ಕೃಷ್ಣಪ್ರಜ್ಞೆ: ಗೃಹಿಣಿಯರ ಪಾತ್ರ

– ಶ್ರೀಮತಿ ಸವಿತಾ ಗಂಗಾಧರ್, ಬೆಂಗಳೂರು

ಹರೇ ಕೃಷ್ಣ!

ಗೆಳತಿ, ಗೃಹಿಣಿಯ ಕರ್ತವ್ಯವೆಂದರೆ ಮನೆ ಮಂದಿಯನ್ನೆಲ್ಲ ಸಂತೋಷದಿಂದಿಡುವುದು ತಾನೆ. ಆದರೆ ಕೃಷ್ಣಪ್ರಜ್ಞೆಯನ್ನು ಅನುಸರಿಸುವ ಹೊರತು ಯಾರೂ ಸುಖವಾಗಿರಲಾರರು ಎಂಬುದನ್ನು ನೀನು ಚೆನ್ನಾಗಿ ತಿಳಿ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ “ನಿಜವಾದ ಸುಖ ಹಾಗೂ ನಾವು ಬಯಸಿ ಸಿಗದೆ ದುಃಖಪಡುತ್ತಿರುವ ಪ್ರಾಪಂಚಿಕ ಸುಖ ಇವುಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾನೆ.

ಭಾಗವತದಲ್ಲಿ ಪರಮಪೂಜ್ಯ ಶುಕಮುನಿಗಳು ಕಲಿಯುಗದ ಜನರ ಸಂಕಷ್ಟಗಳು, ಭ್ರಷ್ಟ ಪಾಪೀ ಜನರ ನಡತೆಗಳಿಂದ ದುಃಖ ಹೊಂದುವ ಪ್ರಾಮಾಣಿಕ ಜನರ ಪರಿಸ್ಥಿತಿಗಳು ಹಾಗೂ ಅವುಗಳಿಗೆ ಪರಿಹಾರವೇನು ಎಂಬುದನ್ನು ಸವಿವರವಾಗಿ ತಿಳಿಸಿದ್ದಾರೆ. ಅವರ ಅಂತಿಮ ತೀರ್ಮಾನವೆಂದರೆ ಶ್ರೀಕೃಷ್ಣನಲ್ಲಿ ಶರಣಾಗತಿಯೇ ಮನುಷ್ಯನ ನಿಜವಾದ ಸುಖದ ಆರಂಭ.

ಆದ್ದರಿಂದ ಗೆಳತಿ ನೀನು ಜಾಣೆಯಾಗು ಭಗವದ್ಗೀತಾ ಯಥಾರೂಪವನ್ನು ಶ್ರದ್ಧೆಯಿಂದ ಓದು. ಮನೆಯಲ್ಲಿ ನಿನಗಿಷ್ಟವಾದ ಬಾಲಕೃಷ್ಣನ ಅಥವಾ ರಾಧಾಕೃಷ್ಣರ ಚಿತ್ರಪಟವನ್ನಿಟ್ಟು ಪ್ರತಿದಿನ ಪ್ರಾರ್ಥಿಸು. “ಭಗವಂತಾ, ನನ್ನ ಸಂಸಾರವನ್ನು ನಿನ್ನ ಕೃಪೆಗೆ ತೆಗೆದುಕೊಂಡು ನಿನ್ನ ಶುದ್ಧ ಪ್ರೇಮವನ್ನು ದಯವಿಟ್ಟು ನಮಗೆ ಹಂಚು” ಎಂದು.

ಗೆಳತಿ, ಶ್ರೀಕೃಷ್ಣನ ನಾಮ, ರೂಪ, ಆತನ ನೈವೇದ್ಯಕ್ಕಿಟ್ಟ ಪ್ರಸಾದ ಎಲ್ಲವೂ ಆತನಷ್ಟೇ ಶಕ್ತಿಶಾಲಿ ಎಂಬುದನ್ನು ಮರೆಯದಿರು. ನೀನು ಪ್ರೀತಿಯಿಂದ, ಶುಚಿಯಿಂದ ಭಗವಂತನಿಗೆ ಅರ್ಪಿಸಿದ ನೈವೇದ್ಯವನ್ನು ಆದಷ್ಟು ಹೆಚ್ಚು ಜನರಿಗೆ ಹಂಚು. ಪಶುಪಕ್ಷಿಗಳಿಗೂ ವಂಚಿಸದೆ ವಿತರಿಸು. ಕೃಷ್ಣನ ಪ್ರಸಾದವೆಂದರೆ ಅದು ಅವನ ಕರುಣೆ. ಅವನ ಕರುಣೆ ಎಲ್ಲರಿಗೂ ದೊರೆಯಬೇಕಲ್ಲವೇ?

ಪ್ರಸಾದ ಸೇವನೆಯಿಂದ ಉಂಟಾಗುವ ಅದ್ಭುತ ಪರಿಣಾಮಗಳನ್ನು ನೀನೇ ನೋಡುವೆ. ಭಗವಂತನಲ್ಲಿ ಆಸಕ್ತಿಯಿರದ ಜನರೂ ಕೂಡ ಪ್ರಸಾದ ಸೇವನೆಯಿಂದ ಶ್ರೀ ಕೃಷ್ಣನ ವಿಷಯಗಳಲ್ಲಿ ಆಸಕ್ತಿತಳೆಯುವುದನ್ನು ನಾನು ಕಣ್ಣಾರೆ ನೋಡಿರುವೆ. (ಮಾಡಿದ ಅಡುಗೆಯನ್ನು ಮೊದಲು ಕೃಷ್ಣನಿಗೆ ಅರ್ಪಿಸಿ, ಅನಂತರ ಅದನ್ನು ಅಡುಗೆ ಮಾಡಿದ ಪಾತ್ರೆಗೆ ವರ್ಗಾಯಿಸಿಕೊಂಡರೆ ಪೂರ್ತಿ ಅಡುಗೆಯೂ ಪ್ರಸಾದವಾಗುವುದು)

ಹರೇರ್ ನಾಮ ಹರೇರ್ ನಾಮ ಹರೇರ್‌ ನಾಮೈವ ಕೇವಲಮ್ |

ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ ||

ಶ್ರೀ ಕೃಷ್ಣನ ನಾಮವಲ್ಲದೆ ಕಲಿಯುಗದಲ್ಲಿ ಬೇರೆ ದಾರಿ ಇಲ್ಲ. ಆದ್ದರಿಂದ ಕಲಿಯುಗ ಸಂಜೀವಿನಿಯಾದ ಹರೇಕೃಷ್ಣ ಮಹಾಮಂತ್ರವನ್ನು ಪ್ರತಿದಿನವೂ ಜಪಿಸುವ ಅಭ್ಯಾಸವನ್ನು ಆರಂಭಿಸು. ಒಂದು ಮಾಲೆಯಂತೆ ಆರಂಭವಾಗುವ ಜಪವು ನಿನ್ನಶ್ರದ್ಧೆಗನುಗುಣವಾಗಿ ಹೆಚ್ಚುತ್ತಾ ಹೋಗಲಿ.

ನಿನ್ನ ಇತರ ಮನೆಗೆಲಸಗಳ ಸಮಯದಲ್ಲಿ ಅನಾವಶ್ಯಕ ಆಲೋಚನೆಗಳನ್ನು ಬದಿಗೆ ಸರಿಸಿ ಹರೇಕೃಷ್ಣ ಮಹಾಮಂತ್ರವನ್ನು ಜಪಿಸು. ನಿನ್ನ ಮನಸ್ಸಿಗೆ ಎಂತಹ ಶಾಂತಿ, ಹರ್ಷ, ಸದೃಢತೆ ಬೆಳೆಯುವುದೆಂತು ನೀನೇ ಗಮನಿಸು.

ಮಕ್ಕಳಿಗೆ ತಾಯಿಗಿಂತ ಗುರುವುಂಟೆ? ನಿನ್ನ ಮಕ್ಕಳಿಗೆ ಚಂದ ಚಂದದ ಕೃಷ್ಣನ ಕಥೆಗಳನ್ನು ಹೇಳಿ ಅವರನ್ನು ಈ ವಿಷಯದೆಡೆಗೆ ಆಸಕ್ತಿ ಬರುವಂತೆ ಮಾಡುವ ಜವಾಬ್ದಾರಿ ನಿನ್ನದು. ಬೆಳೆದ ಮಕ್ಕಳಿಗಾದರೆ ಮಕ್ಕಳಿಗೆಂದೇ ಬರೆದ ಭಗವದ್ಗೀತೆ, ಕೃಷ್ಣನ ಲೀಲೆಗಳ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸು.

ಶಾಲೆಗಳಲ್ಲಿ ಇಸ್ಕಾನ್ ದೇಗುಲಗಳಲ್ಲಿ ನಡೆಯುವ ಕೃಷ್ಣ ಸಂಬಂಧೀ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡು. ಹರೇಕೃಷ್ಣ ಮಹಾಮಂತ್ರದ ಪ್ರಭಾವವನ್ನು ಅವರಿಗೆ ವಿವರಿಸು. ಆರಂಭದಲ್ಲಿ ಅವರೊಡನೆ ನೀನೂ ಕುಳಿತು ಜಪಿಸು.

ಗೆಳತೀ, ಹೆಚ್ಚೇನು ಹೇಳಲಿ, ಕೃಷ್ಣಪ್ರೇಮದಿಂದಲೇ ನಿಜವಾದ ಸುಖ, ನಿಜವಾದ ಜ್ಞಾನ, ಶಾಶ್ವತವಾದ ಲೋಕ ಎಲ್ಲವೂ ದೊರೆಯುವುದು. ಇದರ ಪ್ರಭಾವವನ್ನು ನೀನು ಅರಿತು ಸುಖಪಡುವಾಗ ಇತರರಿಗೂ ಈ ದಾರಿಯ ಬಗ್ಗೆ ತಿಳಿಯ ಹೇಳುವುದು ನಿನ್ನ ಕರ್ತವ್ಯ.

ಆದಷ್ಟು ಜನರಿಗೆ ಹರೇಕೃಷ್ಣ ಮಹಾಮಂತ್ರದ ಪ್ರಭಾವವನ್ನು ತಿಳಿಸುವುದು, ಭಕ್ತಿವೇದಾಂತ ದರ್ಶನವನ್ನು ಓದಲು ಇತರರನ್ನು ಪ್ರೇರೇಪಿಸುವುದು ಶ್ರೀಕೃಷ್ಣನಿಗೆ ನೀನು ಮಾಡಿದ ಸೇವೆಯೆಂದೇ ಪರಿಗಣಿಸು. ಇವುಗಳಿಂದ ನೀನು ಶೀಘ್ರವಾಗಿ ಕೃಷ್ಣಪ್ರೇಮವನ್ನು ಅದರಿಂದ ಅಮಿತಾನಂದವನ್ನು ಪಡೆಯುವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi