ಕೃಷ್ಣ ಪಾಕಶಾಲೆ

ಮೊಳಕೆ ಕಟ್ಟಿದ ಕಾಳುಗಳ ವಿಶೇಷ ತಿನಿಸುಗಳು

ಯಾವುದೇ ಕಾಳುಗಳು ಚೆನ್ನಾಗಿ ಮೊಳಕೆ ಕಟ್ಟಬೇಕಾದರೆ ಅವನ್ನು ಎರಡು ದಿನ ಹಿಂದೆಯೇ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಮಾರನೆಯ ದಿನ ರಾತ್ರಿ ನೀರಿನಿಂದ ಸೋಸಿ ತೆಗೆದು ಶುಚಿಯಾದ ಹತ್ತಿಬಟ್ಟೆಯಲ್ಲಿ ಹಾಕಿ ಯಾವುದಾದರೂ ಒಂದು ಪಾತ್ರೆಯಲ್ಲಿ ಗಟ್ಟಿಯಾಗಿ ಮುಚ್ಚಿಡಿ. ಚೆನ್ನಾಗಿ ಮೊಳಕೆ ಕಟ್ಟುತ್ತದೆ. ಮೊಳಕೆ ಪದಾರ್ಥಗಳನ್ನು ಮಾಡುವ ದಿನ, ಒಂದು ಗಂಟೆ ಮೊದಲೇ ಪಾತ್ರೆಯ ಮುಚ್ಚಳವನ್ನು ತೆಗೆದಿಡಿ. ಇದರಿಂದ ಇನ್ನೂ ಚೆನ್ನಾಗಿ ಮೊಳಕೆ ಬರುತ್ತದೆ.

ಮೊಳಕೆ ಕಾಳುಗಳ ಚಾಟ್

ಬೇಕಾಗುವ ಪದಾರ್ಥಗಳು :

ಮೊಳಕೆಯೊಡೆದ ಹೆಸರುಕಾಳು – 100 ಗ್ರಾಂ

ಮೊಳಕೆಯೊಡೆದ ಶೇಂಗಾಬೀಜ – 100 ಗ್ರಾಂ

ಮೊಳಕೆಯೊಡೆದ ಕಡ್ಲೆಕಾಳು – 100 ಗ್ರಾಂ

ಕ್ಯಾರೆಟ್ ತುರಿ – 100 ಗ್ರಾಂ

ಸೌತೆಕಾಯಿ (ಹದಗಾತ್ರದ್ದು) -1

ಮಾವಿನಕಾಯಿ ತುರಿ – 25 ಗ್ರಾಂ

ಟೊಮ್ಯಾಟೋ – 100 ಗ್ರಾಂ

ಚಾಟ್ ಮಸಾಲೆ ಪುಡಿ – 1 ಚಮಚ

ಸಕ್ಕರೆ – 1/2 ಚಮಚ

ಹಸಿಮೆಣಸಿನಕಾಯಿ – 5-6

ಕೊತ್ತಂಬರಿ ಸೊಪ್ಪು – ಸ್ವಲ್ಪ

ರುಚಿಗೆ ತಕ್ಕಷ್ಟು ಉಪ್ಪು

ನಿಂಬೆ ಹಣ್ಣು – 1/2 ಹೋಳು

ಮಾಡುವ ವಿಧಾನ :

ಮೊಳಕೆ ಕಾಳುಗಳನ್ನೆಲ್ಲಾ ಚೆನ್ನಾಗಿ ಆರಿಸಿ ಒಂದು ಪಾತ್ರೆಯಲ್ಲಿ ಹಾಕಿ. ಕ್ಯಾರೆಟ್ ಸಿಪ್ಪೆತೆಗೆದು ಶುಚಿಗೊಳಿಸಿ ತುರಿದಿಟ್ಟುಕೊಳ್ಳಿ. ಟೊಮ್ಯಾಟೋ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿಡಿ. ಹಸಿ ಮೆಣಸಿನಕಾಯಿಯ ಚೂರುಗಳನ್ನು ಮಾಡಿ, ಒಂದು ಚಿಕ್ಕ ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿ. ಎಲ್ಲಾ ಪದಾರ್ಥಗಳನ್ನು ಬೆರೆಸಿ ರುಚಿಗೆ ತಕ್ಕ ಉಪ್ಪು, ಚಾಟ್ ಮಸಾಲೆ ಪುಡಿ, ಸಕ್ಕರೆ ಹಾಕಿಡಿ. ಕೊನೆಯಲ್ಲಿ ಹಸಿಮೆಣಸಿನ ಚೂರು, ನಿಂಬೆಹಣ್ಣಿನ ರಸ ಹಿಂಡಿ ಎಲ್ಲ ಪದಾರ್ಥಗಳನ್ನು ಮತ್ತೊಮ್ಮೆ ಚೆನ್ನಾಗಿ ಬೆರೆಸಿ.

ಬಟಾಣಿ, ಹೆಸರುಕಾಳು, ಮೊಳಕೆ ಸಾಗು

ಬೇಕಾಗುವ ಪದಾರ್ಥಗಳು :

ಮೊಳಕೆಯೊಡೆದ ಹಸಿರು ಬಟಾಣಿ – 50 ಗ್ರಾಂ

ಮೊಳಕೆಯೊಡೆದ ಹೆಸರುಕಾಳು – 200 ಗ್ರಾಂ

ಬೇಯಿಸಿದ ಆಲೂಗಡ್ಡೆ ಹೋಳು – 100 ಗ್ರಾಂ

ಕಾಯಿತುರಿ – 1/2 ಬಟ್ಟಲು

ಗಸಗಸೆ – 1 ಚಮಚ

ಚಕ್ಕೆ – 1 ಚಿಕ್ಕ ತುಂಡು

ಲವಂಗ – 2

ಹುರಿದ ಚಿಕ್ಕ ಹಸಿ ಮೆಣಸಿನಕಾಯಿ ಚೂರುಗಳು – 5-6

ಟೊಮ್ಯಾಟೊ – 1

ಕೊತ್ತಂಬರಿ ಸೊಪ್ಪು – ಸ್ವಲ್ಪ

ಖಾದ್ಯ ತೈಲ – 2 ಚಮಚ

ಕರಿಬೇವು – ಸ್ವಲ್ಪ

ಸಾಸಿವೆ – 1 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಆಲೂಗಡ್ಡೆ ಮೊಳಕೆ ಕಾಳುಗಳನ್ನೆಲ್ಲ ಆರಿಸಿ ಶುಚಿಗೊಳಿಸಿ ಮುದ್ದೆಗಟ್ಟದಂತೆ ನೀರಿನಲ್ಲಿ ಹದವಾಗಿ ಬೇಯಿಸಿಕೊಳ್ಳಿ. ನಂತರ ಕಾಯಿ ತುರಿಯೊಂದಿಗೆ ಚಕ್ಕೆ, ಲವಂಗ, ಗಸಗಸೆ ಚೂರು ಮಾಡಿ ಹುರಿದ ಹಸಿಮೆಣಸಿನ ಕಾಯಿ ಚೂರು (ಹಸಿ ಮೆಣಸಿನಕಾಯಿ ಹುರಿಯುವಾಗ ಚೂರು ಮಾಡದಿದ್ದರೆ, ಅದು ಸಿಡಿಯುತ್ತದೆ.

ಹಾಗಾಗಿ ಚೂರು ಮಾಡಿಯೇ ಹುರಿಯಬೇಕು) ಗಳನ್ನು ಟೊಮ್ಯಾಟೊ ಎಲ್ಲವನ್ನು ಹಾಕಿ ರುಬ್ಬಿಟ್ಟುಕೊಳ್ಳಿ. ಬೆಂದ ಪದಾರ್ಥಗಳಿಗೆ ಈ ಮಸಾಲೆಯನ್ನು ರುಚಿಗೆ ತಕ್ಕ ಉಪ್ಪು ಬೆರೆಸಿ, 5-6 ನಿಮಿಷ ಕುದಿಸಿ, ಆನಂತರ ಎಣ್ಣೆ ಬಿಸಿ ಮಾಡಿ ಕರಿಬೇವು, ಸಾಸಿವೆ ಹಾಕಿದ ಒಗ್ಗರಣೆಯನ್ನು ಇದಕ್ಕೆ ಹಾಕಿ 2 ನಿಮಿಷ ಸಾಗುವನ್ನು ಕುದಿಸಿ. ಇದನ್ನು ಪೂರಿ, ಚಪಾತಿ, ದೋಸೆ – ಇವುಗಳೊಡನೆ ಉಪಯೋಗಿಸಬಹುದು.

ಕಡ್ಲೆಕಾಳು ಮೊಳಕೆ ಮಸಾಲೆ ಸಾರು

ಬೇಕಾಗುವ ಪದಾರ್ಥಗಳು :

ಮೊಳಕೆ ಕಡ್ಲೆಕಾಳು – 1 ಬಟ್ಟಲು

ಕ್ಯಾರೆಟ್ – 100 ಗ್ರಾಂ

ಟೊಮ್ಯಾಟೊ – 3

ಲವಂಗ – 2

ಚಕ್ಕೆ – 1 ಚಿಕ್ಕ ಚೂರು

ಕೊತ್ತಂಬರಿ ಸೊಪ್ಪು – ಸ್ವಲ್ಪ

ಸಕ್ಕರೆ – 1/2 ಚಮಚ

ಸಾಂಬಾರ್ ಪುಡಿ – 1 1/4 ಚಮಚ

ಧನಿಯ ಪುಡಿ – 1 ಚಮಚ

ಅರಿಸಿನ ಪುಡಿ – 2 ಚಿಟಿಕೆ

ನಿಂಬೆ ಹಣ್ಣು – 1/2 ಹೋಳು

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

ಮೊಳಕೆಯೊಡೆದ ಕಡ್ಲೆಕಾಳನ್ನು ಆರಿಸಿ ಶುಚಿಗೊಳಿಸಿ ಬೇಯಿಸಿಟ್ಟುಕೊಳ್ಳಿ. ಟೊಮ್ಯಾಟೊ ದಪ್ಪ ತುಂಡುಗಳನ್ನಾಗಿ ಹೆಚ್ಚಿಟ್ಟುಕೊಳ್ಳಿ, ಇದರೊಂದಿಗೆ ಚಕ್ಕೆ, ಲವಂಗ, ಧನಿಯಪುಡಿ, ಸಾಂಬಾರ್‌ಪುಡಿ, ಅರಿಶಿನ ಸೇರಿಸಿ ಮಸಾಲೆ ರುಬ್ಬಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಖಾದ್ಯ ತೈಲವನ್ನು ಸ್ವಲ್ಪ ಬಿಸಿಮಾಡಿ ಅದಕ್ಕೆ ಮಸಾಲೆ ಹಾಕಿ ಹುರಿಯಿರಿ.

2-3 ನಿಮಿಷದ ನಂತರ ಮಸಾಲೆಗೆ ಪರಿಮಳ ಬರುತ್ತಿದೆ ಎನ್ನುವಾಗ ಬೇಯಿಸಿದ ಮೊಳಕೆ ಕಡ್ಲೆಕಾಳನ್ನು ಅದಕ್ಕೆ ಸೇರಿಸಿ, ರುಚಿಗೆ ತಕ್ಕ ಉಪ್ಪು, ಸಕ್ಕರೆ ಸೇರಿಸಿ 5-6 ನಿಮಿಷದ ನಂತರ ಕುದಿಯುತ್ತಾ ಬರುವಾಗ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ನಿಂಬೆಹಣ್ಣಿನ ರಸ ಬೆರೆಸಿ ಮತ್ತೆರಡು ನಿಮಿಷ ಕುದಿಸಿ.

ಇದನ್ನು ಸಹ ಚಪಾತಿ, ಪೂರಿ – ಇತ್ಯಾದಿ ತಿನಿಸುಗಳೊಡನೆ ಸ್ವೀಕರಿಸಬಹುದು.

ಹೆಸರುಕಾಳು ಮೊಳಕೆ ಕೋಸಂಬರಿ

ಬೇಕಾಗುವ ಪದಾರ್ಥಗಳು :

ಮೊಳಕೆಯೊಡೆದ ಹೆಸರುಕಾಳು – 1 ಬಟ್ಟಲು

ಪರಂಗಿ ಹಣ್ಣು ತುರಿ – 1 ಬಟ್ಟಲು

ಸೌತೆಕಾಯಿ ತುರಿ – 1/4 ಬಟ್ಟಲು

ಹಸಿ ಮೆಣಸಿನಕಾಯಿ – 3-4

ರುಚಿಗೆ ತಕ್ಕಷ್ಟು ಉಪ್ಪು

ನಿಂಬೆರಸ – 2 ಚಮಚ

ಕರಿಬೇವು – ಸ್ವಲ್ಪ

ಸಾಸಿವೆ – 1/2 ಚಮಚ

ತೆ೦ಗಿನಕಾಯಿ ತುರಿ – 1/2 ಬಟ್ಟಲು

ಇಂಗಿನ ಪುಡಿ – 1 ಚಿಟಿಕೆ

ಖಾದ್ಯತೈಲ – 2 ಚಮಚ

ಮಾಡುವ ವಿಧಾನ:

ಮೊಳಕೆಯೊಡೆದ ಕಾಳನ್ನು ಚೆನ್ನಾಗಿ ಆರಿಸಿ ಶುಚಿಗೊಳಿಸಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಸಿಪ್ಪೆತೆಗೆದು ತುರಿದಿಟ್ಟ ಪರಂಗಿ ಹಣ್ಣಿನ ತುರಿ, ಸೌತೆಕಾಯಿ ತುರಿ, ತೆಂಗಿನಕಾಯಿ ತುರಿ ಬೆರೆಸಿ. ನಂತರ ಹಸಿಮೆಣಸಿನ ಕಾಯಿಯನ್ನು ಚಿಕ್ಕ ಚಿಕ್ಕ ಚೂರು ಮಾಡಿ ಹಾಕಿ, ಆನಂತರ ಒಂದು ಚಿಕ್ಕ ಬಾಣಲೆಯಲ್ಲಿ ಖಾದ್ಯತೈಲವನ್ನು ಬಿಸಿ ಮಾಡಿ ಸಾಸಿವೆ, ಕರಿಬೇವು ಒಗ್ಗರಣೆ ಮಾಡಿ. ಒಗ್ಗರಣೆಯಲ್ಲಿ ಸಾಸಿವೆ ಸಿಡಿದ ನಂತರ ಉರಿ ಆರಿಸಿ ಇಂಗಿನ ಪುಡಿಯನ್ನು ಹಾಕಿ.

ಪರಿಮಳ ಬರುತ್ತಿದ್ದಂತೆ ಅದನ್ನು ಕೋಸಂಬರಿಗೆ ಬೆರೆಸಿ (ಒಗ್ಗರಣೆ ಕೊಡುವಾಗ ಉರಿಯಿರುವಾಗಲೇ ಎಣ್ಣೆಯಲ್ಲಿ ಇಂಗಿನ ಪುಡಿ ಹಾಕಿದರೆ ಅದು ಸೀದು ಹೋಗುವ ಸಾಧ್ಯತೆ ಇರುವುದರಿಂದ ಅದನ್ನು ಉರಿ ಆರಿಸಿದ ನಂತರ ಹಾಕುವುದು ಒಳ್ಳೆಯದು). ಕೊನೆಯಲ್ಲಿ ಉಪ್ಪು, ನಿಂಬೆರಸ ಬೆರೆಸಿ ಸ್ವೀಕರಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi