ಧರ್ಮ-ಪ್ರ‍ಶ್ನೆ

ವೇದವ್ಯಾಸ ವಿರಚಿತ ಮಹಾಭಾರತದ ಗ್ರಂಥಾವಲೋಕನ ಮಾಡುತ್ತಾ ಮುಂದುವರಿದಂತೆ ಅತ್ಯಪರೂಪದ ಭಾಗವೊಂದು ಗೋಚರವಾಗುವುದು.

ಪಾಂಡವರು ಕೌರವರೊಡನೆ ದ್ಯೂತವಾಡಿ ತಮ್ಮ ರಾಜ್ಯಕೋಶ ಕಳೆದುಕೊಂಡು ವನವಾಸದಲ್ಲಿರುವಾಗ ಸ್ವತಃ ಯಮಧರ್ಮರಾಜನಿಂದ ಪರೀಕ್ಷೆಗೊಳಗಾಗಬೇಕಾದ ಘಟನೆಯಿಂದ ವಿದ್ವತ್ಪೂರ್ಣ ಪ್ರ‍ಶ್ನೋತ್ತರವೊಂದು ಯಕ್ಷರೂಪಿ ಯಮಧರ್ಮರಾಯ ಹಾಗೂ ಧರ್ಮರಾಯನ ನಡುವೆ ನಡೆದಿರುವುದು, ಜಗತ್ತಿಗೆ ಮಾರ್ಗದರ್ಶನ ನೀಡಿರುವುದು ಪ್ರಸ್ತುತ ಲೇಖನ.

ಒಂದೊಮ್ಮೆ ಬ್ರಾಹ್ಮಣನೊಬ್ಬನು ತನ್ನಯಜ್ಞ ಯಾಗಾದಿಗಳಲ್ಲಿ ನಿರತನಾಗಿ ವನವಾಸಿಯಾಗಿದ್ದಾಗ – ಯಜ್ಞಾಗ್ನಿ ಉತ್ಪಾದಿಸುವ ಅರಣಿ’ಯನ್ನು ಪಕ್ಕದ ಮರದ ಕೊಂಬೆಯೊಂದರ ಸಂದಿಯಲ್ಲಿಟ್ಟಾಗ – ಎಲ್ಲಿಂದಲೋ ಆಗಮಿಸಿದ ಜಿಂಕೆಯೊಂದು ತನ್ನ ಕೋಡುಗಳನ್ನು ಮರಕ್ಕೆ ಉಜ್ಜಿದ ಘಟನೆ ನಡೆಯಿತು. ಆಗ ಮರದ ಸಂದಿಯಲ್ಲಿದ್ದ ಅರಣಿಯು ಜಿಂಕೆಯ ಕೋಡುಗಳ ನಡುವೆ ಸಿಕ್ಕಿಹಾಕಿಕೊಂಡಾಗ ಭಯಭೀತ ಜಿಂಕೆಯು ಓಟಕಿತ್ತಿತು.

ಆಗ ಆ ಬ್ರಾಹ್ಮಣ ತನ್ನ ಅರಣಿಯಿಲ್ಲದೆ ಅಗ್ನಿ ಉತ್ಪಾದಿಸುವ ಕ್ರಿಯೆ ಮಾಡಲಾರದಾದ – ಆಗ ಅವನಿಗೆ ಅತಿ ಸಮೀಪದಲ್ಲಿ ಕ್ಷತ್ರಿಯರಾಜರಾದ ಪಾಂಡವರು ವಾಸವಿರುವ ಸಂಗತಿ ತಿಳಿದು – ಧರ್ಮರಾಯನನ್ನು ಸಂಪರ್ಕಿಸಿ – ತನ್ನ ʼಅರಣಿ’ ಕಳೆದುಕೊಂಡ ವಿಧಾನ ತಿಳಿಸಿ, ಅದನ್ನು ಹುಡುಕಿಸಿಕೊಡಲು ವಿನಂತಿಸಿದ.

ಆಗ ಧರ್ಮರಾಯ ತನ್ನ ಕಿರಿಯ ತಮ್ಮ ಸಹದೇವನನ್ನು ಅರಣಿ ಹುಡುಕುವುದಕ್ಕಾಗಿ ಕಳುಹಿಸಿದ. ಜೊತೆಯಲ್ಲಿ ತನ್ನ ಇತರ ಮೂವರು ತಮ್ಮ೦ದಿರನ್ನೂ ಕಳುಹಿಸಿದ ಧರ್ಮರಾಯ. ಎಷ್ಟು ಹುಡುಕಿದರೂ ಚಿಂಕೆಯ ಪತ್ತೆ ಮಾಡಲಾಗದೆ – ಬಳಲಿದಾಗ ದೂರದಲ್ಲಿ ಕಾಣುವ ಸರೋವರದಿಂದ ನೀರು ಕುಡಿಯಲು ಸಹದೇವ ತೆರಳಿದ.

ಅಲ್ಲಿಗೆ ಹೋದ ಸಹದೇವನಿಗೆ ಅಶರೀರವಾಣಿಯೊಂದು ಕೇಳಿ ಬಂತು. ಅಶರೀರವಾಣಿಯಂತೆ ಆ ಕೊಳದಲ್ಲಿ ನೀರು ಕುಡಿಯಬೇಕಾದರೆ – ಅದರ ಯಜಮಾನನಾದ ಯಕ್ಷನ ಪ್ರಶ್ನೆಗೆ ಉತ್ತರಿಸಬೇಕು. ಆದರೆ ಕ್ಷುದ್ಭಾಧೆಯಿಂದ ತತ್ತರಿಸಿದ ಸಹದೇವ ನೀರು ಕುಡಿದಾಗ – ತಲೆತಿರುಗಿ ಬಿದ್ದು ಶವವಾದ. ಸಹದೇವನಿಗಾಗಿ ಬಂದ ನಕುಲ, ಅರ್ಜುನ ಹಾಗೂ ಭೀಮಸೇನರು – ಯಕ್ಷನ ಪ್ರಶ್ನೆಯನ್ನು ಧಿಕ್ಕರಿಸಿ ನೀರು ಕುಡಿದಾಗ – ನಾಲ್ವರೂ ಸಹೋದರರೂ ಮೃತಪಟ್ಟರು.

ಆಗ ಸ್ವತಃ ಧರ್ಮರಾಯ ತಮ್ಮಂದಿರನ್ನು ಹುಡುಕುತ್ತಾ ಆ ಸರೋವರಕ್ಕೆ ಬಂದಾಗ ಯಕ್ಷನ ಪ್ರಶ್ನೆಗೆ ಸ್ಪಂದಿಸಿ – ಪ್ರಶ್ನೆ ಕೇಳುವಂತೆ ವಿನಂತಿಸಿದ. ತನ್ನ ತಿಳಿವಳಿಕೆಗೆ ಬಂದ ಪ್ರಶ್ನೆಗೆ ತಾನು ಉತ್ತರಿಸುವುದಾಗಿ ಭರವಸೆ ನೀಡಿದ ಧರ್ಮರಾಯನ ನುಡಿಗೆ ತೃಪ್ತಿಪಟ್ಟ ಯಕ್ಷನು ಅಶರೀರನಾಗಿಯೇ ಪ್ರಶ್ನೆ ಕೇಳಲಾರಂಭಿಸಿದ. ಪ್ರಶ್ನೆಗಳ ಮೂಲಕ ಲೋಕವ್ಯವಹಾರವನ್ನೇ ಎದುರಿಗಿರಿಸಿದ ಯಕ್ಷ.

ಪ್ರಶ್ನೆ – 1 : ಭೂಮಿಗಿಂತಲೂ ದೊಡ್ಡದಾವುದು ?

ಉತ್ತರ : ತಾಯಿಯ ತಾಳ್ಮೆಯು ಭೂಮಿಗಿಂತ ದೊಡ್ಡದು.

ಪ್ರಶ್ನೆ – 2 : ಆಕಾಶಕ್ಕಿಂತ ಎತ್ತರ ಯಾವುದು ?

ಉತ್ತರ : ತಂದೆಯ ವ್ಯಕ್ತಿತ್ವ ಆಕಾಶಕ್ಕಿಂತ ಎತ್ತರ.

ಪ್ರಶ್ನೆ – 3 : ಗಾಳಿಗಿಂತಲೂ ವೇಗವಾಗಿ ಚಲಿಸುವುದು ಯಾವುದು?

ಉತ್ತರ: ಗಾಳಿಗಿಂತ ವೇಗವಾಗಿ ಚಲಿಸುವುದು ಮನಸ್ಸು.

ಪ್ರಶ್ನೆ – 4 : ಹುಲ್ಲಿಗಿಂತ ಹೆಚ್ಚಾಗಿ ಬೆಳೆಯುವುದೇನು?

ಉತ್ತರ : ಚಿಂತೆಯು ಹುಲ್ಲಿಗಿಂತ ಹೆಚ್ಚಾಗಿ ಬೆಳೆಯುತ್ತದೆ.

ಪ್ರಶ್ನೆ – 5 : ಪ್ರವಾಸಿಗನಿಗೆ ಮಿತ್ರರು ಯಾರು ?

ಉತ್ತರ : ಪ್ರವಾಸಿಗನಿಗೆ – ಇನ್ನೊಬ್ಬ ಸಹ ಪ್ರವಾಸಿಯೇ ಮಿತ್ರನು.

ಪ್ರಶ್ನೆ – 6 : ಗೃಹಸ್ಥನಿಗೆ ಮಿತ್ರನಾರು ?

ಉತ್ತರ : ಗೃಹಸ್ಥನಿಗೆ ಪತ್ನಿಯೇ ಮಿತ್ರಳು.

ಪ್ರಶ್ನೆ – 7 : ರೋಗಿಗೆ ಮಿತ್ರನಾರು ?

ಉತ್ತರ : ರೋಗಿಗೆ ವೈದ್ಯನೇ ಮಿತ್ರನು.

ಪ್ರಶ್ನೆ – 8 : ಧನಗಳಲ್ಲಿ ಉತ್ತಮವಾದುದು ಯಾವುದು ?

ಉತ್ತರ : ವಿದ್ಯೆಯೇ ಉತ್ತಮ ಧನ.

ಪ್ರಶ್ನೆ – 9 : ಲಾಭಗಳಲ್ಲಿ ಉತ್ತಮವು ಯಾವುದು ?

ಉತ್ತರ : ಆರೋಗ್ಯವೇ ಶ್ರೇಷ್ಠವಾದ ಲಾಭ.

ಪ್ರಶ್ನೆ – 10 : ಅತ್ಯುತ್ತಮ ಸುಖ ಯಾವುದು ?

ಉತ್ತರ : ಸಂತೃಪ್ತಿಯೇ ಶ್ರೇಷ್ಠವಾದ ಸುಖ.

ಪ್ರಶ್ನೆ – 11 : ಮನುಷ್ಯನು ಯಾವುದನ್ನು ತ್ಯಜಿಸಿದರೆ ಜನರಿಗೆ ಪ್ರಿಯನಾಗುತ್ತಾನೆ?

ಉತ್ತರ : ದುರಭಿಮಾನವನ್ನು ಬಿಟ್ಟರೆ ಸರ್ವರಿಗೂ ಪ್ರಿಯನಾಗುತ್ತಾನೆ.

ಪ್ರಶ್ನೆ – 12 : ಯಾವುದನ್ನು ಬಿಟ್ಟರೆ ಸುಖಿಯಾಗುತ್ತಾನೆ?

ಉತ್ತರ:  ಲಾಭವನ್ನು ತ್ಯಜಿಸಿದರೆ ಪರಮ ಸುಖಿಯಾಗುತ್ತಾನೆ.

ಪ್ರಶ್ನೆ – 13 : ಯಾವುದನ್ನು ಬಿಟ್ಟರೆ ಧನಿಕನಾಗುತ್ತಾನೆ?

ಉತ್ತರ : ಆಸೆಯನ್ನು ಬಿಟ್ಟರೆ ಧನಿಕನಾಗುತ್ತಾನೆ.

ಪ್ರಶ್ನೆ – 14 : ಮನುಷ್ಯನ ದೊಡ್ಡ ಶತ್ರು ಯಾವುದು ?

ಉತ್ತರ : ಕೋಪವೇ ಮನುಷ್ಯನ ದೊಡ್ಡ ಶತ್ರು.

ಪ್ರಶ್ನೆ – 15 : ಕೊನೆಯಿಲ್ಲದ ರೋಗವು ಯಾವುದು ?

ಉತ್ತರ : ದುರಾಸೆಯು ಮನುಷ್ಯನ ಕೊನೆಯಿಲ್ಲದ ರೋಗ.

ಪ್ರಶ್ನೆ – 16 : ಸಾಧು ಪುರುಷನು ಯಾರು ?

ಉತ್ತರ : ಸರ್ವರ ಹಿತವನ್ನು ಬಯಸುವವನು ಸಾಧು ಪುರುಷ.

ಪ್ರಶ್ನೆ – 17 : ಪ್ರಿಯವಾಗಿ ಮಾತನಾಡುವುದರ ಫಲವೇನು ?

ಉತ್ತರ: ಪ್ರಿಯವಾಗಿ ಮಾತನಾಡುವವನು ಸರ್ವಜನಪ್ರಿಯನಾಗುತ್ತಾನೆ.

ಪ್ರಶ್ನೆ – 18 :ವಿವೇಚನೆಯಿಂದ ಕೆಲಸ ಮಾಡುವುದರ ಫಲವೇನು?

ಉತ್ತರ : ವಿವೇಚನೆಯಿಂದ ಕೆಲಸ-ಕಾರ್ಯದಲ್ಲಿ ಯಶಸ್ಸು.

ಪ್ರಶ್ನೆ – 19 : ಹೆಚ್ಚು ಮಿತ್ರರನ್ನು ಪಡೆದೇನು ಫಲ ?

ಉತ್ತರ : ಹೆಚ್ಚು ಮಿತ್ರರಿಂದ ಸುಖ ಶಾಂತಿ ಸಿಗುತ್ತದೆ.

ಪ್ರಶ್ನೆ – 20 : ಧರ್ಮದಲ್ಲಿ ನಡೆಯುವವನಿಗೆ ಏನು ದೊರಕುತ್ತದೆ?

ಉತ್ತರ : ಧರ್ಮ ಪಥದಲ್ಲಿ ನಡೆಯುವವನಿಗೆ ಸದ್ಗತಿ ದೊರೆಯುತ್ತದೆ.

ಪ್ರಶ್ನೆ – 21 : ಜಗತ್ತಿನಲ್ಲಿ ಅಮೃತ ಯಾವುದು ?

ಉತ್ತರ : ಗೋವಿನ ಹಾಲೇ ಅಮೃತ.

ಪ್ರಶ್ನೆ – 22 : ಸನಾತನ ಧರ್ಮ ಯಾವುದು ?

ಉತ್ತರ: ವಿನಾಶವಿಲ್ಲದ ಚಿರಂತನವಾದ ಸರ್ವರನ್ನೂ ಕಾಪಾಡುವ ಧರ್ಮ.

ಪ್ರಶ್ನೆ – 23 : ಸಕಲ ಜಗತ್ತನ್ನು ಏನು ವ್ಯಾಪಿಸಿದೆ ?

ಉತ್ತರ : ಸಕಲ ಜಗತ್ತು ವಾಯುವಿನಿಂದ ತುಂಬಿದೆ.

ಪ್ರಶ್ನೆ – 24 : ಧರ್ಮದ ಮೂಲ ಸಾಧನೆ ಯಾವುದು ?

ಉತ್ತರ : ತಪಸ್ಯ, ಸತ್ಯತೆ, ಸ್ಫೂರ್ತಿ ಹಾಗೂ ದಯೆ ಧರ್ಮದ ಮೂಲ ಸಾಧನ.

ಪ್ರಶ್ನೆ – 25 : ಯಶಸ್ಸನ್ನು ಗಳಿಸುವುದು ಹೇಗೆ ?

ಉತ್ತರ: ದಾನ ನೀಡುವುದರೊಂದಿಗೆ ಯಶಸ್ಸುಗಳಿಸಬಹುದು.

ಪ್ರಶ್ನೆ – 26 : ಸ್ವರ್ಗ ಪ್ರಾಪ್ತಿ ಹೇಗೆ ?

ಉತ್ತರ : ಸತ್ಯ ಮಾರ್ಗದಲ್ಲಿ ಮುನ್ನಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ.

ಪ್ರಶ್ನೆ – 27 : ಸಮಗ್ರವಾದ ಸುಖವು ಯಾವುದು ?

ಉತ್ತರ : ಸದಾಚಾರದಿಂದ ಸಮಗ್ರ ಸುಖ ಪ್ರಾಪ್ತಿ.

ಪ್ರಶ್ನೆ – 28 : ಅತ್ಯಾಶ್ಚರ್ಯದ ಸಂಗತಿ ಯಾವುದು ?

ಉತ್ತರ : ತಮ್ಮ ಎದುರಿನಲ್ಲಿ ನೂರಾರು ಜೀವಿಗಳು ಪ್ರಾಣ ಬಿಡುತ್ತಿದ್ದರೂ – ತಾವು ಮಾತ್ರ ಶಾಶ್ವತವಾಗಿರುವಂತೆ ವರ್ತಿಸುವುದೇ ಅತ್ಯಾಶ್ಚರ್ಯಕರ ಸಂಗತಿ.

ತನ್ನ 28 ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ ಧರ್ಮರಾಯನ ಸದ್ವರ್ತನೆಯಿಂದ ಸಂತೋಷ ಹೊಂದಿ – ಧರ್ಮರಾಯನನ್ನು ನೇರ ಸ೦ಬೋಧಿಸಿ ಹೇ ರಾಜನ್, ನಿನ್ನ ಉತ್ತರ ಸಂತೃಪ್ತಿದಾಯಕವಿದೆ. ಆದ ಕಾರಣ ನಿನ್ನ ಈ ನಾಲ್ವರು ತಮ್ಮಂದಿರಲ್ಲಿ ಯಾರನ್ನು ಬದುಕಿಸಬೇಕು? ವರ ಬೇಡೆಂದು ಕೇಳಿದಾಗ – ಧರ್ಮರಾಯ ತನ್ನ ಮಾದ್ರಿ ತಾಯಿಯ ಸುತ ನಕುಲನನ್ನು ಬದುಕಿಸಲು ವರ ಬೇಡುತ್ತಾನೆ.

ಆಗ ಅಶರೀರನಾಗಿದ್ದ ಯಕ್ಷ: ಧರ್ಮರಾಯ ನಿನ್ನ ಒಡ ಹುಟ್ಟಿದ ತಮ್ಮಂದಿರು ಇಬ್ಬರಿದ್ದರೂ – ನೀನು ನಿನ್ನ ಚಿಕ್ಕಮ್ಮನ ಮಗನ ಪ್ರಾಣ ಬೇಡುತ್ತಿರುವುದು ಆಶ್ಚರ್ಯವಾಗಿದೆಯಲ್ಲ ಎಂದಾಗ – ಧರ್ಮರಾಯ ನೀಡಿದ ಉತ್ತರ ಸಜ್ಜನಿಕೆಯ ಪರಮಾವಧಿಯಾಗಿತ್ತು.

ಯಕ್ಷದೇವ ನನ್ನ ತೀರ್ಥರೂಪರಿಗೆ ಈರ್ವರು ಪತ್ನಿಯರು – ನನ್ನ ತಾಯಿ ಕುಂತಿ ಹಾಗೂ ಮಾದ್ರಿದೇವಿ – ನನ್ನ ತಾಯಿಗೆ ಮೂವರು ಮಕ್ಕಳು – ನಾನು, ಭೀಮ, ಅರ್ಜುನ, ನನ್ನ ಮಾದ್ರಿ ತಾಯಿಗೆ – ಈರ್ವರು ಮಕ್ಕಳು ನಕುಲ ಸಹದೇವರು. ನನ್ನ ತಾಯಿಗೆ ಸಾಂತ್ವನ ನೀಡಲು ನಾನು ಜೀವಂತನಿದ್ದೇನೆ. ಮಾದ್ರಿ ತಾಯಿಗಾಗಿ ನಕುಲನ ಅವಶ್ಯಕತೆಯಿದೆ. ಆದ ಕಾರಣ ನಕುಲನ ಜೀವದಾನ ಬೇಡುತ್ತಿದ್ದೇನೆ.

ಎಂದು ಪ್ರಾರ್ಥಿಸಿದಾಗ – ಪಾಂಡವರನ್ನು ಪರೀಕ್ಷಿಸಲು ಯಕ್ಷರೂಪಿಯಾಗಿ ಬಂದ ಯಮಧರ್ಮರಾಯ ಯುಧಿಷ್ಠಿರನೆದುರು ಪ್ರತ್ಯಕ್ಷನಾಗಿ ಅತ್ಯಂತ ಸಂತೋಷದಿಂದ ಧರ್ಮರಾಯನನ್ನು ಬಿಗಿದಪ್ಪಿ –

ವತ್ಸಾ – ನಿನ್ನ ಅತ್ಯುಚ್ಚ ಮಟ್ಟದ ಚಿಂತನೆಯಿಂದ ಪ್ರಭಾವಿತನಾಗಿದ್ದೇನೆ. ಧರ್ಮ ಚಿಂತನೆಯಲ್ಲಿ ನಿನ್ನನ್ನು ಸರಿಗಟ್ಟಲಾಗದಷ್ಟು ಮೇರು ಪರ್ವತವಾಗಿದ್ದೀಯ. ಪರರಿಗಾಗಿ-ಪರಸೇವೆಗಾಗಿ ನಿನ್ನ ಚಿಂತನೆಯಿಂದ ಸಂತೋಷ ಹೊಂದಿದ್ದೇನೆ. ನಿನ್ನ ಎಲ್ಲ ತಮ್ಮಂದಿರೂ ಪ್ರಾಣದಾನ ಪಡೆದು ನಿನ್ನೊಡನೆ ಲೋಕಕಲ್ಯಾಣಕ್ಕಾಗಿ ತಮ್ಮ ಸೇವೆಯನ್ನು ನೀಡಲೆಂದು ಹರಸಿ ಸ್ವಲೋಕಕ್ಕೆ ಹಿಂತಿರುಗಿದ.

ಯಮಧರ್ಮರಾಯನ ಪೂರ್ಣಾಶೀರ್ವಾದದೊಡನೆ ಯಜ್ಞಾಗ್ನಿಯ ‘ಅರಣಿ’ಯನ್ನು ಪಡೆದು ಬ್ರಾಹ್ಮಣನಿಗೆ ನೀಡಿ ಕೃತಕೃತ್ಯನಾದ ಪಾಂಡವಾಗ್ರಜ – ಧರ್ಮರಾಯ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi