ಶ್ರೀ ಕೃಷ್ಣನ ಅಮರ ಬೋಧನೆಯ ಪುನರ್ ನಿರೂಪಣೆ.
(ಗೀತಾ ಜಯಂತಿಯ ಪ್ರಯುಕ್ತ ವಿಶೇಷ ಲೇಖನ)

ಶ್ರೀಲ ಪ್ರಭುಪಾದರು 1968ರಲ್ಲಿ ಭಗವದ್ಗೀತಾ ಯಥಾ ರೂಪವನ್ನು (ಭಗವದ್ಗೀತ ಆಸ್ ಇಟ್ ಈಸ್) ಪ್ರಕಟಿಸಿದರು. ಆಗಿನಿಂದ ಹತ್ತಾರು ಭಾಷೆಗಳಲ್ಲಿ ಲಕ್ಷಾಂತರ ಪ್ರತಿ ಮಾರಾಟವಾಗಿದೆ. ಶ್ರೀ ಕೃಷ್ಣನ ಶ್ರೇಷ್ಠ ಭಕ್ತ ಶ್ರೀಲ ಪ್ರಭುಪಾದರು ಗೀತೆಯ ಸ್ಪಷ್ಟ ನಿರ್ಣಯಗಳನ್ನು ವಿವರಿಸಿದ್ದಾರೆ. ಗೀತೆಯನ್ನು ಅಲ್ಪ ಜ್ಞಾನದ ವ್ಯಾಖ್ಯಾನಕಾರರು ತಮ್ಮದೇ ಕಾರ್ಯಸೂಚಿಯೊಂದಿಗೆ ಸದಾ ಅಸ್ಪಷ್ಟವಾಗಿ ನಿರೂಪಿಸಿದ್ದಾರೆ. ಶ್ರೀಲ ಪ್ರಭುಪಾದರ ಭಾವಾರ್ಥಗಳು ನಮಗೆ ಕೃಷ್ಣ ಮತ್ತು ಅರ್ಜುನರ ಸಂವಾದದ ಶ್ಲೋಕಗಳನ್ನು ವಿವರಿಸುತ್ತವೆ. ಅವರ ಐತಿಹಾಸಿಕ ಸಂವಾದದ ಸಂಕ್ಷಿಪ್ತ ರೂಪವನ್ನು ಮೂಲದಲ್ಲಿನ ಶ್ಲೋಕ ಮತ್ತು ಭಾವಾರ್ಥಗಳ ಅನುಕ್ರಮದಲ್ಲಿಯೇ ಮುಖ್ಯ ಅಂಶಗಳೊಂದಿಗೆ ಈ ಕೆಳಗೆ ನೀಡಲಾಗಿದೆ. ಇವು ನೇರವಾದ ಉಲ್ಲೇಖಗಳಲ್ಲ. ಆದುದರಿಂದ ಅವು ಸಂಪೂರ್ಣ ಭಗವದ್ಗೀತಾ ಯಥಾ ರೂಪಕ್ಕೆ ಬದಲಲ್ಲ. ಇದು ಶ್ರೀಲ ಪ್ರಭುಪಾದರ ಸಮಗ್ರ ಮುದ್ರಣಕ್ಕೆ ಹೊಂದುವಂತಹುದು. ಇದನ್ನು ಆರಂಭಿಕ ಓದು ಅಥವಾ ಪರಾಮರ್ಶೆಗೆ ಬಳಸಿಕೊಳ್ಳಬಹುದು.
ಭಾಗ 1 : ಕರ್ಮ
ಅರ್ಜುನ : ಕೃಷ್ಣ, ದಯೆಯಿಟ್ಟು ನನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸು. ದುರ್ಬುದ್ಧಿಯ ದುರ್ಯೋಧನನ ಯಾವ ಯಾವ ಅನುಯಾಯಿಗಳು ಬಂದಿದ್ದಾರೆ ಎಂದು ನೋಡಲು ಬಯಸಿದ್ದೇನೆ.

ಕೃಷ್ಣ (ಯುದ್ಧ ಭೂಮಿಯಲ್ಲಿ ಎದುರಾಗಿ ನಿಂತ ಎರಡು ಬೃಹತ್ ಸೈನ್ಯಗಳ ಮಧ್ಯೆ ಸ್ವರ್ಣ ರಥವನ್ನು ನಿಲ್ಲಿಸಿ) : ನನ್ನ ಬಂಧುವೇ, ಇಲ್ಲಿ ನೆರೆದಿರುವ ಎಲ್ಲ ಶ್ರೇಷ್ಠ ಯೋಧರನ್ನು ನೋಡು.
ಅರ್ಜುನ (ದಿಗ್ಭ್ರಮೆಯಿಂದ) : ಕೃಷ್ಣ, ಈ ಎಲ್ಲ ಪ್ರೀತಿಯ ಬಂಧುಗಳು, ಗುರುಗಳು ಮತ್ತು ಹಿರಿಯರೊಂದಿಗೆ ನಾನು ಯುದ್ಧ ಮಾಡಲಾರೆ. ನನ್ನ ಇಡೀ ಕುಟುಂಬವೇ ನಾಶವಾಗಿಬಿಡುತ್ತದೆ. ಇದರ ಬದಲಿಗೆ ನಾನು ಸಾಯುವುದು ಅಥವಾ ಭಿಕ್ಷೆ ಬೇಡಿ ಬದುಕುವುದು ಉತ್ತಮ.
ಕೃಷ್ಣ (ಕರುಣೆಯಿಂದ ಮುಗಳ್ ನಗುತ್ತಾ) : ಜನರು ಭೌತಿಕ ದೇಹವಲ್ಲ, ಶಾಶ್ವತ ಆತ್ಮ ಎನ್ನುವುದನ್ನು ನೀನು ಮರೆತಿರುವೆ. ನೀನು ದೇಹವನ್ನು ಕೊಲ್ಲಬಹುದು, ಆತ್ಮವನ್ನಲ್ಲ.
ಅರ್ಜುನ : ಕೃಷ್ಣ, ಈ ಪೂಜಾರ್ಹರನ್ನು ನಾನು ಹೇಗೆ ಕೊಲ್ಲಲಿ? ಯಾವುದೇ ವಿಜಯವು ಅವರ ರಕ್ತ ಲೇಪನದಿಂದ ಕೂಡಿರುತ್ತದೆ. ನನಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ. ನನಗೆ ಮಾರ್ಗದರ್ಶನ ತೋರು.
ಕೃಷ್ಣ : ನನ್ನ ಮಿತ್ರನೆ, ನೀನು ಒಬ್ಬ ಯೋಧ. ಯುದ್ಧ ಮಾಡು. ಆದರೆ ನಿನಗಾಗಿ ಅಲ್ಲ. ಪರಮನಿಗಾಗಿ ಸಮರದಲ್ಲಿ ತೊಡಗು. ಆಗ ನೀನು ನಿಜವಾದ ಶಾಶ್ವತ ಆತ್ಮದಂತೆ ನಡೆದುಕೊಳ್ಳುವೆ. ಲೌಕಿಕದ ಎಲ್ಲ ವೈವಿಧ್ಯಗಳ ವಿರುದ್ಧ ಹೋರಾಡು ಮತ್ತು ಯೋಗಿಯಾಗು.
ಅರ್ಜುನ : ಯೋಗಿಗಳು ಏನು ಮಾಡುತ್ತಾರೆ? ಅವರ ಲಕ್ಷಣಗಳೇನು?
ಕೃಷ್ಣ : ತಮ್ಮ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಯೋಗಿಗಳು ತಮ್ಮ ಬಾಹ್ಯ ಕರ್ತವ್ಯಗಳನ್ನು ಯಾವುದೇ ಮಮತೆ ಇಲ್ಲದಂತೆ ನಿರ್ವಹಿಸುತ್ತಾರೆ. ಅನೇಕ ಜನರಿಗೆ ಲಭ್ಯವಾಗಿರದ ಅಂತರ್ ಸುಖವನ್ನು ಅವರು ಆನಂದಿಸುತ್ತಾರೆ.
ಅರ್ಜುನ : ಏಕ ಕಾಲದಲ್ಲಿ ಅಂತರ್ ಮುಖಿಯಾಗಿ ಸುಖವಾಗಿರು ಮತ್ತು ಯುದ್ಧ ಮಾಡು ಎಂದು ನೀನು ಹೇಳುತ್ತಿರುವೆ. ಅದು ವಿರುದ್ಧವಾದುದು.

ಕೃಷ್ಣ : ಅರ್ಜುನ, ಕರ್ಮವನ್ನು ಮಾಡದೇ ನೀನು ಬದುಕುವುದು ಸಾಧ್ಯವಿಲ್ಲ. ನಿನಗಾಗಿ ಕ್ರಿಯಾಶೀಲನಾಗುವ ಬದಲು ಅದನ್ನು ಭಗವಂತನಿಗಾಗಿ ಮಾಡಿದ ತ್ಯಾಗವೆಂದು ಮಾಡು. ಆಗ ನೀನು ಸುಖ ಸಂತೋಷದಿಂದ ಇರುವೆ.
ಅರ್ಜುನ : ಸ್ವಾರ್ಥ ಕಾರ್ಯಗಳತ್ತ ನನ್ನನ್ನು ಪ್ರಚೋದಿಸುತ್ತಿರುವ ಶಕ್ತಿ ಯಾವುದು?
ಕೃಷ್ಣ : ಉಲ್ಬಣಿಸುವ ಆಸೆಯಿಂದ ಹುಟ್ಟುವ ಕಾಮ. ಅದು ನಿನ್ನ ಸ್ಪಷ್ಟ ಚಿಂತನಾ ಸಾಮರ್ಥ್ಯವನ್ನೇ ನಾಶ ಮಾಡಿಬಿಡುತ್ತದೆ. ಕಾಮವನ್ನು ಗೆಲ್ಲಲು ಹೇಗೆ ಯೋಗವನ್ನು ಬಳಸಬೇಕೆಂದು ನಾನು ಸುದೀರ್ಘ ಕಾಲದಿಂದ ಬೋಧಿಸುತ್ತಿರುವೆ. ನಾನು ಸೂರ್ಯನಿಗೆ ಬೋಧಿಸಿದೆ. ಅವನು ತನ್ನ ಮಗನಿಗೆ ಬೋಧಿಸಿದ. ಹೀಗೆ ಗುರು ಪರಂಪರೆ ಆರಂಭವಾಯಿತು. ಆದರೆ ಅದು ಹೇಗೋ ಮೂಲ ಜ್ಞಾನವು ನಷ್ಟವಾಗಿ ಹೋಗಿದೆ. ಆದುದರಿಂದ, ಮಿತ್ರ, ನಾನೇ ಅದನ್ನು ನಿನಗೆ ಬೋಧಿಸುವೆ.
ಅರ್ಜುನ : ಸೂರ್ಯನು ನಿನಗಿಂತ ತುಂಬ ಮೊದಲು ಹುಟ್ಟಿದವನು. ನೀನು ಅವನಿಗೆ ಹೇಗೆ ಬೋಧಿಸಿದೆ?

ಕೃಷ್ಣ : ಸಾಮಾನ್ಯ ದೇಹಗಳಿಗೆ ವಯಸ್ಸಾಗುತ್ತದೆ ಮತ್ತು ಸಾಯುತ್ತವೆ. ಆದರೆ ನನ್ನ ಶರೀರವು ಆಧ್ಯಾತ್ಮಿಕ ಮತ್ತು ಎಂದೂ ಕ್ಷಯಿಸುವುದಿಲ್ಲ. ಸಜ್ಜನರಿಗೆ ನೆರವಾಗಲು ಮತ್ತು ದುರ್ಜನರನ್ನು ನಾಶಪಡಿಸಲು ನಾನು ಪ್ರತಿ ಯುಗದಲ್ಲಿಯೂ ಅವತರಿಸುತ್ತೇನೆ. ಸಜ್ಜನರು ತಮ್ಮ ಕಾಮದಿಂದ ಮುಕ್ತರಾಗುತ್ತಾರೆ ಮತ್ತು ತಮ್ಮ ಪ್ರೀತಿಯನ್ನು ನನ್ನತ್ತ ತಿರುಗಿಸುತ್ತಾರೆ. ಆದರೆ ಅನೇಕ ರೀತಿಯ ಜನರಿದ್ದಾರೆ ಮತ್ತು ನಾನು ಎಲ್ಲರಿಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸುತ್ತೇನೆ.
ಅರ್ಜುನ, ನನಗಾಗಿ ಕ್ರಿಯಾಶೀಲನಾಗು. ನೀನು ಮಾಡಿದಾಗ ಅದರಲ್ಲಿ ಅಡಕವಾಗಿರುವ ಎಲ್ಲವೂ – ನಿನ್ನ ಕರ್ಮ, ನಿನ್ನ ಉಪಕರಣ, ನಿನ್ನ ಜ್ಞಾನ – ಆನಂದಮಯ ಅರ್ಪಣೆಯ ಒಂದು ಭಾಗವಾಗುತ್ತದೆ, ಭಗವಂತನಿಗೆ ಅರ್ಪಿಸುವ ತ್ಯಾಗವಾಗುತ್ತದೆ. ತ್ಯಾಗ ಮಾಡಲು ಅನೇಕ ಮಾರ್ಗಗಳಿವೆ. ಅದನ್ನು ಪರಿಹರಿಸಿಕೊಳ್ಳಲು ನೀನು ಯೋಗ್ಯ ಗುರುವನ್ನು ಕಂಡುಕೊಳ್ಳುವ ಅಗತ್ಯವಿದೆ.
ಮಮತೆ ಇಲ್ಲದೆ ಕರ್ಮದ ನಿರ್ವಹಣೆ ಮತ್ತು ನನಗಾಗಿ ಕರ್ಮ ಮಾಡುವುದು ಎರಡೂ ಯೋಗದ ರೂಪಗಳೇ. ಆದರೆ ನೀನು ನನಗಾಗಿ ಕರ್ಮ ಮಾಡಿದರೆ ಅದು ಯಾವುದೇ ಮಮಕಾರವಿಲ್ಲದ ಕರ್ಮವಾಗುತ್ತದೆ. ನಾನು ನಿನ್ನ ಸ್ನೇಹಿತ ಎನ್ನುವುದನ್ನು ನೆನಪು ಮಾಡಿಕೋ. ನನಗಾಗಿ ಮಾಡಿದ ಎಲ್ಲ ಕ್ರಿಯೆಯ ಹೊಣೆ ನನ್ನದೇ. ಆಗ ನಿನಗೆ ನಿರಂತರ ಆಂತರಿಕ ಶಾಂತಿ. ನೀನು ನಿನ್ನ ಕರ್ತವ್ಯವನ್ನು ಪರಿಪೂರ್ಣ ಯೋಗದಲ್ಲಿ ಮಾಡುವೆ ಅಥವಾ ನನ್ನೊಡಗೂಡಿ ಮಾಡುವೆ. ಇದನ್ನು ಮಾಡಲು ನೀನು ಯೋಗ ಮತ್ತು ಧ್ಯಾನದ ವಿಧಾನಗಳೊಂದಿಗೆ ಇರುವ ದೀರ್ಘ ತಪಸ್ಸುಗಳನ್ನು ಕೈಗೊಳ್ಳಬೇಕು.
ಅರ್ಜುನ : ಮನಸ್ಸನ್ನು ಸ್ಥಿರವಾಗಿಸುವುದು ಗಾಳಿಯನ್ನು ನಿಯಂತ್ರಿಸಿದಂತೆ. ಈ ಯೋಗ ಪದ್ಧತಿಯು ನನಗೆ ಕಾರ್ಯಸಾಧುವಲ್ಲ.
ಕೃಷ್ಣ : ಹೌದು, ಅದು ಕಷ್ಟ. ಆದರೆ ಅಭ್ಯಾಸದಿಂದ ಸಾಧ್ಯ.
ಅರ್ಜುನ : ಯೋಗದ ಪಥವನ್ನು ಆರಂಭಿಸಿ ನಾನು ಸೋತರೇ? ಆಗ ನಾನು ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ – ಎರಡೂ ರೀತಿ ನಷ್ಟಹೊಂದಿದವನು.
ಕೃಷ್ಣ : ನೀನು ಸರಿಯಾದುದನ್ನು ಮಾಡಿದರೆ ನಷ್ಟವೆಲ್ಲಿಯದು? ಕೊನೆಯ ಪಕ್ಷ ನಿನ್ನ ಮುಂದಿನ ಜನ್ಮದಲ್ಲಿ ನೀನು ಉತ್ತಮನಾಗುವೆ. ಮತ್ತೊಂದೆಡೆ, ನೀನು ಪ್ರೀತಿಯಿಂದ ನನ್ನ ಸೇವೆ ಸಲ್ಲಿಸುವುದನ್ನು ಅರಿತರೆ ಸಾವಿನ ಸಮಯದಲ್ಲಿ ನೀನು ನನ್ನ ಬಳಿಗೆ ಬರುವೆ ಮತ್ತು ಈ ಲೋಕದಿಂದ ಮುಕ್ತನಾಗುವೆ.
ಭಾಗ 2 : ಭಕ್ತಿ
ಕೃಷ್ಣ : ಅರ್ಜುನ, ಸುಮ್ಮನೆ ಕೇಳು. ಸತ್ಯವನ್ನು ಅರಿಯುವ ಹಂಬಲ ಉಳ್ಳ ಅಪರೂಪದ ಆತ್ಮಗಳಲ್ಲಿ ನೀನೂ ಒಬ್ಬ. ಈ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು :

ಎಲ್ಲವೂ ನನ್ನಿಂದಲೇ ಬರುತ್ತದೆ. ಸೃಷ್ಟಿಕರ್ತನಾದ ನನ್ನನ್ನು ಬಿಟ್ಟು ಉಳಿದೆಲ್ಲರ ಮೇಲೆಯೂ ಪ್ರಭಾವ ಬೀರುವ ಮೂರು ವಿಧವಾದ ಲೌಕಿಕ ಗುಣಗಳನ್ನೂ ನಾನೇ ಸೃಷ್ಟಿಸಿದ್ದು.
ಲೌಕಿಕರು, ಅಹಂಕಾರಿಗಳು, ಹುಸಿ ಜ್ಞಾನಿಗಳು ಅಥವಾ ಮಂದಬುದ್ಧಿಯವರು ನನ್ನನ್ನು ನಿರ್ಲಕ್ಷಿಸುತ್ತಾರೆ. ಜನರು ಯಾವಾಗ ಕುತೂಹಲಿಗಳಾಗುತ್ತಾರೋ, ಹತಾಶರಾಗುತ್ತಾರೋ, ದುಃಖಿಗಳಾಗುತ್ತಾರೋ ಅಥವಾ ವಿವೇಕಿಗಳಾಗುತ್ತಾರೋ ಆಗ ನನ್ನತ್ತ ಮುಖ ಮಾಡುತ್ತಾರೆ. ನಾನು ಆಕಾರವಿಲ್ಲದ ಆತ್ಮ, ಬ್ರಹ್ಮನ್ನ ಮುಖವಾಣಿ ಮಾತ್ರ ಎಂದು ಯಾರು ಯೋಚಿಸುವರೋ ಅವರು ಎಂದಿಗೂ ನನ್ನನ್ನು ಅರಿತುಕೊಳ್ಳುವುದಿಲ್ಲ. ಆದರೆ ನನಗೆ ಸೇವೆ ಸಲ್ಲಿಸುವ ವಿವೇಕಿಗಳು ಸಾವಿನ ಅನಂತರ ನನ್ನ ಬಳಿಗೆ ಬರುತ್ತಾರೆ.
ಅರ್ಜುನ : ಈ ನಿರಾಕಾರ ಆತ್ಮದ ಬಗೆಗೆ ತಿಳಿಸು. ಹಾಗೆಯೇ ದೇವತೆಗಳು, ಆತ್ಮ, ಕರ್ಮ ಮತ್ತು ನನ್ನ ಹೃದಯದಲ್ಲಿ ನಿನ್ನ ವಾಸ ಇವುಗಳ ಬಗೆಗೂ ಹೇಳು. ಅಲ್ಲದೆ, ಮರಣ ಕಾಲದಲ್ಲಿ ನಿನ್ನನ್ನು ತಿಳಿಯುವುದು ಹೇಗೆ?
ಕೃಷ್ಣ : ಆಕಾರವಿಲ್ಲದ ಆತ್ಮ ಅಥವಾ ಬ್ರಹ್ಮನ್ ನನ್ನ ಆಧ್ಯಾತ್ಮಿಕ ಪ್ರಭೆ ಮತ್ತು ಕಿಡಿಯಂತಹ ಜೀವಾತ್ಮಗಳು ಅದೇ ರೀತಿಯ ಆಧ್ಯಾತ್ಮಿಕ ವಸ್ತು. ಸ್ವಾಭಾವಿಕವಾಗಿ ಜೀವಾತ್ಮಗಳು ಸೇವೆಗೈಯುತ್ತವೆ. ಆದರೆ ಅವು ಅಂತ್ಯವಿಲ್ಲದೆ ಬದಲಾಗುತ್ತಿರುವ ಈ ಭೌತಿಕ ಲೋಕಕ್ಕೆ ಸೇವೆ ಸಲ್ಲಿಸಲು ಬಯಸಿದರೆ ಅವು ಕರ್ಮವನ್ನು ಅನುಭವಿಸುತ್ತವೆ. ಈ ಲೌಕಿಕ ಲೋಕವನ್ನು ನಿರ್ವಹಿಸಲು ನಾನು ದೇವತೆಗಳನ್ನು ಸೃಷ್ಟಿಸುತ್ತೇನೆ. ಹೌದು, ನಾನು ನಿನ್ನ ಹೃದಯದಲ್ಲಿ ಪರಮಾತ್ಮನಾಗಿ ನೆಲೆಸಿರುವೆ.
ಅಂತ್ಯ ಕಾಲದಲ್ಲಿ ನನ್ನನ್ನು ನೆನಪು ಮಾಡಿಕೊಳ್ಳುವ ಬಗೆಗೆ ಹೇಳುವುದಾದರೆ, ನೀನು ಹೋರಾಟ ನಡೆಸುತ್ತಿದ್ದಂತೆಯೇ, ನನ್ನನ್ನು ಯೋಚಿಸುವುದನ್ನು ಅಭ್ಯಾಸ ಮಾಡಿಕೋ. ಇತರ ಸಮಯಗಳಲ್ಲಿ ನಾನು ಪುರಾತನ ಮತ್ತು ಹೊಸತನ, ಬೃಹತ್ ಮತ್ತು ಚಿಕ್ಕ ಎಂದು ಯೋಚಿಸು. ಆದರೆ ಯಾವಾಗಲೂ ಸೂರ್ಯನಂತೆ ಪ್ರಕಾಶಿಸುವ ಒಬ್ಬ ಪುರುಷ ಎಂದು ಭಾವಿಸು. ಯೋಗ ಸಾಧಕರು ಸೂಕ್ತ ಕಾಲದಲ್ಲಿ ತಮ್ಮ ದೇಹವನ್ನು ತ್ಯಜಿಸಲು ದೀರ್ಘ, ಯಾಂತ್ರಿಕ ಧ್ಯಾನದಲ್ಲಿ ತಮ್ಮನ್ನು ತರಬೇತುಗೊಳಿಸಿಕೊಳ್ಳುವರು. ಆಧ್ಯಾತ್ಮಿಕ ಲೋಕದಲ್ಲಿ ನನ್ನ ಬಳಿಗೆ ಬರಲು ಅದು ಸಹಾಯ ಮಾಡುತ್ತದೆ. ಹುಟ್ಟು ಮತ್ತು ಸಾವಿನ ದುಃಖದಿಂದ ಮುಕ್ತವಾದ ಏಕೈಕ ಲೋಕವದು. ಆದರೆ ನನ್ನನ್ನು ನೆನಪಿಸಿಕೊಳ್ಳುತ್ತ ನೀನು ಅಲ್ಲಿಗೆ ಹೋಗಬಹುದು. ವಾಸ್ತವವಾಗಿ, ನೀನು ಅಧ್ಯಯನ, ತಪಸ್ಸು, ದಾನ, ತ್ಯಾಗ ಅಥವಾ ಧರ್ಮದ ಯಾವುದೇ ರೀತಿಯಿಂದ ಏನು ಪಡೆಯುವೆಯೋ ಅದನ್ನು ನನಗೆ ಸೇವೆ ಮಾಡುವುದರಿಂದ ಪಡೆಯುವೆ.
ರಾಜವಿದ್ಯೆ
ನಿನಗೆ ಇನ್ನಷ್ಟು ಹೇಳುವೆ. ಈ ಜ್ಞಾನವೇ ರಾಜವಿದ್ಯೆ. ನನ್ನ ಬಗೆಗೆ ನಿನಗೆ ಅಸೂಯೆ ಇಲ್ಲದಿರುವುದರಿಂದ ಅದನ್ನು ನೀನು ಅರ್ಥಮಾಡಿಕೊಳ್ಳಬಲ್ಲೆ. ನೀನು ಶ್ರದ್ಧೆಯಿಂದ ಕೇಳಬೇಕು. ನಾನು ಬ್ರಹ್ಮಾಂಡವನ್ನು ಮತ್ತು ಅದರಲ್ಲಿರುವ ಎಲ್ಲವನ್ನೂ ಸೃಷ್ಟಿಸುತ್ತೇನೆ. ಆದರೆ ನಾನು ನನ್ನ ಸೃಷ್ಟಿಯಿಂದ ತಟಸ್ಥನಾಗಿ, ವ್ಯಕ್ತಿಯಾಗಿಯೇ ಇರುತ್ತೇನೆ. ಮೂರ್ಖರು ನನ್ನನ್ನು ಸಾಮಾನ್ಯ ವ್ಯಕ್ತಿಯೆಂದು ಭಾವಿಸುತ್ತಾರೆ. ಆದರೆ ಮಹಾತ್ಮರು ನನಗೆ ನಮಸ್ಕಾರ ಮಾಡುತ್ತ ಪ್ರೀತಿಯಿಂದ ನನ್ನ ಸೇವೆಗೈಯುತ್ತಾರೆ. ದೇವತೆಗಳು ಕೊಡಬಹುದಾದ ಐಹಿಕ ಆನಂದಕ್ಕಾಗಿ ಕೆಲವರು ಅವರಿಗೆ ಅನೇಕ ವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ ಯಾರಾದರೂ ನನಗೆ ಪ್ರೀತಿಯಿಂದ ಒಂದಿಷ್ಟು ನೀರು, ಹೂವು ಅಥವಾ ಸ್ವಲ್ಪ ಶಾಕಾಹಾರವನ್ನು ಅರ್ಪಿಸಿದರೂ ನಾನು ಸ್ವೀಕರಿಸುವೆ.

ನೀನು ಒಂದು ತಪ್ಪು ಮಾಡಿದರೂ ನಾನು ನಿನ್ನನ್ನು ಸ್ವೀಕರಿಸುವೆ. ನಾನು ಎಲ್ಲರಿಗೂ ಸಮಾನನು. ಆದರೆ ಭಕ್ತರ ಪಕ್ಷಪಾತಿ. ನನ್ನ ಭಕ್ತನಾಗು, ನೀನು ನನ್ನ ಬಳಿಗೆ ಬರುವ ಭರವಸೆ ನೀಡುವೆ.
ಸಂಕ್ಷಿಪ್ತವಾಗಿ, ನಾನು ಎಲ್ಲದರ ಸೃಷ್ಟಿಕರ್ತ ಎನ್ನುವುದನ್ನು ತಿಳಿ. ಸದಾ ನನ್ನ ಸೇವೆ ಮಾಡು ಮತ್ತು ನನ್ನನ್ನು ಕುರಿತು ಮಾತನಾಡು. ನೀನು ಸಂತೋಷ, ಸುಖದಿಂದ ಇರುವೆ. ನಿನ್ನ ಹೃದಯದಲ್ಲಿ ನೆಲೆಸಿ ನಾನು ಜ್ಞಾನದ ದೀಪವನ್ನು ಬೆಳಗುವೆ ಮತ್ತು ನಿನ್ನ ಬದುಕಿನ ಎಲ್ಲ ಅಜ್ಞಾನವನ್ನು ತೊಡೆದುಹಾಕುವೆ.
ಅರ್ಜುನ : ನಿನ್ನ ಮಾತುಗಳನ್ನು ಕೇಳಲು ನನಗೆ ತುಂಬ ಇಷ್ಟವಾಗುತ್ತದೆ. ನೀನೊಬ್ಬನೇ ನಿನ್ನನ್ನು ಅರ್ಥಮಾಡಿಕೊಂಡಿರುವಂತೆ ಕಾಣುತ್ತದೆ. ನಾನು ನಿನ್ನನ್ನು ಹೇಗೆ ಅರಿತುಕೊಳ್ಳಲಿ?
ಕೃಷ್ಣ : ಎಲ್ಲದರಲ್ಲಿಯೂ ಅತ್ಯುತ್ತಮವಾದುದನ್ನು ಕಂಡಾಗ – ಉದಾಹರಣೆಗೆ ಮೀನುಗಳಲ್ಲಿ ನಾನು ದೊಡ್ಡ ಕಡಲ ಮೀನು ಅಥವಾ ಪ್ರಾಣಿಗಳಲ್ಲಿ ಸಿಂಹ – ನನ್ನನ್ನು ನೆನಪು ಮಾಡಿಕೋ. ಆದರೂ ಈ ಲೋಕದಲ್ಲಿ ಯಾವುದಾದರೂ ಅದ್ಭುತವನ್ನು ಕಂಡಾಗ ಅದು ನನ್ನ ವೈಭವದ ಒಂದು ಕಿಡಿ ಮಾತ್ರ.
ಅರ್ಜುನ : ಕೃಷ್ಣ, ನೀನು ಅನುಗ್ರಹ ಮಾಡಿ ನನ್ನ ಭ್ರಮೆಯನ್ನು ದೂರ ಮಾಡಿದೆ. ಈಗ ನಾನು ನಿನ್ನನ್ನು ನಿನ್ನ ವಾಸ್ತವ ರೂಪದಲ್ಲಿ ನೋಡುತ್ತಿದ್ದರೂ ನನಗೆ ಸಾಧ್ಯವೆಂದು ನೀನು ಭಾವಿಸಿದರೆ, ನಿನ್ನ ಅಪರಿಮಿತ ವಿಶ್ವರೂಪವನ್ನು ನನಗೆ ತೋರಿಸು.

ಕೃಷ್ಣ : ಸರಿ, ಅರ್ಜುನ. ಈ ದಿವ್ಯ ನೋಟವನ್ನು ಕಾಣಲು ನಿನಗೆ ದಿವ್ಯ ದೃಷ್ಟಿಯನ್ನು ಕೊಡುವೆ.
ಅರ್ಜುನ (ಅಚ್ಚರಿಗೊಂಡು) : ಕೃಷ್ಣ, ದೇವತೆಗಳು ತಮ್ಮ ತಮ್ಮ ಅಸ್ತ್ರ ಮತ್ತು ಆಭರಣಗಳೊಂದಿಗೆ ಊಹಿಸಬಹುದಾದ ಎಲ್ಲ ವರ್ಣಗಳಲ್ಲಿಯೂ ಪ್ರತಿಯೊಂದು ಗ್ರಹದಲ್ಲಿಯೂ ಹರಡಿರುವುದನ್ನು ನಾನು ಕಾಣುತ್ತಿರುವೆ. ಅವುಗಳ ಪ್ರಜ್ವಲಿಸುವ ತೇಜಸ್ಸು ನನ್ನನ್ನು ಆವರಿಸಿವೆ ಮತ್ತು ಕಣ್ಣು ಮುಚ್ಚುವಂತೆ ಮಾಡುತ್ತಿವೆ. ಆದರೂ ದೇವತೆಗಳು ಭಯದಿಂದ ನಿನಗೆ ತಲೆ ಬಾಗಿದ್ದಾರೆ. ನಿಜವಾಗಿಯೂ ನೀನೇ ಎಲ್ಲವೂ. ಸೂರ್ಯ ಮತ್ತು ಚಂದ್ರರಾದ ನಿನ್ನ ಕಣ್ಣುಗಳ ಮೂಲಕ ನೀನು ಎಲ್ಲವನ್ನೂ ನೋಡುತ್ತಿರುವೆ.
(ಭಯದಿಂದ) ನಿನ್ನ ಅತ್ಯಂತ ಹರಿತವಾದ ಹಲ್ಲುಗಳಿಂದ ನೀನು ಎಲ್ಲ ಜೀವಿಗಳನ್ನೂ ಪುಡಿ ಪುಡಿ ಮಾಡುತ್ತಿರುವುದನ್ನು ನಾನು ಈಗ ನೋಡುತ್ತಿರುವೆ. ನನ್ನ ಬಂಧುಗಳು, ನನ್ನ ಶತ್ರುಗಳು ಎಲ್ಲರೂ ನಿನ್ನ ಬಾಯಿಯೊಳಗೆ ಪ್ರವೇಶಿಸುತ್ತಿದ್ದಾರೆ! ನೀನು ಏಕೆ ಹೀಗೆ ಮಾಡುತ್ತಿರುವೆ?
ಕೃಷ್ಣ : ನಾನು ಕಾಲನು, ಎಲ್ಲರ ಸಾವು. ಈ ಎಲ್ಲ ಯೋಧರು ಈಗಾಗಲೇ ಸತ್ತಂತೆ. ಆದ್ದರಿಂದ ನೀನು ನನ್ನ ಆಯುಧವಾಗಿ ಹೋರಾಡು ಮತ್ತು ಕೀರ್ತಿಯನ್ನು ಪಡೆದುಕೋ!
ಅರ್ಜುನ (ನಡುಗುತ್ತ) : ಓ ಭಗವಾನ್! ನಾನು ಎಲ್ಲ ಕಡೆಗಳಿಂದಲೂ ನಿನಗೆ ಪ್ರಣಾಮ ಮಾಡುವೆ! ಎಲ್ಲ ಜೀವಿಯೂ ಪೂಜಿಸಬೇಕಾದ ಪರಮ ಪ್ರಭು ನೀನು. ಆದರೆ ನಾನು ಮೂರ್ಖತನದಿಂದ ನಿನ್ನನ್ನು ಸ್ನೇಹಿತನೆಂದು ಕಂಡಿದ್ದೇನೆ. ತಂದೆಯು ಮಗನನ್ನು ಅಥವಾ ಹೆಂಡತಿಯು ಗಂಡನನ್ನು ಕ್ಷಮಿಸುವಂತೆ ದಯೆಯಿಟ್ಟು ನನ್ನನ್ನು ಕ್ಷಮಿಸು. ದಯೆಮಾಡಿ ಪುನಃ ನಿನ್ನನ್ನು ಕೃಷ್ಣನನ್ನಾಗಿ ತೋರಿಸು.

ಕೃಷ್ಣ : ನನ್ನ ವಿಶ್ವರೂಪವನ್ನು ಕಂಡು ನೀನು ದಿಗ್ಭ್ರಾಂತನಾಗಿರುವೆ. ಶಾಂತನಾಗು. ನಿನಗೆ ಅತ್ಯಂತ ಪ್ರೀತಿಯಾದ ರೂಪದಲ್ಲಿ ನನ್ನನ್ನು ಈಗ ನೋಡು. ಈಗ ನೀನು ಕಾಣುತ್ತಿರುವ ನನ್ನ ರೂಪವನ್ನು ಕಾಣುವುದು ಬಹಳ ಕಷ್ಟ. ಎಲ್ಲ ರೀತಿಯ ಒಳ್ಳೆಯ ಕರ್ಮಗಳನ್ನು ಮಾಡಿದರೂ ನೋಡುವುದು ಕಷ್ಟ. ಪ್ರೀತಿಯ ಭಕ್ತಿಯಿಂದ ಮಾತ್ರ ನಿಜವಾಗಿಯೂ ನೋಡುವುದು ಸಾಧ್ಯ.
ಅರ್ಜುನ : ಪ್ರಭುವೇ, ನಾನು ನಿನ್ನನ್ನು ಕೃಷ್ಣನೆಂದು ಧ್ಯಾನಿಸಲೇ ಅಥವಾ ಅನಂತ, ಆಕಾರವಿಲ್ಲದ ಆತ್ಮ ಎಂದು ಧ್ಯಾನಿಸಲೇ?
ಕೃಷ್ಣ : ಅಂತ್ಯವಿಲ್ಲದ ಆತ್ಮವೆಂದು ಕೆಲವರು ನನ್ನನ್ನು ಕುರಿತು ಧ್ಯಾನಿಸುವರು. ಅಂತಹ ಧ್ಯಾನವು ತ್ರಾಸದಾಯಕ, ಆದರೆ ಅಂತಿಮವಾಗಿ ಅವರೂ ನನ್ನನ್ನು ಪಡೆಯಬಹುದು. ಆದರೆ ನೀನು ನೇರವಾಗಿ ನನ್ನನ್ನು ಕುರಿತು ಯೋಚಿಸಿದರೆ, ನಾನು ಹುಟ್ಟು ಮತ್ತು ಸಾವಿನ ಸಾಗರದಿಂದ ನಿನ್ನನ್ನು ತ್ವರಿತವಾಗಿ ರಕ್ಷಿಸುವೆ.
ನನ್ನನ್ನು ಕುರಿತು ಸದಾ ಚಿಂತಿಸಲು ಸಾಧ್ಯವಾಗದಿದ್ದರೆ, ಭಕ್ತಿಯ ಅಭ್ಯಾಸ ಅಥವಾ ಭಕ್ತಿ ಯೋಗದಲ್ಲಿ ನನ್ನನ್ನು ಕುರಿತು ಕೇಳು ಮತ್ತು ಜಪಿಸು. ಅದನ್ನೂ ಮಾಡಲಾಗದಿದ್ದರೆ, ನನಗಾಗಿ ಕೆಲಸ ಮಾಡು, ಕೊನೆಪಕ್ಷ ಕರ್ಮಫಲ ತ್ಯಾಗವನ್ನಾದರೂ ಮಾಡು. ಏಕೆಂದರೆ ತ್ಯಾಗದಿಂದ ಶಾಂತಿಯನ್ನು ಪಡೆಯಬಹುದು.
ಭಕ್ತಿಯಿಂದ ನನ್ನನ್ನು ಕುರಿತು ಯೋಚಿಸುವವರು ದಯೆ, ತಾಳ್ಮೆ, ಸ್ಥಿರತೆ ಮತ್ತು ದೃಢತೆಯಂತಹ ಅದ್ಭುತ ಗುಣಗಳನ್ನು ತೋರುವರು. ಅವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನಾನೂ ಅವರನ್ನು ಪ್ರೀತಿಸುತ್ತೇನೆ.
ಭಾಗ 3 : ಆಧ್ಯಾತ್ಮಿಕ ಜ್ಞಾನ
ಅರ್ಜುನ : ದೇಹ ಮತ್ತು ಆತ್ಮದ ಸಂಬಂಧವೇನು?
ಕೃಷ್ಣ : ದೇಹವು ಆತ್ಮಕ್ಕೆ ಕ್ರಿಯಾ ಕ್ಷೇತ್ರದಂತೆ. ಇಂದ್ರಿಯಗಳು ಹಾಗೂ ಕಾಮ ಮತ್ತು ದ್ವೇಷದಂತಹ ಭಾವೋದ್ರೇಕಗಳನ್ನು ಅನುಭವಿಸುತ್ತ ಸಾಮಾನ್ಯವಾದ ಆತ್ಮವು ದೇಹದೊಂದಿಗೆ ಪ್ರತಿಕ್ರಿಯಿಸುತ್ತದೆ. ಆದರೆ ಗುರುವಿನ ನೆರವಿನಿಂದ ಒಂದು ವಿವೇಕಿಯಾದ ಆತ್ಮವು ಭೌತಿಕ ದೇಹದಿಂದ ಕಳಚಿಕೊಳ್ಳುತ್ತದೆ. ಅಂತಹ ವ್ಯಕ್ತಿಯು ನಮ್ರ, ಸಮಚಿತ್ತ ಮತ್ತು ನಿಜವಾಗಿಯೂ ಸ್ವತಂತ್ರ.

ಪರಮಾತ್ಮನಾಗಿ ನಾನು ಎಲ್ಲ ಆತ್ಮಗಳಿಗೂ ಮಾರ್ಗದರ್ಶನ ನೀಡುತ್ತೇನೆ. ಅವರು ವಿವೇಕಿಯಾಗಿರಬಹುದು ಅಥವಾ ಅವಿವೇಕಿಯಾಗಿರಬಹುದು. ಎಲ್ಲ ಆತ್ಮವೂ ನನ್ನ ಮತ್ತು ಲೌಕಿಕದ ಮಧ್ಯೆ ಯಾವುದನ್ನಾದರು ಆರಿಸಿಕೊಳ್ಳಬಹುದು. ಐಹಿಕವನ್ನು ಆಯ್ಕೆಮಾಡಿಕೊಂಡವರು ವಿವಿಧ ವರ್ಗಗಳಲ್ಲಿ ಪುನರಪಿ ಜನನ ಮತ್ತು ಮರಣವನ್ನು ಅನುಭವಿಸುತ್ತಾರೆ. ನನ್ನನ್ನು ಆಯ್ಕೆ ಮಾಡಿಕೊಂಡವರು ಇಡೀ ಪರಿಸ್ಥಿತಿಯನ್ನು ನೋಡುತ್ತಾರೆ – ಕರುಣೆಯ ಪರಮಾತ್ಮ ಮತ್ತು ಮಂದಬುದ್ಧಿಯ ವಸ್ತುವಿನಲ್ಲಿ ಬಂಧಿತವಾಗಿರುವ ಆಧ್ಯಾತ್ಮಿಕ ಆತ್ಮದ ಸ್ಥಿತಿ.
ವಸ್ತುವಿನ ಬಗೆಗೆ ಇನ್ನಷ್ಟು ಹೇಳುವೆ. ಅದು ಮೂರು ವಿಧಗಳಲ್ಲಿ ಅಥವಾ ಗುಣಗಳಲ್ಲಿ ಬರುತ್ತದೆ : ಸತ್ತ್ವ, ರಜಸ್ಸು ಮತ್ತು ತಮಸ್ಸು. ಬೀಜ ನೀಡುವ ತಂದೆಯಂತೆ ನಾನು ಆತ್ಮವನ್ನು ಸ್ಥಾಪಿಸಿ ಜಡ ವಸ್ತುವನ್ನು ಜೀವಂತವಾಗಿಸುತ್ತೇನೆ. ಆಗ ತ್ರಿಗುಣಗಳು ತಮ್ಮನ್ನು ಸ್ಥಾಪಿಸಿಕೊಳ್ಳುತ್ತವೆ. ಸತ್ವ ಗುಣವು ಆತ್ಮಕ್ಕೆ ಸುಖವನ್ನು, ರಜಸ್ಸು ಮಹತ್ವಾಕಾಂಕ್ಷೆ ಮತ್ತು ತಮಸ್ಸು ವಂಚನೆಯನ್ನು ಪ್ರಚೋದಿಸುತ್ತದೆ. ತ್ರಿಗುಣಗಳು ಪಾರಮ್ಯ ಸ್ಥಾಪಿಸಲು ಪರಸ್ಪರ ಸ್ಪರ್ಧೆ ನಡೆಸುತ್ತವೆ. ಶಾಶ್ವತ ಆತ್ಮವಾದ ನಿಮ್ಮನ್ನು ಒಂದು ಲೌಕಿಕ ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ತಳ್ಳುತ್ತವೆ. ಅವುಗಳ ಹತೋಟಿಯಿಂದ ಮುಕ್ತರಾದಾಗ ಮಾತ್ರ ನೀವು ನಿಜವಾದ ಸುಖವನ್ನು ಅನುಭವಿಸುವುದು ಸಾಧ್ಯ.
ಅರ್ಜುನ : ತ್ರಿಗುಣಗಳಿಂದ ಮೇಲಕ್ಕೆ ಬರುವುದು ಹೇಗೆ ಸಾಧ್ಯ? ಅವುಗಳನ್ನು ಮೀರಿದ ವ್ಯಕ್ತಿಯ ಲಕ್ಷಣಗಳೇನು?
ಕೃಷ್ಣ : ತ್ರಿಗುಣಗಳನ್ನು ಜಯಿಸಿ ಕರ್ಮದಿಂದ ಮುಕ್ತರಾಗಬೇಕಾದರೆ ಪ್ರತಿಯೊಂದು ಸಂದರ್ಭದಲ್ಲಿಯೂ ನನ್ನನ್ನು ಪ್ರೀತಿಸು ಮತ್ತು ನನಗೆ ಸೇವೆ ಸಲ್ಲಿಸು. ಆಗ ಗುಣಗಳು ಬಂದು ಹೋದರೆ ನೀವು ಅವುಗಳನ್ನು ಪ್ರೀತಿಸದೆ ಅಥವಾ ದ್ವೇಷಿಸದೆ ಅವುಗಳನ್ನು ಗಮನಿಸುತ್ತೀರಿ. ಆ ಹಂತದಲ್ಲಿ ನೀವು ಪ್ರಶಾಂತರಾಗಿರುವಿರಿ ಮತ್ತು ಎಲ್ಲರನ್ನೂ ಸಮನಾಗಿ ಕಾಣುವಿರಿ.

ಪ್ರತಿಯೊಬ್ಬರೂ ನನ್ನ ಧಾಮಕ್ಕೆ ಬರಬೇಕೆನ್ನುವುದು ನನ್ನ ಅಪೇಕ್ಷೆ. ಆದುದರಿಂದ ಎಲ್ಲರ ಹೃದಯದಲ್ಲಿಯೂ ಪರಮಾತ್ಮನಾಗಿ ನೆಲೆಸಿ ಮಾರ್ಗದರ್ಶನ ನೀಡುತ್ತೇನೆ. ಜನರು ನನ್ನನ್ನು ಅರ್ಥಮಾಡಿಕೊಳ್ಳಲೆಂದು ವೈದಿಕ ಸಾಹಿತ್ಯವನ್ನೂ ಬರೆಯುತ್ತೇನೆ. ನಾನು, ಲೌಕಿಕವಾದಿ ಮತ್ತು ಜ್ಞಾನಿಯಾದ ಆತ್ಮಗಳನ್ನು ಮೀರಿ ಅಸ್ತಿತ್ವದಲ್ಲಿರುವೆ. ನಿಮಗೆ ನಾನು ತಿಳಿದರೆ, ನೀವು ವಿವೇಕಿಗಳು ಮತ್ತು ನೀವು ಮಾಡುವುದೆಲ್ಲ ಪರಿಪೂರ್ಣವಾಗುತ್ತದೆ.
ಜ್ಞಾನಿಯಾದ ಆತ್ಮಗಳ ಬಗೆಗೆ ನಾನು ನಿನಗೆ ತಿಳಿಸಿದೆ. ಅವರು ಪ್ರಾಮಾಣಿಕ, ಶುದ್ಧ, ಸಂಯಮಿ ಮತ್ತು ತ್ಯಾಗಿ. ನೀನು ಅಂತಹ ವ್ಯಕ್ತಿ. ಆದರೆ ನೀನು ಲೌಕಿಕ, ನಾಸ್ತಿಕ ಅಸುರರ ಬಗೆಗೆ ತಿಳಿದುಕೊಳ್ಳಬೇಕೆಂದು ಬಯಸುತ್ತೇನೆ.
ಆಸುರೀ ಪ್ರಕೃತಿಯವರಿಗೆ ಏನು ಮಾಡಬೇಕು, ಮಾಡಬಾರದು ಎನ್ನುವುದು ಗೊತ್ತಿಲ್ಲ. ಅವರಿಗೆ ಶುಚಿತ್ವವಿಲ್ಲ, ಅವರು ಅಪ್ರಾಮಾಣಿಕರು ಮತ್ತು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚಾಗಿ ನಿರತರಾಗಿರುವವರು. ನನ್ನ ಸೃಷ್ಟಿಯನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಭಾವಿಸುತ್ತ ಅವರು ದುಬಾರಿ, ವಿನಾಶಕಾರಿ ಅಸ್ತ್ರಗಳನ್ನು ನಿರ್ಮಿಸುತ್ತಾರೆ ಮತ್ತು ತಾವು ಪ್ರಬಲ ಹಾಗೂ ದೊಡ್ಡವರೆಂದು ಭಾವಿಸುತ್ತಾರೆ. ಕಾಮಕ್ಕೆ ಗುಲಾಮರಾಗಿರುವುದರಿಂದ ಅವರು ಆಗಾಗ್ಗೆ ಧರ್ಮ ಅಥವಾ ದಾನಗಳ ಬಗೆಗೆ ಮಾಡುವ ನಟನೆಯು ಅರ್ಥಹೀನ. ದುರಾಸೆ ಮತ್ತು ಕ್ರೋಧದಿಂದ ಲೌಕಿಕದ ಬಂದಿಯಾಗಿರುವ ಅವರು ಜನ್ಮದಿಂದ ಜನ್ಮಕ್ಕೆ ಬದುಕಿನ ಕೆಳ ವರ್ಗಕ್ಕೆ ಪತನಗೊಳ್ಳುತ್ತಾ ಹೋಗುತ್ತಾರೆ.
ಅಂತಹ ಸ್ಥಿತಿಯಿಂದ ಅವರನ್ನು ಕಾಪಾಡಬಲ್ಲ ವೈದಿಕ ಸಾಹಿತ್ಯದ ಬಗೆಗೆ ಅಸುರರಿಗೆ ಆಸಕ್ತಿಯೇ ಇಲ್ಲ.
ಅರ್ಜುನ : ವೇದಗಳನ್ನು ಅನುಸರಿಸದೆ ಆರಾಧನೆಗೆ ತಮ್ಮದೇ ಮಾರ್ಗವನ್ನು ಕಂಡುಕೊಳ್ಳುವವರ ಗತಿ ಎನು?
ಕೃಷ್ಣ : ಕಾಲ್ಪನಿಕ ಧರ್ಮವು ಮೂರು ಗುಣಗಳ ಉತ್ಪತ್ತಿ. ಸಾತ್ತ್ವಿಕ ಸ್ವಭಾವದ ಮನುಷ್ಯರು ದೇವತೆಗಳನ್ನು ಪೂಜಿಸುತ್ತಾರೆ, ರಾಜಸ ಸ್ವಭಾವದವರು ರಾಕ್ಷಸರನ್ನು ಪೂಜಿಸುತ್ತಾರೆ ಮತ್ತು ತಾಮಸ ಗುಣದವರು ಭೂತ-ಪ್ರೇತಗಳನ್ನು ಪೂಜಿಸುತ್ತಾರೆ.
ತ್ರಿಗುಣಗಳು ಎಲ್ಲದರ ಮೇಲೆಯೂ ಪ್ರಭಾವ ಬೀರುತ್ತವೆ. ನಿಮ್ಮ ಆಹಾರದ ಮೇಲೆ ಕೂಡ. ಸಾತ್ತ್ವಿಕ ಗುಣದ ಆಹಾರವು ರಸಯುಕ್ತವಾದ, ಕೊಬ್ಬಿನ ಅಂಶದ ಆಹಾರವಿರುತ್ತದೆ. ರಾಜಸ ಸ್ವಭಾವದವರಿಗೆ ಕಹಿಯಾದ, ಹುಳಿಯಾದ, ಉಪ್ಪಾದ, ತೀಕ್ಷ್ಣವಾದ ಆಹಾರ, ಮತ್ತು ತಾಮಸ ಗುಣದವರಿಗೆ ಹಳಸಿದ, ಮತ್ತು ಅಸ್ಪೃಶ್ಯವಾದ ಆಹಾರ. ತ್ರಿಗುಣಗಳು ನೀವು ಮಾಡುವ ದಾನ ಮತ್ತು ನೀವು ವಿಧಿಸಿಕೊಳ್ಳುವ ಶಿಸ್ತಿನ ಮೇಲೆ ಕೂಡ ಪ್ರಭಾವ ಬೀರುತ್ತವೆ. ಆದರೂ ನೀವು ದಾನ ಅಥವಾ ತಪಸ್ಸನ್ನು ಬಿಡಬಾರದು.
ಅರ್ಜುನ : ಹಾಗಾದರೆ ಸಂನ್ಯಾಸ ಮತ್ತು ತ್ಯಾಗದ ಉದ್ದೇಶಗಳೇನು?
ಕೃಷ್ಣ : ಎಲ್ಲ ಕರ್ಮಗಳ ಫಲವನ್ನು ಬಿಟ್ಟುಬಿಡುವುದೇ ತ್ಯಾಗ. ಸಾತ್ತ್ವಿಕ ಗುಣದಲ್ಲಿ ನೆಲೆಗೊಂಡವನು ಕರ್ತವ್ಯಶೀಲನಾಗಿ ಕೆಲಸ ಮಾಡುತ್ತಾನೆ, ಆದರೆ ಫಲವನ್ನು ತ್ಯಾಗ ಮಾಡುತ್ತಾನೆ. ರಾಜಸ ಗುಣದವರು ಕೆಲಸವು ತೊಂದರೆ ಕೊಟ್ಟಾಗ ತ್ಯಾಗ ಮಾಡುತ್ತಾರೆ. ತಾಮಸ ಗುಣದವರು ಸೋಮಾರಿತನ ಅಥವಾ ಗೊಂದಲದಿಂದ ಕೆಲಸ ಮಾಡುವುದನ್ನೇ ಬಿಡುತ್ತಾರೆ.

ಇತರರನ್ನು ಆತ್ಮಗಳೆಂದು ನೋಡುತ್ತಾ ಮತ್ತು ಆ ಗ್ರಹಿಕೆಯಲ್ಲಿಯೇ ಕ್ರಿಯಾಶೀಲರಾಗುತ್ತಾ ನೀವು ಸಾತ್ತ್ವಿಕ ಗುಣದಲ್ಲಿ ನೆಲೆಸುವಿರಿ. ಅದಕ್ಕೆ ದೃಢ ಸಂಕಲ್ಪ ಬೇಕು. ಆರಂಭದ ತೊಂದರೆಗಳು ಅನಂತರ ನಿಮಗೆ ಸುಖವನ್ನು ತರುತ್ತವೆ. ರಾಜಸ ಗುಣದಲ್ಲಿ ಸುಖವು ಆರಂಭದಲ್ಲಿ ಅದ್ಭುತ. ಆದರೆ ನೋವಿನಲ್ಲಿ ಅಂತ್ಯಗೊಳ್ಳುತ್ತದೆ. ಮದ್ಯವನ್ನು ಸೇವಿಸುವಂತಹ ತಾಮಸ ಗುಣದ ಸುಖವು ಆರಂಭದಿಂದ ಅಂತ್ಯದವರೆಗೂ ಕಹಿ.
ನಿನಗೆ ಸರಿ ಹೊಂದುವ ಕೆಲಸ ಏನೇ ಇರಲಿ, ದೇವೋತ್ತಮನಿಗೆ ಸಲ್ಲಿಸುವ ಕರ್ಮವನ್ನು ಯೋಗವಾಗಿ ಪರಿವರ್ತಿಸು ಮತ್ತು ಜ್ಞಾನವನ್ನು ಹೊಂದು. ಆದುದರಿಂದ ಬೇರೆಯವರ ಕೆಲಸವನ್ನು ಪರಿಪೂರ್ಣ ಮಾಡುವುದಕ್ಕಿಂತ ನಿನ್ನ ಕೆಲಸವನ್ನು ಅಪರಿಪೂರ್ಣ ಮಾಡುವುದು ಉತ್ತಮ.
ಸಾರಾಂಶ
ನನ್ನ ಪ್ರೀತಿಯ ಅರ್ಜುನ, ನಾನು ನಿನಗೆ ಬೋಧಿಸುತ್ತಿರುವುದರ ಅಂತಿಮ ಸಂಕ್ಷಿಪ್ತ ರೂಪ ಇಲ್ಲಿದೆ.
ನನಗೆ ಸೇವೆ ಸಲ್ಲಿಸುವುದರಿಂದ ನೀನು ಕರ್ಮವನ್ನು ಅರಿಯುವೆ ಮತ್ತು ನಿನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಹಾಗೂ ಕರ್ಮಫಲ ತ್ಯಾಗದಿಂದ ಜ್ಞಾನದ ಜೀವನ ನಡೆಸುವೆ. ನೀನು ಅಪಾರ ಸುಖ ಪಡೆದಾಗ ಅತಿ ಶೀಘ್ರದಲ್ಲಿ ನೀನು ಶಾಂತಿ ಮತ್ತು ಅಂತರ್ ದೃಷ್ಟಿಯನ್ನು ಪಡೆಯುವೆ. ಅಂತಹ ಮನಸ್ಥಿತಿಯಲ್ಲಿ ನೀನು ನನ್ನ ಧಾಮವನ್ನು ಪಡೆಯುವೆ.

ನನ್ನನ್ನು ಕುರಿತು ಯೋಚಿಸು ಮತ್ತು ನನ್ನ ಭಕ್ತರೊಂದಿಗೆ ನೆಲೆಸು. ನಿನ್ನ ಮಾರ್ಗದಲ್ಲಿನ ಎಲ್ಲ ಅಡ್ಡಿಗಳನ್ನೂ ನಿವಾರಿಸುತ್ತೇನೆ. ನೀನು ಅಹಂಕಾರಿಯಾಗಿ ನಿನ್ನದನ್ನೇ ಮಾಡಿಕೊಳ್ಳುವ ಬಗೆಗೆ ಯೋಚಿಸಿದರೆ ನೀನು ಕಳೆದುಹೋದಂತೆ.
ಪರಿಪೂರ್ಣತೆಯ ರಹಸ್ಯಗಳನ್ನು ನಿನಗೆ ಹೇಳಿರುವೆ. ನಾನು ಹೇಳಿದ್ದನ್ನು ಯೋಚಿಸು, ವಿಮರ್ಶಿಸು ಮತ್ತು ಅನಂತರ ನಿನ್ನ ಇಷ್ಟದಂತೆ ಮಾಡು.
ನೀನು ನನಗೆ ಅತ್ಯಂತ ಪ್ರಿಯನಾದುದರಿಂದ ಈ ರೀತಿ ನಾನು ಮುಕ್ತಾಯ ಮಾಡುವೆ :
ಯಾವಾಗಲೂ ನನ್ನನ್ನು ಕುರಿತು ಯೋಚಿಸು. ನನ್ನ ಭಕ್ತನಾಗು. ನನ್ನನ್ನು ಪೂಜಿಸು ಮತ್ತು ಗೌರವಿಸು. ನೀನು ನನ್ನಲ್ಲಿಗೆ ಬರುವೆ. ಅರ್ಜುನ, ಇತರ ಎಲ್ಲ ಧರ್ಮಗಳನ್ನೂ ತ್ಯಜಿಸು, ನನಗೆ ಶರಣಾಗು. ಚಿಂತಿಸಬೇಡ. ಹಿಂದಿನ ಯಾವುದೇ ಪಾಪಗಳಿಂದ ನಿನ್ನನ್ನು ಮುಕ್ತಗೊಳಿಸುವೆ.
ನನ್ನ ಈ ಮಾತುಗಳನ್ನು ಪುನರುಚ್ಚರಿಸು. ಆದರೆ ಪುಣ್ಯ ಜೀವಿಗಳಿಗೆ ಮಾತ್ರ. ಅದರಿಂದಲೂ ಕೂಡ ನೀನು ನನ್ನಲ್ಲಿಗೆ ಹಿಂದಿರುಗುವ ಭರವಸೆಯನ್ನು ಕೊಡುವೆ. ಏಕೆಂದರೆ, ಈ ಸಂದೇಶವನ್ನು ಹಂಚಿಕೊಳ್ಳುವವರಿಗಿಂತ ಇನ್ಯಾರೂ ನನಗೆ ಪ್ರಿಯರಲ್ಲ. ಯಾವುದೇ ಅಸೂಯೆ ಇಲ್ಲದೆ ಯಾರು ಇದನ್ನು ಶ್ರದ್ಧೆಯಿಂದ ಕೇಳಿರುವರೋ ಅವರು ಪುಣ್ಯಜೀವಿಗಳ ಲೋಕವನ್ನು ಪಡೆಯುವರು.
ಅರ್ಜುನ, ನಿನಗೆ ಅರ್ಥವಾಯಿತೇ?
ಅರ್ಜುನ (ದೃಢವಾಗಿ) ನೀನು ನನ್ನ ಭ್ರಮೆ ಮತ್ತು ಸಂದೇಹಗಳನ್ನು ನಿವಾರಿಸಿರುವೆ. ನಿನ್ನ ದಯೆಯಿಂದ ನನಗೆ ನಾನು ಯಾರೆಂದು ಅರಿವಾಯಿತು. ಈಗ, ನಿನ್ನ ಆದೇಶದಂತೆ ನಾನು ಯುದ್ಧ ಮಾಡುವೆ.







Leave a Reply