ಕೋಸು ವಿಶೇಷ

ವರ್ಷವಿಡೀ ಬೆಳೆಯುವ ಕೋಸು ಪೌಷ್ಟಿಕಾಂಶಗಳಿಂದ ತುಂಬಿದ್ದು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸೌಂದರ್ಯವರ್ಧನೆಗೂ ಸಾಧಕ. ಕೋಸಿನಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ. ಕೊಬ್ಬಿನಾಂಶವಂತೂ ಇಲ್ಲ. ಹೀಗಾಗಿ ತೂಕ ನಿರ್ವಹಣೆಗೆ ಇನ್ನೇನು ಬೇಕು? ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಮತ್ತು ವಿಟಮಿನ್ “ಸಿ” ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ರೋಗಗಳ ವಿರುದ್ಧ ಹೋರಾಡಲು ಅಗತ್ಯವಾಗಿದೆ.
ಕೋಸಿನ ಜ್ಯೂಸ್ ಚರ್ಮಕ್ಕೆ ಅಧಿಕ ಲಾಭದಾಯಕ. ಇದರಲ್ಲಿ ಮುಪ್ಪನ್ನು ದೂರವಾಗಿಸುವ ಗುಣಗಳು ಹೇರಳವಾಗಿದೆ. ಕೋಸಿನ ಜ್ಯೂಸ್ ಕುಡಿಯುವುದರಿಂದ ಮತ್ತು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಜೊತೆಗೆ ಮೃದುವಾದ, ಹೊಳೆಯುವ ಮತ್ತು ಸೊಂಪಾದ ಕೂದಲು ನಿಮ್ಮದಾಗುವುದು. ಇದರಲ್ಲಿ ನಾರಿನಂಶವು ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ದೂರವಿರಿಸುತ್ತದೆ.
ಎಲೆಕೋಸಿನ ಬಾತ್

ಬೇಕಾಗುವ ಸಾಮಗ್ರಿಗಳು:
ಅನ್ನ – 3 ಕಪ್
ಕತ್ತರಿಸಿದ ಎಲೆಕೋಸು – 2 ಕಪ್
ಧನಿಯಾ ಪುಡಿ – 1 ಚಮಚ
ಸಾಸಿವೆ – ½ ಚಮಚ
ಜೀರಿಗೆ – 1 ಚಮಚ
ಕಡಲೆಕಾಯಿ ಬೀಜ – ½ ಕಪ್
ಕತ್ತರಿಸಿದ ಹಸಿ ಮೆಣಸಿನಕಾಯಿ – 4
ಕೆಂಪು ಮೆಣಸಿನಕಾಯಿ ಪುಡಿ – ½ ಚಮಚ
ಕರಿಬೇವು – ಸ್ವಲ್ಪ
ಇಂಗು – 1 ಚಿಟಕೆ
ಅರಿಶಿನ – ¼ ಚಮಚ
ನಿಂಬೆರಸ – 1 ಚಮಚ
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿ. ಇದಕ್ಕೆ ಕಡಲೆಕಾಯಿ ಬೀಜ ಹಾಕಿ. ಅದು ಕಂದು ಬಣ್ಣಕ್ಕೆ ಬರುವವರೆಗೆ ಕರಿಯಿರಿ. ಆನಂತರ ಕಡಲೆಕಾಯಿ ಬೀಜವನ್ನು ತೆಗೆದು ಬೇರೆ ಪಾತ್ರೆಯಲ್ಲಿ ಹಾಕಿಡಿ. ಆನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಹಾಕಿ ಬಾಡಿಸಿ.
ಬೆಂದ ಮೇಲೆ ಹೆಚ್ಚಿದ ಎಲೆಕೋಸು, ಅರಿಶಿನ, ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಧನಿಯಾ ಪುಡಿ, ಕೆಂಪು ಮೆಣಸಿಕಾಯಿ ಪುಡಿ ಹಾಕಿ 5 ನಿಮಿಷ ಬೇಯಿಸಿ. ಬೆಂದ ಮೇಲೆ ಅನ್ನ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ಎಲೆಕೋಸಿನ ಬಾತ್ ಸವಿಯಲು ಸಿದ್ಧ.
ಮುತ್ತಕೋಸ್ ಪೊರಿಯಲ್

ಬೇಕಾಗುವ ಸಾಮಗ್ರಿಗಳು:
ಎಲೆಕೋಸು ಕತ್ತರಿಸಿದ್ದು – ½ ಕೆಜಿ
ತೆಂಗಿನಕಾಯಿ ತುರಿ – 1 ಕಪ್
ಹಸಿ ಮೆಣಸಿನಕಾಯಿ – 3
ಸಾಸಿವೆ – ½ ಚಮಚ
ಜೀರಿಗೆ – ½ ಚಮಚ
ಉದ್ದಿನಬೇಳೆ – 1 ಚಮಚ
ಕಡಲೆ ಬೇಳೆ – 2 ಚಮಚ
ಒಣಮೆಣಸಿನಕಾಯಿ – 2
ಇಂಗು – 1 ಚಮಚ
ಎಣ್ಣೆ – 2 ಚಮಚ
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ
ಮಾಡುವ ವಿಧಾನ:
ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಬೇಳೆಗಳು, ಕರಿಬೇವು, ಹಸಿಮೆಣಸಿನಕಾಯಿ, ಇಂಗು ಹಾಕಿ ಬಾಡಿಸಿ. ಆನಂತರ ಕೋಸು, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಪೂರ್ತಿ ಮಿಶ್ರಣವಾಗುವವರೆಗೂ ಕಲಸುತ್ತಿರಿ. ಕೊನೆದಾಗಿ ತೆಂಗಿನ ತುರಿ ಹಾಕಿ ತಿನ್ನಲು ಕೊಡಿ.
ಎಲೆಕೋಸಿನ ಮಸಾಲ

ಬೇಕಾಗುವ ಸಾಮಗ್ರಿಗಳು:
ಸಣ್ಣಗೆ ಕತ್ತರಿಸಿದ ಎಲೆಕೋಸು – ½
ಟೊಮೊಟೊ – 1
ಧನಿಯಾಪುಡಿ – 1 ಚಮಚ
ಅರಿಶಿನ – ¼ ಚಮಚ
ಹಸಿ ಮೆಣಸಿನಕಾಯಿ – 3
ಎಣ್ಣೆ – 2 ಚಮಚ
ಸಾಸಿವೆ – ½ ಚಮಚ
ಜೀರಿಗೆ – ½ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿ. ಆನಂತರ ಅರಿಶಿನ, ಕೆಂಪು ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಟೊಮೊಟೊ ಹಾಕಿ ಮುಚ್ಚಿ. ಟೊಮೊಟೊ ಮೃದುವಾಗುವವರೆಗೂ ಬೇಯಿಸಿ. ಆಮೇಲೆ ಹೆಚ್ಚಿದ ಎಲೆಕೋಸು ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ. ಚಪಾತಿ ಅಥವಾ ಅನ್ನದ ಜೊತೆ ತಿನ್ನಲು ಕೊಡಿ.
ಈ ಉಪಾಯ ನಿಮಗೆ ತಿಳಿದಿರಲಿ
- ಕೋಸು ಕೊಳ್ಳುವಾಗ ಒತ್ತಾಗಿ ಎಲೆಗಳಿರುವ ಕೋಸನ್ನು ಕೊಳ್ಳಬೇಕು. ಮೊದಲೇ ಕತ್ತರಿಸಿಟ್ಟ ಕೋಸು ತನ್ನ ಪೌಷ್ಟಿಕಾಂಶ ಮೌಲ್ಯವನ್ನು ಕಳೆದುಕೊಂಡಿರುತ್ತದೆ.
- ಕೋಸನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಎರಡು ವಾರಗಳವರೆಗೆ ಇಡಬಹುದು.
3. ಕೋಸನ್ನು ತುಂಬ ಹೊತ್ತು ಬೇಯಿಸಬಾರದು. ಹೆಚ್ಚಾಗಿ ಬೆಂದರೆ ಅದು ತೀಕ್ಷ್ಣವಾದ ವಾಸನೆಯನ್ನು ಹೊರ ಸೂಸುತ್ತದೆ.






Leave a Reply