ಶ್ರೀ ಚೈತನ್ಯ ಮಹಾಪ್ರಭುಗಳ ಪರಮಾಪ್ತ ಸೇವಕರು ಮತ್ತು ಅಪ್ರತಿಮ ವಿದ್ವಾಂಸರು
ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು ಅಲೌಕಿಕ ಗುಣಗಳ ಗಣಿಯಾಗಿದ್ದಾರೆ. ಚೈತನ್ಯ ಮಹಾಪ್ರಭುಗಳ ಅವತಾರ ಕಾಲದಲ್ಲಿನ ಅವರ ದಿನಚರಿಯನ್ನು ವಿವರವಾಗಿ ದಾಖಲಿಸಿದ ಮಹನೀಯರೇ ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು. ಶ್ರೀ ಚೈತನ್ಯ ಮಹಾಪ್ರಭುಗಳು ಪರಂಪರೆಗೆ ಇದವರ ಮಹತ್ತರ ಕೊಡುಗೆ. ಚೈತನ್ಯ ಮಹಾಪ್ರಭುಗಳು ಪುಣ್ಯ ಚರಿತ್ರೆಯ ಚಾರಿತ್ರಿಕ ಸ್ತೋತ್ರಗಳೆಂದರೆ ಶ್ರೀ ಮುರಾರಿ ಗುಪ್ತ ಮತ್ತು ಸ್ವರೂಪ ದಾಮೋದರ ಗೋಸ್ವಾಮಿಗಳು ನಿರ್ವಹಿಸಿದ ಕಡತಗಳೆಂದು ಕರೆಯುವ ದಿನಚರಿ (ಡೈರಿ)ಗಳಾಗಿವೆ.

ಮಹಾಪ್ರಭುಗಳ ಸಂನ್ಯಾಸ ದೀಕ್ಷೆವರೆಗಿನ ಮೊದಲ ಇಪ್ಪತ್ತನಾಲ್ಕು ವರ್ಷಗಳ ಕುರಿತಾದ ಜೀವನದ ರೋಚಕ ಟಿಪ್ಪಣಿಗಳನ್ನು ಮಹಾಪ್ರಭುಗಳ ಆಕಾಲದ ನಿಕಟವರ್ತಿಗಳೂ, ವೈದ್ಯರೂ ಆಗಿದ್ದ ಶ್ರೀ ಮುರಾರಿ ಗುಪ್ತ ಅವರು ಮಾಡಿದ್ದಾರೆ. ಚೈತನ್ಯ ಮಹಾಪ್ರಭುಗಳ ಸಂನ್ಯಾಸ ಜೀವನದ 48 ವರ್ಷಗಳ ಪ್ರಮುಖ ಘಟನಾವಳಿಗಳ ವಿವರಗಳು ಲಭ್ಯ ಇರುವುದು ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳ ದಿನಚರಿಗಳಲ್ಲಿ.
ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳಿಗೆ ಚೈತನ್ಯ ಮಹಾಪ್ರಭುಗಳನ್ನು ಕುರಿತಂತೆ ಇದ್ದ ಭಕ್ತಿ ಪ್ರೇಮದ ತೀವ್ರತೆ ಅರಿವಾಗಬೇಕಾದರೆ ಅವರ ಜೀವನವನ್ನು ಸಂಕ್ಷಿಪ್ತವಾಗಿಯಾದರೂ ಗಮನಿಸಬೇಕು. ನವದ್ವೀಪದಲ್ಲಿ ಪುರುಷೋತ್ತಮಾಚಾರ್ಯ ಎಂಬ ಹೆಸರಿನಿಂದ ಚೈತನ್ಯ ಮಹಾಪ್ರಭುಗಳ ಪೂರ್ವಾಶ್ರಮದ ಸಹಚರರಾಗಿದ್ದರು.
ಚೈತನ್ಯ ಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸಿದ ನಂತರ ಪುರುಷೋತ್ತಮಾಚಾರ್ಯರು ವಿರಹವೇದನೆಗೆ ಒಳಗಾದರು. ಅದೇ ಸ್ಥಿತಿಯಲ್ಲಿ ವಾರಾಣಸಿಗೆ ತೆರಳಿ ಸಂನ್ಯಾಸ ಸ್ವೀಕರಿಸಿದರು. ಪ್ರಾಪಂಚಿಕತೆಯಡೆಗೆ ದಿವ್ಯ ನಿರ್ಲಕ್ಷ್ಯ ಅಸೀಮ ವಿದ್ವತ್ತು, ಅಹಂಕಾರ ರಹಿತ ನಿರ್ಲಿಪ್ತ ಭಾವನೆಯ ಸೇವಾ ತತ್ಪರತೆಗಳ ಅನುಪಮ ವ್ಯಕ್ತಿತ್ವ ಶ್ರೀ ಸ್ವರೂಪ ದಾಮೋದರ ಗೋಸ್ವಾಮಿಗಳದು. ತಮ್ಮ ಹೃದಯಾಂತರಳಾದಲ್ಲಿ ಪರಮ ದೇವೋತ್ತಮ ಪುರುಷ ಶ್ರೀ ಕೃಷ್ಣನ ಬಗೆಗೆ ಅನನ್ಯ ಭಕ್ತಿ-ಭಾವ ತುಂಬಿಕೊಂಡಿದ್ದರು.

ನಿರಂತರವಾಗಿ ಯಾವ ಅಡಚಣೆಯೂ ಇಲ್ಲದೆ ಶ್ರೀಕೃಷ್ಣನ ಕೈಂಕರ್ಯ ಅವರ ಅದಮ್ಯ ಆಸೆಯಾಗಿತ್ತು. ಇದೇ ಕಾರಣಕ್ಕಾಗಿ ಮರುಳುಗೊಂಡು ಕಕ್ಕುಲಾತಿಯಲ್ಲಿ ಸಂನ್ಯಾಸ ಸ್ವೀಕರಿಸಿದರು. ತಮಗೆ ಸಂನ್ಯಾಸ ನೀಡಿದ ಗುರುಗಳ ಅಪ್ಪಣೆಯನ್ನು ಪಡೆದು ನೀಲಜಲಕ್ಕೆ ತೆರಳಿ ಶ್ರೀ ಚೈತನ್ಯ ಮಹಾಪ್ರಭುಗಳ ಚರಣಾಶ್ರಯ ಪಡೆದರು. ಅನಂತರದಲ್ಲಿ ಅವರ ಕಾರ್ಯದರ್ಶಿಯಂತೆ ಅನವರತ ಸೇವೆ ಮಾಡಿದರು.
ಶ್ರೀಲ ಸ್ವರೂಪ ದಾಮೋದರ ಅವರು ಜ್ಞಾನಕ್ಕೆ ಪರಧಿಯಂತೆ ಇದ್ದರು. ಆದರೆ ಎಂದಿಗೂ ವಾಗ್ವಾದಕ್ಕಿಳಿಯುತ್ತಿರಲಿಲ್ಲ. ಯಾರಾದರೂ ಏನನ್ನಾದರೂ ಬರೆದಿದ್ದರೆ ಕಾವ್ಯ ಸಂಯೋಜನೆ ಮಾಡಿದ್ದರೆ ಚೈತನ್ಯ ಮಹಾಪ್ರಭುಗಳ ಮುಂದೆ ಹಾಡುವ ಮೊದಲು ಅರ್ಪಿಸುವ ಮೊದಲು, ಸ್ವರೂಪ ದಾಮೋದರರು ಅದನ್ನು ಪರಿಶೀಲಿಸಿ ತಿದ್ದಿ ಸರಿಪಡಿಸುತ್ತಿದ್ದರು.
ಈ ಪರಿಶೀಲನೆಯನಂತರವಷ್ಟೇ ಈ ರಚನೆಗಳನ್ನು ಕೇಳಲು ಸಮ್ಮತಿಸುತ್ತಿದ್ದರು. ಚೈತನ್ಯ ಮಹಾಪ್ರಭುಗಳು ಆಧ್ಯಾತ್ಮಿಕತೆ ಇಲ್ಲದ ಯಾವ ಸಾಹಿತ್ಯವನ್ನೂ ಕೇಳಲು ಸುತಾರಾಂ ಒಪ್ಪುತ್ತಿರಲಿಲ್ಲ. ಭಕ್ತಿಸೇವೆಗೆ ಭಂಗ ಉಂಟುಮಾಡುವ ಯಾವ ರಚನೆಯಿಂದಲೂ ಅವರಿಗೆ ಆನಂದವಾಗುತ್ತಿರಲಿಲ್ಲ. ಸ್ವರೂಪ ದಾಮೋದರ ಪ್ರಭುಗಳು ಗರುಡ ದೃಷ್ಟಿಯಿಂದ ಈ ಪರಿಶೀಲನೆ ನಡೆಸುತ್ತಿದ್ದರು. ತಮ್ಮಿಂದ ಒಪ್ಪಿಗೆ ಪಡೆದನಂತರವಷ್ಟೇ ಚೈತನ್ಯ ಮಹಾಪ್ರಭುಗಳು ಈ ರಚನೆಯನ್ನು ಕೇಳುವಂತೆ ಅವರು ಗಮನಹರಿಸುತ್ತಿದ್ದರು.

ಶ್ರೀ ವಿದ್ಯಾಪತಿ ಮತ್ತು ಶ್ರೀ ಚಂಡೀದಾಸ ಅವರ ಪದ್ಯಗಳನ್ನು ಶ್ರೀ ಸ್ವರೂಪ ದಾಮೋದರ ಅವರು ಆಗಾಗ್ಗೆ ವಾಚನ ಮಾಡುತ್ತಿದ್ದರು. ಜಯದೇವ ಗೋಸ್ವಾಮಿಯವರ ಗೀತ ಗೋವಿಂದದ ಗಾಯನವೂ ಅವರಿಗೆ ಪ್ರಿಯವಾದ ಸೇವೆಯಾಗಿತ್ತು. ಅವರು ಹಾಡಲು ತೊಡಗಿದರೆಂದರೆ ಗಂಧರ್ವ ಗಾಯನದ ನೆನಪು ಕೇಳುಗರಿಗಾಗುತ್ತಿತ್ತು. ಭಾವತೀವ್ರತೆ, ಅಂತರಂಗ ಶುದ್ಧಿ, ಅಪೂರ್ವ ಕಂಠಸಿರಿ, ತಾದಾತ್ಮ್ಯೆ ಮತ್ತು ಸಂಗೀತ ಶಾಸ್ತ್ರ ಪಾಂಡಿತ್ಯ ಮೇಳೈಸಿ ವಾತಾವರಣದಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು.
ಕೇಳುಗರ ಮೈ ನವಿರೇಳುತ್ತಿತ್ತು. ಅವರು ತತ್ತ್ವ ಜಿಜ್ಞಾಸೆಗಳಿದರೆ ಬೃಹಸ್ಪತೀಯೇ ಮಾತನಾಡುತ್ತಿರುವನೇನೋ ಎಂಬ ಆಶ್ಚರ್ಯ ಮೂಡುತ್ತಿತ್ತು. ಅವನ ಸಂಗೀತ ಸೇವೆ, ವಿದ್ವತ್ ಸೇವೆಗಳಿಂದ ಸಂಪ್ರೀತರಾದ ಚೈತನ್ಯ ಮಹಾಪ್ರಭುಗಳು ಪ್ರೀತಿಯಿಂದ ದಾಮೋದರಾ ಎಂದು ಕರೆಯುತ್ತಿದ್ದರು. ದಾಮೋದರಾ ಎಂಬ ಹೆಸರು ಅವರ ಸಂನ್ಯಾಸದ ಹೆಸರಾದ ಸ್ವರೂಪ-ಜೊತೆಗೆ ಹಾಗಾಗಿ ನಂಟು ಹಾಕಿಕೊಂಡಿತು.
“ಸಂಗೀತ ದಾಮೋದರ” ಅವರು ರಚಿಸಿದ ಸಂಗೀತ ಶಾಸ್ತ್ರಗ್ರಂಥ. ಅವರ ಪಾಂಡಿತ್ಯ, ಪ್ರತಿಭೆ ಮತ್ತು ಅವರಿಗಿದ್ದ ದೈವಾನುಗ್ರಹ ಇವೆಲ್ಲದರ ಮೂಲವಾದ ಅವರ ದೈವಭಕ್ತಿಗೆ ಹಿಡಿದ ಕೈಗನ್ನಡಿ ಈ ಗ್ರಂಥ.
ತಮ್ಮ ಸಮಕಾಲೀನರಾಗಿದ್ದ ಅದ್ವೈತ ಆಚಾರ್ಯ, ನಿತ್ಯಾನಂದ ಪ್ರಭು ಇವರಿಗೆ ಆಪ್ತರಾಗಿದ್ದರು. ಶ್ರೀನಿವಾಸ ಠಾಕುರ ಮತ್ತವರ ಜೊತೆಗಿನ ಚೈತನ್ಯ ಮಹಾಪ್ರಭುಗಳ ಎಲ್ಲ ಅನುಚರರಿಗೆ ಜೀವದ ಜೀವವಾಗಿ ಆರಾಧ್ಯ ವ್ಯಕ್ತಿಯಾಗಿ ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು ಬೆಳಗಿ ಬಾಳಿದರು.






Leave a Reply