ಜ್ಯೋತಿರ್ವಿಜ್ಞಾನ

ಆಟಿಕೆಯ ಕೀಲಿ ತಿರುಗಿಸಿ ಬಿಟ್ಟರೆ, ಅದು ಒಂದು ಸುತ್ತು ತಿರುಗಿ ನಿಲ್ಲುತ್ತದೆ. ಅದು ಮತ್ತೆ ಚಲಿಸುವಂತೆ ಮಾಡಲು ಮತ್ತೆ ಕೀಲಿ ತಿರುಗಿಸಬೇಕು. ಆ ಕೆಲಸ ನಾವು ಮಾಡುತ್ತೇವೆ.

ಈ ವಿಶಾಲ ಜಗತ್ತಿನ ಅನಂತ ಬ್ರಹ್ಮಾಂಡಗಳಲ್ಲಿ ಗ್ರಹಾದಿಗಳು ನಿರಂತರ ಚಲಿಸುತ್ತಲೇ ಇವೆ. ಅವು ತಮ್ಮದೊಂದು ಸುತ್ತು ಮುಗಿಸಿಯೂ ಅರೆಕ್ಷಣ ನಿಲ್ಲದಂತೆ ಕೀಲಿ ತಿರುಗಿಸುತ್ತಿರುವವರು ಯಾರು? ದಿನ, ವಾರ, ವರ್ಷ, ಸಂವತ್ಸರ, ಯುಗ, ಮಹಾಯುಗಗಳ ಲೆಕ್ಕಾಚಾರ ತಪ್ಪದಂತೆ ಗ್ರಹ-ತಾರೆಗಳೊಂದಿಗೆ ಗಣಿತವಾಡುತ್ತಿರುವವರು ಯಾರು?

ಊಹಿಸಲಸಾಧ್ಯವಾದಷ್ಟು ವರ್ಷಗಳಿಂದ ಸೂರ್ಯ ಚಂದ್ರರು ತಪ್ಪದೆ ಹಗಲಿರುಳು ಕಾಣಿಸಿಕೊಳ್ಳುತ್ತಿದ್ದಾರಲ್ಲ, ಈ ಶಿಸ್ತಿನ ಹಿಂದಿನ ನಿರ್ದೇಶಕ ಯಾರು? ಆತ ದೇವೋತ್ತಮ ಪರಮ ಪುರುಷನಲ್ಲದೆ ಬೇರೆ ಯಾರೂ ಅಲ್ಲ. ಭಗವಂತನ ಅದ್ಭುತ ಚಮತ್ಕಾರಗಳಿಗೆ, ಆತ ಸಂಯೋಜಿಸಿದ ಬ್ರಹ್ಮಾಂಡ ಯುಗ ಚಕ್ರ ಕೇವಲ ಒಂದು ಉದಾಹರಣೆಯಷ್ಟೆ!

ದೇವೋತ್ತಮನ ಪರಮಶಕ್ತಿ, ಕಾಲ, ಈ ಕಾಲವನ್ನು ಅಳೆಯಲು ಪ್ರಪ್ರಾಚೀನ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಅದಕ್ಕಾಗಿ ಹತ್ತು ಹಲವು ಸಿದ್ಧಾಂತಗಳು ರೂಪುಗೊಂಡಿವೆ. ಈ ಯಾದಿಯಲ್ಲಿ ಪ್ರಮುಖವಾಗಿ ನಿಲ್ಲುವುದು ‘ಸೂರ್ಯ ಸಿದ್ಧಾಂತ’.

ಸೂರ್ಯ ಸಿದ್ಧಾಂತವು ನಿರೂಪಿಸಿರುವ ಬ್ರಹ್ಮಾಂಡದ ಯುಗ ಚಕ್ರದಲ್ಲಿ ಗ್ರಹಗಳ ಪರಿಭ್ರಮಣೆಯ ವಿವರಣೆಯು ಅತ್ಯಂತ ನಿಖರವಾಗಿದ್ದು, ಇಂದಿನ ಆಧುನಿಕ ವಿಜ್ಞಾನಿಗಳನ್ನೂ ಬೆರಗುಗೊಳಿಸುವಂತಿದೆ. ಇದು ವೈದಿಕ ಕಾಲದ ಜ್ಯೋತಿಷ್ಯ ಶಾಸ್ತ್ರಜ್ಞರ ಅರಿವಿಗೆ ಹಿಡಿದ ಕನ್ನಡಿಯೆಂಬುದಂತೂ ಸರಿಯೇ.

ಆದರೆ ಅದಕ್ಕಿಂತ ಹೆಚ್ಚಿನ ಬೆರಗು ಮೂಡುವುದು, ಒಂದು ಮಹಾಯುಗದ ಅವಧಿಯಲ್ಲಿ ಪ್ರತಿಯೊಂದು ಗ್ರಹವೂ ನಿಶ್ಯೇಷವಾಗಿ ಅಂದರೆ ಸಂಪೂರ್ಣವಾಗಿ ತನ್ನ ಪರಿಭ್ರಮಣೆ ಮುಗಿಸಿ ಮತ್ತೆ ಸ್ವಸ್ಥಾನದಿಂದ ಹೊಸತಾಗಿ ಆರಂಭಗೊಳ್ಳುವ ಪರಿ. ಈ ಗ್ರಹಗಳಿಗೆ, ಹೀಗೆ ನಿಗದಿತ ಅವಧಿಯಲ್ಲಿ ತನ್ನ ಸುತ್ತು ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದ ದೇವೋತ್ತಮನ ಚಮತ್ಕಾರಕ್ಕೆ ತಲೆದೂಗದವರು ಯಾರು?

ಸೂರ್ಯ ಸಿದ್ಧಾಂತ

ಕಾಲ ಗಣನೆಗೆ ಸಂಬಂಧಿಸಿದ ವೈದಿಕ ಸಿದ್ಧಾಂತಗಳಲ್ಲಿ ಸೂರ್ಯ ಸಿದ್ಧಾಂತ ಅತಿ ಮಹತ್ವದ ಸ್ಥಾನ ಪಡೆದಿದೆ. ಸೂರ್ಯ ಸಿದ್ಧಾಂತದ ಉಗಮದ ಬಗ್ಗೆ ಯಾವ ಮಾಹಿತಿ ಇರದಿದ್ದರೂ, ಅದರ ಸಾಕಷ್ಟು ಅನುವಾದಗಳು ಮತ್ತು ಸಂಗ್ರಹಗಳು ಲಭ್ಯವಿದೆ. ಸಾಕ್ಷಾತ್ ಸೂರ್ಯದೇವನು ಈ ಸಿದ್ಧಾಂತವನ್ನು ಮಯಾಸುರನಿಗೆ ಬೋಧಿಸಿದನೆಂದು ಪ್ರತೀತಿಯಿದೆ. (ಸೂ.ಸಿ. 1ಅ, 2 ರಿಂದ 9 ಶ್ಲೋಕಗಳು) ಸೂರ್ಯ ಸಿದ್ಧಾಂತವು ಮೂರು ಹಂತಗಳ ಬೆಳವಣಿಗೆ ಕಂಡಿದೆ. ಇದು ವರಾಹ ಮಿಹಿರನಿಗಿಂತಲೂ ಮೊದಲಿನದು.

ವರಾಹಮಿಹಿರನು ಈ ಮೂಲ ಕೃತಿಗೆ ಕೆಲವು ಅಂಶಗಳನ್ನು ಸೇರಿಸಿ, ಕೆಲವನ್ನು ಬದಲಾವಣೆ ಮಾಡಿದನು. ಮುಂದೆ 16ನೇ ಶತಮಾನದಲ್ಲಿ ಸೂರ್ಯ ಸಿದ್ಧಾಂತದ ಭಾಷ್ಯಕಾರ ರಂಗನಾಥ ಅದನ್ನು ಪರಿಷ್ಕರಿಸಿ ಮತ್ತೆ ಯಾವ ಹಸ್ತಕ್ಷೇಪವೂ ನಡೆಯದಂತೆ ದಾಖಲುಗೊಳಿಸಿದನು. ಇದೇ ಆಧುನಿಕ ಸೂರ್ಯ ಸಿದ್ಧಾಂತ, ಇಂದು ಆಧುನಿಕ ಸೂರ್ಯ ಸಿದ್ಧಾಂತದ ಸಾಕಷ್ಟು ಅನುವಾದಗಳು, ಭಾಷ್ಯಗಳು ಲಭ್ಯವಿದೆ.

ಭಾರತೀಯ ಜ್ಯೋತಿಷ್ಯ ವಿಜ್ಞಾನದ ಪ್ರಕಾರ ‘ಗ್ರಹ’ ಅಂದರೆ ಕೇವಲ ಗೋಳವಲ್ಲ. ಅದು ಆಕರ್ಷಣ ಶಕ್ತಿಯುಳ್ಳ ಆಕಾಶಕಾಯ. (ಗ್ರಹ-ಗ್ರಹಣ ಅಂದರೆ ಹಿಡಿಯುವುದು ಎನ್ನುವ ಅರ್ಥವಿದೆ) ಪ್ರತಿಯೊಂದು ಗ್ರಹದ ಚಲನೆಯೂ ಜಗತ್ತಿನ ಇತರೆಲ್ಲ ವಸ್ತುಗಳ ಮೇಲೆ ತನ್ನ ಪ್ರಭಾವ ಬಿರುತ್ತದೆ.

ಗ್ರಹ ಎಂದರೆ ಕೇವಲ ಅನಿಲ-ಲೋಹಗಳ ಗೋಳವಲ್ಲ. ಪ್ರತಿಯೊಂದು ಗ್ರಹಕ್ಕೂ ಒಬ್ಬ ಅಧಿದೇವತೆ ಇರುತ್ತಾನೆ. ಆಯಾ ಗ್ರಹಗಳನ್ನು ಅವುಗಳ ಅಧಿಪತಿಗಳ ಹೆಸರಿನಿಂದಲೇ ಗುರುತಿಸಲಾಗುತ್ತದೆ. ನಮ್ಮ ಪ್ರತಿಯೊಂದು ಕಾರ್ಯವನ್ನು ನಡೆಯನ್ನು ನಿಯಂತ್ರಿಸಲು ದೇವೋತ್ತಮನಿಂದ ನಿರ್ದೇಶಿಸಲ್ಪಟ್ಟ ದೇವತೆಗಳಲ್ಲಿ ನವಗ್ರಹಗಳು ಪ್ರಮುಖವಾದವು. ಹೀಗಾಗಿಯೇ ಮಾನವನ ಭವಿಷ್ಯಾದಿಗಳನ್ನು ತಿಳಿಯಲು ಆತನ ಜಾತಕದಲ್ಲಿ ನವಗ್ರಹಗಳ ಸ್ಥಾನ ಮತ್ತು ಗ್ರಹಾಧಿಪತಿಗಳ ಪ್ರಭಾವವನ್ನು ತಾಳೆ ಹಾಕುತ್ತಾರೆ.

ಕಾಲವನ್ನು ಅಳೆಯಲು ಗ್ರಹಗಳ ಚಲನೆಯೇ ಪ್ರಮುಖ ಆಧಾರ. ಸೂರ್ಯ ಸಿದ್ಧಾಂತದಲ್ಲಿ ನಾವು ಇದನ್ನು ಸಷ್ಟವಾಗಿ ಕಾಣಬಹುದು.

ಈ ಹಿಂದೆ ಹೇಳಿದಂತೆ, ಒಂದು ಮಹಾಯುಗದಲ್ಲಿ ರಾಹು-ಕೇತುಗಳಂತಹ ಛಾಯಾಗ್ರಹಗಳೂ ಸೇರಿದಂತೆ ನವಗ್ರಹಗಳು ತಮ್ಮ ಕಕ್ಷೆಯ ಮೇಲೆ ಎಷ್ಟು ಬಾರಿ ನಿಲ್ಲುತ್ತವೆ ಎನ್ನುವ ಮಾಹಿತಿ ಸೂರ್ಯ ಸಿದ್ಧಾಂತದಲ್ಲಿದೆ. ಅವುಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

ಗ್ರಹಗಳು          ಒಂದು ಮಹಾಯುಗದ ಅವಧಿಯಲ್ಲಿ

ಚಂದ್ರ             57,753,336

ಸೂರ್ಯ 4,320,000

ಮಂಗಳ          2,296,324

ಗುರು             354.220

ಶನಿ               145,554

ರಾಹು            448,210

ಶುಕ್ರ             7,022,338

ಬುಧ            17,937,000

ಕೇತು            232,226

ಸೂರ್ಯ ಸಿದ್ಧಾಂತದ ಪ್ರಕಾರ, ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳನ್ನೊಳಗೊಂಡ ಒಂದು ಮಹಾ ಯುಗವು 43,20,000 ಪೌರ ವರ್ಷಗಳ ಅವಧಿಯಷ್ಟು ದೀರ್ಘವಾಗಿದೆ. ಈ ನಾಲ್ಕು ಯುಗಗಳ ಕಾಲಮಾನವು 4:3:2:1 ಅನುಪಾತದಲ್ಲಿ ಹಂಚಿಹೋಗಿದೆ.

ಕಲಿಯುಗವು ಅತಿ ಕಡಮೆ ಅವಧಿಯದ್ದಾಗಿದ್ದು, 4,32,000 ವರ್ಷಗಳನ್ನು ಹೊಂದಿದೆ. ಒಂದು ಮಹಾಯುಗದ ಅವಧಿಯಲ್ಲಿ ಅಂದರೆ 43,20,000 ವರ್ಷಗಳ ಅವಧಿಯಲ್ಲಿ ಆಯಾ ಗ್ರಹಗಳು ತಮ್ಮ ಚಲನೆಯ ವೇಗಕ್ಕನುಗುಣವಾಗಿ ಎಷ್ಟು ಬಾರಿ ಪರಿಭ್ರಮಣ ಮಾಡುತ್ತವೆ ಎನ್ನುವ ವಿವರಣೆ ಇದರಲ್ಲಿದೆ. ಒಂದು ಮಹಾ ಯುಗ ಮುಗಿಯುವ ವೇಳೆಗೆ ಎಲ್ಲ ಗ್ರಹಗಳೂ ತಮ್ಮ ತಮ್ಮ ಸುತ್ತು ಪೂರೈಸಿ ಸ್ವಸ್ಥಾನಕ್ಕೆ ಬಂದು ನಿಂತಿರುತ್ತವೆ, ಮತ್ತೊಂದು ಯಾತ್ರೆಗೆ ಸಜ್ಜಾಗಿ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi