ಸೂರ್ಯನಾರಾಯಣ ಮತ್ತು ಸಂಧ್ಯಾವಂದನೆ
– ಶ್ರೀ ಶ್ರೀ ಶ್ರೀ ರಂಗಪ್ರಿಯಮಹಾದೇಶಿಕಶ್ರೀಪಾದ ಶ್ರೀ ಶ್ರೀಃ
ಸೂರ್ಯನಾರಾಯಣ ಎಂಬ ಶಬ್ದದಲ್ಲಿ ಸೇರಿರುವ ಸೂರ್ಯ ಮತ್ತು ನಾರಾಯಣ ಎಂಬ ಎರಡು ಶಬ್ದಗಳೂ ಲೋಕದಲ್ಲಿ ಪ್ರಸಿದ್ಧವಾಗಿವೆ. ಇವುಗಳಲ್ಲಿ – ‘ಸೂರ್ಯ ಎಂಬುವನು ಜಗತ್ತಿನಲ್ಲಿ ಕಣ್ಣುಳ್ಳ ಜೀವಿಗಳು ನಿತ್ಯ ನೋಡುವ ಒಂದು ಅದ್ಭುತವಾದ ಬೆಂಕಿಯ ಗೋಳ.

ಹೀಲಿಯಂ ಎಂಬ ಅನಿಲದ ಇಂಧನದಿಂದ ನಿರಂತರವಾಗಿ ಉರಿಯುತ್ತಿರುವ ಗೋಳ. ಸ್ವಯಂಪ್ರಕಾಶವಾಗಿದ್ದು ತನ್ನ ವ್ಯೂಹಕ್ಕೆ ಸೇರಿದ ಎಲ್ಲ ಗ್ರಹಗಳಿಗೂ ಪ್ರಕಾಶವನ್ನು ನೀಡುತ್ತಿರುವ ನಕ್ಷತ್ರ. ನಮಗೆ ಅತ್ಯಂತ ಹತ್ತಿರದಲ್ಲಿರುವ ನಕ್ಷತ್ರ. ಎಲ್ಲ ಜೀವಿಗಳಿಗೂ ಜೀವಾತುವಾಗಿರುವ ನಕ್ಷತ್ರ’- ಎಂದು ವಿಜ್ಞಾನಿಗಳು ಹೇಳುತ್ತಾರೆ.
‘ದ್ಯುಮಣಿ, ದಿನಮಣಿ, ಜಗತ್ತಿನ ಕಣ್ಣು, ಅಹಸ್ಸುಗಳ ಕೇತು, ಚಿರ ಪುರಾತನವಾಗಿದ್ದರೂ ನಿತ್ಯನೂತನವಾಗಿ ಕಾಣುತ್ತಿರುವ ದಿವ್ಯ ಭವ್ಯರೂಪ’ – ಎಂದು ಮೊದಲಾಗಿ ಅಲಂಕಾರಿಕವಾಗಿ ಕವಿಗಳು ಅದನ್ನು ಕೊಂಡಾಡುತ್ತಾರೆ. ಎಲ್ಲ ಜೀವಿಗಳ ಅಸ್ತಿತ್ವ, ಲೋಕವ್ಯವಹಾರ ಇತ್ಯಾದಿಯಾಗಿ ಇಡೀ ಜೀವನವೇ ಆತನನ್ನು ಅವಲಂಬಿಸಿದೆ ಎಂಬುದೂ ಸರ್ವರಿಗೂ ವಿದಿತವಾಗಿದೆ.
ಸೂರ್ಯನನ್ನು ಕುರಿತಾದ ಈ ಭೌತಿಕ ಸತ್ಯವನ್ನು ಗಮನಿಸುವುದರ ಜೊತೆಗೆ ಆತನನ್ನು ಪ್ರಸಿದ್ಧವಾದ ಒಂದು ದೇವತಾವಿಶೇಷ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.
ದೇವತೆಗಳ ಮಾತಾ-ಪಿತೃಗಳಾದ ಅದಿತಿ ಕಶ್ಯಪರ ಸುಪುತ್ರ, ಸಂಜ್ಞಾ ಮತ್ತು ಛಾಯಾದೇವಿಯರ ಪತಿ, ಯಮುನಾ, ಯಮಧರ್ಮರಾಜ, ಅಶ್ವಿನೀದೇವರು, ಶನೈಶ್ವರ, ವೈವಸ್ವತಮನು ಇವರ ಪಿತ, ವಿಶ್ವಕರ್ಮನ ಅಳಿಯದೇವರು. “ಭೀಷೋದೇತಿ ಸೂರ್ಯ’ ಎಂಬಂತೆ ಪರಮೇಶ್ವರನ ಶಾಸನಕ್ಕೆ ಒಳಪಟ್ಟು ಉದಯಾದಿ ಕಾರ್ಯಗಳನ್ನು ನೆರವೇರಿಸುತ್ತಿರುವ ಪ್ರಸಿದ್ಧ ದೇವತೆ. ಮಹಾವರಪ್ರಸಾದಿಯಾದ ದೇವತೆ.
ಯುಧಿಷ್ಠಿರನಿಗೆ ಅಕ್ಷಯ ಪಾತ್ರೆಯನ್ನೂ, ಸತ್ರಾಜಿತನಿಗೆ ಶ್ಯಮಂತಕಮಣಿಯನ್ನೂ, ಅನುಗ್ರಹ ಮಾಡಿದವನು. ಇಷ್ಟಬಂದ ವರಗಳನ್ನು ದಯಪಾಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, “ಆರೋಗ್ಯಂ ಭಾಸ್ಕರಾದಿಚ್ಛೇತ್” ಎಂಬಂತೆ ವಿಶೇಷವಾಗಿ ಆರೋಗ್ಯಭಾಗ್ಯವನ್ನು ಕರುಣಿಸುವ ವರೇಣ್ಯನಾದ ದೇವತೆ.
(ಈತನು ಮಾತ್ರವಲ್ಲದೆ ಈತನ ಸುಪುತ್ರರಾದ ಅಶ್ವಿನಿದೇವತೆಗಳೂ ವೈದ್ಯೋತ್ತಮರಾಗಿ ದೇವತೆಗಳಿಗೂ ವೈದ್ಯರೆನಿಸಿದವರು.) ಅಗಸ್ತ್ಯಮಹರ್ಷಿಗಳ ಉಪದೇಶದಿಂದ ಆದಿತ್ಯಹೃದಯ ಮಂತ್ರದ ಉಪದೇಶಪಡೆದು ತನಗೆ ಸಮರ್ಪಣೆ ಮಾಡಿದ ಶ್ರೀರಾಮದೇವರಿಗೆ ಮಹಾಶತ್ರು ವಿಜಯವನ್ನು ಹಾರೈಸಿ ಅನುಗ್ರಹಮಾಡಿದ ದೇವಶ್ರೇಷ್ಠ ಎಂದು ಮೊದಲಾಗಿ ಆತನ ದೇವತಾರೂಪದ ಮಹಿಮೆಯನ್ನು ಇತಿಹಾಸ ಪುರಾಣಗಳಲ್ಲಿ ನಾವು ಕಾಣತ್ತೇವೆ.
ಭಗವಾನ್ ಸೂರ್ಯನು ಆಚಾರ್ಯಶ್ರೇಷ್ಠನೂ ಆಗಿದ್ದಾನೆ. ವರಪ್ರದದೇವತೆಗಳಲ್ಲಿ ಅಗ್ರಗಣ್ಯನೂ ಆಗಿದ್ದಾನೆ. ಯಾಜ್ಞವಲ್ಕ್ಯ ಮಹರ್ಷಿಗಳು ತಾವು ಅಧ್ಯಯನ ಮಾಡಿದ ಯಜುರ್ವೇದ ಜ್ಞಾನವನ್ನು ವಿಸರ್ಜನೆಮಾಡಿ ಅಶರಣ್ಯನಾದ ಸೂರ್ಯನಾರಾಯಣನನ್ನು ಪ್ರಾಣಾಯಾಮ ಪುರಸ್ಸರವಾಗಿ ಧ್ಯಾನಿಸಿ ಸ್ತುತಿಸಿದಾಗ ಪ್ರಸನ್ನನಾದ ಸೂರ್ಯನು ವಾಜಿ (ಕುದುರೆ) ರೂಪವನ್ನು ಧರಿಸಿ, ವಾಜಸೇಯ ಎಂಬ ಹೊಸ ಯಜುರ್ವೇದದ ಶಾಖೆಯನ್ನು ಅನುಗ್ರಹ ಮಾಡಿದನು.
(ವಿ.ಪು. 3-6-15 ರಿಂದ 28) ಯಾಜ್ಞವಲ್ಕ್ಯರಿಗೆ ಮಂಡಲಬ್ರಾಹ್ಮಣ ಎಂಬ ಉಪನಿಷತ್ತಿನ ತತ್ತ್ವವನ್ನು ಬೋಧನೆಮಾಡಿದವನೂ ಆಚಾರ್ಯಶ್ರೇಷ್ಠನಾದ ಸೂರ್ಯದೇವನೇ. ಹಾಗೆಯೇ ಆಂಜನೇಯನಿಗೆ ವ್ಯಾಕರಣಾದಿ ಶಾಸ್ತ್ರಗಳನ್ನು ಬೋಧನೆ ಮಾಡಿದ ಮಹಾಚಾರ್ಯನೂ ಈತನೇ.
ಶ್ರೀ ಕೃಷ್ಣಪರಮಾತ್ಮನು ಗೀತೆಯಲ್ಲಿ ಯೋಗಚಾರ್ಯ ಪರಂಪರೆಯಲ್ಲಿ ಈತನ ಹೆಸರನ್ನು ಹೇಳುತ್ತಾನೆ. ಮಹಾಯೋಗವನ್ನು ತಾನು ವಿವಸ್ವತನಿಗೆ ಉಪದೇಶ ಮಾಡಿದುದಾಗಿಯೂ, ಮತ್ತು ವಿವಸ್ವತನು ಅದನ್ನು ವೈವಸ್ವತಮನುವಿಗೆ ಉಪದೇಶ ಮಾಡಿದುದಾಗಿಯೂ ಹೇಳುತ್ತಾನೆ.
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ / ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್ II (ಗೀತಾ 4.1) ಸೂರ್ಯನ ಸುಪುತ್ರನಾದ ಯಮಧರ್ಮರಾಜನೂ ಕೂಡ ಧೀರ ನಚಿಕೇತನಿಗೆ ಬ್ರಹ್ಮವಿದ್ಯೆಯನ್ನು ಉಪದೇಶ ಮಾಡಿದ ಮಹಾಕಾರ್ಯ ಎಂದು ಕಠೋಪನಿಷತ್ತು ಸಾರುತ್ತದೆ.
ಹೀಗೆ ಆತನು ದೇವತಾವಿಶೇಷ ಆಗಿರುವುದು ಮಾತ್ರವಲ್ಲದೇ, ಪರಾದೇವತೆ, ಪರಂಜ್ಯೋತಿಯೇ ಆಗಿದ್ದಾನೆ ಎಂಬುದನ್ನು ಸೂರ್ಯನಾರಾಯಣ ಎಂಬ ವಿಶಿಷ್ಟ ಶಬ್ದವು ನಮಗೆ ಸಾರುತ್ತದೆ.
ಸೂರ್ಯ ಎಂಬ ಶಬ್ದವು “ಸುವತಿ ಕರ್ಮಣಿ ಲೋಕಂ ಪ್ರೇರಯತಿ ಇತಿ ಸೂರ್ಯಃ” ಎಂಬ ವ್ಯಾಸರ ವಿವರಣೆಯಂತೆ ಎಲ್ಲರನ್ನೂ ಪ್ರೇರಿಸುವ ಪರಮಚೈತನ್ಯ ಎಂಬ ಅರ್ಥವನ್ನು ಹೇಳುತ್ತದೆ.
ಸೂರ್ಯಶಬ್ದವು ಸೂರ್ಯದೇವತೆಯನ್ನು ಮಾತ್ರವಲ್ಲದೆ ಅದರಲ್ಲಿ ಅಂತರ್ಯಾಮಿಯಾಗಿರುವ ಪರಮಾತ್ಮನನ್ನೂ ಹೇಳುತ್ತದೆ ಎಂಬುದು ಅಂತರ್ಯಾಮಿ ಬ್ರಾಹ್ಮಣದ ಶ್ರುತಿಯ ಅಭಿಪ್ರಾಯ. ಇಷ್ಟು ಮಾತ್ರವಲ್ಲದೇ, ಸೂರ್ಯಶಬ್ದವು ಮೇಲೆ ಹೇಳಿದ ವ್ಯುತ್ಪತ್ತಿಯಂತೆ ನೇರವಾಗಿಯೂ ಸರ್ವನಿಯಾಮಕನಾದ ಪರಮಾತ್ಮನನ್ನು ಬೋಧಿಸುತ್ತದೆ.
“ಸಾಕ್ಷಾದಷ್ಯವಿರೋಧಂ ಜೈಮಿನಿಃ?’ ಎಂಬ ಬ್ರಹ್ಮಸೂತ್ರವೂ ಈ ಭಾವಕ್ಕೆ ಪೋಷಕವಾಗಿದೆ. ವೈದಿಕವಾದ ಅಗ್ನಿಪರಿಷೇಚನದಲ್ಲಿ “ದೇವ ಸವಿತಃ ಪ್ರಸುವ” ಎಂಬ ವಾಕ್ಯವು ಈತನು ಸರ್ವಕ್ಕೂ ಪ್ರೇರಕನಾದ ಪರಮಾತ್ಮ ಎಂಬ ಅರ್ಥವನ್ನು ಬೋಧಿಸುತ್ತದೆ. ಇನ್ನು ಸಮಾಸದಲ್ಲಿ ಎರಡನೇ ಪದವಾದ ನಾರಾಯಣ ಎಂಬುದನ್ನು ಗಮನಿಸಿದರೆ ಅದೂ ಪರಮಾತ್ಮನನ್ನೇ ನೇರವಾಗಿ ಹೇಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ನಾರಾಯಣ ಪರಂಬ್ರಹ್ಮ ತತ್ತಂ ನಾರಾಯಣಃ ಪರಃ, ನಾರಾಯಣ ಪರೋಜ್ಯೋತಿಃ, ಆತ್ಮನಾರಾಯಣ ಪರಃ – ಎಂದು ತೈತ್ತರೀಯ ಶ್ರುತಿಯು ಸ್ಪಷ್ಟವಾಗಿ ಸಾರುತ್ತದೆ.
ಶ್ರೀ ಶಂಕರಾಚಾರ್ಯರ ಗೀತಾಭಾಷ್ಯದ ಮಂಗಳ ಶ್ಲೋಕವೂ “ನಾರಾಯಣಃ ಪರೋಽವ್ಯಕ್ತಾತ್’ ಎಂದು ಪ್ರಾರಂಭವಾಗುತ್ತದೆ. ಶ್ರೀಯಾಮುನಾಚಾರ್ಯನ ಗೀತಾರ್ಥಸಂಗ್ರಹವು “ನಾರಾಯಣ ಪರ ಬ್ರಹ್ಮ ಗೀತಾಶಾಸ್ತ್ರೇ ಸಮೀರಿತಃ”– ಎಂದು ಮೊಳಗುತ್ತದೆ.

ಶ್ರೀಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಪ್ರಾರಂಭದಲ್ಲಿ ‘ನಾರಾಯಣಂ ಗುಣೈಸ್ಸವೈರುದೀಣಂ” – ಎಂದು ನಾರಾಯಣ ಶಬ್ದವನ್ನೇ ಹೇಳುತ್ತದೆ. ಹೀಗೆ ವೈದಿಕ ಪಂಥದ ಎಲ್ಲ ಆಚಾರ್ಯಶ್ರೇಷ್ಠರೂ ಪರತತತ್ತ್ವ ಎಂಬ ಅರ್ಥದಲ್ಲಿಯೇ ನಾರಾಯಣ ಶಬ್ದವನ್ನು ಬಳಸುತ್ತಾರೆ.
ಎಲ್ಲ ನರರಿಗೂ ಪರಮಶ್ರೇಯಸ್ಸನ್ನು ಹೊಂದಲು ಏಕಮಾತ್ರ ಉಪಾಯವಾದವನು. (ನರಾಣಾಂ ಅಯನಂ | ನಾನ್ಯಃ ಪಂಥಾ ಆಯನಾಯ ವಿದ್ಯತೇ) ಎಲ್ಲ ನರರಿಗೂ ಜೀವನದ ಲಕ್ಷ್ಯ ಆಗಿರುವವನು, ನರರ ಉತ್ಪತ್ತಿಗೆ ಕಾರಣವಾದ ಸೃಷ್ಟಿಮೂಲವಾದ ಜಲದಲ್ಲಿ ಪವಡಿಸಿರುವವನು. ಕಲ್ಯಾಣಗುಣ ಪರಿಪೂರ್ಣನು, ಹೇಯಗುಣ ರಹಿತನು ಮುಂತಾದ ಅನೇಕ ವ್ಯುತ್ಪತ್ತಿಗಳಿಂದ ನಾರಾಯಣ ಶಬ್ದವೂ ಪರತತ್ತ್ವವನ್ನೇ ಹೇಳುತ್ತದೆ.
ಸೂರ್ಯನನ್ನು ಮಿತ್ರ, ರವಿ – ಮುಂತಾದ ದ್ವಾದಶ ರೂಪೀ ಎಂದು ಕರೆಯುವಂತೆಯೇ ಆರೋಗ ಭ್ರಾಜ – ಇತ್ಯಾದಿ ಅಷ್ಟರೂಪಿಯಾದವನು ಎಂದು ಶ್ರುತಿಯು ಹೇಳುತ್ತದೆ.
ಈ ಅಷ್ಟರೂಪಗಳಲ್ಲಿ ಕಡೆಯದಾದ ಕಶ್ಯಪ ಎಂಬ ಶಬ್ದವು ಸಾಕ್ಷಾತ್ ಸರ್ವಸಾಕ್ಷಿಯೂ, ನಿಶ್ಚಲನೂ ಆಗಿರುವ ಪರಮಾತ್ಮನನ್ನೇ ತಿಳಿಸುತ್ತದೆ ಎಂಬುದು ಶ್ರುತಿಮಾತೆಯ ಅಭಿಪ್ರಾಯ (ಕಶ್ಯಪಃ ಪಶ್ಯಕೋ ಭವತಿ ಯತ್ಸರ್ವಂ ಪರಿಪಶ್ಯತೀತಿ ಸೌಕ್ಪ್ಮ್ಯತ್।) ಹೀಗೆ ಸೂರ್ಯವಾಚಕಶಬ್ದವು ನಾರಾಯಣ ಶಬ್ದದೊಡನೆ ಸೇರಿರುವ ಪ್ರಯೋಗಗಳನ್ನು ನೋಡುತ್ತೇವೆ.
ರವಿಶಂಕರ ಎಂಬ ಪದವು ಸೂರ್ಯನಾರಾಯಣ ಎಂಬ ಪದದಂತೆಯೇ ಶಿಷ್ಟರ ಪ್ರಯೋಗದಲ್ಲಿದೆ. ಧ್ಯೇಯಸ್ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಷ್ಟಃ ಎಂಬ ಧ್ಯಾನಶ್ಲೋಕವು ಸೂರ್ಯಮಂಡಲದಲ್ಲಿ ನಾರಾಯಣನನ್ನು ಧ್ಯಾನಿಸಬೇಕು ಎಂದು ಹೇಳಿದರೆ – “ಗೋ ಬ್ರಾಹ್ಮಣೈರುಪಾಸ್ಯಃ ಗಾಯತ್ರ್ಯರ್ಕಾಗ್ನಿ ಗೋಚರಃ ಶಂಭುಃ’ ಎಂಬ ಶ್ಲೋಕವು ಶಿವನನ್ನು ಸೂರ್ಯಮಂಡಲದಲ್ಲಿ ಧ್ಯಾನಿಸಬೇಕು ಎಂದು ಉಪದೇಶ ಮಾಡುತ್ತದೆ.
ಸೈಪಾತ್ರಯ್ಯೇವ ವಿದ್ಯಾ ತಪತಿ ಎಂದು ತೈತ್ತಿರೀಯ ಶ್ರುತಿ ಹೇಳುವಂತೆ ತ್ರಯೀವಿದ್ಯೆಯೇ ಆದಿತ್ಯರೂಪದಲ್ಲಿ ಜ್ವಲಿಸುತ್ತಿದೆ. ಅದರಲ್ಲಿ ಉಪಾಸನ ಮಾಡಲ್ಪಡಬೇಕಾದವನು ಪರಮಪುರುಷ. “ಸ ಯಶ್ಚಾಯಂ ಪುರುಷೇ ಯಶ್ಚಾಸಾವಾದಿತ್ಯೇ ಸ ಏಕಃ |’ ಹೀಗೆ ಸೂರ್ಯನಾರಾಯಣ ಎಂಬ ಸಮಸ್ತಪದವು ಒಂದೊಂದು ಪದದಲ್ಲೂ ಒಟ್ಟಾರೆಯಾಗಿಯೂ ಪರಬ್ರಹ್ಮ ಪರತತ್ತ್ವ, ಪರಂಜ್ಯೋತಿ ಮತ್ತು ಪರಮಾತ್ಮಪರಮೇಶ್ವರನನ್ನೇ ನೇರವಾಗಿ ಬೋಧಿಸುತ್ತದೆ. ಆತನ ವಿಭೂತಿಗಳನ್ನೂ ತಿಳಿಸುತ್ತದೆ.
ಈ ಸೂರ್ಯನಾರಾಯಣನಿಗೂ ಸಂಧ್ಯಾವಂದನೆ ಎಂಬ ಕರ್ಮಕ್ಕೂ ಇರುವ ಸಂಬಂಧವನ್ನು ಈಗ ವಿಚಾರಮಾಡುತ್ತೇವೆ.
ಸಂಧ್ಯಾ ಎಂಬ ಕಾಲವಿಶೇಷವು ಸೂರ್ಯ ನಾರಾಯಣನನ್ನೇ ಅವಲಂಬಿಸಿದೆ. ಅವನು ಉದಯ ಹೊಂದುವಂತೆ ಕಾಣುವ ಕಾಲವನ್ನು ಪ್ರಾತಃಸಂಧ್ಯ ಎಂದೂ ಕರೆಯುತ್ತಾರೆ. ಸಂಧ್ಯಾವಂದನೆಯನ್ನು ಯಾವಾಗ ಆಚರಿಸಬೇಕು? ಎಂದು ಕೇಳಿದರೆ ಸೂರ್ಯನನ್ನು ಕಾಣದಿರುವಾಗ, ಕಾಣುತ್ತಿರುವಾಗ ಮತ್ತು ಆತನು ಪಕ್ವವಾಗದ ನೇರವಾಗಿರುವಾಗ (ಕಾಣದೆ, ಕಂಡ್, ಕೋಣಾದೇ ಎಂದು ಹಿರಿಯರ ಲೋಕೋಕ್ತಿಯಂತೆ) ಸೂರ್ಯನ ಉದಯ, ಅಸ್ತಮನ ಮತ್ತು ಮಧ್ಯಸ್ಥಿತಿಗಳೇ ತ್ರಿಃಸಂಧ್ಯಾಕಾಲಗಳಿಗೆ ನಿಯಾಮಕವಾಗಿವೆ.
ಇಲ್ಲಿ ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರಾದ ಒಬ್ಬ ಮಹಾತ್ಮರ ಜೀವನದ ಒಂದು ಘಟನೆಯನ್ನು ಕೆಲವರು ಆಕ್ಷೇಪವಾಗಿ ಹೇಳುತ್ತಾರೆ. ಆ ಮಹಾತ್ಮರು ಸಂಧ್ಯಾವಂದನ ಸಮಯದಲ್ಲಿ ಹೊರಗಿನ ಸಂಧ್ಯಾಕರ್ಮವನ್ನು ಆಚರಿಸುವ ಧ್ಯಾನದಲ್ಲಿ ಮುಳುಗಿ ಮೌನವಾಗಿದ್ದರು.
ಅವರು ಎಚ್ಚರವಾದೊಡನೆಯೇ ಶಿಷ್ಯನು “ಗುರುಗಳೇ! ತಮಗೆ ಸಂಧ್ಯಾಕರ್ಮ ಲೋಪವಾಯಿತಲ್ಲಾ” ಎಂದು ವಿನಯದಿಂದ ಕೇಳಿದಾಗ ಅವರು – ‘ಸಂಧ್ಯಾವಂದನೆಯನ್ನು ಯಾವಾಗ ಆಚರಿಸಬೇಕು ಎಂಬುದಕ್ಕೆ ಯಾವುದಪ್ಪಾ ಶಾಸ್ತ್ರವಾಕ್ಯ?” – ಎಂದು ಪ್ರಶ್ನಿಸಿದರು.
ಶಿಷ್ಯನು ಉದಯ ಹೊಂದುತ್ತಿರುವ ಮತ್ತು ಅಸ್ತಹೊಂದುತ್ತಿರುವ ಆದಿತ್ಯನನ್ನು ಧ್ಯಾನ ಮಾಡುತ್ತಾ ಆತನಿಗೆ ಅರ್ಘ್ಯವನ್ನು ಸಮರ್ಪಿಸುವವನು ಎಲ್ಲ ಸನ್ಮಂಗಳಗಳನ್ನು ಪಡೆಯುತ್ತಾನೆ. “ಉದ್ಯನ್ತಮಸ್ತಯನ್ತ ಮಾದಿತ್ಯಭಿಧ್ಯಾಯನ್ ಕುರ್ವನ್ಬ್ರಾಹ್ಮಣೋ ವಿದ್ವಾನ್ಸಕಲಂ ಭದ್ರಮಶ್ನುತೇ| (ತೈ.ಆ.3) ಎಂಬ ಶ್ರುತಿವಾಕ್ಯವನ್ನು ಉದ್ಧರಿಸಿದನು.
ಆಗ ಗುರುಗಳು ನಸುನಗುತ್ತಾ – “ನನ್ನ ಹೃದಯಾಕಾಶದಲ್ಲಿ ಇರುವ ಜ್ಞಾನಸೂರ್ಯನು ಯಾವಾಗಲೂ ಬೆಳಗುತ್ತಿರುತ್ತಾನೆ. ಆತನಿಗೆ ಉದಯಾಸ್ತಮಾನಗಳೇ ಇಲ್ಲದಿರುವಾಗ ನಾನು ಸಂಧ್ಯಾವಂದನೆ ಹೇಗೆ ಮಾಡಲಿ?” ಎಂದು ಉತ್ತರಿಸಿದರಂತೆ.
”ಹೃದಾಕಾಶೇ ಚಿದಾದಿತ್ಯಃ ಸದಾಭಾತಿ ನಿರಂತರಂ ಉದಯಾಸ್ತಮಯೌ ನ ಸ್ತಃ ಕಥಂ ಸಂಧ್ಯಾ ವಿಧೀಯತೇ” – ಎಂದು ಉತ್ತರ ನೀಡಿದರು ಎಂದು ಕೇಳುತ್ತೇವೆ. ಇದು ಕಾಲ, ದೇಶ ಮುಂತಾದ ಉಪಾಧಿಗಳನ್ನು ದಾಟಿರುವ ಮಹಾತ್ಮರಿಗೆ ಅನ್ವಯಿಸುವ ವಿಷಯ. ಅಂತಹ ಮಹಾತ್ಮರೂ ಕೂಡ ಲೋಕಸಂಗ್ರಹಕ್ಕಾಗಿ ಆಯಾ ಸಂಧ್ಯಾಕಾಲಗಳಲ್ಲಿ ವಿಧಿಪೂರ್ವಕವಾದ ಸಂಧ್ಯಾವಂದನೆಯನ್ನು ಆಚರಿಸುತ್ತಾರೆ ಎಂಬುದು ಆಕ್ಷೇಪಕ್ಕೆ ಉತ್ತರ.
ಸಂಧ್ಯಾವಂದನೆಯನ್ನು ಆಯಾ ಸಂಧ್ಯಾಸಮಯದಲ್ಲೇ ಆಚರಿಸಬೇಕು. ಅನಿವಾರ್ಯವಾದ ಕಾರಣದಿಂದ ಕಾಲಾತೀತವಾದರೆ ಸಂಧ್ಯೆಯಲ್ಲಿ ಪ್ರಾಯಶ್ಚಿತ್ತಾರ್ಘ್ಯದೊಡನೆ ನಿರ್ದಿಷ್ಟವಾದ ಸಂಧ್ಯಾವಂದನೆಯನ್ನು ಆಚರಿಸಬೇಕು ಎಂಬುದು ಶಾಸ್ತ್ರಜ್ಞರಾದ ಶಿಷ್ಯರ ಅಭಿಪ್ರಾಯ. “ಶುಚಿಯಾಗಿರಲಿ, ಅಥವಾ ಅಶುಚಿಯಾಗಿರಲಿ”- ಸಕಾಲದಲ್ಲಿ ಸಂಧ್ಯಾವಂದನೆಯನ್ನೂ ಆಚರಿಸಬೇಕು (ಶುಚಿರ್ವಾಪ್ಯಶುಚಿರ್ವಾಪಿ ಕಾಲೇಸಂಧ್ಯಾಂ ಸಮಾಚರೇತ್) ಎಂಬ ಶಾಸ್ತ್ರವಾಕ್ಯವನ್ನು ಇಲ್ಲಿ ಸ್ಮರಿಸಬಹುದು.
‘ಹೇಗಿದ್ದರೂ ಪ್ರಾಯಶ್ಚಿತಾರ್ಘ್ಯವುಂಟಲ್ಲ! ಎಂಬ ಕಾರಣದಿಂದ ಕಾಲಾತೀತವಾಗಿ ಸಂಧ್ಯಾವಂದನೆ ಆಚರಿಸಬಾರದು. ಗಾಯವನ್ನು ವಾಸಿಮಾಡುವ ಔಷಧಿ ಇದೆಯಲ್ಲಾ! ಎಂಬ ಕಾರಣದಿಂದ ಮೈ ಕೈ ಗಾಯ ಮಾಡಿಕೊಳ್ಳಬಾರದು’ ಎಂದು ಯೋಗಿಪುಂಗವರಾದ ಶ್ರೀ ಶ್ರೀ ರಂಗಮಹಾಗುರುಗಳು ಅಪ್ಪಣೆ ಕೊಡಿಸಿದ್ದನ್ನು ಇಲ್ಲಿ ಸ್ಮರಿಸುತ್ತೇವೆ. ಆಗ ಅಶುಚಿಯಾಗಿದ್ದರೆ ಮಂತ್ರಸ್ನಾನ ಮುಂತಾದ ಗೌಣಸ್ನಾನವನ್ನು ಶೀಘ್ರವಾಗಿ ಆಚರಿಸಿ ಸಕಾಲದಲ್ಲಿಯೇ ಸಂಧ್ಯಾವಂದನೆಯನ್ನು ಆಚರಿಸಬೇಕು.
ಸಂಧ್ಯಾವಂದನೆಗೆ ಯೋಗ್ಯತೆಯನ್ನು ಪಡೆಯಲು ಪ್ರಾತಃ ಮತ್ತು ಸಾಯಂಸಂಧ್ಯೆಗಳಲ್ಲಿ ಮಾಡುವ ಆಪೋಶನಗಳಲ್ಲಿ ಸೂರ್ಯನನ್ನು ಸ್ತುತಿಸುತ್ತೇವೆ.

ಸೂರ್ಯಶ್ಚ ಎಂಬ ಪ್ರಾತಃಕಾಲದ ಆಪೋಶನ ಮಂತ್ರಕ್ಕೆ ಸೂರ್ಯನೇ ದೇವತೆ, ಮಂತ್ರ ಪ್ರಾರಂಭವಾಗುವುದು ಆತನ ಹೆಸರಿನಿಂದಲೇ ಸಾಯಂಸಂಧ್ಯಾ ಆಪೋಶನದಲ್ಲಿ ಹೇಳುವ ಅಗ್ನಿಶ್ಚ ಮಾ ಎಂಬ ಮಂತ್ರಕ್ಕೆ ಋಷಿಯು ಸೂರ್ಯ, ತ್ರಿಕಾಲಸಂಧ್ಯಾವಂದನೆಗಳ ಉಪಸ್ಥಾನ ಮಂತ್ರಗಳಲ್ಲಿ ಆರಾಧಿಸಲ್ಪಡುವವನೂ ಸೂರ್ಯನೇ, ಪ್ರಾತಃಸಂಧ್ಯೆಯಲ್ಲಿ ಮಿತ್ರ ಎಂಬ ಹೆಸರಿನಿಂದಲೂ, ಮಧ್ಯಾಹ್ನದ ಸಂಧ್ಯೆಯಲ್ಲಿ ಸೂರ್ಯ ಆದಿತ್ಯ ಎಂಬ ಹೆಸರುಗಳಿಂದಲೂ ಆತನೇ ಆರಾಧಿಸಲ್ಪಡುತ್ತಾನೆ.
ಸಂಧ್ಯಾವಂದನೆಯ ಕರ್ಮದಲ್ಲಿ ಅರ್ಘ್ಯಪ್ರದಾನ, ಪ್ರಾಣಾಯಾಮ ಮತ್ತು ಜಪಗಳಲ್ಲಿ ಬರುವ ಸಮಸ್ತ ವೇದಸಾರವಾದ ಸಾವಿತ್ರೀ ಮಂತ್ರದಲ್ಲಿ ಪ್ರತಿಪಾದ್ಯನಾದವನೂ ಸವಿತೃ ಶಬ್ದವಾಚಕನಾದ ಸೂರ್ಯನಾರಾಯಣನೇ ಆಗಿದ್ದಾನೆ. ”ಸಾವಿತ್ರ್ಯಾ ಋಷಿಃ ವಿಶ್ವಾಮಿತ್ರಃ, ದೇವೀ ಗಾಯತ್ರಿ ಛಂದಃ ಸವಿತಾ ದೇವಾ’ – ಎಂಬ ಪ್ರಯೋಗದಲ್ಲಿ ಹೃದಯವನ್ನು ಮುಟ್ಟಿ ಮನನಮಾಡುವುದು ಸವಿತೃ ದೇವತೆಯನ್ನೇ.
ಗಾಯತ್ರಿಯ ಧ್ಯಾನಶ್ಲೋಕದಲ್ಲಿ ಒಂದಾದ “ಯೋ ದೇವಸ್ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಾಃ” ಎಂಬ ಶ್ಲೋಕದಲ್ಲಿ ಉಪಾಸನ ಮಾಡುವುದು ಬುದ್ಧಿಪ್ರೇರಕನಾದ ಸವಿತೃದೇವನನ್ನೇ. ಪ್ರತ್ಯಕ್ಷ ಸಾವಿತ್ರೀಮಂತ್ರವೂ ನಮ್ಮ ಬುದ್ಧಿಜೀವಿಗಳಿಗೆ ಪ್ರೇರಕನಾಗಿರುವ ಸವಿತೃದೇವನ ವರೇಣ್ಯವಾದ ತೇಜಸ್ಸನ್ನು ಧ್ಯಾನ ಮಾಡುತ್ತೇವೆ ಎಂದು ಸವಿತೃದೇವನ ಧ್ಯಾನವನ್ನೇ ಸ್ಪಷ್ಟವಾಗಿ ಸಾರುತ್ತದೆ.
ಸವಿತೃ ಶಬ್ದಕ್ಕೆ ಎಲ್ಲಕ್ಕೂ ಪ್ರೇರಣೆ ನೀಡುವವನು ಅಥವಾ ಎಲ್ಲವನ್ನೂ ಸೃಷ್ಟಿ ಮಾಡುವವನು ಎಂಬ ವಿವರಣೆಯನ್ನು ಶಾಸ್ತ್ರಗಳು ನೀಡುತ್ತವೆ. ಸುವತಿ, ಸೂತೇ ಇತಿ ಸವಿತಾ – ಹೀಗೆ ತ್ರಿಕಾಲಸಂಧ್ಯಾವಂದನೆಯಲ್ಲಿ ಆತ್ಮಭೂತನಾಗಿರುವವನು ಸೂರ್ಯನಾರಾಯಣನೇ. ಆತನು ಸ್ಥಾವರಜಂಗಮಾತ್ಮಕವಾದ ಇಡೀ ಜಗತ್ತಿಗೆ ಆತ್ಮವಾಗಿರುವಂತೆಯೇ (ಸೂರ್ಯ ಆತ್ಮಾಜಗಸ್ಪುಷಶ್ಚ) ಇಡೀ ಸಂಧ್ಯಾವಂದನ ಕರ್ಮಕ್ಕೆ ಆತ್ಮವಾಗಿದ್ದಾನೆ.
ಯಾವ ದಿಕ್ಕಿಗೆ ಅಭಿಮುಖವಾಗಿ ಸಂಧ್ಯಾವಂದನೆಯಲ್ಲಿ ಅರ್ಘ್ಯಪ್ರದಾನ ಮತ್ತು ಜಪಗಳನ್ನು ಮಾಡಬೇಕು? ಎಂದರೆ “ಸೂರ್ಯಾಭಿಮುಖವಾಗಿ’ ಎಂದೇ ಉತ್ತರ. ದೇವರ ಪೂಜೆಯಲ್ಲಿ ದೇವರಿಗೆ ಅಭಿಮುಖವಾಗಿ ನಿಂತು ಅಥವಾ ಕುಳಿತು ದೇವರಿಗೆ ಪೂಜೆಮಾಡುವಂತ ಸೂರ್ಯಾಭಿಮುಖವಾಗಿಯೇ (ಪ್ರಾತಃ – ಮಧ್ಯಾಹ್ನ ಕಾಲಗಳಲ್ಲಿ ನಿಂತು ಮತ್ತು ಸಾಯಂಕಾಲದಲ್ಲಿ ಕುಳಿತು) ಸಾವಿತ್ರಿ ಪ್ರತಿಪಾದ್ಯನಾದ ಸೂರ್ಯನಾರಾಯಣನನ್ನು ಆರಾಧಿಸಬೇಕು.
ಆತನೇ ಸಂಧ್ಯಾವಂದನೆಗೆ ದೇವತೆ ಪರಾದೇವತೆ.
ಉಳಿದ ದೇವತಾ ವಿಗ್ರಹಗಳು ಮನುಷ್ಯನಿರ್ಮಿತವಾದುವು. ಅವುಗಳಲ್ಲಿ ದೇವರನ್ನು ಪ್ರತಿಷ್ಠೆ ಮಾಡಿ ಪೂಜೆ ಮಾಡಬೇಕು.ಅನೇಕ ಉಪಚಾರಗಳನ್ನು ಸಮರ್ಪಿಸಬೇಕು. ಆ ದೇವತೆಗಳು ಇರುವ ದೇವಾಲಯಕ್ಕೆ ಹೋಗಿ (ಕೆಲವು ಸಮಯ ಕ್ಯೂ ನಿಂತು) ದೇವರ ದರ್ಶನ ಮಾಡಬೇಕು.
ಕೆಲವು ದುರ್ಜನರು ಆ ವಿಗ್ರಹಗಳನ್ನು ಅಪವಿತ್ರಗೊಳಿಸಬಹುದು. ಒಡೆದುಹಾಕಬಹುದು ಅಥವಾ ಅಪಹರಿಸಬಹುದು. ಆದರೆ ಈ ಸೂರ್ಯನಾರಾಯಣನಲ್ಲಿ ಈ ಯಾವ ಬಗೆಯ ಆವದ್ಯವೂ ಇಲ್ಲ. ಪೂಜಾ ಪ್ರಯಾಸವೂ ಇಲ್ಲ. ಅವನು ದೇವರೇ ಎಲ್ಲರಿಗೂ ದಯಪಾಲಿಸಿರುವ ದೇವವಿಗ್ರಹ.
ಆತನಲ್ಲಿ ಆವಾಹನ ವಿಸರ್ಜನೆಗಳು ಬೇಕಿಲ್ಲ. ಅರ್ಘ್ಯ, ಸ್ತುತಿ ನಮಸ್ಕಾರ ಎಂಬ ಅಷ್ಟೇ ಉಪಚಾರಗಳು ಸಾಕು. ಆತನು ಬೇರೆ ಬೇರೆ ದೇಶಗಳಲ್ಲಿರುವ ಜನರಿಗೆ ಅವರಿರುವ ಜಾಗಕ್ಕೆ ಹೋಗಿ ದರ್ಶನ ನೀಡುತ್ತಾನೆ. ಕ್ಯೂ ನಿಲ್ಲದೆ ದರ್ಶನವಾಗಬಹುದು.
ಉತೈನಂ ಗೋಪಾ ಅದೃಶನ್ ಅದೃಶ್ಯನ್ನುದಹಾರ್ಯೆ! – ಎಂದು ಶ್ರೀ ರುದ್ರಮಂತ್ರವು ಸಾರುವಂತೆ ನೀರನ್ನು ತರುವ ಹೆಂಗಸರು ಮತ್ತು ಗೋಪಾಲಕರು ಇವರೇ ಮುಂತಾದ ಸರ್ವಸಾಧಾರಣರೂ ಸಂದರ್ಶಿಸಬಹುದಾದ ಸರ್ವಾರಾಧ್ಯನಾದ ದೇವ ಶ್ರೀಸೂರ್ಯನಾರಾಯಣ.
ಈತನಿಗೆ ಯಾರೂ ಅಪದೃವನ್ನು ಉಂಟುಮಾಡಲಾರರು. ಈತನನ್ನು ಭೇದಿಸಲಾರರು. ಅಪಹರಿಸಲಾರರು. ಈತನ ಮೇಲೆ ಧೂಳನ್ನು ಎರಚಲು ಯಾರಾದರೂ ಪ್ರಯತ್ನಿಸಿದರೆ ಧೂಳು ಅವರ ಮೇಲೆಯೇ ಬೀಳುತ್ತದೆ.
ಈತನು ಪರಮಾತ್ಮನಂತೆಯೇ ದಿಕ್ಕು ದೇಶಕಾಲಗಳನ್ನು ಮೀರಿದ್ದರೂ ನಮಗೋಸ್ಕರ ದಿಕ್ಕು ದೇಶಕಾಲಗಳ ವಿಭಾಗಕ್ಕೆ ಒಳಪಟ್ಟಂತೆ ಕಾಣುತ್ತಾನೆ. ಪರಮಾತ್ಮನಂತೆ ಬೃಹದಾಕಾರ, ಸರ್ವವ್ಯಾಪಕ, ಒಳಹೊರ ಕತ್ತಲೆಗಳನ್ನು ಹೋಗಲಾಡಿಸುವವನು. ಪರಮಾತ್ಮನು ಜ್ಞಾನಾಕಾಶದಲ್ಲಿ ಬೆಳಗುವಂತೆ ಈತನು ಹೊರಗಿನ ಆಕಾಶದಲ್ಲಿ ಸದಾ ಬೆಳಗುತ್ತಾನೆ.
ಆತನು ಒಳಗತ್ತಲೆಯನ್ನೂ ಹೋಗಲಾಡಿಸುವಂತೆ ಈತನು ಹೊರಗಿನ ತಮಸ್ಸನ್ನು ಧ್ವಂಸ ಮಾಡುತ್ತಾನೆ. ಪರಮಾತ್ಮನಂತೆಯೇ ಈತನೂ ಜಾಡ್ಯವನ್ನೂ ಪಾತಕವನ್ನೂ ಹೊಡೆದಟ್ಟುತ್ತಾನೆ. ಪರಮಾತ್ಮನು ಆನಂದಾಮೃತವನ್ನು ಸುರಿಸುವಂತೆ ಈತನೂ ಹೊರಗೆ ಮಳೆಯು ಧಾರಾಕಾರವಾಗಿ ಸುರಿಯುವುದಕ್ಕೆ ಕಾರಣವಾಗುತ್ತಾನೆ.
ಪರಮಾತ್ಮನಂತೆಯೇ ಸರ್ವಸಮ, ಪಕ್ಷಪಾತ ರಹಿತ, ಸಮಸ್ತದೇವತೆಗಳೂ ಪರಮಾತ್ಮನ ಪ್ರಕಾಶದಿಂದ ಬೆಳಗುವಂತೆ ಎಲ್ಲ ಗ್ರಹಗಳೂ ಈತನ ಬೆಳಕಿನಿಂದ ತಾವು ಬೆಳಗುತ್ತವೆ. ಹೀಗೆ ನಾನಾ ಪ್ರಕಾರಗಳಿಂದ ಪರಮಾತ್ಮನೊಡನೆ ಹೋಲಿಕೆಯನ್ನು ಹೊಂದಿರುವವನು ಸೂರ್ಯನೊಬ್ಬನೇ. ಪರಮಾತ್ಮನಿಗೆ ಪರಿಪೂರ್ಣವಾಗಿ ಪ್ರತಿನಿಧಿ, ಪ್ರತಿಮೆ ಆಗಬಹುದಾದ ಪದಾರ್ಥ ಯಾವುದೂ ಇಲ್ಲ.
ತೇನ ಕೋಽರ್ಹತಿ ಸ್ಪರ್ಧಿತುಂ | ನತ್ವತ್ಸಮೋಸ್ತಿ ಅಭ್ಯಧಿಕಃ ಕುತೋನ್ಯಃ| ಬಹುಮಟ್ಟಿಗೆ ಆತನನ್ನು ಹೋಲುವವನಿದ್ದರೆ ಅವನು ಸೂರ್ಯನೊಬ್ಬನೇ ಆಗಿದ್ದಾನೆ.
ಆತನನ್ನು ಯಾವಾಗಬೇಕಾದರೂ ಧ್ಯಾನಮಾಡಬಹುದು. ಆದರೆ ಸಂಧ್ಯಾಕಾಲಗಳಲ್ಲಿ ಇಂದ್ರಿಯ ಮನಸ್ಸು ಬುದ್ಧಿಗಳು ಸಹಜವಾಗಿ ಅಂತರ್ಮುಖವಾಗುತ್ತವೆ. ಪ್ರಕೃತಿಯು ನಿಶ್ಯಬ್ದವಾಗುತ್ತದೆ. ಧಾತುಪ್ರಸನ್ನತೆ ಉಂಟಾಗುತ್ತದೆ. ‘ಗಾಳಿ ಬಂದಾಗ ತೂರಿಕೋ’ ಎಂಬಂತೆ.
ಆ ಸಂಧ್ಯಾಸಮಯಗಳಲ್ಲಿ ಆತನ ಉಪಾಸನೆಮಾಡಿ ವಿಶೇಷಲಾಭವನ್ನು ಪಡೆಯಬೇಕು. “ನಮಸ್ಕಾರ ಪ್ರಿಯೋಭಾನು!”- ಎಂಬಂತೆ ನಮಸ್ಕಾರ ಮಾತ್ರದಿಂದಲೇ ಪರಮಸಂತುಷ್ಟನಾಗುವ ಸೂರ್ಯನಾರಾಯಣನಿಗೆ ಕೋಟಿ ಕೋಟಿ ನಮಸ್ಕಾರಗಳನ್ನು ಇಲ್ಲಿ ಸಮರ್ಪಿಸುತ್ತೇವೆ.






Leave a Reply