ಭೂದೇವಿಯ ಮಗ ನರಕಾಸುರ. ಅವನಿಗೆ ಭೌಮಾಸುರ ಎಂಬ ಹೆಸರೂ ಇತ್ತು. ವರುಣದೇವನ ಛತ್ರಿಯನ್ನು ಅದಿತಿದೇವಿಯ ಬೆಂಡೋಲೆಗಳನ್ನು ಮತ್ತು ಉಪದೇವತೆಗಳೆಲ್ಲರ ಕ್ರೀಡಾ ಪ್ರದೇಶವಾಗಿದ್ದ ಮಣಿ ಪರ್ವತವನ್ನೂ ಕದ್ದೊಯ್ದಿದ್ದ. ಇಂದ್ರದೇವ ದ್ವಾರಕೆಗೆ ಬಂದು ಈ ರಾಕ್ಷಸನ ದುರ್ನಡವಳಿಕೆಗಳನ್ನು ಶ್ರೀಕೃಷ್ಣನಿಗೆ ವಿವರಿಸಿದ.
ರಾಣಿ ಸತ್ಯಭಾಮೆಯೊಂದಿಗೆ ಗರುಡನ ಮೇಲೆ ಕುಳಿತುಕೊಂಡು, ಶ್ರೀ ಕೃಷ್ಣ ನರಕಾಸುರನ ರಾಜಧಾನಿಗೆ ಪ್ರಯಾಣ ಬೆಳೆಸಿದ. ನಗರದ ಹೊರಗೆ ಮೈದಾನದಲ್ಲಿ ತನ್ನನ್ನು ತಡೆದ ಮುರ ಎನ್ನುವ ರಾಕ್ಷಸನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಕೊಂದುಹಾಕಿದ.

ಆಮೇಲೆ ಆ ಮುರನ ಏಳು ಮಕ್ಕಳೊಂದಿಗೆ ಯುದ್ಧಮಾಡಿ ಅವರನ್ನೆಲ್ಲ ಮೃತ್ಯುಲೋಕಕ್ಕೆ ಅಟ್ಟಿದ. ಆಗಲೇ ಆನೆಯ ಮೇಲೆ ಕುಳಿತುಕೊಂಡು ನರಕಾಸುರ ರಣರಂಗಕ್ಕೆ ಇಳಿದ. ನರಕಾಸುರ ತನ್ನ ಶಕ್ತಿ ಎನ್ನುವ ಭಲ್ಲೆಯನ್ನು ಕೃಷ್ಣನ ಮೇಲೆ ಪ್ರಯೋಗಿಸಿದ. ಆದರೆ, ಅದು ಯಾವ ಪರಿಣಾವನ್ನೂ ಮಾಡಲಿಲ್ಲ. ನರಕಾಸುರ ಸೈನ್ಯವನ್ನು ಕೃಷ್ಣ ಧ್ವಂಸಗೊಳಿಸಿ, ಅನಂತರ, ತನ್ನ ಚಕ್ರದಿಂದ ನರಕಾಸುರನ ತಲೆ ಹಾರಿಸಿದ.
ಆಗ ಭೂದೇವಿ, ಶ್ರೀಕೃಷ್ಣನ ಮುಂದೆ ಬಂದು ನಿಂತು ನರಕಾಸುರ ಕದ್ದಿದ್ದ ವಸ್ತುಗಳನ್ನೆಲ್ಲ ಹಿಂತಿರುಗಿಸಿದಳು. ಅನಂತರ ಶ್ರೀಕೃಷ್ಣನನ್ನು ಪ್ರಾರ್ಥಿಸಿ, ಬೆದರಿನಿಂತಿದ್ದ ನರಕಾಸುರನ ಮಗನನ್ನು ಶ್ರೀಕೃಷ್ಣನ ಪಾದಪದ್ಮಗಳಲ್ಲಿರಿಸಿದಳು. ಆ ಹುಡುಗನನ್ನು ಸಮಾಧಾನ ಮಾಡಿ ಶ್ರೀಕೃಷ್ಣ ನರಕಾಸುರನ ಅರಮನೆಯನ್ನು ಪ್ರವೇಶಿಸಿದ.
ಅಲ್ಲಿ ಅವನಿಗೆ ಹದಿನಾರು ಸಾವಿರದ ಒಂದು ನೂರು ಯುವತಿಯರು ಕಾಣಿಸಿದರು. ಕೃಷ್ಣನನ್ನು ನೋಡಿದಕೂಡಲೇ, ಅವನನ್ನೇ ತಮ್ಮ ಪತಿಯಾಗಿ ಸ್ವೀಕರಿಸಲು ನಿರ್ಧರಿಸಿಬಿಟ್ಟರು. ಕೃಷ್ಣ ಅವರೆಲ್ಲರನ್ನೂ ಅಪಾರ ಐಶ್ವರ್ಯದೊಂದಿಗೆ ದ್ವಾರಕೆಗೆ ಕಳುಹಿಸಿಕೊಟ್ಟು, ರಾಣಿ ಸತ್ಯಭಾಮೆಯ ಜೊತೆಗೆ ಇಂದ್ರನ ಆಸ್ಥಾನಕ್ಕೆ ಹೋದ. ಅಲ್ಲಿ ಅವನು ಅದಿತಿದೇವಿಯ ಬೆಂಡೋಲೆಗಳನ್ನು ಹಿಂತಿರುಗಿಸಿದ. ಅಲ್ಲಿ ಅವನನ್ನು ಇಂದ್ರ ಮತ್ತವನ ಹೆಂಡತಿ ಶಚಿದೇವಿ ಇಬ್ಬರೂ ಪೂಜಿಸಿದರು.
ಸತ್ಯಭಾಮೆಯ ಕೋರಿಕೆಯಂತೆ, ಸ್ವರ್ಗಲೋಕದ ಪಾರಿಜಾತ ಗಿಡವನ್ನು ಕೃಷ್ಣ ಬುಡಸಮೇತ ತೆಗೆದು ಗರುಡನ ಬೆನ್ನಿನ ಮೇಲಿರಿಸಿದ. ಈ ಗಿಡವನ್ನು ತೆಗೆದುಕೊಂಡು ಹೋಗಬಾರದು ಎಂದು ಇಂದ್ರ ವಿರೋಧಿಸಿದ. ಇಂದ್ರ ಮತ್ತು ಇತರ ಉಪದೇವತೆಗಳನ್ನು ಸೋಲಿಸಿ, ಕೃಷ್ಣ ಸತ್ಯಭಾಮೆಯೊಂದಿಗೆ ದ್ವಾರಕೆಗೆ ಹಿಂತಿರುಗಿ, ಪಾರಿಜಾತದ ಗಿಡವನ್ನು ಸತ್ಯಭಾಮೆಯ ಅರಮನೆಗೆ ಹತ್ತಿರದಲ್ಲಿದ್ದ ತೋಟವೊಂದರಲ್ಲಿ ನೆಡೆಸಿದ.

ಮೊದಲು ಇಂದ್ರ ಕೃಷ್ಣನ ಹತ್ತಿರ ಬಂದು ನರಕಾಸುರನನ್ನು ಸಾಯಿಸಬೇಕೆಂದು ಪ್ರಾರ್ಥಿಸಿದ್ದ. ಆದರೆ, ನರಕಾಸುರ ವಧೆ ಆದಮೇಲೆ ಕೃಷ್ಣನೊಂದಿಗೆ ಜಗಳವಾಡಿದ. ಈ ಉಪದೇವತೆಗಳು ತಮ್ಮ ಸ್ಥಾನಮಾನಗಳ ಮತ್ತು ಸುಖ ಸಂಪತ್ತುಗಳ ಕಾರಣದಿಂದ ಮದವೇರಿ ಆಗಾಗ ಕೋಪಕ್ಕೊಳಗಾಗಿ ಬಿಡುತ್ತಾರೆ.
ಅಮೋಘ ಗುಣಗಳುಳ್ಳವನಾದ ಶ್ರೀ ಕೃಷ್ಣ ತನ್ನನ್ನು ತಾನು ಹದಿನಾರು ಸಾವಿರದ ಒಂದು ನೂರು ವಿವಿಧ ರೂಪಗಳಲ್ಲಿ ವಿಸ್ತರಿಕೊಂಡು, ಆ ಹದಿನಾರು ಸಾವಿರದ ಒಂದು ನೂರು ಯುವತಿಯರನ್ನು ಬೇರೆ ಬೇರೆ ದೇವಾಲಯಗಳಲ್ಲಿ ಮದುವೆ ಮಾಡಿಕೊಂಡ. ಸಾಂಸಾರಿಕ ಕೆಲಸ ಕಾರ್ಯಗಳಲ್ಲಿ, ಎಲ್ಲ ಸಾಮಾನ್ಯ ಗೃಹಸ್ಥರ ಹಾಗೆ ತೊಡಗಿಕೊಂಡ.
ತನ್ನ ಅನೇಕಾನೇಕ ಹೆಂಡತಿಯರಿಂದ ವಿಧವಿಧವಾದ ಸೇವೆಗಳನ್ನು ಸ್ವೀಕರಿಸಿದ. ದೇವೋತ್ತಮ ಪರಮ ಪುರುಷನಾದ, ಕೃಷ್ಣ ಖಚಿತವಾಗಿ ಒಬ್ಬ ಸಾಮಾನ್ಯ ಮಾನವನ ರೀತಿಯಲ್ಲಿ ನಡೆದುಕೊಂಡ ಎನ್ನವುದನ್ನು ನಾವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಹದಿನಾರು ಸಾವಿರದ ಒಂದು ನೂರು ಯುವತಿಯರನ್ನು ಬೇರೆ ಬೇರೆ ದೇವಾಲಯಗಳಲ್ಲಿ ಮದುವೆಯಾಗುವಂತಹ ಶ್ರೀಮಂತಿಕೆಯನ್ನು ಅವನು ಪ್ರದರ್ಶಿಸಿದರೂ, ಅವನು ಗೃಹಸ್ಥನ ಹಾಗೆಯೇ ನಡೆದುಕೊಂಡ ಮತ್ತು ಕಟ್ಟುನಿಟ್ಟಾಗಿ ಅದರ ಕರ್ತವ್ಯಗಳನ್ನು ಪಾಲಿಸಿದ.
ಸಾಮಾನ್ಯ ಮನೆಗಳಲ್ಲಿ ಗಂಡಹೆಂಡಿರು ಇರುವ ಹಾಗೆಯೇ ನಡೆದುಕೊಂಡ. ಆದ್ದರಿಂದ ಪರಬ್ರಹ್ಮನಾದ ದೇವೋತ್ತಮ ಪರಮ ಪುರುಷನ ಗುಣಾತಿಶಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ಬ್ರಹ್ಮನಂತಹ ಉಪದೇವತೆಗಳಿಗೂ ಭಗವಂತನ ದಿವ್ಯಲೀಲೆಗಳನ್ನು ಆಳಕ್ಕಿಳಿದು ನೋಡುವುದು ಸಾಧ್ಯವಾಗುವುದಿಲ್ಲ.






Leave a Reply