ಸಂಕೀರ್ತನ ಯಶೋಗಾಥೆಗಳು

ಸಂಕೀರ್ತನೆಯಿಂದ ಕೃಷ್ಣಭಕ್ತಿ ಪ್ರಸಾರ

(ಆಂಗ್ಲಮೂಲ: “ದಿ ನೆಕ್ಟರ್‌ ಆಫ್‌ ಬುಕ್‌ ಡಿಸ್ಟ್ರಿಬ್ಯೂಶನ್‌”)

‘ಯಾರೇ ಆಗಲಿ, ನಮ್ಮ ಪ್ರಕಟಣೆಯ ಕೃಷ್ಣ, ಟೀಚಿಂಗ್ ಆಫ್ ಲಾರ್ಡ್ ಚೈತನ್ಯ, ನೆಕ್ಟರ್ ಆಫ್ ಡಿವೋಶನ್ ಅಥವಾ ಭಗವದ್ಗೀತಾ ಯಥಾರೂಪ ಈ ಯಾವುದೇ ಪುಸ್ತಕವನ್ನು ಓದಿದರೂ ಆತ ಖಂಡಿತವಾಗಿಯೂ ‘ಕೃಷ್ಣ ಪ್ರಜ್ಞೆ’ ಯನ್ನು ಹೊ೦ದುತ್ತಾನೆ.

ಆದ್ದರಿಂದ ಹೇಗಾದರೂ ಸರಿ, ಶಾಲೆ-ಕಾಲೇಜುಗಳಲ್ಲೋ, ಗ್ರಂಥಾಲಯಗಳಲ್ಲೋ, ಆಜೀವ ಸದಸ್ಯತ್ವ ಕಾರ್ಯಕ್ರಮದ ಮೂಲಕವೋ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟದ ಮೂಲಕವೋ ಒಟ್ಟಿನಲ್ಲಿ ನಾವು ಈ ಸಾಹಿತ್ಯ ವಿತರಿಣೆಯ ಕೆಲಸವನ್ನು ಮಾಡಲೇಬೇಕು. ಇದು ಶ್ರೀಕೃಷ್ಣನಿಗೆ ನಾವು ಮಾಡಬಹುದಾದ ಅತಿಮುಖ್ಯವಾದ ಮತ್ತು ಅಮೂಲ್ಯವಾದ ಸೇವೆ.”

ಹೀಗೆಂದು ಶ್ರೀಮದ್ ಎ.ಸಿ ಭಕ್ತಿವೇದಾಂತ ಪ್ರಭುಪಾದರು ತಮ್ಮ ಶಿಷ್ಯ ವಾಮನದೇವ ಇವರಿಗೆ ಪತ್ರ ಬರೆದಿದ್ದರು.

ಕೃಷ್ಣ ಭಕ್ತಿಯ ಪ್ರಸರಣ ಕಾರ್ಯದಲ್ಲಿ ಸಂಕೀರ್ತನದ ಪಾತ್ರ ಎಷ್ಟು ಮಹತ್ವವೆಂದು ಅವರಿಗೆ ತಿಳಿದಿತ್ತು. ಹೀಗಾಗಿಯೇ ಅವರು ತಮ್ಮ ಅನುಯಾಯಿಗಳನ್ನು ಹೆಚ್ಚು ಹೆಚ್ಚು ಸಂಕೀರ್ತನೆಯಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸುತ್ತಿದ್ದರು.

ಶ್ರೀಲ ಪ್ರಭುಪಾದರಿಂದ ಉತ್ತೇಜಿಸಲ್ಪಟ್ಟ ಅವರ ಅನುಯಾಯಿಗಳು ಅತ್ಯುತ್ಸಾಹದಿಂದ ಸಂಕೀರ್ತನ ಕಾರ್ಯದಲ್ಲಿ ತೊಡಗಿಕೊಂಡರು. ಅದರಿಂದ ಜನರು ಪಡೆಯುವ ಪ್ರಯೋಜನವನ್ನು ಅವರು ಕೃಷ್ಣ ಪ್ರಜ್ಞೆ ಹೊಂದಿ, ಭಕ್ತರಾಗುವುದನ್ನೂ ಕಣ್ಣಾರೆ ಕಂಡು ಆನಂದಿಸಿದರು.

1980ರಿಂದ ಅಮೆರಿಕ, ಚಿಲಿ ಮತ್ತು ಬ್ರೆಜಿಲ್‌ಗಳಲ್ಲಿ ಸಂಕೀರ್ತನೆಯಲ್ಲಿ ತೊಡಗಿಕೊಂಡಿರುವ ಸರ್ವೋತ್ತಮ ದಾಸರು ಇಂಥದೊಂದು ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಅದನ್ನು ಅವರ ಮಾತುಗಳಲ್ಲೆ ಕೇಳಿ:

ಕಲ್ಪತರುದಾಸ ಎನ್ನುವ ಭಕ್ತರೊಬ್ಬರು ಇತ್ತೀಚೆಗೆ ತೀರಿಕೊಂಡರು. ಅವರು ಗ್ವಾಟೆಮಾಲದವರು. ಸಾಕಷ್ಟು ವರ್ಷಗಳಿಂದ ಸಂಕೀರ್ತನಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಲ್ಪತರುದಾಸರು ಕೃಷ್ಣ ಪ್ರಜ್ಞಾಂದೋಲನಕ್ಕೆ ಸೇರ್ಪಡೆಯಾಗಿದ್ದೊಂದು ಕುತೂಹಲಕಾರಿ ಕಥೆ.

ದೈನಂದಿನ ಲೌಕಿಕ ಜೀವನದಿಂದ ಬೇಸತ್ತಿದ್ದ ಅವರು ಈಕ್ವೆಡಾರಿಗೆ ಬಂದು, ಆ್ಯಂಡಿಸ್ ಪರ್ವತ ಶ್ರೇಣಿಯಲ್ಲಿ ನೆಲೆಸಿದರು. ಜನಸಂದಣಿಯಿಂದ ದೂರವಾಗಿ ಒಂದು ಕುಟೀರವನ್ನು ಕಟ್ಟಿಕೊಂಡು, ಹಣ್ಣು ಹಂಪಲು ತಿನ್ನುತ್ತಾ ಹೆಚ್ಚು ಕಡಮೆ ಯೋಗಿಯ ಜೀವನ ನಡೆಸುತ್ತಿದ್ದರು. ಇದೇ ಸ್ಥಿತಿಯಲ್ಲಿ ಒಂದು ವರ್ಷ ಕಳೆಯಿತು.

ಹೀಗಿರಲು, ಒಮ್ಮೆ ಒಬ್ಬ ಚಾರಣಿಗ ಈಕ್ವೆಡಾರಿಗೆ ಹೊರಟಿದ್ದನು. ಮಿಯಾಮಿ ವಿಮಾನ ನಿಲ್ದಾಣದಲ್ಲಿ ಅವನಿಗೆ ಪುಸ್ತಕ ವಿತರಣೆಯಲ್ಲಿ ತೊಡಗಿದ್ದ ಇಸ್ಕಾನ್ ಭಕ್ತರಿಂದಾಗಿ ‘ಕೃಷ್ಣ’ ಪುಸ್ತಕವು ಲಭಿಸಿತು. ಕೃಷ್ಣನ ಪ್ರೇರಣೆಯಂತೆ, ಆತ ಕಲ್ಪತರು ವಾಸವಿದ್ದ ಬೆಟ್ಟವನ್ನೇ ಏರಲಾರಂಭಿಸಿದ.

ಅಲ್ಲಿನ ಕಾಡಿನಲ್ಲಿ ಅವನಿಗೆ ಕಲ್ಪತರು ಅವರ ಭೇಟಿಯಾಯಿತು. ಅವರು ಗೆಳೆಯರಾದರು. ಚಾರಣಿಗ ಅಲ್ಲಿಂದ ಮರಳುವಾಗ ತನ್ನ ಸ್ನೇಹಿತನಿಗೆ ಉಡುಗೊರೆಯನ್ನು ಕೊಡಬಯಸಿದ. ಹೀಗಾಗಿ ತನ್ನ ಬಳಿ ಇದ್ದ ‘ಕೃಷ್ಣ’ ಪುಸ್ತಕವನ್ನೇ ಆತನಿಗೆ ಕೊಟ್ಟು ಅಲ್ಲಿಂದ ಹೊರಟ. ಗೆಳೆಯ ಕೊಟ್ಟ ಪುಸ್ತಕವನ್ನು ಓದಿದ ಕಲ್ಪತರು, ಬೆಟ್ಟವನ್ನಿಳಿದು ಬಂದು, ಕೃಷ್ಣ ಪ್ರಜ್ಞಾಂದೋಲನಕ್ಕೆ ಸೇರಿಕೊಳ್ಳುವ ಬಯಕೆಯಿಂದ ದೇವಾಲಯವನ್ನು ಅರಸಿ ಹೊರಟರು.”

ನೆಮ್ಮದಿಯನ್ನರಸುತ್ತ ದಾರಿತಪ್ಪಿ ಜನ ಸಂಪರ್ಕದಿಂದ ದೂರವಾಗಿದ್ದ ಕಲ್ಪತರು ದಾಸರಿಗೆ ‘ಕೃಷ್ಣ’ ಪುಸ್ತಕವು ಆಧ್ಯಾತ್ಮ ಪಥದಲ್ಲಿ ಸಾಗಲು ಸರಿಯಾದ ಮಾರ್ಗ ತೋರಿತ್ತು. ಇದು, ಸಂಕೀರ್ತನೆಯ ಮಹಿಮೆ!

ಸಂಕೀರ್ತನೆಯಿಂದ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಒಬ್ಬ ವ್ಯಕ್ತಿಯನ್ನು “ಭಕ್ತ”ನನ್ನಾಗಿ ಮಾಡುವುದು ಎಂದರೆ, ಆತನನ್ನು ಪರಿಶುದ್ಧನನ್ನಾಗಿ ಮಾಡುವುದೇ ಆಗಿದೆ. ಸಂಕೀರ್ತನೆಯಿಂದ (ಪುಸ್ತಕಗಳ ಓದಿನಿಂದ) ಜ್ಞಾನ ಶುದ್ಧಿಯಾಗುತ್ತದೆ. ಪರಿಶುದ್ಧ ಹೃದಯ ಮತ್ತು ಮನಸ್ಸನ್ನು ಹೊಂದುವುದೆಂದರೆ “ಕೃಷ್ಣ ಪ್ರಜ್ಞೆ”ಯನ್ನು ಹೊಂದುವುದೇ ಆಗಿದೆ.

(ಶ್ರೀಲ ಪ್ರಭುಪಾದರು 1976ರ ಜನವರಿ 11 ರಂದು,  ಕೀರ್ತರಾಜರಿಗೆ ಬರೆದ ಪತ್ರದಲ್ಲಿ)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi