– ಶ್ರುತ ಕೀರ್ತಿ ದಾಸ
ಇದು ವಿಸ್ಮಯ ಎನ್ನಿಸಿದರೂ ಸತ್ಯ. ಭಗವಂತನ ಲೀಲೆ. ಶ್ರೀಲ ಪ್ರಭುಪಾದರ ಮಹಾಪ್ರಸಾದವನ್ನು ಸೇವಿಸಿ ಒಬ್ಬ ಗಗನಸಖಿ ಭಕ್ತೆಯಾದ ಕಥೆ ಇದು.

ಈ ಪ್ರಸಂಗ ನಡೆದದ್ದು 1975ರ ಫೆಬ್ರವರಿಯಲ್ಲಿ. ನಾವು ಮೆಕ್ಸಿಕೋ ಸಿಟಿಯಿಂದ ಕ್ಯಾರೆಕಸ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ಮೆಕ್ಸಿಕೋ ಸಿಟಿಯಲ್ಲಿ ಭಕ್ತರೊಬ್ಬರು ನಮಗೆ ಮಸಾಲೆ ಚುರುಮುರಿಯನ್ನು ಒಂದು ಚೀಲದಲ್ಲಿ ಹಾಕಿ ಕೊಟ್ಟಿದ್ದರು. ವಿಮಾನ ಹೊರಟಾಗ ಪ್ರಭುಪಾದರು ಪ್ರಸಾದವನ್ನು ತೆಗೆದುಕೊಳ್ಳಲು ಸಿದ್ಧರಾದರು. ಪ್ರತಿಸಲ ಅವರು ಹಾಗೆಯೇ ಮಾಡುತ್ತಿದ್ದರು. ನಾನು ಅವರ ಮುಂದೆ ಪ್ರಸಾದವನ್ನು ಇಟ್ಟೆ. ಅವರು ಆ ಪ್ರಸಾದವನ್ನು ಸ್ವೀಕರಿಸಲು ಆರಂಭಿಸಿದರು. ಹತ್ತು ನಿಮಿಷ ತೆಗೆದುಕೊಂಡ ಮೇಲೆ ನನ್ನ ಕಡೆ ನೋಡಿ, “ಸರಿ” ಎಂದು ಹೇಳಿದರು.
ಮಿಕ್ಕಿರುವ ಪ್ರಸಾದವನ್ನು ನನ್ನ ದೈವ ಸಹೋದರ ಪರಮಹಂಸ ದಾಸ ಮತ್ತು ನಾನು ತೆಗೆದುಕೊಂಡೆವು. ಕೆಲವು ನಿಮಿಷಗಳ ಕಾಲ ನಾವು ಈ ಚುರುಮುರಿಯನ್ನು ಸೇವಿಸುತ್ತಿರುವಾಗ, ಇದ್ದಕಿದ್ದಹಾಗೆ ಒಬ್ಬ ಗಗನಸಖಿ ನನ್ನ ಮುಂದೆ ಬಂದು ನನ್ನ ತಟ್ಟೆಗೆ ಕೈ ಹಾಕಿ ಒಂದು ಹಿಡಿ ಚುರುಮುರಿಯನ್ನು ತೆಗೆದುಕೊಂಡು ತನ್ನ ಬಾಯಿಗೆ ಹಾಕಿಕೊಂಡಳು. “ಇದು ಬಹಳ ಚೆನ್ನಾಗಿದೆ. ಏನಿದು?” ಎಂದು ಅವಳು ಕೇಳಿದಳು. “ಇದು ಚುರುಮುರಿ” ಎಂದು ನಾನು ಹೇಳಿದೆ. ಅವಳು, “ಇದನ್ನು ಯಾಕೆ ತಿನ್ನುತ್ತಿರುವಿರಿ?” ಎಂದು ಕೇಳಿದಳು. ಅದಕ್ಕೆ ನಾನು, “ನಾವು ಶಾಖಾಹಾರಿಗಳು. ನಮಗೆ ನಮ್ಮದೇ ಆದ ಆಹಾರ ಕ್ರಮವಿದೆ” ಎಂದು ಉತ್ತರಿಸಿದೆ. ಆಗ ಅವಳು, “ನಾನು ನಿಮಗೆ ಇನ್ನೇನಾದರೂ ತಂದುಕೊಡಬಹುದಾ?” ಎಂದು ಕೇಳಿದಳು. ಅದಕ್ಕೆ ಪ್ರಭುಪಾದರು, “ಬಿಸಿ ಹಾಲು” ಎಂದರು. ಆಗ ಅವಳು, “ಈಗಲೇ ತಂದುಕೊಡುವೆ. ಇನ್ನೇನಾದರೂ ತಂದುಕೊಡಬಹುದೇ? ಹಣ್ಣು, ಬ್ರೆಡ್, ಚೀಸು ಇಂತಹದೇನನ್ನಾದರೂ ತರಬಹುದಾ?” ಪ್ರಭುಪಾದರು ಮತ್ತೆ “ಸರಿ” ಎಂದರು. ಹತ್ತು ನಿಮಿಷವಾದ ಮೇಲೆ ಅವಳು ಅದನ್ನೆಲ್ಲಾ ತಂದುಕೊಟ್ಟಳು.
ಅವಳು ಅತ್ತ ಹೋದ ಕೂಡಲೇ ನಾನು ಪ್ರಭುಪಾದರತ್ತ ತಿರುಗಿ ಕೇಳಿದೆ, “ಪ್ರಭುಪಾದರೇ, ಇದೆಷ್ಟು ಆಶ್ಚರ್ಯಕರವಲ್ಲವೇ” ಅದಕ್ಕೆ ಪ್ರಭುಪಾದರು, “ಇಲ್ಲ. ಮಹಿಳೆಯರಿಗೆ ಸ್ವಾಭಾವಿಕವಾಗಿ ಒಂದು ಪ್ರವೃತ್ತಿ ಇರುತ್ತದೆ, ಅದೇ ಸೇವೆ ಮಾಡಲು” ಎಂದು ಹೇಳಿದರು.

ನಾವು ಭಕ್ತರೂ ಪ್ರಭುಪಾದರ ಯಾವ ಮಹಾಪ್ರಸಾದಕ್ಕೆ, ಹಾತೊರೆಯುತ್ತೇವೆಯೋ ಅದನ್ನು ಅವಳು ತೆಗೆದುಕೊಂಡು ತಿಂದುದಕ್ಕೆ ನನಗೆ ಆಶ್ಚರ್ಯವಾಯಿತು. ಹೀಗೆ ವಿವಿಧ ದೇವಸ್ಥಾನಗಳಿಗೆ ಹೋದಾಗ, ನನ್ನ ಪ್ರವಚನದಲ್ಲಿ ನಾನು ಈ ಕಥೆಯನ್ನು ಹೇಳುತ್ತೇನೆ.
ಒಮ್ಮೆ ನಾನು ಲಾಸ್ ಏಂಜಲ್ಸ್ – ನ್ಯೂ ದ್ವಾರಕಾದಲ್ಲಿ ಈ ಕಥೆ ಹೇಳಿದೆ. ಪ್ರವಚನದ ಅನಂತರ ಒಬ್ಬ ಹುಡುಗ ನನ್ನ ಬಳಿಗೆ ಬಂದು, “ನೀವು ಹೇಳಿದ ಕಥೆ ಬಹಳ ಅದ್ಭುತವಾಗಿದೆ. ನಾನೂ ನಿಮಗೆ ಒಂದು ಕಥೆ ಹೇಳಲೇ?” ಎಂದು ಕೇಳಿದನು. “ಹೇಳು” ಎಂದೆ.

ಆಗ ಅವನು ಹೇಳಿದ, “ಬ್ರೆಜಿಲ್ನಲ್ಲಿ ತುಂಬಾ ದೂರದ ಗ್ರಾಮಗಳಲ್ಲಿ ಸಂಕೀರ್ತನೆಗಾಗಿ ಹೋಗಿದ್ದೆವು. ಒಂದು ಹಳ್ಳಿಯಲ್ಲಿ ಮನೆ ಮನೆಗೆ ಹೋಗಿ ನಾವು ಪುಸ್ತಕಗಳನ್ನು ವಿತರಿಸುತ್ತಿದ್ದೆವು. ಒಂದು ಮನೆಯ ಬಾಗಿಲು ತಟ್ಟಿದಾಗ, ಒಬ್ಬ ಮಹಿಳೆ ಬಾಗಿಲು ತೆರೆದರು. ನಮ್ಮ ದೋತಿ, ಕುರ್ತಾ ನೋಡಿ ನಮ್ಮನ್ನು ಒಳಗೆ ಕರೆದರು. ಅವರ ಮನೆ ಒಳಗೆ ನೋಡಿದಾಗ, ಎಲ್ಲ ಕಡೆ ಕೃಷ್ಣನ ಚಿತ್ರಗಳು ಕಂಡವು! ಅವರು ಒಂದು ಪೂಜಾ ಮಂಟಪವನ್ನೂ ಇಟ್ಟಿದ್ದರು. ನನಗೆ ಆಶ್ಚರ್ಯವಾಯಿತು. “ನೀವು ಹೇಗೆ ಭಕ್ತೆಯಾದಿರಿ?” ಎಂದು ಕೇಳಿದೆ. ಅದಕ್ಕೆ ಅವರು, “ಮೊದಲ ಬಾರಿ ನಾನು ಭಕ್ತರನ್ನು ಭೇಟಿಯಾದದ್ದು, ಪ್ರಭುಪಾದರ ಜೊತೆ, ವಿಮಾನದಲ್ಲಿ. ಆಗ ನಾನು ಗಗನಸಖಿಯಾಗಿದ್ದೆ” ಎಂದು ಹೇಳಿದರು. ಆ ಮಹಿಳೆ ಪ್ರಭುಪಾದರನ್ನು ವಿಮಾನದಲ್ಲಿ ಭೇಟಿಯಾದುದು 10 ವರ್ಷಗಳ ಹಿಂದೆ. ಅಂದರೆ ಪ್ರಭುಪಾದರನ್ನು ಆ ಮಹಿಳೆ ಭೇಟಿಯಾದ ಹತ್ತು ವರ್ಷಗಳ ಅನಂತರ ಈ ಪ್ರಸಂಗ ನಡೆಯಿತು. ಹಳ್ಳಿಯುಲ್ಲಿ ಆ ಮಹಿಳೆಯನ್ನು ಭೇಟಿಯಾದಾಗ ಅವರು ಭಕ್ತೆಯಾಗಿರುವುದನ್ನು ಆ ಹುಡುಗನು ನೋಡಿದ. ಪ್ರಭುಪಾದರನ್ನು ಭೇಟಿಯಾದ ಮೇಲೆ ಆ ಮಹಿಳೆ ಇನ್ನೊಂದು ಸಲ ಭಕ್ತರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆಗ ಅವರು ಪ್ರಭುಪಾದರ ಒಂದು ಪುಸ್ತಕವನ್ನೂ ಪಡೆದುಕೊಂಡರು. ಹೀಗೆ ಅವರು ಕೃಷ್ಣಭಕ್ತರಾದರು.
ಪ್ರಭು ಲೀಲೆಯೇ ಹಾಗೆ.






Leave a Reply