ಶ್ರೀ ನೀರಾ ನರಸಿಂಹ ಕ್ಷೇತ್ರ

ಕೃಷ್ಣಾ ನದಿಯ ದಂಡೆಗುಂಟ ಅನೇಕ ನರಸಿಂಹ ಕ್ಷೇತ್ರಗಳಿವೆ. ಆಂ‍ಧ್ರಪ್ರದೇಶದ ಧರ್ಮಪುರಿ, ಗೋದಾವರಿ ತೀರದಲ್ಲಿರುವ ಮುದಗಲ್‌, ರಾಕ್ಷಸಭವನ ರಾಹೇರ, ನಾಂದೇಡ, ಭೀಮಾ ಹಾಗೂ ನೀರಾ ನದಿಯ ಸಂಗಮದಲ್ಲಿರುವ ನರಸಿಂಹಪುರ, ಕೃಷ್ಣಾ ದಂಡೆಯಲ್ಲಿಯ ಶೂರ್ಪಾಲಿ, ವಿಜಾಪುರದ ಹತ್ತಿರದಲ್ಲಿರುವ ತೊರವೆ, ಮುಳಬಾಗಿಲು, ಮೇಲುಕೋಟೆ ಮೊದಲಾದ ಸ್ಥಳಗಳಲ್ಲಿರುವ ನರಸಿಂಹದೇವನ ಭಕ್ತರ ಸಂಖ್ಯೆ ಅಪಾರವಾಗಿದೆ.

ಮಹಾರಾಷ್ಟ್ರದ ಪ್ರಾ‍‍ಧ್ಯಾಪಕ ಸುರು ಅವರು ತಮ್ಮ ಗ್ರಂಥದಲ್ಲಿ ಭೀಮಾ ಹಾಗೂ ನೀರಾ ನದಿಗಳ ಸಂಗಮ ಸ್ಥಾನದಲ್ಲಿರುವ ಕ್ಷೇತ್ರಗಳ ಬಗ್ಗೆ ಮಾಹಿತಿಗಳನ್ನೊದಗಿಸಿದ್ದಾರೆ.

ನೀರಾ ನದಿಯ ದಂಡೆಯ ಮೇಲಿರುವ ಲಕ್ಷ್ಮೀತೀರ್ಥ, ಪದ್ಮತೀರ್ಥ, ಶಂಖತೀರ್ಥ, ಗದಾತೀರ್ಥ, ಪಿಶಾಚಮೋಚನತೀರ್ಥ, ಗರುಡತೀರ್ಥ, ಶ್ರೀ ನರಸಿಂಹತೀರ್ಥ, ಇಂದ್ರ ತೀರ್ಥ, ಹಂಸ ತೀರ್ಥ, ತಾರಾತೀರ್ಥ, ದೂರ್ವಾಸತೀರ್ಥ, ಕಪಿಲತೀರ್ಥ, ಭೀಮಾ ತಟದಲ್ಲಿರುವ ದುರ್ಗಾತೀರ್ಥ, ಕೋಟಿತೀರ್ಥ, ಗೋತೀರ್ಥ, ಭಾನುತೀರ್ಥ, ಚಕ್ರತೀರ್ಥ, ನಂದಾತೀರ್ಥ, ಪಾಶತೀರ್ಥ, ಲಾಂಗಲತೀರ್ಥ, ಮಾಸಲತೀರ್ಥ ಹೀಗೆ ಅನೇಕ ಕ್ಷೇತ್ರಗಳನ್ನು ಸೊಗಸಾಗಿ ವಿವರಿಸಿದ್ದಾರೆ.

ನರಸಿಂಹಪುರವನ್ನು ಪ್ರಾಚೀನ ಕಾಲದಲ್ಲಿ ನರಸಿಂಹ ತೀರ್ಥವೆಂದೇ ಗುರುತಿಸುತ್ತಿದ್ದರು. ಈ ಸ್ಥಾನವು ತಪಸ್ಸು ಮಾಡಲು ಬಹು ಯೋಗ್ಯವಾದುದೆಂಬ ಭಾವನೆ ಆ ಕಾಲದಲ್ಲಿ ಇತ್ತು. 16ನೇ ಶತಮಾನದಿಂದ ಅಂದರೆ ವಿಜಾಪುರದ ಮೊದಲನೇ ಆಲಿ ಆದಿಲ್‌ಶಹನ ಕಾಲದಿಂದ ಈ ಕ್ಷೇತ್ರದ ಮಹತ್ವ ಬೆಳೆಯತೊಡಗಿತು. ಸಾವಿರಾರು ವಿಷ್ಣು ಭಕ್ತರಿಗೆ ಈ ಕ್ಷೇತ್ರ ದೇವತೆಯಾದ ನರಸಿಂಹನು ಕುಲದೇವತೆ ಎಂದೆನಿಸಿಕೊಂಡಿದ್ದಾನೆ.

ವಿಜಾಪುರದ ಆಲಿ ಆದಿಲ್‌ಶಹನಂತೂ ಈ ಸ್ಥಳದ ಪರಿಸರವನ್ನು ವೀಕ್ಷಿಸಿದ ನಂತರ ಎರಡು ನದಿಗಳ ಮಧ್ಯ ಭಾಗದಲ್ಲಿ ನಡುಗಡ್ಡೆಯಂತಿರುವ ಸ್ಥಳವನ್ನು ಕಂಡು ಕೋಟೆಯೊಂದನ್ನು ಕಟ್ಟಿಸಲು ಆರಂಭಿಸಿದನಂತೆ. ಆಗ ಆತನಿಗೆ ಇದ್ದಕ್ಕಿದ್ದಂತೆ ವಿಪರೀತ ಹೊಟ್ಟೆನೋವಿನ ಬಾಧೆ ಕಾಡತೊಡಗಿತು.

ಆಗ ಕೆಲವರು ಇಲ್ಲಿ ಶ್ರೀ ನರಸಿಂಹನ ದೇವಾಲಯವಿದೆ. ಆ ದೇವನು ಬಹು ಜಾಗೃತನಾಗಿದ್ದಾನೆ. ತಾವು ಈ‍ ಸ್ಥಳದಲ್ಲಿ ಕೋಟೆ ಕಟ್ಟುವುದನ್ನು ನಿಲ್ಲಿಸಿದಲ್ಲಿ ತಮ್ಮ ಉದರ ರೋಗವು ತಾನೇ ತಾನಾಗಿ ನಿವಾರಣೆಯಾಗಬಹುದೆಂದು ಆದಿಲ್‌ ಶಾಹನಿಗೆ ತಿಳಿಸಿದರಂತೆ. ಅದರಂತೆ ಬಾದಶಹನು ಮೂರು ಭಾಗದಿಂದಾವರಿಸಿದ ನೀರಿನ ಮ‍‍ಧ್ಯದಲ್ಲಿ ಕೋಟೆ ಕಟ್ಟುವ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದನೆಂದೂ, ಆಗ ಆತನ ಹೊಟ್ಟೆ ನೋವಿನ ಬಾಧೆಯೂ ನಿಂತು ಹೋಯಿತೆಂದೂ ಹೇಳಲಾಗಿದೆ.

ಅಂದು ನಡೆದ ಈ ಘಟನೆಗೆ ಸಾಕ್ಷಿ ಎಂಬಂತೆ ಆಲಿ ಆದಿಲ್‌ಶಹನು ದೇವಾಲಯದ ಪೂಜೆ, ನೈವೇದ್ಯಾದಿಗಳಿಗೆ ಹಾಗೂ ಪರಿಚಾರಕರಿಗೆ ನೂರಾರು ಎಕರೆ ಭೂಮಿಯನ್ನು ದತ್ತಿಯಾಗಿ ಬಿಟ್ಟುಕೊಟ್ಟನೆಂಬುದಕ್ಕೆ ಸಾಕ್ಷಿಯಾಗಿ ಪ್ರಾಚೀನ ಕಾಗದ ಪತ್ರಗಳು ಇಂದಿಗೂ ಲಭ್ಯವಾಗಿವೆ.

ನೀರಾ ಹಾಗೂ ಭೀಮಾ ಸಂಗಮ ಯಾವ ಸ್ಥಳದಲ್ಲಾಗುವುದೋ ಆ ‍ಸ್ಥಳದಲ್ಲಿ ಮೊಟ್ಟೆ ಆಕಾರದ ಭದ್ರವಾದ ಸ್ನಾನಘಟ್ಟವಿದೆ. 1605ರಲ್ಲಿ, ಅಂದರೆ ವಿಶ್ವಾವಸು ನಾಮ ಸಂವತ್ಸರ ಮಾಘ ಶುದ್ಧ ಏಕಾದಶಿಯಂದು ಈ ಘಟ್ಟವನ್ನು ನಿರ್ಮಿಸುವ ಕೆಲಸವು ಪೂರ್ಣವಾಯಿತೆಂದು ಆ ‍ಸ್ಥಳದಲ್ಲಿರುವ ಶಿಲಾಲೇಖದಿಂದ ತಿಳಿದು ಬರುತ್ತದೆ.

ಮುಧೋಜಿಯ ಮಗನಾದ ಧಾದಜಿಗೆ ಆಲಿ ಆದಿಲ್‌ಶಹನ ಕಾಲದಲ್ಲಿ ನಳದುರ್ಗದ ದೇಶಮುಖತನವು ದೊರೆಯಿತು (1580). ಅಹಮ್ಮದನಗರದ ನಿಜಾಮಶಹನು ನಳದುರ್ಗಕ್ಕೆ ಮುತ್ತಿಗೆ ಹಾಕಿದಾಗ ಮುಧೋಜಿ ಶೌರ್ಯ, ಧೈರ್ಯದಿಂದ ಆತ ಹಿಮ್ಮೆಟ್ಟುವಂತೆ ಮಾಡಿದ. ಈ ಮುಧೋಜಿಯು 1609 ರವರೆಗೂ ಜೀವಿಸಿದ್ದ.

ಈ ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿದ್ದ ಸ್ನಾನಘಟ್ಟದ ಕೆಲಸವು ಮೂರು ವರುಷಗಳ ಕಾಲ ನಡೆಯುತ್ತಿತ್ತೆಂದು ಆ ಮನೆತನದ ಹಳೆಯ ಕಾಗದ ಪತ್ರಗಳಿಂದ ತಿಳಿದು ಬರುತ್ತದೆ. ಅಲ್ಲದೇ ಇದೇ ಸ್ನಾನಘಟ್ಟದ ಮೇಲೆ 16 ಕಂಬಗಳಿಂದ ಕೂಡಿದ ಶಿಲಾಮಂಟಪವನ್ನು ಸಹ ನಿರ್ಮಿಸಲಾಗಿದೆ.

ಅಲ್ಲಿರುವ ಶಿಲಾ ಲೇಖನದಿಂದ ಶಕೆ 1560, ಕೀಲಕನಾಮ ಸಂವತ್ಸರ ಜ್ಯೇಷ್ಠ ವದ್ಯ ತ್ರಯೋದಶಿ ಗುರುವಾರ ಮುಧೋಜಿ ತ್ರಿಮಲ್‌, ಈತನ ಮಗನಾದ ಗೋವಿಂದರಾವಣ ಗೋಪಾಜಿ ಹಾಗೂ ‍ಶ್ಯಾಮಾಜಿ ಇವರು ಈ ಹದಿನಾರು ಕಂಬದ ಮಂಟಪದ ಕೆಲಸವನ್ನು ಪೂರ್ಣಗೊಳಿಸಿದರೆಂಬುದು ತಿಳಿದು ಬರುತ್ತದೆ.

ನರಸಿಂಹಪುರದಲ್ಲಿರುವ ದೇವಾಲಯಗಳಲ್ಲಿ ಎಲ್ಲಕ್ಕಿಂತಲೂ ಅತಿ ಪ್ರಾಚೀನವಾದ ಹಾಗೂ ಗಟ್ಟಿಮುಟ್ಟಾದ ದೇವಾಲಯ ಇದು. ದೇವಾಲಯದ ಮ‍ಧ್ಯಭಾಗದಲ್ಲಿ ಅಶ್ವತ್ಥರೂಪಿ ನೃಸಿಂಹ, ಗಣಪತಿ, ಮಾರತಿ ಹಾಗೂ ಶಿವಲಿಂಗಗಳ ದೇವಾಲಯಗಳಿವೆ. ದೇವಾಲಯದ ಹಿಂಭಾಗದಲ್ಲಿ ಅತೀ ಹಳೆಯದಾದ ವಟವೃಕ್ಷವಿದ್ದು, ಅದನ್ನು ಅಕ್ಷಯವಟವೆಂದು ಪೂಜಿಸುವುದುಂಟು.

ನೀರಾ ಹಾಗೂ ಭೀಮಾ ನದಿಗಳ ಮೇಲೆ ಸ್ನಾನಘಟ್ಟವನ್ನು ನಿರ್ಮಿಸಿದವರ ಹೆಸರುಗಳೂ ಇವೆ. ಕುಲಕರ್ಣಿ, ಜೀನಸೀವಾರೆ, ಲವುಲತರ, ಗಂಗಾ ಖೇಡಕರ, ರಾಫೇಲಕರ, ಬಾಬಾ ಖಾವಡೇಕರ, ಗುಡಸಾಲಕರ ಕವಡೆ ಹೀಗೆ ಅನೇಕರಿಂದ ಈ ಸ್ನಾನಘಟ್ಟಗಳು ನಿರ್ಮಾಣಗೊಂಡಿವೆ. ಆದಿ ಶಂಕರಾಚಾರ್ಯರೂ ಸಹ ಈ ದೇವನನ್ನು ಕುರಿತು ಸ್ತೋತ್ರ ಮಾಡಿದ್ದಾರೆ. ಆದರೆ ಸಂಪೂರ್ಣ ನೃಸಿಂಹ ಕ್ಷೇತ್ರವು ಈಗ ಮಾಧ್ವ ಸಂಪ್ರದಾಯವಾದಿಗಳ ಕೈಯಲ್ಲಿದೆ. ಮಾಧ್ವ ಪೀಠಾಧಿಪತಿಗಳೆಲ್ಲರೂ ಈ ಕ್ಷೇತ್ರಕ್ಕೆ ತಪ್ಪದೇ ಬಂದು ಹೋಗುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi