್ಲಿ ಹಂಚಿಕೊಳ್ಳುವುದು ಮತ್ತು ಕಾಳಜಿ ಹೊಂದಿರುವುದು, ಪ್ರಕೃತಿಯನ್ನು ವೀಕ್ಷಿಸಿ ಕಲಿಯುವುದು ಹಾಗೂ ಭಗವಂತನ ನಾಮಗಳನ್ನು ಮತ್ತು ವೈಭವಗಳನ್ನು ಕೇಳುವುದು ಮತ್ತು ಸಂಕೀರ್ತನೆ ಮಾಡುವುದರ ಮೂಲಕ ಅವರು ಸಂತೋಷವನ್ನು ಕಂಡಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ಜೀವನ ಬೇಸರವೆನ್ನಿಸಿಕೊಂಡಿರಲಿಲ್ಲ. ತಂತ್ರಜ್ಞಾನದ ವ್ಯಾಮೋಹದಿಂದ ನಾವು ಸರಳವಾದ, ಸಹಜ ಆನಂದಗಳನ್ನು ತ್ಯಜಿಸಿಬಿಟ್ಟಿದ್ದೇವೆ. ಹೀಗಾಗಿ ಅಪಾರವಾಗಿ ಮನರಂಜನೆಗಳಿದ್ದರೂ ನಾವು ಸದಾ ಬೇಸರದಿಂದ ಇರುತ್ತೇವೆ.

• ನಿಯಂತ್ರಕನೆಂಬ ಭಾವನೆಯೊಂದಿಗೆ ತಂತ್ರಜ್ಞಾನವು ನಮ್ಮನ್ನು ಅಮಲಿಗೇರಿಸಿಬಿಡುತ್ತಿದೆ. ಒಂದು ಸ್ವಿಚ್ ಅನ್ನು ಒತ್ತುವುದರಿಂದ ಭಾರಿ ಯಂತ್ರವು ಅನೇಕ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುವಂತೆ ಮಾಡಬಹುದು. ಕೀಲಿಮಣೆಯನ್ನು (ಕೀ ಬೋರ್ಡ್) ಒತ್ತಿದರೆ ನಾವು ಜಗತ್ತಿನ ಯಾವುದೇ ಭಾಗದಿಂದ ಮಾಹಿತಿಯನ್ನು ಪಡೆಯಬಹುದು. ಯಂತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತ ನಾವು ಅದನ್ನು ನಿಯಂತ್ರಿಸುವುದು ಅಭ್ಯಾಸವಾಗಿಬಿಡುತ್ತದೆ ಮತ್ತು ಎಲ್ಲವೂ, ಎಲ್ಲರನ್ನೂ ಅದೇ ರೀತಿ ನಿಯಂತ್ರಿಸಬಹುದೆಂದು ನಿರೀಕ್ಷಿಸುತ್ತೇವೆ. ಆದರೆ ಯಂತ್ರಗಳಂತೆ ತಮ್ಮನ್ನು ನಿಯಂತ್ರಿಸುವುದನ್ನು ಜನರು ನಿರಾಕರಿಸಿದರೆ ಅದು ನಾನಾ ರೀತಿಯ ಸಂಘರ್ಷಕ್ಕೆ ಕಾರಣವಾಗಬಹುದು. ನಮ್ಮ ಬಯಕೆಯಂತೆ ಆಗದಿದ್ದರೆ ನಾವು ಅನೇಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗಬಹುದು. ಒತ್ತಡ, ಆತಂಕ, ಖಿನ್ನತೆ ಮತ್ತು ಚಟಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪುರಾತನ ಮತ್ತು ಆಧುನಿಕ ತಂತ್ರಜ್ಞಾನ
ನಮ್ಮ ಲೋಕದ ಇತಿಹಾಸದಲ್ಲಿಯೇ ನಾವು ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದೇವೆ ಎಂದು ನಮ್ಮನ್ನು ನಂಬಿಸಲಾಗುತ್ತದೆ. ಆದರೆ ಈಜಿಪ್ತಿನ ಪಿರಮಿಡ್ಗಳು, ಯು.ಕೆ.ಯ ಏಕಶಿಲೆಗಳು, ಮತ್ತು ಭಾರತದ ತುಕ್ಕು ಹಿಡಿಯದ ಕಬ್ಬಿಣದ ಕಂಭಗಳು ಪುರಾತನ ತಂತ್ರಜ್ಞಾನವು ನಮ್ಮದಕ್ಕಿಂತ ಅಪೂರ್ವವಾದ, ಉನ್ನತಮಟ್ಟದೆಂದು ಸಾರುತ್ತವೆ. ದಿಟವಾಗಿ, ವೈದಿಕ ಪಠ್ಯಗಳು ಇನ್ನೂ ಉನ್ನತ ತಂತ್ರಜ್ಞಾನವನ್ನು ವರ್ಣಿಸುತ್ತವೆ. ವಿಮಾನಗಳು (ಮಾಲಿನ್ಯ ಮುಕ್ತ ವಿಮಾನಗಳು), ಬ್ರಹ್ಮಾಸ್ತ್ರಗಳು (ರಹಸ್ಯ ಧ್ವನಿ ಮತ್ತು ಮಂತ್ರ ಪಠನದಿಂದ ಕ್ರಿಯಾಶೀಲವಾಗುವ ನಿಖರ ಮತ್ತು ಪ್ರಬಲ ಕ್ಷಿಪಣಿಗಳು) ಮತ್ತು ವೈದ್ಯಕೀಯ ಗಿಡಮೂಲಿಕೆಗಳು, ಪ್ರಬಲ ಮಂತ್ರಗಳು ಮತ್ತು ಆಯುರ್ವೇದ ಶಸ್ತ್ರಚಿಕಿತ್ಸೆಗಳಂತಹ ಶಕ್ತಿಯುತ ಚಿಕಿತ್ಸಾ ತಂತ್ರಜ್ಞಾನಗಳು ಕೆಲವು ಉದಾಹರಣೆಗಳಷ್ಟೆ. ವೈದಿಕ ಮನೋಭಾವವು ತಂತ್ರಜ್ಞಾನ ವಿರೋಧಿಯಲ್ಲ. ಆದರೆ ಬದುಕಿನ ಆಧ್ಯಾತ್ಮಿಕ ಧ್ಯೇಯವನ್ನು ನಿರ್ಲಕ್ಷಿಸುವ ಅಥವಾ ಮರೆಯುವಂತೆ ಮಾಡುವ ಲೌಕಿಕ ತಂತ್ರಜ್ಞಾನದ ಮೋಹದ ವಿರುದ್ದ ಅದು ಎಚ್ಚರಿಸುತ್ತದೆ.

ಒಬ್ಬ ಗಂಭೀರ ರೋಗಿಗೆ ವೈದ್ಯರು ಕೇವಲ ನೋವು ನಿವಾರಕವನ್ನು ಸೂಚಿಸುತ್ತಾರೆಂದು ಭಾವಿಸಿಕೊಳ್ಳಿ. ತನಗೆ ಉಪಶಮನವಾಯಿತೆಂದು ರೋಗಿಯು ಸಮಾಧಾನಪಡುತ್ತಾನೆ. ತನ್ನ ಶುಲ್ಕ ದೊರೆಯಿತೆಂದು ವೈದ್ಯನು ಸಂತೋಷಿಸುತ್ತಾನೆ. ದುರದೃಷ್ಟವಶಾತ್ ರೋಗಿಯ ನೋವು ನಿವಾರಣೆಯಾಗುವುದಿಲ್ಲ ಮತ್ತು ಅತಿ ಶೀಘ್ರದಲ್ಲಿ ಅದು ಮರುಕಳಿಸುತ್ತದೆ ಮತ್ತು ಹದಗೆಡುತ್ತದೆ.
ನಾವೆಲ್ಲರೂ ರೋಗಿಯಂತೆ. ಹುಟ್ಟಿನ ಕ್ಷಣದಿಂದಲೇ ನಮ್ಮ ಶಿರದ ಮೇಲೆ ಸಾವಿನ ದಂಡನೆ ಇರುತ್ತದೆ. ಕಾಲವು ನಮ್ಮನ್ನು ಅಸಹಾಯಕತೆಯಿಂದ ವೃದ್ಧರನ್ನಾಗಿ, ರೋಗಿಷ್ಟರನ್ನಾಗಿ ಮತ್ತು ಸಾಯುವಂತೆ ಮಾಡುತ್ತದೆ. ಬದುಕಿನುದ್ದಕ್ಕೂ ನಮ್ಮ ಯಾನವು ಅವನತಿಯಷ್ಟೇ ಅಲ್ಲ, ದುಃಖಕರ ಕೂಡ. ನಮ್ಮದೇ ದೇಹ ಮತ್ತು ಮನಸ್ಸುಗಳಿಂದ ಬರುವ ಸಂಕಟಗಳು (ಜ್ವರ, ಅಜೀರ್ಣ, ಒತ್ತಡ, ಖಿನ್ನತೆ), ಇತರ ಜೀವಿಗಳಿಂದ ಬರುವ ಸಂಕಟಗಳು (ಸೊಳ್ಳೆ, ಸ್ಪರ್ಧಿಗಳು, ಹಿರಿಯ ಅಧಿಕಾರಿಗಳು, ಬಂಧುಗಳು) ಮತ್ತು ಪ್ರಕೃತಿ ಸಹಜ ಸಂಕಟಗಳು (ಅತಿಯಾದ ಬಿಸಿಲಿನ ಬೇಗೆ ಅಥವಾ ಚಳಿ, ಪ್ರವಾಹ, ಭೂ ಕಂಪನ) ಇವು ನಮ್ಮ ಬದುಕಿನುದ್ದಕ್ಕೂ ಆಗಾಗ್ಗೆ ನಮ್ಮನ್ನು ಕಾಡುತ್ತಿರುತ್ತವೆ.
ವೈದಿಕ ಗ್ರಂಥಗಳು ನಮ್ಮ ಸಂಕಟಗಳಿಗೆ ಕಾರಣ ಮತ್ತು ಅವುಗಳ ಉಪಶಮನಕ್ಕೆ ವಿವರಗಳನ್ನು ನೀಡಿವೆ. ನಾವು ಆಧ್ಯಾತ್ಮಿಕ ಜೀವಿಗಳಾಗಿದ್ದು ಲೌಕಿಕ ಶರೀರದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಾವು ಈ ತಾತ್ಕಾಲಿಕ ಮತ್ತು ದುಃಖಮಯ ಲೋಕಕ್ಕೆ ಸೇರಿದವರಲ್ಲ, ನಾವು ಶಾಶ್ವತವಾದ ಮತ್ತು ಅನುಗ್ರಹಿತವಾದ ಆಧ್ಯಾತ್ಮಿಕ ಲೋಕಕ್ಕೆ ಸೇರಿದ್ದೇವೆ. ಅಲ್ಲಿ ನಾವು ಭಗವಂತನೊಂದಿಗೆ ಸದಾ ಪ್ರೀತಿಯ ಸಾಮರಸ್ಯದಲ್ಲಿ ಇರುತ್ತೇವೆ. ಭಗವಂತನಿಂದ ಪ್ರತ್ಯೇಕವಾಗಿ ಆನಂದಿಸಬೇಕೆಂಬ ನಮ್ಮ ಅಪೇಕ್ಷೆಯಿಂದಾಗಿ ಈ ಲೋಕದಲ್ಲಿ ನಾವಿದ್ದೇವೆ. ವಿವಿಧ ರೀತಿಯಲ್ಲಿ ವಸ್ತುವಿನೊಂದಿಗೆ ಪ್ರಯೋಗವನ್ನು ಮಾಡುತ್ತ ಆನಂದವನ್ನು ಅರಸುವ ನಾವು ವಿವಿಧ ಜೀವಜಾತಿಗಳ ಮೂಲಕ ದೇಹಾಂತರಗೊಳ್ಳುತ್ತೇವೆ. ಆದರೆ ಕೇವಲ ದುಃಖ ಮತ್ತು ಸಾವನ್ನು ಪಡೆಯುತ್ತೇವೆ. ಮಾನವ ಜೀವಿಯಾಗಿ ನಾವು ನಮ್ಮ ದುರದೃಷ್ಟದ ವಿಪತ್ತು ಅಥವಾ ಸಂಕಟವನ್ನು ಗುರುತಿಸಲು ಮುಂದುವರಿದ ಬುದ್ಧಿಮತ್ತೆಯನ್ನು ಪಡೆಯುತ್ತೇವೆ. ಬುದ್ಧಿವಂತ ಮಾನವರಿಗಾಗಿ ವೈದಿಕ ಗ್ರಂಥಗಳು ಆಧ್ಯಾತ್ಮಿಕವನ್ನು ಕುರಿತ ವ್ಯವಸ್ಥಿತ ಕಾರ್ಯಕ್ರಮವನ್ನು ನೀಡಿವೆ. ಅದರಿಂದ ಭಗವಂತನೊಂದಿಗೆ ಪುನರ್‌ಸಾಮರಸ್ಯವನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಶಾಶ್ವತ ಬದುಕಿಗೆ ಹಿಂದಿರುಗಬಹುದು.
ಆಧುನಿಕ ಕಾಲದಲ್ಲಿ ಮಾನವ ಬುದ್ಧಿಮತ್ತೆಯನ್ನು ಮೂಲತಃ ಲೌಕಿಕ ಅಭಿವೃದ್ಧಿಗೆ, ವಿಶೇಷವಾಗಿ ತಾಂತ್ರಿಕ ಅಭಿವೃದ್ಧಿಗೆ ಬಳಸಲಾಗುತ್ತಿದೆ. ತಂತ್ರಜ್ಞಾನವು ನಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುತ್ತದೆ, ನಮ್ಮ ಅಹಂ ಅನ್ನು ಬೀಗಿಸುತ್ತದೆ ಮತ್ತು ನಾವು ಹೆಮ್ಮೆಪಡುವಂತೆ ಮಾಡುತ್ತದೆ. ಆದರೆ ತಂತ್ರಜ್ಞಾನವು ಮನರಂಜನೆಯನ್ನು ಒದಗಿಸುತ್ತದೆ, ನೆಮ್ಮದಿಯನ್ನಲ್ಲ; ಸೌಲಭ್ಯಗಳನ್ನು ನೀಡುತ್ತದೆ, ಸುಖವನ್ನಲ್ಲ; ಔಷಧಗಳನ್ನು ನೀಡುತ್ತದೆ, ಆರೋಗ್ಯವನ್ನಲ್ಲ; ಸೌಂದರ್ಯವರ್ಧಕವನ್ನು ಕೊಡುತ್ತದೆ, ಯೌವನವನ್ನಲ್ಲ; ಜೀವನಾಧಾರ ವ್ಯವಸ್ಥೆಯನ್ನು ಒದಗಿಸುತ್ತದೆ, ಬದುಕನ್ನಲ್ಲ.

ತಂತ್ರಜ್ಞಾನವು ತಾತ್ಕಾಲಿಕ ನೋವು ನಿವಾರಕದಂತೆ. ಆದರೆ ಲೌಕಿಕ ಅಸ್ತಿತ್ವದಲ್ಲಿನ ನಮ್ಮ ಸಂಕಷ್ಟ, ನೋವನ್ನು ನಿವಾರಿಸುವುದಿಲ್ಲ. ಅದಕ್ಕಿಂತ ಕೆಟ್ಟದೆಂದರೆ, ಅದು ಯೋಗಕ್ಷೇಮದ ಭ್ರಮೆಯ ಭಾವನೆಯನ್ನು ಉಂಟುಮಾಡುತ್ತದೆ. ಇದರಿಂದ ಜನರಿಗೆ ಆಧ್ಯಾತ್ಮಿಕ ಪರಿಹಾರ ಅಗತ್ಯವಿಲ್ಲ ಎನ್ನುವ ಭಾವನೆ ಮೂಡುತ್ತದೆ. ಸರಳ ಜೀವನ, ಉನ್ನತ ಚಿಂತನೆಯ ಬದಲಾಗಿ ಜನರು ಸುಮ್ಮನೆ ಬದುಕುತ್ತಾರೆ ಮತ್ತು ಹೆಚ್ಚೂಕಡಮೆ ಯೋಚಿಸುವುದೇ ಇಲ್ಲ.
ಉನ್ನತ ತಂತ್ರಜ್ಞಾನದ ಸ್ವರ್ಗದ ಆಶ್ವಾಸನೆಯಿಂದ ಆಕರ್ಷಿತರಾಗುವ ಜನರು ಬದುಕಿನ ಆಧ್ಯಾತ್ಮಿಕ ಉದ್ದೇಶವನ್ನು ಕುರಿತು ಯೋಚಿಸುವುದೇ ಇಲ್ಲ. ಅದನ್ನು ಅವೈಜ್ಞಾನಿಕ ಮತ್ತು ಹಳೆಯದು ಎಂದು ತಪ್ಪಾಗಿ ಪರಿಗಣಿಸುತ್ತಾರೆ. ಹೀಗೆ ತಂತ್ರಜ್ಞಾನವು ಶಾಶ್ವತ ಜೀವನ ಪಡೆಯುವ ನಮ್ಮ ಅವಕಾಶವನ್ನು ಕಸಿದುಕೊಳ್ಳುತ್ತದೆ. ಹುಟ್ಟು ಮತ್ತು ಸಾವಿನ ಈ ಲೋಕದಲ್ಲಿಯೇ ಇದ್ದು ಅನುಭವಿಸುವಂತೆ ಮಾಡುತ್ತದೆ.
ಆದುದರಿಂದ ಪುರಾತನ ತಂತ್ರಜ್ಞಾನವು ಬದುಕಿನ ಗುರಿಯನ್ನು ಸಾಧಿಸಲು ಜನರಿಗೆ ನೆರವಾಗಿತ್ತು ಮತ್ತು ಆಧುನಿಕ ತಂತ್ರಜ್ಞಾನವು ಬದುಕಿನ ಗುರಿಯನ್ನು ಮರೆಯುವಂತೆ ಮಾಡಿತು. ಇದೇ ಅವುಗಳ ನಡುವಣ ಮೂಲಭೂತ ವ್ಯತ್ಯಾಸ. ಎಲ್ಲ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಇರುವ ಬುದ್ಧಿಮತ್ತೆಯನ್ನು, ಹರಳೆಣ್ಣೆ ದೀಪವನ್ನು ವಿದ್ಯುತ್‌ದೀಪವಾಗಿ ಪರಿವರ್ತಿಸಲು ದುರ್ಬಳಕೆ ಮಾಡಲಾಗುತ್ತಿದೆ ಎಂದು ಶ್ರೀಲ ಪ್ರಭುಪಾದರು ವಿವರಿಸಿದ್ದಾರೆ.
ಆಧುನಿಕ ತಂತ್ರಜ್ಞಾನವನ್ನು ಆಧ್ಯಾತ್ಮಿಕಗೊಳಿಸುವುದು
ಪ್ರಶ್ನೆಯೊಂದು ಉದ್ಭವಿಸಬಹುದು, “ನಾವು ತಂತ್ರಜ್ಞಾನವನ್ನು ಬಿಟ್ಟು ಹಳ್ಳಿ ಜೀವನಕ್ಕೆ ಮರಳಬೇಕೆ?”
ನಾವು ತಂತ್ರಜ್ಞಾನವನ್ನು ಬಿಡಬೇಕಾಗಿಲ್ಲ, ಆದರೆ ತಂತ್ರಜ್ಞಾನವು ನಮಗೆ ಸುಖಸಂತೋಷವನ್ನು ನೀಡುತ್ತದೆ ಎನ್ನುವ ಭ್ರಮೆಯನ್ನು ಬಿಡಬೇಕು. ನಮಗೆ ಕಾಯಿಲೆಯಾದರೆ ನಾವು ನೋವು ನಿವಾರಕವನ್ನು ಬಿಡಬೇಕಾಗಿಲ್ಲ, ಆದರೆ ಅದು ನಮ್ಮ ರೋಗವನ್ನು ಗುಣ ಪಡಿಸುತ್ತದೆ ಎನ್ನುವ ಭ್ರಮೆಯನ್ನು ಬಿಡಬೇಕು. ನಿಜವಾದ ಸುಖ ಸಂತೋಷವನ್ನು ಪಡೆಯಲು ಆಧ್ಯಾತ್ಮಿಕದ ಉಪಶಮನವನ್ನು ಅಳವಡಿಸಿಕೊಳ್ಳಬೇಕು.

ತಂತ್ರಜ್ಞಾನವು ನಮ್ಮ ಆಧುನಿಕ ಜಗತ್ತನ್ನು ವ್ಯಾಪಿಸಿರುವುದರಿಂದ ನಾವು ಯುಕ್ತ ವೈರಾಗ್ಯ, ಭಕ್ತಿ ಪರಿತ್ಯಾಗದ ವೈದಿಕ ತತ್ತ್ವವನ್ನು ಬಳಸಿಕೊಳ್ಳಬಹುದು : ಸ್ವಂತ ಸುಖಸಂತೋಷಕ್ಕಾಗಿ ಲೌಕಿಕ ವಸ್ತುಗಳಿಗೆ ಅಂಟಿಕೊಳ್ಳದೆ ಅವುಗಳನ್ನು ಭಗವಂತನ ಸೇವೆಗೆ ಬಳಸಿ.
ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ಸಿದ್ಧಾಂತದ ಅಳವಡಿಕೆಯನ್ನು ವಿವರಿಸುವ ಈ ದೃಷ್ಟಾಂತವನ್ನು ನೋಡಿ. ಕಳ್ಳರ ತಂಡವೊಂದು ಬ್ಯಾಂಕ್‌ದರೋಡೆ ಮಾಡಿ ವೇಗದ ಕಾರಿನಲ್ಲಿ ಓಡುತ್ತಿದ ಎಂದುಕೊಳ್ಳಿ. ಪೊಲೀಸಿನವನು ಏನು ಮಾಡಬೇಕು? ವೇಗ ಮಿತಿ ನಿಯಮಕ್ಕೆ ಬದ್ದನಾಗಿ ಕಳ್ಳರು ತಪ್ಪಿಸಿಕೊಳ್ಳುವಂತೆ ಮಾಡಬೇಕೆ? ಅಥವಾ ವೇಗ ಮಿತಿಯನ್ನು ಉಲ್ಲಂಘಿಸಿ ಕಳ್ಳರಿಗಿಂತ ಹೆಚ್ಚು ವೇಗದಲ್ಲಿ ವಾಹನವನ್ನು ಓಡಿಸಿ, ಅವರನ್ನು ಬಂಧಿಸಿ ಹಣವನ್ನು ವಶಪಡಿಸಿಕೊಳ್ಳಬೇಕೆ?
ಈಗಿನ ಉನ್ನತ ತಂತ್ರಜ್ಞಾನವು ನಾಸ್ತಿಕತೆ, ಭೋಗ, ಲೌಕಿಕತೆ ಮತ್ತು ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ. ಇದು ಜನರ ಆಧ್ಯಾತ್ಮಿಕ ಜ್ಞಾನ ಸಂಪತ್ತನ್ನು ಕಸಿದುಕೊಳ್ಳುತ್ತಿದೆ. ಆದುದರಿಂದ ಆಧ್ಯಾತ್ಮಿಕ ಮತ್ತು ಸಾಮರಸ್ಯದ ಜ್ಞಾನವನ್ನು ಹರಡಲು ಅದೇ ತಂತ್ರಜ್ಞಾನವನ್ನು ಬಳಸಿ ಜನರು ತಮ್ಮ ಆಧ್ಯಾತ್ಮಿಕ ಜ್ಞಾನದ ಸಂಪತ್ತನ್ನು ಮರಳಿ ಪಡೆಯುವಂತೆ ಮಾಡುವುದು ಆಧ್ಯಾತ್ಮಿಕ ವಿಜ್ಞಾನಿಗಳ ಜವಾಬ್ದಾರಿಯಾಗಿದೆ. ಯುಕ್ತ ವೈರಾಗ್ಯ ಸಿದ್ಧಾಂತವು ಹೇಗೆ ಆಧುನಿಕ ತಂತ್ರಜ್ಞಾನವನ್ನು ಆಧ್ಯಾತ್ಮಿಕಗೊಳಿಸಬಲ್ಲದು ಎನ್ನುವುದಕ್ಕೆ ಈ ಕೆಳಗಿನ ಉದಾಹರಣೆಗಳನ್ನು ನೋಡಬಹುದು :
• ಭಗವದ್ಗೀತೆಯ ಸಂದೇಶವನ್ನು ಕುರಿತು ಜನರಲ್ಲಿ ಆಸಕ್ತಿಯನ್ನು ಬೆಳೆಸಲು ಇಸ್ಕಾನ್ ಆಧುನಿಕ ತಂತ್ರಜ್ಞಾನವಾದ ಅನಿಮ್ಯಾಟ್ರಾನಿಕ್ಸ್, ರೊಬೋಟಿಕ್ಸ್ ಮತ್ತು ಮಲ್ಟಿ ಮೀಡಿಯಾ ಚಿತ್ರಮಂದಿರಗಳ ಭವ್ಯ ದೇವಸ್ಥಾನಗಳನ್ನು ನಿರ್ಮಿಸುತ್ತಿದೆ.

• ಜನರಲ್ಲಿ ಭಗವತ್‌ಭಕ್ತಿಯ ಸ್ಫೂರ್ತಿಯನ್ನು ತುಂಬಲು ಇಸ್ಕಾನ್ನ ಪ್ರಮುಖ ಉತ್ಸವಗಳಲ್ಲಿ ತೋರಿಸುವ ಅತ್ಯಾಧುನಿಕ ಲೇಸರ್‌ಪ್ರದರ್ಶನಗಳು ಭವ್ಯ ನೋಟವನ್ನು ನೀಡುತ್ತವೆ.
• ಹಿಂಸೆ ಮತ್ತು ಭೋಗದ ವಸ್ತುಗಳಿಗೆ ಪರ್ಯಾಯವಾಗಿ ಇಸ್ಕಾನ್ ಮಕ್ಕಳಿಗೆ ಆಧ್ಯಾತ್ಮಿಕ ಆಧಾರಿತ ಮತ್ತು ಸದ್ಗುಣವನ್ನು ಬಿಂಬಿಸುವ ಆಟಿಕೆಗಳು, ಆಟಗಳು ಮತ್ತು ಚಲನಚಿತ್ರಗಳನ್ನು ನೀಡುತ್ತಿದೆ.
• ಇಸ್ಕಾನ್ ಬೋಧಕರು ಸ್ಲೈಡ್ ಪ್ರದರ್ಶನ, ಮತ್ತಿತರ ಆಧುನಿಕ ತಂತ್ರಜ್ಞಾನ ಬಳಸಿ ಪ್ರಾತ್ಯಕ್ಷಿಕೆಗಳನ್ನು ನೀಡುತ್ತಾರೆ. ನೀವು ಓದುತ್ತಿರುವ ಈ ಲೇಖನವು ಯುಕ್ತ ವೈರಾಗ್ಯ ಸಿದ್ಧಾಂತದ ಪ್ರಾಯೋಗಿಕ ವಿಧಾನ.
ಇನ್ನೂ ಬಹಳ ಮಾಡುವುದಿದೆ. ತಂತ್ರಜ್ಞಾನದ ವಿವೇಚನಾ ರಹಿತ ಅಳವಡಿಕೆಯು ನಮ್ಮ ಲೋಕವನ್ನು ಅವ್ಯವಸ್ಥೆಗೊಳಿಸಿದೆ. ನಮ್ಮ ಆಧುನಿಕ ಕಾಲಕ್ಕೆ ಶ್ರೀಲ ಪ್ರಭುಪಾದರು ಪೂರ್ವ – ಪಶ್ಚಿಮ ಸಮನ್ವಯವನ್ನು ನಿರೂಪಿಸಿದರು. ಪಶ್ಚಿಮದ ಲೌಕಿಕ ತಂತ್ರಜ್ಞಾನದೊಂದಿಗೆ ಭಾರತದ ಆಧ್ಯಾತ್ಮಿಕ ಜ್ಞಾನವನ್ನು ಹರಡುವುದು. ತಾಂತ್ರಿಕವಾಗಿ ಮುಂದುವರಿದ ಪಶ್ಚಿಮವು ತನ್ನ ಆಧ್ಯಾತ್ಮಿಕ ದೃಷ್ಟಿಕೋನದ ಕೊರತೆಯನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ತನ್ನ ಆಧ್ಯಾತ್ಮಿಕ ಸಂಪತ್ತನ್ನು ಗ್ರಹಿಸಿಕೊಳ್ಳಬೇಕು. ಭಾರತ ಮತ್ತು ಪಶ್ಚಿಮದ ಜನರು ತಮ್ಮ ತಮ್ಮ ಕೊಡುಗೆ ಮತ್ತು ಕೊರತೆಯನ್ನು ಅರ್ಥ ಮಾಡಿಕೊಂಡು ಸಾಮರಸ್ಯ ಮೂಡಿಸಿದರೆ ಅದು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಪುನರುತ್ಥಾನವನ್ನು ತರಬಲ್ಲದು. ಸೌಹಾರ್ದ ಮತ್ತು ಸುಖದ ಹೊಸ ಯುಗಕ್ಕೆ ಅದು ಏಕೈಕ ಆಶಯವಾಗಿದೆ.






Leave a Reply