ಶ್ರೀ ಕೃಷ್ಣನು ನೀಡಿದ ದಿವ್ಯ ಜ್ಞಾನದ ದಿನದ ಸುಸ್ಮರಣೆಯೇ ಗೀತಾ ಜಯಂತಿ. ಭಗವದ್ಗೀತೆಯ ಆಗಮನದ ಶುಭದಿನವನ್ನು ಗೀತಾ ಜಯಂತಿ ಎಂದು ಆಚರಿಸಲಾಗುತ್ತದೆ. ಅದು ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ, ಮೋಕ್ಷದಾ ಏಕಾದಶಿಯಂದು. (ಈ ಬಾರಿ ಡಿಸೆಂಬರ್ 1, 2025)

ಐದು ಸಾವಿರ ವರ್ಷಗಳಿಗೂ ಮುನ್ನ, ಈ ದಿನದಂದೇ ಶ್ರೀಕೃಷ್ಣನು ವೈದಿಕ ಜ್ಞಾನದ ಸಾರವನ್ನು ಅರ್ಜುನನಿಗೆ ಶ್ರುತಪಡಿಸಿದನು ಮತ್ತು ಅವನಿಗೆ ಬದುಕಿನ ಅಂತಿಮ ಗುರಿಯನ್ನು ಕುರಿತಂತೆ ಜ್ಞಾನೋದಯ ಉಂಟು ಮಾಡಿದನು. ಆದುದರಿಂದ ಅದು ಗೊಂದಲವು – ಸ್ಪಷ್ಟತೆಯಲ್ಲಿ ಮತ್ತು ಕರ್ತವ್ಯ -ಭಕ್ತಿಯಲ್ಲಿ ಪರಿವರ್ತನೆಯಾಗುವುದನ್ನು ನಮಗೆ ನೆನಪಿಸುವ ದಿನವೂ ಆಗಿದೆ.
ಈ ಪವಿತ್ರ ಸಂದರ್ಭದಲ್ಲಿ ಭಕ್ತರು ಗೀತೆ ವಾಚಿಸಿ, ಯಜ್ಞಗಳಲ್ಲಿ ಭಾಗವಹಿಸಿ, ಮತ್ತು ವಿಶ್ವಾದ್ಯಂತ ಕೃಷ್ಣನ ಭಕ್ತಿ ಮತ್ತು ಧರ್ಮದ ಸಂದೇಶವನ್ನು ಹರಡಲು ಮುಂದಾಗುತ್ತಾರೆ. ಈ ಸೇವೆಗೆ ಸಹಕರಿಸುವುದರಿಂದ ಪ್ರತಿ ಮನೆಗೂ ಭಗವದ್ಗೀತೆಯನ್ನು ತಲಪಿಸಬೇಕೆನ್ನುವ ಆಚಾರ್ಯರ ಧ್ಯೇಯವನ್ನು ಪಾಲಿಸಿದಂತಾಗುತ್ತದೆ.
ಗೀತಾ ಜಯಂತಿಯಂದಿನ ಚಟುವಟಿಕೆಗಳಲ್ಲಿ ಕೆಲವು :
- ಗೀತೆ ವಾಚನ
- ಪುಸ್ತಕ ವಿತರಣೆ – ಗೀತೆಯ ಬೋಧನೆಯನ್ನು ವ್ಯಾಪಕವಾಗಿ ಹರಡಲು ವಿಶೇಷ ಕಾರ್ಯಕ್ರಮಗಳ ಮೂಲಕ ಭಗವದ್ಗೀತೆ ಪುಸ್ತಕಗಳ ವಿತರಣೆ. ಇದನ್ನು ಗೀತೆ ದಾನ ಎನ್ನುತ್ತಾರೆ.
- ಭಗವದ್ಗೀತೆಯ ಬೋಧನೆಗಳನ್ನು ಚರ್ಚಿಸಲು ವಿಶೇಷ ತರಗತಿಗಳು.
ಕುರುಕ್ಷೇತ್ರದಿಂದ
ಮಹಾಭಾರತದಲ್ಲಿ ಸೇರಿಕೊಂಡಿರುವ ಭಗವದ್ಗೀತೆಯು ಆತ್ಮ ಮತ್ತು ಪರಮಾತ್ಮ ನಡುವಣ ಗಾಢವಾದ ಸಂಭಾಷಣೆಯನ್ನು ಪ್ರಸ್ತುತ ಪಡಿಸುತ್ತದೆ. ಇದು ಭಗವಂತನ ಹಾಡು. ಇದು ಗೀತೋಪನಿಷತ್ತು ಎಂದೂ ಪ್ರಸಿದ್ಧಿಯಾಗಿದೆ. ಭಗವಂತನು ನುಡಿದ ಈ ಭಗವದ್ಗೀತೆಗೆ ಏಕೆ ಅಷ್ಟು ಮಹತ್ವ? ಪರಿಶೀಲಿಸೋಣ.

ಕೃಷ್ಣ ಮತ್ತು ಅರ್ಜುನರ ನಡುವಣ ಸಂವಾದವನ್ನು ವ್ಯಾಸದೇವರು ದಾಖಲಿಸಿಕೊಂಡರು. ಅನಂತರ ಅದನ್ನು ಪುಸ್ತಕ ರೂಪದಲ್ಲಿ ಸಂಯೋಜಿಸಿದರು. ಅವರು ಭಗವಾನ್ ಉವಾಚ ಎಂದರು. ಅಂದರೆ ಭಗವಾನ್ ಕೃಷ್ಣನ ನೇರ ನುಡಿ. ಭಗವಾನ್ ಎಂದರೆ ಪರಮ ಪ್ರಭು. ಆದುದರಿಂದ ಅದು ಪರಿಪೂರ್ಣ.
ಭಗವದ್ಗೀತೆಯು ಕೃಷ್ಣನು ನೀಡಿರುವ ವೈದಿಕ ಜ್ಞಾನದ ಸಾರ. ಅವನ ಸಂದೇಶವು ನಮ್ಮ ಬದುಕಿನ ಸಂದೇಹ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುತ್ತದೆ ಮತ್ತು ಸುಖ, ಸಂತೋಷ, ತೃಪ್ತಿ, ಸಾರ್ಥಕತೆಯನ್ನು ತಂದುಕೊಡುತ್ತದೆ. ಗೀತಾ ಮಹಾತ್ಮ್ಯದಲ್ಲಿ ಹೇಳಿರುವಂತೆ, ಭಗವದ್ಗೀತೆಯಲ್ಲಿನ ಬೋಧನೆಯನ್ನು ಪಾಲಿಸಿದರೆ ಬದುಕಿನ ಎಲ್ಲ ಸಂಕಷ್ಟ ಮತ್ತು ಆತಂಕಗಳಿಂದ ಮುಕ್ತರಾಗಬಹುದು.
ಭಗವಂತನು ಅರ್ಜುನನಿಗೆ ಭಗವದ್ಗೀತೆಯು ಸಾಗಿ ಬಂದ ರೀತಿಯನ್ನು ವಿವರಿಸುತ್ತಾನೆ. ಇದನ್ನು ಮೊದಲು ಸೂರ್ಯದೇವನಿಗೆ ಹೇಳಲಾಯಿತು. ಸೂರ್ಯದೇವನು ಇದನ್ನು ಮನುವಿಗೆ ವಿವರಿಸಿದ. ಮನುವು ಇಕ್ಞ್ವಾಕುವಿಗೆ ವಿವರಿಸಿದ. ಇದೇ ರೀತಿಯಲ್ಲಿ, ಗುರುಶಿಷ್ಯ ಪರಂಪರೆಯಲ್ಲಿ ಈ ಯೋಗ ಪದ್ಧತಿಯು ಸಾಗಿ ಬಂದಿದೆ. ಆದರೆ ಕಾಲ ಕಳೆದಂತೆ ಇದು ನಷ್ಟವಾಯಿತು. ಪರಿಣಾಮವಾಗಿ ಭಗವಂತನು ಇದನ್ನು ಮತ್ತೆ ಹೇಳಬೇಕಾಯಿತು. ಈ ಬಾರಿ ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಅವನು ಇದನ್ನು ಅರ್ಜುನನಿಗೆ ಉಪದೇಶಿಸಿದ.
ಅರ್ಜುನನು ಅದನ್ನು ಹೇಗೆ ಸ್ವೀಕರಿಸಿದ ಎನ್ನುವುದನ್ನು ಗಮನಿಸಬೇಕು – (10.12-14) “ನೀನು ದೇವೋತ್ತಮ ಪರಮ ಪುರುಷ, ಪರಂಧಾಮ, ಪವಿತ್ರ, ಪರಿಪೂರ್ಣ ಸತ್ಯ. ನೀನು ನಿತ್ಯನು, ದಿವ್ಯನು, ಆದಿಪುರುಷನು. ನಿನಗೆ ಹುಟ್ಟಿಲ್ಲ. ನೀನೇ ಅತ್ಯಂತ ಶ್ರೇಷ್ಠನು. ನಾರದ, ಅಸಿತ, ದೇವಲ ಮತ್ತು ವ್ಯಾಸರಂತಹ ಮಹರ್ಷಿಗಳು ನಿನ್ನ ವಿಷಯದಲ್ಲಿ ಈ ಸತ್ಯವನ್ನು ದೃಢಪಡಿಸುತ್ತಾರೆ. ಈಗ ನೀನೇ ಇದನ್ನು ನನಗೆ ಹೇಳುತ್ತಿದ್ದೀಯೆ. ಕೃಷ್ಣ ನೀನು ನನಗೆ ಹೇಳುವುದನ್ನೆಲ್ಲ ಸತ್ಯವೆಂದು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಪ್ರಭುವೇ, ದೇವತೆಗಳಾಗಲಿ ದಾನವರಾಗಲಿ ನಿನ್ನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲಾರರು.”

ಭಗವದ್ಗೀತೆ ಎಂದರೇನು? ಭಗವದ್ಗೀತೆಯ ಗುರಿಯು ಮಾನವ ಕುಲವನ್ನು ಐಹಿಕ ಅಸ್ತಿತ್ವದ ಅಜ್ಞಾನದಿಂದ ಉದ್ಧರಿಸುವುದು. ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಬೇಕಾಗಿ ಬಂದು ಅರ್ಜುನನು ಕಷ್ಟದಲ್ಲಿದ್ದಂತೆ, ಈ ಲೋಕದ ಪ್ರತಿಯೊಬ್ಬರೂ ಹಲವಾರು ಬಗೆಯ ಕಷ್ಟದಲ್ಲಿರುತ್ತಾರೆ. ಅರ್ಜುನನು ಕೃಷ್ಣನಿಗೆ ಶರಣಾಗತನಾದನು. ಇದರಿಂದಾಗಿ ಗೀತೆಯ ಉಪದೇಶವಾಯಿತು. ಅದನ್ನು ಅರ್ಥ ಮಾಡಿಕೊಂಡರೆ ನಾವೂ ಕೂಡ ಅರ್ಜುನನಂತೆ ಸಂಕಷ್ಟದಿಂದ ಪಾರಾಗಬಹುದು.
ಭಗವದ್ಗೀತೆಯ ವಸ್ತುವು ಐದು ಮೂಲ ಸತ್ಯಗಳ ಅರಿವನ್ನು ಒಳಗೊಳ್ಳುತ್ತದೆ. ಭಗವದ್ಗೀತೆಯಲ್ಲಿ ಪರಮ ನಿಯಾಮಕನಾದ ಈಶ್ವರ, ನಿಯಮಕ್ಕೊಳಪಟ್ಟ ಜೀವಿಗಳು , ಪ್ರಕೃತಿ (ಐಹಿಕ ನಿಸರ್ಗ), ಮತ್ತು ಕಾಲ (ಇಡೀ ವಿಶ್ವದ ಅಸ್ತಿತ್ವದ ಅಥವಾ ಐಹಿಕ ನಿಸರ್ಗದ ಕಾಲಾವಧಿ) ಮತ್ತು ಕರ್ಮ ಇವುಗಳನ್ನು ಚರ್ಚಿಸಲಾಗಿದೆ.
ವಿಶ್ವಸೃಷ್ಟಿಯು ವಿಧವಿಧವಾದ ಕರ್ಮಗಳಿಂದ ತುಂಬಿದೆ. ಎಲ್ಲ ಜೀವಿಗಳು ವಿವಿಧ ಕರ್ಮಗಳಲ್ಲಿ ತೊಡಗಿದ್ದಾರೆ. ದೇವರು ಎಂದರೇನು? ಜೀವಾತ್ಮರು ಯಾರು, ಪ್ರಕೃತಿ ಎಂದರೇನು? ವಿಶ್ವಸೃಷ್ಟಿ ಎಂದರೇನು, ಅದನ್ನು ಕಾಲವು ಹೇಗೆ ನಿಯಂತ್ರಿಸುತ್ತದೆ ಮತ್ತು ಜೀವಿಗಳ ಕರ್ಮಗಳು ಯಾವುವು ಎಂದು ಭಗವದ್ಗೀತೆಯಿಂದ ನಾವು ಕಲಿಯಬೇಕು.
ಭಗವದ್ಗೀತೆಯು ಈಶ್ವರ, ಜೀವ, ಪ್ರಕೃತಿ, ಕಾಲ, ಕರ್ಮ ಎಲ್ಲವನ್ನೂ ವಿವರಿಸುತ್ತದೆ. ಈ ಐವರಲ್ಲಿ ಈಶ್ವರ, ಜೀವಿಗಳು, ಪ್ರಕೃತಿ ಮತ್ತು ಕಾಲ ಅನಂತ. ಆದರೆ ಕರ್ಮ ಸನಾತನವಲ್ಲ. ಕರ್ಮಫಲಗಳು ಬಲು ಪ್ರಾಚೀನವಾಗಿರಬಹುದು. ಆದರೆ ನಾವು ನಮ್ಮ ಕರ್ಮಫಲಗಳನ್ನು ಬದಲಾಯಿಸಬಹುದು. ಈ ಬದಲಾವಣೆಯು ನಮ್ಮ ಜ್ಞಾನದ ಪರಿಪೂರ್ಣತೆಯನ್ನು ಅವಲಂಬಿಸಿದೆ.

ನಾವು ವಿವಿಧ ಕರ್ಮಗಳಲ್ಲಿ ನಿರತರಾಗಿರುತ್ತೇವೆ. ಎಲ್ಲ ಕರ್ಮಗಳ ಫಲಗಳಿಂದ ಬಿಡುಗಡೆ ಹೊಂದಲು ನಾವು ಯಾವ ಕರ್ಮಗಳನ್ನು ನಡೆಸಬೇಕು ಎನ್ನುವುದು ನಮಗೆ ಖಚಿತವಾಗಿ ತಿಳಿದಿಲ್ಲ. ಆದರೆ ಭಗವದ್ಗೀತೆಯು ಅದನ್ನು ವಿವರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಡೀ ಜಗತ್ತಿಗೆ ಒಂದೇ ಧರ್ಮಗ್ರಂಥ ಭಗವದ್ಗೀತೆ ಇರಲಿ ಎನ್ನುಬಹುದು.
ಯಥಾರೂಪ
ಏನಿದು ಭಗವದ್ಗೀತೆಯ ಯಥಾರೂಪ? ಯಾವುದೇ ಗ್ರಂಥವನ್ನು ಅನೇಕ ಜನರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅದು ಅವರವರ ಭಾವಕ್ಕೆ ತಕ್ಕಂತೆ. ಆದರೆ ಭಗವದ್ಗೀತೆಯ ವಿಷಯವೇ ಬೇರೆ. ಭಗವದ್ಗೀತೆಯು ಒಂದು ಮಹಾನ್ ವಿಜ್ಞಾನ. ಜನರಿಗೆ ಈ ವಿಜ್ಞಾನ ಗೊತ್ತಿಲ್ಲ. ದುರದೃಷ್ಟವಶಾತ್ ಭಗವದ್ಗೀತೆಯನ್ನು ಯಥಾರೂಪವಾಗಿ ಸ್ವೀಕರಿಸುವುದಿಲ್ಲ. ತಮ್ಮ ಮನಸೋ ಇಚ್ಛೆ ವ್ಯಾಖ್ಯಾನಿಸಿ ಅದನ್ನು ಬದಲಿಸಲು ಪ್ರಯತ್ನಿಸಲಾಗುತ್ತದೆ. ಅದು ಜಗತ್ತನ್ನು ಹಾಳು ಮಾಡಿದೆ.

ಭಗವದ್ಗೀತೆಯನ್ನು ಯಥಾರೂಪದಲ್ಲಿ ಬೋಧಿಸಿದ್ದರೆ ವಿಶ್ವದ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಶಾಂತಿ, ಸೌಹಾರ್ದ, ನೆಮ್ಮದಿ ಎಲ್ಲವೂ ವ್ಯವಸ್ಥಿತವಾಗಿರುತ್ತಿತ್ತು. ಇದು ಭಗವಂತನ ನೇರ ಸಂದೇಶ ಎನ್ನುವುದು ತಿಳಿದಿದ್ದರೂ ಮೂರ್ಖರು ಹಾಗೆ ಮಾಡಿದರು. ಆದರೂ ಕಾಲ ಮಿಂಚಿಲ್ಲ. ಭಗವದ್ಗೀತೆಯ ಯಥಾರೂಪ ಇದೆ. ಇದು ವಿಶ್ವದಲ್ಲಿ ನೆಮ್ಮದಿಗೆ ಖಂಡಿತ ಸಹಾಯ ಮಾಡುತ್ತದೆ. ಇದೊಂದು ರೀತಿಯಲ್ಲಿ ಶಾಂತಿ ಸೂತ್ರ.
ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ಭಗವದ್ಗೀತಾ ಯಥಾರೂಪವನ್ನು ಪಾಂಡಿತ್ಯ ಪೂರ್ಣವಾಗಿ, ಆದರೆ ಸರಳವಾಗಿ ಪ್ರಸ್ತುತಪಡಿಸಿದ್ದಾರೆ. ಇದು ಜಗತ್ತಿನಲ್ಲಿ ಗೀತೆಯ ಅತ್ಯಂತ ಜನಪ್ರಿಯ ಆವೃತ್ತಿಯಾಗಿದೆ. ಪ್ರತಿಯೊಬ್ಬರಿಗೂ ಈ ಅಪೂರ್ವ ಉಡುಗೊರೆಯನ್ನು ಹಂಚಬೇಕು ಎಂದು ಶ್ರೀಲ ಪ್ರಭುಪಾದರು ಬಯಸಿದ್ದರು.
ಅಂತೆಯೇ ಇಸ್ಕಾನ್ ಬೆಂಗಳೂರು ಭಗವದ್ಗೀತೆಯ ಪ್ರತಿಯನ್ನು ಎಲ್ಲೆಡೆ ವಿತರಿಸುವ ಧ್ಯೇಯವನ್ನು ಹೊಂದಿದೆ ಮತ್ತು ಕಾರ್ಯನಿರತವಾಗಿದೆ. ಗೀತಾ ಜಯಂತಿಯ ಸುಸಂದರ್ಭದಲ್ಲಿ ಅದು ಗೀತೆ ವಿತರಣೆಯ “ಯಜ್ಞ”ವನ್ನೇ ಕೈಗೊಳ್ಳುತ್ತದೆ. ಆಗ ಗೀತೆಯನ್ನು ಪಡೆಯುವುದು ಪವಿತ್ರ ಕಾರ್ಯವೆಂದು ಭಾವಿಸಲಾಗಿದೆ.






Leave a Reply