ದಕ್ಷಿಣ ಕನ್ನಡದ ಶ್ರೀರಾಮನವಮಿ ವಿಶೇಷ ಪಾನಕಗಳು
ಬಿಸಿಲ ಕೆಂಪಿಗೆ ತಂಪು ಪಾನೀಯಗಳು
ಭಾರತದಾದ್ಯಂತ ಚೈತ್ರ ಶುಕ್ಲ ಪಕ್ಷದ ಒಂಭತ್ತನೆಯ ದಿನ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಅಂದು ಪೂಜಾ ಸಮಯದಲ್ಲಿ ವಿಶೇಷವಾಗಿ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ಶ್ರೀರಾಮನಿಗರ್ಪಿಸಿ ಪ್ರಸಾದರೂಪವಾಗಿ ಸ್ವೀಕರಿಸುತ್ತಾರೆ.
ಇಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಮಾಡುವ ವಿಶೇಷ ಪಾನಕ, ಮಜ್ಜಿಗೆಯನ್ನು ಈ ಸಂಚಿಕೆಯಲ್ಲಿ ಕೊಡಲಾಗಿದೆ. ತಮಗಿಷ್ಟ ಇರುವ ಯಾವುದೇ ಪಾನಕವನ್ನು ಮಾಡಿ ಸ್ವೀಕರಿಸಿ. ಇದನ್ನು ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ಇತರೇ ದಿನಗಳಲ್ಲಿ ಬಿಸಿಲಿನ ಬೇಗೆಯಲ್ಲಿ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿರಿಸಲು ಮಾಡಿ ಕುಡಿಯಿರಿ.
ಹೆಸರುಕಾಳು ಹಾಲಿನ ಪಾನಕ

ಬೇಕಾಗುವ ಸಾಮಗ್ರಿಗಳು:
1 ಬಟ್ಟಲು ಹೆಸರುಕಾಳು
¾ ಬಟ್ಟಲು ಬೆಲ್ಲದಪುಡಿ
2 ಚಿಟಿಕೆ ಉಪ್ಪು
1 ಚಮಚ ಏಲಕ್ಕಿ ಪುಡಿ
ಮಾಡುವ ವಿಧಾನ:
ಹಿಂದಿನ ರಾತ್ರಿಯೇ ಹೆಸರುಕಾಳನ್ನು ನೀರಿನಲ್ಲಿ ನೆನೆಸಿ. ಮರುದಿನ ಬೆಳಗ್ಗೆ ನೆನೆದ ಹೆಸರುಕಾಳನ್ನು 2-3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಲ್ಪ ಸ್ವಲ್ಪ ನೀರು ಬೆರೆಸಿ ರುಬ್ಬಿ. ರುಬ್ಬಿದಾಗ ಬರುವ ಹಾಲು ಹಾಗೂ ಚರಟವನ್ನು ಜರಡಿ ಹಿಡಿದು ಬೇರ್ಪಡಿಸಿ. ಮತ್ತೊಮ್ಮೆ ಚರಟಕ್ಕೆ ನೀರು ಬೆರೆಸಿ ರುಬ್ಬಿ. ಮತ್ತೆ ಒಂದು ಪಾತ್ರೆಯಲ್ಲಿ ಜರಡಿ ಹಿಡಿದು ಸಂಪೂರ್ಣವಾಗಿ ಹಾಲನ್ನು ಹಿಂಡಿ ತೆಗೆಯಿರಿ. ನಂತರ ಚೆನ್ನಾಗಿ ಕುಟಿ ಪುಡಿ ಮಾಡಿದ ಏಲಕ್ಕಿ ಪುಡಿಯನ್ನು ಬೆರೆಸಿ. ಪಾನಕವನ್ನು ತೀರಾ ತೆಳುಮಾಡದೇ ಹಾಗೇ ಗಟ್ಟಿ ಹಿಟ್ಟಿನಂತೆ ಮಾಡದೇ ಹದವಾಗಿ ನೀರು ಬೆರೆಸಿ ಜೊತೆಗೆ ಚಿಟಿಕೆ ಉಪ್ಪು ಬೆರೆಸಿ. ನಂತರ ಸೇವಿಸಿ.
ಕರ್ಬೂಜದ ಪಾನಕ (ಸಿದ್ದೋಟಾದ ಎಸಾಳೆ)

ಬೇಕಾಗುವ ಸಾಮಗ್ರಿಗಳು:
1 ಹದಗಾತ್ರದ ಕರ್ಬೂಜದ ಹಣ್ಣು
2 ಅಚ್ಚು ಬೆಲ್ಲ
1 ತೆಂಗಿನ ಕಾಯಿ
4 ಅಥವಾ 5 ಏಲಕ್ಕಿ ಬೀಜ
ಮಾಡುವ ವಿಧಾನ:
ಕರ್ಬೂಜದ ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಚಿಕ್ಕ ಚಿಕ್ಕ ಚೂರು ಮಾಡಿಟ್ಟುಕೊಳ್ಳಿ. ತೆಂಗಿನಕಾಯಿಯನ್ನು ತುರಿದಿಡಿ. ಬೆಲ್ಲ ಪುಡಿಮಾಡಿ, ಸ್ವಲ್ಪ ಬೆಲ್ಲವನ್ನು ಹಣ್ಣಿನ ಹೋಳುಗಳಿಗೆ ಹಾಕಿ ಬೆರೆಸಿಡಿ.
ನಂತರ ತೆಂಗಿನಕಾಯಿ, ಏಲಕ್ಕಿ ಬೀಜ ಮತ್ತು ಉಳಿದ ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿ. ಹಣ್ಣಿನ ಕಾಲುಭಾಗದ ಹೋಳುಗಳನ್ನು ಪಾನಕ ಗಟ್ಟಿಯಾಗಿ ಬರಲು ರುಬ್ಬುವಾಗ ಹಾಕಬಹುದು. ರುಬ್ಬಿದ ತಂಗಿನ ಹಾಲಿನ ಮಿಶ್ರಣಕ್ಕೆ ಪಾನಕ ತೀರ ತೆಳ್ಳಗಾಗದಂತೆ ನೋಡಿಕೊಂಡು ನೀರು ಬೆರೆಸಿ ಮತ್ತು ಬೆಲ್ಲ ಬೆರೆಸಿಟ್ಟು ಕರ್ಬೂಜದ ಹಣ್ಣಿನ ಚೂರುಗಳನ್ನು ಸೇರಿಸಿ ನಂತರ ಕುಡಿಯಿರಿ.
ರಾಗಿ ಹಾಲಿನ ಪಾನಕ

ಬೇಕಾಗುವ ಸಾಮಗ್ರಿಗಳು:
1 ಬಟ್ಟಲು ರಾಗಿ
1 ಬಟ್ಟಲು ಬೆಲ್ಲದ ಪುಡಿ
1 ಚಮಚ ಏಲಕ್ಕಿ ಪುಡಿ
ಮಾಡುವ ವಿಧಾನ:
ರಾಗಿಯನ್ನು 2 ಗಂಟೆ ಮೊದಲು ನೀರಿನಲ್ಲಿ ನೆನೆಸಿ. ನಂತರ ಚೆನ್ನಾಗಿ ತೊಳೆದು ಸ್ವಲ್ಪ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದಾಗ ಬರುವ ಹಾಲನ್ನು ಜರಡಿಹಿಡಿದು ಸೋಸಿ ತೆಗೆಯಿರಿ.
ಹಾಲಿನಿಂದ ಬೇರ್ಪಟ್ಟ ಚರಟಕ್ಕೆ ಮತ್ತೆ ನೀರು ಹಾಕಿ ಹೀಗೆ ಎರಡು ಮೂರು ಬಾರಿ ರುಬ್ಬಿ ಸಂಪೂರ್ಣವಾಗಿ ರಾಗಿಯಿಂದ ಹಾಲು ಬರುವವರೆಗೆ ಸೋಸಿ ತೆಗೆಯಿರಿ. ರಾಗಿ ಹಾಲಿಗೆ ಅದರ ಒಂದು ಪಟ್ಟು ನೀರು ಬೆರೆಸಿ ತೆಳ್ಳಗೆ ಮಾಡಿಕೊಳ್ಳಿ. ನಂತರ ಪುಡಿಮಾಡಿದ ಬೆಲ್ಲ ಹಾಗೂ ಏಲಕ್ಕಿ ಪುಡಿ ಬೆರೆಸಿ. ಎಲ್ಲರೂ ಕುಡಿಯಿರಿ. ಹೆಸರುಕಾಳು ಹಾಗೂ ರಾಗಿಯನ್ನು ನೀರಿನಲ್ಲಿ ನೆನಸದೆ ಪರಿಮಳ ಬರುವಂತೆ ಹದವಾಗಿ ಬಾಣಲಿಯಲ್ಲಿ ಹುರಿದು ಆರಿದ ನಂತರ ಪುಡಿ ಮಾಡಿ, ನಂತರ ನೀರು ಬೆರೆಸಿ ಮೇಲೆ ತಿಳಿಸಿದ ವಿಧಾನದ ಮೂಲಕ ಪಾನಕ ಮಾಡಬಹುದು.
ಕರಿಮೆಣಸು-ಶುಂಠಿ ಪಾನಕ

ಬೇಕಾಗುವ ಸಾಮಗ್ರಿಗಳು:
4-5 ಲಿಂಬೆಹಣ್ಣು
8-10 ಕರಿಮೆಣಸು
1 ಇಂಚು ಉದ್ದದ ಹಸಿ ಶುಂಠಿ
2 ಅಚ್ಚು ಬೆಲ್ಲ
ಚಿಟಿಕೆ ಉಪ್ಪು
2 ಚಮಚ ಏಲಕ್ಕಿ ಪುಡಿ
ಮಾಡುವ ವಿಧಾನ:
ಮೊದಲು ಲಿಂಬೆಹಣ್ಣಿನ ರಸ ತೆಗೆದಿಟ್ಟುಕೊಳ್ಳಿ. ಬೀಜವನ್ನು ತೆಗೆದು ಹಾಕಿ. ಶುಂಠಿಯನ್ನು ಜಜ್ಜಿ ರಸವನ್ನು ಸೋಸಿಟ್ಟುಕೊಳ್ಳಿ. ನಂತರ ಕರಿಮೆಣಸನ್ನು ನುಣ್ಣಗೆ ಪುಡಿ ಮಾಡಿ.
ಪಾನಕ ತಯಾರಿಸುವ ಒಂದು ಗಂಟೆ ಮೊದಲೇ ಪುಡಿ ಮಾಡಿದ ಬೆಲ್ಲಕ್ಕೆ ನೀರು ಬೆರೆಸಿಟ್ಟಲ್ಲಿ ಬೆಲ್ಲ ಚೆನ್ನಾಗಿ ಕರಗುತ್ತದೆ. 4-5 ಲಿಂಬೆ ಹಣ್ಣಿನ ರಸಕ್ಕೆ ದೊಡ್ಡ ಲೋಟದಲ್ಲಿ 10-12 ಲೋಟ ಪಾನಕ ತಯಾರಿಸಬಹುದು. ಕರಿಗಿದ ಬೆಲ್ಲದ ದ್ರಾವಣಕ್ಕೆ ನಿಂಬೆರಸ, ಶುಂಠಿರಸ, ಕರಿಮೆಣಸಿನ ಪುಡಿ, ಉಪ್ಪು ಹಾಗೂ ಏಲಕ್ಕಿಪುಡಿ ಬೆರೆಸಿ. ಪಾನಕ ಸ್ವಲ್ಪ ಖಾರವಾಗಿರಬೇಕೆನಿಸಿದಲ್ಲಿ ಕರಿಮೆಣಸು ಹಾಗೂ ಶುಂಠಿಯನ್ನು ಹೆಚ್ಚಾಗಿ ಹಾಕಬೇಕು.
ಬೆರಸಿದ ಮಜ್ಜಿಗೆ

ಬೇಕಾಗುವ ಸಾಮಗ್ರಿಗಳು:
2 ಲೋಟ ಬೆಣ್ಣೆ ಕಡೆದು ತೆಗೆದ ಮಜ್ಜಿಗೆ
ರುಚಿಗೆ ತಕ್ಕಷ್ಟು ಉಪ್ಪು
1 ಚಿಟಿಕೆ ಇಂಗಿನ ಪುಡಿ
2 ಚಮಚ ಖಾದ್ಯತೈಲ
½ ಚಮಚ ಸಾಸಿವೆ
2 ಕೆಂಪು ಮೆಣಸಿನಕಾಯಿ
ಮಾಡುವ ವಿಧಾನ:
ಮಜ್ಜಿಗೆಗೆ 1 ಪಟ್ಟು ನೀರು ಬೆರೆಸಿ. ಉಪ್ಪು ಹಾಕಿಡಿ. ಒಗ್ಗರಣೆಗೆ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲು ಸಾಸಿವೆ ಹಾಕಿ ಸಿಡಿದ ನಂತರ ಉರಿ ಆರಿಸಿ ಎಣ್ಣೆ ಬಿಸಿಯಿರುವಾಗಲೇ ಇಂಗಿನಪುಡಿ ಮತ್ತು ಮೆಣಸಿನಕಾಯಿ ಚೂರುಗಳನ್ನು ಹಾಕಿ ಮಜ್ಜಿಗೆಗೆ ಬೆರೆಸಿ. ಮಜ್ಜಿಗೆ ಹುಳಿಯಿದ್ದರೇ ಒಂದು ಚಮಚ ಸಕ್ಕರೆ ಹಾಕಿ ಸೇವಿಸಿ.






Leave a Reply