ಪತಿತರಿಗೆ ಮುಕ್ತಿ

ದೇವೋತ್ತಮ ಪರಮಪುರುಷನು ನಮ್ಮ ಮೇಲೆ ತೋರುವ ಕರುಣೆಯೇ ಕೃಪೆ. ಜನ ಅದನ್ನು ಗುರುತಿಸಬಹುದು; ಗುರುತಿಸದೇ ಹೋಗಬಹುದು. ಆದರೆ ಕೃಷ್ಣನ ಕೃಪೆ ಅವರ ಮೇಲೆ ಸದಾ ಇದ್ದೇ ಇರುತ್ತದೆ. ಜಗತ್ತಿನ ಸಕಲ ಕ್ರಿಯೆಗಳಿಗೂ ಕೃಷ್ಣನ ಕೃಪೆಯೇ ಕಾರಣ.

ನಮ್ಮದು ಐಹಿಕ ಶರೀರ. ವೇದ ಜ್ಞಾನಗಳ ಪ್ರಕಾರ ಇದು ನಾವು ಬಯಸಿ, ನಮ್ಮ ಕರ್ಮಾನುಸಾರ ಪಡೆದು ಬಂದಿದ್ದು.

ದ್ವಂದ್ವದಿಂದ ಉಂಟಾಗುವ ಆಸೆ ಮತ್ತು ತಿರಸ್ಕಾರಗಳೆಂಬ ಮಾಯೆಯಿಂದ ಎಲ್ಲ ಜೀವಿಗಳೂ, ಆವೃತರಾಗಿದ್ದಾರೆ, ಹೇ ಭರತನೇ ಎಂದು ಭಗವದ್ಗೀತೆ (7.27) ಹೇಳುತ್ತದೆ.

“ಓ ಅರಿಭಯಂಕರನೇ, ವೈರುಧ್ಯಗಳಿಂದ ಆವೃತವಾದ ಎಲ್ಲ ಜೀವಿಗಳೂ, ಬಯಕೆ ಮತ್ತು ದ್ವೇಷದ ಫಲವಾಗಿ ಭರತನೆಂಬ ಮಾಯೆಯ ಮಕ್ಕಳಾಗಿ ಜನಿಸಿವೆ’ ಎಂದು ಭಗವದ್ಗೀತೆ (7.27) ಹೇಳುತ್ತದೆ.

ಮಾಯಾಧೀನರಾಗಿರುವ ನಾವು ದೇವರನ್ನೇ ದ್ವೇಷಿಸುತ್ತಾ, ಐಹಿಕ ಸುಖದಿಂದ ಸಂತೃಪ್ತಿ ಪಡೆಯಬಹುದೆಂದು ಭ್ರಮಿಸುತ್ತೇವೆ. ಆದ್ದರಿಂದ ನಮ್ಮ ಬಯಕೆಗನುಗುಣವಾಗಿ ನಾವು ತಾಪತ್ರಯಗಳಿಂದ ಬಾಧಿತವಾದ ಈ ಶರೀರ ಪಡೆದಿದ್ದೇವೆ.

ಇಲ್ಲಿ ತಾಪತ್ರಯಗಳೆಂದರೆ ನಮ್ಮ ಶರೀರ, ಮನಸ್ಸಿನಿಂದ ಉಂಟಾಗುವ ನೋವು, ಇತರ ಜೀವಿಗಳಿಂದ ಬರುವ ದುಃಖ ಮತ್ತು ಪ್ರಕೃತಿಯಿಂದಾಗುವ ತೊಂದರೆಗಳು, ಈ ಪೈಕಿ ಅತಿ ಮುಖ್ಯವಾದ ವೇದನೆ ಎಂದರೆ ಜನನ, ಮರಣ, ಸಾವು ಮತ್ತು ರೋಗಗಳಿಂದ ಎದುರಾಗುವ ಕಷ್ಟಕೋಟಲೆಗಳು. ಆದರೂ ಈ ಕ್ಷಣಿಕ, ಐಹಿಕ ಜೀವನದ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡರೆ, ದೇವೋತ್ತಮ ಪರಮ ಪುರುಷನ ಕೃಪೆಯಿಂದ ಈ ಸಂಕಟದಿಂದ ಮುಕ್ತಿ ಪಡೆಯಲು ಸಾಧ್ಯ.

ಮೂಲತಃ ನಾವೆಲ್ಲಾ ಆ ಪರಮಾತ್ಮನ ಅಂಶಗಳು; ಅತಿ ಚಿಕ್ಕ ಅಣುಗಳು. ಕೃಷ್ಣ ಹೇಳುತ್ತಾನೆ; ‘ಎಲ್ಲ ಜೀವಿಗಳೂ ನನ್ನ ಶಾಶ್ವತ ಅಂಶಗಳೇ, ಮನಸ್ಸು ಸೇರಿದಂತೆ ಆರು ಇಂದ್ರಿಯಗಳನ್ನು ಹೊಂದಿರುವ ಎಲ್ಲ ಜೀವಿಗಳೂ ಐಹಿಕ ಪ್ರಪಂಚದಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. (ಭಗವದ್ಗೀತೆ 15.7).

ಈ ಸ್ಥಿತಿಯನ್ನು ಕಡಿದುಕೊಳ್ಳುವುದು ನಮ್ಮಿಂದ ಸಾಧ್ಯವೇ ಇಲ್ಲ. ಮಾಯೆಯಿಂದಾವೃತವಾದ ಈ ಕ್ಷಣಿಕ, ಐಹಿಕ ದೇಹವನ್ನು ನಾವು ಬಯಸಿ ಪಡೆದುಕೊಂಡಿದ್ದರೂ ನಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುವುದು ಸಾಧ್ಯವೇ ಇಲ್ಲ. ಆ ದೇವೋತ್ತಮನ ಕೃಪೆಯಿಂದಾಗಿಯೇ ನಾವು ಈ ಐಹಿಕ ದೇಹವನ್ನು ಪಡೆದಿದ್ದೇವೆ.

ಹಾಗೆಯೇ ಅವನ ಪಾದ ಕಮಲಗಳಿಗೆ ಮರಳುವ ಅವಕಾಶ ನಮಗೆ ಪ್ರಾಪ್ತವಾಗಿರುವುದಕ್ಕೂ ಅವನ ಕೃಪೆಯೇ ಕಾರಣ. ಹೀಗೆ ಆ ದೇವೋತ್ತಮನು ನಮ್ಮ ಮೇಲೆ ನಿರಂತರ ವಿನಾ ಕಾರಣ ಕೃಪಾ ಕಟಾಕ್ಷ ಬೀರುತ್ತಿರುತ್ತಾನೆ. ನಾವು ಅವನ ಅಂಶಗಳಾಗಿರುವುದರಿಂದಲೇ ಅವನಿಗೆ ನಮ್ಮ ಮೇಲೆ ಕರುಣೆ, ಪ್ರೀತಿ. ನಾವು ಅವನನ್ನು ದ್ವೇಷಿಸಿದರೂ, ಅವನನ್ನು ಮರೆತರೂ ಆತನ ಕರುಣೆ ನಮ್ಮ ಮೇಲೆ ಸದಾ ಇದ್ದೇ ಇರುತ್ತದೆ.

ಆತನ ಕೃಪೆಯನ್ನು ‘ಮಾಯೆ’ ಎಂಬ ಸಂಸ್ಕೃತ ಪದ ಚೆನ್ನಾಗಿ ವಿವರಿಸುತ್ತದೆ. ಇಲ್ಲಿ ಮಾಯೆ ಎಂದರೆ, ‘ಶೂನ್ಯ’, ಏನೂ ಇಲ್ಲ ಎಂದರ್ಥ. ಮಾಯಾ ಎಂಬ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಅದೇನೆಂದರೆ, ‘ಭಗವಂತನ ಕರುಣೆ’. ಅದನ್ನು ಹೀಗೆ ವಿವರಿಸಬಹುದು : ಮಾಯಾ ಎಂದರೆ ‘ಮಾಯಾ ಶಕ್ತಿ’, ಐಹಿಕ ಪ್ರಪಂಚ ಎಂದರ್ಥ. ಮಾಯೆ ಎಂದರೆ ನಾಶವಾಗುವಂಥದ್ದು ಅಂದರೆ ನಾವು ಯಾವುದನ್ನು ಶಾಶ್ವತ, ಸರ್ವಸ್ವ ಎಂದು ಭ್ರಮಿಸಿದ್ದೇವೆಯೋ ಅದು.

ಈ 60 ರಿಂದ 100 ವರ್ಷದ ಜೀವನದಲ್ಲಿ ನಾವು ಸಾಂಸಾರಿಕ ಬಂಧನಗಳಲ್ಲಿ ಸಿಲುಕಿ ತೊಳಲಾಡುವುದು, ಕಷ್ಟಪಟ್ಟು ದುಡಿಯುವುದು ಹೀಗೆ ನಿತ್ಯ ಹೋರಾಟ ಸಾಗುತ್ತದೆ. ಈ ಐಹಿಕ ಶರೀರ ಮತ್ತು ಇಂದ್ರಿಗಳಿಂದ ನಿಯಂತ್ರಿತವಾದ ಮನಸ್ಸಿನೊಂದಿಗೆ ಆನಂದಿಸುತ್ತಾ, ಈ ಐಹಿಕ ಸುಖವೇ ಪರಮ ತೃಪ್ತಿ ಎಂದು ಭ್ರಮಿಸುತ್ತೇವೆ.

ನಾವು ಈ ಹೋರಾಟ, ತೊಳಲಾಟ, ಅಲ್ಪತೃಪ್ತಿಯಂಥ ಕ್ಷಣಿಕ ವಿಷಯಗಳು ಮಾಯೆಯಂತೆ ನಮ್ಮನ್ನು ಆವರಿಸಿ, ಇದೇ ಶಾಶ್ವತ ಎಂಬ ಭ್ರಮೆಯಲ್ಲಿ ನಮ್ಮನ್ನು ತೇಲಿಸುತ್ತವೆ. ಸರಳವಾಗಿ ಹೇಳಬೇಕೆಂದರೆ ಯಾವಾಗ ನಾವು ಭಗವಂತನನ್ನು ಮರೆತು, ಅವನಿಲ್ಲದೇ ಈ ಪ್ರಪಂಚವನ್ನು ನೋಡುತ್ತೇವೆಯೋ ಅದೇ ಮಾಯೆ. ಈ ಐಹಿಕ ಪ್ರಪಂಚವನ್ನು ದಾಟಿ ಹೋಗದೇ, ಇಲ್ಲೇ ಇರುವುದು ಮಾಯೆ.

ಇನ್ನೊಂದು ದೃಷ್ಟಿಯಿಂದ ವಿಶ್ಲೇಷಿಸಿದಾಗ ಈ ಮಾಯೆ ಎಂಬುದು ಭಗವಂತನ ಕೃಪೆಯೂ ಹೌದು. ನಾವು ಮಾಯೆಯ ಜೀವನವೇ ಬೇಕೆಂದು ಕೇಳಿದ್ದರಿಂದ ಆತ ಅದನ್ನು ನಮಗೆ ಕರುಣಿಸಿದ್ದಾನೆ. ದಾರಿ ತಪ್ಪಿದ ಮಕ್ಕಳಾದ ನಮ್ಮನ್ನು ಕುಟ್ಟಿ ಪುಡಿ ಮಾಡುವ ಶಕ್ತಿ ಆತನಿಗಿದೆ. ಆದರೂ ನಾವು ಆತನನ್ನೇ ಮರೆಯುತ್ತಾ, ಅವನಿಂದ ದೂರಾಗುತ್ತಾ, ತಪ್ಪು ಮಾಡುತ್ತಾ, ಐಹಿಕ ಸಂತೋಷಗಳಲ್ಲೇ ಕಾಲ ಕಳೆಯುತ್ತಾ ಬದುಕುತ್ತಿರುವಾಗ ಆತ ಅದಕ್ಕೂ ಸದ್ಗತಿಸುತ್ತಾನೆ.

ಈ ಆತ್ಮಘಾತುಕ ದುಸ್ಸಾಹಸ ಮುಂದುವರಿಸುವ ಸ್ವಾತಂತ್ರ್ಯವನ್ನೂ ಆತ ನಮಗೆ ನೀಡುತ್ತಾನೆ. ಶಾಶ್ವತನ, ನಿರಂತರನೂ, ಸಚ್ಚಿದಾನಂದನ (ಸತ್-ಚಿತ್-ಆನಂದ), ಪರಿಪೂರ್ಣ ಆನಂದನೂ, ಪರಮ ಜ್ಞಾನಿಯೂ ಆದ ಆತ ತನ್ನ ಬಳಿ ಸೇರುವ ಮಾರ್ಗವನ್ನು ಸ್ವತಃ ನಮಗೆ ತೋರಿಸಿದ್ದಾನೆ. ಆದರೆ ನಾವು ಅದನ್ನು ಬಿಟ್ಟು ಲೈಂಗಿಕ ಸುಖ, ನಿದ್ದೆ ಇತ್ಯಾದಿ ಐಹಿಕ ಸುಖದ ಮಾರ್ಗದಲ್ಲಿ ಸಾಗುತ್ತಿದ್ದೇವೆ.

ಆತನ ವಿರುದ್ಧವೇ ಬಂಡಾಯ ಎದ್ದಿದ್ದೇವೆ. ಇದನ್ನೂ ಆತ ಬೇಡವೆನ್ನುತ್ತಿಲ್ಲ. ನಮ್ಮ ಈ ಉದ್ಧಟತನವು ಆತನ ಕೃಪೆಯೇ! ಇಷ್ಟೇ ಅಲ್ಲ, ನಾವು ಇನ್ನೂ ಕೆಳ ಮಟ್ಟದ, ತುಚ್ಛ ಪ್ರಾಣಿಗಳಾಗಬೇಕೆಂದು ಅಥವಾ ನರಕವೇ ಬೇಕೆಂದು ಬಯಸಿದರೂ ಅಂಥ ಜನ್ಮವನ್ನೂ ಆತ ಕರುಣಿಸುತ್ತಾನೆ. ಹೀಗೆ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ನಿರಂತರ ಆತ್ಮದ ವಲಸೆ ಪುನರಾವರ್ತನೆ ಆಗುತ್ತಲೇ ಇರುತ್ತದೆ.

ಹೀಗೆ ನಾವು ರಾಕ್ಷಸರಂತೆ ಬದುಕುತ್ತಿದ್ದರೆ ದೇವೋತ್ತಮನು ನಮಗೆ ಅಂಥ ಜೀವನವನ್ನೇ ಕರುಣಿಸುತ್ತಾನೆ. ಆತನ ಸೇವೆ ಮೂಲಕ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡು, ಅವನ ಧಾಮಕ್ಕೆ ಮರಳುವುದು ಈ ಜೀವನದ ಉದ್ದೇಶ. ಆದರೆ ರಾಕ್ಷಸರು ಇದನ್ನು ತಿರಸ್ಕರಿಸಿ, ಮತ್ತೆ ಮತ್ತೆ ಈ ಐಹಿಕ ಜಗತ್ತಿಗೇ ಮರಳುತ್ತಾರೆ.

ಇಲ್ಲಿ ನೋವು-ನಲಿವು, ಹುಟ್ಟು-ಸಾವು, ಶೀತ-ಉಷ್ಣ ಇತ್ಯಾದಿ ವೈರುಧ್ಯದಿಂದ ಕೂಡಿದ ಬದುಕಿನಲ್ಲಿ ಸಿಲುಕಿ ಒದ್ದಾಡುತ್ತಾರೆ. ಇದನ್ನೊಮ್ಮೆ ಕೂಲಂಕಷವಾಗಿ ಅಧ್ಯಯನ ಮಾಡಿ ನೋಡಿದರೆ ಎಲ್ಲವೂ ನಿಮಗೆ ಅರ್ಥವಾಗುತ್ತದೆ. ಇಡೀ ಜಗತ್ತು ದೇವೋತ್ತಮನ ಕರುಣೆಯಿಂದಲೇ ಅಸ್ತಿತ್ವದಲ್ಲಿದೆ.

ಯಾರು ಕಷ್ಟಗಳನ್ನು ಬಯಸುತ್ತಾರೋ ಅವರಿಗೆ ಕಷ್ಟವೇ ದೊರೆತಿದೆ. ಅವರವರ ಬಯಕೆಗನುಗುಣವಾಗಿ ಭಗವಂತನು ಪ್ರತಿಯೊಬ್ಬರಿಗೂ ಬದುಕಿಗೆ ಬೇಕಾದ ಸೌಲಭ್ಯಗಳನ್ನು ಕರುಣಿಸಿದ್ದಾನೆ. ನಿಮಗೆ ಆತನ ಸ್ಪಷ್ಟ ನಿರ್ದೇಶನವಿದೆ. ನಿಮ್ಮನ್ನು ಉದ್ಧರಿಸಿಕೊಳ್ಳುವುದು ಅಥವಾ ನಿಮಗೆ ನೀವೇ ಶತ್ರುವಾಗಿ, ಈ ಐಹಿಕ ಜಗತ್ತಿನಲ್ಲೇ ಬಿದ್ದು ಒದ್ದಾಡುವುದು, ಎರಡೂ ನಿಮ್ಮ ಕೈಯಲ್ಲೇ ಇದೆ.

ಕೃಷ್ಣ ಹೇಳುತ್ತಾನೆ: ಮನಸ್ಸು ಯೋಚನೆಯನ್ನು ನನ್ನೆಡೆಗೇ ಕೇಂದ್ರೀಕರಿಸಿದರೆ ನೀನು ಎಲ್ಲ ಕಷ್ಟ-ಕೋಟಲೆಗಳಿಂದಲೂ ಪಾರಾಗಬಹುದು; ಆದರೆ ನನ್ನ ಮಾತು ಕೇಳದೇ ಅತಿಯಾದ ಸ್ವಾಭಿಮಾನಿಯೂ, ದುರಹಂಕಾರಿಯೂ ಆಗಿದ್ದರೆ ನೀನು ನಾಶವಾಗುವೆ’ (ಭಗವದ್ಗೀತೆ 18,58).

ಹಲವಾರು ಜನ್ಮಗಳ ಬಳಿಕ ಒಬ್ಬ ವ್ಯಕ್ತಿಯು ಮಾಯೆಯ ಬಗ್ಗೆ ಭ್ರಮನಿರಸನಗೊಳ್ಳಬಹುದು. ಈ ಐಹಿಕ ಸುಖ, ಸಂತೋಷಗಳಿಂದ ನಿರಾಶನಾಗಬಹುದು ಅಥವಾ ಅವನು ಅದೃಷ್ಟವಂತನಾಗಿದ್ದರೆ ದೇವೋತ್ತಮ ಪರಮ ಪುರುಷನ ಭಕ್ತನಾಗಬಹುದು.

ಅಂಥ ವ್ಯಕ್ತಿಯು ಭಗವದ್ಧಾಮಕ್ಕೆ ಮರಳಲು, ದೇವೋತ್ತಮ ಪದತಲಗಳಿಗೆ ಹಿಂತಿರುಗಲು, ನಿಜವಾದ ಆನಂದ ನೀಡುವ ಕೃಷ್ಣನ ಸನ್ನಿಧಿ ಸೇರಲು ಬಯಸುತ್ತಾನೆ. “ಯಾರು ತಮ್ಮ ಸಾರ್ಥಕ, ಶ್ರೇಷ್ಠ ಕಾರ್ಯಗಳನ್ನು ಮಾಡುತ್ತಾರೋ, ಯಾರಲ್ಲಿ ಪಾಪವು ಸಂಪೂರ್ಣ ನಾಶವಾಗಿರುವುದೋ, ಯಾರು ಮಾಯೆಯ ವೈರುಧ್ಯದಿಂದ ಸಂಪೂರ್ಣ ಮುಕ್ತರಾಗಿರುತ್ತಾರೋ, ಯಾರು ನನ್ನನ್ನು ತದೇಕ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರು ನನ್ನ ಸನ್ನಿಧಿಗೆ ಮರಳುತ್ತಾರೆ (ಭಗವದ್ಗೀತೆ 7,28) ಎಂದು ಸ್ವತಃ ಕೃಷ್ಣನೇ ಹೇಳಿದ್ದಾನೆ.

ಕರುಣಾಳು ದೇವೋತ್ತಮನ ತೃಪ್ತಿಗಾಗಿ ಬದುಕುವುದೇ ನಿಜವಾದ ಭಕ್ತಿ ಸೇವೆ. ಇಲ್ಲಿ ಪ್ರತಿಯೊಂದೂ ಆ ಭಗವಂತನಿಗೆ ಸೇರಿದ್ದು, ಹೂವು, ಹಣ್ಣು, ಆಳು, ಕಾಳು, ಬೆಳಗು, ಕತ್ತಲು, ಈ ಮಾನವ ಜೀವನ, ಇದರೊಳಗಿರುವ ಅಂತಃಸತ್ತ್ವ ಎಲ್ಲವೂ ಅವನದೇ ಎಲ್ಲವೂ ಅವನ ಬಳಿಗೆ ಮರಳಬೇಕು.

ಹೇಗೆ ಪ್ರತಿ ಮೂಲೆಗೂ ನುಗ್ಗಿ ಕತ್ತಲೆಯನ್ನು ಹೊಡೆದೋಡಿಸುವ ಬೆಳಕಿನ ಕಿರಣಗಳು ಮರಳಿ ತನ್ನ ಮೂಲವಾದ ಸೂರ್ಯನಲ್ಲಿಗೆ ಹಿಂದಿರುಗುತ್ತವೆಯೋ ಹಾಗೆಯೇ ಇಲ್ಲಿ ಪ್ರತಿಯೊಂದೂ ಕೃಷ್ಣನ ಬಳಿಗೇ ಮರಳಬೇಕು. ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಶ್ರದ್ಧಾಪೂರ್ವಕವಾಗಿ ಕೃಷ್ಣನಿಗೇ ಸಮರ್ಪಿಸುವುದು ಭಕ್ತಿ ಸೇವೆ. ನಮ್ಮ ಈ ಸೇವೆಯನ್ನು ಸ್ವೀಕರಿಸುವುದಾಗಿ ಸ್ವತಃ ಭಗವಂತನೇ ಹೇಳಿದ್ದಾನೆ.

ಅವರು ಯಾರು ಬೇಕಾದರೂ ಆಗಿರಲಿ, ಅವರು ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನಾದರೂ ನಿರ್ಮಲ ಹೃದಯದಿಂದ, ಪ್ರೀತಿಯಿಂದ ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ’ (ಭಗವದ್ಗೀತೆ 9,26) ಎಂದು ಕೃಷ್ಣ ಹೇಳುತ್ತಾನೆ.

ನಾವು ಉಣ್ಣುವ ಆಹಾರವನ್ನು ಆತನಿಗೆ ಭಕ್ತಿಯಿಂದ ಅರ್ಪಿಸಿದರೆ ಅದೇ ಪ್ರಸಾದ. ನಮ್ಮ ಮಾತು, ಕೃತಿ, ಕೆಲಸ ಮತ್ತು ನಮ್ಮ ಪ್ರಜ್ಞೆಯನ್ನೂ ಅವನಿಗೆ ಅರ್ಪಿಸುವುದೇ ಭಕ್ತಿ ಸೇವೆ. ಇಂಥ ಸೇವೆ ನಮ್ಮನ್ನು ಹುಟ್ಟು-ಸಾವಿನ ಜಂಜಾಟದಿಂದ ಬಿಡುಗಡೆಗೊಳಿಸುತ್ತದೆ. ಅಂತರಿಕ ತೃಪ್ತಿ ನೀಡಿ, ಬದುಕಿಗೆ ಸಮತೋಲನ ಕರುಣಿಸುತ್ತದೆ. ಯೋಗದ ರಹಸ್ಯವೇ ಇದು.

ದೇವತ್ವದೊಂದಿಗೆ ನಮಗಿರುವ ಕೊಂಡಿಯೇ ಈ ಭಕ್ತಿ ಸೇವೆ. ಒಮ್ಮೆ ನಾವು ಇದನ್ನು ಸಾಧಿಸಿದರೆ ಮತ್ತೆ ಈ ದುಃಖಭರಿತ, ಅಶಾಶ್ವತ ಬದುಕಿಗೆ ಮರಳುವ ಅಗತ್ಯಬರುವುದಿಲ್ಲ. ವೇದ, ಪುರಾಣಗಳೂ ಇದನ್ನು ದೃಢಪಡಿಸಿವೆ.

‘ಪಾರಮಾರ್ಥಿಕ ಭಕ್ತಿಸೇವೆಯ ಸಾಧನೆ ಮಾಡಿದ ವ್ಯಕ್ತಿಗೆ ಪರಿಪೂರ್ಣತೆ, ಶಾಂತಿ ಮತ್ತು ಅಮರತ್ವ ಪ್ರಾಪ್ತವಾಗುತ್ತದೆ ಎಂದು ‘ನಾರದ ಭಕ್ತಿಸೂತ್ರ’ದಲ್ಲಿ (4ನೇ ಅಧ್ಯಾಯ) ಹೇಳಿದೆ. ‘ಭಕ್ತಿಸೇವೆಯಲ್ಲಿ ತಲ್ಲೀನರಾಗಿರುವ ಶ್ರೇಷ್ಠ ಆತ್ಮಗಳು ದೇವೋತ್ತಮನ ಸನ್ನಿಧಿಗೆ ಸೇರುತ್ತವೆ. ಅವು ಮತ್ತೆ ಎಂದಿಗೂ ಈ ಕೇಶಮಯ ಐಹಿಕ ಜಗತ್ತಿಗೆ ಮರಳುವುದಿಲ್ಲ’ ಎಂದು ಭಗವದ್ಗೀತೆಯಲ್ಲಿ (8,15) ಹೇಳಲಾಗಿದೆ.

ಹಾಗಾದರೆ ಅಂಥ ಸ್ಥಿತಿಯನ್ನು ಸಾಧಿಸುವುದು ಹೇಗೆ? ಸರಿ, ಸಹಸ್ರ ಸಹಸ್ರ ವರ್ಷಗಳ ಹಿಂದೆ ನಾವು ತಿಳುವಳಿಕೆ ಇಲ್ಲದೇ ಇಂದ್ರಿಯ ತೃಪ್ತಿಗಾಗಿ ಈ ಐಹಿಕ ದೇಹವನ್ನು ಭಗವಂತನಿಂದ ಕೇಳಿ ಪಡೆದುಕೊಂಡೆವು ಎಂದು ಒಪ್ಪಿಕೊಳ್ಳೋಣ. ಹಾಗಾದರೆ ನಮಗೆ ಜ್ಞಾನೋದಯವಾಗುವುದು ಹೇಗೆ? ಅದಕ್ಕೂ ಕೃಷ್ಣನ ಕೃಪೆ ಬೇಕು. ನಾವು ಇದ್ದಕ್ಕಿದ್ದಂತೆ ಬುದ್ಧಿವಂತರಾಗುವುದಿಲ್ಲ.

ನಮಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗುವುದಿಲ್ಲ. ಒಂದೊಮ್ಮೆ ಒಬ್ಬವ್ಯಕ್ತಿಯು ಮುಗ್ಧತೆ, ಮೌಢ್ಯ ತೊರೆದು ಬುದ್ಧಿವಂತನಾಗುವತ್ತ ಹೆಜ್ಜೆ ಇಟ್ಟನೆಂದರೆ ಆ ರೂಪಾಂತರಕ್ಕೂ ಭಗವಂತನ ಕೃಪೆಯೇ ಕಾರಣ. ಆದ್ದರಿಂದಲೇ ಒಬ್ಬ ಯೋಗಿಯನ್ನು, ಶುದ್ಧ ಭಕ್ತನನ್ನು ಅದೃಷ್ಟವಂತ ಎನ್ನುವುದು.

ಪ್ರತಿಯೊಬ್ಬನಿಗೂ ಈ ಜೀವನ ಎಂಬುದು ತನ್ನ ನಿಜವಾದ ಗುರಿಯನ್ನು, ಉದ್ದೇಶವನ್ನು ಅರ್ಥಮಾಡಿಕೊಳ್ಳಲು ದೊರೆತಿರುವ ಅವಕಾಶ. ಯಾರು ಈ ಅವಕಾಶವನ್ನು ಸದುಪಯೋಗ ಪಡಿಸಿಕಣಳ್ಳುತ್ತಾರೋ, ಅದು ಕೈಜಾರಿ ಹೋಗುವುದಕ್ಕೆ ಅವಕಾಶ ನೀಡುವುದಿಲ್ಲವೋ ಅಂಥವರಿಗೆ ಭಗವಂತನ ಕೃಪೆ, ಆಶೀರ್ವಾದ ಪ್ರಾಪ್ತವಾಗುತ್ತದೆ.

ಶ್ರೀಲ ಪ್ರಭುಪಾದರು ಹೇಳುತ್ತ : ದೇವೋತ್ತಮ ಪರಮ ಪುರುಷನ ಕೃಪೆ ಮತ್ತು ಒಬ್ಬ ಪರಿಶುದ್ಧ ಭಕ್ತ ಅಥವಾ ಅರ್ಹ ಆಧ್ಯಾತ್ಮಿಕ ಗುರುವಿನ ಆಶೀರ್ವಾದ, ಮಾರ್ಗದರ್ಶನವಿಲ್ಲದೇ ಭಗವಂತನ ಶುದ್ಧ ಭಕ್ತಿ ಸೇವೆಯ ಹಂತ ತಲಪುವುದು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಗೆ ಪರಿಶುದ್ಧ ಭಕ್ತ ಆಧ್ಯಾತ್ಮಿಕ ಗುರುವಾಗಿ ದೊರೆತರೆ, ಅಂಥ ಆಧ್ಯಾತ್ಮಿಕ ಗುರುವು ನಿಷ್ಕಾರಣ ಕರುಣೆಯಿಂದ ಆ ವ್ಯಕ್ತಿಯಲ್ಲಿ ಪರಿಶುದ್ಧ ಭಕ್ತಿಯ ಜ್ಞಾನವನ್ನು ತುಂಬುತ್ತಾನೆ.

ಆಧ್ಯಾತ್ಮಿಕ ಗುರು ಮತ್ತು ದೇವೋತ್ತಮ ಪರಮ ಪುರುಷ ಇಬ್ಬರ ಕೃಪೆ ಇದ್ದರೆ ಮಾತ್ರ ಈ ಹಂತ ತಲಪಲು ಸಾಧ್ಯ. (ನಾರದ ಭಕ್ತಿ ಸೂತ್ರ)

ಇದು ಕಲಿಯುಗ 4 ಲಕ್ಷ 32 ಸಾವಿರ ವರ್ಷಗಳಿರುವ ಈ ಯುಗದಲ್ಲಿ ಬರೀ ಕಲಹ, ಆಶಾಂತಿಗಳೇ ತುಂಬಿರುತ್ತವೆ. ದೇವರು, ಭಗವಂತನಿಂದ ದೂರ ಸರಿಯುತ್ತಿರುವುದೇ ಇದಕ್ಕೆ ಸಾಕ್ಷಿ. ಇಲ್ಲಿ ಅಂದರೆ ಅಮೆರಿಕದಲ್ಲಿ, ಈ ನ್ಯೂಯಾರ್ಕ್ ನಗರದಲ್ಲಿಯೂ ನಾವು ಇದನ್ನು ಕಾಣಬಹುದು. ಮಾಯೆಯ ಅಹಂಕಾರದ ಭದ್ರ ಕೋಟೆ ತನ್ನ ಕ್ಷಣಿಕ ವಿಜಯದ ಸಂಕೇತವಾಗಿ ಇಲ್ಲಿ ಅಹಂಕಾರದಿಂದ ಸೊಕ್ಕಿ ನಿಂತಿದೆ.

ಇಲ್ಲಿ ಫಡಫಡಿಸುತ್ತಿರುವ ಧ್ವಜಗಳು, ಗಗನ ಚುಂಬಿ ಕಟ್ಟಡಗಳು, ಗೋಪುರಗಳು ಕೇವಲ 80-100 ವರ್ಷ ಮಾತ್ರ ಆಯುಷ್ಯವಿರುವ ಆರ್ಥಿಕ, ರಾಜಕೀಯ, ಐಹಿಕ ಸಂತೋಷದ ಸಂಕೇತಗಳು, ನೋಡಿದ ತತ್ ಕ್ಷಣ ಮನಸೂರೆಗೊಳ್ಳುವ ಬಗೆ ಬಗೆಯ ಜಾಹೀರಾತುಗಳು ಮಾನವನ ದುರ್ಬಲ ಮನಸ್ಸನ್ನು ದುಃಸ್ವಪ್ನದಂತೆ ಕಾಡುತ್ತಿವೆ. ಇದರ ಜತೆಗೆ ಆಡಳಿತದ ಉನ್ನತ ಸ್ಥಾನದಲ್ಲಿರುವವರ ಮೋಸ, ರಾಜಕೀಯ ಕಲಹಗಳು, ಮಾದಕ ದ್ರವ್ಯ ವ್ಯಸನಿಗಳ ಹುಚ್ಚಾಟಗಳು ಪರಿಪೂರ್ಣ ಕಲಿಯುಗದ ಎಲ್ಲ ಲಕ್ಷಣಗಳೂ ಇಲ್ಲಿವೆ.

ದಿನ ಕಳೆದಂತೆ ಇದು ಇನ್ನಷ್ಟು ಬಿಗಡಾಯಿಸುತ್ತಾ ಹೋಗುತ್ತದೆ. ವಿಚಿತ್ರವೆಂದರೆ ಇದರ ಜತೆ ಜತೆಗೇ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಸಂಕೀರ್ತನ ಚಳವಳಿಯ ಕರುಣೆಯೂ ನಮಗೆ ದೊರಕುತ್ತಿದೆ. ಈ ಸ್ವಾಮೀಜಿಗಳು ಶ್ರೀ ಚೈತನ್ಯರ ಪಂಥದ ಅನುಯಾಯಿಗಳು. 500 ವರ್ಷಗಳ ಹಿಂದೆ ಭಾರತದಲ್ಲಿ ಶ್ರೀ ಕೃಷ್ಣ ಪವಿತ್ರ ನಾಮ ಜಪವನ್ನು ಆಧರಿಸಿದ ಆಂದೋಲನವನ್ನು ಆರಂಭಿಸಿದವರು.

ಶ್ರೀ ಚೈತನ್ಯರು, ಕಲಿಯುಗವೆಂಬ ಕತ್ತಲೆ ಸುರಂಗದ ಕೊಟ್ಟಕೊನೆಯಲ್ಲಿ ಹೊಳೆಯುತ್ತಿರುವ ಬೆಳಕು ಶ್ರೀ ಚೈತನ್ಯರ ಆಂದೋಲನ, ಭಗವಂತನ ಪವಿತ್ರ ನಾಮ ಸಂಕೀರ್ತನೆಯಲ್ಲಿ ಪಾಲ್ಗೊಂಡು, ತಮ್ಮ ಮೂಲ ಸಾಂಗತ್ಯವನ್ನು ಕಂಡುಕೊಳ್ಳುವಂತೆ ಚೈತನ್ಯರು ಮನುಕುಲದ ಪ್ರತಿಯೊಬ್ಬರನ್ನೂ ಆಹ್ವಾನಿಸಿದ್ದಾರೆ.

ಇಂದು ಸಮೂಹ ಮಾಧ್ಯಮಗಳ ಸುಳಿಗೆ ಸಿಲುಕಿ ಎಂಥ ಬುದ್ಧಿವಂತರೂ ಕಲುಷಿತಗೊಂಡಿದ್ದಾರೆ. ಹೀಗಾಗಿ ಇಂದು ಪ್ರತಿಯೊಬ್ಬರೂ ತಮ್ಮ ಜೀವನದ ನಿಜವಾದ ಉದ್ದೇಶ ಕಂಡುಕೊಳ್ಳಲಾಗದೇ ತೊಳಲಾಡುತ್ತಿದ್ದಾರೆ. ನಮಗೆಲ್ಲರಿಗೂ ನಮ್ಮದೇ ಆದ ಹೊಣೆಗಳಿವೆ. ನಮ್ಮದು ಮಾನವ ಜನ್ಮ.

ನಮ್ಮನ್ನು ನಾವು ಅರ್ಥ ಮಾಡಿಕೊಂಡು, ಜೀವನದ ಅಂತಿಮ ಗುರಿ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜೀವನದ ನಿಜವಾದ ಗುರಿಯೇ ಕೃಷ್ಣ. ಈ ಕಲಿಯುಗದಲ್ಲೂ ಕೃಷ್ಣನನ್ನು ಪಡೆಯುವುದು ಸುಲಭ. ಶ್ರೀ ಚೈತನ್ಯರ ಕೃಪಾ ಕಟಾಕ್ಷದಿಂದ ಆತನ ನಾಮವನ್ನು ಜಪಿಸಿದರೆ ಸಾಕು, ಎಲ್ಲರೂ ಆತನನ್ನು ಪಡೆಯಬಹುದು.

ಶ್ರೀಲ ಪ್ರಭುಪಾದರು ಒಂದು ಕಡೆ ಬರೆಯುತ್ತಾರೆ ವಿಶೇಷವಾಗಿ ಮುಗ್ಧರಿಗೆ, ಸರಳ ಜೀವಿಗಳೆಂದರೆ ಚೈತನ್ಯರಿಗೆ ಬಹಳ ಮಮತೆ. ಅವರ ಹೆಸರೇ ‘ಪತಿತ ಪಾವನ’ ಅಂದರೆ ಪಾಪಾತ್ಮಗಳನ್ನು ಉದ್ಧರಿಸುವವರು ಎಂದರ್ಥ.

ಶ್ರೀ ಚೈತನ್ಯರು ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರಿಗೂ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ. ಅದೇ ಭಗವಂತನ ನಾಮ ಜಪ. ಈ ನಾಮ ಜಪದಿಂದ ನಿಮಗೆ ಪರಿಪೂರ್ಣ ಶಾಂತಿ ಮತ್ತು ಸುಖ ಪ್ರಾಪ್ತವಾಗುತ್ತದೆ. ಶ್ರೀ ಚೈತನ್ಯರ ಔದಾರ್ಯದಿಂದಾಗಿ ನಮಗೆ ಭಗವಂತನ ಪ್ರೇಮವೆಂಬ ಅತ್ಯುತ್ಕೃಷ್ಟ ಉಡುಗೊರೆ ಪ್ರಾಪ್ತವಾಗಿದೆ.

ಶ್ರೀ ಚೈತನ್ಯರ ಈ ಸಹಾಯ ಹಸ್ತವನ್ನೂ ಕೆಲವರು ತಪ್ಪಿಸಿಕೊಳ್ಳುತ್ತಾರೆ. ತಮ್ಮ ಸಾಂಸಾರಿಕ ಮತ್ತು ಬಾಹ್ಯ ಜಗತ್ತಿನ ಸಂಕೋಲೆಗಳು ಅತ್ಯಂತ ಸಂಕೀರ್ಣವಾಗಿದ್ದು ಇದರಿಂದ ಬಿಡುಗಡೆ ಎಂಬುದು ಬರೀ ಸುಳ್ಳು ಎಂದೇ ಅವರು ಭಾವಿಸುತ್ತಾರೆ. ಆದರೆ ಭಗವಂತನಿಗೆ ಸಂಕೀರ್ಣವೆಂಬುದು ಯಾವುದು ಇಲ್ಲ.

ಈ ಕಲಿಯುಗದಲ್ಲಿ ನಾಮ ಜಪ ನಡೆಸುವವರು ನಿಜಕ್ಕೂ ಅದೃಷ್ಟವಂತರು. ಅವರು ಎಲ್ಲ ಕೀಳು ಕಾಮನೆಗಳಿಂದ, ದುಶ್ಚಟಗಳಿಂದ ಮುಕ್ತರಾಗಿರುತ್ತಾರೆ. ಐಹಿಕ ಹುಚ್ಚುತನಗಳ ನಡುವೆಯೇ ಬದುಕುತ್ತಿದ್ದರೂ, ಅದರ ಬಾಧೆ ತಟ್ಟದಂತೆ ಸುರಕ್ಷಿತರಾಗಿರುತ್ತಾರೆ. ಹಾಗೆಯೇ ಭಗವಂತನ ನಾಮ ಜಪಿಸುವವರು ನಾಸ್ತಿಕತೆಯಂಥ ವಿತಂಡ ವಾದಗಳಿಂದಲೂ ಮುಕ್ತರಾಗಿರುತ್ತಾರೆ.

ತಾವೇ ದೇವರೆಂಬ ಭ್ರಮೆಯ ಕಾಟವೂ ಅವರಿಗಿರುವುದಿಲ್ಲ. ಹೀಗೆ ನಾಮ ಜಪದ ಮೂಲಕ ತನಗೆ ಶರಣಾದವರನ್ನು ಕೃಷ್ಣನೇ ಖುದ್ದಾಗಿ ನೋಡಿಕೊಳ್ಳುತ್ತಾನೆ. ಅವರನ್ನು ತನ್ನ ಹತ್ತಿರಕ್ಕೆ ಕರೆಸಿಕೊಳ್ಳುತ್ತಾನೆ.

‘ಈ ಕಲಿಯುಗದಲ್ಲಿ ನಿಜವಾದ ಬುದ್ಧಿವಂತರು ಭಗವಂತನನ್ನು ಮತ್ತು ಆತನ ಸಹಚರರನ್ನು ನಾಮ ಜಪ ಸಂಕೀರ್ತನೆ ಯಜ್ಞದ ಮೂಲಕ ಪೂಜಿಸುತ್ತಾರೆ’ ಎಂದು ಭಾಗವತದ 12ನೇ ಸ್ಕಂಧ ಹೇಳುತ್ತದೆ.

ಒಮ್ಮೆ ನಾವು ನಾಮ ಸಂಕೀರ್ತನೆ ಪ್ರಾರಂಭಿಸಿದರೆ ಭಗವಂತ ಮತ್ತು ಆತನ ಅಸಂಖ್ಯಾತ ಅಂಶಗಳ ನಡುವೆ ಬಾಂಧವ್ಯ ಸ್ಥಾಪನೆಯಾಗುತ್ತದೆ. ಅದು ಹಾಗೆಯೇ ಬೆಳೆಯುತ್ತಾ ಸಾಗುತ್ತದೆ. ಮತ್ತಷ್ಟು ಶುದ್ಧವಾಗುತ್ತಾ, ಹತ್ತಿರವಾಗುತ್ತಾ ಹೋಗುತ್ತದೆ. ಈ ಕ್ಷಣಿಕ ಪ್ರಪಂಚದಲ್ಲಿ ಇಂದ್ರಿಯ ತೃಪ್ತಿಗಾಗಿ ಕಾಲಹರಣ ಮಾಡುವುದರ ಬದಲು ನಾವು ಆತನ ನಾಮ ಸಂಕೀರ್ತನೆ ಮಾಡುತ್ತೇವೆ.

ಹಾಗೆ ಹಾಡುತ್ತಾ ಹಾಡುತ್ತಾ, ಆತನೇ ಎಲ್ಲಶಕ್ತಿ ಸಾಮರ್ಥ್ಯಗಳ ಮೂಲ ಧಾತು ಎಂಬುದು ನಮಗೆ ಅರಿವಾಗುತ್ತದೆ. ಅಬ್ಬ! ಆ ಕರ್ತಾರನ ಪಾದ ಕಮಲಗಳ ಬಳಿ ನಿಂತು ಆತನ ನಾಮ ಸಂಕೀರ್ತನೆ ಮಾಡಬೇಕಾದರೆ ನಾವೆಷ್ಟು ಪುಣ್ಯವಂತರು ಅಲ್ಲವೇ?! ಭಗವಂತನು ತನ್ನ ಸಂಪೂರ್ಣ ಅಸ್ತಿತ್ವದೊಂದಿಗೆ ತನ್ನ ನಾಮವನ್ನು ನಮಗೆ ನೀಡಿದ್ದಾನೆ. ‘ಹರೇ ಕೃಷ್ಣ ಹರೇ ರಾಮ’ ಎಂಬುದು ಆತನ ಶಬ್ದಾವತಾರ.

ಅದು ಕೇವಲ ಸಾಮಾನ್ಯ ವಿಷಯವಲ್ಲ. ಅದನ್ನು ಜಪಿಸುವುದು ವೃಥಾ ಶ್ರಮವಲ್ಲ ಅಥವಾ ಅದು ಕೆಲವೇ ಅರ್ಚಕರಿಗೆ ಮಾತ್ರ ತಿಳಿದಿರುವ ರಹಸ್ಯ ಮಂತ್ರವೂ ಅಲ್ಲ! ಏಕಾಗ್ರತೆಯೇ ಅಪರೂಪವೂ, ಆಸಂಭವವೂ ಆಗಿರುವ ಈ ಕಲಿಗಾಲದಲ್ಲಿ ಸಂಕೀರ್ತನೆಯು ಭಗವಂತನನ್ನು ತಲಪಲು ಅತ್ಯಂತ ಪ್ರಶಸ್ತ ಮಾರ್ಗವಾಗಿದೆ. ಇದು ಜೀವಿಗಳಿಗೆ ಭಗವಂತ ನೀಡಿದ ಅತ್ಯಂತ ಶ್ರೇಷ್ಠ ವರವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi