ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಸಂವಾದ, ಸ್ಥಳ: ಡೆನ್‌ವರ್, ಜುಲೈ 1975
ಶ್ರೀಲ ಪ್ರಭುಪಾದ : ನಮ್ಮ ಈ ದೇಹ ಒಂದು ಯಂತ್ರವಲ್ಲದೆ ಬೇರೇನೂ ಅಲ್ಲ ಎಂಬ ಕಲ್ಪನೆಯನ್ನು ನಿನ್ನೆಯ ಮಾತುಕತೆಯಲ್ಲಿ ಮುಂದಿಟ್ಟಿರಿ. ಈ ಅಭಿಪ್ರಾಯವನ್ನು ನಾವೂ ಒಪ್ಪುತ್ತೇವೆ. ಯಂತ್ರಾರೂಢಾನಿ ಎಂಬ ಮಾತು ಭಗವದ್ಗೀತೆಯಲ್ಲಿ ಬಂದಿದೆ. ”ಈ ದೇಹವೆಂಬುದು ಒಂದು ಯಂತ್ರ.” ಯಂತ್ರ ಎಂಬ ಪದಕ್ಕೆ ಒಂದು ಉಪಕರಣ ಎಂದು ಅರ್ಥ ಹೇಳಬಹುದು.

ಅದೇ ಮಾತಿನ ವೇಳೆ ನೀವು ಈ ದೇಹ ಬೆಳೆಯುತ್ತಿದೆಯೆಂದೂ ಹೇಳಿದಿರಿ. ಕಾರ್‌ನಂಥ ಒಂದು ಯಂತ್ರ ಬೆಳದೀತೆ?
ಭಕ್ತ: ಕಾರ್ ಬೆಳೆಯುತ್ತದೆಯೆ (ನಗುತ್ತಾರೆ). ಇಲ್ಲ, ಶ್ರೀಲ ಪ್ರಭುಪಾದ.
ಶ್ರೀಲ ಪ್ರಭುಪಾದ: ಹಾಗಾದರೆ ಈ ಮಾತಿನಲ್ಲಿ ವೈರುದ್ಧ್ಯವಿದೆ. ದೇಹ ನಿಜಕ್ಕೂ ಒಂದು ಯಂತ್ರ. ಅದನ್ನು ಒಪ್ಪಿದೆವು. ಕೃಷ್ಣನೂ ಅದೇ ಮಾತು ಹೇಳುತ್ತಾನೆ. ಆದ್ದರಿಂದ ಅದು ಸತ್ಯ. ದೇಹವು ಒಂದು ಸಂಕೀರ್ಣ ಯಂತ್ರ. ಅದೇ ಹೊತ್ತಿನಲ್ಲಿ ದೇಹ ಬೆಳೆಯುತ್ತದೆ. ಹಾಗಿದ್ದ ಮೇಲೆ ಅದು ಹೇಗೆ ಯಂತ್ರವಾದೀತು?
ಭಕ್ತ: ಭಗವದ್ಗೀತೆಯಲ್ಲಿ ದೇಹವನ್ನು ಯಂತ್ರಕ್ಕೆ ಹೋಲಿಸಲಾಗಿದೆಯೆ?
ಶ್ರೀಲ ಪ್ರಭುಪಾದ : ಇಲ್ಲ, ಭಗವದ್ಗೀತೆಯಲ್ಲಿ ಕೃಷ್ಣನು ದೇಹ ಒಂದು ಯಂತ್ರವೆಂದು ಹೇಳುತ್ತಾನೆ. ದೇಹವನ್ನು ಯಂತ್ರಕ್ಕೆ ಹೋಲಿಸಲಾಗಿದೆ ಎಂದು ಅವನು ಹೇಳುವುದಿಲ್ಲ. ವಾಸ್ತವವಾಗಿ ಅದೊಂದು ಯಂತ್ರ.
ಭಕ್ತ: ಹಾಗಾದರೆ ಅದು (ದೇಹ) ಬೆಳೆಯಲಾರದು. ಏಕೆಂದರೆ ಯಂತ್ರವು ಬೆಳೆಯುವದಿಲ್ಲವಷ್ಟೆ.
ಶ್ರೀಲ ಪ್ರಭುವಾದ : ಆದರೆ ಅದು ಬೆಳೆಯುವುದು ಹೌದು, ಆದ್ದರಿಂದ ಅದಕ್ಕೇನು ಪರಿಹಾರ?
ಭಕ್ತ: ನನಗೆ ಹೊಳೆಯುವಂತೆ ನಿಮ್ಮ ಪ್ರಶ್ನೆಗೆ ಉತ್ತರ, ದೇಹವು ಪ್ರತಿಕ್ಷಣ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳುತ್ತಿದೆ.
ಶ್ರೀಲ ಪ್ರಭುಪಾದ : ಹೌದು, ಉದಾಹರಣೆಗೆ ನಾವೀಗ ಕೂತಿರುವ ಈ ಕಾರ್ ಅನ್ನು ತೆಗೆದುಕೊಳ್ಳಿ, ಇದು ಶುದ್ಧಾಂಗವಾಗಿ ಒಂದು ಯಂತ್ರ. ಇರುತ್ತ ನನಗೆ ಈಗಿರುವುದಕ್ಕಿಂತ ದೊಡ್ಡ ಕಾರ್ ಬೇಕಾದಲ್ಲಿ ನಾನು ಬೇರೆಯೇ ಇನ್ನೊಂದು ಕಾರ್ ಖರೀದಿಸಬೇಕು. ಈಗಿರುವ ನನ್ನ ಕಾರ್ ಬೆಳೆಯುವುದಿಲ್ಲ, ಅಥವಾ ನಿಮ್ಮಲ್ಲಿ ಒಂದು ದೊಡ್ಡ ಕಾರ್ ಇದ್ದು ಅದನ್ನು ಪಾಲಿಸುವ ವೆಚ್ಚ ಹೆಚ್ಚಾಗಿದೆ ಎಂದಿಟ್ಟುಕೊಳ್ಳಿ.

ನಿಮ್ಮಲ್ಲಿ ಈಗಿರುವುದಕ್ಕಿಂತ ಚಿಕ್ಕ ಕಾರ್ ನಿಮಗೆ ಬೇಕಾಗಿದೆ. ನೀವು ನಿಮ್ಮ ಸೇಡಾನ್ ಕಾರನ್ನು ಚಿಕ್ಕದು ಮಾಡಿಕೊಂಡು ಬಳಸುವಂತಿಲ್ಲ. ನೀವು ಬೇರೆ ಹೊಸ ಚಿಕ್ಕ ಕಾರ್ ಅನ್ನು ಖರೀದಿಸಬೇಕಾಗುತ್ತದೆ. ಅದೇ ರೀತಿ ಮಗುವೊಂದು ಆ ತನ್ನ ಶಿಶು ದೇಹದಲ್ಲಿ ಲೈಂಗಿಕ ಅನುಭವ ಪಡೆಯುವಂತಿಲ್ಲ.
ಆ ಮಗುವಿಗೆ ಲೈಂಗಿಕ ಸುಖ ಬೇಕಾಗಿದ್ದಲ್ಲಿ ಅದು ಬೇರೊಂದು ದೇಹವನ್ನು ಎಂದರೆ ವಯಸ್ಕನ ದೇಹವನ್ನು ಧರಿಸಬೇಕು. ಇದು ಇಷ್ಟು ಸರಳವಾದ ವಿಚಾರ. ಆದರೂ ಪ್ರಕೃತಿ ನಮಗೆ ಪ್ರತಿ ಕ್ಷಣ ಹೇಗೆ ಬದಲಾದ ಯಂತ್ರಗಳನ್ನು ದೇಹಗಳನ್ನು ನೀಡುತ್ತಿದೆ ಎಂಬುದನ್ನು ಅವಿವೇಕಿಗಳು ಅರ್ಥಮಾಡಿಕೊಳ್ಳಲಾರರು.
ಭಕ್ತ: ಈ ವಿಚಾರಗಳೆಲ್ಲಾ ವೈಜ್ಞಾನಿಕ ತಿಳಿವಿನ ಇಂದಿನ ಮಟ್ಟಕ್ಕೆ ಮೀರಿದವೆಂದು ನನಗೆ ತೋರುತ್ತದೆ.
ಶ್ರೀಲ ಪ್ರಭುಪಾದ : ಹೌದು. ಇವೆಲ್ಲಾ ತಮ್ಮಂತೆ ತಾವೇ ಆಗುತ್ತಿವೆ. ಕೃಷ್ಣನ ಅನೂಹ್ಯ ಶಕ್ತಿಯಿಂದಾಗಿ ಇವು ತಾವಾಗಿ ಆಗುತ್ತಿವೆ ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೇ ಸ್ವಾಭಾವಿಕೀ ಜ್ಞಾನ ಬಲ ಕ್ರಯಾ ಚ. ಕೃಷ್ಣನ ಶಕ್ತಿಗಳು ಎಷ್ಟು ಅದ್ಭುತವಾಗಿ ಹಾಗೂ ಎಷ್ಟು ವೇಗವಾಗಿ ಕೆಲಸ ಮಾಡುತ್ತಿವೆಯೆಂದರೆ, ಇವೆಲ್ಲಾ ಹೇಗಾಗುತ್ತಿದೆ ಎಂಬುದನ್ನು ನೀವು ನೋಡಲಾರಿರಿ.
ದೇಹವು ಪ್ರತಿಕ್ಷಣ ಬದಲಾಗುತ್ತಿದೆ ಎಂಬ ವಿಚಾರಕ್ಕೆ ಬರೋಣ. ಸಿನಿಮಾ ಚಿತ್ರದ ಗಾಲಿ ಇದಕ್ಕೊಂದು ಒಳ್ಳೆಯ ಉದಾಹರಣೆ. ಒಟ್ಟು ಚಿತ್ರದ ಪ್ರತಿ ಸಣ್ಣ ಚಿತ್ರವೂ ಬೇರೆ ಬೇರೆ ಇರುತ್ತದೆ. ಆದರೆ ಚಿತ್ರದ ರೀಲನ್ನು ಪ್ರೊಜೆಕ್ಟರ್‌ಗೆ ಹಾಕಿ ತೋರಿಸಿದಾಗ ನೀವು ಸಣ್ಣ ಸಣ್ಣ ಬೇರೆ ಬೇರೆ ಚಿತ್ರಗಳನ್ನು ನೋಡುವುದಿಲ್ಲ.
ಇಡೀ ಸಿನಿಮಾ ಒಂದು ಸರಾಗವಾಗಿ ನಡೆವ ಕ್ರಿಯೆಯಾಗಿ ಕಾಣುತ್ತದೆ. ಆದರೆ ವಾಸ್ತವವಾಗಿ ಒಟ್ಟು ಸಿನಿಮಾದ ಹಿಂದೆ ಅನೇಕ ಬೇರೆ ಬೇರೆ ಚಿತ್ರಗಳಿರುತ್ತವೆ. ಸಣ್ಣ ಸಣ್ಣ ಚಿತ್ರಗಳನ್ನೇ ನೋಡುವಾಗ ಕೈ ಒಂದು ಕಡೆ, ಕಾಲು ಮತ್ತೆಲ್ಲೋ ಇದ್ದರೂ, ಇವೆಲ್ಲಾ ಅಂಶಗಳನ್ನು ಒಟ್ಟುಗೂಡಿಸಿ ಚಿತ್ರವನ್ನು ವೇಗಚಲನೆಗೆ ಒಳಪಡಿಸಿದಾಗ ಕೈ ಸರಿಯಾದ ಕಡೆ ಇದ್ದು ಚಲಿಸುತ್ತಿರುವಂತೆ ಕಾಣುತ್ತದೆ. ಈ ಮಧ್ಯೆ ನೀವು ಪ್ರೊಜೆಕ್ಟರ್ ಅನ್ನು ನಿಲ್ಲಿಸಿ ಬಿಟ್ಟರಿ ಎನ್ನಿ. ಆಗ ಕೈ ಚಲಿಸುವುದು ಕಾಣುವುದಿಲ್ಲ (ಸತ್ತಂತೆ ಬಿದ್ದಿರುತ್ತದೆ).
ಆದ್ದರಿಂದ ಒಂದು ಸಾಮಾನ್ಯ ಚಲನಚಿತ್ರವೇ ಇಂಥ ಭ್ರಮೆ ಹುಟ್ಟಿಸಬಹುದಾದಾಗ ಪ್ರಕೃತಿಯ ಸೂಕ್ಷ್ಮ ಕಾರ್ಯವಿಧಾನ ಹಾಗೂ ದೇಹಯಂತ್ರ ಯಾವ ಮಟ್ಟದ ಭ್ರಮೆ ಹುಟ್ಟಿಸಬಹುದೋ ಊಹಿಸಿ. ಪ್ರತಿ ಕ್ಷಣ ತಮಗೊಂದು ಹೊಸ ದೇಹವನ್ನು ಒದಗಿಸಲಾಗುತ್ತಿದೆ ಎಂಬುದನ್ನು ಜನ ಬಲ್ಲವರಲ್ಲ.
ಮೂಢರು ಇದನ್ನೆಲ್ಲಾ ಅರ್ಥಮಾಡಿಕೊಂಡಾರು ಹೇಗೆ? ಅವರಿಗೆ ಮೆದುಳುಗಳಿಲ್ಲ. ಎಲ್ಲ ಮಡ್ಡಿ ತಲೆಯ, ಐಹಿಕ ಮನೋವೃತ್ತಿಯ ಅವಿವೇಕಿಗಳು. ಇದನ್ನು ಅವರು ಅರ್ಥಮಾಡಿಕೊಳ್ಳಲಾರರು. ಆದರೆ ನಡೆಯುತ್ತಿರುವ ಪ್ರಕ್ರಿಯೆಯೇನೋ ಇದೇ. ನನಗೊಂದು ನಿರ್ದಿಷ್ಟ ವಸ್ತುಬೇಕು, ನಿರ್ದಿಷ್ಟ ದೇಹಬೇಕು. ಪ್ರಕೃತಿ ಅದನ್ನು ಒದಗಿಸುತ್ತದೆ.

ಭಕ್ತ: ಕೆಲವು ಸಲ ನಾವು ಒಂದು ನಿರ್ದಿಷ್ಟ ಬಗೆಯ ದೇಹವನ್ನು ಬಯಸುತ್ತೇವೆ ಅಥವಾ ಒಂದು ನಿರ್ದಿಷ್ಟ ಶಕ್ತಿಯನ್ನು ಬಯಸುತ್ತೇವೆ. ಉದಾಹರಣೆ ಸಂಗೀತ ವಾದ್ಯವನ್ನು ಬಾಜಿಸಬೇಕು ಎಂದು ನನಗೆ ಅಪೇಕ್ಷೆ. ಆದರೂ ಹಾಗೆ ಮಾಡಲು ನಾವೆಂದೂ ಸಮರ್ಥರಾಗುವುದಿಲ್ಲ. ಇದೂ ವಾಸ್ತವ ಸ್ಥಿತಿಯೆ.
ಶ್ರೀಲ ಪ್ರಭುವಾದ : ಹೌದು, ಒಂದು ನಿರ್ದಿಷ್ಟ ಬಗೆಯ ದೇಹ ಪಡೆಯಲು ನೀವು ನಿಮ್ಮ ಕರ್ಮಾನುಸಾರ ಅರ್ಹರಾಗಿರಬೇಕು. ಈಗ ನೋಡಿ, ಕೃಷ್ಣನು ತಾನೇನು ಇಷ್ಟಪಡುತ್ತಾನೋ ಅದನ್ನು ಮಾಡಬಹುದು. ಆದರೆ ನೀವು ಅವನಂತೆ ಸ್ವತಂತ್ರರಲ್ಲ. ನೀವು ಪ್ರಕೃತಿಯನ್ನು ಅವಲಂಬಿಸಿರುವವರು ಮತ್ತು ನಿಮ್ಮ ಸ್ಥಾನ ಬಹು ಚಿಕ್ಕದು.
ಆದರೆ ಕೃಷ್ಣನು, ಅಪೇಕ್ಷೆಪಟ್ಟ ಕ್ಷಣವೇ ಬೇಕಾದ್ದನ್ನು ಮಾಡಬಲ್ಲನು. ಈ ಮಾತನ್ನು ಬೈಬಲ್‌ನಲ್ಲೂ ಹೇಳಿದೆ. “ಜಗತ್ತು ಸೃಷ್ಟಿಯಾಗಲಿ’ ಎಂದು ದೇವರು ಹೇಳಿದ. ಆ ಕೂಡಲೇ ಜಗತ್ತು ಸೃಷ್ಟಿಯಾಯಿತು. ಆದರೆ ನೀವು ಹಾಗೆ ಮಾಡಲಾರಿರಿ. ನೀವು ಏನನ್ನೋ ಅಪೇಕ್ಷಿಸಬಹುದು. ಆದರೆ ಪ್ರಕೃತಿಯು ನೀವು ಎಷ್ಟಕ್ಕೆ ಅರ್ಹರೋ ಅಷ್ಟನ್ನು ಒದಗಿಸುತ್ತದೆ.
ಭಕ್ತ: ಪ್ರತಿ ಏಳು ವರ್ಷಗಳಿಗೊಮ್ಮೆ ಇಡೀ ದೇಹ ಬದಲಾವಣೆಗೆ ಒಳಪಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ದೇಹದಲ್ಲಿನ ಎಲ್ಲ ಕಣಗಳೂ ಆ ಹೊತ್ತಿಗೆ ಬದಲಾಯಿಸಲಾಗಿರುತ್ತದಂತೆ.
ಶ್ರೀಲ ಪ್ರಭುಪಾದ : ಪ್ರತಿ ಏಳು ವರ್ಷಗಳಿಗೊಮ್ಮೆ ಅಲ್ಲ. ವೈದ್ಯಶಾಸ್ತ್ರದ ಪ್ರಕಾರ ರಕ್ತಕಣಗಳು ಪ್ರತಿಕ್ಷಣ ಬದಲಾಗುತ್ತಿರುತ್ತವೆ.
ಭಕ್ತ: ಅವುಗಳ ಲಕ್ಷಣ ತೀರ ಭಿನ್ನವಾಗಿರುತ್ತದೆ.
ಶ್ರೀಲ ಪ್ರಭುಪಾದ : ಹೊಸ ರಕ್ತಕಣಗಳು ಸತತವಾಗಿ ಅಸ್ತಿತ್ವಕ್ಕೆ ಬರುತ್ತಿರುತ್ತವೆ; ಹಳೆಯವು ನಾಶವಾಗುತ್ತಿರುತ್ತವೆ. ಆದ್ದರಿಂದ ದೇಹ ಯಂತ್ರ ಬೆಳೆಯುತ್ತಿದೆ ಎಂದು ನೀವು ಹೇಳುವಂತಿಲ್ಲ. ಹಾಗೆನ್ನುವುದು ಭ್ರಾಂತಿಯಷ್ಟೆ. ವಾಸ್ತವವಾಗಿ ಪ್ರತಿಕ್ಷಣವೂ ನೀವೊಂದು ಹೊಸ ದೇಹ ಪಡೆಯುತ್ತಿರುತ್ತೀರಿ.
(ಕಾರ್‌ನಲ್ಲಿದ್ದವರೆಲ್ಲಾ ಅದನ್ನು ಬಿಟ್ಟು ಇಳಿದು ಹೊರಬರುತ್ತಾರೆ) ನಿಮಗೆ ಯಾವು ಯಾವುದಕ್ಕೆ ಅರ್ಹತೆಯುಂಟೋ ಅದನ್ನೆಲ್ಲಾ ನೀವು ಐಹಿಕ ಪ್ರಕೃತಿಯಿಂದ ಪಡೆಯುತ್ತೀರಿ. ನೀವು ನಿರ್ದಿಷ್ಟವಾದುದೊಂದನ್ನು ಬಯಸಬಹುದು. ಆದರೆ ಅದೇ ವೇಳೆ ನೀವು ಬೇರೆಯೇ ಒಂದಕ್ಕೆ ಅರ್ಹರಾಗಿರಬಹುದು. ಹೀಗಾಗಿ ನಿಮ್ಮ ಆಸೆ ಈಡೇರುವುದಿಲ್ಲ.

ಉದಾಹರಣೆಗೆ ನಿರಾಕಾರವಾಗಿ ಮೂಢರು, ‘ನಾನು ದೇವರಾಗಬಯಸುತ್ತೇನೆ” ಎನ್ನುತ್ತಾರೆ. ಆದರೆ ಅಂಥ ಅಪೇಕ್ಷೆ ಎಂದಿಗೂ ಫಲಿಸುವುದಿಲ್ಲ. ಆದ್ದರಿಂದಲೇ ನಾವು, ”ಮೊದಲು ಅರ್ಹತೆ ಪಡೆಯಿರಿ, ಬಳಿಕ ಅಪೇಕ್ಷಿಸಿ’ ಎಂದು ಹೇಳುತ್ತೇವೆ.
ಭಕ್ತ: ಇದೆಲ್ಲಾ ನಮ್ಮ ಅರ್ಹತೆಯನ್ನವಲಂಬಿಸುತ್ತದೆ. ಅಲ್ಲವೆ?
ಶ್ರೀಲ ಪ್ರಭುವಾದ : ಹೌದು. ನಿಮ್ಮ ಸ್ಥಾನ ಪ್ರತಿಕ್ಷಣ ಬದಲಾಗುತ್ತಿರುತ್ತದೆ. ಆದ್ದರಿಂದ ಒಂದು ಮಿತಿಯ ತನಕ ನೀವು ಅಪೇಕ್ಷೆ ಪಡಬಹುದು. ”ನಾನು ಸಮಗ್ರ ಪರಿಪೂರ್ಣವಾದದ್ದು – ಜಾಗತಿಕ ಪರತರ ವಸ್ತು – ಆಗುತ್ತೇನೆ’ ಎಂದು ನೀವು ಘೋಷಿಸಿಕೊಳ್ಳುವಂತಿಲ್ಲ.
ಮಾಯಾವಾದವನ್ನು ಪ್ರತಿಪಾದಿಸುವ ದಾರ್ಶನಿಕರು ಮಾಡುವ ತಪ್ಪು ಇದೇ. ನಾವೆಲ್ಲ ಅಹಂ ಬ್ರಹ್ಮಾಸ್ಮಿ. ಆದ್ದರಿಂದ ಹಾಗೂ ಪರಮೋನ್ನತವಾದದ್ದೂ (ಪರಬ್ರಹ್ಮನ್) ಆತ್ಮವೇ ಆದ್ದರಿಂದ ಮಾಯಾವಾದಿಗಳು, “ಎಲ್ಲ ವಿವರಗಳಲ್ಲೂ ನಾನು ಆ ದೇವರಿಗೆ ಎಲ್ಲ ರೀತಿಯಲ್ಲಿ ಸಮನಾದವನು ಎಂದು ಘೋಷಿಸುತ್ತಾರೆ.
ಸಮುದ್ರದ ಒಂದು ಹನಿ ನೀರು ಇಡೀ ಪೆಸಿಫಿಕ್ ಸಾಗರದ ನೀರಿನ ಘಟಕಾಂಶಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಆ ಹನಿ ಗುಣಾತ್ಮಕವಾಗಿ ಸಮುದ್ರದ ನೀರಿನ ಜೊತೆ ಒಂದು. ಆದರೆ ಅದೇ ನೀರು ಹನಿ, ”ನಾನೇ ಸಮುದ್ರವಾಗುತ್ತೇನೆ” ಎಂದರೆ ಅದು ಸಾಧ್ಯವಾಗದ ಮಾತು. ಪರಮೋನ್ನತನ ಜೊತೆ ನಾವು ಗುಣಾತ್ಮಕವಾಗಿ ಒಂದು ಆದರೆ ಪ್ರಮಾಣದಲ್ಲಿ ಕಿರಿಯರು ಎಂಬುದನ್ನು ನಾವು ಅರ್ಥಮಾಡಿಕೊಂಡರೆ ಅದೀಗ ನಮ್ಮ ಪರಿಪೂರ್ಣತೆ.






Leave a Reply