ತನ್ನ ಕುಟುಂಬದವರೆಲ್ಲರನ್ನೂ ದ್ವಾರಕೆಯಲ್ಲಿ ಕ್ಷೇಮವಾಗಿ ಇರಿಸಿ, ಶ್ರೀಕೃಷ್ಣ ಮಥುರಾ ಪಟ್ಟಣಕ್ಕೆ ಹೊರಟ. ಅವನು ಒಬ್ಬ ಉದಿಸುವ ಚಂದ್ರನ ಹಾಗೆ ಕಾಣಿಸುತ್ತಿದ್ದ. ಆಗ ಕಾಲಯವನ ಎನ್ನುವ ರಾಕ್ಷಸ, ಶ್ರೀಕೃಷ್ಣನನ್ನು ನೋಡಿದ. ನಾರದಮುನಿಗಳು ವರ್ಣಿಸಿರುವ ದೇವೋತ್ತಮ ಪರಮ ಪುರುಷನ ಎಲ್ಲ ಲಕ್ಷಣಗಳನ್ನೂ ಪ್ರಜ್ವಲಿಸುವ ಶರೀರವ ಈ ಕೃಷ್ಣನಲ್ಲಿ ಕಂಡ. ಆ ರಾಕ್ಷಸನಿಗೆ ಇವನೇ ದೇವೋತ್ತಮ ಪರಮ ಪುರುಷ ಎನ್ನುವುದು ಅರ್ಥವಾಯಿತು.

ಕೃಷ್ಣನ ಹತ್ತಿರ ಈಗ ಯಾವ ಆಯುಧಗಳೂ ಇಲ್ಲದಿರುವುದನ್ನು ನೋಡಿ, ಕಾಲಯವನ ತನ್ನ ಆಯುಧಗಳನ್ನೆಲ್ಲ ಪಕ್ಕಕ್ಕೆ ಎಸೆದ. ಅವನೊಂದಿಗೆ ಯುದ್ಧ ಮಾಡುವುದಕ್ಕಾಗಿ ಅವನ ಹಿಂದೆ ಬಂದ. ಕೃಷ್ಣ ಅವನ ಕೈಗೆ ಸಿಗದಹಾಗೆ ಓಡತೊಡಗಿದ. ರಾಕ್ಷಸನೂ ಕೃಷ್ಣನನ್ನು ಅಟ್ಟಿಸಿಕೊಂಡು ಬಂದ. ಕೃಷ್ಣ ಹೀಗೆಯೇ ಅವನ ಕೈಗೆ ಸಿಗದಂತೆ ಓಡುತ್ತ ದೂರದ ಒಂದು ಗುಹೆಯ ಹತ್ತಿರ ಬಂದ.
ಕಾಲಯವನ ಕೃಷ್ಣನನ್ನು ಹಿಡಿಯಲಾಗದೆ, ಜೋರಾಗಿ ಬಯ್ಯುತ್ತ ಹಿಂದೆ ಓಡಿಬರುತ್ತಿದ್ದ. ಆದರೂ ಅವನಿಗೆ ಕೃಷ್ಣನನ್ನು ಹಿಡಿಯಲಾಗಲಿಲ್ಲ. ಏಕೆಂದರೆ ಅವನ ಪಾಪದ ಮೂಟೆ ಇನ್ನೂ ತುಂಬಿರಲಿಲ್ಲ. ಕೃಷ್ಣ ಆ ಗುಹೆಯನ್ನು ಪ್ರವೇಶಿಸಿದ. ಕಾಲಯವನೂ ಅವನ ಹಿಂದೆ ಓಡೋಡಿ ಬಂದಾಗ, ಅವನಿಗೆ ಅಲ್ಲೊಬ್ಬ ಮನುಷ್ಯ ಮಲಗಿರುವುದು ಕಾಣಿಸಿತು.
ಅವನನ್ನೇ ಕೃಷ್ಣ ಎಂದುಕೊಂಡು ಈ ರಾಕ್ಷಸ ಅವನಿಗೆ ಒದೆಯತೊಡಗಿದ. ಆ ಮನುಷ್ಯ ಬಹಳ ಕಾಲದಿಂದ ಅಲ್ಲಿ ಮಲಗಿಕೊಂಡಿದ್ದ. ಈಗ ಹೀಗೆ ಒದ್ದು ಬಲವಂತವಾಗಿ ಎಬ್ಬಿಸಿದ್ದು ಅವನಿಗೆ ಸಹಿಸಲಾಗಲಿಲ್ಲ. ಕಣ್ಣುಬಿಟ್ಟು ಒಮ್ಮೆ ಸುತ್ತಲೂ ನೋಡಿದಾಗ ಅವನಿಗೆ ಕಾಲಯವನ ಕಾಣಿಸಿದ. ಅವನನ್ನು ಕೋಪದಿಂದ ದುರುಗುಟ್ಟಿಕೊಂಡು ನೋಡಿದ. ಆ ಕ್ಷಣವೇ ಆ ಕಾಲಯವನ ರಾಕ್ಷಸನ ಮೈಯಲ್ಲಿ ಬೆಂಕಿ ಹೊತ್ತಿಕೊಂಡು, ಕೆಲವೇ ಕ್ಷಣಗಳಲ್ಲಿ ಆ ರಾಕ್ಷಸನ ದೇಹ ಉರಿದು ಬೂದಿಯಾಗಿತ್ತು.

ಈ ಅದ್ಭುತವಾದ ಮನುಷ್ಯನ ಹೆಸರು, ಮುಚುಕುಂದ. ಇವನು ಮಾಂಧಾತಾನ ಮಗ. ಅವನು ಯಾವಾಗಲೂ ಬ್ರಹ್ಮ ಸಂಸ್ಕೃತಿಯನ್ನು ಅನುಸರಿಸುತ್ತ, ತನ್ನ ನಿರ್ಧಾರಗಳಿಗೆ ಬದ್ಧನಾಗಿ ನಡೆದುಕೊಳ್ಳುತ್ತಿದ್ದ. ಹಿಂದೆ ಅವನು ಉಪದೇವತೆಗಳನ್ನು ರಾಕ್ಷಸರ ಕಾಟದಿಂದ ರಕ್ಷಿಸಲು ಅನೇಕ ವರ್ಷಗಳು ಸೇವೆಮಾಡಿದ್ದ.
ಕೊನೆಗೆ ಉಪದೇವತೆಗಳೆಲ್ಲ ಕಾರ್ತಿಕೇಯನನ್ನು ತಮ್ಮ ಸಂರಕ್ಷಕನಾಗಿ ಪಡೆದುಕೊಂಡಾಗ, ಮುಚುಕುಂದನಿಗೆ ವಿಶ್ರಾಂತಿ ನೀಡಿದ್ದರು. ಆದರೆ, “ಸ್ವತಂತ್ರನಾಗಿಸುವುದೊಂದನ್ನು ಬಿಟ್ಟು ಬೇರೆ ಯಾವ ವರ ಬೇಕಾದರೂ ಕೇಳು, ಕೊಡುತ್ತೇವೆ. ನಿನ್ನನ್ನು ಬಿಡುಗಡೆ ಮಾಡಲು ಶ್ರೀ ವಿಷ್ಣುವಿನಿಂದ ಮಾತ್ರ ಸಾಧ್ಯ ಎಂದು ಬಿಟ್ಟಿದ್ದರು. ಈ ಕಾರಣಕ್ಕಾಗಿಯೇ, ಮುಚುಕುಂದ ಉಪದೇವತೆಗಳಿಂದ ನಿರಂತರ ನಿದ್ದೆಯ ವರಬೇಡಿ, ಈ ಗುಹೆಯಲ್ಲಿ ಹೀಗೆ ಮಲಗಿ ನಿದ್ರಿಸುತ್ತಿದ್ದ.
ಕಾಲಯವನ ರಾಕ್ಷಸ ಅಲ್ಲಿ ಅಗ್ನಿಗೆ ಆಹುತಿಯಾದಾಗ, ಶ್ರೀಕೃಷ್ಣ ಅಲ್ಲಿ ಮುಚುಕುಂದನಿಗೆ ದರ್ಶನವನ್ನು ಕೊಟ್ಟ. ಕೃಷ್ಣನನ್ನು ನೋಡಿ ಮುಚುಕುಂದನಿಗೆ ಆಶ್ಚರ್ಯವಾಯಿತು. ಮುಚುಕುಂದ ತನ್ನ ಪರಿಚಯವನ್ನು ಹೇಳಿ, ನೀನು ಯಾರು ಎಂದು ಶ್ರೀಕೃಷ್ಣನನ್ನು ಕೇಳಿದ.
ಮುಚುಕುಂದ ಹೇಳಿದ; “ಬಹಳ ಕಾಲ ಎಚ್ಚರಗೊಂಡೇ ಇದ್ದುದರಿಂದ, ಈ ದೀರ್ಘಕಾಲದ ನಿದ್ದೆಯ ಆನಂದವನ್ನು ನಾನು ಈ ಗುಹೆಯಲ್ಲಿ ಅನುಭವಿಸುತ್ತಿದ್ದೆ. ಇದ್ದಕ್ಕಿದ್ದ ಹಾಗೆಯೇ ಯಾವನೋ ಒಬ್ಬ ಅಪರಿಚಿತ ನನ್ನ ಈ ಸುಖನಿದ್ರೆಯನ್ನು ಕೆಡಿಸಿಬಿಟ್ಟ. ಮತ್ತೆ ತನ್ನ ಈ ತಪ್ಪಿನ ಶಾಪದಿಂದಲೇ ಅವನು ಉರಿದು ಬೂದಿಯಾಗಿ ಹೋದ.

ಓ ದೇವನೇ, ಶತ್ರುಗಳನ್ನು ಸಂಹರಿಸಿ ಗೆಲ್ಲುವವನೇ, ನಿನ್ನ ಈ ಅತಿ ಸುಂದರ ರೂಪವನ್ನು ನೋಡುವ ಅದೃಷ್ಟವನ್ನು ನಾನೀಗ ಪಡೆದಿದ್ದೇನೆ.” ಬುದ್ಧಿವಂತನಾದ ಮುಚುಕುಂದ, ಈ ಐಹಿಕ ಜೀವನದ ನಿರರ್ಥಕತೆಯನ್ನು ಅರ್ಥಮಾಡಿಕೊಂಡಿದ್ದರಿಂದ, ತನ್ನನ್ನು ಶ್ರೀಕೃಷ್ಣನ ಪಾದಪದ್ಮಗಳಡಿಯಲ್ಲಿ ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ.
ಈ ಕೋರಿಕೆಯಿಂದ ಪ್ರೀತನಾದ ಶ್ರೀಕೃಷ್ಣ ಮುಚುಕುಂದನಿಗೆ ಹೇಳಿದ: “ನನ್ನ ಭಕ್ತರು ಯಾರೂ ಐಹಿಕ ಭೋಗಗಳಿಂದ ಆಕರ್ಷಿತರಾದವರಲ್ಲ; ಬರೀ ತಮ್ಮ ಹೃದಯಗಳಲ್ಲಿ ಅತಿ ಸಾಮಾನ್ಯ ಆಸೆಗಳನ್ನಿಟ್ಟುಕೊಂಡಿರುವ, ಭಕ್ತರುಗಳಲ್ಲದ, ಯೋಗಿಗಳೆನಿಸಿಕೊಂಡವರು, ಊಹಾಪೋಹಿ ಜಿಜ್ಞಾಸೆಗಳು ಅಂತಹವರು ಮಾತ್ರ ಐಹಿಕ ಭೋಗಗಳ ಆಶೀರ್ವಾದಕ್ಕಾಗಿ ಪರಿತಪಿಸುತ್ತಾರೆ.
ನನ್ನ ಪ್ರೀತಿಯ ಮುಚುಕುಂದ, ನೀನು ನನ್ನಲ್ಲಿ ಶಾಶ್ವತವಾದ ಭಕ್ತಿಯನ್ನು ಇಟ್ಟುಕೊಂಡಿರುವೆ. ಈಗ, ನನಗೆ ಯಾವಾಗಲೂ ಶರಣಾಗತನಾಗಿ ಉಳಿದುಕೊಂಡು, ಒಬ್ಬ ಯೋಧನಾಗಿ ನೀನು ಮಾಡಲೇಬೇಕಾಗಿ ಬಂದ ಸಾವುನೋವುಗಳ ಪಾಪಕರ್ಮಗಳ ಪರಿಹಾರಕ್ಕಾಗಿ ಹೋಗಿ ತಪಸ್ಸು ಮಾಡು. ಮುಂದಿನ ಜನ್ಮದಲ್ಲಿ ನೀನೊಬ್ಬ ಅತ್ಯುತ್ಕೃಷ್ಟ ಬ್ರಾಹ್ಮಣನಾಗಿ ಹುಟ್ಟಿ, ನನ್ನನ್ನು ಸೇರುವೆ. “ಈ ರೀತಿಯಾಗಿ ಭಗವಂತ, ಮುಚುಕುಂದನಿಗೆ ತನ್ನ ಅನುಗ್ರಹವನ್ನು ಮಾಡಿದ.






Leave a Reply