ವಸ್ತು, ಕ್ರಿಯೆ ಮತ್ತು ಸೃಷ್ಟಿಕರ್ತ

ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿಯೊಂದರಲ್ಲಿಯೂ ಈ ಮೂರು ಅಂಶಗಳಿರುತ್ತವೆ :

1. ವಸ್ತು 2. ಕ್ರಿಯೆ 3. ಸೃಷ್ಟಿಕರ್ತ

ಯಾವುದೇ ಉತ್ಪನ್ನದ ವಿನ್ಯಾಸಕಾರನು ಕೆಲವು ವಸ್ತು ಅಥವಾ ಸಂಪನ್ಮೂಲಗಳನ್ನು ಬಳಸಿ ನಿರ್ದಿಷ್ಟ ಉದ್ದೇಶದ ಉತ್ಪನ್ನಗಳನ್ನು ರೂಪಿಸುತ್ತಾನೆ. ಉದಾಹರಣೆಗೆ:

ಸುತ್ತಿಗೆಯನ್ನೇ ತೆಗೆದುಕೊಳ್ಳಿ, ಇದನ್ನು ಕಬ್ಬಿಣ ಮತ್ತು ಮರದಿಂದ ತಯಾರಿಸುತ್ತಾರೆ. ಗೋಡೆಗೆ ಮೊಳೆ ಹೊಡೆಯಲು ಸುತ್ತಿಗೆ ಬಳಸಲಾಗುತ್ತದೆ. ಸುತ್ತಿಗೆ ಉತ್ಪಾದಕನ ಉದ್ದೇಶ ಇದೇ ಆಗಿರುತ್ತದೆ. ನಾವು ಈ ಸುತ್ತಿಗೆಯನ್ನು ಭೂಮಿ ತೋಡಲು ಬಳಸಿದರೆ, ಅದು ತುಂಬ ಕಷ್ಟವಾಗುತ್ತದೆ. ಯಾವ ಉದ್ದೇಶಕ್ಕೆ ಅಲ್ಲವೋ ಅದಕ್ಕೆ ಬಳಸುವುದು ಸಾಧ್ಯವಿಲ್ಲ. ಇಸ್ತ್ರಿ ಪೆಟ್ಟಿಗೆಯನ್ನು ಲೋಹ, ತಂತಿ ಮತ್ತು ಇತರೆ ವಸ್ತುಗಳಿಂದ ಉತ್ಪಾದಿಸಲಾಗಿರುತ್ತದೆ. ಅದಿರುವುದು ಬಟ್ಟೆಗಳನ್ನು ಇಸ್ತ್ರಿ ಮಾಡಲೆಂದು. ಈ ಇಸ್ತ್ರಿ ಪೆಟ್ಟಿಗೆಯನ್ನು ನೀರು ಕಾಯಿಸಲು ಬಳಸಿದರೆ? ಆಗ ಅದು ಖಂಡಿತ ಹಾಳಾಗುತ್ತದೆ. ಅಷ್ಟೇ ಅಲ್ಲ, ನಮಗೆ ವಿದ್ಯುತ್‌ ಶಾಕ್‌ ಉಂಟಾಗಲೂಬಹುದು.

ಅದೇ ರೀತಿ ಪ್ರತಿಯೊಂದು ಜೀವಿಯೂ ಸ್ವಭಾವತಃ ಆಧ್ಯಾತ್ಮಿಕವಾಗಿರುತ್ತಾನೆ. ಅವರು ಪ್ರಕೃತಿದತ್ತವಾಗಿ ಸಚ್ಚಿದಾನಂದರು. ಪ್ರೀತಿ ಮತ್ತು ಭಕ್ತಿಯಿಂದ ಪರಮಾತ್ಮನಿಗೆ ಏನಾದರೂ ಸೇವೆ ಸಲ್ಲಿಸಲೆಂದೇ ಶ್ರೀಕೃಷ್ಣನು ಅವರನ್ನು ಸೃಷ್ಟಿಸಿರುತ್ತಾನೆ.

ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಇದನ್ನು ಸ್ಪಷ್ಟವಾಗಿ ವಿವರಿಸಿದ್ದಾನೆ (15.7)

ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।

ಮನಃಷಷ್ಠಾನೀನ್ದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥

ಈ ಬದ್ಧ ಜಗತ್ತಿನಲ್ಲಿರುವ ಜೀವಿಗಳು ನನ್ನ ನಿತ್ಯವಾದ ಸಣ್ಣ ಸಣ್ಣ ಭಾಗಗಳು. ಬದ್ಧಜೀವನದಿಂದಾಗಿ ಅವರು ಮನಸ್ಸು ಸೇರಿದಂತೆ ಆರು ಇಂದ್ರಿಯಗಳೊಡನೆ ಬಹುವಾಗಿ ಕಷ್ಟಪಡುತ್ತಾರೆ.

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥

(ಭಗವದ್ಗೀತೆ 9.26)

ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್‌ ।

ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್‌ ॥

(ಭಗವದ್ಗೀತೆ 9.27)

ಕುಂತಿಯ ಮಗನಾದ ಅರ್ಜನನೇ, ನೀನು ಏನನ್ನೇ ಮಾಡು, ಏನನ್ನೇ ಭುಂಜಿಸು, ಏನನ್ನೇ ಅರ್ಪಿಸು ಅಥವಾ ಕೊಟ್ಟುಬಿಡು ಮತ್ತು ಯಾವುದೇ ತಪಸ್ಸನ್ನು ಮಾಡು – ಅದನ್ನು ಕಾಣಿಕೆಯಾಗಿ ನನಗೆ ಅರ್ಪಿಸು.

ಭಗವದ್ಗೀತೆಯ ಈ ಶ್ಲೋಕಗಳಿಂದ ಏನು ಸ್ಪಷ್ಟವಾಗುತ್ತದೆ? ಪ್ರತಿಯೊಂದು ಜೀವಿಯೂ ಕೃಷ್ಣನ ಭಾಗವೇ. ಅವರು ಪ್ರೀತಿ ಮತ್ತು ಭಕ್ತಿಯಿಂದ ಕೃಷ್ಣನ ಸೇವೆಗೆಂದೇ ಇರುವುದು.

ಈ ವಾಸ್ತವಾಂಶವನ್ನು ಅರ್ಥ ಮಾಡಿಕೊಂಡ ಜೀವಿಗಳು ಸದಾ ತಮ್ಮ ಪ್ರೀತಿಯ ಭಕ್ತಿಯಿಂದ ಕೃಷ್ಣನ ಸೇವೆಯಲ್ಲಿ ತೊಡಗಿರುತ್ತಾರೆ. ಮಹಾರಾಜ ಅಂಬರೀಷನ ವಿಷಯವನ್ನೇ ತೆಗೆದುಕೊಳ್ಳಿ. ಅವನು ಪರಮಾತ್ಮನ ಪರಮ ಭಕ್ತ. ತಾನು ಭಗವಂತನ ಸೇವಕನೆಂಬುದನ್ನು ಅರಿತಿದ್ದ. ಆದುದರಿಂದ ಸದಾ ಪರಮಾತ್ಮನ ಸೇವೆಯಲ್ಲಿಯೇ ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ತೊಡಗಿಸಿಕೊಂಡಿದ್ದ. ಅಂಬರೀಷನ ಭಗವತ್‌ ಚಟುವಟಿಕೆಗಳನ್ನು ಕುರಿತಂತೆ ಶ್ರೀಮದ್‌ ಭಾಗವತದಲ್ಲಿ ಈ ರೀತಿ ವರ್ಣಿಸಲಾಗಿದೆ :

ಸ ವೈ ಮನಃ ಕೃಷ್ಣಪದಾರವಿಂದಯೋಃ

ವಾಚಾಂಸಿ ವೈಕುಂಠಗುಣಾನುವರ್ಣನೇ ।

ಕರೌ ಹರೇರ್ಮಂದಿರಮಾರ್ಜನಾದಿಷು

ಶ್ರುತಿಂ ಚಕಾರಾಚ್ಯುತ ಸತ್ಕಥೋದಯೇ ॥

ಮುಕುಂದಲಿಂಗಾಲಯದರ್ಶನೇ ದೃಶೌ

ತದ್‌ ಭೃತ್ಯಗಾತ್ರ ಸ್ಪರ್ಶೇಽಂಗಸಂಗಮಂ ।

ಘ್ರಾಣಂ ಚ ತತ್ಪಾದ ಸರೋಜಸೌರಭೇ

ಶ್ರೀಮತ್ತುಲಸ್ಯಾ ರಸನಾಂ ತದರ್ಪಿತೇ ॥

ಪಾದೌ ಹರೇಃ ಕ್ಷೇತ್ರಪದಾನುಸರ್ಪಣೇ

ಶಿರೋ ಹೃಷೀಕೇಶಪದಾಭಿವಂದನೇ ।

ಕಾಮಂ ಚ ದಾಸ್ಯೇ ನ ತು ಕಾಮಕಾಮ್ಯಯಾ

ಯಥೋತ್ತಮಶ್ಲೋಕಜನಾಶ್ರಯಾ ರತಿಃ ॥

ಮಹಾರಾಜ ಅಂಬರೀಷನು ತನ್ನ ಮನಸ್ಸನ್ನು ಸದಾ ಕೃಷ್ಣನ ಪಾದಕಮಲಗಳ ಧ್ಯಾನದಲ್ಲಿ ತೊಡಗಿಸಿದ್ದನು. ತನ್ನ ವಚನಗಳನ್ನು ಪ್ರಭುವಿನ ಮಹಿಮಾವರ್ಣನೆಯಲ್ಲೂ, ಕೈಗಳನ್ನು ಭಗವಂತನ ದೇಗುಲವನ್ನು ನಿರ್ಮಲವಾಗಿಡುವುದರಲ್ಲೂ ಹಾಗೂ ಕಿವಿಗಳನ್ನು ಕೃಷ್ಣನ ವಚನಗಳನ್ನು ಅಥವಾ ಕೃಷ್ಣನನ್ನು ಕುರಿತ ಸ್ತೋತ್ರಗಳನ್ನು ಕೇಳುವುದರಲ್ಲೂ ತೊಡಗಿಸಿದ್ದನು. ಅಂಬರೀಷ ಮಹಾರಾಜನ ಕಣ್ಣುಗಳು ಕೃಷ್ಣನ ವಿಗ್ರಹವನ್ನು ಕಾಣಲು ಇಲ್ಲವೆ ಮಥುರಾ ವೃಂದಾವನಗಳಂತಹ ಸ್ಥಳಗಳಲ್ಲಿನ ಕೃಷ್ಣ ದೇಗುಲಗಳನ್ನು ನೋಡಲು, ಸ್ಪರ್ಶೇಂದ್ರಿಯವನ್ನು ಕೃಷ್ಣಭಕ್ತರ ದೇಹವನ್ನು ಸ್ಪರ್ಶಿಸಲು, ಘ್ರಾಣೇಂದ್ರಿಯವನ್ನು ಭಗವಂತನಿಗೆ ಅರ್ಪಿತವಾದ ತುಳಸೀ ಪರಿಮಳವನ್ನು ಆಘ್ರಾಣಿಸಲು ಹಾಗೂ ನಾಲಗೆಯನ್ನು ಭಗವದ್‌ಪ್ರಸಾದದ ಸವಿ ನೋಡಲು ತೊಡಗಿಸಿದ್ದನು. ಅಂಬರೀಷ ಮಹಾರಾಜನು ತನ್ನ ಕಾಲುಗಳನ್ನು ಪ್ರಭುವಿನ ಪುಣ್ಯಕ್ಷೇತ್ರಗಳಿಗೆ ಅಥವಾ ದೇಗುಲಗಳಿಗೆ ನಡೆದುಹೋಗಲು, ತಲೆಯನ್ನು ಪ್ರಭುವಿನೆದುರು ಬಾಗಿಸಲು, ಹಾಗೂ ತನ್ನೆಲ್ಲ ಅಪೇಕ್ಷೆಗಳನ್ನು ದಿನದ ಇಪ್ಪತ್ನಾಲ್ಕು ತಾಸುಗಳ ಕಾಲವೂ ಭಗವತ್ಸೇವೆ ಮಾಡಲು ತೊಡಗಿಸಿದ್ದನು. ದಿಟವಾಗಿ ಮಹಾರಾಜ ಅಂಬರೀಷನು ತನ್ನ ಇಂದ್ರಿಯ ತೃಪ್ತಿಗಾಗಿ ಏನೊಂದನ್ನೂ ಅಪೇಕ್ಷಿಸಲಿಲ್ಲ. ಅವನು ತನ್ನೆಲ್ಲ ಇಂದ್ರಿಯಗಳನ್ನು ಭಕ್ತಿಸೇವೆಯಲ್ಲಿ ಹಾಗೂ ಪ್ರಭುಸೇವೆಗೆ ಸಂಬಂಧಿಸಿದ ಇತರ ಕಾರ್ಯಗಳಲ್ಲಿ ತೊಡಗಿಸಿದ್ದನು. ಇದು ಪ್ರಭುವಿನಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಸಕಲ ಐಹಿಕ ಇಚ್ಛೆಗಳಿಂದ ಮುಕ್ತನಾಗಲು ಇರುವ ಮಾರ್ಗ. (ಭಾಗವತ 9.4. 18-20)

ಸೂಕ್ಷ್ಮವಾಗಿ ಅವಲೋಕಿಸಿ. ಮಹಾರಾಜ ಅಂಬರೀಷನು ತನ್ನ ದೇಹದ ಎಲ್ಲ ಭಾಗ ಮತ್ತು ಮನಸ್ಸನ್ನು ಶ್ರೀಕೃಷ್ಣನ ಸೇವೆಗೇ ಬಳಸಿರುವುದು ಅರಿವಾಗುತ್ತದೆ. ದೇಹ, ಮನಸ್ಸನ್ನು ಬಳಸುವ ರೀತಿಯೇ ಅದು. ಈ ದೇಹ ಮತ್ತು ಮನಸ್ಸನ್ನು ಕೊಟ್ಟಿರುವುದು ಕೃಷ್ಣನೇ ಅಲ್ಲವೇ?

ದೇಹ, ಮನಸ್ಸು ಮತ್ತು ಇಂದ್ರಿಯಗಳ ಯೋಗ್ಯ ಬಳಕೆ ಬಗೆಗೆ ಶ್ರೀಕೃಷ್ಣನು ಈ ರೀತಿ ವಿವರಿಸಿದ್ದಾನೆ : 

ಕಾಯೇನ ಮನಸಾ ಬುದ್ಧ್ಯಾ ಕೇವಲೈರಿನ್ದ್ರಿಯೈರಪಿ ।

ಯೋಗಿನಃ ಕರ್ಮ ಕುರ್ವನ್ತಿ ಸಙ್ಗಂ ತ್ಯಕ್ತ್ವಾತ್ಮಶುದ್ಧಯೇ ॥

ಯೋಗಿಗಳು ಮೋಹವನ್ನು ಬಿಟ್ಟು ಕೇವಲ ಶುದ್ಧಿಗಾಗಿ ದೇಹ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳಿಂದ ಕರ್ಮವನ್ನು ಮಾಡುತ್ತಾರೆ. (ಭಗವದ್ಗೀತೆ 5.11)

ಶ್ರೀಕೃಷ್ಣನ ಅವಿಭಾಜ್ಯ ಅಂಗವಾಗಿರುವ ನಾವು ನಮ್ಮ ಎಲ್ಲ ಸುಖ ಸಂತೋಷಕ್ಕೆ ಅವನ ಮೇಲೆಯೇ ಅವಲಂಬಿತರು. ಈ ವಿಷಯದಲ್ಲಿ ನಾವಂತೂ ಸ್ವತಂತ್ರರಲ್ಲ. ಈಗ ಕಿಡಿಗಳನ್ನೇ ನೋಡಿ. ಅವು ಬೆಂಕಿಯ ಭಾಗ. ಅವು ತಮ್ಮ ಅಸ್ತಿತ್ವಕ್ಕೆ ಬೆಂಕಿಯ ಮೇಲೆ ಅವಲಂಬಿತ. ಈ ಕಿಡಿಗಳು ಬೆಂಕಿಯಿಂದ ಸಂಪರ್ಕ ಕಳೆದುಕೊಂಡರೆ? ಆಗ ಅವು ತಮ್ಮ ಶಾಖ ಮತ್ತು ಬೆಳಕನ್ನು ಕಳೆದುಕೊಳ್ಳುತ್ತವೆ. ಅದೇ ರೀತಿ ನಾವು ಕೃಷ್ಣನ ಅಂಗವೇ ಆಗಿರುವುದರಿಂದ ಸದಾ ಅವನೊಂದಿಗೆ ಸಂಪರ್ಕ ಇಟ್ಟುಕೊಂಡಿರಬೇಕು. ನಮ್ಮ ಚಿಂತನೆ, ಮಾತು ಮತ್ತು ಚಟುವಟಿಕೆಗಳಲ್ಲಿ ನಾವು ಅವನೊಂದಿಗೆ ಸಂಪರ್ಕದಲ್ಲಿರಬೇಕು.

ಪರಮಾತ್ಮನ ಸೇವೆಗೆ ನಾವು ನಮ್ಮ ಮನಸ್ಸು ಮತ್ತು ಇಂದ್ರಿಯಗಳನ್ನು ಬಳಸಿದರೆ ಅದನ್ನು ಭಕ್ತಿ ಸೇವೆ ಎಂದು ಕರೆಯುತ್ತಾರೆ. ಅಥವಾ ಸೃಷ್ಟಿಕರ್ತನ ಉದ್ದೇಶದಂತೆ ಮನಸ್ಸು ಮತ್ತು ಇಂದ್ರಿಯಗಳ ಯೋಗ್ಯ ಬಳಕೆ ಎಂದು ಹೇಳಬಹುದು. ಆದರೆ ನಮ್ಮ ಇಂದ್ರಿಯ ತೃಪ್ತಿಗೆಂದೇ ಮನಸ್ಸು ಮತ್ತು ಇಂದ್ರಿಯಗಳನ್ನು ಬಳಸಿದರೆ ಅದು ದುರುಪಯೋಗ ಅಥವಾ ಪಾಪ. ಕಾಮವನ್ನು ತೃಪ್ತಿಪಡಿಸುವುದು ಸಾಧ್ಯವೇ ಇಲ್ಲ. ಅದು ಸದಾ ನಮ್ಮಲ್ಲಿ ಉತ್ಕಟವಾಗಿಯೇ ಇರುತ್ತದೆ. ನಾವು ನಮ್ಮ ಮುಕ್ತ ಮನಸ್ಸನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ಇಚ್ಛೆ ಪೂರೈಕೆಗಾಗಿ ನಮ್ಮ ಮನಸ್ಸನ್ನು ತೊಡಗಿಸಿಕೊಂಡರೆ ಅದು ಎಂದಿಗೂ ತೃಪ್ತಿ ನೀಡುವುದಿಲ್ಲ. ನಾವು ಅತೃಪ್ತಿಯಲ್ಲಿ ಬೆಂದು ಹೋಗುತ್ತೇವೆ. ಆದುದರಿಂದ ಕಾಮ ಅಥವಾ ಭೋಗವು ಆತ್ಮದ ನಿತ್ಯ ವೈರಿ ಅಥವಾ ಶಾಶ್ವತ ಶತ್ರು. ಮನಸ್ಸಿನ ಯೋಗ್ಯ ಬಳಕೆ ಎಂದರೆ ಕೃಷ್ಣನ ಬಗೆಗೆ ಚಿಂತಿಸುವುದು ಮತ್ತು ಸೇವೆ ಸಲ್ಲಿಸುವುದು.

ಈಗಿನ ಪೀಳಿಗೆಗೆ ಈ ತತ್ತ್ವಗಳ ಬಗೆಗೆ ಏನೂ ಗೊತ್ತಿಲ್ಲ. ಇಂದ್ರಿಯಗಳನ್ನು ಮನಸೋ ಇಚ್ಛೆ ಬಳಸಬಹುದೆಂದು ಭಾವಿಸುತ್ತಾರೆ. ಬದುಕಿನ ಧ್ಯೇಯ ಅವರಿಗೆ ಗೊತ್ತಿದ್ದರೆ ತಾನೇ? ಅವರೆಂದುಕೊಳ್ಳುತ್ತಾರೆ, ತಮ್ಮ ದೇಹ ಮತ್ತು ಮನಸ್ಸನ್ನು ತಮಗಿಷ್ಟವಾದ ರೀತಿಯಲ್ಲಿ ಬಳಸಬಹುದು ಎಂದು. ಅವರು ಸಿನಿಮಾ ಮತ್ತಿತರ ಲೌಕಿಕ ದೃಶ್ಯಗಳನ್ನು ನೋಡಲು ತಮ್ಮ ಕಣ್ಣುಗಳನ್ನು ಉಪಯೋಗಿಸುತ್ತಾರೆ. ವಿವಿಧ ರೀತಿಯ ವಾಸನೆ ನೋಡಲು ತಮ್ಮ ಮೂಗನ್ನು ಬಳಸುತ್ತಾರೆ. ಸಿನಿಮಾ ಹಾಡು ಕೇಳಲು ಅವರಿಗೆ ಕಿವಿಗಳು ಸಾಧನ. ಇನ್ನು ನಾಲಗೆ ಬಳಕೆ ವಿವಿಧ ರೀತಿಯ ಆಹಾರ ರುಚಿಗೇ ಇದೆಯೆಂದು ಭಾವಿಸುತ್ತಾರೆ. ಅನಿರ್ಬಂಧಿತ ಲೈಂಗಿಕ ತೃಪ್ತಿಗಾಗಿ ಲೈಂಗಿಕ ಅಂಗಗಳನ್ನು ಬಳಸುತ್ತಾರೆ. ಅವರ ಜೀವನ ಶೈಲಿ ನೋಡಿ – ಭೋಜನ ಮತ್ತು ನಿದ್ರೆಗೆ ಹೊತ್ತು ಗೊತ್ತು ಎಂಬುದಿಲ್ಲ. ಅವರು ಮಧ್ಯರಾತ್ರಿವರೆಗೂ ಎದ್ದಿರುತ್ತಾರೆ, ಕಚೇರಿಯಲ್ಲಿ ಕೆಲಸ ಮಾಡುತ್ತಲೋ, ಇಲ್ಲವೆ ಇಂದ್ರಿಯ ತೃಪ್ತಿಯ ಚಟುವಟಿಕೆಗಳಲ್ಲಿ ತೊಡಗುತ್ತಲೋ ಇರುತ್ತಾರೆ. ಇನ್ನೆಷ್ಟು ಖುಷಿ ಪಡಲಿ ಎಂದೇ ಯೋಚಿಸುತ್ತ ಮನದಲ್ಲಿ ನಾನಾ ಉಪಾಯಗಳನ್ನು ರೂಪಿಸುತ್ತಾರೆ. ಆದರೆ ಈ ರೀತಿಯ ಲೈಂಗಿಕ ಚಟುವಟಿಕೆ ಪ್ರಯತ್ನಗಳಲ್ಲಿ ಅವರಿಗೆ ಪದೇ ಪದೇ ಅಡ್ಡಿ ಉಂಟಾಗುತ್ತದೆ.

ನೋಡಿ, ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ನೈಸರ್ಗಿಕ ದುರಂತಗಳೂ ಅಧಿಕಗೊಳ್ಳುತ್ತಿವೆ. ಕೌಟುಂಬಿಕ ಬಾಂಧವ್ಯದಲ್ಲಿ ಒಡಕು ಉಂಟಾಗುತ್ತಿದೆ. ಇದರ ಪರಿಣಾಮವೆಂದರೆ ವಿವಾಹ ವಿಚ್ಛೇದನ ಏರುಮುಖವಾಗಿರುವುದು ಮತ್ತು ಅಪರಾಧ ಸಂಖ್ಯೆ ಹೆಚ್ಚುತ್ತಿರುವುದು. ಸೃಷ್ಟಿಯ ಉದ್ದೇಶ ಅರಿಯದ ಮೌಢ್ಯತನವೇ ಇದಕ್ಕೆ ಕಾರಣ. ತಾವು ಕೃಷ್ಣನ ಒಂದು ಭಾಗ ಮತ್ತು ಅವನ ಸೇವೆ ಸಲ್ಲಿಸಬೇಕು ಎಂಬುದು ಅವರಿಗೆ ಗೊತ್ತಿಲ್ಲ. ತಮ್ಮ ಬದುಕಿನ ಎಲ್ಲ ಅಗತ್ಯಗಳನ್ನು ನೀಡಿರುವ ಪರಮಾತ್ಮನಿಗೆ ತಾವು ಕೃತಜ್ಞರಾಗಿರಬೇಕೆಂಬುದೇ ಅವರಿಗೆ ತಿಳಿದಿಲ್ಲ.

ಸಂತೋಷದಿಂದ ಬದುಕಬೇಕೆಂದರೆ ಕೆಲ ತ್ಯಾಗಗಳ ಮೂಲಕ ಶ್ರೀಕೃಷ್ಣನಿಗೆ ನಮ್ಮ ಅಭಿವಂದನೆ ಸಲ್ಲಿಸಬೇಡವೇ? ಸಂತೋಷವೆನ್ನುವುದು ಕೃಷ್ಣಸೇವೆಯ ಫಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ದೇವರೆನ್ನುವುದು ಕಲ್ಪನೆ ಅಥವಾ ಕುರುಡು ನಂಬಿಕೆ ಎಂದು ಅವರು ಯೋಚಿಸುತ್ತಾರೆ. ಕಷ್ಟಪಟ್ಟು ದುಡಿದು ಸೊತ್ತು ಗಳಿಸಿದರೆ ಅದೇ ಸಂತೋಷ ಎಂದು ಅವರು ಭಾವಿಸುತ್ತಾರೆ. ಇವೆಲ್ಲ ಬದುಕಿನ ತಪ್ಪು ಗ್ರಹಿಕೆಗಳು. ಈ ತಪ್ಪು ತಿಳಿವಳಿಕೆ, ಭ್ರಮೆಯನ್ನು ದೂರ ಮಾಡಲು ಶ್ರೀಕೃಷ್ಣನು ಪದೇ ಪದೇ ಈ ಭೂಮಿಯ ಮೇಲೆ ಆವಿರ್ಭವಿಸುತ್ತಾನೆ. ಅವನು ಭಗವದ್ಗೀತೆಯಲ್ಲಿ ಹೇಳುತ್ತಾನೆ :

ಯದಾ ಯದಾ ಹಿ ಧರ್ಮಸ್ಯ ಗ್ಲಾನಿಭರ್ವತಿ ಭಾರತ ।

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್‌ ॥

ಭರತ ವಂಶಜನಾದ ಅರ್ಜುನನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ. (ಭಗವದ್ಗೀತೆ: 4.7)

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಅತ್ಯಂತ ರಹಸ್ಯವಾದ ಬೋಧನೆ ಎಂದರೆ –

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ ॥

ಯಾವಾಗಲೂ ನನ್ನನ್ನು ಕುರಿತು ಚಿಂತಿಸು, ನನ್ನ ಭಕ್ತನಾಗು, ನನ್ನನ್ನು ಪೂಜಿಸು ಮತ್ತು ನನಗೆ ನಮಸ್ಕರಿಸು. ಆಗ ನೀನು ನಿಶ್ಚಯವಾಗಿಯೂ ನನ್ನ ಬಳಿಗೆ ಬರುತ್ತೀಯೆ. ನೀನು ನನ್ನ ಬಹುಪ್ರಿಯ ಸ್ನೇಹಿತನಾದದ್ದರಿಂದ ನಿನಗೆ ಈ ಭರವಸೆಯನ್ನು ಕೊಡುತ್ತೇನೆ. (ಭಗವದ್ಗೀತೆ 18.65)

ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।

ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥

ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ; ಹೆದರಿಕೊಳ್ಳಬೇಡ. (ಭಗವದ್ಗೀತೆ 18.66)

ಈ ಎರಡು ಶ್ಲೋಕಗಳಲ್ಲಿ ಶ್ರೀಕೃಷ್ಣನು ನಮ್ಮ ಅಸ್ತಿತ್ವದ ಉದ್ದೇಶವನ್ನು ವಿವರವಾಗಿ ತಿಳಿಸಿದ್ದಾನೆ. ಮಾನವ ಸಮಾಜಕ್ಕೆ ಶಾಂತಿ ಮತ್ತು ಅಭ್ಯುದಯ ಬೇಕೆಂದರೆ ಅದು ಭಗವದ್ಗೀತೆ ಮತ್ತು ಶ್ರೀಮದ್‌ ಭಾಗವತದ ಬೋಧನೆಗಳನ್ನು ಆಲಿಂಗಿಸಿಕೊಳ್ಳಬೇಕು. ಶ್ರೀಲ ಪ್ರಭುಪಾದರಂತಹ ಗುರುವಿನ ತಜ್ಞ ಮಾರ್ಗದರ್ಶನದಲ್ಲಿ ಕೃಷ್ಣ ಭಕ್ತಿಯ ತತ್ತ್ವ, ಸಂದೇಶಗಳನ್ನು ಅರಿಯಬೇಕು. ಶ್ರೀಕೃಷ್ಣನ ಪರಿಶುದ್ಧ ಭಕ್ತರಾದ ಶ್ರೀಲ ಪ್ರಭುಪಾದರು ಈ ಭಕ್ತಿ ಸಂದೇಶಗಳನ್ನು ತಮ್ಮ ಗ್ರಂಥ ಮತ್ತು ಉಪನ್ಯಾಸಗಳ ಮೂಲಕ ಅದ್ಭುತವಾಗಿ ವಿವರಿಸಿದ್ದಾರೆ. ಶ್ರೀಲ ಪ್ರಭುಪಾದರು ಕೃಪೆಯಿಂದ ನೀಡಿರುವ ಈ ಸೌಲಭ್ಯಗಳ ಪ್ರಯೋಜನವನ್ನು ಪ್ರತಿಯೊಬ್ಬ ಮಾನವ ಜೀವಿಯೂ ಪಡೆದುಕೊಳ್ಳಬೇಕು. ನಾವು ಆಧ್ಯಾತ್ಮಿಕ ಆತ್ಮಗಳೆಂದು ಮತ್ತು ಕೃಷ್ಣನ ಸೇವೆಯೇ ನಮ್ಮ ಕರ್ತವ್ಯವೆಂದು ಅರ್ಥ ಮಾಡಿಕೊಳ್ಳಲು ನಮಗೆ ಇದು ನೆರವಾಗುತ್ತದೆ. ಈ ಮೂಲ ತತ್ತ್ವಗಳನ್ನು ನಾವು ಅರ್ಥಮಾಡಿಕೊಂಡರೆ, ಅದರಂತೆ ನಾವು ಕ್ರಿಯಾಶೀಲರಾಗಬಹುದು ಮತ್ತು ನಮ್ಮ ಬದುಕನ್ನು ಯಶಸ್ವಿಗೊಳಿಸಿಕೊಳ್ಳಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi